ಇನ್ನು ಬಯಲಾಗಬೇಕಿರೋದು : ಮುಚ್ಚಿಟ್ಟ ಅಂಬೇಡ್ಕರ್ ಚರಿತ್ರೆ! ( “ಮುಚ್ಚಿಟ್ಟ ದಲಿತ ಚರಿತ್ರೆ: ಪುಸ್ತಕದ ಒಂದು ದಿಢೀರ್‌ ವಿಮರ್ಶೆ)

ನಾನು ಹೂವಿನ ಹಡಗಲಿಯಲ್ಲಿ 1980-81 ರಲ್ಲಿ ಜಿಬಿಆರ್‌ ಕಾಲೇಜಿನಲ್ಲಿ ಮೊದಲ ಪಿಯು ಓದುತ್ತಿದ್ದಾಗ ಎಬಿವಿಪಿಗಿಂತ ಎಸ್‌ಎಫ್‌ಐ ವಾಸಿ ಎಂಬ ಅಭಿಪ್ರಾಯಕ್ಕೆ ಬಂದಿದ್ದೆ. ಆಗ ಅಲ್ಲಿ ಎಸ್‌ ಎಸ್‌ ಹಿರೇಮಠರು ನನ್ನ ಕನ್ನಡ ಅಧ್ಯಾಪಕರಾಗಿದ್ದರು. ಅಲ್ಲಿನ ಎಸ್‌ಎಫ್‌ಐ ಮಿತ್ರರಿಂದ ನಾನು ಹಲವು ಕ್ರಾಂತಿಗೀತೆಗಳನ್ನು ಕಲಿತು ಹಾಡುತ್ತಿದ್ದೆ. ಅವುಗಳಲ್ಲಿ ಮುಖ್ಯವಾಗಿ ನನಗೆ ಈಗಲೂ ಗುನುಗಲು ನೆನಪಿರುವುದು ಕವಿ ಸಿದ್ದಲಿಂಗಯ್ಯ ಅವರ ನಾಡ ನಡುವಿನಿಂದ ಸಿಡಿದ, ನೋವಿನ ಕೂಗೇ.. ಹಾಡು. ಅದು ಹೀಗಿದೆ.

ನಾಡ ನಡುವಿನಿಂದ ಸಿಡಿದ, ನೋವಿನ ಕೂಗೇ

ಆಕಾಶದ ಅಗಲಕ್ಕೂ, ನಿಂತ ಅಲವೇ

ಕೋಟಿ ಕೋಟಿ ಕಪ್ಪು ಜನರ, ಮೊಟ್ಟ ಮೊದಲ ಮಾತೇ

ನೀರಿನಾಚೆ ಮೋಡದಾಚೆ, ಮೊಳಗಿದಂಥ ಘೋಷವೇ

ಬಾಳಿನಲ್ಲಿ ಕಂಡುಕೊಂಡೆ, ಹೋರಾಟದ ದಾರಿಯ

ಕರೆದು ಕರೆದು ತೋರಿಸಿದೆ, ಮಹಾಮನೆಯ ಬಿರುಕನು

ಜಾತಿಯನ್ನು ಹೂತು ಬಿಡಲು, ಲಕ್ಷ ಲಕ್ಷ ಜನರನು

ಕಟ್ಟಿ ಕ್ರಿಯಾರಂಗಕ್ಕಿಳಿದ, ಸ್ವಾಭಿಮಾನ ಸಮುದ್ರ

ಮಹಾರಾಷ್ಟ್ರದ ಮಣ್ಣಿನಲಿ, ಮೂಡಿಬಂದ ಗಡುಗು ಸಿಡಿಲೇ

ಮಳೆಯನೇಕೆ ತಾರಲಿಲ್ಲ, ಮಿಂಚು ಮಾಯೆ ಅಷ್ಟೆಯೇ

ಅಭಿಮಾನದ ನೇಗಿಲಿಂದ, ಬಂಜರು ನೆಲ ಉತ್ತವನೇ

ಪಾತಿ ಮಾಡಿ ನಾಟಿ ಹಾಕಿ, ಬೆಳೆಯ ಕಾಣದೋದವನೆ

ಕಪ್ಪುಕ್ಕಿನ ಕೋಳಗಳನು, ಕಡಿದು ಎಸೆದ ವಜ್ರವೇ

ಬಂಗಾರದ ಕೋಳಹೊಕ್ಕ, ಮಹಾಬೌದ್ಧ ಭಿಕ್ಷುವೇ

ಮಲಗಿದವರ ಕೂಡಿಸಿದೆ, ನಿಲಿಸುವವರು ಯಾರೋ

ಛಲದ ಜೊತೆಗೆ ಬಲದ ಪಾಠ, ಕಲಿಸುವವರು ಯಾರೋ

ಈ ಹಾಡನ್ನು ಈಗಲೂ ಕ್ರಾಂತಿಗೀತೆ ಎಂದು ಹಾಡುತ್ತಿರಬಹುದು.  ಕವಿಯ ಆಶಯಗಳೇನೇ ಇರಲಿ (ಸಿದ್ದಲಿಂಗಯ್ಯನವರು ನಾನು ಮೆಚ್ಚುವ ಅತ್ಯಂತ ಉತ್ತಮ ಭಾಷಣಕಾರ ಮತ್ತು ನಾನು ಅವರ ಭಾಷಣಗಳ ಭಯಂಕರ ಫ್ಯಾನ್‌) ಅವರ ಸಾಲುಗಳಲ್ಲಿ ಅಂಬೇಡ್ಕರ್‌ ಅವರನ್ನು ಟೀಕಿಸಿದ್ದನ್ನೂ ಗಮನಿಸಬಹುದು. ಅಂಬೇಡ್ಕರ್ ಅವರನ್ನು ಕಮ್ಯುನಿಸ್ಟರು ದುರ್ಬಳಕೆ ಮಾಡಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಈ ಹಾಡನ್ನು ಗಮನಿಸಬೇಕು. ಅಂಬೇಡ್ಕರ್‌ ಅವರನ್ನು ಮಳೆ ತಾರದ ಮಿಂಚು, ಬೆಳೆಯ ಕಾಣದ ರೈತ, ಬಂಗಾರದ ಕೋಳ (ಬೌದ್ಧ ಧರ್ಮ) ಹೊಕ್ಕ ವ್ಯಕ್ತಿ – ಹೀಗೆಲ್ಲ ಈ ಹಾಡಿನಲ್ಲಿ ಬಂದಿದೆ.

ಬುದ್ಧ ಅಥವಾ ಕಾರ್ಲ್‌ ಮಾರ್ಕ್ಸ್ ಎಂಬ ಪುಸ್ತಕವೊಂದನ್ನು ಬರೆಯಲು ಡಾ. ಬಿ ಆರ್‌ ಅಂಬೇಡ್ಕರ್‌ ಹೊರಟಿದ್ದರು. ಆದರೆ ಅವರು ಹಾಗೆ ಟಿಪ್ಪಣಿ ಮಾಡಿಕೊಳ್ಳುತ್ತಿದ್ದ ಕಾಲದಲ್ಲೇ ಮರಣಕ್ಕೆ ತುತ್ತಾದರು. ಅವರ ನಿಧನದ ನಂತರ ಅವರ ಪಕ್ಷದ ಹಲವರು ಕಮ್ಯುನಿಸ್ಟರ ಜೊತೆ ಕೈಗೂಡಿಸಿದರು. ಹೀಗಾಗಿ ಈ ಪುಸ್ತಕ ಪ್ರಕಟವಾಗಲೇ ಇಲ್ಲ ಎಂದು ಅವರ ನಿಕಟವರ್ತಿ, ಅವರ ಲೋಕಸಭಾ ಚುನಾವಣಾ ಅಭಿಯಾನದ ಉಸ್ತುವಾರಿ ಹೊತ್ತವರು, ಅವರ ಕಾರ್ಮಿಕ ಸಂಘಟನೆಯಲ್ಲಿ ಹೊಣೆಗಾರಿಕೆ ವಹಿಸಿಕೊಂಡವರು – ಆರೆಸೆಸ್‌ನ ದತ್ತೋಪಂತ ಠೇಂಗಡಿಯವರು ತಮ್ಮ ಪುಸ್ತಕದಲ್ಲಿ (Buddha, Marx and Dr Ambedkar, THE PERSPECTIVE, Page 57, Sahitya Sindhu, Bengaluru 1971) ಬರೆದಿದ್ದರು, 1961 ರಲ್ಲಿ! ಹೇಗೋ, ಅವರ ಈ ಪುಸ್ತಕ ಕೊನೆಗೂ ಆನ್‌ಲೈನ್‌ನಲ್ಲಿ ಸಿಗುತ್ತದೆ. ಕಮ್ಯುನಿಸ್ಟರ ಮಾತಿಗೆ ಮರುಳಾಗಬೇಡಿ ಎಂದು ಅವರು ಬರೆದ ಸತ್ಯವೀಗ ಹೊರಬಂದಿದೆ.

ರಾಕೇಶ್‌ ಶೆಟ್ಟಿಯವರ `ಮುಚ್ಚಿಟ್ಟ ದಲಿತ ಚರಿತ್ರೆ’ (ನಿಲುಮೆ ಪ್ರಕಾಶನ, ಬೆಂಗಳೂರು) ಓದಿದ ನಂತರ ನನ್ನ ಸಂಗ್ರಹಗಳನ್ನು, ನನ್ನ ಅಲ್ಪ ಓದಿನ  ನೆನಪನ್ನು ಕೆದಕುತ್ತ ಹೋದ ಹಾಗೆ ಇವೆಲ್ಲ ಬರೆಯಬೇಕೆನಿಸಿತು. ರಾಕೇಶ್‌ ಶೆಟ್ಟಿಯವರು ಜೋಗೇಂದ್ರನಾಥ ಮಂಡಲ್‌ ಅವರ ರಾಜೀನಾಮೆ ಪತ್ರವನ್ನು ಕೇಂದ್ರವಾಗಿಟ್ಟುಕೊಂಡು ಬರೆದ ಈ ಪುಸ್ತಕ ಕನ್ನಡದಲ್ಲಿ ಈ ಕಾಲದಲ್ಲಿ ಬಂದ  ಕಣ್ತೆರೆಸುವ ದಾಖಲೆ.  ಈ ಪುಸ್ತಕದ ಬಗ್ಗೆ ಹಲವರು ಈಗಾಗಲೇ ತಮ್ಮ ವಿಮರ್ಶೆಗಳನ್ನು, ಅನಿಸಿಕೆಗಳನ್ನು ಬರೆದಿದ್ದಾರೆ.  ನಾನು ಈ ಪುಸ್ತಕದ ಆಚೆ ಈಚೆ ಇರಬಹುದಾದ ಕೆಲವು ಮಾಹಿತಿಗಳನ್ನು ಹಂಚಿಕೊಳ್ಳಲು ಹೊರಟಿದ್ದೇನೆ.

ರಾಕೇಶ್‌ ಶೆಟ್ಟಿಯವರ ಪುಸ್ತಕ ಓದುತ್ತಿದ್ದಂತೆ ನನಗೆ ಮೊದಲು ನೆನಪಾಗಿದ್ದು ಸಂಘ ಪರಿವಾರದ ಚಿಂತಕ, ಪತ್ರಕರ್ತ ಶ್ರೀ ರಮೇಶ್‌ ಪತಂಗೆಯವರು ಬರೆದ  ಸುದೀರ್ಘ ಲೇಖನ. ಇನ್ನೊಬ್ಬ ಪತ್ರಕರ್ತ ಶ್ರೀ ಅರುಣ್‌ ಶೌರಿಯವರು ಬರೆದ, ಡಾ. ಅಂಬೇಡ್ಕರ್‌ ಅವರನ್ನು ಹೀನಾಯವಾಗಿ ಕಂಡ ‘ವರ್ಶಿಪ್ಪಿಂಗ್‌ ಫಾಲ್ಸ್‌ ಗಾಡ್ಸ್‌” ಪುಸ್ತಕಕ್ಕೆ ಪ್ರತಿಕ್ರಿಯೆಯಾಗಿ ರಮೇಶ್‌ ಪತಂಗೆಯವರು ಉತ್ತರ ರೂಪದಲ್ಲಿ ಈ ಲೇಖನ ಬರೆದಿದ್ದರು (ವಿವೇಕ ಮರಾಠಿ ಪತ್ರಿಕೆಯಲ್ಲಿ ಬಂದ ಈ ಲೇಖನವನ್ನು ಅಂದು ಶುಭಾ ದೋಟಿಹಾಳ್‌ ಕನ್ನಡಕ್ಕೆ ತಂದಿದ್ದರು – 1997 ಸಾಮರಸ್ಯ ವೇದಿಕೆ ಪ್ರಕಟಣೆ). ಥಾಟ್ಸ್‌ಆಫ್‌ ಪಾಕಿಸ್ತಾನ್‌ ನಲ್ಲಿ ಮುಸ್ಲಿಮರ ಬಗ್ಗೆ ಅಂಬೇಡ್ಕರ್‌ ಬರೆದಿರುವುದನ್ನು ಪತಂಗೆ ಉಲ್ಲೇಖಿಸುತ್ತಾರೆ. (ಅವನ್ನೆಲ್ಲ ನೀವು ಈ ಪೋಸ್ಟ್‌ನ ಚಿತ್ರಗಳಲ್ಲಿ ಓದಬಹುದು) . ಹಿಂದು ಧರ್ಮವನ್ನು ಬಿಟ್ಟು ಬೌದ್ಧ ದಮ್ಮವನ್ನು (ಮತವಲ್ಲ, ದಮ್ಮ) ಸೇರಿದರು ಎಂಬುದನ್ನು ಉಲ್ಲೇಖಿಸುತ್ತಾರೆ. 1928 ರ  ಸೆ. 21 ರಂದು ಅವರು “ಹಿಂದು ಧರ್ಮ ಶಾಸ್ತ್ರ” ಎಂಬ ಅಗ್ರ ಲೇಖನವನ್ನು ಬರೆದಿದ್ದರು ಎಂದು ನೆನಪಿಸುತ್ತಾರೆ.

ಲೇಖನದ ಭಾಗ ಇಲ್ಲಿದೆ:

…………………………………

ಮುಸ್ಲಿಂ ಮಾನಸಿಕತೆಯ ವಿಶ್ಲೇಷಣೆ

ಅಸ್ಪೃಶ್ಯ ಸಮಾಜದ ಈ ಸಾಮರ್ಥ್ಯದ ಅರಿವು ಇದ್ದಾಗ್ಯೂ ಅಂಬೇಡ್ಕರರು ತಮ್ಮ ಜೀವಮಾನದುದ್ದ ಎಲ್ಲೂ ಮುಸ್ಲಿಮರ ಪಕ್ಷ ವಹಿಸಲಿಲ್ಲ. ಅದಕ್ಕೆ ಬದಲಾಗಿ ಒಬ್ಬ ಕಟ್ಟಾ ಒಂದುತ್ವವಾದಿ ಕೂಡ ಬರೆಯಲು ಹಿಂಜರಿಯುವಂತಹ ಕಠಿಣ ಮತ್ತು ಹರಿತವಾದ ಶಬ್ದಗಳಲ್ಲಿ ಅವರು ಮುಸ್ಲಿಂ ಮಾನಸಿಕತೆಯನ್ನು ಖಂಡಿಸಿದ್ದಾರೆ. ಅವರ `ಥಾಟ್ಸ್‌ ಆಫ್‌ ಪಾಕಿಸ್ತಾನ್‌’ ಪುಸ್ತಕದಲ್ಲಿ ಅವರು- “ಇಸ್ಲಾಮೀ ಬಂಧುತ್ವವು ವಿಶ್ವವ್ಕಾಪಿ ಬಂಧುತ್ವವಲ್ಲ. ಅದು ಕೇವಲ ಅವರಲ್ಲಿಯ ಪರಸ್ಪರ ಬಂಧುತ್ವವಾಗಿದೆ.  

ಅವರಲ್ಲಿರುವ ಬಾಂಧವ್ಯವು ಅವರೆ ಸಂಘಕ್ಕೆ ಮಾತ್ರ ಸೀಮಿತವಾಗಿದೆ. ಆ ಸಂಘದಿಂದಾಚೆ ಇರುವ ಪ್ರತಿಯೊಬ್ಬರ ಕುರಿತು ಅವರ ಮನಸ್ಸಿನಲ್ಲಿ ದ್ವೇಷ – ತಿರಸ್ಕಾರ ಮತ್ತು ಶತ್ರುತ್ವ ತುಂಬಿದೆ. ಒಬ್ಬ ಕಟ್ಟಾ ಮುಸಲ್ಮಾನನಾದವನು ಎಂದಿಗೂ/ ಅಪ್ಪಿತಪ್ಪಿಯೂ/ ಕನಸಿನಲ್ಲೂ ಭಾರತವು ತನ್ನ ಮಾತೃಭೂಮಿ ಮತ್ತು ಒಬ್ಬ ಹಿಂದು ತನ್ನ ತನ್ನ ಬಾಂಧವ ಎಂದು ಹೇಳಲಾರ” ಎಂದು ಬರೆದಿದ್ದಾರೆ.

ನಮ್ಮದು ಅತೀ ಪ್ರಾಚೀನ ಮತ್ತು ಸನಾತನ ರಾಷ್ಟ್ರಜೀವನ ಎಂಬುದು ಅಂಬೇಡ್ಕರರಿಗೆ ಮನದಟ್ಟಾಗಿತ್ತು. ಅನೇಕರಿಗೆ ಆಶ್ಚರ್ಯದ ಸಂಗತಿ ಎನಿಸಬಹುದಾದರೂ ಬಾಬಾ ಸಾಹೇಬರು ʼಹಿಂದು ರಾಷ್ಟ್ರ’ ಕುರಿತು ಒಂದು ಲೇಖನ ಬರೆದಿದ್ದಾರೆ. `ಹಿಂದು ಧರ್ಮಶಾಸ್ತ್ರ’ ಎಂಬ ಅವರ ಅಗ್ರಲೇಖದಲ್ಲಿ (೨೧ ಸೆಪ್ಟೆಂಬರ್‌ ೧೯೨೮, ಬಹಿಷ್ಕೃತ ಭಾರತ) ಅವರು, “ಅತ್ಮಂತ ಪ್ರಾಚೀನ ಕಾಲದಲ್ಲಿ ಉದಯಿಸಿದ ದೇಶಗಳಲ್ಲಿ ಭಾರತವೂ ಒಂದು. ಇದನ್ನು ಯಾರಿಗೂ ನೆನಪು ಮಾಡಿಕೊಡುವ ಅಗತ್ಯವಿಲ್ಲ. ಇದರ ಜೊತೆಗೇ ಉದಯಿಸಿದ ಇಜಿಪ್ತ, ಅಸಿರಿಯಾ, ರೋಮ, ಗ್ರೀಸ್‌ ಮುಂತಾದ ರಾಷ್ಟ್ರಗಳು ನಾಮಶೇಷವಾಗಿರುವುದು ಸತ್ಯ. ಕೇವಲ ಇನ್ನೂ ಜೀವಂತವಾಗಿರುವುದರಿಂದ ಮಾತ್ರ ಹಿಂದುರಾಷ್ಟವನ್ನು ಪ್ರಬಲರಾಷ್ಟ್ರ ಎಂದಲ್ಲಿ ಅದು ದುರಭಿಮಾನವೂ, ವಿಚಾರ ಶೂನ್ಯತೆಯೂ ಎನಿಸೀತು ಎಂಬುದು ನನ್ನ ಮತವಾಗಿದೆ. ಹಿಂದುರಾಷ್ಟ್ರದ ಅಪಯಶಕ್ಕೆ ಕಾರಣ ಅದರ ವಿಪರೀತವೆನಿಸುವ ಸಂವಿಧಾನವಾಗಿದೆ. ಈ ಸಂವಿಧಾನವು ಧರ್ಮಶಾಸ್ತ್ರಕ್ಕನು ಗುಣವಾಗಿದೆ. ಅಂದಮೇಲೆ ಹಿಂದು ರಾಷ್ಟ್ರದ ಅಧಃಪತನವು ಅದರ ಧರ್ಮಶಾಸ್ತ್ರದಿಂದಾಗಿಯೇ ಆಗಿದೆ ಎಂಬುದು ಶತಸ್ಸಿದ್ಧ’” ಎಂದು ಬರೆದಿರುವರು.

ಸ್ವಾತಂತ್ರ್ಯಾನಂತರ ೧೯೪೯ ರ ನವೆಂಬರ್‌ ೨೫ ರಂದು ಸಂವಿಧಾನ ಸಮಿತಿಯ ಮುಂದೆ ಮಾಡಿದ ಭಾಷಣದಲ್ಲಿ – “ಈ ಮೊದಲು ಭಾರತಕ್ಕೆ ತನ್ನ ಸ್ವಾತಂತ್ರ್ಯವನ್ನು ಕಳೆದುಕೊಳ್ಳುವ ಸನ್ನಿವೇಶವು ಒಂದಲ್ಲ, ಅನೇಕ ಬಾರಿ ಬಂದಿದೆ. ಇದು ಇಲ್ಲಿಯ ಜನರ ವಿಶ್ವಾಸದ್ರೋಹ ಮತ್ತು ದೇಶದ್ರೋಹದ ಫಲವಾಗಿದೆ. ಮೊಹಮ್ಮದ್‌ ಬಿನ್‌ ಕಾಸಿಂನು ಸಿಂಧ್‌ ಪ್ರಾಂತದ ಮೇಲೆ ಆಕ್ರಮಣ ಮಾಡಿದಾಗ ರಾಜಾ ದಾಹೀರನ ಸೇನಾಪತಿಯು ಮೊಹಮ್ಮದ್‌ ಬಿನ್‌ ಕಾಸಿಂನಿಂದ ಲಂಚ ಪಡೆದು ತನ್ನ ರಾಜನ ಪಕ್ಷದಲ್ಲಿ ಹೋರಾಟ ಮಾಡದೇ ಇದ್ದುಬಿಟ್ಟ. ಮೊಹಮ್ಮದ್‌ ಘೋರಿಯನ್ನು ಪೃಥ್ವೀರಾಜನ ವಿರುದ್ಧ ಹೋರಾಟಕ್ಕೆಂದು ಆಮಂತ್ರಿ ಸಿದ ಫಿತೂರ – ಜಯಚಂದ ಇನ್ನಾರೂ ಅಲ್ಲ, ಅವನು ಭಾರತೀಯ! ಹಿಂದು! ಹಿಂದುಗಳ ಸ್ವಾತಂತ್ರ್ಯಕ್ಕೋಸ್ಕರ ಹೋರಾಟ ನಡೆಸುತ್ತಿದ್ದ ಶಿವಾಜಿಯ ವಿರುದ್ಧವೇ ಇತರ ಕೆಲವು ಮರಾಠಾ ಹಿಂದುಗಳು ಕತ್ತಿ ಎತ್ತಿದರು. ಹಿಂದು ಸಮಾಜದಲ್ಲಿ ಮೊದಲಿನಿಂದ ಇರುವ ಜಾತಿಭೇದ, ಪಂಥಭೇದ ಶತ್ರುಗಳ ಜೊತೆಗೆ ಪರಸ್ಪರ ವಿರೋಧವಾಗಿ ಹೋರಾಟದ ಕಣಕ್ಕಿಳಿದ ಹೊಸ ರಾಜಕೀಯ ಪಕ್ಷಗಳು ಪೂರಕವಾಗಿವೆ. ಇದರಿಂದಾಗಿ ನನ್ನ ಚಿಂತೆ ದ್ವಿಗುಣಿತವಾಗಿದೆ. ಏಕೆಂದರೆ ಅವರು ತಮ್ಮ ಪಕ್ಷದ ಹಿತವನ್ನು ರಾಷ್ಟ್ರದ ಹಿತಕ್ಕಿಂತ ಹೆಚ್ಚೆಂದು ತಿಳಿದಲ್ಲಿ ಭಾರತದ ಸ್ವಾತಂತ್ರ್ಯ ಮತ್ತೆ ತೂಗುಯ್ಯಾಲೆಯಾಡುವುದರಲ್ಲಿ ಸಂಶಯವಿಲ್ಲ. ಒಂದುವೇಳೆ ಶಾಶ್ಚತ ವಾಗಿಯೇ ನಷ್ಟವಾದರೂ ಆಶ್ಚರ್ಯವಿಲ್ಲ. ಆದಾಗ್ಯೂ ಶರೀರದ ಧಮನಿಗಳಲ್ಲಿ ಕೊನೆಯ ಬಿಂದು ರಕ್ತವಿರುವವರೆಗೂ ನಾವು ನಮ್ಮ ಸ್ವಾತಂತ್ರ್ಯಕ್ಕೋಸ್ಕರ ಹೋರಾಡುವ ಪ್ರತಿಜ್ಞೆ ಮಾಡೋಣ” ಎಂದು ಮಾತನಾಡಿದರು. ೧೯೨೮ ರ ಒಂದು ಲೇಖನವನ್ನು ಬಾಬಾಸಾಹೇಬರು ಹಿಂದು ರಾಷ್ಟ್ರವನ್ನುಲ್ಲೇಖಿಸಿ ಬರೆದಿದ್ದಾರೆ. ೧೯೪೯ ರಲ್ಲಿ ಸಂವಿಧಾನ ಸಮಿತಿಯ ಕುರಿತು ತಮ್ಮ ಕೊನೆಯ ಭಾಷಣದಲ್ಲಿ ಅವರು ದೇಶವು ಪರತಂತ್ರವಾದದ್ದೇಕೆ, ಯಾರಿಂದಾಗಿ ಎಂಬುದನ್ನು ಚರ್ಚಿಸಿದ್ದಾರೆ. ಈ ಲೇಖನ ಮತ್ತು ಭಾಷಣಗಳಲ್ಲಿ ವೈಚಾರಿಕ ಸುಸಂಬದ್ಧತೆ ಇದೆ. ಇದನ್ನು ಬಿಚ್ಚಿ ಹೇಳಬೇಕಾಗಿಲ್ಲ.

…………………………………

ಬುದ್ಧ ಅಥವಾ ಕಾರ್ಲ್‌ ಮಾರ್ಕ್ಸ್  ಎಂಬ ಅವರ ನಿಧನಾನಂತರ ಪ್ರಕಟವಾದ ಪುಸ್ತಕದಲ್ಲಿ ಅಂಬೇಡ್ಕರ್ ಅವರು ಬೌದ್ಧ ಧರ್ಮವೇ ಮಾರ್ಕ್ಸಿಸಂಗಿಂತ ಶ್ರೇಷ್ಠ ಎಂದು ಹಲವು ಅಂಶಗಳನ್ನು ಪಟ್ಟಿ ಮಾಡಿ ಪ್ರತಿಪಾದಿಸಿದ್ದಾರೆ.

ಪಾಕಿಸ್ತಾನದಲ್ಲಿದ್ದ ಹಿಂದು ಕೆಳವರ್ಗಗಳ ಧ್ವನಿಯಾದ ಜೋಗೇಂದ್ರನಾಥ ಮಂಡಲ್‌ ಅವರ ರಾಜೀನಾಮೆ ಪತ್ರವು 1950 ರಲ್ಲಿ ಪ್ರಕಟವಾಗಿರಬಹುದು. ಆದರೆ ಈಗಲೂ ಪರಿಸ್ಥಿತಿ ಹಾಗೆಯೇ ಇದೆ. ಈ ವಿಷಯವನ್ನು ನಾನು ಅಲಿಸ್‌ಅಲ್ಬೀನಿಯಾ ಬರೆದ “ಎಂಪೈರ್ಸ್‌ ಆಫ್‌ ದ ಇಂಡಸ್‌ – ದ ಸ್ಟೋರಿ ಆಫ್‌ ಎ ರಿವರ್‌” ಪುಸ್ತಕವನ್ನು ಓದುವಾಗ ಸ್ವಲ್ಪ ಅರಿತಿದ್ದೆ. ಆ ಪುಸ್ತಕದಲ್ಲಿ ಬಂದ ಈ ಎರಡು ಪ್ಯಾರಾಗಳನ್ನು ಓದಿದರೆ ಸಾಕು:

Sitting nearby in the shade of a tree is another man, fully clothed, who has been watching me watching. ‘Is he cleaning the sewer?’ I ask, pointing down at the water. ‘There’s a blockage,’ the man says. ‘It must be a difficult job,’ I say. The man wipes the sweat off his forehead with the sleeve of his shirt: ‘They’ve always done it.’ ‘Who?’ I ask, wondering why he assumes that I know who ‘they’ are. ‘The Bhangis,’ comes his straightforward answer. ‘I am the foreman. Only non-Muslims do this sewer work. It is forbidden for us.’

At the time, I refuse to believe him. But later, when I interview the government officials who control Karachi’s hydrology–bringing fresh water in from the Indus lakes and piping sewage out into the mangroves–it is apparent that this is true. By ‘Bhangi’, the foreman means low-caste Hindus, or low-caste Christian converts–both in India and Pakistan still regarded as ‘untouchable’ according to the ancient and immutable Hindu caste system. ‘Not one Muslim is doing this job,’ the officials say. ‘It is an age-old situation, right from the very beginning of Pakistan. This is dirty water. Any spots of sewerage on clothes is difficult when performing prayers.’

( Empires of the Indus, The Story of a River by Alice Albinia, W. W. NORTON & COMPANY, INC. 2008)

ಇದೇನು ಒಂದೇ ಪುಸ್ತಕದಲ್ಲಿ ಬಂದಿದೆ ಎಂಬ ಭಾವನೆ ಬೇಡ. 1990 ರ ದ ನ್ಯೂ ಯಾರ್ಕ್‌ ಟೈಮ್ಸ್‌ನಲ್ಲೂ ಈ ಬಗ್ಗೆ ಓದುಗರ ಪ್ರತಿಕ್ರಿಯೆ ಬಂದಿತ್ತು. ಈ ದಿನದವರೆಗೂ ಪರಿಸ್ಥಿತಿ  ಹೀಗೆಯೇ ಇದೆ. ಕಳೆದ ಸೆ. 7 ರಂದು ಹಿಂದುಸ್ ಆಫ್‌ ಪಾಕಿಸ್ತಾನ್‌ ಫೇಸ್‌ಬುಕ್‌ ಪುಟದಲ್ಲಿ (https://www.facebook.com/Hindus.pak/posts/3513750975355541) ಬಂದ ಚಿತ್ರವನ್ನು ನೋಡಿದರೆ ನಿಮಗೇ ಗೊತ್ತಾಗುತ್ತದೆ. 2006 ರ ನೆದರ್‌ಲ್ಯಾಂಡ್‌ ವರದಿಯಲ್ಲಿ ಪಾಕಿಸ್ತಾನದಲ್ಲಿ 30 ಲಕ್ಷ ಹಿಂದುಗಳಿದ್ದಾರೆ; ಅವರಲ್ಲಿ 24 ಲಕ್ಷ ಜನರು ದಲಿತರೇ ಎಂಬ ಮಾಹಿತಿ ಇದೆ. 2015 ರ ದ ಡಾನ್‌ ಪಾಕ್‌ ದೈನಿಕದ ವರದಿಯನ್ನು ಓದಿದರೂ ಸಿಂಧ್‌ ಪ್ರಾಂತದ ಹಿಂದುಗಳ ದಾರುಣ ಚಿತ್ರಣ ಕಣ್ಣಿಗೆ ಕಟ್ಟುತ್ತದೆ. ಇವೆಲ್ಲ ನಾನು ಹುಡುಕಿದ ಕೆಲವೇ ಉದಾಹರಣೆಗಳು.

ಈ ಭಂಗಿಗಳನ್ನು ಹೇಗಾದರೂ ಮಾಡಿ ಕ್ರೈಸ್ತ ಮತಕ್ಕೆ ಮತಾಂತರ ಮಾಡಬೇಕೆಂಬ ಗುರಿಯಿಂದ ಜೊಶುವಾ ಪ್ರಾಜೆಕ್ಟ್‌ನಲ್ಲಿ ಭಂಗಿಗಳು ಭಾರತ ಮತ್ತು ಪಾಕಿಸ್ತಾನದಲ್ಲಿ ಎಲ್ಲೆಲ್ಲಿದ್ದಾರೆ  ಎಂಬ ನಕಾಶೆಯನ್ನೂ ಪ್ರಕಟಿಸಿದೆ. ಹಿಂದುಗಳ ರಕ್ಷಣೆಯು ಎ ಷ್ಟು ಹಿಂದುಳಿದಿದೆ, ಮತಾಂತರದ ಸಂಚುಗಳು ಎಷ್ಟು ಆಳವಾಗಿವೆ ಎಂಬುದಕ್ಕೆ ಈ ನಕಾಶೆಯೇ ಸಾಕ್ಷಿ!

ಒಟ್ಟಿನಲ್ಲಿ “ಮುಚ್ಚಿಟ್ಟ ದಲಿತ ಚರಿತ್ರೆ”ಯು  ಪಾಕಿಸ್ತಾನದಲ್ಲಿರುವ ಹಿಂದುಗಳ ಕತೆಯನ್ನು ಇತಿಹಾಸದಿಂದ ಅಗೆದು  ತಂದು ವರ್ತಮಾನದ ಪೌರತ್ವ ನೀತಿಯವರೆಗೆ ತಂದು ನಿಲ್ಲಿಸಿದೆ. ಈ ಹಿನ್ನೆಲೆಯಲ್ಲಿ ಪುಸ್ತಕವು ಅತ್ಯಂತ ಗಹನ ಸಮಕಾಲೀನ ಚರ್ಚೆಯೊಂದಕ್ಕೆ ಮಾಹಿತಿಯ ನೀರೆರೆದಿದೆ. ಭಾರತ – ಪಾಕಿಸ್ತಾನ, ಅಂಬೇಡ್ಕರ್ – ಜೋಗೇಂದ್ರನಾಥ ಮಂಡಲ್‌ – ಹೀಗೆ ಎರಡು ಹರಿವುಗಳಲ್ಲಿ ಇತಿಹಾಸದಲ್ಲಿ ಹೂತುಹೋದ ಘಟನೆಗಳನ್ನು ಮೇಲೆತ್ತಿ ದಾಖಲಿಸಿರುವ ಈ ಪುಸ್ತಕ ಸಮಕಾಲೀನ ಪೌರತ್ವ ಕಾಯ್ದೆಯನ್ನೂ, ಕಾಲವ್‌ಬೈರಸಂದ್ರದಲ್ಲಿ ನಡೆದ ಏಕಪಕ್ಷೀಯ ದಾಳಿಯ ಚಹರೆಯನ್ನೂ ವಿವರಿಸಿದೆ. ಸಮಕಾಲೀನ ಸಂಗತಿಗಳ ಅಧ್ಯಾಯಗಳನ್ನು ಕಾಲಾನುಕ್ರಮದಲ್ಲಿ ಕೊಡಬಹುದಿತ್ತು ಎಂಬುದೊಂದೇ ನನ್ನ ಪುಟ್ಟ ತಾಂತ್ರಿಕ ತಕರಾರು. ಬಿಟ್ಟರೆ ರಾಕೇಶ್‌ಶೆಟ್ಟಿಯವರು ಯಾವುದೇ ಗ್ರಾಂಥಿಕ ಶೈಲಿಯನ್ನು ಅನುಸರಿಸದೇ ತನ್ನದೇ ಶೈಲಿಯಲ್ಲಿ, ತನಗೆ ಅನ್ನಿಸಿದ್ದನ್ನೆಲ್ಲ ಮಾಹಿತಿಯುಕ್ತವಾಗಿ ನೀಡಿರುವುದು ನಿಜಕ್ಕೂ ಉತ್ತಮ ಕಾರ್ಯ. ಅದಕ್ಕಾಗಿ ಅವರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.

ಮುಖಪುಟದಲ್ಲಿ ಅಂಬೇಡ್ಕರ್‌ ನೇಪಥ್ಯದಲ್ಲಿ ಇರುವ ಹಾಗೆ ಕಾಣಿಸುತ್ತದೆ. ಮುಂದಿನ ಪುಸ್ತಕದಲ್ಲಿ ರಾಕೇಶ್‌ ಶೆಟ್ಟಿಯವರು ಅಂಬೇಡ್ಕರ್ ಕುರಿತು ಕುತಂತ್ರವಾದಿಗಳು, ಕಮ್ಯುನಿಸ್ಟರು ಅಡಗಿಸಿಟ್ಟ ಕಟು ಸತ್ಯಗಳನ್ನೂ ಅನಾವರಣ ಮಾಡಲಿ ಎಂದು ನಾನು ಆಶಿಸುತ್ತೇನೆ.

Leave a Reply

Your email address will not be published.