ಜೀವನದಿ ದೇವಕಿ
ಮೊನ್ನೆ (2025 ಸೆಪ್ಟೆಂಬರ್ 20) ಸಾಗರದಲ್ಲಿ ರಾ ಸ್ವ ಸಂಘದ ಸರಕಾರ್ಯವಾಹ ಶ್ರೀ ದತ್ತಾತ್ರೇಯ ಹೊಸಬಾಳೆಯವರ ಅಕ್ಕ ಶ್ರೀಮತಿ ದೇವಕಿಯವರ 83ನೆಯ ಜನ್ಮದಿನದ ಸಂದರ್ಭದಲ್ಲಿ ‘ಜೀವನದಿ ದೇವಕಿ’ ಶುಭಾಶಯ ಪುಸ್ತಕವನ್ನು ಬಂಧು ಮಿತ್ರರಿಗೆ, ದೇವಕಿ ಚಿಕ್ಕಮ್ಮನೇ (ಹೌದು ನನಗೂ ಚಿಕ್ಕಮ್ಮ) ಮಾಡಿದ ಕಾಗದದ ಚಂದದ ಹೂವಿನೊಂದಿಗೆ ನೀಡಲಾಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಡಾ|| ತೇಜಸ್ವಿನಿ ಅನಂತಕುಮಾರ್ ಭಾಗವಹಿಸಿ ‘ಸಾಧಕರು ಎಂದರೆ ಯಾರು ಎಂಬ ವ್ಯಾಖ್ಯೆಯನ್ನೇ ಬದಲಿಸಬೇಕಿದೆ. ದೇವಕಿ ಅಕ್ಕನಂತಹವರು ದಶಕಗಳ ಹಿಂದೆಯೇ ಕಸ/ತ್ಯಾಜ್ಯದಿಂದ ಕರಕುಶಲ ವಸ್ತುಗಳನ್ನು ಮಾಡುತ್ತ ಸದ್ದಿಲ್ಲದೆಯೇ ಪರಿಸರ ರಕ್ಷಣೆಯ ಪಾಠ ಹೇಳುತ್ತ ಬಂದಿದ್ದಾರೆ’ ಎಂದಿದ್ದು ಅರ್ಥಪೂರ್ಣವಾಗಿತ್ತು.
ಇಲ್ಲಿ ಹಾಕಿರುವ ವಿಡಿಯೋದಲ್ಲಿ ದೇವಕಿ ಚಿಕ್ಕಿಯ ಕರಕುಶಲತೆಯ ಕೃತಿಗಳ ಝಲಕ್ ಇದೆ. ಇಲ್ಲೇ ಇಷ್ಟಿದ್ದರೆ, ಅವರು ಈವರೆಗೆ ಇನ್ನೆಷ್ಟು ಕಲಾಕೃತಿಗಳನ್ನು ರೂಪಿಸಿರಬಹುದು!
ಈ ಪ್ರದರ್ಶಿನಿಯಲ್ಲಿನ ಆಶು ಶೀರ್ಷಿಕೆಗಳನ್ನು ಕೈಬರಹದಲ್ಲಿ ಬರೆದವರು ಇನ್ನೊಬ್ಬ ಸೋದರಿ ಅಹಲ್ಯಾ. ಕಾರ್ಯಕ್ರಮ ಸಂಘಟಿಸುವಲ್ಲಿ ಮುಖ್ಯ ಪಾತ್ರ ವಹಿಸಿದ್ದು ನನ್ನ ಸನ್ಮಿತ್ರೆಯೂ ಆದ, ದತ್ತಾಜಿ ತಂಗಿ ರೋಹಿಣಿ.
ದೇವಕಿ – ನಿಜ ಅರ್ಥದಲ್ಲಿ ಜೀವನದಿ. ಸವಾಲುಗಳನ್ನು ಮೀರಿ ತನ್ನದೇ ಬದುಕು ಕಟ್ಟಿಕೊಂಡಿದ್ದಲ್ಲದೆ ತನ್ನ ಸುತ್ತಲಿನ ಎಲ್ಲರಿಗೂ (ಬಂಧುಗಳು ಮಾತ್ರವಲ್ಲ ನೆರವಿನ ಅಗತ್ಯ ಇದ್ದವರೂ ಸೇರಿ) ತನ್ನ ಪ್ರೀತಿ, ನೆರವಿನ ಅಭಯ ನೀಡುತ್ತ ಬಂದಿದ್ದಾರೆ.
(‘ಜೀವನದಿ ದೇವಕಿ’ ಪುಸ್ತಕವನ್ನು ವಿನ್ಯಾಸಗೊಳಿಸುವ ಭಾಗ್ಯ ನನಗೆ ಸಿಕ್ಕಿತ್ತು).
‘ಜೀವನದಿ ದೇವಕಿ’ ಪುಸ್ತಕವನ್ನು ಇಲ್ಲಿ ಓದಿ:
ಎಚ್. ಆರ್. ದೇವಕಿಯವರ 83ನೆಯ ಜನ್ಮದಿನದ ಸಂದರ್ಭದಲ್ಲಿ ಅವರ ಬಂಧು - ಮಿತ್ರರು ಬರೆದ ಅನುಭವ - ಶುಭಾಶಯಗಳ ಸಂಕಲನ
Jeevanadi Devaki: A collection of experiences and greetings by relatives and friends of H R Devaki, on the occasion of her 83rd birthday | ಪ್ರಕಟಣೆ: ಸೆಪ್ಟೆಂಬರ್ 2025