ಜೇಮ್ಸ್ ಕ್ಯಾಮೆರಾನ್ ಸಿನೆಮಾ ಅಂದಮೇಲೆ ನೀವು ಥಿಯೇಟರಿಗೆ ಹೋಗಲೇಬೇಕು. ಅಲ್ಲಿ ಒಂದೂ ದೃಶ್ಯವನ್ನೂ ಬಿಡದೆ ನೋಡಲೇಬೇಕು. ಸಿನೆಮಾದೆಲ್ಲ ಸಂಭಾಷಣೆಗಳನ್ನೂ ಕಿವಿಯಿಟ್ಟು ಕೇಳಿ ಅರ್ಥ ಮಾಡಿಕೊಳ್ಳಬೇಕು. ಯಾವುದೋ ದೃಶ್ಯ, ಸನ್ನಿವೇಶ ಅರ್ಥವಾಗಲಿಲ್ಲ ಎಂದರೆ ಮತ್ತೆ ಥಿಯೇಟರಿಗೆ ಹೋಗಿ….
ಮೂರು ತಾಸು ಮೀರಿದ ಕಾಲಾವಧಿಯ ಟೈಟಾನಿಕ್ ಸಿನೆಮಾ ಬಂದಾಗ ಈ ಮಾತನ್ನು ತುಂಬಾ ಜನ ಹೇಳಿದ್ದರು. ಈಗ ಅವತಾರ್ ಬಂದಿದೆ. ಇಲ್ಲೂ, ನೀವು ಎರಡೂವರೆ ತಾಸಿನ ಈ ಸಿನೆಮಾವನ್ನು ಥಿಯೇಟರಿನಲ್ಲಿಯೇ ನೋಡಬೇಕು. ಅದಕ್ಕಾಗಿ ವಿಶೇಷ ಕನ್ನಡಕವನ್ನು ಹಾಕಿಕೊಳ್ಳಬೇಕು. ಇಂಟರ್‌ವಲ್ ಇಲ್ಲದೆ ನಿಮ್ಮ ಎಲ್ಲ ಒತ್ತಡಗಳನ್ನು ಬಿಗಿ ಹಿಡಿದುಕೊಂಡು ಕ್ಷಣಕ್ಷಣಕ್ಕೂ ದಿಗಿಲು ಹುಟ್ಟಿಸುವ ಪಂಡೋರಾ ದ್ವೀಪದ ರುದ್ರ ರಮಣೀಯ ಭೂಶ್ರೇಣಿಯನ್ನು ಹತ್ತಿಳಿಯುವುದು, ಮರಬಳ್ಳಿಯ ಮೇಲೆ ನಡೆಯುವುದು, ಆಕಾಶದಲ್ಲಿ ಹಕ್ಕಿಯ ಮೇಲೆ ಕೂತು ಹಾರುವುದು, – ಎಲ್ಲವನ್ನೂ ಮಾಡಬೇಕು!
ನೀವು ಈ ಸಿನೆಮಾವನ್ನು ಇಂಟರ್‌ನೆಟ್‌ನಿಂದ ಕದ್ದು ನೋಡಿದರೆ ಯಾವ ಸುಖವೂ ಇಲ್ಲ. ಯಾಕೆಂದರೆ ಇದು ೩ಡಿ ಸಿನೆಮಾ. ವಿಶೇಷ ಕನ್ನಡಕ ಇಲ್ಲದೆ ನೋಡಿದರೆ ಈ ಸಿನೆಮಾ ಕೊಂಚ ಸಪ್ಪೆ. ದೃಶ್ಯವೈಭವವಂತೂ ಕಂಪ್ಯೂಟರಿನ ಮಾನಿಟರ್‌ನಲ್ಲಿ ಎಳ್ಳಷ್ಟೂ ಹಿಡಿಸುವುದಿಲ್ಲ.
ನೀವು ಟೈಟಾನಿಕ್ ನೋಡಿದ್ದಲ್ಲಿ, ಅವತಾರ್‌ಗೂ ಇದಕ್ಕೂ ಇರುವ ಸಾಮ್ಯತೆ ಕಣ್ಣಿಗೆ ಕಟ್ಟುತ್ತದೆ. ಎರಡೂ ಸಿನೆಮಾಗಳಲ್ಲಿ ಆ ಕಾಲದ ಅತ್ಯುನ್ನತ ತಂತ್ರಜ್ಞಾನದ ಬಳಕೆಯಾಗಿದೆ. ಎರಡೂ ಸಿನೆಮಾಗಳಲ್ಲಿ ತಂತ್ರಜ್ಞಾನವನ್ನೂ ಮೀರುವ ಕಥೆಯಿದೆ. ಎರಡೂ ಸಿನೆಮಾಗಳು ವೀಕ್ಷಕರಿಗೆ ಒಂದು ವಿಶಾಲ ದೃಷ್ಟಿಕೋನದ ಸಂದೇಶವನ್ನು ಹೇಳುತ್ತವೆ. ಎರಡೂ ಸಿನೆಮಾಗಳು (ಮಕ್ಕಳಿಗಲ್ಲದ ಒಂದೆರಡು ದೃಶ್ಯಗಳನ್ನು ಹೊರತುಪಡಿಸಿ) ಎಲ್ಲಾ ಸ್ತರದ ವೀಕ್ಷಕರಿಗೆ ಒಂದಲ್ಲ ಒಂದು ರೀತಿಯಲ್ಲಿ ಇಷ್ಟವಾಗುತ್ತವೆ. ಮಕ್ಕಳಿಗೆ ಭವ್ಯ – ರೌದ್ರ ಚಿತ್ರಣ; ಯುವಕರಿಗೆ ರೋಮಾನ್ಸಿನ ರಸದೌತಣ; ವಯಸ್ಕರಿಗೆ ತತ್ವದರ್ಶನ; ಟೆಕ್ಕಿಗಳಿಗೆ ಸಮಕಾಲೀನ ಸಿನೆಮಾ ಪಾಠ; ಸಿನೆಮಾ ಪಂಡಿತರಿಗೆ ಸಂಕೀರ್ಣ ಅಧ್ಯಯನವಸ್ತು.
ಕಥೆ, ತಂತ್ರಜ್ಞಾನ – ಎರಡರಲ್ಲೂ ಮತ್ತೆ ನನ್ನ ಮನಸ್ಸನ್ನು ಸೂರೆಗೊಂಡಿರುವ ಕ್ಯಾಮೆರಾನ್‌ನ ಈ ‘ಅವತಾರ್’ ಸಿನೆಮಾ ವಿಮರ್ಶೆ ತುಸು ದೀರ್ಘವಾಗಿಯೇ ಇದೆ. ಅದಕ್ಕೇ ಮೊದಲೇ ಹೇಳಿಬಿಡುತ್ತೇನೆ: ಅವತಾರ್ ನಿಮ್ಮ ಜೀವಿತಲ್ಲೊಮ್ಮೆ ನೋಡಲೇಬೇಕಾದ ಸಿನೆಮಾ. ದಯಮಾಡಿ ಈಗಲೇ ಬುಕ್ ಮಾಡಿ ನೋಡಿ. ಮತ್ತೆ ತಡವಾಯಿತೆಂದು ಕೈ ಹಿಸುಕಿಕೊಳ್ಳಬೇಡಿ. ಯಾರಿಂದಲೋ ಕಥೆ ಕೇಳಿ ಹೊಟ್ಟೆ ಉರಿಸಿಕೊಳ್ಳಬೇಡಿ. ಥಿಯೇಟರ್ ಸಿನೆಮಾಗೆ ನೀವು ಕಣ್ಣುಮುಚ್ಚಿ ಖರ್ಚು ಮಾಡಬೇಕಾದ ಸಮಯ ಈಗಂತೂ ಬಂದಿದೆ.
ಅ‘ಮರ’ ಕಥೆ
ಟಾನಿಕ್‌ನಲ್ಲಿ ಅಮರ ಪ್ರೇಮದ ಮಧುರ ಯಾತನೆಯ ಕಥೆಯನ್ನು ನೋಡಿದ್ದೆವು. ಅವತಾರ್‌ನಲ್ಲಿರೋದು ಒಂದು ಮರದ ಸುತ್ತ ಹಣೆದ ಬದುಕಿನ ಕಥೆ. ಮನುಷ್ಯರ ಹಾಗೇ ಇರುವ, ಹತ್ತಡಿ ಆಳ್ತನದ ನೀಲ, ಬಾಲಸಹಿತ ಜೀವ ಸಂಕುಲದ ಸುಮಧುರ ಸಮುದಾಯದ ಬದುಕಿನ ಕಥೆ. ಇಲ್ಲಿ ಅನ್ಯಗ್ರಹ ಜೀವಿಗಳೆಂದರೆ ನಮ್ಮದೇ ಪ್ರತಿಬಿಂಬವೆಂಬಂತೆ. ಅಥವಾ ನಾವಿರಬೇಕಾಗಿದ್ದ ಸಹಜ ಸ್ಥಿತಿ.
ಮನುಕುಲವು ಇಂಧನಕ್ಕಾಗಿ ಪಂಡೋರಾ ಗ್ರಹದ ಬೃಹತ್ ಮರದ ಕೆಳಗೆ ಇರುವ ಅನ್‌ಒಬ್‌ಟೇನಿಯಂ ( unobtainium ಇದನ್ನು ಅರ್ಥೈಸಿದರೆ ‘ಸಿಗಲಾರದ್ದು’ ಎಂಬ ಅರ್ಥ ಬರುತ್ತದೆ) ಖನಿಜವನ್ನು ದೋಚಲು ನಾ – ವಿ ಹೆಸರಿನ ಅನ್ಯಗ್ರಹ ಸಮುದಾಯದೊಳಕ್ಕೆ ಅವರದೇ ಸ್ವರೂಪದ ಮನುಷ್ಯರನ್ನು ತೂರಿಸಿ ಮಾಹಿತಿ ಪಡೆಯುತ್ತದೆ. ಹೀಗೆ ಅವರೊಳಗೇ ಒಬ್ಬನಾಗಿ ಹೋದ ಜೇಕ್ ಸ್ಯಾಲಿ ಎಂಬಾತ ನಾ-ವಿ ಸಮುದಾಯದ ಬದುಕಿಗೆ ಮನಸೋತು ಅವರ ಪರವಾಗಿ, ಮನುಷ್ಯರ ವಿರುದ್ಧ ಹೋರಾಡಿ ಗೆಲ್ಲುವುದೇ ಅವತಾರ್ ಸಿನೆಮಾದ ಮುಖ್ಯ ಕಥೆ.
ಪಂಡೋರಾ ಗ್ರಹದಲ್ಲಿ ಅಲ್ಲಿನ ನಾ-ವಿ ಸಮುದಾಯದ ಜನರಿಂದ ಹಿಡಿದು ಗಿಡ, ಮರ, ಪ್ರಾಣಿಗಳು, ಅಲ್ಲಿನ ನೆಲ, ಪಕ್ಷಿಗಳು – ಎಲ್ಲವೂ ಪರಸ್ಪರ ಅವಿನಾಭಾವ ಸಂಬಂಧ ಹೊಂದಿರುತ್ತವೆ. ನಾ-ವಿ ಜನರು ತಮ್ಮ ಜಡೆಯನ್ನು (ಅವುಗಳಲ್ಲಿ ನ್ಯೂರಾನ್ ಎಳೆಗಳಿರುತ್ತವೆಯಂತೆ) ಗಿಡಕ್ಕೋ, ಮರಕ್ಕೋ, ದೈತ್ಯಕುದುರೆಗೋ, ಪಕ್ಷಿಗೋ ಜೋಡಿಸಿದರೆ ಸಾಕು, ಅದರೊಡನೆ ಸಂಭಾಷಿಸುತ್ತಾರೆ. ಮಾಹಿತಿ ಹಂಚಿಕೊಳ್ಳುತ್ತಾರೆ. ಅವೂ ಈ ಜನರ ಮಾತನ್ನು ಕೇಳಿ ಅದರಂತೆ ಬದುಕು ಹಸನು ಮಾಡಲು ತಮ್ಮ ಶ್ರಮ ಹಾಕುತ್ತವೆ. ಪರಸ್ಪರ ಅರ್ಥ ಮಾಡಿಕೊಳ್ಳುವುದರಿಂದ ಪ್ರಕೃತಿಯ ಜೊತೆ ಸಹಬಾಳ್ವೆ ನಡೆಸಲು ಸಾಧ್ಯ ಎಂದು ಕ್ಯಾಮೆರಾನ್ ಸಂದೇಶ ಕೊಡುತ್ತಾನೆ. ವಾತಾವರಣ ತಾಪಮಾನ ಹೆಚ್ಚಳ ಕುರಿತ ಕೋಪನ್‌ಹೇಗನ್ ಗಲಾಟೆಯ ನಡುವೆಯೇ ಪರಿಸರದ ಬಗ್ಗೆ ಗಂಭೀರ ಸಂದೇಶ ಕೊಡುವ ಅವತಾರ್ ಬಿಡುಗಡೆಯಾಗಿದ್ದು ಸಕಾಲಿಕವೇ.
ನಾ-ವಿ ಜನರೂ ಹತ್ತು ಹಲವು ನಂಬಿಕೆಗಳ ನಡುವೆಯೇ ಬದುಕುತ್ತಾರೆ. ಮನುಷ್ಯರು ತಮ್ಮ ಸಮುದಾಯದಲ್ಲಿ ಪರಕಾಯ ಪ್ರವೇಶ ಮಾಡಿದ್ದು ಗೊತ್ತಿದ್ದೂ ಅವರನ್ನು ಸೈರಿಸಿಕೊಳ್ಳುತ್ತಾರೆ. ಆಗೊಮ್ಮೆ ಈಗೊಮ್ಮೆ ಮನುಷ್ಯರ ವಿರುದ್ಧ ಸಮರ ಹೂಡಿದ್ದ ಈ ಜನ ಕೊನೆಗೊಮ್ಮೆ ಆಕಾಶಜೀವಿಗಳ (ಅಂದರೆ ಸಮರ ವಿಮಾನಗಳ ಮೇಲೆ ಹಾರಿ ಬರುವ ಮನುಷ್ಯರು) ವಿರುದ್ಧ ಜಯ ಸಾಧಿಸಲು ಮನುಷ್ಯನೇ ನಾಯಕತ್ವ ವಹಿಸಬೇಕಾಗುತ್ತದೆ. ಅಷ್ಟರಮಟ್ಟಿಗೆ ಮನುಷ್ಯನಿಗೂ ಒಂದು ಹೃದಯವಂತಿಕೆ ಇದೆ ಎಂದು ಕ್ಯಾಮೆರಾನ್ ತೋರಿಸುತ್ತಾನೆ.
ಪಂಡೋರಾ ಗ್ರಹದ ದೃಶ್ಯ ವೈಭವವನ್ನು ನೀವು ನೋಡಿಯೇ ಅನುಭವಿಸಬೇಕು. ಆ ಬೃಹತ್ ಮರ, ಅದರ ಸುತ್ತ ಮುತ್ತ ಬೆಳೆದ ಇನ್ನಷ್ಟು ಮರಗಳು, ಗ್ರಹದ ತುಂಡುಗಳನ್ನು ಒಂದಕ್ಕೊಂದು ಬೆಸೆದ ಮರಬಳ್ಳಿಗಳು, ಎಲ್ಲಿಂದಲೋ, ಎಷ್ಟೋ ಸಾವಿರ ಅಡಿ ಕೆಳಗೆ ಧುಮ್ಮಿಕ್ಕುವ ಜಲಪಾತ, ಹಗಲಿನಷ್ಟೇ ಬೆಳಕಾಗುವ ರಾತ್ರಿಯ ಕಾಡು, ಮರದ ಸಂದೇಶ ಕೇಳಿ ನೆರವಾಗುವ ಬಗೆಬಗೆಯ ಕ್ಷುದ್ರ ಪ್ರಾಣಿಗಳು, – ಒಂದೆ ಎರಡೆ……. ಅವತಾರ್ ಸಿನೆಮಾದಲ್ಲಿ ನಿಮ್ಮ ಕನಸುಗಳನ್ನು, ನಿಮ್ಮ ಮಕ್ಕಳ ಕಾಮಿಕ್ಸ್‌ಗಳಲ್ಲಿರುವ ಒಣ ಚಿತ್ರಗಳನ್ನು ಒಗಾಯಿಸಿ, ನಿಮ್ಮ ಕೈಯಳತೆಯಲ್ಲೇ ಎಲ್ಲವನ್ನೂ ಅದ್ಭುತವಾಗಿ, ರಮ್ಯವಾಗಿ ಕಟ್ಟಿಕೊಡುವ ದೃಶ್ಯಗಳಿವೆ. ಅವನ್ನೆಲ್ಲ ಇಲ್ಲಿ ಹೇಳುವುದಕ್ಕೇ ಆಗದು. ನಿರುಮ್ಮಳ ಮನಸ್ಸಿನಿಂದ, ಇನ್‌ವಾಲ್ವ್ ಆಗಿ ನೋಡಿದರೆ ಅವತಾರ್ ಸಿನೆಮಾ ಎಂಥ ಪ್ರೌಢ ಕಥೆಯನ್ನು ಹೊಂದಿದೆ ಎಂದು ಗೊತ್ತಾಗುತ್ತದೆ. ಈವರೆಗೆ ಬಂದ ಬಹುತೇಕ ವಿಮರ್ಶೆಗಳು ‘ತಂತ್ರಜ್ಞಾನ ಬರೋಬ್ಬರಿಯಾಗಿದೆ, ಕಥೆ ಜಾಳು ಜಾಳಾಗಿದೆ’ ಎಂದೇ ಬರೆದಿವೆ. ಆದರೆ ನನಗಂತೂ ಅವತಾರ್‌ನ ಕಥೆ ನಿಜಕ್ಕೂ ನಮ್ಮ ಕಣ್ತೆರೆಸುವುದಕ್ಕೇ ಬರೆದಂತಿದೆ. ತೆರೆದುನೋಡುವ ಮಟ್ಟಕ್ಕೆ ನಾವು ಏರಬೇಕಷ್ಟೆ. ಕ್ಷಣಕ್ಷಣಕ್ಕೂ ಬದಲಾಗುವ ಸನ್ನಿವೇಶಗಳ ನಡುವೆಯೇ ಇಣುಕುವ ಹಲವು ಸಂಭಾಷಣೆಗಳನ್ನು ನೀವು ಕೇಳಬೇಕು. ಬದುಕುವ ಪರಿ ಹೇಗೆ, ಸಹಬಾಳ್ವೆಯ ಶಿಸ್ತುಗಳೇನು, – ಎಲ್ಲವನ್ನೂ ನೀವು ಅಷ್ಟಿಷ್ಟಾದರೂ ತಿಳಕೊಳ್ಳಬಹುದು.
೩ಡಿಯ ಡಿಜಿಟಲ್ ಅವತಾರ
೩ಡಿ ಅಂದರೆ ಮೂರು ಆಯಾಮದ (ಎರಡು ಆಯಾಮ ಅಂದ್ರೆ ಉದ್ದ ಮತ್ತು ಅಗಲ. ಆಳ ಕಂಡರೆ ಅದು ಮೂರನೆಯ ಆಯಾಮ. ನೀವು ಒಂದೇ ಕಣ್ಣಿನಲ್ಲಿ ನೋಡಿದರೆ ಅದು ಎರಡೇ ಆಯಾಮ. ಎಡಗಣ್ಣಿನ ನೋಟವೇ ಬೇರೆ. ಬಲಗಣ್ಣಿನ ನೋಟವೇ ಬೇರೆ. ಎರಡೂ ಕಣ್ಣುಗಳನ್ನು ತೆರೆದಾಗ ಮಾತ್ರ ನಿಮಗೆ ಆಳ, ದೂರದ ಅನುಭವವಾಗುತ್ತದೆ. ಒಂದೇ ಕಣ್ಣಿನಲ್ಲಿ ಬೈಕ್ ಡ್ರೈವ್ ಮಾಡಲು ಯತ್ನಿಸಿ. ಎದುರಿಗಿದ್ದ ಆಟೋ ಎಷ್ಟು ದೂರದಲ್ಲಿದೆ ಎಂದು ತಿಳಿಯದೇ ತಬ್ಬಿಬ್ಬಾಗುತ್ತೀರಿ!) ಸಿನೆಮಾಗಳ ತಯಾರಿಗೆ ದೊಡ್ಡ ಇತಿಹಾಸವೇ ಇದೆ. ೧೮೯೦ರಿಂದಲೂ ಇರುವ ೩ಡಿ ಆಯಾಮದ ಸಂಗತಿಗಳ ಬಗ್ಗೆ ನೀವು ವಿಕಿಪೀಡಿಯಾದಲ್ಲೇ ಮಾಹಿತಿ ಪಡೆಯಬಹುದು.
೧೯೫೦ರ ದಶಕದ ಆರಂಭದಲ್ಲಿ ಶುರುವಾದ ೩ಡಿ ಸಿನೆಮಾ ಕ್ರೇಜ್, ೧೯೫೪ರ ಹೊತ್ತಿಗೆ ಹಲವು ತಾಂತ್ರಿಕ ಅಡಚಣೆಗಳಿಂದಾಗಿ ಕುಸಿಯಿತು. ಆಮೇಲೆ ೧೯೮೦ರ ದಶಕದಲ್ಲಿ ಮತ್ತೆ ಚಿಗುರಿತು.
೩ಡಿ ಸಿನೆಮಾ ಮಾಡಲು ಮುಖ್ಯವಾಗಿ ಒಂದೇ ದೃಶ್ಯವನ್ನು ಎರಡು ಕ್ಯಾಮೆರಾ ಕಣ್ಣುಗಳಿಂದ (ನಿಮ್ಮ ಎರಡು ಕಣ್ಣುಗಳಿಗೆ ಅವನ್ನು ಹೋಲಿಸಬಹುದು) ಕರಾರುವಾಕ್ಕಾಗಿ ಚಿತ್ರೀಕರಿಸಿ, ಅವುಗಳನ್ನು ಪರದೆಯ ಮೇಲೆ ಮೂಡಿಸಬೇಕು. ಹಿಂದೆಲ್ಲ ಇದನ್ನು ಫಿಲ್ಮ್‌ರೀಲುಗಳ ಮೂಲಕ ಮಾಡುತ್ತಿದ್ದರು. ಈಗ ಕಾಲ ಬದಲಾಗಿದೆ. ಡಿಜಿಟಲ್ ಪ್ರಾಜೆಕ್ಷನ್ ಶುರುವಾಗಿದೆ. ಟೆಕ್ಸಾಸ್ ಇನ್‌ಸ್ಟ್ರುಮೆಂಟ್ಸ್ ಸಂಸ್ಥೆಯ ಭಾಗವಾದ ಡಿ ಎಲ್ ಪಿ ಸಿನೆಮಾ ರೂಪಿಸಿದ ೩ಡಿ ಡಿಜಿಟಲ್ ಪ್ರಾಜೆಕ್ಟರ್‌ಗಳನ್ನು ಅವತಾರ್ ಅವತರಣಿಕೆಗೆ ಬಳಸಲಾಗಿದೆ.
ಡಿ ಎಲ್ ಪಿ ಪ್ರಾಜೆಕ್ಟರ್‌ಗಳ ಬಗ್ಗೆ ಹೆಚ್ಚು ತಿಳಿಯಬೇಕಾದರೆ ಇಲ್ಲಿ ನೀವು ಒಂದು ಪುಟ್ಟ ಮೂವೀಯನ್ನು ನೋಡಬೇಕು. ಕೊಂಚ ವಿಜ್ಞಾನದ ಆಸಕ್ತಿ ಇದ್ದರೆ ಬೇಗ ಅರ್ಥವಾಗುತ್ತದೆ. ಡಿ ಎಂ ಡಿ ಎಂಬ ಮೈಕ್ರೋ ಪ್ರೋಸೆಸರ್‌ಗಳು ಮತ್ತು ಬಣ್ಣದಚಕ್ರದ ಮಾಯಾಲೋಕ ಸೃಷ್ಟಿಸುವ ೩೨ ಮಿಲಿಯ ಬಣ್ಣಗಳ ಆಟವನ್ನು ಅರಿಯುವುದೇ ಒಂದು ಮಜಾ.
ಈ ಸಿನೆಮಾ ತಯಾರಿಸುವಾಗ ಇನ್ನೊಂದು ಸಮಸ್ಯೆ ಎದುರಾಗುತ್ತಿತ್ತು: ಚಿತ್ರೀಕರಣ ಸರಿಯಾಗಿ ನಡೆಯುತ್ತಿದೆಯೇ ಎಂದು ತಿಳಿಯುವುದು ಹೇಗೆ? ಅದಕ್ಕೆಂದೇ ಜೇಮ್ಸ್ ಕ್ಯಾಮೆರಾನ್ ‘ಸ್ಟೀರಿಯೋಸ್ಕೋಪಿಕ್ ಇಮೇಜ್ ಅಕ್ವಿಜಿಶನ್ ವೇದಿಕೆ’ ಎಂಬ ಸಾಧನವೊಂದನ್ನು ಗೆಳೆಯರೊಂದಿಗೆ ಕೂಡಿ ರೂಪಿಸಿ ಅದಕ್ಕಾಗಿ ಪೇಟೆಂಟ್ ಪಡೆದಿದ್ದಾನೆ. ಈ ಸಾಧನದ ಮೂಲಕ ಶೂಟಿಂಗ್ ಮೇಲೆ ಸಂಪೂರ್ಣ ನಿಯಂತ್ರಣ ಸಾಧಿಸಿದ್ದರಿಂದಲೇ ಸಿನೆಮಾ ಅಷ್ಟು ವೈಭವೋಪೇತವಾಗಿ ಮೂಡಿಬಂದಿದೆ.
ಇದಲ್ಲದೆ ಇಡೀ ಸಿನೆಮಾದಲ್ಲಿ ಹತ್ತಡಿ ಎತ್ತರದ ಜೀವಿಗಳನ್ನು ಮನುಷ್ಯರೊಂದಿಗೆ ಲೀಲಾಜಾಲವಾಗಿ ತೋರಿಸಿದ ಜಾಣ್ಮೆಯನ್ನು ನೀವು ಮೆಚ್ಚದೆ ಎಲ್ಲಿ ಹೋಗುತ್ತೀರಿ? ನಿಮಗೆ ಎಲ್ಲೂ ಊನ ಕಾಣುವುದಿಲ್ಲ. ತಂತ್ರಜ್ಞಾನವನ್ನು ಮರೆಸಿ ರಮ್ಯ ದೃಶ್ಯಗಳನ್ನು ಹೆಣೆಯುವುದೇ ಕ್ಯಾಮೆರಾನ್‌ನ ಜಾಣ್ಮೆ. ನೋಡನೋಡುತ್ತ ನಿಮಗೆ ತಂತ್ರಜ್ಞಾನಕ್ಕಿಂತ ಕಥೆಯೇ ಮುಖ್ಯ ಎನ್ನಿಸಿಬಿಡುತ್ತದೆ. ಸಿನೆಮಾ ಮುಗಿದ ಮೇಲೆ – ಅರೆ ಇಲ್ಲಿ ತಂತ್ರಜ್ಞಾನ ಎಲ್ಲೆಲ್ಲಿದೆ ಎಂದು ತಲೆ ಕೆಡಿಸಿಕೊಳ್ಳುತ್ತೀರಿ!
ಒಬ್ಬ ಟ್ರಕ್ ಡ್ರೈವರ್ ಆಗಿದ್ದ ಜೇಮ್ಸ್ ಕ್ಯಾಮೆರಾನ್ ಹೇಗೆ ಜಗತ್ತೇ ಮೆಚ್ಚುವ ನಿರ್ದೇಶಕನಾದ, ಅವನ ಏಳು-ಬೀಳುಗಳು, ಬದುಕಿನ ವಿಲಕ್ಷಣ ಘಟನೆಗಳು, ಅವನ ವರ್ತನೆಯ ಬಗ್ಗೆ ನಟನಟಿಯರ ಹೇಳಿಕೆಗಳು ಎಲ್ಲವನ್ನೂ ನೀವು ಇಲ್ಲಿ ಓದಿಕೊಳ್ಳಬಹುದು.
ಜೇಮ್ಸ್ ಕ್ಯಾಮೆರಾನ್‌ನ ಒಂದು ವಿವರವಾದ ಸಂದರ್ಶನ, ವ್ಯಕ್ತಿಚಿತ್ರಣ ಇಲ್ಲಿದೆ. ಸಿನೆಮಾ ಭಕ್ತರು ಖಂಡಿತ ಓದಬೇಕು.
ಅವತಾರ್ ಸಿನೆಮಾ ತಂತ್ರಜ್ಞಾನ ಹಾಗೂ ಕಥೆ ಕುರಿತ ವಿವರಗಳಿಗೆ ಈ ಲಿಂಕ್ ಉಪಯುಕ್ತವಾಗಿದೆ ಏನೇ ಹೇಳಿ, ಅವತಾರ್ ಸಿನೆಮಾ ಮನುಷ್ಯನ ಭೌತಿಕ, ಬೌದ್ಧಿಕ, ಮಾನಸಿಕ ಕುಬ್ಜತೆಯನ್ನು ಎತ್ತಿ ತೋರಿಸುವ ಹೊಸ ಸಿನೆಮಾ. ನಮ್ಮನ್ನೇ ನಾವು ಪ್ರಶ್ನಿಸಿಕೊಳ್ಳುವುದಕ್ಕೆ ಅವತಾರ್ ವೀಕ್ಷಣೆ ಒಂದು ನೆಪವಾಗಬೇಕು.
ಪಂಡೋರಾ ದ್ವೀಪದ ರಚನೆ ಕುರಿತ ಈ ಬ್ಲಾಗ್ ಅಚ್ಚುಕಟ್ಟಾಗಿದೆ. ಓದಿ.
ಮುಂದೆ? ಟೈಟಾನಿಕ್ ಸಿನೆಮಾದ ೩ಡಿ ಬರಲಿದೆ. ಅದಲ್ಲದೆ ಇನ್ನೂ ಒಂದೆರಡು ಸಿನೆಮಾಗಳು ಕ್ಯಾಮೆರಾನ್‌ನ ಬತ್ತಳಿಕೆಯಲ್ಲಿವೆ. ನಿಮ್ಮ ಕಿಸೆಯಲ್ಲಿ ಒಂದೆರಡು ಸಾವಿರ ರೂಪಾಯಿ ಇಟ್ಟುಕೊಂಡು ತಯಾರಾಗಿ.
1 Comment
ಇದು ಸ್ವಲ್ಪ ಹಳೆಯ ಪೋಸ್ಟ್ ಅದರೂ ಈಗ ಕಾಮೆಂಟ್ ಮಾಡ್ತಾ ಇದ್ದೀನಿ.. ಯಾಕಂದರೆ ನಿಮ್ಮ ಲೋಕಕ್ಕೆ ಇದು ನನ್ನ ಮೊದಲ ವಿಸಿಟ್!!
ಮತ್ತೆ ‘ಮರ’ದ ಕಥೆ ಎಲ್ಲಿ ಸಿಕ್ಕರೂ ಬಹಳ ಆಸಕ್ತಿಯಿಂದ ಓದುತ್ತೀನಿ.. ‘ಅವತಾರ್’ ನನಗೂ ಬಹಳ ಹಿಡಿಸಿದ ಚಿತ್ರ.. ಸಿನಿಮ ತಾಂತ್ರಿಕ ವಿಚಾರಗಳು ಅಷ್ಟು ಅರ್ಥ ಆಗೋಲ್ಲ ಪ್ರಯತ್ನನೂ ಪಡೋಲ್ಲ ಆದರೆ ಈ ಸಿನೆಮಾದಲ್ಲಿನ ‘ಮೆಸೇಜ್’ ಬಹಳ ಬಹಳ ಸಮಯೋಚಿತ ಎನಿಸಿತು
ನಿಮ್ಮ ಬರವಣಿಗೆ ಹಾಗೂ ಈ ವಿಮರ್ಶೆ ಬಹಳ ಚೆನ್ನಾಗಿದೆ