`ದ ಸ್ವರ್ವ್’: ಆಧುನಿಕ ಯುರೋಪಿಗೆ ಮುನ್ನುಡಿಯಾದ ಕಾವ್ಯದ ಶೋಧ

ಸುಮಾರು ೨೭೦೦ ವರ್ಷಗಳ ಹಿಂದೆ `ನಿರುಕ್ತ’ ಬರೆದ ಸಂಸ್ಕೃತ ನಿಘಂಟುಕಾರ ಯಾಸ್ಕರಿಗೂ, ೨೪೦೦ ವರ್ಷಗಳ ಹಿಂದೆ ಅಣುಸಿದ್ಧಾಂತವನ್ನು ಬೋಧಿಸಿದ ಗ್ರೀಕ್ ತತ್ವಜ್ಞಾನಿ ಎಪಿಕ್ಯೂರಸ್‌ಗೂ, ೨೦೦೦ ವರ್ಷಗಳ ಹಿಂದೆ ‘ಡಿ ರೆರಮ್ ನೇಚುರಾ (ಸರಳಗನ್ನಡದಲ್ಲಿ `ವಸ್ತುಗಳ ಗುಣಗಳ ಕುರಿತು’ ಎನ್ನಬಹುದೇನೋ..) ಕಾವ್ಯವನ್ನು ಬರೆದ ಲ್ಯೂಕ್ರಿಶಿಯಸ್‌ಗೂ, ಐನೂರು ವರ್ಷಗಳ ಹಿಂದೆ ಬಾಳಿದ ಪೋಗ್ಗಿಯೋ ಬ್ರಾಶಿಯೋಲಿನಿಗೂ …
ಯುರೋಪಿನ ನವೋದಯಕ್ಕೂ (ರಿನೈಸಾನ್ಸ್)…
ಸಂಬಂಧ ಇದೆ.
ಅಷ್ಟೇ ಅಲ್ಲ, ಪಾಂಪೆಯ ವೆಸೂವಿಯೆಸ್ ಅಗ್ನಿಪರ್ವತ ದುರಂತ, ಮುದ್ರಣಯುಗಪೂರ್ವ ಲೇಖನಪ್ರತಿ ಮಾಡುವ ಕಾಯಕ, ಚರ್ಚ್‌ಗಳಲ್ಲಿ ನಡೆಯುತ್ತಿದ್ದ ಚರ್ಚೆಗಳು, ವೈಜ್ಞಾನಿಕತೆಯನ್ನು ಮಂಡಿಸುವವರ ಮತ್ತು ಖಂಡಿಸುವವರ ವಾದ ವಿವಾದ ಮತ್ತು ಮತೀಯ ಹೇರಿಕೆಗಳು, – ಹೀಗೆ ಹತ್ತು ಹಲವು ಸಂಗತಿಗಳನ್ನು ಇಲ್ಲಿ ಜೋಡಿಸಿ ಚರ್ಚಿಸಬಹುದು.

ಸ್ಟೀಫನ್ ಗ್ರೀನ್‌ಬ್ಲಾಟ್ ಬರೆದ `ದ ಸ್ವರ್ವ್: ಹೌ ದ ವರ್ಲ್ಡ್ ಬಿಕೇಮ್ ಮಾಡರ್ನ್’ ಕೃತಿಯು ಇವೆಲ್ಲ ಸಂಗತಿಗಳನ್ನೂ ಒಮ್ಮೆಗೇ ಚರ್ಚಿಸಲು ವೇದಿಕೆ ಒದಗಿಸಿದೆ. ಅಮೆರಿಕಾ ಮತ್ತು ಯುರೋಪಿನಲ್ಲಿ ಈ ಪುಸ್ತಕವೀಗ ಬಹುಚರ್ಚಿತ ಕೃತಿ.
ಬಹುಪ್ರಾಚೀನ ಕಾಲದಲ್ಲೇ ಯಾಸ್ಕರೂ ಚರ್ಚಿಸಿದ ವಿಶ್ವದ ಅತಿ ಚಿಕ್ಕ ಕಣ `ಅಣು’ಗಳ ಬಗ್ಗೆ ಬೆಳಕು ಚೆಲ್ಲಿದ ಎಪಿಕ್ಯೂರಸ್‌ನ ವಾದವನ್ನೂ ಸಮರ್ಥಿಸಿ ಲ್ಯೂಕ್ರಿಶಿಯಸ್ ಬರೆದ, ಆದರೆ ಮಧ್ಯಯುಗದಲ್ಲಿ ಕಳೆದೇ ಹೋಗಿದ್ದ ಮಹಾಕಾವ್ಯವನ್ನು ಪೋಗ್ಗಿಯೋ ಹುಡುಕಿ ತೆಗೆದು ಆ ಕಾವ್ಯವೇ ಒಂದಲ್ಲ ಒಂದು ಬಗೆಯಲ್ಲಿ ಯುರೋಪಿನ ಆಧುನಿಕತೆಗೆ ಮುನ್ನುಡಿಯಾದ ರೋಚಕ ಕಥೆ – ಈ ಕೃತಿಯ ತಿರುಳು.

ಪುಲಿಟ್ಜರ್ ಪ್ರಶಸ್ತಿ ಗಳಿಸಿದ ಈ ಪುಸ್ತಕ (೨೦೧೧)ವನ್ನು ತನ್ನ ಅಪಾರ ಅಧ್ಯಯನ, ಸಂಶೋಧನೆಗಳ ಮೂಲಕ ರೂಪಿಸಿದ ಸ್ಟೀಫನ್ ಗ್ರೀನ್‌ಬ್ಲಾಟ್ ಅಮೆರಿಕಾದ ಸಾಹಿತ್ಯ ವಿಮರ್ಶಕ, ಸಿದ್ಧಾಂತಗಳ ಜನಕ, ಪಂಡಿತ. `ನ್ಯೂ ಹಿಸ್ಟಾರಿಸಿಸಂ’ ಎಂಬ ಹೊಸ ಸಿದ್ಧಾಂತವನ್ನೇ ಹುಟ್ಟುಹಾಕಿದ ವಿದ್ವಾಂಸರು. ಈಗ ೭೧ರ ಹರೆಯದಲ್ಲಿರುವ (ಜನನ ೧೯೪೩) ಗ್ರೀನ್‌ಬ್ಲಾಟ್ ಸಮಕಾಲೀನ ಶೇಕ್ಸ್‌ಪಿಯರ್ ಸಾಹಿತ್ಯದ ಪಂಡಿತರೆಂದೇ ಖ್ಯಾತರು. ಅವರು ಬರೆದ ಶೇಕ್ಸ್‌ಪಿಯರನ ಜೀವನಚರಿತ್ರೆ `ವಿಲ್ ಇನ್ ದ ವರ್ಲ್ಡ್’ ವಿಶ್ವಖ್ಯಾತ ಕೃತಿ.

ಗಿಯಾನ್ ಫ್ರಾನ್ಸಿಸೋ ಪೋಗ್ಗಿಯೋ ಬ್ರಾಶಿಲೋನಿ ಎಂಬ ಪೋಪ್ ಕಚೇರಿ ಅಧಿಕಾರಿಯ ಕಥೆಯಿಂದ ಆರಂಭವಾಗುವ `ದಿ ಸ್ವರ್ವ್’ ಕ್ರಮೇಣ ಯುರೋಪಿನ ಅಂದಿನ ಸಾಮಾಜಿಕ ಮತ್ತು ಧಾರ್ಮಿಕ ಸ್ಥಿತಿಗತಿಗಳನ್ನು ಬಿಚ್ಚಿಡುತ್ತದೆ.

ಅಣುಸಿದ್ಧಾಂತದ ಪ್ರತಿಪಾದನೆ

ಅಣುಸಿದ್ಧಾಂತ ಎಂಬ ಪದವನ್ನು ನಾವೆಲ್ಲ ಕೇಳಿದ್ದೇವೆ ತಾನೆ? ಈ ಪದದ ಬಳಕೆ ಶತಮಾನಗಳಿಂದ ಇದ್ದರೂ ಆಯಾ ಕಾಲಘಟ್ಟಗಳಲ್ಲಿ ಬೇರೆ ಬೇರೆ ಅರ್ಥಗಳನ್ನು ನೀಡಲಾಗಿದೆ. ಇನ್ನೆಷ್ಟೂ ಕತ್ತರಿಸಲಾಗದ / ವಿಭಜಿಸಲಾಗದ ವಸ್ತುವನ್ನು `ಅಣು’ ಎಂದು ನಮ್ಮ ಹಿರಿಯರು ಕರೆದಿದ್ದರು. ಆದರೆ ಈಗ ಅವರು ಬಣ್ಣಿಸಿದ ಅಣುವನ್ನೂ ಕತ್ತರಿಸಿ ಇನ್ನೂ ಹಲವು ಚಿಕ್ಕ ಚಿಕ್ಕ ಕಣಗಳನ್ನಾಗಿ (ಎಲೆಕ್ಟ್ರಾನ್, ಪ್ರೋಟಾನ್, ಪಾಸಿಟ್ರಾನ್ ಹೀಗೆ) ಮಾಡಬಹುದು ಎಂದು ಸಂಶೋಧನೆಗಳಿಂದ ಗೊತ್ತಾಗಿದೆ. ಅಷ್ಟೇಕೆ, ಈ ಬ್ರಹ್ಮಾಂಡದ ರಚನೆಗೇ ಕಾರಣವಾದ `ದೈವಕಣ’ ಹಿಗ್ಸ್ ಬೋಸಾನ್ ಹಿಂಜುವ ಯತ್ನ ಈಗ ನಡೆಯುತ್ತಿದೆ.

ಅದೇನೇ ಇರಲಿ, ಅಣು ಎಂಬ ಪದವನ್ನು ಬಳಸಿ ವಿಶ್ವದ ವಸ್ತುಗಳ ಕುರಿತ ವ್ಯಾಖ್ಯೆಗಳನ್ನು ಭಾರತೀಯರು ಮತ್ತು ಯುರೋಪಿಯನ್ನು ಅತಿ ಹಿಂದಿನ ಕಾಲದಿಂದಲೇ ಪ್ರತಿಪಾದಿಸುತ್ತ ಬಂದಿದ್ದಾರೆ. ಯಾಸ್ಕರ ನಂತರದಲ್ಲಿ ಜೈನ ಮತವು ಅಣುಗಳನ್ನು ತನ್ನ ಧಾರ್ಮಿಕ ಗ್ರಂಥಗಳಲ್ಲಿ ಹೆಚ್ಚಾಗಿ ಉಲ್ಲೇಖಿಸಿರುವುದನ್ನು ಕಾಣಬಹುದು. ವಾಸ್ತವವಾಗಿ ಹಲವು ಮಹತ್ವದ ಜೈನ ಪುಸ್ತಕಗಳಲ್ಲಿ ಗಣಿತವೇ ಪ್ರಧಾನವಾಗಿ ಅಣುಗಳ ಕುರಿತ ಹಲವು ಸಂಕೀರ್ಣ ವಾದಗಳನ್ನು ಮಂಡಿಸಲಾಗಿದೆ. ಹೀಗೆ ಅಣುಗಳೇ ನಮ್ಮ ವಿಶ್ವದ ಅಸ್ತಿತ್ವಕ್ಕೆ ಕಾರಣ ಎಂಬ ಮತ-ಅತೀತ ವಾದವನ್ನು ಮುಂದಿಟ್ಟ ಪಾಶ್ಚಾತ್ಯನೇ ಎಪಿಕ್ಯೂರಸ್(ಕ್ರಿಪೂ ೩೪೧-೨೭೦) . ಇಂಥ ವಾದಿಗಳನ್ನು (ಭಾರತದ ಚಾರ್ವಾಕನೂ ಸೇರಿದಂತೆ) ಸಾಮಾನ್ಯವಾಗಿ ಲೌಕಿಕವಾದಿಗಳು ಎಂದು ಕರೆಯತ್ತಾರೆ. ಎಪಿಕ್ಯೂರಿಯನಿಸಂ ಎಂದೇ ಹೆಸರಾದ ಈ ವಾದವು ಆಗಿನ ಕಾಲದ ಪ್ಲೇಟೋನಿಸಂ (ಪ್ಲೇಟೋ ಮಂಡಿತ ವಾದ)ಗೆ ಸಂಪೂರ್ಣ ವಿರೋಧವಾಗಿತ್ತು. ಸಂಕ್ಷಿಪ್ತವಾಗಿ ಹೇಳುವುದಾದರೆ, ವೈಯಕ್ತಿಕ ಸುಖವೇ ಬದುಕಿನ ಪಾರಮ್ಯ ಎಂಬುದು ಈ ವಾದದ ತಿರುಳು. ಆದ್ದರಿಂದ ಪ್ರತಿಯೊಬ್ಬರೂ ತಮ್ಮ ಜೀವಿತದ ಅವಧಿಯಲ್ಲೇ ಗರಿಷ್ಠ ಸುಖವನ್ನು ಅನುಭವಿಸಬೇಕು; ಆದರೆ ಅತಿಯಾಗಿ ಅಲ್ಲ – ಇದು ಎಪಿಕ್ಯೂರಿಯನಿಸಂನ ಹೇಳಿಕೆ ( ಈ ವಾದ ಮತ್ತು ಪ್ಲೇಟೋನಿಸಂ ಮುಂತಾದ ವಾದಗಳ ಸಂಕೀರ್ಣ ವ್ಯಾಖ್ಯೆಗಳನ್ನು ಇಲ್ಲಿ ವಿವರವಾಗಿ ಬರೆಯಲು ಅಸಾಧ್ಯ). ದೈವಿಕ ನೀತಿಗಳಿಂದ ಹೊರತಾದ ಈ ವಾದವು ಅತ್ಯಂತ ಲೌಕಿಕ ತತ್ವಜ್ಞಾನ ಎಂದೇ ದಾಖಲಾಯಿತು.

ಇಂಥ ಲೌಕಿಕವಾದವನ್ನು ಲಂಬಿಸಿ ಬರೆದ ಮಹಾಕಾವ್ಯವೇ `ದ ನೇಚರ್ ಆಫ್ ಥಿಂಗ್ಸ್.’ ಇದನ್ನು ಬರೆದ ಟೈಟಸ್ ಲೂಕ್ರಿಶಿಯಸ್ ಕೇರಸ್ ಒಬ್ಬ ರೋಮನ್ ಕವಿ, ತತ್ವಜ್ಞಾನಿ. ಕೇವಲ ೪೪ ವರ್ಷಗಳ ಕಾಲ ಬಾಳಿದ (ಕ್ರಿಪೂ ೯೯-೫೫) ಲೂಕ್ರಿಶಿಯಸ್ ಆತ್ಮಹತ್ಯೆ ಮಾಡಿಕೊಂಡ ಎಂದೂ ಹೇಳುತ್ತಾರೆ. `ಹೀರೋಯಿಕ್ ಹೆಕ್ಸಾಮೀಟರ್’ ಛಂದಸ್ಸಿನಲ್ಲಿ ಬರೆದ ೭೪೦೦ ಸಾಲುಗಳ ಈ ಕಾವ್ಯವು ಆಟಮಿಸಂನ ಸಿದ್ಧಾಂತವನ್ನು ಸವಿವರವಾಗಿ ನೀಡುತ್ತದೆ. ಬುದ್ಧಿ ಮತ್ತು ಆತ್ಮದ, ಸಂವೇದನೆ ಮತ್ತು ಚಿಂತನೆಯ, ಜಗತ್ತಿನ ಅಭಿವೃದ್ಧಿಯ, ಖಗೋಳ ಮತ್ತು ಭೌತಿಕ ಘಟನೆಗಳ ವಿವರಣೆಗಳನ್ನು ಈ ಕಾವ್ಯದಲ್ಲಿ ಲೂಕ್ರಿಶಿಯಸ್ ನೀಡಿದ್ದಾನೆ.

ಫುಲ್ದಾ ಚರ್ಚಿನಲ್ಲಿ ಸಿಕ್ಕಿದ ಕೃತಿ?

ಜನವರಿ ೧೪೧೭: ಕಾವ್ಯವನ್ನು ಪೋಗ್ಗಿಯೋ ದಕ್ಷಿಣ ಜರ್ಮನಿಯಲ್ಲಿ ಸಂತ ಬೋನಿಫೇಸ್ ಸ್ಥಾಪಿಸಿದ ಫುಲ್ದಾ ಚರ್ಚಿನ ಗ್ರಂಥಾಲಯದಲ್ಲಿ ಹುಡುಕಿ ತೆಗೆದ ಎಂಬುದು ಗ್ರೀನ್‌ಬ್ಲಾಟ್ ಬರೆದ ಈ ಪುಸ್ತಕದ ಕೇಂದ್ರ ಘಟನೆ. ಹಾಗೆಂದು ಗ್ರೀನ್‌ಬ್ಲಾಟ್ ಕಲ್ಪಿಸಿದ್ದಾರೆ. ಶತಮಾನಗಳ ಕಾಲ ಪ್ರಾಣಿಗಳ ಚರ್ಮದ ಸುರುಳಿಗಳಲ್ಲಿ ಬರೆದಿಟ್ಟ ಗ್ರಂಥಗಳನ್ನು ಹುಡುಕುವುದೇ ಪೋಗ್ಗಿಯೋನ ಹವ್ಯಾಸವಾಗಿತ್ತು. ಆ ದಿನಗಳಲ್ಲಿ ಅವನಂತೆ ಹಲವರು ಹೀಗೆ ಪುಸ್ತಕಗಳನ್ನು ಹುಡುಕುವ ಸಾಹಸದಲ್ಲಿ ತೊಡಗಿದ್ದರು.

ಅಂದು ಚರ್ಚ್‌ನ ಗ್ರಂಥಾಲಯದ ಕತ್ತಲಿನಲ್ಲಿ ಪೋಗ್ಗಿಯೋಗೆ ಆ ಪುಸ್ತಕವನ್ನು ಸಂಪೂರ್ಣವಾಗಿ ಓದಲು ಸಮಯ ಇಲ್ಲವಾಗಿತ್ತೇನೋ ಎಂದು ಗ್ರೀನ್‌ಬ್ಲಾಟ್ ಊಹಿಸುತ್ತಾರೆ. ಆದರೆ ಅವನು ಅಂದು ಸಂಶೋಧಿಸಿದ ಈ ಮಹಾಕಾವ್ಯವೇ ಅವನ ಸುತ್ತಲಿನ ಜಗತ್ತನ್ನು ಬದಲಿಸಲು ಕಾರಣವಾಯಿತು ಎಂಬುದೂ ಅವನಿಗೆ ಗೊತ್ತಿರಲಿಲ್ಲ!

ಪೋಗ್ಗಿಯೋ ಈ ಮಹಾಕಾವ್ಯವನ್ನು ಹುಡುಕುವ ೧೪೫೦ ವರ್ಷಗಳ ಹಿಂದೆ, ಲೂಕ್ರಿಶಿಯಸ್‌ನ ಕಾಲಾವಧಿಯಲ್ಲೇ ಅವನ ಕಾವ್ಯವನ್ನು ಸಮಕಾಲೀನ ವ್ಯಕ್ತಿಗಳು ಓದಿದ್ದಂತೂ ನಿಜ. ಪೋಗ್ಗಿಯೋನ ಅತಿ ಪ್ರಿಯ ಲ್ಯಾಟಿನ್ ಲೇಖಕ ಸಿಸೆರೋನೇ ತನ್ನ ಸೋದರನಿಗೆ ಬರೆದ ಪತ್ರದಲ್ಲಿ ‘ಈ ಕಾವ್ಯ ತುಂಬಾ ಕಲಾತ್ಮಕವಾಗಿದೆ’ ಎಂದಿದ್ದ. ವಿಜ್ಞಾನ, ತತ್ವಶಾಸ್ತ್ರ ಮತ್ತು ಕಾವ್ಯದ ಗುಣಗಳನ್ನು ಮೇಳಯಿಸಿದ ಅಪರೂಪದ ಕೃತಿ ಎಂದಿದ್ದ. ಲೂಕ್ರಿಶಿಯಸ್ ತೀರಿಕೊಂಡಾಗ ಕೇವಲ ಹದಿನೈದು ವರ್ಷಗಳ ವಯಸ್ಸಿನಲ್ಲಿದ್ದ ಮಹಾನ್ ರೋಮನ್ ಕವಿ ವಿರ್‌ಗಿಲ್‌ನಂತೂ ಈ ಕಾವ್ಯದ ತೀವ್ರ ಪ್ರಭಾವಕ್ಕೆ ಒಳಗಾಗಿದ್ದ.

ಅದಿರಲಿ, ಕ್ರಿಸ್ತಶಕ ೭೯ರಲ್ಲಿ ವೆಸೂವಿಯೆಸ್ ಅಗ್ನಿಪರ್ವತದ ಲಾವಾರಸದಲ್ಲಿ ಹೂತುಹೋದ ಪಾಂಪೇ ನಗರ ಗೊತ್ತಿಲ್ಲ? ಕ್ರಿಸ್ತಶಕ ೧೭೫೦ರಲ್ಲಿ ನಡೆದ ಉತ್ಖನನದ ಸಂದರ್ಭದಲ್ಲಿ ಈ ನಗರದ ಕೆಲವು ಮನೆಗಳಲ್ಲಿ ಸುರುಳಿಯಾಗಿ ಸುತ್ತಿಕೊಂಡ ಹಲವು ವಸ್ತುಗಳು ದೊರೆತವು. ಅವೆಲ್ಲವೂ ಸುಟ್ಟುಹೋದ ಬಟ್ಟೆಗಳಿರಬಹುದು ಎಂದೇ ಊಹಿಸಿದ್ದರು. ಅಕಸ್ಮಾತ್ತಾಗಿ ಅಂಥ ಒಂದು ಸುರುಳಿ ಕೆಳಗೆ ಬಿದ್ದು ಒಡೆದುಹೋದಾಗ ಪುಸ್ತಕವೊಂದು ಹೊರಬಿತ್ತು! ಇಂಥ ನೂರಾರು ಪುಸ್ತಕಗಳನ್ನು ಅಲ್ಲಿ ಪತ್ತೆ ಹಚ್ಚಲಾಯಿತು. ಅವುಗಳಲ್ಲಿ ಲೂಕ್ರಿಶಿಯಸ್‌ನ ಸಮಕಾಲೀನ ಗ್ರೀಕ್ ತತ್ವಶಾಸ್ತ್ರಜ್ಞ ಫಿಲೋಡೆಮಸ್‌ನ ಕೃತಿಗಳೂ ಇದ್ದವು. ಮುಂದೆ ೧೯೮೭ರಲ್ಲಿ ಹೊಸ ತಂತ್ರಜ್ಞಾನದ ನೆರವಿನ ಮೂಲಕ ಈ ಸುರುಳಿಗಳಲ್ಲಿ ಏನಿದೆ ಎಂಬ ಬಗ್ಗೆ ಮತ್ತೊಂದು ಸಂಶೋಧನಾ ಅಭಿಯಾನ ನಡೆಯಿತು. ತೊಮಾಸೋ ಸ್ಟಾರೇಸ್ ಎಂಬಾತ ಒಂದು ಸುರುಳಿಯ ಮೈಕ್ರೋ ಛಾಯಾಗ್ರಹಣ ಮಾಡಿದ. ಅದನ್ನು ಎರಡು ವರ್ಷಗಳ ಕಾಲ ಅಭ್ಯಾಸ ಮಾಡಿದ ಪ್ಯಾಪಿರಾಲಜಿಸ್ಟ್ (ಪ್ಯಾಪಿರಸ್ ಗ್ರಂಥಗಳ ತಜ್ಞ) ನುಟ್ ಕ್ಲೀವ್ ಘೋಷಿಸಿದ: `ಹರ್ಕ್ಯುಲೇನಿಯಂನಿಂದ ಮತ್ತೊಮ್ಮೆ ದಿ ನೇಚರ್ ಆಫ್ ಥಿಂಗ್ಸ್ ಕೃತಿಯನ್ನು ಆವಿಷ್ಕರಿಸಲಾಗಿದೆ.’

ಮಹಾಕಾವ್ಯದಲ್ಲಿ ಏನಿದೆ?

ತನ್ನ ಮಹಾಕಾವ್ಯದಲ್ಲಿ ಲೂಕ್ರಿಶಿಯಸ್ ಹೇಳಿದ ಹಲವು ಮಾತುಗಳನ್ನು ಒಟ್ಟಾರೆಯಾಗಿ ಹೀಗೆ ಪಟ್ಟೀಕರಿಸಬಹುದು.

 • ಈ ಪ್ರಪಂಚದಲ್ಲಿ ಎಲ್ಲಾ ವಸ್ತುಗಳೂ ಅಗೋಚರ ಕಣಗಳಿಂದ ರೂಪುಗೊಂಡಿವೆ: ಲೂಕ್ರಿಶಿಯಸ್ ಇಲ್ಲಿ `ಆಟಂ’ ಎಂಬ ಗ್ರೀಕ್ ತತ್ವಜ್ಞಾನದ ಪದವನ್ನು ಬಳಸಿಲ್ಲ. ಆದರೆ `ಮೊದಲ ವಸ್ತುಗಳು’, ‘ಮೊದಲ ಆರಂಭ’ ಮತ್ತು `ವಸ್ತುಗಳ ವಿಷಯಗಳು’ ಹೀಗೆ ವಿವಿಧ ಪದಗುಚ್ಚಗಳನ್ನು ಬಳಸಿದ್ದಾನೆ. ಈ ಅಗೋಚರ ವಸ್ತುಗಳೆಲ್ಲವೂ ಸದಾ ಚಲನೆಯಲ್ಲಿರುತ್ತವೆ; ಪರಸ್ಪರ ಸಂಘರ್ಷಿಸುತ್ತವೆ; ಒಟ್ಟಿಗೆ ಸೇರಿ ಹೊಸ ವಸ್ತುಗಳನ್ನು ರೂಪಿಸುತ್ತವೆ, ಮತ್ತೆ ಬೇರ್ಪಡುತ್ತವೆ, ಮತ್ತೆ ಸೇರಿಕೊಳ್ಳುತ್ತವೆ – ಇದು ಹೀಗೆ ನಡೆಯುತ್ತಲೇ ಇರುತ್ತದೆ.
 • ವಸ್ತುಗಳ ಪ್ರಾಥಮಿಕ ಕಣಗಳು – ವಸ್ತುಗಳ ಬೀಜಗಳು – ಚಿರಂತನ. ಸಮಯವು ಮಿತವಾಗಿಲ್ಲ; ಬದಲಿಗೆ ಅನಂತವಾಗಿದೆ. ನಾವು ಗಟ್ಟಿ ಎಂದು ಭಾವಿಸುವ ವಸ್ತುಗಳೂ ಒಂದಲ್ಲ ಒಂದು ಸಲ ಪುನರ್‌ವಿತರಣೆಯಾಗುತ್ತವೆ. ರೂಪುಗೊಳ್ಳುವುದು, ವಿಸರ್ಜನೆಯಾಗುವುದು, ಮರುವಿತರಣೆಯಾಗುವುದು – ಈ ವೃತ್ತ ಸದಾ ಘಟಿಸುತ್ತಿರುತ್ತದೆ. ಸೃಷ್ಟಿ ಅಥವಾ ನಾಶದಿಂದಾಗಿ ಯಾವುದೂ ಮೇಲುಗೈ ಸಾಧಿಸುವುದಿಲ್ಲ; ವಸ್ತುಗಳ ಒಟ್ಟಾರೆ ಪ್ರಮಾಣ ಸಮತೋಲನದಲ್ಲೇ ಇರುತ್ತದೆ. ಜೀವಿತ ಮತ್ತು ಮೃತ ವಸ್ತುಗಳ ನಡುವಣ ಸಮತೋಲನವೂ ಸದಾ ಇರುತ್ತದೆ. (ಹಾರ್ವರ್ಡ್ ತತ್ವಜ್ಞಾನಿ ಜಾರ್ಗ್ ಸಂತಾಯನ ಇದನ್ನು `ಮನುಕುಲವು ಹುಡುಕಿದ ಮಹಾನ್ ಚಿಂತನೆ’ ಎಂದು ಬಣ್ಣಿಸಿದ್ದಾರೆ.)
 • ಪ್ರಾಥಮಿಕ ಕಣಗಳು ಸಂಖ್ಯೆಯಲ್ಲಿ ಅನಂತವಾಗಿದ್ದರೂ ಗಾತ್ರ ಮತ್ತು ಆಕಾರದಲ್ಲಿ ಸೀಮಿತತೆಯನ್ನು ಹೊಂದಿವೆ: ಈ ಕಣಗಳನ್ನು ಒಂದು ಬಗೆಯ ಸಂಕೇತ ಸೂತ್ರಗಳಖಿಂದ ವಿವಿಧ ವಸ್ತುಗಳಾಗಿ ಜೋಡಿಸಲಾಗಿದೆ.
 • ಎಲ್ಲಾ ಕಣಗಳೂ ಸದಾ ಚಲನೆಯಲ್ಲಿ ಇರುತ್ತವೆ ಮತ್ತು ಅನಂತ ಶೂನ್ಯದಲ್ಲಿ ಇವೆ: ಅವಕಾಶ (ಸ್ಪೇಸ್)ವು, ಕಾಲದಂತೆ ಅಸೀಮಿತವಾಗಿದೆ. ಇದಕ್ಕೆ ನಿರ್ದಿಷ್ಟ ಗುರುತುಗಳಿಲ್ಲ; ಮಿತಿಯೂ ಇಲ್ಲ. ವಸ್ತುಗಳು ಘನವಾಗಿ ಒತ್ತೊತ್ತಾಗಿಲ್ಲ; ನಡುನಡುವೆ ಖಾಲಿ ಜಾಗವಿದೆ.
 • ಯಾವುದೇ ವಿಶ್ವವೂ ಸೃಷ್ಟಿಕರ್ತನನ್ನು ಅಥವಾ ವಿನ್ಯಾಸಗಾರನನ್ನು ಹೊಂದಿಲ್ಲ: ಕಣಗಳನ್ನು ಯಾರೂ ಸೃಷ್ಟಿಸಿಲ್ಲ, ಆದ್ದರಿಂದ ಅವುಗಳನ್ನು ನಾಶ ಮಾಡಲೂ ಅಸಾಧ್ಯ. ವ್ಯವಸ್ಥೆ ಮತ್ತು ಅವ್ಯವಸ್ಥೆಯು ಯಾವುದೇ ದೈವಿಕ ಯೋಜನೆಯ ಫಲವಲ್ಲ. ಎಲ್ಲವೂ ಕೇವಲ ಸಾಧ್ಯಾಸಾಧ್ಯತೆಗಳ ಫಲವಾಗಿ (ಚಾನ್ಸ್) ನಡೆಯುತ್ತದೆ.
 • ಎಲ್ಲವೂ `ಸ್ವರ್ವ್’ನ ಪರಿಣಾಮವಾಗಿಯೇ ಅಸ್ತಿತ್ವಕ್ಕೆ ಬರುತ್ತವೆ. ಈ ಜಗತ್ತಿನಲ್ಲಿ ಅರುವುದೆಲ್ಲವೂ ಅನಂತ ಪ್ರಮಾಣದ ಸರಣಿ ತಿಕ್ಕಾಟದ ಫಲವೇ ಆಗಿದೆ. ನದಿಗಳು ಸಮುದ್ರವನ್ನು ತುಂಬುತ್ತವೆ. ಭೂಮಿಯು ಸೂರ್ಯನ ಶಾಖದಿಂದ ತನ್ನ ಉತ್ಪನ್ನವನ್ನು ರೂಪಿಸಿ ಪ್ರಾಣಿಗಳ ಬೆಳವಣಿಗೆಗೆ ಕಾರಣವಾಗುತ್ತದೆ.
 • `ಸ್ವರ್ವ್’ ಎನ್ನುವುದು ಮುಕ್ತ ಆಸೆಯ ಮೂಲ: ಮನುಷ್ಯರು ಮತ್ತು ಪ್ರಾಣಿಗಳಲ್ಲಿ ಪ್ರಾಥಮಿಕ ಕಣಗಳ ಘಟ್ಟಿಸುವಿಕೆಯ `ಸ್ವರ್ವ್’ನಿಂದಾಗಿಯೇ ಮುಕ್ತ ಆಸೆಗಳು ಮೂಡುತ್ತವೆ. ಲೋಕದ ಎಲ್ಲಾ ಚಲನೆಗಳೂ ಪೂರ್ವನಿರ್ಧಾರಿತವಾಗಿದ್ದರೆ ಸ್ವಾತಂತ್ರ್ಯದ ಸಾಧ್ಯತೆಯೇ ಇರುವುದಿಲ್ಲ.
 • ಪ್ರಕೃತಿಯು ಅಸೀಮ ಪ್ರಮಾಣದಲ್ಲಿ ಪ್ರಯೋಗಗಳನ್ನು ನಡೆಸುತ್ತಿರುತ್ತದೆ: ಆರಂಭ ಎಂಬ ಯಾವುದೇ ಒಂದು ಘಟನೆ ಇಲ್ಲವೇ ಇಲ್ಲ; ಸೃಷ್ಟಿ ಎಂಬ ಪುರಾಣವೂ ಇಲ್ಲ. ಈ ಲೋಕದ ಎಲ್ಲಾ ಜೀವಿಗಳೂ ಟ್ರಯಲ್ ಎಂಡ್ ಎರರ್ ವಿಧಾನದಲ್ಲಿ ನಡೆದ ಹಲವು ಸಂಕೀರ್ಣ ಮತ್ತು ಸುದೀರ್ಘ ಪ್ರಕ್ರಿಯೆಗಳ ಮೂಲಕ ವಿಕಾಸ ಹೊಂದಿವೆ.
 • ಈ ವಿಶ್ವವು ಮನುಷ್ಯರಿಗಾಗಿ ಸೃಷ್ಟಿಯಾಗಿಲ್ಲ: ಮನುಷ್ಯರು ಇಲ್ಲಿ ಸದಾ ಕಾಲವೂ ಬಾಳುತ್ತಾರೆ ಎಂದಿಲ್ಲ. ನಾವು ನಾಶವಾದ ಮೇಲೆ ಬೇರೆ ಬಗೆಯ ಜೀವಸ್ವರೂಪಗಳು ಹುಟ್ಟಿಕೊಳ್ಳುತ್ತವೆ.
 • ಮನುಷ್ಯರು ವಿಶಿಷ್ಟ ಜೀವಿಗಳೇನೂ ಅಲ್ಲ: ಪ್ರತಿಯೊಂದೂ ಮನುಷ್ಯಜೀವಿಯೂ ವಿಶಿಷ್ಟ ಸ್ವಭಾವಗಳನ್ನು ಹೊಂದಿರುವುದು ನಿಜ; ಆದರೆ ಅದು ಪ್ರಾಣಿಗಳಿಗೂ ಅನ್ವಯಿಸುತ್ತದೆ. ಆದ್ದರಿಂದಲೇ ದನವು ತನ್ನ ಕರುವನ್ನು ಖಚಿತವಾಗಿ ಗುರುತಿಸುತ್ತದೆ. ಆದ್ದರಿಂದ ಇಂಥ ಅನುಭವಗಳು ಕೇವಲ ನಮ್ಮ ಸಂತತಿಗಷ್ಟೇ ವಿಶಿಷ್ಟ ಎಂದು ತಿಳಿಯಬೇಕಿಲ್ಲ.
 • ಮಾನವ ಸಮಾಜವು ಅಪಾರವಾದ ಸಂಪನ್ಮೂಲ ಮತ್ತು ರಮ್ಯತೆಯ ಸ್ವರ್ಣಯುಗದಲ್ಲಿ ಆರಂಭವಾಗಲಿಲ್ಲ; ಬದಲಿಗೆ ಅಸ್ತಿತ್ವ ಉಳಿಸಿಕೊಳ್ಳುವ ಸಮರದಲ್ಲಿ ಹುಟ್ಟಿಕೊಂಡಿದೆ. ಪ್ರಕೃತಿಯ ಸಂಪನ್ಮೂಲಗಳನ್ನು ಅತ್ಯಂತ ಸುಖವಾಗಿ ಅನುಭವಿಸುತ್ತಿದ್ದ ಸುಖೀ, ಶಾಂತ ಪುರುಷ-ಮಹಿಳೆಯರು ಇದ್ದರು ಎಂಬುದು ಕೇವಲ ಕನಸಷ್ಟೇ. ಬೆಂಕಿ, ಕೃಷಿ ಯಾವುದೂ ಇಲ್ಲದ ಮನುಷ್ಯರು ತಿನ್ನಲು ಮತ್ತು ಬೇರೆ ಪ್ರಾಣಿಗಳು ತಮ್ಮನ್ನೇ ತಿನ್ನುವುದರಿಂದ ತಪ್ಪಿಸಿಕೊಳ್ಳಲು ತುಂಬಾ ಹೆಣಗಾಡಿದ್ದರು.
 • ನಮ್ಮ ಆತ್ಮವು ಸಾಯುತ್ತದೆ: ಮನುಷ್ಯನ ಆತ್ಮವೂ ದೇಹದಂತೆಯೇ ಭೌತಿಕ ವಸ್ತುಗಳಿಂದ ಮಾಡಿದ್ದು. ಇದನ್ನು ಅತ್ಯಂತ ಚಿಕ್ಕ ಕಣಗಳಿಂದ ಮಾಡಿದ್ದರಿಂದಲೇ ನಮಗೆ ಕಾಣಲಾಗುತ್ತಿಲ್ಲ. ಆತ್ಮವನ್ನು ತೂಕ ಮಾಡುವಷ್ಟು ನಮ್ಮ ಸಾಧನಗಳು ಸುಧಾರಿಸಿಲ್ಲ. ಆದ್ದರಿಂದ ದೇಹದ ಜೊತೆಗೇ ಆತ್ಮವೂ ಸಾಯುತ್ತದೆ.
 • ಪುನರ್ಜನ್ಮ ಎಂಬುದು ಇಲ್ಲ: ಸತ್ತ ಮೇಲೆಯೂ ತಮ್ಮನ್ನು ಇನ್ನಾವುದೋ ಜೀವಿತವು ಕಾದಿದೆ ಎಂದು ಮನುಷ್ಯರು ತಿಳಿದಿದ್ದಾರೆ; ಸ್ವರ್ಗಕ್ಕೋ, ನರಕಕ್ಕೋ ಹೋಗುತ್ತೇವೆ ಎಂದು ಭಾವಿಸಿದ್ದಾರೆ. ಆದರೆ ಸತ್ತಮೇಲೆ ನಿಮಗೆ ಯಾವ ಶಿಕ್ಷೆಯೂ ಇಲ್ಲ, ಸನ್ಮಾನವೂ ಇಲ್ಲ.
 • ಸಾವು ನಮಗೆ ಏನೇನೂ ಅಲ್ಲ: ನೀವು ಸತ್ತಾಗ ಸಂತಸ, ನೋವು, ಭಯ – ಏನೂ ಇರುವುದಿಲ್ಲ.
 • ಸಂಘಟಿತ ಮತಗಳೆಲ್ಲವೂ ಮೂಢನಂಬಿಕೆಯ ಭ್ರಮೆಗಳು: ಈ ಭ್ರಮೆಗಳು ಅತ್ಯಂತ ಆಳವಾದ ಭಯ ಮತ್ತು ಮುಗ್ಧತೆಗಳನ್ನು ಆಧರಿಸಿವೆ. ಸಿಡಿಲು ಅಥವಾ ಭೂಕಂಪಕ್ಕೆ ಅದರದ್ದೇ ಆದ ಪ್ರಾಕೃತಿಕ ಕಾರಣಗಳಿವೆ; ಹೊರತು ಅವು ಶಿಕ್ಷೆಗಳಲ್ಲ.
 • ಮತಗಳು ಹೆಚ್ಚುಕಡಿಮೆ ಕ್ರೂರವಾಗಿರುತ್ತವೆ: ಮತಗಳು ಆಕಾಂಕ್ಷೆ ಮತ್ತು ಪ್ರೀತಿಯನ್ನು ಉತ್ತೇಜಿಸುತ್ತವೆ; ಆದರೆ ಪಾಲಕರು ಮಗುವನ್ನು ಬಲಿ ಕೊಡುವುದೇ ಮತಗಳ ಸಂಕೇತವಾಗಿದೆ.
 • ದೇವತೆಗಳು, ರಾಕ್ಷಸರು, ಭೂತಗಳು ಇಲ್ಲವೇ ಇಲ್ಲ: ಕಣಗಳಿಲ್ಲದ ಚೇತನಗಳು ಇರುವುದೇ ಇಲ್ಲ. ಗ್ರೀಕ್ ಮತ್ತು ರೋಮನ್ ಕಲ್ಪನೆಗಳಲ್ಲಿ ಬರುವ ಎಲ್ಲಾ ಪಾತ್ರಗಳೂ ಅವಾಸ್ತವಿಕ. ಅವುಗಳನ್ನೆಲ್ಲ ಮರೆಯಿರಿ.
 • ಸಂತೋಷವನ್ನು ಹೆಚ್ಚಿಸಿಕೊಳ್ಳುವುದು ಮತ್ತು ನೋವನ್ನು ಕಡಿಮೆ ಮಾಡಿಕೊಳ್ಳುವುದೇ ಮನುಷ್ಯ ಜೀವನದ ಉನ್ನತ ಗುರಿ: ಜೀವನವನ್ನು ಸುಖವನ್ನು ಪಡೆದುಕೊಳ್ಳಲೆಂದೇ ಸಂಘಟಿಸಬೇಕು. ರಾಜ್ಯದ ಸೇವೆ, ದೇವರುಗಳ ಅಥವಾ ಆಡಳಿತಾರೂಢರ ವೈಭವೀಕರಣ, ಸ್ವಯಂ ಬಲಿದಾನ – ಇವೆಲ್ಲವೂ ತಪ್ಪು ಮಾರ್ಗದ ಕ್ರಮಗಳು.
 • ಸುಖದ ಅತಿದೊಡ್ಡ ಅಡ್ಡಿ ನೋವಲ್ಲ; ಭ್ರಮೆ: ನೋವಿನಿಂದ ತಪ್ಪಿಸಿಕೊಳ್ಳಲು ಯತ್ನಿಸುವುದು ಸರಿಯಾದ ಕ್ರಮವೇ ಆಗಿದೆ. ಆದರೆ ಅನಂತ ಪ್ರಮಾಣದ ಕಲ್ಪನೆಯ ಶಕ್ತಿಯೇ ಮನುಷ್ಯರನ್ನು ಹೆಚ್ಚಾಗಿ ಆಕ್ರಮಿಸಿದೆ. ಲೈಂಗಿಕ ಸುಖಕ್ಕಾಗಿ ಹಾತೊರೆಯುವುದು ಸಕಾರಣವಾಗಿದೆ. ಆದರೆ ಇಲ್ಲಿಯೂ ಮನುಷ್ಯರು ಗೊಂದಲಕ್ಕೆ ಒಳಗಾಗುತ್ತಾರೆ; ಎಲ್ಲಿಂದ ಆರಂಭಿಸಬೇಕು ಎಂಬ ಗೊಂದಲ ಪ್ರೇಮಿಗಳನ್ನು ಕಾಡುತ್ತಿರುತ್ತದೆ.
 • ವಸ್ತುಗಳ ಗುಣಗಳನ್ನು ತಿಳಿದುಕೊಳ್ಳುವುದು ಆಳವಾದ ಅಚ್ಚರಿಯನ್ನು ಉಂಟುಮಾಡುತ್ತದೆ. ಇಡೀ ಪ್ರಪಂಚವು ಕಣಗಳಿಂದ ಮತ್ತು ಶೂನ್ಯದಿಂದ ಆವರಿಸಿದೆ; ವಿಶ್ವವನ್ನು ಸೃಷ್ಟಿಕರ್ತನು ಸೃಷ್ಟಿಸಿಲ್ಲ, ನಾವು ವಿಶ್ವದ ಕೇಂದ್ರ ಬಿಂದುವಲ್ಲ, ನಮ್ಮ ಭಾವುಕ ಜೀವವು ಉಳಿದೆಲ್ಲ ಪ್ರಾಣಿಗಳಿಗಿಂತ ಭಿನ್ನವೇನಲ್ಲ – ಹೀಗೆ ತಿಳಿದುಕೊಳ್ಳುವುದು ಹತಾಶೆಗೆ ಕಾರಣವಾಗುವುದಿಲ್ಲ. ಬದಲಿಗೆ, ಇದು ಸುಖದ ಸಾಧ್ಯತೆಯತ್ತ ಇಟ್ಟ ಹೆಜ್ಜೆಯಾಗುತ್ತದೆ. ಮನುಷ್ಯನೂ ಇಲ್ಲಿ ಮಹತ್ವ ಪಡೆದಿಲ್ಲ ಎಂಬುದು ಒಳ್ಳೆಯ ಸುದ್ದಿ.

ಯುರೋಪಿನಲ್ಲಿ ಮತ್ತೆ ಆಟಮಿಸಂ ಪ್ರಭಾವ

ಪೋಗ್ಗಿಯೋನ ಸಂಶೋಧನೆಯ ನಂತರ ಲೂಕ್ರಿಶಿಯಸ್‌ನ ಮಹಾಕಾವ್ಯವು ಹಲವು ಪ್ರತಿಗಳಲ್ಲಿ ಯುರೋಪಿನಲ್ಲಿ ಹರಡಿತು. ಈ ಮಹಾಕಾವ್ಯವೇ ಮುಂದೆ ದೂರದರ್ಶಕ ಕಂಡುಹಿಡಿದ ಗೆಲಿಲಿಯೋ, ಅಮೆರಿಕಾದ ಸ್ಥಾಪಕ ಅಧ್ಯಕ್ಷ ಥಾಮಸ್ ಜೆಫರ್‌ಸನ್, ಕಮ್ಯುನಿಸಂ ಪ್ರತಿಪಾದಿಸಿದ ಕಾರ್ಲ್ ಮಾರ್ಕ್ಸ್, ವಿಕಾಸವಾದವನ್ನು ಮಂಡಿಸಿದ ಚಾರ್ಲ್ಸ್ ಡಾರ್ವಿನ್, ಮಹಾನ್ ವಿಜ್ಞಾನಿ ಆಲ್ಬರ್ಟ್ ಐನ್‌ಸ್ಟೈನ್ – ಹೀಗೆ ಹಲವರಲ್ಲಿ ಹೊಸ ದರ್ಶನ ಮೂಡಿಸಿತು ಎಂಬುದು ಗ್ರೀನ್‌ಬ್ಲಾಟ್ ಪ್ರತಿಪಾದನೆ. ಆಟಮಿಸಂ ಎಂಬ ಲೌಕಿಕವಾದವು ಹಲವು ರೂಪಗಳಲ್ಲಿ ಹಲವರ ಮೇಲೆ ಪರಿಣಾಮ ಬೀರಿತು ಎಂದು ಅವರು ಪ್ರತಿಪಾದಿಸುತ್ತಾರೆ.

ಲೂಕ್ರಿಶಿಯಸ್‌ನ ಮಹಾಕಾವ್ಯದ ಪ್ರಭಾವದಿಂದ ತನ್ನ ಬದುಕನ್ನೇ ಕಳೆದುಕೊಂಡವನು ಇಂಗ್ಲೆಂಡಿನ್ ಗಿಯೋರ್ಡಿನೋ ಬ್ರುನೋ ಎಂಬ ಸನ್ಯಾಸಿ. ೧೫೮೦ರ ಹೊತ್ತಿಗೆ ಮಧ್ಯವಯಸ್ಕನಾಗಿದ್ದ ಬ್ರುನೋ `ದಿ ಎಕ್ಸ್‌ಪಲ್ಶನ್ ಆಫ್ ದಿ ಟ್ರಿಂಫಂಟ್ ಬೀಸ್ಟ್’ ಪುಸ್ತಕವೂ ಸೇರಿದಂತೆ ಹಲವು ಪುಸ್ತಕಗಳನ್ನು ಬರೆದ. ಎಲ್ಲವೂ ಲೂಕ್ರಿಶಿಯಸ್‌ನ ಪ್ರತಿಪಾದನೆಯನ್ನು ಇನ್ನಷ್ಟು ಪ್ರಖರವಾಗಿ ಬಿಂಬಿಸಿದ ವಾದಗಳಾಗಿದ್ದವು. ೧೫೯೧ರಲ್ಲಿ ಆತ ಇಟೆಲಿಗೆ ಬಂದಾಗ ಚರ್ಚಿನಿಂದ ಸೆರೆಗೊಳಗಾದ. ಎಂಟು ವರ್ಷಗಳ ಕಾಲ ವಿಚಾರಣೆಗೆ ಒಳಪಟ್ಟ ಬ್ರುನೋನನ್ನು ಕೊನೆಗೆ ೧೬೦೦ರಲ್ಲಿ ಸಜೀವವಾಗಿ ಸುಡಲಾಯಿತು. ಅದಕ್ಕಿಂತ ಮುನ್ನ ಅವನ ನಾಲಗೆಯನ್ನು ಸೀಳುವಂತೆ ಮತ್ತು ಕೆನ್ನೆಗಳನ್ನು ಹಾದುಹೋಗುವಂತೆ ದಬ್ಬಣವನ್ನು ಚುಚ್ಚಲಾಯಿತು. ಮತ್ತೊಂದು ದಬ್ಬಣದಿಂದ ಅವನ ತುಟಿಗಳನ್ನು ಚುಚ್ಚಿ, ಆಮೇಲೆ ಸುಟ್ಟು ಹಾಕಿದ ಕಥೆ ಈಗ ದುರಂತ ಇತಿಹಾಸವಾಗಿದೆ. ಆದರೆ ಬ್ರುನೋ ಸತ್ತ ಮಾತ್ರಕ್ಕೆ ಲೂಕ್ರಿಶಿಯಸ್‌ನ ವಾದಗಳು ಸಾಯಲಿಲ್ಲ.

ವಿದ್ವಾಂಸರ ವಿರೋಧ

ಹಾಗೆ ನೋಡಿದರೆ ಲೇಖಕ ಗ್ರೀನ್‌ಬ್ಲಾಟ್ ಕೂಡಾ ಒಂದು ಸೆಕೆಂಡ್ ಹ್ಯಾಂಡ್ ಪುಸ್ತಕದ ಅಂಗಡಿಯಲ್ಲಿ ಲೂಕ್ರಿಶಿಯಸ್‌ನ ಮಹಾಕಾವ್ಯವನ್ನು ಖರೀದಿಸಿ ಓದಿದವರೇ! ಆದ್ದರಿಂದ ಈ ಪುಸ್ತಕವೂ ಒಂದು ರೀತಿಯಲ್ಲಿ ಯುರೋಪಿನ ಕ್ರಾಂತಿಯ ಮರುಶೋಧ ಎನ್ನಬಹುದು. ಇಷ್ಟಾಗಿಯೂ ಗ್ರೀನ್‌ಬ್ಲಾಟ್ ವಾದವನ್ನು ಒಪ್ಪದವರೂ ಇದ್ದಾರೆ. ಇಂಗ್ಲೆಂಡಿನ ಇತಿಹಾಸ ಪ್ರಾಧ್ಯಾಪಕ ಜಾನ್ ಮೋನ್‌ಫಸಾನಿಯವರು ಒಂದು ಸುದೀರ್ಘ ವಿಮರ್ಶೆ ಬರೆದು ಇಡೀ ವಾದವನ್ನೇ ಗಂಭೀರವಾಗಿ ಪ್ರಶ್ನಿಸಿದ್ದಾರೆ. ಹಾಗೆಯೇ ಲಾಸ್ ಏಂಜಲಿಸ್‌ನ ಪುಸ್ತಕ ವಿಮರ್ಶಕ ಜಿಮ್ ಹಿಂಚ್ ಕೂಡಾ ಈ ಪುಸ್ತಕದಲ್ಲಿ ಗ್ರೀನ್‌ಬ್ಲಾಟ್ ತಪ್ಪು ವಾದಗಳನ್ನು ಮಂಡಿಸಿದ್ದಾರೆ ಎಂದು ವಿಶ್ಲೇಷಿಸಿದ್ದಾರೆ. ಆದರೆ ಗ್ರೀನ್‌ಬ್ಲಾಟ್ ಈಗಲೂ ತಮ್ಮ ಅಧ್ಯಯನವು ಕಂಡುಕೊಂಡ ಸತ್ಯವನ್ನೇ ಸಮರ್ಥಿಸಿಕೊಂಡಿದ್ದಾರೆ.

ಏನೇ ಇರಲಿ, ಕ್ರಿಸ್ತಶಕೆ ಆರಂಭವಾದ ಕಾಲದಲ್ಲಿ ಬರೆದ, ಐದನೇ ಶತಮಾನದಲ್ಲೇ ಕಾಣೆಯಾಗಿ, ಹದಿನೈದನೇ ಶತಮಾನದಲ್ಲಿ ಪತ್ತೆಯಾಗಿ ಹಲವು ವಿಚಾರಗಳ ಸಂಘರ್ಷಮಯ ನಾಗರಿಕತೆಗೆ ಕಾರಣವಾದ ಈ ಪುಸ್ತಕದ ಬಗ್ಗೆ ತಿಳಿದುಕೊಳ್ಳುವುದೇ ಒಂದು ಒಳ್ಳೆಯ ಕೆಲಸ!

Leave a Reply

Your email address will not be published. Required fields are marked *