ಪಿಂಕ್: ಬಾಲಿವುಡ್ ಪಾಪಕರ್ಮಗಳಿಗೆ ಪುಟ್ಟ, ಅಸಂಪೂರ್ಣ ಪ್ರಾಯಶ್ಚಿತ್ತ!

ಕೊನೆಗೂ ಬಾಲಿವುಡ್‌ ಪ್ರಾಯಶ್ಚಿತ್ತಕ್ಕೆ ಮನಸ್ಸು ಮಾಡಿದೆ! ಎಂಟು ದಶಕಗಳ ಕಾಲ ಹೆಣ್ಣನ್ನು ಮಾಂಸದ ಮುದ್ದೆಯಂತೆ, ಭೋಗದ ವಸ್ತುವಿನಂತೆ ತೋರಿಸಿ ಮೂರ್ನಾಲ್ಕು ಪೀಳಿಗೆಗಳ ಯುವ ಸಮುದಾಯವನ್ನು ಹಾದಿ ತಪ್ಪಿಸಿದ / ತಪ್ಪಿಸುತ್ತಿರುವ ಬಾಲಿವುಡ್-ಸ್ಯಾಂಡಲ್‌ವುಡ್- ಇತ್ಯಾದಿ ಸಿನೆಮಾ ಕಾರ್ಖಾನೆಗಳು ಅಂತೂ ಇಂತೂ ವಾಸ್ತವತೆಗೆ ಕಣ್ಣು ತೆರೆಯುತ್ತಿವೆ; ಅಥವಾ ತೆರೆದಂತೆ ಕಾಣಿಸುತ್ತಿವೆ. ಅನಿರುದ್ಧ ರಾಯ್‌ ಚೌಧರಿ ನಿರ್ದೇಶನದ `ಪಿಂಕ್’ ಸಿನೆಮಾವನ್ನು ನೋಡಿದರೆ ಹೀಗೆ ಅನ್ನಿಸುವುದು ಸಹಜ.

amitabh-bachchan-pink-movie-stills-pics-7

ಮಹಿಳೆಯರ ಸಮಾನತೆಯ ಕುರಿತ ಚರ್ಚೆ ಇಂದು ನಿನ್ನೆಯದಲ್ಲ; ನಾಳೆಯೇ ಇದು ಮುಗಿದುಬಿಡುತ್ತದೆ ಎಂಬ ಅತಿವಿಶ್ವಾಸವೂ ನನಗಿಲ್ಲ. ಸಂಸತ್ತಿನಲ್ಲೇ ಸರ್ವಪಕ್ಷಗಳ ಮಹಿಳೆಯರೂ ಸೇರಿದರೂ ಮಹಿಳಾ ಪ್ರಾತಿನಿಧ್ಯದ ಬಗ್ಗೆ ಯಾವುದೇ ಖಚಿತ ಹೆಜ್ಜೆ ಇಡಲಾಗಿಲ್ಲ; ಮಂಡಲ ಪಂಚಾಯತ್‌ಗಳಲ್ಲಿ ಪ್ರಾಕ್ಸಿಗಳಾಗಿ ಗೆದ್ದ ಮಹಿಳಾ ಪ್ರತಿನಿಧಿಗಳು ತಮ್ಮ ಪತಿ-ಸೋದರ-ಸಂಬಂಧಿಕರ ಅಡಿಯಾಳಾಗಿರುವುದು ನಿಂತಿಲ್ಲ; ಮಹಿಳೆಯರ ಮೇಲೆ ಅತ್ಯಾಚಾರ ಕಡಿಮೆಯಾಗಿಲ್ಲ; ಸಮಾಜತಾಣಗಳಲ್ಲಿ ಮಹಿಳೆಯರ ಬಹಿರಂಗ ಅವಹೇಳನಕ್ಕೆ ಮಿತಿಯಿಲ್ಲ; ಕಚೇರಿಗಳಲ್ಲಿ ಲೈಂಗಿಕ ಅತ್ಯಾಚಾರಗಳ ಪ್ರಮಾಣ ಕುಗ್ಗಿಲ್ಲ….  ಸಮಾಜ ಬದಲಾದರೇನೇ ಸರ್ಕಾರವೂ ಬದಲಾಗುತ್ತದೆ ಎಂಬ ಮಾತಿಗೆ ಈಗಲೂ ಕುಂದಿಲ್ಲ!  ಈ ಹಿನ್ನೆಲೆಯಲ್ಲಿ ‘ಪಿಂಕ್’ ಎತ್ತುವ ಪ್ರಶ್ನೆಗಳು, ಕಂಡುಕೊಳ್ಳುವ ಉತ್ತರಗಳು ನಮ್ಮನ್ನು ಕೊಂಚವಾದರೂ ಚರ್ಚೆಗೆ ತಳ್ಳಬೇಕು; ಅದೂ ಇಲ್ಲವಾದರೆ ನಾವು ಸಿನೆಮಾ ನೋಡುವುದೂ ವ್ಯರ್ಥ.

ಹಾಗಂತ `ಪಿಂಕ್’ ಸಿನೆಮಾ ರಿಯಲಿಸ್ಟಿಕ್ ಆಗೇನೂ ಇಲ್ಲ; ಹಾಲಿವುಡ್‌ ಲೆಕ್ಕಾಚಾರದಲ್ಲಿ ಇದು `ಸೋಶಿಯಲ್ ಡ್ರಾಮಾ ಥ್ರಿಲ್ಲರ್’ ವರ್ಗಕ್ಕೆ ಸೇರುತ್ತದೆ. ಗಂಭೀರ ನಾಟಕದಂತೆಯೂ ಕಾಣಿಸುವ `ಪಿಂಕ್’ನಲ್ಲಿ ಸಿನೆಮಾದ ಅಂಶಗಳೂ ಇರುವುದು ನಿಜ. ಮಿನಾಲ್‌ ಅರೋರಾ (ತಾಪ್ಸಿ ಪನ್ನು), ಫಲಕ್‌ ಆಲಿ (ಕೀರ್ತಿ ಕುಲ್ಹರಿ) ಮತ್ತು ಆಂದ್ರಿಯಾ (ಆಂದ್ರಿಯಾ ತರಿಯಾಂಗ್‌ ) ಎಂಬ ಮೂವರು ಯುವತಿಯರು ರಾಕ್ ಪಾರ್ಟಿಗೆ ಹೋದಮೇಲೆ ನಡೆಯುವ ಲೈಂಗಿಕ ಅತ್ಯಾಚಾರದ ನಂತರದ ಸನ್ನಿವೇಶಗಳಿಂದ ಆರಂಭವಾಗುವ ಈ ಸಿನೆಮಾವು ಈ ಯುವತಿಯರ ಪರವಾದ ನ್ಯಾಯಾಧೀಶರ ಜಜ್‌ಮೆಂಟ್‌ನೊಂದಿಗೆ ಕೊನೆಗೊಳ್ಳುತ್ತದೆ. ಒಂದು ರೀತಿಯಲ್ಲಿ `ಜಜ್‌ಮೆಂಟಲ್‌’ (ಇದೇ ನಮ್ಮ ತೀರ್ಪು ಎಂದು ಪ್ರತಿಪಾದಿಸುವ) ಆಗಿಯೇಬಿಡುವ ಈ ಸಿನೆಮಾ ತನ್ನ ಚಿತ್ರಕಥೆ, ನಿರ್ಮಾಣದ ಗುಣಮಟ್ಟ, ಸಂಗೀತ ಮತ್ತು ಸಹಜ ನಟನೆಯಿಂದ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುತ್ತದೆ. ಈ ಸಿನೆಮಾದ ಮೊತ್ತೊಬ್ಬ ಮುಖ್ಯ ಪಾತ್ರಧಾರಿಯಾಗಿ ಅಮಿತಾಭ್‌ ಬಚ್ಚನ್‌ ನಟಿಸಿ ಇಡೀ ಚಿತ್ರಕ್ಕೆ ವಿಭಿನ್ನ ಆಯಾಮ ಒದಗಿಸಿದ್ದಾರೆ.

ಮಹಿಳೆಯರ ಹಕ್ಕುಗಳ ಬಗ್ಗೆ ಬೆಳಕು ಚೆಲ್ಲುವ ಇಂಥ ಚಿತ್ರಗಳನ್ನು ಗಂಭೀರವಾಗಿ ಚರ್ಚಿಸುವ ಅಗತ್ಯವಿದೆ. ಯಾವ ಮಹಿಳೆಯೂ ಬಯಸದಿದ್ದರೆ ಲೈಂಗಿಕ ಸುಖಕ್ಕೆ ಮುಂದಾಗಬಾರದು ಎನ್ನುವುದು ಸಿನೆಮಾದ ಮುಖ್ಯ ವಸ್ತು. ಮಿನಾಲ್‌: ಅವಿವಾಹಿತೆಯಾದರೂ ಲೈಂಗಿಕ ಅನುಭವ ಹೊಂದಿದ ಯುವತಿ; ಫಲಕ್ : ವಯಸ್ಕ ವಿವಾಹಿತನೊಂದಿಗೆ ಸಂಬಂಧ ಬೆಳೆಸಿರುವ ಯುವತಿ; ಆಂದ್ರಿಯಾ ಪೂರ್ವಾಂಚಲದಿಂದ ಬಂದಿರುವ, ಮುಖ್ಯನೆಲದಲ್ಲಿ –ಮೈನ್‌ಲ್ಯಾಂಡ್‌- ಅನ್ಯಳೆಂಬ ಚಹರೆ ಹೊತ್ತಿರುವ ಯುವತಿ. ಈ ಮೂವರೂ ತಮ್ಮ ಹಳೆಯ ಮಿತ್ರನ ಮೂಲಕ ಪರಿಚಯವಾದ ಯುವಕರ ಹೋಟೆಲ್ ಕೋಣೆಗೆ ಹೋಗುತ್ತಾರೆ; ಊಟ ಮಾಡುತ್ತಾರೆ; ಮದ್ಯ ಸೇವಿಸುತ್ತಾರೆ; ಆದರೂ ಅವರು ಸೆಕ್ಸ್‌ ಗೆ ಒತ್ತಾಯಿಸಿದಾಗ `ಬೇಡ’ ಎನ್ನುತ್ತಾರೆ. ಅದನ್ನೂ ಧಿಕ್ಕರಿಸಿ ರಾಜ್‌ವೀರ್ (ಅಂಗದ್ ಬೇಡಿ) ಎಂಬ ಪುಢಾರಿಯ ಪುತ್ರ ಮಿನಾಲ್‌ಳನ್ನು ಬಲಾತ್ಕಾರಿಸುತ್ತಾನೆ; ಮಿನಾಲ್ ಆತನ ತಲೆಗೆ ಬಾಟಲಿಯಿಂದ ಹೊಡೆದು ತಪ್ಪಿಸಿಕೊಳ್ಳುತ್ತಾಳೆ. ಇದೇ ಮುಂದೆ ಕಥೆಯಾಗಿ ಬೆಳೆದು ಯುವತಿಯರ ದೂರು ದಾಖಲಾಗದೆ ರಾಜ್‌ವೀರ್ ನ ಕೊಲೆ ಯತ್ನದ ಆರೋಪವೇ ದಾವೆಯಾಗುತ್ತದೆ. ಇದು ಕಥಾ ಹಂದರ. ಯುವ ನಟ-ನಟಿಯರು ನಿಜಜೀವನದಲ್ಲೇ ಸಿಗುವ ಪಾತ್ರಗಳಂತೆ ವರ್ತಿಸಿ ದೃಶ್ಯಗಳಿಗೆ ಜೀವ ತುಂಬಿಸಿದ್ದಾರೆ.

`ಇಂಥ `ನೀತಿಗೆಟ್ಟ’ ಯುವತಿಯರು ಯುವಕರೊಂದಿಗೆ ಮುಕ್ತವಾಗಿ ಹರಟುವುದು, ಸೆಕ್ಸ್ ಜೋಕ್‌ ಸಿಡಿಸುವುದು, ಗುಂಡು ಹಾಕುವುದು- ಎಲ್ಲವೂ ಸೆಕ್ಸ್‌ಗೆ ಆಹ್ವಾನಿಸಿದಂತೆಯೇ ಅಲ್ಲವೆ? ಅವರೊಂದಿಗೆ ಮಜಾ ಮಾಡಿದರೆ ತಪ್ಪೇನು?’ – ಇದು ಸಿರಿವಂತ ಯುವಕರ ವಾದ. ಮಿನಿಸ್ಕರ್ಟ್‌ ತೊಡುವ, ಒಂಟಿಯಾಗಿ ಕೆಲಸ ಮಾಡುವ, ಪಾಲಕರಿಂದ ದೂರವಾಗಿರುವ, ಮನೆಗೆ ತಡವಾಗಿ ಬರುವ ಯುವತಿ / ಮಹಿಳೆಯರೆಲ್ಲರೂ ಜಾರಿಣಿಯರೇ ಆಗಿರುತ್ತಾರೆ ಎಂಬ ಸಹಜ ತರ್ಕವನ್ನು ಈ ಸಿನೆಮಾ ಬಲವಾಗಿ ಪ್ರಶ್ನಿಸುತ್ತದೆ.

ಇಷ್ಟಾಗಿಯೂ, ಸೆಕ್ಸ್ ವಿಷಯದಲ್ಲಿ NO ಎಂದರೆ ಬೇಡ ಎಂಬ ಅರ್ಥವೇ ವಿನಃ ಬೇರೇನೂ ಇಲ್ಲ (ಪತ್ನಿಯನ್ನೂ ಒಳಗೊಂಡಂತೆ) ಎಂದು ಅಮಿತಾಭ್‌ ಬಚ್ಚನ್‌ರ ವಕೀಲ ಪಾತ್ರವು ಸಮರ್ಥವಾಗಿ ಪ್ರತಿಪಾದಿಸಿ ದಾವೆಯಲ್ಲಿ ಗೆಲುವು ಸಾಧಿಸುತ್ತದೆ. ಸಿನೆಮಾದ ಪಾತ್ರಗಳ ಮತ್ತು ಕಥೆಯ ರೂಪದ ತೀರ್ಪುಗಳು ಒಂದೇ ಆಗಿಬಿಡುತ್ತವೆ. ಮಹಿಳೆಯರ ಮೇಲಿನ ರೂಢಿಗತ ಅಭಿಪ್ರಾಯಗಳನ್ನು ಬದಲಿಸಿಕೊಳ್ಳಬೇಕು ಎಂಬುದೇ ಈ ಸಿನೆಮಾದ ಸಂದೇಶ. ಮಜಾ ಅಂದ್ರೆ ಹಿಂದೊಮ್ಮೆ `ನಿಮ್ಮ ಗಂಡು ಮಕ್ಕಳನ್ನು ನಿಯಂತ್ರಿಸಿ, ಹೆಣ್ಣು ಮಕ್ಕಳನ್ನಲ್ಲ’ ಎಂದು ಪ್ರಧಾನಿ ಮೋದಿಯವರು ೨೦೧೪ರ ಭಾಷಣದಲ್ಲಿ ಹೇಳಿದ್ದನ್ನೇ ಅಮಿತಾಭ್‌ ಬಚ್ಚನ್ ಪಾತ್ರವೂ ಕೋರ್ಟಿನಲ್ಲಿ ಹೇಳುತ್ತದೆ.

ಒಪ್ಪತಕ್ಕ ವಿಚಾರವೇ. ನಗರೀಕರಣವೇ ಎಲ್ಲೆಲ್ಲೂ ಕಂಡುಬರುತ್ತಿರುವ ಈ ದಿನಗಳಲ್ಲಿ `ಪಿಂಕ್’ ಖಂಡಿತ ದೊಡ್ಡ, ಮುಖ್ಯ ಸಂದೇಶವನ್ನೇ ಕೊಟ್ಟಿದೆ. ಆದರೆ ಈ ಸಂದೇಶವನ್ನು ಬಾಲಿವುಡ್‌ ನೀಡಿದ್ದು ಮಾತ್ರ ವಿಚಿತ್ರ ಸತ್ಯ. ಬಾಲಿವುಡ್ ಮುಂದಿನ ದಿನಗಳಲ್ಲೂ ಇಂಥದ್ದೇ ಧೈರ್ಯ, ಪ್ರಾಮಾಣಿಕತೆ ಪ್ರದರ್ಶಿಸುತ್ತದೆಯೆ? ಗೊತ್ತಿಲ್ಲ. ಕೊನೇ ಪಕ್ಷ ಅದು ಕ್ಯಾಬರೆ ಸಂಸ್ಕೃತಿಯ ಬದಲಿಗೆ ವಕ್ಕರಿಸಿದ ಐಟಂ ಸಾಂಗ್‌ ತಂದಿರುವುದನ್ನಾದರೂ ನಿಲ್ಲಿಸುತ್ತದೆಯೆ? ಕಾದು ನೋಡಬೇಕು, ಅಷ್ಟೆ. ಈಗಲೂ ಹೀರೋ-ಹೀರೋಯಿನ್‌ ಯುಗದಲ್ಲೇ `ಹೀರೋ ಆರಾಧನೆ’ಯಲ್ಲಿ ಮುಂದುವರಿದಿರುವ ಬಾಲಿವುಡ್‌ ಈ ಸಿನೆಮಾದ ಮೂಲಕ ವಿಭಿನ್ನ ವರ್ತನೆಯನ್ನು  ತೋರಿಸಿದೆ ಎಂದ ಮಾತ್ರಕ್ಕೆ ಬಾಲಿವುಡ್‌ನ ಪಾಪಕರ್ಮಗಳು ತೊಳೆದುಹೋಗುವುದಿಲ್ಲ.

ಹಾಗೆ ನೋಡಿದರೆ `ಪಿಂಕ್’ ಸಿನೆಮಾದ ಪಾತ್ರಗಳು ಬಿ-ಸಿ ಕೇಂದ್ರಗಳ ವೀಕ್ಷಕರಿಗೆ ಅರ್ಥವಾಗುವುದೇ ಕಷ್ಟ ಎಂದು ನನಗನ್ನಿಸಿದೆ. ಜಿಲ್ಲಾ-ತಾಲೂಕು-ಗ್ರಾಮಮಟ್ಟದ ಮಹಿಳೆಯರ ಸಮಸ್ಯೆಗಳೇ ಬೇರೆ. ಅವರಿಗೆ ಬೆಳಗಾದರೆ ಶೌಚಾಲಯವೂ ಇಲ್ಲ. ಶೌಚಕ್ಕೆಂದು ಹೋದ ನೂರಾರು ಮಹಿಳೆಯರು ಅತ್ಯಾಚಾರಕ್ಕೆ ಒಳಗಾಗಿ ಸತ್ತ ಘಟನೆಗಳು ನಮ್ಮ ದೇಶದಲ್ಲಿ ನಡೆದಿರುವುದು ನಾಚಿಕೆಗೇಡಿನ ಸಂಗತಿ. ಅಂಥದ್ದರಲ್ಲಿ `ಸೆಕ್ಸ್‌ ಯಾವಾಗ ಬೇಕು, ಯಾವಾಗ ಬೇಡ’ ಎಂಬ ಆಯ್ಕೆಯ ಹಂತಕ್ಕೆ ಬಂದಿರುವ ಮಹಿಳೆಯರ ಹಕ್ಕಿನ ಕಥೆ ಎಷ್ಟರಮಟ್ಟಿಗೆ ಪರಿಣಾಮಕಾರಿಯಾಗುತ್ತದೆ ಎಂಬ ಅನುಮಾನ ನನ್ನಲ್ಲಿ ಮೂಡುತ್ತದೆ.

ಸೆಕ್ಸ್ ಮನುಷ್ಯನ ಮೂಲಭೂತ ಸ್ವಭಾವ ಮತ್ತು ನಿಸರ್ಗದ ಅನಿವಾರ್ಯತೆ. ಅದನ್ನು ಸಹಜವೆಂಬಂತೆ ಮೀರಿದರೆ ಮಾತ್ರವೇ ನೈಜ-ಸೃಜನಶೀಲ ಬದುಕು ಮೂಡುತ್ತದೆ ಎಂಬುದು ನನ್ನ ವಾದ. ಇದನ್ನೇ ನಾನು ಕೆಲವರ್ಷಗಳ ಹಿಂದೆ `ಕವಲು’ ಕಾದಂಬರಿಯ ವಿಮರ್ಶೆಯ ಸಂದರ್ಭದಲ್ಲಿ ಬರೆದಿದ್ದೆ. ಸೆಕ್ಸ್-ದಿನವಹಿ ದುಡಿಮೆ ಇವೆರಡನ್ನೂ ಬಿಟ್ಟು ನೀವೇನು ಸಾಧಿಸಿದ್ದೀರಿ ಎಂಬುದೇ ಮನುಕುಲವನ್ನು ಈ ಮಟ್ಟಿನ ಆಧುನಿಕತೆಗೆ ತಂದಿಟ್ಟಿದೆ ಎಂಬುದು ನನ್ನ ನಂಬಿಕೆ. ಈ ಹಿನ್ನೆಲೆಯಲ್ಲಿ `ಪಿಂಕ್’ ಗಂಭೀರ ಚರ್ಚೆಯನ್ನು ಎಬ್ಬಿಸಿದ್ದರೂ, ವ್ಯಾಪಕ ಮತ್ತು ಬದುಕಿನ ಇತರೆ ಮಜಲುಗಳನ್ನು ಪರಿಚಯಿಸುವ ಸಿನೆಮಾ ಆಗುವುದಿಲ್ಲ. ಈ ಮೂವರೂ ಮಹಿಳೆಯರು ಎಲ್ಲಿ ಕೆಲಸ ಮಾಡುತ್ತಿದ್ದಾರೆ ಎಂಬ ಖಚಿತ ಮಾಹಿತಿಯೂ ನಿಮಗೆ ಸಿಗುವುದಿಲ್ಲ. ಅವರ ಕ್ರಿಯಾಶೀಲ ಬದುಕೇನು ಎಂಬ ಲವಲೇಶವೂ ಅರಿವಾಗುವುದಿಲ್ಲ. ಲೈಂಗಿಕ ಹಲ್ಲೆಯ ಘಟನೆಯೇ ಸಿನೆಮಾದ ಕೇಂದ್ರ ವಸ್ತು ಎಂದ ಮಾತ್ರಕ್ಕೆ ಅವರ ಬದುಕಿನ ಇನ್ನಿತರೆ ಆಯಾಮಗಳು ನಮಗೆ ಸಿಗಬಾರದು ಎಂದೇನಿರಲಿಲ್ಲ. ಬಾಲಿವುಡ್‌ನ ಆದ್ಯತೆ ಕೇವಲ ಮಾಲ್‌ ಸಂಸ್ಕೃತಿಯ ವೀಕ್ಷಕರನ್ನು ಗಮನದಲ್ಲಿಟ್ಟುಕೊಂಡಿದೆಯೇ ಎಂಬ ಪ್ರಶ್ನೆಯೂ ಮೂಡುತ್ತದೆ. ಒಂದು ಸೃಜನಶೀಲ ಕೃತಿಯ ಸಾಧ್ಯತೆಗಳು ಹೀಗೆಯೇ ಇರಬೇಕು ಎಂದು ವಾದಿಸುವುದು ಸರಿಯಲ್ಲ, ನಿಜ. ಆದರೆ ಸಾಮಾಜಿಕ ಸಂದೇಶವನ್ನೇ ನೀಡುತ್ತಿದ್ದೇವೆ ಎಂದು ಹೇಳಿಕೊಂಡು ಬರುವ ಸಿನೆಮಾಗಳಿಂದ ಇನ್ನೂ ಪರಿಣಾಮಕಾರಿಯಾದ, ವ್ಯಾಪಕ ಪ್ರಭಾವ ಬೀರುವ ಸಂದೇಶಗಳನ್ನು ನಿರೀಕ್ಷಿಸುವುದು ತಪ್ಪೇನಲ್ಲ.

ಮಹಿಳಾ ಸಮಾನತೆ ಎಂಬುದು ಗೊಂದಲದ ಗೂಡಾಗಿದೆ. ಆಮ್ನೆಸ್ಟಿ ಇಂಟರ್ ನ್ಯಾಶನಲ್ ಸಂಸ್ಥೆಯು ವೇಶ್ಯಾವಾಟಿಕೆಯನ್ನು ಸಮರ್ಥಿಸಿ ಪೋರ್ನೋಗ್ರಫಿಗೆ ಬೆಂಬಲ ನೀಡಿದೆ ಎಂದು ಮಹಿಳಾ ಹಕ್ಕು ಹೋರಾಟಗಾರ್ತಿಯರೇ ಖಂಡಿಸಿದ್ದಾರೆ. ಕಮ್ಯುನಿಸ್ಟ್ ನಾಯಕಿ ಬೃಂದಾ ಕಾರಟ್‌ ಅಥವಾ ಪರಿಸರ ಹೋರಾಟಗಾರ್ತಿ ವಂದನಾ ಶಿವರ ಹಣೆಯ ಮೇಲಿನ ಹಳೆ ರೂಪಾಯಿ ಅಗಲದ ಕುಂಕುಮವನ್ನು ನೋಡಿದಾಗ ಕುಂಕುಮವು ದಾಸ್ಯದ ಸಂಕೇತವೆ, ಉದಾರತೆಯ, ಮಹಿಳಾ ಸಮಾನತೆಯ ಚಿಹ್ನೆಯೆ ಎಂಬ ಗೊಂದಲ ನನ್ನಲ್ಲಿ ಮೂಡುತ್ತಿರುತ್ತದೆ! ಸೀರೆಯು ಭಾರತೀಯ ಸನಾತನ ಧರ್ಮದ, ಹಿಂದೂ ಮತೀಯ ಬಟ್ಟೆಯೆ ಅಥವಾ ಭಾರತದ ಜವುಳಿ ರಂಗದಲ್ಲಿ ಅಪಾರ ಬೇಡಿಕೆ ಮೂಡಿಸುವ, ಹೆಚ್ಚು ಪ್ರಮಾಣದ ಹತ್ತಿ ಬಳಸಿ ಆರ್ಥಿಕ ಚಟುವಟಿಕೆಯನ್ನು ಪ್ರೋತ್ಸಾಹಿಸುವ ಉತ್ಪನ್ನವೆ ಎಂಬ ಪ್ರಶ್ನೆ ನನ್ನಲ್ಲಿ ಮೂಡುತ್ತಿರುತ್ತದೆ. ಹಿಜಾಬ್‌ ಧರಿಸುವುದು ಮತೀಯ ಹಕ್ಕು ಎನ್ನುವುದಾದರೆ ಕಾನ್ವೆಂಟ್‌ ವಿದ್ಯಾರ್ಥಿನಿಯರು ಬಿಂದಿ ಹಚ್ಚಿಕೊಳ್ಳಲಾರದ ಸ್ಥಿತಿಯು ಇನ್ನೇನು ಎಂಬ ಅನುಮಾನ ನನ್ನಲ್ಲಿದೆ. ಮಹಿಳೆಯರಿಗೆ ದೇಗುಲ ಪ್ರವೇಶದ ಹಕ್ಕು ದೊರಕಿಸಲು ಹೋರಾಡುತ್ತಿರುವ ತೃಪ್ತಿ ದೇಸಾಯಿಯವರು `ಬಿಗ್ ಬಾಸ್’ ರಿಯಾಲಿಟಿ ಶೋನಲ್ಲಿ ಬರುವ ನಿಯಂತ್ರಕನ ನಿಗೂಢ ಧ್ವನಿಯು ಮಹಿಳೆಯದಾಗಿದ್ದರೆ ಮಾತ್ರ ಭಾಗವಹಿಸುವೆ ಎಂದಿರುವುದು ಮಹಿಳಾ ಸಮಾನತೆಯ ಸಂದೇಶವೋ, `ಬಿಗ್ ಬಾಸ್‌’ ಎಂಬ ಕಾರ್ಪೋರೇಟ್‌  ಕೊಳ್ಳುಬಾಕ ಕಾರ್ಯಕ್ರಮದ ಗೆಲುವೋ? ಗೊತ್ತಿಲ್ಲ!

ಏನೇ ಇದ್ದರೂ, ಮಹಿಳಾ ಸಮಾನತೆಯ ಒಂದು ಚರ್ಚೆಯನ್ನು ಕೊಂಚ ದೊಡ್ಡ ಪ್ರಮಾಣದಲ್ಲಿ ಎತ್ತಿಕೊಂಡಿರುವುದಕ್ಕೆ ಬಾಲಿವುಡ್‌ನ್ನು ಅಭಿನಂದಿಸಲೇಬೇಕು.

Leave a Reply

Your email address will not be published. Required fields are marked *