ವಸುಂಧರೆಯ ಮಹಾನ್ ಜ್ಞಾನಿ ಇನ್ನಿಲ್ಲ. ಆಲ್ಬರ್ಟ್ ಐನ್‌ಸ್ಟೈನ್‌ನಷ್ಟೇ ಬುದ್ಧಿಮತ್ತೆ, ಮನುಕುಲದ ಬಗ್ಗೆ ಉದಾತ್ತ ನೋಟ, ಕಂಡರಿಯದ ಮುಗ್ಧತೆ, – ಎಲ್ಲ ಹೊಂದಿದ್ದ ಕಿಮ್ ಪೀಕ್ ಎಂಬ ಅಪೂರ್ವ ಚೇತನ ನಮ್ಮಿಂದ ದೂರವಾಗಿದೆ. ‘ವಿಭಿನ್ನವಾಗಿರಲು ನೀವು ಅಂಗವಿಕಲರೇ ಆಗಬೇಕಿಲ್ಲ; ಪ್ರತಿಯೊಬ್ಬರೂ ವಿಭಿನ್ನರೇ’ ಎಂದು ಪದೇ ಪದೇ ಹೇಳುತ್ತ ಬಂದಿದ್ದ ವಿಶ್ವದ ಸರ್ವಕಾಲೀನ ಸವಂತ್ (ದಿವ್ಯಜ್ಞಾನಿ ಅನ್ನಿ) ಕಿಮ್ ಪೀಕ್ ಡಿಸೆಂಬರ್ ೧೯ರಂದು ಹೃದಯಾಘಾತದಿಂದ ತೀರಿಕೊಂಡ.
ಅವನ ನಿಧನದ ಬಗ್ಗೆ ಸುದ್ದಿ ಓದಿದಾಗಲೇ ನನಗೆ ಅವನನ್ನೇ ಆಧರಿಸಿದ ಸಿನೆಮಾ ‘ರೈನ್‌ಮ್ಯಾನ್’ (೧೯೮೮) ಎಂದು ಗೊತ್ತಾಯಿತು. ರೈನ್‌ಮ್ಯಾನ್‌ನಲ್ಲಿ ಕಿಮ್ ಪೀಕ್‌ನ ಬುದ್ಧಿಮತ್ತೆಯ ವ್ಯಕ್ತಿತ್ವವನ್ನೂ, ಪೀಟರ್ ಗುತ್ರೀ ಎಂಬಾತನ ವರ್ತನೆಯನ್ನೂ ಮೇಳೈಸಿ ನಟಿಸಿದ್ದಕ್ಕೆ ‘ಅತ್ಯುತ್ತಮ ನಟ’ ಆಸ್ಕರ್ ಪ್ರಶಸ್ತಿಯನ್ನೂ ಗೆದ್ದವ ಹಾಲಿವುಡ್‌ನ ಖ್ಯಾತ ನಟ ಡಸ್ಟಿನ್ ಹಾಫ್‌ಮನ್ ( ಈ ಸಿನೆಮಾಗೆ ಇನ್ನೂ ಮೂರು ಆಸ್ಕರ್ ಸಿಕ್ಕಿದೆ) ಅವನ ತಮ್ಮನಾಗಿ ಟಾಮ್ ಕ್ರೂಯ್ಸ್ ನಟಿಸಿದ್ದೂ ತುಂಬಾ ಅದ್ಭುತವಾಗೇ ಇದೆ. ಸಣ್ಣ ತೊರೆಯ ಲಾಲಿತ್ಯವಿರುವ ಈ ಸಿನೆಮಾ ನೋಡಿದ ಮೇಲೆ ನಿಮಗೆ ಇಂಥವರೂ ಇದ್ದಾರೆಯೇ ಎಂದು ಅಚ್ಚರಿಯಾಗುತ್ತೆ. ಆದರೆ ಕಿಮ್ ಪೀಕ್ ನಿಜಕ್ಕೂ ಮೊನ್ನೆಮೊನ್ನೆವರೆಗೂ ಬದುಕಿದ್ದ!
http://www.youtube-nocookie.com/v/k2T45r5G3kA&hl=en_US&fs=1&rel=0&border=1
ಯಾರು ಈ ಕಿಮ್ ಪೀಕ್? ಒಂದೂವರೆ ವರ್ಷದವನಿದ್ದಾಗಲೇ ತಂದೆ ತಾಯಂದಿರಿಂದ ಓದಿಸಿಕೊಂಡ ಪುಸ್ತಕಗಳನ್ನು ಕಪಾಟಿನಲ್ಲಿ ತಲೆಕೆಳಗಾಗಿ ಇಡುತ್ತಿದ್ದವ. ಮೂರನೆಯ ವಯಸ್ಸಿನಲ್ಲೇ ಕಾನ್‌ಫಿಡೆನ್‌ಶಿಯಲ್ ಪದದ ಅರ್ಥವೇನಮ್ಮ ಎಂದು ಅಮ್ಮನನ್ನು ಕೇಳಿದವ. ಬಾಲ್ಯದಿಂದಲೂ ಎಡಗಣ್ಣಿನಿಂದ ಎಡಪುಟವನ್ನೂ, ಬಲಗಣ್ಣಿನಿಂದ ಬಲಪುಟವನ್ನೂ ಸರಸರನೆ ಓದುತ್ತಿದ್ದವ. ಹದಿನಾಲ್ಕರ ವಯಸ್ಸಿನಲ್ಲಿ ತನಗಿಂತ ನಾಲ್ಕು ವರ್ಷ ದಾಟಿದ ಮಕ್ಕಳ ಪುಸ್ತಕಗಳನ್ನು ಸಲೀಸಾಗಿ ಓದಿ ಮುಗಿಸಿದವ. ೧೮ರ ವಯಸ್ಸಿನಲ್ಲಿ ೧೬೦ ಜನರ ವೇತನದ ಲೆಕ್ಕವನ್ನು ಯಾವ ಒಕ್ಕಣಿಕೆಯೂ ಇಲ್ಲದೆ ಬಾಯಲ್ಲೇ ಕರಾರುವಾಕ್ಕಾಗಿ ಒಪ್ಪಿಸುತ್ತಿದ್ದವ. ಅವನನ್ನು ಕೆಲಸದಿಂದ ತೆಗೆದ ಸಂಸ್ಥೆ, ಅವನ ಜಾಗಕ್ಕೆ ಇಬ್ಬರು ಲೆಕ್ಕಪತ್ರ ಸಿಬ್ಬಂದಿಯನ್ನು ನೇಮಿಸಿಕೊಂಡಿತಲ್ಲದೆ, ಗಣಕವನ್ನೂ ಅಳವಡಿಸಿಕೊಳ್ಳಬೇಕಾಯಿತು.
ಆದರೆ ಕಿಮ್ ಪೀಕ್‌ಗೆ ನಡೆದಾಡಲೇ ತುಂಬಾ ವರ್ಷ ಬೇಕಾಯಿತು. ಸಾಯುವವರೆಗೂ ಅವನ ಅಪ್ಪನೇ ಅವನ ದೇಖರೇಖೆಗಳನ್ನು ನೋಡಿಕೊಂಡ. ಅವನ ಬೂಟ್ ಪಾಲಿಶ್ ಮಾಡಿದ; ಅವನ ತಲೆ ಬಾಚಿದ; ಅವನ ಅಂಗಿ ಗುಂಡಿ ಹಾಕಿದ; ಹಲ್ಲುಜ್ಜಲು ನೆರವಾದ. ಮಗನನ್ನು ಒಂದು ಸುಮಧುರ ಹೂವಿನಂತೆ ನೋಡಿಕೊಂಡ. ಈಗ, ೫೮ರ ವಯಸ್ಸಿನಲ್ಲಿ ಅಂಥ ವಿಶಿಷ್ಟ ಮಗನನ್ನು ಕಳೆದುಕೊಂಡ ಅಪ್ಪ ೮೩ರ ಅಂಚಿನಲ್ಲಿದ್ದಾನೆ. ಆದರೂ ಅವನೊಳಗೆ ಮಗನ ಮೇಲಿನ ಪ್ರೀತಿ ಎಳ್ಳಷ್ಟೂ ಕಡಿಮೆಯಾಗಿಲ್ಲ.
ಕಿಮ್ ಪೀಕ್ ಮೇಲೆ ಎಂ ಆರ್ ಐ ಸ್ಕಾನಿಂಗ್ ಮಾಡಿದಾಗಲೇ ಗೊತ್ತಾಗಿದ್ದು: ಅವನ ಎಡ ಮತ್ತು ಬಲ ಮೆದುಳುಗಳನ್ನು ಜೋಡಿಸುವ ಕಾರ್ಪಸ್ ಕ್ಯಾಲ್ಲೋಸಮ್ ಎಂಬ ನರಗಳು ಕಾಣೆಯಾಗಿದ್ದು….. ಅಲ್ಲದೆ ಎಡ ಮೆದುಳಿಗೆ ಏನೋ ಗಾಸಿಯೂ ಆಗಿತ್ತು. ಇಷ್ಟಾಗಿದ್ದಕ್ಕೇ ಆತ ವಿಶ್ವದ ಅತಿ ಶ್ರೇಷ್ಠ ಸವಂತ್ ಆಗಿಬಿಟ್ಟ. ಸಾಮಾನ್ಯವಾಗಿ ಇಂಥ ದಿವ್ಯಜ್ಞಾನಿಗಳು ಒಂದೆರಡು ವಿಷಯಗಳಲ್ಲಿ ಪರಿಣತರಿರುತ್ತಾರೆ. ನಮ್ಮ ಕಿಮ್ ಪೀಕ್ ಹದಿನೈದು ವಿಷಯಗಳಲ್ಲಿ ಪರಿಣತಿ ಸಾಧಿಸಿದ್ದ! ಭೂಗೋಳ, ಗಣಿತ, ಸಾಹಿತ್ಯ, ಇತಿಹಾಸ, ವ್ಯೋಮ ವಿಜ್ಞಾನ, ಧರ್ಮ, ಸಂಗೀತ – ಎಲ್ಲದರಲ್ಲೂ ಕಿಮ್ ಪೀಕ್‌ನದು ಅಪ್ಪಟ ನೂರಕ್ಕೆ ನೂರು ತಿಳಿವಳಿಕೆ. ಸಂಗೀತ ಕಚೇರಿಗೆ ಹೋದಾಗ ಒಂದು ಪುಟ್ಟ ತಪ್ಪು ಕಂಡರೂ ಮುಗ್ಧವಾಗಿ ಎದ್ದು ನಿಂತು ಹೇಳೇಬಿಡುತ್ತಿದ್ದ; ಹೀಗಾಗಿ ಅಪ್ಪ ಅವನನ್ನು ಕಚೇರಿಗಳಿಗೆ ಕರೆದುಕೊಂಡು ಹೋಗುವುದನ್ನೇ ನಿಲ್ಲಿಸಬೇಕಾಯಿತು.
೧೨ ಸಾವಿರ ಪುಸ್ತಕಗಳನ್ನು ಓದಿದ ಕಿಮ್ ಪೀಕ್‌ಗೆ ಬೈಬಲ್, ಶೇಕ್ಸ್‌ಪಿಯರ್ ಕೃತಿಗಳೂ ಕರತಲಾಮಲಕವಾಗಿದ್ದವು. ಅಮೆರಿಕಾದ ಐವತ್ತೂ ರಾಜ್ಯಗಳ ಪ್ರತಿಯೊಂದೂ ಮನೆಯ ವಿಳಾಸವನ್ನು ಝಿಪ್ ಕೋಟ್ ಸಹಿತ ತಪ್ಪಿಲ್ಲದೆ ಹೇಳುತ್ತಿದ್ದ ಪೀಕ್‌ನ ಪ್ರತಿಭೆ ಬಗ್ಗೆ ಹೊರ ಜಗತ್ತಿಗೆ ಗೊತ್ತಾಗಿದ್ದಾದರೂ ಹೇಗೆ? ಬ್ಯಾರಿ ಮಾರೋ ಎಂಬ ಹಾಲಿವುಡ್ ಕಥೆಗಾರ ಅವನನ್ನು ೧೯೮೪ರಲ್ಲಿ ಭೇಟಿ ಮಾಡಿದಾಗ. ಅಲ್ಲಿಂದಲೇ ಸಿನೆಮಾ ಮಾಡುವ ಯೋಜನೆ ಆರಂಭವಾಯಿತು.
[book id=” /]
ಹಾಗಂತ ರೈನ್‌ಮ್ಯಾನ್ ಸಿನೆಮಾದಲ್ಲಿ ಕಿಮ್ ಪೀಕ್‌ನ ಪಾತ್ರವೇ ಪೂರ್ತಿಯಾಗಿ ಮೂಡಿಲ್ಲ. ಯಾಕೆಂದರೆ ಕಿಮ್ ಪೀಕ್‌ಗೆ ಆಟಿಸಂ ಎಂಬ ರೋಗ ಇರಲಿಲ್ಲ. ಸಿನೆಮಾದಲ್ಲಿ ಆಟಿಸಂ ಇತ್ತು ಎಂಬ ವಿವರಣೆಯಿದೆ. ಅಲ್ಲದೆ ಕಿಮ್‌ನ ನೈಜ ನಡವಳಿಕೆಗಳಿಗೂ, ಡಸ್ಟಿನ್ ಹಾಫ್‌ಮನ್ ನಟಿಸಿದ್ದಕ್ಕೂ ಅಜಗಜಾಂತರ ವ್ಯತ್ಯಾಸವಿದೆ. (ತನಗೆ ಈ ವಿಷಯದಲ್ಲಿ ಪೀಟರ್ ಗುತ್ರೀ ಮಾದರಿಯಾಗಿದ್ದ ಎಂದು ಹಾಫ್‌ಮನ್ ಹೇಳಿದ್ದರ ಬಗ್ಗೆ ಅಪ್ಪ ಕಿಮ್ ಈಗ ತುಂಬಾ ವ್ಯಾಕುಲಗೊಂಡಿದ್ದಾರೆಂದು ವರದಿಗಳು ಹೇಳುತ್ತವೆ). ಆದರೆ ಸಿನೆಮಾದಲ್ಲಿ ಹಾಫ್‌ಮನ್ ನಟನೆಯನ್ನು ನೀವು ಖಂಡಿತ ಒಪ್ಪುತ್ತೀರಿ.
ಈ ಸಿನೆಮಾ ಬಂದ ಮೇಲೆ ಕಿಮ್ ಪೀಕ್‌ಗೆ ಜೀವನದಲ್ಲಿ ಇನ್ನಷ್ಟು ಸಾಧಿಸಬೇಕು ಎಂಬ ಸ್ಫೂರ್ತಿ ಬಂತು. ಸರಿ, ಅಪ್ಪನ ಜತೆಗೂಡಿ ಜಗತ್ತು ತಿರುಗಿದ. ತನ್ನಂತೆ ರೋಗದಿಂದ ಬಳುತ್ತಿರುವವರಿಗೆ ೭೦ ಲಕ್ಷ ಡಾಲರ್ ಸಂಗ್ರಹಿಸಲು ೩೦ ಲಕ್ಷ ಕಿಲೋಮೀಟರ್ ಪ್ರಯಾಣ ಮಾಡಿದ ಕಿಮ್ ತನ್ನ ಜೀವಿತಕ್ಕೆ ಬಳಸುತ್ತಿದ್ದದ್ದು ಸರ್ಕಾರದಿಂದ ಬರುತ್ತಿದ್ದ ಮಾಸಾಶನದಿಂದ. ರೈನ್‌ಮ್ಯಾನ್ ಸಿನೆಮಾ ನಿರ್ಮಾಪಕರು ೧೦ ಸಾವಿರ ಡಾಲರ್ ಕೊಟ್ಟಿದ್ದರಿಂದ ಅವನ ವರಮಾನ ೨೪೦೦ ಡಾಲರ್‌ಗಳ ಮಿತಿ ಮೀರಿ, ಅವನ ಮಾಸಾಶನವೂ ರದ್ದಾಗಿದ್ದು ವಿಪರ್ಯಾಸವೇ.
ಆದ್ದರಿಂದ ರೈನ್‌ಮ್ಯಾನ್ ಸಿನೆಮಾವನ್ನು ಈಗ ಹುಡುಕಿ ನೋಡುವುದೇ ನೀವು ಅವನಿಗೆ ಸಲ್ಲಿಸಬಹುದಾದ ಶ್ರದ್ಧಾಂಜಲಿ. ಜೊತೆಗೆ, ಅವನನ್ನು ಕಾಣಲು ನೀವು “ಬ್ರೈನ್‌ಮ್ಯಾನ್’ ಎಂಬ ಡಾಕ್ಯುಮೆಂಟರಿಯನ್ನೂ ನೋಡಬೇಕು. ಈ ಡಾಕ್ಯುಮೆಂಟರಿಯಲ್ಲಿ, ಈಗ ೩೦ರ ಹರೆಯದಲ್ಲಿರುವ ಗಣಿತಜ್ಞ ದಿವ್ಯಜ್ಞಾನಿ ಡೇನಿಯಲ್ ಟಮ್ಮೆಟ್‌ನ ಅದ್ಭುತ ಬುದ್ಧಿಮತ್ತೆಯ ಪರಿಚಯವಿದೆ. ಜೊತೆಗೇ ಡೇನಿಯಲ್ ಮತ್ತು ಕಿಮ್ ಪೀಕ್ ಪರಸ್ಪರ ಭೇಟಿಯಾದ ಹೃದಯಂಗಮ ಸನ್ನಿವೇಶವೂ ಇದೆ. ನಿಜ ಕಿಮ್ ಪೀಕ್ ಹೇಗೆ ಡಸ್ಟಿನ್ ಹಾಫ್‌ಮನ್‌ನ ನಟನೆಗಿಂತ ವಿಭಿನ್ನ ಎಂದು ಇದರಿಂದ ತಿಳಿಯಬಹುದು. ‘ಬ್ರೈನ್‌ಮ್ಯಾನ್’ ಕೇವಲ ತಿಳಿವಳಿಕೆಗಾಗಿ ನೋಡಲು ಈ ಟೊರೆಂಟ್ ಮೂಲಕ ಡೌನ್‌ಲೋಡ್ ಮಾಡಿಕೊಳ್ಳಿ.
ಡೇನಿಯಲ್ ಟಮ್ಮೆಟ್ ಗಣಿತದಲ್ಲಿ ಮಹಾನ್ ಜ್ಞಾನಿ. ೨೨ನ್ನು ೭ ರಿಂದ ಭಾಗಿಸಿದರೆ (ಇದೂ ಒಂದು ಅಂದಾಜು ಲೆಕ್ಕವಂತೆ) ಸಿಗುವ ಪೈ ಎಂಬ ಸಂಖ್ಯೆಯ ೨೨೫೧೪ ದಶಮಾಂಶ ಸ್ಥಾನಗಳವರೆಗೆ (ಬಿಂದುವಿನ ನಂತರದ ೨೨೫೦೧೪ ಅಂಕಿಗಳು) ಯಾವ ಗಡಿಬಿಡಿಯೂ ಇಲ್ಲದೆ, ಎಲ್ಲೂ ತಪ್ಪದೆ ಐದು ತಾಸುಗಳ ಕಾಲ ಉಸುರುವ ಡೇನಿಯಲ್ ಈಗಲೂ ತನ್ನ ಪ್ರತಿಭೆಯಿಂದ ವಿಶ್ವಖ್ಯಾತ. ಈತನಿಗೆ ಗಣಿತ ಒಂದು ಕಲಾಕೃತಿಯಂತೆ ಕಾಣಿಸಿಕೊಳ್ಳುತ್ತದೆ.
ವಿಶ್ವದಲ್ಲಿ ಇಂಥ ದಿವ್ಯಜ್ಞಾನಿಗಳು ತುಂಬಾ ಜನ ಇದ್ದರು; ಇದ್ದಾರೆ. ಈ ಎಲ್ಲ ಜನರ ಬಗ್ಗೆ ತಿಳಿದುಕೊಳ್ಳಲು ನೀವು ವಿಕಿಪೀಡಿಯಾದ ಈ ಕೊಂಡಿ ಬಳಸಬಹುದು. ಆವೋಯಾನ್ ಜೇಮ್ಸ್ ಬರೆದ “ಅಸ್ಪರ್ಜರ್ ಸಿಂಡ್ರೋಮ್ ಎಂಡ್ ಹೈ ಅಚೀವ್‌ಮೆಂಟ್” ಪುಸ್ತಕದಲ್ಲಿ ಮೈಕೆಲ್ ಏಂಜೆಲ್, ಐಸಾಕ್ ನ್ಯಾಟನ್, ಆಲ್ಬರ್ಟ್ ಐನ್‌ಸ್ಟೈನ್, ಬರ್ಟ್‌ರಂಡ್ ರಸೆಲ್, ವಿನ್ಸೆಂಟ್ ವ್ಯಾನ್‌ಗೋ, ಭಾರತದ ಗಣಿತಜ್ಞ ಡಾ. ಶ್ರೀನಿವಾಸನ್ ರಾಮಾನುಜಮ್ ಸೇರಿದಂತೆ ೨೦ ಬುದ್ಧಿಮತ್ತ ವ್ಯಕ್ತಿತ್ವಗಳ ಜೀವನ ಪರಿಚಯವಿದೆ. ಲಾರೆನ್ಸ್ ಆಸ್‌ಬರ್ನ್ ಎಂಬಾತ ಬರೆದ ‘ಅಮೆರಿಕನ್ ನಾರ್ಮಲ್: ದಿ ಹಿಡನ್ ವರ್ಲ್ಡ್ ಆಫ್ ಆಸ್ಪರ್ಜರ‍್ಸ್ ಸಿಂಡ್ರೋಮ್’ ಪುಸ್ತಕವೂ ಇಲ್ಲಿ ಉಲ್ಲೇಖನೀಯ. ಬಾಲಿವುಡ್ ನಿರ್ಮಿಸಿದ ತಾರೇ ಜಮೀನ್ ಪರ್ ಮತ್ತು ಪಾ ಚಿತ್ರಗಳ ವ್ಯಕ್ತಿತ್ವಗಳೂ ಇಂಥವೇ. ಅದಿಲ್ಲವಾದರೆ ‘ಪಾ’ದಲ್ಲಿ ಆ ಮಿಡಲ್ ಸ್ಕೂಲ್ ಹುಡುಗ ಹೇಗೆ ಅಷ್ಟು ತರ್ಕಬದ್ಧವಾಗಿ ಮಾತನಾಡಲು ಸಾಧ್ಯ?
ದಿವ್ಯಜ್ಞಾನವೆಂಬುದು ಇದೆ; ಅದು ಸಿನೆಮಾದಲ್ಲಿ ತೋರಿಸುವುದಕ್ಕಿಂತ ಹೆಚ್ಚು ಖಚಿತವಾಗಿದೆ. ನಮ್ಮ ದೇಶದಲ್ಲೂ ಇಂಥ ಹಲವು ಪ್ರತಿಭೆಗಳು ಈಗಲೂ ಇವೆ. ಅವುಗಳನ್ನು ಹುಡುಕಿ ತೆಗೆದರೆ ಇಂದಿನ ಮಚ್ಚು, ಲಾಂಗು ಸಿನೆಮಾಗಳಿಗಿಂತ ಎಷ್ಟೋ ಉತ್ತಮ ಗುಣಮಟ್ಟದ ಸಿನೆಮಾ ಮಾಡಲು ಸಾಧ್ಯವಿದೆ.
ರೈನ್‌ಮ್ಯಾನ್ ನೋಡಲು ಮರೆಯದಿರಿ. ನಿಮ್ಮ ಎದೆಯ ಮೇಲೊಂದು ಸಣ್ಣ ಝರಿಯ ನೀರು ತಾಗಲಿ.
-
ಕಿಮ್ ಪೀಕ್ ಕುರಿತ ಸೈಂಟಿಫಿಕ್ ಅಮೆರಿಕನ್ ಪತ್ರಿಕೆಯ ಆಳ ಅಧ್ಯಯನದ ವರದಿಗಾಗಿ ಇಲ್ಲಿಗೆ ಬನ್ನಿ.
ಅವನ ಜಾಣ್ಮೆಯ ಝಲಕ್ ಇಲ್ಲಿದೆ.
http://www.youtube-nocookie.com/v/7bVVQ0FZeys&hl=en_US&fs=1&rel=0&border=1
ಉಳಿದಂತೆ ಹೆಚ್ಚಿನ ಓದಿಗಾಗಿ ಕೆಳಗಿನ ಕೊಂಡಿಗಳನ್ನು ನೋಡಿ:
- http://www.theage.com.au/world/genius-created-by-a-mixup-of-nature-20091223-ldh7.html
- http://www.inquisitr.com/53344/real-life-rain-man-dies-at-58/
- http://www.npr.org/templates/story/story.php?storyId=121774906
- http://en.wikipedia.org/wiki/Kim_Peek
- http://www.wisconsinmedicalsociety.org/savant_syndrome/savant_profiles/kim_peek