ಟಿಬೆಟನ್ ಧರ್ಮಗುರು ಪೂಜ್ಯ ದಲಾಯಿ ಲಾಮಾ ಅವರ ದರ್ಶನಭಾಗ್ಯವು ಇಂದು (20 ಜನವರಿ 2026) ನನಗೆ ಒದಗಿದ್ದು ನನ್ನ ಜೀವನದ ಅತಿ ಸುಂದರ, ಬಣ್ಣಿಸಲಸದಳ ಕ್ಷಣವಾಗಿದೆ.
ಅವರ ಭೇಟಿಗಾಗಿ ಇಂದು ಮುಂಜಾನೆ ಧಾರವಾಡದಿಂದ ಟಿಬೆಟನ್ ಶಿಬಿರಕ್ಕೆ ಹೋಗುವವರೆಗೂ ಏನೇನೋ ಆಲೋಚನೆಗಳು. ಜ್ಞಾನವೃದ್ಧ, ವಯೋವೃದ್ಧ ಎಂದು ಈಗ ಕಾಣಿಸಿಕೊಂಡರೂ, ಚೀನಾದ ಆಕ್ರಮಣದಿಂದ ತಪ್ಪಿಸಿಕೊಂಡು ಬಂದ ಬಾಲ ಭಿಕ್ಷುವೇ ನೆನಪಾಗತೊಡಗಿದರು. ಆಧ್ಯಾತ್ಮಿಕ ಬದುಕೇ ಜೀವನಾಡಿಯಾಗಿದ್ದ ದೇಶವೊಂದರ ಚುಕ್ಕಾಣಿ ಹಿಡಿದಿದ್ದರೂ ತನ್ನ ಲಕ್ಷಗಟ್ಟಲೆ ಪ್ರಜೆಗಳೊಂದಿಗೆ ಭಾರತಕ್ಕೆ ಬಂದು ಅಸ್ತಿತ್ವ ಉಳಿಸಿಕೊಳ್ಳಬೇಕಾಯಿತು. ಎಪ್ಪತ್ತೈದು ವರ್ಷಗಳಿಂದ ಈ ಜೀವ ಅದೆಷ್ಟು ನೊಂದಿರಬಹುದು? ಹೊರಗಣ ಜಗತ್ತಿಗೆ ಎಂದೂ ತನ್ನ ದುಮ್ಮಾನವನ್ನು ತೋರಗೊಡದೆ ಕೇವಲ ಶಾಂತಿ-ಸಹನೆ-ಸಹಬಾಳ್ವೆಯ ಮಾತುಗಳಿಂದಲೇ ಟಿಬೆಟಿನ ಹಲವು ಪೀಳಿಗೆಗಳಿಗೆ ಬೌದ್ಧ ಧರ್ಮದ ತತ್ವಗಳನ್ನು ದಾಟಿಸಿದ ಮಹಾನ್ ಚೇತನವಾಗಿಯೇ ಇಂದೂ ನಮ್ಮ ನಡುವೆ ಪ್ರಖರ ಜ್ಯೋತಿಯಾಗಿದ್ದಾರೆ.
ಆದರೆ ಇನ್ನೂ ಸಾವಿರಾರು ಕುಟುಂಬಗಳು ಟಿಬೆಟಿನಲ್ಲೇ ಉಳಿಯಬೇಕಾಗಿ ಬಂದಿತ್ತು. ಸಾವಿರಾರು ಯುವ ಭಿಕ್ಷುಗಳೂ ಆಕ್ರಮಿತ ಟಿಬೆಟಿನಲ್ಲೇ ಸಿಲುಕಿಕೊಂಡರು. ಅವರಲ್ಲಿ ಒಬ್ಬ ಭಿಕ್ಷು ಶ್ರೀ ಪಾಲ್ದೆನ್ ಗ್ಯಾತ್ಸೋ. 33 ವರ್ಷಗಳ ಕಾಲ ಚೀನೀ ಯಾತನಾಶಿಬಿರದಲ್ಲಿ ಇನ್ನಿಲ್ಲದ ಶಿಕ್ಷೆಗಳನ್ನು ಅನುಭವಿಸಿದರು. ಹೇಗೋ ಪಾರಾಗಿ ಭಾರತಕ್ಕೆ, ಹಿಮಾಚಲ ಪ್ರದೇಶದ ಧರ್ಮಶಾಲಾಗೆ ಬಂದು ದಲಾಯಿ ಲಾಮಾರ ಪಾದಗಳಿಗೆ ಶರಣಾದರು. ವಿಶ್ರಾಂತಿ ಪಡೆದುಕೋ ಎಂದು ದಲಾಯಿ ಲಾಮಾ ಅವರನ್ನು ಕಳಿಸಿಕೊಟ್ಟರು. ನಂತರ ಕರೆದು ‘ನಿನ್ನ ಅನುಭವಗಳನ್ನು ಬರೆಯಬೇಕು’ ಎಂದು ಆದೇಶಿಸಿದರು.
ಹೀಗೆ ಪಾಲ್ದೆನ್ ಗ್ಯಾತ್ಸೋ ಹೇಳಿದ, ನಂತರ ಶೆರಿಂಗ್ ಶಾಕ್ಯ ಲಿಪಿಬದ್ಧಗೊಳಿಸಿದ FIRE UNDER THE SNOW ಪುಸ್ತಕವನ್ನು ನಾನು ‘ಹಿಮದೊಡಲ ತಳಮಳ’ ಎಂದು ಅನುವಾದಿಸಿದ್ದೆ. ಇಂದು ಪೂಜ್ಯ ದಲಾಯಿ ಲಾಮಾರವರ ಪಾದಕಮಲಗಳಲ್ಲಿ ಈ ಪುಸ್ತಕವನ್ನು ಸಮರ್ಪಿಸಿ ಧನ್ಯಭಾವ ಹೊಂದಿದೆ.
ದರ್ಶನಕ್ಕೆ ಅವರ ಎದುರು ನಿಂತಾಗ ವಸ್ತುಶಃ ನಾನು ಮೂಕನಾದೆ. ಅವರನ್ನು ನೋಡಲೋ, ಅವರ ಪಾದಗಳಿಗೆ ನಮಿಸಲೋ, ಅವರೊಂದಿಗೆ ಏನಾದ್ರೂ ಮಾತನಾಡಲೋ, ಅವರ ಜೀವಿತಾವಧಿಯ ಶಾಂತ ಸಂಘರ್ಷದ ಬಗ್ಗೆ ಪ್ರಶ್ನಿಸಿಯೇ ಬಿಡಲೋ ಎಂಬ ತುಮುಲ ನನ್ನೊಳಗೆ ಹಾದುಹೋಗಿದ್ದು ನಿಜ. ಆದರೆ ಸಾವಿರಾರು ದರ್ಶನಾರ್ಥಿಗಳು ಸಾಲುಗಟ್ಟಿದ್ದರು.
ಅವರು ನನ್ನ ಕೈಹಿಡಿದು, ಕೆನ್ನೆ ತಟ್ಟಿ ಆಶೀರ್ವದಿಸಿದ ಆ ಕ್ಷಣವನ್ನು ಮರೆಯುವುದಾದರೂ ಹೇಗೆ? ಈ ಹೊತ್ತಿಗೂ ನಾನು ಆ ಸುಮಧುರ ಸ್ಪರ್ಶದರ್ಶನಭಾಗ್ಯದ ಕ್ಷಣವನ್ನು ಮತ್ತೆ ಮತ್ತೆ ನೆನಪಿಸಿಕೊಳ್ಳುತ್ತಿದ್ದೇನೆ.
ಈ ದರ್ಶನಭಾಗ್ಯಕ್ಕೆ ನೆರವಾದ ಶ್ರೀ ಅಮೃತ ಜೋಶಿಯವರನ್ನು ಹೃತ್ಪೂರ್ವಕವಾಗಿ ಅಭಿವಂದಿಸುವೆ.
ಇನ್ನು ನಾನು ಅನುವಾದಿಸಿದ ಪುಸ್ತಕದ ಮುನ್ನುಡಿ ಮತ್ತು ಇಡೀ ಪುಸ್ತಕದ ಕೊಂಡಿ ಕೆಳಗಿದೆ.
………………………..
ತಳಮಳದ ಅರಿವಿನ ಹಿಂದೆ….
ಒಂದು ದಿನ ದಿ ಇಂಡಿಯನ್ ಎಕ್ಸ್‌ಪ್ರೆಸ್ ಪತ್ರಿಕೆಯ ಒಂದು ತುಂಡು ಹಾಳೆಯಲ್ಲಿ ಈ ಪುಸ್ತಕದ ವಿಮರ್ಶೆಯನ್ನು ಓದಿದೆ. ತುಂಬಾ ಪ್ರಯತ್ನಿಸಿ ಪುಸ್ತಕವನ್ನು ಖರೀದಿಸಿದೆ. ಓದಿದ ಮೇಲೆ ಇದನ್ನು ಕನ್ನಡಕ್ಕೆ ತರುವ ಮನಸ್ಸಾಯಿತು.
ಆ ಕಾಲದಲ್ಲಿ ಈಮೈಲ್ ಶುರುವಾಗಿತ್ತಷ್ಟೆ. ನಾನು ಈ ಪುಸ್ತಕದ ಹಕ್ಕುಸ್ವಾಮ್ಯ ಹೊಂದಿರುವ ಪ್ರಕಾಶಕರನ್ನು ಸಂಪರ್ಕಿಸಿದೆ. ಎಂದಿನಂತೆ ಪಾಶ್ಚಾತ್ಯ ಪ್ರಕಾಶಕರ ಸಂಪರ್ಕ ಕಷ್ಟವಾಯಿತು. ಕೊನೆಗೆ ಟಿಬೆಟನ್ ಸರ್ಕಾರದ ಬೆಂಗಳೂರು ಕಚೇರಿಯಲ್ಲಿದ್ದ ಶ್ರೀ ಶೂಫೆಲ್ ತುಪ್ತೆನ್ ಎಂಬ ಅಧಿಕಾರಿಯ ಗೆಳೆತನ ಮಾಡಿ ಅವರ ಮೂಲಕ ಯತ್ನಗಳನ್ನು ಆರಂಭಿಸಿದೆ. ಅವರು ಲಂಡನ್ನಿನಲ್ಲಿರುವ ಟಿಬೆಟನ್ ರಾಯಭಾರಿ ಕಚೇರಿಯನ್ನು ಸಂಪರ್ಕಿಸಿ ನನಗೆ ಅನುವಾದದ ಮತ್ತು ಧಾರಾವಾಹಿ ಪ್ರಕಟಣೆಯ ಹಕ್ಕುಗಳನ್ನು ಅಧಿಕೃತವಾಗಿ ಕೊಡಿಸಿದರು. ಆ ಪತ್ರವು ಈಗಲೂ ನನ್ನಲ್ಲಿದೆ. ಈ ಅನುವಾದವನ್ನು `ಹೊಸದಿಗಂತ’ ಪತ್ರಿಕೆಗೆ ಕೊಟ್ಟೆ. ಅಲ್ಲಿ ಇದು ಹಲವು ಕಂತುಗಳಲ್ಲಿ ಪ್ರಕಟವಾಯಿತು.
ಟಿಬೆಟ್‌ನ್ನು ಚೀನಾವು ನುಂಗಿ ನೀರು ಕುಡಿದ ಮೇಲೆ ಇಂಥ ಎಷ್ಟೋ ಕಥೆಗಳು ಹೊರಬರುತ್ತಿವೆ. ಆದರೆ ಭಾರತದಲ್ಲಿ ಇನ್ನೂ ಪಾಶ್ಚಾತ್ಯ ಲೌಕಿಕ ಬದುಕೇ ಆಸಕ್ತಿಕರ. ನಮ್ಮ ಲಿಟೆರರಿ ಫೆಸ್ಟಿವಲ್‌ಗಳನ್ನು ಗಮನಿಸಿ: ಪೌರ್ವಾತ್ಯ ಲೇಖಕರು ಇದೀಗ ಮಾತ್ರವೇ ಅಲ್ಲಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಯುರೋಪಿನಲ್ಲಿ ಏನೇ ಆದರೂ ಅದು ಬುದ್ಧಿಮತ್ತೆಯ ಲಕ್ಷಣ. ಚೀನಾದಲ್ಲಿ ಜೀವಗಳನ್ನು ಕೊಳ್ಳೆ ಹೊಡೆಯುತ್ತಿದ್ದರೂ ಅವೆಲ್ಲ ನಗಣ್ಯ!
ಈ ಪುಸ್ತಕವನ್ನು ಅನುವಾದಿಸುವುದರ ಜೊತೆಗೇ ನಾನು ಟಿಬೆಟನ್ ಸ್ವಾತಂತ್ರ್ಯ ಹೋರಾಟದ ವಾಲಂಟೀರ್ ಆದೆ. ಅವರನ್ನು ಹತ್ತಿರದಿಂದ ಕಂಡೆ. ನಾನು ಚೀನಾ ಮತ್ತು ಟಿಬೆಟ್ ಬಗ್ಗೆ ವಿಶೇಷ ಅಧ್ಯಯನ ಮಾಡಲು ಈ ಪುಸ್ತಕವೇ ಮೂಲಕಾರಣ.
ಚೀನಾದ ದೈತ್ಯ ಆರ್ಥಿಕತೆಯನ್ನು ನೋಡಿ ಬೆರಗಾಗುವವರು ಈ ಪುಸ್ತಕವನ್ನು ಓದಿ ವಾಸ್ತವಿಕತೆಯ ಅರಿವು ಪಡೆಯಲಿ ಎಂದು ಆಶಿಸುತ್ತೇನೆ. ಎಂದೋ ಹೂತುಹೋಗಿರುವ ಕಮ್ಯುನಿಸಂನ್ನು ಜೀವವಿದೆ ಎಂದು ಭ್ರಮಿಸಿ ಬದುಕುತ್ತಿರುವ ಭಾರತದ ಕಮ್ಯುನಿಸ್ಟರು ಇನಿತಾದರೂ ವಾಸ್ತವಕ್ಕೆ ಬರಲಿ ಎಂದು ನಿರೀಕ್ಷಿಸುತ್ತೇನೆ.
ಹಲವು ಸಮಸ್ಯೆಗಳ ನಡುವೆಯೂ ಇಂಥ ಪುಸ್ತಕವನ್ನು ಯಾವ ಹಿಂಜರಿಕೆಯೂ ಇಲ್ಲದೆ ಬರೆಯಲು, ಪ್ರಕಟಿಸಲು ಅವಕಾಶ ನೀಡುತ್ತಿರುವ ಭಾರತದ ಪ್ರಜಾತಂತ್ರಕ್ಕೆ ನನ್ನ ಅನಂತ ನಮನಗಳು.
ಈ ಪುಸ್ತಕವನ್ನು ಅನುವಾದ ಮಾಡಲಾಗುತ್ತಿದೆ ಎಂಬುದು ಶ್ರೀ ಪಾಲ್ದೆನ್ ಗ್ಯಾತ್ಸೋರಿಗೂ ಅಂದು ತಿಳಿಸಲಾಗಿತ್ತು. ಅವರ ಅಗೋಚರ ಆಶೀರ್ವಾದ ನನ್ನ ಮೇಲಿದೆ ಎಂದು ಭಾವಿಸುತ್ತೇನೆ. ೩೩ ವರ್ಷಗಳ ಕಾಲ ನಿರಂತರ ಸೆರೆಮನೆವಾಸ ಅನುಭವಿಸಿ, ನಂತರ ಹೇಗೋ ತಪ್ಪಿಸಿಕೊಂಡು ಬಂದಮೇಲೂ ಅವರ ಮುಖದಲ್ಲಿ ಎಂಥ ದೃಢತೆ, ಎಂಥ ಧೀರ ನಗು! ಅವರ ಜೀವನೋತ್ಸಾಹ ಮತ್ತು ಬದ್ಧತೆ ಬಹುಶಃ ಹಲವು ಪೀಳಿಗೆಗಳಲ್ಲಿ ಎಲ್ಲೋ ಒಮ್ಮೊಮ್ಮೆ ಕಾಣಿಸಿಕೊಳ್ಳುತ್ತದೆ.
ಅಂಥ ಚೇತನವೊಂದು ನಮ್ಮ ನಡುವೆ ಇದ್ದಿದ್ದರಿಂದಲೇ ನನಗೆ ಈ ಪುಸ್ತಕವನ್ನು ಅನುವಾದಿಸುವ ಭಾಗ್ಯ ಸಿಕ್ಕಿದೆ. ನಿಜ, ಇದನ್ನು ಮುದ್ರಿತ ಪುಸ್ತಕವಾಗಿ ಪ್ರಕಟಿಸಿದ್ದರೆ ಇನ್ನಷ್ಟು ಸಾಮಾನ್ಯರನ್ನು ತಲಪುಬಹುದಿತ್ತು. ನೋಡೋಣ!
ಒಂದಲ್ಲ ಒಂದು ದಿನ ಟಿಬೆಟ್ ಸ್ವತಂತ್ರ ದೇಶವಾಗುತ್ತದೆ ಎಂಬ ಆಶಯ, ಕನಸು ಲಕ್ಷಾಂತರ ಟಿಬೆಟಿಯನ್ನರಂತೆ, ಭಾರತೀಯರಂತೆ ನನಗೂ ಇದೆ. ಟಿಬೆಟಿಯನ್ನರು ಈವರೆಗೆ ಕೈಗೊಂಡ ಸುಮಾರು ಎಂಟು ದಶಕಗಳ ಶಾಂತಿಯುತ ಹೋರಾಟವನ್ನೂ ಗಮನಿಸುವುದು ಐತಿಹಾಸಿಕ ಕರ್ತವ್ಯ.
ಈ ಪುಸ್ತಕಕ್ಕೆ ಪೂಜ್ಯ ಶ್ರೀ ದಲಾಯಿ ಲಾಮಾರವರೇ ಮೂಲ ಸ್ಫೂರ್ತಿ. ಶ್ರೀ ಪಾಲ್ದೆನ್ ಗ್ಯಾತ್ಸೋರಿಗೆ ಈ ಪುಸ್ತಕ ಬರೆಯಲು ಹೇಳಿದ್ದಲ್ಲದೆ, ಇದಕ್ಕೊಂದು ಚೆಂದದ ಆಶೀರ್ವಾದವನ್ನೂ ಬರೆದಿದ್ದಾರೆ. ಶ್ರೀ ದಲಾಯಿ ಲಾಮಾರ ಸ್ನಿಗ್ಧ, ಆಳ ನಸುನಗುವಿನಲ್ಲಿ ನಮ್ಮೆಲ್ಲ ದುಃಖಗಳನ್ನು ಮರೆಯುವ ಶಕ್ತಿ ಇದೆ. ಅವರಿಗೆ ನನ್ನ ಗೌರವಪೂರ್ವಕ ನಮನಗಳು.
ಈಗ ಈ ಡಿಜಿಟಲ್ ಆವೃತ್ತಿಯನ್ನು ಮುದ್ರಿಸಿ ಅವರ ಅಡಿದಾವರೆಗಳಲ್ಲಿ ಅರ್ಪಿಸಲು ನನಗೆ ಅತ್ಯಂತ ಸಮಾಧಾನವಾಗುತ್ತಿದೆ. ಅವರೇ ಹೇಳಿ ಬರೆಯಿಸಿದ ಪುಸ್ತಕದ ಕನ್ನಡ ಅವತರಣಿಕೆಯನ್ನು ಅವರ ದರ್ಶನ ಮಾಡಿಯೇ ಅರ್ಪಿಸುವುದು ನನ್ನ ಸಂಕಲ್ಪವಾಗಿತ್ತು. 2026ರ ಜನವರಿ 20ರಂದು ಈ ಸಂಕಲ್ಪ ನೆರವೇರಿತು.
– ಬೇಳೂರು ಸುದರ್ಶನ





