`ಜೋಕರ್’ಗೆ ಇನ್ನುಮುಂದೆ ಬದುಕು ಕಾಮೆಡಿ

`ಜೋಕರ್‌’ (೨೦೧೯) ಸಿನೆಮಾದ ಬಗ್ಗೆ ದ ಗಾರ್ಡಿಯನ್‌, ನ್ಯೂಯಾರ್ಕ್‌ ಟೈಮ್ಸ್‌ನಂತಹ ದೊಡ್ಡ ಪತ್ರಿಕೆಗಳೇ `ಚೆನ್ನಾಗಿಲ್ಲ’ ಎಂದು ಬರೆದ ಮೇಲೆ, ಹಾಲಿವುಡ್‌ ರಂಗದಲ್ಲೇ ಹಲವು ತಿಂಗಳುಗಳ ನಂತರ ಸುದ್ದಿ ಮಾಡಿದ ಈ ಒಂದಾದರೂ ಹಾಲಿವುಡ್‌ ಸಿನೆಮಾನ ನೋಡಬೇಕೇ ಬೇಡವೇ ಎಂಬ ಗೊಂದಲಕ್ಕೆ ಬಿದ್ದಿದ್ದೆ. ಇವತ್ತು ನೋಡಿದ ಮೇಲೆ, ಈ ಕೂಡಲೇ ನನ್ನ ಇನ್‌ಸ್ಟಂಟ್‌ ವಿಮರ್ಶೆ ಬರೆಯಲೇಬೇಕು ಅನ್ನಿಸಿ…

(ಸಿನೆಮಾವು A ಪ್ರಮಾಣಪತ್ರ ಹೊಂದಿದೆ)

`ಕೆಟ್ಟವರು’  ಎಂಬ ಹಣೆಪಟ್ಟಿ ಅಂಟಿಸಿಕೊಂಡವರು ಎಲ್ಲೆಲ್ಲೂ ಯಾವ ಕಾಲದಲ್ಲೂ ಇರುತ್ತಾರೆ. ಅವರು ಹುಟ್ಟಿದಾಗ ಕೆಟ್ಟವರೇನೂ ಆಗಿರುವುದಿಲ್ಲ; ಮುಗ್ಧ ಮಗುವೇ ಆಗಿರುತ್ತಾರೆ. ಅಂತಹ ಹೂವಿನ ಮನಸ್ಸಿನ ವ್ಯಕ್ತಿಗಳೂ ಹೇಗೆ ಕೆಟ್ಟವರಾಗುತ್ತಾರೆ ಎಂಬ ಒಂದು ಉದಾಹರಣೆಯನ್ನು `ಜೋಕರ್‍’ ಸಿನೆಮಾ ಅದ್ಭುತ / ಭೀಕರ ದೃಶ್ಯ, ಎದೆ ಸೀಳುವ ಸಂಗೀತ/ಶಬ್ದ ಮತ್ತು ಹಲವು ವರ್ಷಗಳ ನಂತರ ಕಂಡ ಅತ್ಯಂತ ಮನೋಜ್ಞ ಅಭಿನಯ (ಜಾಕ್ವೆಸ್‌ ಫೀನಿಕ್ಸ್‌) ನೀಡುತ್ತದೆ; ಜೊತೆಗೇ ನಿಮ್ಮಲ್ಲಿ ಇಂತಹ ಕೆಟ್ಟವರ ಬಗ್ಗೆ ಅನುಕಂಪ ಇಟ್ಟುಕೊಳ್ಳಬೇಕೋ ಬೇಡವೋ ಎಂಬ ಗೊಂದಲವನ್ನು ಹುಟ್ಟಿಸುತ್ತದೆ.

ಬ್ಯಾಟ್‌ಮನ್‌ ಸರಣಿಯ ಇತ್ತೀಚೆಗಿನ ಸಿನೆಮಾ `ದ ಡಾರ್ಕ್‌ ನೈಟ್‌’ (೨೦೦೮) ರಲ್ಲಿ ಜೋಕರ್‌ ಎಂಬ ಖಳನಾಯಕನ ಪಾತ್ರವನ್ನು ಹೀಥ್ ಲೆಡ್ಜರ್‌ (ಈ ಮಹಾನ್‌ ನಟ ಈಗಿಲ್ಲ)  ಮಾಡಿದ್ದು ನಿಮಗೆ ನೆನಪಿರಬಹುದು. ೧೯೪೦ರ ದಶಕದಲ್ಲೇ ಈ ಪಾತ್ರವು ಡಿಸಿ ಕಾಮಿಕ್ಸ್‌ನಲ್ಲಿ ಮೂಡಿತ್ತಂತೆ. ಜೋಕರ್‌ ಪಾತ್ರವು ಹೇಗೆ ರೂಪುಗೊಂಡಿರಬಹುದು ಎಂಬ ಕಲ್ಪನೆಯನ್ನೇ ನಿರ್ದೇಶಕ ಟಾಡ್‌ ಫಿಲಿಪ್ಸ್‌ ಎರಡು ಗಂಟೆಗಳ ಈ ಥ್ರಿಲ್ಲರ್‌ನಲ್ಲಿ ಮೂಡಿಸಿದ್ದಾರೆ. ಹೆಸರಾಂತ ನಟ ರಾಬರ್ಟ್‌ ಡಿ ನೀರೋ ಕೂಡ ಈ ಚಿತ್ರದಲ್ಲಿ ವಿಶಿಷ್ಟ ಪಾತ್ರವಾಗಿದ್ದಾರೆ.  

ಹಾಲಿವುಡ್‌ ಪರಂಪರೆಯ ಬ್ಯಾಟ್‌ಮನ್‌ ಕಥನಗಳನ್ನು ಅರಿಯದೇ ಇದ್ದರೆ ಈ ಚಿತ್ರದ ಬಗ್ಗೆ ಪೂರ್ವಾಗ್ರಹ ಇರುವುದಿಲ್ಲ. ಅರಿತರೆ ಜೋಕರ್‌ ಪಾತ್ರವನ್ನು ಲೆಡ್ಜರ್‌ಗೆ ಹೋಲಿಸುವ ಅಪಾಯವೂ ಇದೆ. ಅದೃಷ್ಟವಶಾತ್‌ ಫೀನಿಕ್ಸ್‌ ಇಲ್ಲಿ ಹೀಥ್‌ ಲೆಡ್ಜರ್‌ಗೆ ಸರಿಸಟಿಯಾದ ನಟನೆಯನ್ನೇ ನೀಡಿದ್ದಾರೆ. ಮೂರು ಸಲ ಆಸ್ಕರ್‌ ಪ್ರಶಸ್ತಿಗೆ ನಾಮಕರಣಗೊಂಡಿದ್ದ ಫೀನಿಕ್ಸ್‌ ಈ ಬಾರಿ ಪ್ರಶಸ್ತಿ ಗೆಲ್ಲುವರೆಂಬ ಊಹೆ ನನ್ನದು.

ಬಾಲ್ಯದಿಂದ ತನ್ನ ಮಲತಂದೆಯ ಹಿಂಸೆಗೆ ಒಳಗಾಗಿ ಬೆಳೆದ ಜೋಕರ್‍ (ಪಾತ್ರದ ಹೆಸರು ಆರ್ಥರ್‌ ಫ್ಲೆಕ್‌) ತನ್ನ ತಾಯಿಯನ್ನು ಇನ್ನಿಲ್ಲದಂತೆ ಪ್ರೀತಿಸುವ, ಆರೈಕೆ ಮಾಡುವ ಮಗ; ಅನಾರೋಗ್ಯದಿಂದ ಹಾಸಿಗೆ ಹಿಡಿದ ಅಮ್ಮನಿಗೆ ಸ್ನಾನ ಮಾಡಿಸುವಂತಹ ದಯಾಳು. ಆದರೂ ಅವನೊಳಗೆ ವಿಫಲತೆಯ ದಳ್ಳುರಿ ಹಬ್ಬುತ್ತಿರುತ್ತದೆ. ಪದೇ ಪದೇ ವಿದೂಷಕನ ಕೆಲಸ ಕೈಬಿಡುತ್ತದೆ. ಈ ಮಧ್ಯೆ ಅವನಿಗೆ ಇನ್ನೊಂದು ನರಸಂಬಂಧಿತ ಕಾಯಿಲೆ ಇದೆ: ಕೆಲವು ಸಂದರ್ಭಗಳಲ್ಲಿ ಬೇಡವೆಂದರೂ ಅವನಿಗೆ ಗಹಗಹಿಸಿ ನಗಬೇಕು ಅನ್ನಿಸುತ್ತದೆ. ಫಿಟ್ಸ್‌ ಬರುವವರು ಇಟ್ಟುಕೊಳ್ಳುವಂತೆ ತನ್ನ ರೋಗವನ್ನು ವಿವರಿಸಲು ಒಂದು ಕಾರ್ಡನ್ನೂ ಅವನು ಪ್ಯಾಂಟಿನಲ್ಲಿ ಇಟ್ಟುಕೊಂಡಿರುತ್ತಾನೆ.

ಆದರೆ ಜಗತ್ತು ಅವನನ್ನು ಕೆಟ್ಟದಾಗಿ ನೋಡಿಕೊಳ್ಳುತ್ತದೆ; ಜನ ಅವನನ್ನು ಹೀಯಾಳಿಸುತ್ತಾರೆ…. ಹೀಗೆ ಏನೇನೋ ಸಂಕೀರ್ಣ ಕಾರಣಗಳು ಒಂದಕ್ಕೊಂದು ಸಿಲುಕಿಕೊಂಡು ಆರ್ಥರ್‌ ಕುಗ್ಗುತ್ತ ಹೋಗುತ್ತಾನೆ. ಅವನ ಆತ್ಮರಕ್ಷಣೆಗೆ ಸಹ ವಿದೂಷಕ ಕೊಟ್ಟ ಪಿಸ್ತೂಲನ್ನು ಇಂತಹ ಹೀಯಾಳಿಕೆಯ ಸಂದರ್ಭದಲ್ಲೇ ಬಳಸಿ ಗೋಥಾಮ್‌ ನಗರ (ಇದು ಬ್ಯಾಟ್‌ಮನ್‌ ಇರುವ ಜಿಲ್ಲೆ)ದ ಮೆಟ್ರೋದಲ್ಲಿ ಮೂವರು ಪುಂಡರನ್ನು ಕೊಲ್ಲುತ್ತಾನೆ. ಸಿರಿವಂತರ ವಿರುದ್ಧದ ದಂಗೆಯೇ ಶುರುವಾಗಲು ಆರ್ಥರ್‍ ಕಾರಣನಾಗುತ್ತಾನೆ. ಟಿವಿರಿಯಾಲಿಟಿ ಶೋನ ನಿರೂಪಕನನ್ನೇ ಲೈವ್‌ ಆಗಿ ಕೊಲೆ ಮಾಡಿಯೂ ದಂಗೆಕೋರರ ನೆರವಿನಿಂದ ಬಚಾವಾಗುತ್ತಾನೆ.. ಇಡೀ ಊರಿನ ಬಂಡಾಯದ ನಾಯಕನಾಗುತ್ತಾನೆ.

ಇದು ಎರಡು ಪ್ಯಾರಾಗಳಲ್ಲಿ ಹೇಳಬಹುದಾದ ಕಥೆ. ಆದರೆ ಸಿನೆಮಾ ಎಂದರೆ  ಕಥೆಯಷ್ಟೇ ಅಲ್ಲ; ಅದು ಹಲವು ಪದರಗಳ ಆಖ್ಯಾನ. ಇದು ಸಿನೆಮಾ ಎಂದು ಎಷ್ಟೇ ಅಂದುಕೊಂಡರೂ ವ್ಯಕ್ತಿಯೊಬ್ಬ ಹೇಗೆ ಕೆಡುಘಟನೆಗಳ ಹಾದಿಯಲ್ಲೇ ಸಾಗಿ ಹಿಂಸೆಯಿಂದ ತನ್ನೆಲ್ಲ ನೋವಿಗೆ ಮುಕ್ತಿ ಪಡೆಯುತ್ತಾನೆ ಎಂಬ ಈ ಕಥನ ರುದ್ರಭೀಕರವಾಗಿದೆ. ‘ನನ್ನ ಬದುಕು ಇಷ್ಟು ದಿನ ಟ್ರಾಜೆಡಿ ಅಂದುಕೊಂಡಿದ್ದೆ; ಈಗ ಅದು ಕಾಮೆಡಿ ಅಂತ ಗೊತ್ತಾಯ್ತು’ ಎಂಬ ಆರ್ಥರ್‌ನ ವಾಕ್ಕು ಸಮಕಾಲೀನ ಸಮಾಜದಲ್ಲಿ ಈ ಬಗೆಯ ಚಹರೆಗಳಾಗುವ ವ್ಯಕ್ತಿಗಳ ಸಮರ್ಥನೆಯೇನೋ ಅನ್ನಿಸಿಬಿಡುತ್ತದೆ. ಅದಕ್ಕೆಂದೇ ಅಮೆರಿಕಾದಲ್ಲಿ ಈ ಸಿನೆಮಾದ ಬಗ್ಗೆ ವದಂತಿಗಳು ಹುಟ್ಟಿಕೊಂಡಿವೆ. ನಿಜಬದುಕಿನಲ್ಲೂ ಇದು ದಂಗೆ ಎಬ್ಬಿಸಬಹುದು ಎಂಬ ಭೀತಿ ಹಲವರಲ್ಲಿ ಇದೆಯಂತೆ! ಏನೇ ಇರಲಿ, ಹಾಲಿವುಡ್‌ ರಂಗದಲ್ಲಿ ಹಣ ಮಾಡಲೆಂದೇ ಬರುವ ಹಲವು ಸಿನೆಮಾಗಳ ನಡುವೆ ಇದೊಂದು ವಿಶಿಷ್ಟ, ನೆನಪಿನಲ್ಲಿ ಸದಾ ಉಳಿಯುವ ನಿರ್ಮಾಣ. ಕೆಡುಕಿನ ಬೀಜ ಹೀಗೂ ಹುಟ್ಟಿರಬಹುದು ಎಂಬ ಅನುಮಾನದ ಬೀಜವನ್ನು ನಿಮ್ಮೊಳಗೆ ಬಿತ್ತುವ ಈ ಸಿನೆಮಾವನ್ನು ನೀವು ಖಂಡಿತ ನೋಡಿ – ಕೊಂಚ ಗಟ್ಟಿ ಹೃದಯ ಮಾಡಿಕೊಂಡು!   

(ಸಿನೆಮಾವು A ಪ್ರಮಾಣಪತ್ರ ಹೊಂದಿದೆ)

ನಾನು ಮೆಚ್ಚಿದ ಒಂದು ವಿಮ಼ರ್ಶೆ ಇಲ್ಲಿದೆ: https://www.theverge.com/2019/10/4/20899422/joker-movie-review-todd-phillips-joaquin-phoenix-incel-violence-dc-comics-batman

Leave a Reply

Your email address will not be published. Required fields are marked *