ಉತ್ತರ ಕನ್ನಡದ ನಶಿಸಿಹೋಗುತ್ತಿರುವ ಜಾನಪದ ಸಂಪತ್ತನ್ನು ಸಂಗ್ರಹಿಸಿ, ಉಳಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದ ಮಹಾಚೇತನ. ಅಧ್ಯಾಪನದಿಂದ ನಿವೃತ್ತಿಯಾದ ನಂತರ ತಮ್ಮೆಲ್ಲ ಸಮಯವನ್ನು ಜಾನಪದ ಸಾಹಿತ್ಯ ಸಂಗ್ರಹ ಮತ್ತು ಸಂರಕ್ಷಣೆಯ ಕೆಲಸಕ್ಕೇ ಮೀಸಲಿಟ್ಟಿದ್ದ ಸಮಾಜಜೀವಿ. ಜಾನಪದ ಕ್ಷೇತ್ರದಲ್ಲಿ ಅವರ ಸಾಧನೆ ಅಪೂರ್ವ. ಅವರಿರುವಾಗ ಪ್ರಕಟವಾದ ಪುಸ್ತಕಗಳು ಹಾಗೂ ಅವರೇ ಬರೆದ ಪಾಂಡಿತ್ಯ ಪೂರ್ಣ ಪೀಠಿಕೆ, ಮುನ್ನುಡಿಗಳು ಜಾನಪದ ಕ್ಷೇತ್ರದಲ್ಲಿ ಅವರ ಅಳವಾದ ಅಧ್ಯಯನವನ್ನು ಎತ್ತಿ ತೋರಿಸುತ್ತವೆ. ಉತ್ತರ ಕನ್ನಡದ ಬುಡಕಟ್ಟು ಜನಾಂಗಗಳ ಕುರಿತ ಅವರ ಅಧ್ಯಯನಗಳು ಅನನ್ಯ; ಸಂಶೋಧನಾ ಪ್ರಬಂಧಗಳು, ಭಾಷಣಗಳು, ಜಾನಪದ ಲೇಖನಗಳು ಅಸಂಖ್ಯ.
ಈಗಾಗಲೇ ಅವರ 84 ಕೃತಿಗಳು ಪ್ರಕಟಣೆ ಕಂಡಿವೆ. ಅವರ ಅಪಾರ ಸಂಗ್ರಹದಲ್ಲಿ ವೈದ್ಯಕೀಯ ಸಾಹಿತ್ಯವೂ ಸಾಕಷ್ಟಿದೆ. ಅವುಗಳನ್ನು ಮರುಪ್ರಕಟಿಸುವ ಯೋಜನೆಯನ್ನು ಈ ಮೂಲಕ ಆರಂಭಿಸಲಾಗಿದೆ. ಅವರ ಪುತ್ರಿ ಶ್ರೀಮತಿ ರೇಣುಕಾ ರಾಮಕೃಷ್ಣ ಭಟ್ ರವರು ಈ ಸಂಗ್ರಹಗಳನ್ನು ನಾಡಿಗಾಗಿ ಸಂರಕ್ಷಿಸಿ, ಸಂಪಾದಿಸಿ ಕೊಟ್ಟಿದ್ದಾರೆ.
ಈ ಪುಸ್ತಕಗಳಲ್ಲಿ ಕೆಲವು ಅಂಶಗಳು ಕಾಲಬಾಹಿರವೆಂದು ಅನ್ನಿಸಿದರೂ, ದಾಖಲಾತಿಯ ಹಿನ್ನೆಲೆಯಲ್ಲಿ ಹಾಗೆಯೇ ಪ್ರಕಟಿಸಲಾಗಿದೆ.
