ಆಗಸ್ಟ್ 30 ಕ್ಕೆ 75ರ ವಯಸ್ಸನ್ನೂ, ಆರು ದಶಕಗಳ ಹಿಂದುಸ್ತಾನಿ ಸಂಗೀತ ಆರಾಧನೆಯನ್ನೂ ದಾಟಿರುವ ಪಂಡಿತ ಶ್ರೀ ಗಣಪತಿ ಭಟ್ ಹಾಸಣಗಿಯವರಿಗೆ ನನ್ನ ಹೃತ್ಪೂರ್ವಕ ಶುಭಾಶಯಗಳು.
ಹಿಂದುಸ್ತಾನಿ ಸಂಗೀತದ ಬಗ್ಗೆ ಒಲವು ಮೂಡಿದ 2000ದ ದಶಕದ ಆ ದಿನಗಳಲ್ಲಿ ನನಗೆ ಬೆಂಗಳೂರಿನ ಸಂಗೀತ ಕಚೇರಿಗಳನ್ನು ಹುಡುಕಿಕೊಂಡು ಹೋಗುವುದೇ ಕೆಲಸವಾಗಿತ್ತು. ಕೆನರಾ ಯೂನಿಯನ್, ಭಾರತೀಯ ವಿದ್ಯಾಭವನದ ಖೀಂಚಾ ಸಭಾಂಗಣ, ಪಿಟೀಲ್ ಚೌಡಯ್ಯ ಸಭಾಂಗಣ, ರವೀಂದ್ರ ಕಲಾಕ್ಷೇತ್ರ, ಶ್ರೀ ರಾಮ ಲಲಿತ ಕಲಾ ಮಂದಿರ, ಸುಚಿತ್ರಾ, ಟೌನ್ ಹಾಲ್, ಬಿಕೆಎಫ್ ಫೌಂಡೇಶನ್ ಈಗಲೂ ನಡೆಸುತ್ತಿರುವ ಜೆಎಸ್ಎಸ್ ಸಭಾಂಗಣದ ಸಂಗೀತ ಹಬ್ಬ, ಬೆಂಗಳೂರು ಹಬ್ಬ, ಐಐಎಸ್ಸಿ ಜಿಮಖಾನಾದಲ್ಲಿ ನಡೆಯುತ್ತಿದ್ದ ಗುರುರಾಜ್ ತೊರವಿಯವರ ಅಹೋರಾತ್ರಿ ಸಂಗೀತ ಸಮ್ಮೇಳನ, ನಾಕೋಡ ಅಹೋರಾತ್ರಿ ಸಮ್ಮೇಳನ, ಐಐಎಂಬಿಯಲ್ಲಿ ಸ್ಪಿಕ್ಮೆಕೇ ಯ ಅಹೋರಾತ್ರಿ ಸಂಗೀತ ಮೇಳ – ಒಂದೆ ಎರಡೆ? ಯಾವುದನ್ನೂ ತಪ್ಪಿಸದಿರಲು ಯತ್ನಿಸಿದ್ದೆ. ಅವೆಲ್ಲ ಈಗ ಸುಂದರ ನೆನಪು.

ಅಂತಹ ದಿನಗಳಲ್ಲೇ ಗಣಪತಿ ಭಟ್ಟರ ಐವತ್ತನೆಯ ವರ್ಷದ ಸಂದರ್ಭದಲ್ಲಿ ಖೀಂಚಾ ಸಭಾಂಗಣದಲ್ಲಿ ಸನ್ಮಾನ ಮತ್ತು ಸಂಗೀತ ಕಚೇರಿ ಏರ್ಪಾಟಾಗಿತ್ತು. ಸಭಾಂಗಣ ಕಿಕ್ಕಿರಿದಿತ್ತು. ಅಂದು ಪಂಡಿತ ಪರಮೇಶ್ವರ ಹೆಗಡೆಯವರೇ ಸನ್ಮಾನ ಭಾಷಣ ಮಾಡಿದರು ಎಂಬುದೂ ನನ್ನ ನೆನಪು.
ಗಣಪತಿ ಭಟ್ಟರದು ಜೇನಿನ ದನಿ. ಪಂಡಿತ ಬಸವರಾಜ್ ರಾಜಗುರುಗಳ ಪ್ರಮುಖ ಶಿಷ್ಯರಲ್ಲಿ ಒಬ್ಬರಾಗಿದ್ದ ಅವರಿಗೆ ಸಂಗೀತವೇ ತಪಸ್ಸು; ಅದೇ ಜೀವನ. ಮೊದಮೊದಲು ಮಹಾರಾಷ್ಟ್ರದಲ್ಲೇ ಹೆಚ್ಚು ಪ್ರಸಿದ್ಧಿ ಪಡೆದಿದ್ದರು; ಆ ಭಾಗದಲ್ಲಿ ಅವರ ಕಚೇರಿಗಳೆಂದರೆ ಜನ ಮುಗಿಬೀಳುತ್ತಿದ್ದರು. ಯಲ್ಲಾಪುರದವರಂತೆ ಎಂಬ ಮಾಹಿತಿ ತಡವಾಗಿ ಗೊತ್ತಾದಮೇಲೆ ನನಗೆ ಅವರ ಮೇಲಿನ ಅಭಿಮಾನ ಇನ್ನೂ ಹೆಚ್ಚಾಯ್ತು.
ಹಾಸಣಗಿಯಂತಹ ಹಳ್ಳಿಯಲ್ಲಿ ಹುಟ್ಟಿ ಬೆಳೆದು ಹಿಂದುಸ್ತಾನಿ ಸಂಗೀತದ ಸಮಕಾಲೀನ ಸುಪ್ರಸಿದ್ಧ ಗಾಯಕರಲ್ಲಿ ಒಬ್ಬರಾಗಿರುವುದು ಕನ್ನಡಿಗರೆಲ್ಲರ ಹೆಮ್ಮೆ
ಬೆಂಗಳೂರಿನಲ್ಲಿ ಹಲವಾರು ಬಾರಿ ಅವರ ಕಚೇರಿಗಳನ್ನು ಕೇಳಿ ಆನಂದಿಸಿದ್ದೇನೆ. ಮೆಲುದನಿಯ ಆಲಾಪದಿಂದ ಆರಂಭಿಸಿ ತನ್ಮಯತೆಯಿಂದ ರಾಗವೊಂದನ್ನು ಅರಳಿಸಿದರೆಂದರೆ ಇಡೀ ಸಭೆ ಮಂತ್ರಮುಗ್ಧವಾಗುತ್ತದೆ. ಗ್ಯಾಲರಿಗೆಂದು ಅವರು ಹಾಡುತ್ತಲೇ ಇರಲಿಲ್ಲ. ಶಾಸ್ತ್ರೀಯ ಚೌಕಟ್ಟಿನಲ್ಲೇ ಮನೋಧರ್ಮವನ್ನು ಮೂಡಿಸುತ್ತ ತನ್ನೊಳಗಿನ ಭಾವಸ್ಫುರಣವನ್ನೇ ಸ್ವಯಂ ಆನಂದಿಸುತ್ತ ಹಾಡುತ್ತಾರೆ; ಅವರು ವೇದಿಕೆಯಲ್ಲಿ ಇರುವುದರಿಂದ, ಅಲ್ಲಿ ಧ್ವನಿವರ್ಧಕ ವ್ಯವಸ್ಥೆ ಇರುವುದರಿಂದ ನಾವು ಅವರ ಗಾಯನವನ್ನು ಕೇಳಿ ಆನಂದಿಸುತ್ತೇವೆ. ಹೊರತು ಅವರು ತನ್ನ ಪ್ರೇಕ್ಷಕರ ಸಂಖ್ಯೆ ಎಷ್ಟು, ಅವರು ಚಪ್ಪಾಳೆ ತಟ್ಟುತ್ತಾರೆಯೆ – ಒಂದನ್ನೂ ಗಮನಿಸದ ನಿರ್ಲಿಪ್ತರು. ಅವರು ನಾದಗ್ರಾಮ ಎಂದು ಮನೆಗೇ ಹೆಸರಿಟ್ಟು ಮನೆಯಲ್ಲೇ ಗುರುಕುಲ ಪದ್ಧತಿಯಲ್ಲಿ ಕಲಿಸುವಾಗಲೂ ಅದೇ ತಾದಾತ್ಮ್ಯ. ಅದೇ ಅನುಭಾವ; ಅದೇ ಏಕಾಗ್ರತೆ.
ಹಿಂದುಸ್ತಾನಿ ಸಂಗೀತವನ್ನು ಜೀವನದ್ರವ್ಯವೆಂಬಂತೆ ಆದರಿಸಿ, ಆರಾಧಿಸಿ, ನಮಿಸಿ, ಒಲಿಸಿಕೊಂಡು ಹಾಡುವ ಕೆಲವೇ ಕೆಲವು ಅಪ್ಪಟ ಕಲಾವಿದರಲ್ಲಿ ಗಣಪತಿ ಭಟ್ಟರೂ ಮೇಲಿನ ಸ್ಥಾನದಲ್ಲಿದ್ದಾರೆ. ಕನ್ನಡ ಸಾಹಿತ್ಯವನ್ನೂ ಗಂಭೀರವಾಗಿ ಓದಿರುವ ಕೆಲವೇ ಕಲಾವಿದರಲ್ಲಿ ಅವರೂ ಒಬ್ಬರು.
ಅವರು 2001ರಲ್ಲಿ, ಅಂದರೆ ಅವರ ಐವತ್ತನೆಯ ವರ್ಷದ ಸಂದರ್ಭದಲ್ಲಿ ಬಿಡುಗಡೆ ಮಾಡಿದ ಕಾಂಪಾಕ್ಟ್ ಡಿಸ್ಕನ್ನು ಆಗ ಖರೀದಿಸಿದ್ದು ಈಗಲೂ ನನ್ನ ಬಳಿ ಇದೆ. ಹಿಂದುಸ್ತಾನಿ ಸಂಗೀತವು ಸದಾ ಚಲನಶೀಲ; ಒಮ್ಮೆ ಹಾಡಿದ ಹಾಡು ಅದೇ ಗಾಯಕರಿಂದ ಇನ್ನೊಮ್ಮೆ ಮೂಡಿದಾಗ ಬೇರೆಯೇ ಚಲನೆ; ಬೇರೆಯೇ ಓಘ; ಬೇರೆಯೇ ಅಲಂಕಾರ; ಬೇರೆಯೇ ಆಲಾಪ-ಜೋಡ್ ಜಾಲ. ಆದ್ದರಿಂದ ಇಂತಹ ಮಹಾನ್ ಗಾಯಕರ ಹಳೆಯ ಆಲ್ಬಮ್ ಗಳನ್ನು ಮುಖ್ಯವಾಗಿ ಹಿಂದುಸ್ತಾನಿ ಸಂಗೀತ ಅಭ್ಯಾಸಿಗಳು ಸಂಗ್ರಹಿಸಿ ಕೇಳಬೇಕು. ಹಿಂದುಸ್ತಾನಿ ಸಂಗೀತ ಪರಂಪರೆಯ ಚಲನಶೀಲ ಚಹರೆಯನ್ನು ಇಂತಹ ಆಲ್ಬಮ್ ಗಳಿಂದ ತಿಳಿಯಬಹುದು.
ಗಣಪತಿ ಭಟ್ಟರು ಸಮಕಾಲೀನ ಕಲಾವಿದರಾಗಿ ನಮಗೆಲ್ಲ ಸಂಗೀತದ ಸುಧೆಯನ್ನು ನೀಡಿದ್ದಾರೆ ಎಂಬುದು ನಮ್ಮ ಭಾಗ್ಯ.
ಅವರಿಗೆ ದೇವರು ಆಯುರಾರೋಗ್ಯವನ್ನು ದಯಪಾಲಿಸಿ ನಮ್ಮೊಂದಿಗೆ ಇನ್ನೂ ಹಲವಾರು ವರ್ಷಗಳ ಕಾಲ ಇದ್ದು ಸಂಗೀತದ ಸವಿಗಂಪನ್ನು ಹಬ್ಬಿಸಲಿ ಎಂದು ಪ್ರಾರ್ಥಿಸುತ್ತೇನೆ.
ಅವರ ಮಗ ಕ್ರಿಯಾಶೀಲ ಜೀವಿ ವಸಂತ ಭಟ್ಟ ನನ್ನ ಪ್ರಿಯ ಮಿತ್ರನಾಗಿರುವುದು ಕೂಡ ನನಗೆ ಸಂತೋಷ ತಂದಿದೆ
