ಪ್ರಿಯ ರಾಕಿಂಗ್ ಸ್ಟಾರ್ ಯಶ್…..
ನೀವೇನಾದ್ರೂ ಇವತ್ತು ಧಾರವಾಡದ ಐನಾಕ್ಸ್ ಮಾಲಿನ ಥಿಯೇಟರ್ 1ರಲ್ಲಿ ಟಾಕ್ಸಿಕ್ ಸಿನೆಮಾದಲ್ಲಿ ನಟಿಸ್ತಾ ಮಧ್ಯಂತರದಲ್ಲಿ ಥಿಯೇಟರ್ 2 ಗೆ ಬಂದಿದ್ರೆ, ಹನುಮಾನ್ ಅಂಶ್ ಸಿನೆಮಾದ ಕೆಲವು ದೃಶ್ಯಗಳನ್ನು ನೋಡಿರ್ತಿದ್ರಿ. ಅಕಸ್ಮಾತ್ ನೋಡಿದ್ರೆ ಬಹುಶಃ ಟಾಕ್ಸಿಕ್ ಸಿನೆಮಾದ ಇನ್ನರ್ಧ ಭಾಗದ ಶೋನಲ್ಲಿ ನೀವು ಇರ್ತಾನೇ ಇರಲಿಲ್ಲ!!!
……..
ಯಶ್ ನಿಜಕ್ಕೂ ಸಿಕ್ಕಿದ್ರೆ ಈ ಮಾತು ಹೇಳ್ತಾ ಇದ್ದೆ ಅನ್ಸುತ್ತೆ. ‘ಹನುಮಾನ್ ಅಂಶ್’ ಸಿನೆಮಾ ನೋಡಿದ ಮೇಲೆ, ಫೇಸ್ ಬುಕ್ಕಿನಲ್ಲಿ ಟಾಕ್ಸಿಕ್ ಸಿನೆಮಾ ಕುರಿತ ಬಗೆಬಗೆಯ ವಿಮರ್ಶೆಗಳನ್ನು ನೆನಪಿಸಿಕೊಂಡಾಗ ಹೀಗೆಲ್ಲ ಹೇಳಬಹುದೇನೋ ಅನ್ನಿಸಿದ್ದು ನಿಜ. ಏಕೆಂದರೆ ನೀಮ್ ಕರೋಲಿ ಬಾಬಾ (ನೀಬ್ ಕರೋರಿ ಬಾಬಾ ಅಂತಾನೂ ಹೇಳ್ತಾರೆ) ಅವರ ಜೀವನ ಕುರಿತ ಈ ಸಿನೆಮಾವನ್ನು ಅದೇ ಥಿಯೇಟರ್ 2 ರಲ್ಲಿ ನೋಡಿದೆ.

……..
ಸಾಧು ಸಂತರ ನಿಜಜೀವನದ ಸಿನೆಮಾ ಎಂದಕೂಡಲೇ ಪವಾಡಗಳು ಇದ್ದೇ ಇರುತ್ತವೆ ಎಂದು ಊಹಿಸಬಹುದು. ಇವೆ ಕೂಡ. ಆದರೆ ಈ ಸಿನೆಮಾದ ಅತ್ಯುತ್ತಮ ಅಂಶಗಳೆಂದರೆ: ಪ್ರಬುದ್ಧ ನಟನೆ, ಗುಣಮಟ್ಟದ ಮೂಲ ಹಾಡು – ಸಂಗೀತ, ಅತ್ಯದ್ಭುತ ಪ್ರೊಡಕ್ಷನ್ ಟ್ರೀಟ್ ಮೆಂಟ್, ಎಲ್ಲೂ ಬೇಸರ ಮೂಡಿಸದ ಕಥಾಹರಿವು. ಸಿನೆಮಾ ಮುಗಿಯುವ ಕ್ಷಣ ಇನ್ನೂ ದೂರ ಇದೆ ಎಂಬ ಸಮಾಧಾನ ಮೂಡುವ ಹೊತ್ತಿಗೇ ಟೈಟಲ್ ಕಾರ್ಡುಗಳು ಮೂಡುತ್ತವೆ. ಬಹುಶಃ ಎರಡನೆಯ ಭಾಗವೂ ಇರಬಹುದು.
ಹಾಗೆ ನೋಡಿದರೆ, ನೀಮ್ ಕರೋಲಿ ಬಾಬಾ ಅವರ ಆಧ್ಯಾತ್ಮಿಕ ಚಿಂತನೆಗಳು ಈಗಲೂ ಜಗತ್ತನ್ನು ಪ್ರಭಾವಿಸಿವೆ. ಆಪಲ್ ಸಂಸ್ಥೆಯ ಸ್ಥಾಪಕ ಸ್ಟೀವ್ ಜಾಬ್ಸ್ 1974ರಲ್ಲಿ ಮಿತ್ರ ರಾಬರ್ಟ್ ಫ್ರೀಡ್ ಲ್ಯಾಂಡ್ ಸಲಹೆಯಂತೆ ನೀಮ್ ಕರೋಲಿ ಬಾಬಾ ಅವರನ್ನು ಕಾಣಲು ನೈನಿತಾಲಿಗೆ ಹೋಗುತ್ತಾರೆ. ಆದರೆ ಹಿಂದಿನ ವರ್ಷವೇ ಬಾಬಾ ನಿಧನರಾಗಿರುತ್ತಾರೆ. ಅದೇ ಸಮಯಕ್ಕೆ ಸ್ಟೀವ್ ಜಾಬ್ಸ್ ಗೆ ಅತಿಸಾರವಾಗಿ ಅಲ್ಲೇ ಉಳಿಯುತ್ತಾರೆ. ಆಟೋಬಯಾಗ್ರಫಿ ಆಫ್ ಎ ಯೋಗಿ ಪುಸ್ತಕವನ್ನು ಪದೇ ಪದೇ ಓದುತ್ತಾರೆ. ಇದೇ ಪ್ರವಾಸದಲ್ಲಿ ಅವರು ಮೊದಲು ಹರಿದ್ವಾರಕ್ಕೂ ಹೋಗಿ ಕುಂಭ ಮೇಳವನ್ನು ನೋಡಿದ್ದರು.
ಬಾಬಾರಿಂದಲೇ ‘ರಾಮ ದಾಸ್’ ಎಂದೇ ನಾಮಕರಣಗೊಂಡ, ಬಾಬಾರವರ ಜೊತೆ ಒಡನಾಡಿದ್ದ ರಿಚರ್ಡ್ ಆಲ್ಪರ್ಟ್ (1931–2019) ಬರೆದ Be here now ಪುಸ್ತಕವು ಸ್ಟೀವ್ ಮೇಲೆ ಅತ್ಯಂತ ಪ್ರಭಾವ ಬೀರಿತ್ತು. ಈ ಪುಸ್ತಕದಲ್ಲಿ ಬಾಬಾ ಅವರ ಬಗೆಗೆ ಮಾತ್ರವಲ್ಲ, ಸೈಕೆಡೆಲಿಕ್ ಔಷಧೀಯ ಸಂಗತಿಗಳ ಅನುಭವದ ಬಗ್ಗೆಯೂ ರಾಮದಾಸ್ ಬರೆದಿದ್ದಾರೆ. ಈ ಪುಸ್ತಕದಲ್ಲಿ ರಾಮದಾಸ್ ಬರೆದ ಗ್ರಾಫಿಕ್ ನಿರೂಪಣೆಗಳು ಗಮನಾರ್ಹ.
ಈ ಘಟನೆ ನಡೆದ ಹಲವು ದಶಕಗಳ ನಂತರ, 2015ರಲ್ಲಿ ನರೇಂದ್ರ ಮೋದಿ ಜೊತೆಗಿನ ಸಂವಾದದಲ್ಲಿ ಫೇಸ್ ಬುಕ್ ಸ್ಥಾಪಕ ಮಾರ್ಕ್ ಝುಕರ್ ಬರ್ಗ್ ಸ್ವತಃ ತಾನು ಫೇಸ್ ಬುಕ್ ಸಂಸ್ಥೆಯನ್ನೇ ಮಾರುವ ಯೋಚನೆಯಲ್ಲಿದ್ದಾಗ, ತನ್ನ ಮೆಂಟರ್ ಸ್ಟೀವ್ ಜಾಬ್ಸ್ ಭಾರತದ ‘ಆ ದೇಗುಲ’ಕ್ಕೆ ಹೋಗು ಎಂದು ಸೂಚಿಸಿದ್ದರೆಂದೂ, ತಾನು ಅಲ್ಲಿಗೆ ಹೋಗಿ ಬಂದ ಮೇಲೆ ಜಗತ್ತಿನ ಜನರನ್ನು ಪರಸ್ಪರ ಜೋಡಿಸುವ ತನ್ನ ಕೆಲಸದ ಮಹತ್ವ ಎಂಬುದು ಮತ್ತಷ್ಟು ಗಟ್ಟಿಯಾಯಿತೆಂದೂ ಹೇಳುತ್ತಾರೆ. (https://bit.ly/3TgUTjF)
ಬಾಬಾ ಅವರ ಪ್ರಭಾವದ ಬಗ್ಗೆ ಇನ್ನೂ ಕೆಲವು ದಾಖಲಿತ ಸಂಗತಿಗಳಿವೆ:

ಭಾರತದಲ್ಲಿ ಸಿಡುಬು(smallpox) ನಿವಾರಣಾ ಅಭಿಯಾನದ ರೂವಾರಿ ಲ್ಯಾರಿ ಬ್ರಿಲಿಯಂಟ್ ತನ್ನ ಅನುಭವಗಳನ್ನು ದಾಖಲಿಸುತ್ತ, ನೀಮ್ ಕರೋಲಿ ಬಾಬಾರವರೇ ತನಗೆ ಸಿಡುಬು ನಿವಾರಣಾ ಅಭಿಯಾನಕ್ಕೆ ಪ್ರೇರಣೆಯಾಗಿದ್ದೇ ಬಾಬಾ ಎಂದಿದ್ದಾರೆ (Sometimes Brilliant: Larry Brilliant, 2016).ಮುಂದೆ ಬ್ರಿಲಿಯಂಟ್ ಮತ್ತು ಸ್ಟೀವ್ ಜಾಬ್ಸ್ ಮಿತ್ರರಾಗಿದ್ದರು.

ನನಗೆ ಸಿಕ್ಕಿದ ಒಂದು ಮಾಹಿತಿಯ ಪ್ರಕಾರ ಸ್ಟೀವ್ ಜಾಬ್ಸ್ ತೀರಿಕೊಂಡಾಗ, ಅವರ ಖಾಸಗಿ ಕೋಣೆಯಲ್ಲಿ ನೀಮ್ ಕರೋಲಿ ಬಾಬಾ ಅವರ ಭಾವಚಿತ್ರ ಇತ್ತು ಎಂದು ಅವರ ನಿಧನದ ನಂತರ ಸ್ವತಃ ಲ್ಯಾರಿ ಬ್ರಿಲಿಯಂಟ್ ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ. ಲ್ಯಾರಿ ಅವರ ಪತ್ನಿ ಗಿರಿಜಾರವರು ಒಮ್ಮೆ ಬಾಬಾ ಬಳಸುತ್ತಿದ್ದ ಒಂದು ಕಂಬಳಿಯನ್ನು ಸ್ಟೀವ್ ಜಾಬ್ಸ್ ಗೆ ಕೊಟ್ಟಿದ್ದರು.


ಹನುಮಾನ್ ಅಂಶ್ ಸಿನೆಮಾದಲ್ಲಿ ಸ್ಟೀವ್ ಜಾಬ್ಸ್, ಮಾರ್ಕ್ ಇನ್ನೂ ಬಂದಿಲ್ಲ. ಆದ್ದರಿಂದ ಎರಡನೆಯ ಭಾಗದಲ್ಲಿ ಇವೆಲ್ಲ ಇರಬಹುದು ಎಂದು ಊಹಿಸುತ್ತೇನೆ. ಎರಡು ಕೋಟಿ ರೂ. ಬಜೆಟ್ಟಿನ ಈ ಸಿನೆಮಾ ಇವತ್ತಿಗಾಗಲೇ 40 ಕೋಟಿ ರೂ. ಗಳಿಸಿ ಶೇಕಡಾವಾರು ಲಾಭದ ಲೆಕ್ಕದಲ್ಲಿ ದಾಖಲೆ ಬರೆದಿದೆ. ನೀಮ್ ಕರೋಲಿ ಬಾಬಾ ಅವರ ಮೇಲಿನ ಶ್ರದ್ಧೆಯಿಂದ ಸಿನೆಮಾ ನಿರ್ಮಾಣವಾಗಿದೆ ಎಂದಮೇಲೆ ಸ್ಟೀವ್ ಜಾಬ್ಸ್, ಝುಕರ್ ಬರ್ಗ್ ಅಂತಹವರನ್ನೇ ಪ್ರಭಾವಿಸಿದ ಸಂತನ ಕುರಿತ ಸಿನೆಮಾ ಗೆಲ್ಲದೆ ಇರುತ್ತದೆಯೆ? ನಾನೂ ಇದ್ದ ಇವತ್ತಿನ ಧಾರವಾಡದ ಶೋ ಹೌಸ್ ಫುಲ್ ಆಗಿತ್ತು!
‘ಎಮೋಶನಲ್ ಇಂಟೆಲಿಜೆನ್ಸ್’ ಪದಗುಚ್ಛವನ್ನು ವಿಶ್ವದಾದ್ಯಂತ ಪ್ರಚುರಪಡಿಸಿದ ಡೇನಿಯೆಲ್ ಗೋಲ್ ಮನ್ ಕೂಡಾ ಬಾಬಾ ಸಹವಾಸದಲ್ಲಿದ್ದರು.
ಬಾಬಾ ಸಹವಾಸದಿಂದಾಗಿ ಜೆಫ್ರಿ ಕಾಗೆಲ್ ತನ್ನ ಹೆಸರನ್ನು ಕೃಷ್ಣದಾಸ್ ಎಂದು ಬದಲಿಸಿಕೊಂಡರು. ಅವರು ಪಾಶ್ಚಾತ್ಯ ದೇಶಗಳಲ್ಲಿ ಕೀರ್ತನೆಗಳಿಂದಲೇ ಆಧ್ಯಾತ್ಮಿಕತೆಯನ್ನು ಸಾರಿದರು.
ಅಂದ್ರೆ ವೈದ್ಯಕೀಯ ರಂಗ, ಸಂಗೀತ, ತಂತ್ರಜ್ಞಾನ, ಆಧ್ಯಾತ್ಮಿಕತೆ, ಸಿಲಿಕಾನ್ ಕಣಿವೆ ಕ್ರಾಂತಿ – ಇವೆಲ್ಲದರ ಮೇಲೂ ನೀಮ್ ಕರೋಲಿ ಬಾಬಾ ಅವರ ಪ್ರಭಾವ ಇತ್ತು ಎಂದು ಹೇಳಲು ಯಾವ ಸಮಸ್ಯೆಯೂ ಇಲ್ಲ. ಈ ವ್ಯಕ್ತಿಗಳು ಸಾಮಾನ್ಯರೇನೂ ಆಗಿರಲಿಲ್ಲ; ಸ್ವತಃ ತಮ್ಮ ಪ್ರತಿಭೆಯಿಂದಲೇ ಬೆಳೆದವರು. ಆದಾಗ್ಯೂ ಅತ್ಯಂತ ಗೌರವದಿಂದ ನೀಮ್ ಕರೋಲಿ ಬಾಬಾರನ್ನು ಸ್ಮರಿಸುತ್ತಾರೆ.
ಬಾಬಾ ಅವರಿಗೆ ನೂರಾರು ಸೆಲೆಬ್ರಿಟಿಗಳು, ರಾಜಕಾರಣಿಗಳು ಭಕ್ತರು ಎಂದು ತಿಳಿದುಕೊಂಡೆ. ಆದರೆ ತಮ್ಮ ಜೀವನದ ಮೇಲೆ ಪರಿಣಾಮ ಬೀರಿದ ಬಗ್ಗೆ ಖಚಿತವಾಗಿ ಹೇಳಿದ ಕೆಲವರನ್ನಷ್ಟೆ ಇಲ್ಲಿ ಉದಾಹರಿಸಿದ್ದೇನೆ.
ಯಾವ ನಿರೀಕ್ಷೆಗಳೂ ಇಲ್ಲದೆಯೇ ಈ ಸಿನೆಮಾ ನೋಡಿದ ಮೇಲೆ ನನಗೆ ವಿಷಪೂರಿತ (TOXIC) ವಾತಾವರಣದಿಂದ ಹೊರಬಂದು ನಿರಾಳವಾಗಿ ಉಸಿರಾಡಿದ ಅನುಭವ ಆಗಿದ್ದು ಮಾತ್ರ ನಿಜ!
ಮಲೈ ಮಹದೇಶ್ವರನ ಸನ್ನಿಧಿಗೆ ಹೋದಾಗಲೆಲ್ಲ ಸಿಗುವ ಬಣ್ಣಿಸಲಾಗದ ಸಮಾಧಾನವೂ ಬಹುಶಃ ಈ ಬಗೆಯ ಪ್ರಭಾವವೇ ಇರಬಹುದು ಎಂದು ಈಗ ಅನ್ನಿಸುತ್ತಿದೆ
