Facebook X (Twitter) Instagram
    Wednesday, November 29
    Facebook X (Twitter) Instagram Pinterest YouTube
    ಬೇಳೂರುಸುದರ್ಶನ
    • ಮುಖಪುಟ
    • ಲೇಖನಗಳು
    • ನನ್ನ ಪಯಣ
      • ನನ್ನ ಕಿರು ಪರಿಚಯ
    • ಕವನಗಳು
    • ಸುದ್ದಿ
    • ವಿಮರ್ಶೆ
    • ಸಣ್ಣ ಕಥೆಗಳು
    Subscribe
    ಬೇಳೂರುಸುದರ್ಶನ
    You are at:Home»ವಿಮರ್ಶೆ»`ELLE’ : ಬಾಳಿಗೊಂದು ಎಲ್ಲೆ ಎಲ್ಲಿದೆ? ನಿನ್ನಾಸೆಗೆಲ್ಲಿ ಕೊನೆಯಿದೆ? 
    ವಿಮರ್ಶೆ

    `ELLE’ : ಬಾಳಿಗೊಂದು ಎಲ್ಲೆ ಎಲ್ಲಿದೆ? ನಿನ್ನಾಸೆಗೆಲ್ಲಿ ಕೊನೆಯಿದೆ? 

    adminBy adminJanuary 2, 2017Updated:July 18, 2020No Comments3 Mins Read
    Facebook Twitter Pinterest LinkedIn Tumblr Email
    Share
    Facebook Twitter LinkedIn Pinterest Email

    (ಸೂಚನೆ: ಇದು ವಯಸ್ಕ ಸಿನೆಮಾದ ವಿಮರ್ಶೆ) 

    `ರೇಪ್‌’ – ಲೈಂಗಿಕ ಅತ್ಯಾಚಾರವನ್ನು ವೈಭವೀಕರಿಸುವುದು ಸರ್ವಥಾ ತರವಲ್ಲ. ಭಾರತದಲ್ಲಿರಲಿ, ವಿದೇಶಗಳಲ್ಲಿರಲಿ, ಹಲವು ಸಲ `ರೇಪ್‌’ನ್ನು ವರ್ಣಿಸುವ ಕೃತ್ಯಗಳೂ ಹಲವು ಜನಪ್ರಿಯರೆನ್ನಲಾದ ವ್ಯಕ್ತಿಗಳಿಂದಲೇ ನಡೆಯುತ್ತಿರುತ್ತದೆ. ಹಾಲಿವುಡ್‌ನ ಪ್ರಸಿದ್ಧ ನಿರ್ದೇಶಕ ಪಾಲ್‌ ವೀರೋವೆನ್‌ `ಎಲ್ಲೆ’ ಸಿನೆಮಾದಲ್ಲಿ ಇಂಥ ವಿಷಯವೊಂದನ್ನು ಎತ್ತಿಕೊಂಡು ತನ್ನ ನಿರ್ಭೀತ ಚಿತ್ರಕಥೆ-ದೃಶ್ಯಗಳಿಂದ ಶಾಕ್‌ ಕೊಟ್ಟಿದ್ದಾರೆ. ನಾನು ನೋಡಿದ ವಯಸ್ಕರ ಸಿನೆಮಾಗಳಲ್ಲೇ ಇದು ಅತ್ಯಂತ ಗಂಭೀರವಾದ ಮತ್ತು ಹಾಲಿವುಡ್‌ ನಿರ್ಮಾಣದಲ್ಲಿ ತುಂಬಾ ಆಳವಾದ ಬಹುಸ್ತರದ ಸಿನೆಮಾ ಆಗಿದೆ. `ಬೇಸಿಕ್‌ ಇನ್‌ಸ್ಟಿಂಕ್ಟ್‌’ ಎಂಬ ಇಂಥದ್ದೇ ಸಿನೆಮಾವನ್ನೂ ಪಾಲ್‌ ವೀರೋವೆನ್‌ ನಿರ್ದೇಶಿಸಿದ್ದಾರಾದರೂ, ಈ ಕಾಲದಲ್ಲಿ ರೇಪ್‌ ಕುರಿತ ಇಂಥದ್ದೊಂದು ಚಿತ್ರವನ್ನು ನಿರ್ಮಿಸುವುದು ಬಹುದೊಡ್ಡ ಸವಾಲಿನ ವಿಷಯ. ಅದನ್ನೂ ಪಾಲ್‌ ವೀರೋವೆನ್‌ `ಸಮರ್ಥವಾಗಿ’ ನಿಭಾಯಿಸಿದ್ದಾರೆ. ಆದರೂ, ಅಮೆರಿಕಾದಲ್ಲಿ ಚಿತ್ರೀಕರಣ ನಡೆಸುವುದೇ ಕಷ್ಟ ಎಂದು ಅರಿತ ಅವರು ಇದನ್ನು ಫ್ರೆಂಚ್‌ ನೆಲದಲ್ಲಿ, ಫ್ರೆಂಚ್‌ ಭಾಷೆಯಲ್ಲಿ, ಫ್ರೆಂಚ್‌ ನಟಿಯಿಂದ ರೂಪಿಸಿದ್ದಾರೆ. ಇಜಾಬೆಲ್‌ ಯೂಪರ್‍ ಈ ಚಿತ್ರದ ನಾಯಕಿಯಾಗಿ ಇಡೀ ಪಾತ್ರವನ್ನೇ ಆವಾಹಿಸಿಕೊಂಡು ನಟಿಸಿದ್ದಾರೆ. ಈ ಚಿತ್ರದಲ್ಲಿನ ಅವರ ನಟನೆ ಅವರ ಜೀವಿತದ ಈವರೆಗಿನ ಅತ್ಯುತ್ತಮ ನಟನೆ ಎಂದೇ ಮಾಧ್ಯಮಗಳು ಬಣ್ಣಿಸಿವೆ.

    ಮುಖವಾಡ ಧರಿಸಿದ ವ್ಯಕ್ತಿಯೊಬ್ಬ ಮನೆಗೆ ನುಗ್ಗಿ ತನ್ನನ್ನು ರೇಪ್‌ ಮಾಡಿದರೂ ಅದನ್ನು ಪೊಲೀಸರಿಗೆ ತಿಳಿಸದ ಮಿಶೆಲ್‌ ಲೆಬ್ಲಾಂಕ್‌ ಚಿತ್ರದ ನಾಯಕಿ. ಈಕೆಯ ತಾಯಿಯೋ ತರುಣರ ವ್ಯಾಮೋಹಿ. ತಂದೆ? ಸೈಕೋಪಾಥ್‌ ಆಗಿ ಹಲವರನ್ನು ಕೊಂದು ಪೆರೋಲ್‌ಗೆ  ಕಾಯುತ್ತಿರುವ ಮುದುಕ. ಮಗ? ಪರ ಯುವಕರೊಂದಿಗೆ ಸಂಗ ಇಟ್ಟುಕೊಂಡವಳನ್ನು ಮದುವೆಯಾದ ಷಂಡ. ಕಚೇರಿಯ ಸಹಪಾಲುದಾರಳ ಗಂಡನೊಂದಿಗೆ ಮಿಶೆಲ್‌ಳದು ಲೈಂಗಿಕ ಕುಚೇಷ್ಟೆಗಳ ಸಂಬಂಧ. ತನ್ನ  ಗಂಡನೊಂದಿಗೆ ಡೈವೋರ್ಸ್‌ ಪಡೆದ ಮಿಶೆಲ್‌ಗೆ ಎದುರು ಮನೆಯ ಪ್ಯಾಟ್ರಿಕ್‌ ಮೇಲೆ ವಿಪರೀತ ಮೋಹ. ಅಂದಮೇಲೆ ಗೊತ್ತಾಯಿತಲ್ಲ, ಮಿಶೆಲ್‌ ವ್ಯಕ್ತಿತ್ವ… ಇದು ಬಹುಶಃ ಫ್ರೆಂಚ್‌ ಸಮುದಾಯದಲ್ಲಿ ಸಹಜವಾದ ಸಂಬಂಧಗಳ ನಿದರ್ಶನವೂ ಇದ್ದೀತೇನೋ, ನನಗೆ ಫ್ರೆಂಚ್‌ ಸಮಾಜದ ಅರಿವು ಅಷ್ಟಿಲ್ಲ.

    elle

    ಇಂಥಪ್ಪ ಮಿಶೆಲ್‌ ಮೇಲೆ ಅವಳ ಅನಿಮೇಶನ್‌ ವಿಡಿಯೋ (ಅವೂ ಇಂಥ ಕಾಮದಾಟಗಳ ಚಿತ್ರೀಕರಣವೇ) ಸಂಸ್ಥೆಯಲ್ಲಿ ಇರುವ ಪಡ್ಡೆ ಯುವಕರಿಗೂ ಮೋಹ. ಆಕೆ ರೂಪಿಸಿದ ವಿಡಿಯೋ ಒಂದರಲ್ಲಿ ರಕ್ಕಸನಿಂದ ಅತ್ಯಾಚಾರಕ್ಕೆ ಒಳಗಾಗಿರುವ ಯುವತಿಯ ಮುಖಕ್ಕೆ ಮಿಶೆಲ್‌ಳ ಮುಖವನ್ನೇ ಜೋಡಿಸಿದ್ದೂ ಇದೆ.

    ಹೀಗೆ ಅತ್ಯಾಚಾರವಾದರೂ ತಣ್ಣಗೆ ಒಡೆದ ಗಾಜುಗಳನ್ನು ಗುಡಿಸಿ ಕೆಲಸಕ್ಕೆ ಮರಳುವ ಮಿಶೆಲ್‌ಳ ಮೇಲೆ ಮತ್ತೊಮ್ಮೆ ಅದೇ ಅತ್ಯಾಚಾರಿ ಆಕ್ರಮಣ ಮಾಡಿದಾಗ,  ಆತ ಬೇರಾರೂ ಅಲ್ಲ, ಎದುರುಮನೆ ಪ್ಯಾಟ್ರಿಕ್‌ ಎಂದು ಗೊತ್ತಾಗುತ್ತದೆ. ಹೀಗಿದ್ದೂ ಅವರ ಸಂಬಂಧ ಬೆಳೆಯುತ್ತದೆ. ಅತ್ಯಾಚಾರದ ರೂಪದಲ್ಲೇ ಲೈಂಗಿಕ ಸುಖ ಪಡೆಯುವ ಪ್ಯಾಟ್ರಿಕ್‌ನ ವಿಲಕ್ಷಣ ಸ್ವಭಾವವನ್ನು ಮಿಶೆಲ್‌ ಕೂಡಾ ಒಪ್ಪುತ್ತಾಳೆ. ಪ್ಯಾಟ್ರಿಕ್‌ನ ದೈವಭಕ್ತ ಪತ್ನಿಯು ಊರಿಗೆ ಹೋದಾಗ ಅವನ ಮನೆಯಲ್ಲೇ (ಮಗನೊಂದಿಗೇ ಕುಡಿದು ಅವನು ಮಲಗಿದ ಮೇಲೆ, ಕೆಳಮಹಡಿಯಲ್ಲಿ) ಪ್ಯಾಟ್ರಿಕ್‌ ಜೊತೆಗೆ ಮತ್ತದೇ ರೇಪ್‌ ಮಾದರಿಯ ಲೈಂಗಿಕ ಸುಖ ಅನುಭವಿಸುತ್ತಾಳೆ.

    ಇದೆಲ್ಲದರ ಕೊನೆಗೆ ಅವಳಿಗೆ ತನ್ನ ಕ್ಷಣಭಂಗುರತೆಯ ಅರಿವಾಗುತ್ತದೆ. ಮೊದಲು ತನ್ನ ಪಾಲುದಾರಳಿಗೆ ಅವಳ ಗಂಡನ ಸಖ್ಯದ ವಿಚಾರ ತಿಳಿಸುತ್ತಾಳೆ. ನಂತರ ಮಗನಿಗೆ ಅಪರೋಕ್ಷವಾಗಿ ಸೂಚನೆ ಕೊಟ್ಟು  ಮನೆಗೆ ಬಂದು ಪ್ಯಾಟ್ರಿಕ್‌ ಅತ್ಯಾಚಾರ ಎಸಗುವ ಹಾಗೆ ಮಾಡಿ ಮಗನಿಂದಲೇ ತಲೆಗೆ ಹೊಡೆಸಿ ಸಾಯಿಸುತ್ತಾಳೆ. ಪಾಲುದಾರಳ ಜೊತೆಗೆ ಅವಳದು ಲೆಸ್ಬಿಯನ್‌ ಸಂಬಂಧವೂ ಇರಬಹುದು ಎಂದೂ ಒಂದೆರಡು ದೃಶ್ಯಗಳು, ಕೊನೆಯ ದೃಶ್ಯ ಬಿಂಬಿಸುತ್ತವೆ.

    ಹೀಗೆ `ಎಲ್ಲೆ’ ಸಿನೆಮಾವು ಲಿಂಗಕೇಂದ್ರಿತ ಘಟನೆಗಳನ್ನೇ ತುಂಬಿಕೊಂಡು ನಮ್ಮನ್ನು ಹಲವು ಪ್ರಶ್ನೆಗಳಿಗೆ ಒಡ್ಡುತ್ತದೆ. ಕಲ್ಪನೆಗಳಿಗಿಂತ ವಾಸ್ತವವು ಭೀಕರ ಎಂಬ ನನ್ನ ಹಳೆಯ ವಾಕ್ಯವನ್ನೇ ಇಲ್ಲೂ ಉದ್ಧರಿಸಬೇಕಾಗಿದೆ. ನನ್ನ ಅಭಿಪ್ರಾಯದಲ್ಲಿ ಈ ಸಿನೆಮಾವು ತೀರಾ ಉತ್ಪ್ರೇಕ್ಷೆಯದೇನಲ್ಲ. ಬಹುಶಃ ಸಿನೆಮಾದ ಮಿತಿಗಳಿಂದಾಗಿ ಹಲವು ಬಗೆಯ ವರ್ತನೆಗಳನ್ನು ಒಂದೇ ಕಡೆ ಸೇರಿಸಿಕೊಡುವ ಪ್ರಯತ್ನದಿಂದ ಎಲ್ಲ ಪಾತ್ರಗಳೂ ಚಿತ್ರವಿಚಿತ್ರವಾಗಿವೆ. ಇವರಿಗೆಲ್ಲ ಲಿಂಗಸುಖವನ್ನು ಬಿಟ್ಟು ಬೇರೆ ಸುಖವೇ ಇಲ್ಲವೇ ಎಂದೂ ಭಾಸವಾಗುತ್ತದೆ. ಬಹುಶಃ ಯುರೋಪಿನ ಸುಖಲೋಲುಪ ಲಿಬರಲ್‌ ಬದುಕಿನ ಚಹರೆಯೇ ಹೀಗಿರಬೇಕು. ಕೊಳ್ಳುಬಾಕ ಸಂಸ್ಕೃತಿಯನ್ನೇ ಇಷ್ಟುದಿನವೂ ಆಚರಿಸಿಕೊಂಡು ಬಂದ, ವಸಾಹತುಶಾಹಿಯನ್ನು ಶತಮಾನಗಳ ಕಾಲ ಹೇರಿ ಪೂರ್ವದ ದೇಶಗಳ ಸಿರಿಸಂಪತ್ತನ್ನೆಲ್ಲ ಹೀರಿದ ಮೇಲೆ ಈಗ ಹವಾಗುಣ ವೈಪರೀತ್ಯ, ಅರಣ್ಯ ರಕ್ಷಣೆ, ಪರಿಸರ ಸಂರಕ್ಷಣೆ, ಜನಸಂಖ್ಯಾ ನಿಯಂತ್ರಣ – ಇತ್ಯಾದಿ ಉಪದೇಶಗಳನ್ನು ಭಾರತದಂತಹ ದೇಶಗಳಿಗೆ  ( ಹಾಗಂತ ಈ ವಿಷಯಗಳು ಗಂಭೀರ ಎನ್ನುವುದನ್ನು ನಾನು ಅಲ್ಲಗಳೆಯಲಾರೆ) ನೀಡುತ್ತಿರುವ ಯುರೋಪಿನಲ್ಲಿ ಇದೇ ನಿತ್ಯ ಬದುಕಾಗಿರಬಹುದು. ೨೦೧೫ರಲ್ಲಿ ನಿರ್ಮಾಣವಾದರೂ, ಅರಬ್‌ ದೇಶಗಳ ವಿಪ್ಲವವನ್ನು ಉಲ್ಲೇಖಿಸದ  ಈ ಸಿನೆಮಾ ಒಂದೆಡೆ ಕ್ರೈಮ್‌ ಥ್ರಿಲ್ಲರ್‌ ಅನುಭವ ನೀಡಿದರೂ, ನಾಯಕಿ ನಟಿಯ ಪಶ್ಚಾತ್ತಾಪರಹಿತ ವರ್ತನೆ, ಅತಿಬುದ್ಧಿವಂತಿಕೆಯ ನಡವಳಿಕೆಗಳು ಸಿನೆಮಾವನ್ನು ಗಂಭೀರದ ಅಂಚಿನಿಂದ ಕೊಂಚ ಸುರಕ್ಷಿತ ವಲಯಕ್ಕೆ ತರುತ್ತವೆ.

    ಎಂಬತ್ತರ ದಶಕದ ಕೊನೆಯರ್ಧದಲ್ಲಿ ಹಾಲಿವುಡ್‌ ಸಿನೆಮಾಗಳನ್ನು ನೋಡುವ ಚಟಕ್ಕೆ ಬಿದ್ದ ನಾನು ನೋಡಿದ ಸಿನೆಮಾಗಳಿಗೆ ಲೆಕ್ಕವಿಲ್ಲ. ಅದರಲ್ಲಿ ಒಂದು `ರೋಬೋಕಾಪ್‌’. ಇದೂ ಸೇರಿದಂತೆ `ಟೋಟಲ್‌ ರಿಕಾಲ್‌’ ನಂಥ ಸೈನ್ಸ್‌ ಫಿಕ್ಷನ್‌ ಸಿನೆಮಾಗಳ ಮೊದಲ ಕಂತುಗಳನ್ನೂ ನಿರ್ದೇಶಿಸಿದ ಪಾಲ್‌ ವೀರೋವೆನ್‌ ಈ ಸಿನೆಮಾದ ಮೂಲಕ ಬಿಗಿ ನಿರ್ದೇಶನದ ಪಟ್ಟು ಸಡಿಲಿಸಲಾರ ಎಂದು ಸಾಬೀತುಪಡಿಸಿದ್ದಾರೆ.

    ಒಂದು ಸಮಾಜವು ಸುಖಲೋಲುಪತೆಯು ಸಹಜ ವರ್ತನೆ, ದೇಹ ಸಂಬಂಧಗಳೇ ಬದುಕಿನ ಮುಖ್ಯ ಘಟನೆಗಳು ಎಂಬಂತೆ ಹಗಲಿರುಳೂ ಭಾವಿಸಿದರೆ ಏನಾಗಬಹುದು ಎಂಬುದಕ್ಕೆ `ಎಲ್ಲೆ’ ಒಂದು ಉದಾಹರಣೆ. ಈ ಸಿನೆಮಾವನ್ನು ಮಹಿಳಾ ವಾದಿಗಳು ಬೈಯಲೂ ಆಗುವುದಿಲ್ಲ; ಹೊಗಳಲೂ ಬರುವುದಿಲ್ಲ; ಇದನ್ನು ಹಾರರ್‌ ಸೈಕಾಲಾಜಿಕಲ್  ಥ್ರಿಲ್ಲರ್‌ ಎನ್ನಲೂಬಹುದು; ವಿಕೃತ ಕಾಮದ ಡಾರ್ಕ್‌ ಕಾಮೆಡಿ ಎಂದೂ ಹೇಳಬಹುದು. ನ್ಯೂಯಾರ್ಕ್‌ ಟೈಮ್ಸ್‌ನ ವಿಮರ್ಶಕನಿಗೇ ಈ ಸಿನೆಮಾ ಕ್ಷಣಕ್ಷಣಕ್ಕೂ    ಆಘಾತ ನೀಡಿದೆಯೆಂದರೆ…. ಯೋಚಿಸಬೇಕಿದೆ.

    ಬಾಳಿಗೊಂದು ಎಲ್ಲೆ ಎಲ್ಲಿದೆ? ನಿನ್ನಾಸೆಗೆಲ್ಲಿ ಕೊನೆಯಿದೆ?

    beluru sudarshana ELLE Kannada blog
    Share. Facebook Twitter Pinterest LinkedIn Tumblr Email
    Previous Article`ಸಾರ’ ಯಂತ್ರಾನುವಾದ ಬಳಸಿ! ಸೆಕೆಂಡಿಗೆ ಲಕ್ಷ ವಾಕ್ಯ ಕನ್ನಡದಿಂದ-ತೆಲುಗಿಗೆ ಅನುವಾದಿಸಿ!
    Next Article ಆಲಿಯಾ ರಶೀದ್‌: ಪಾಕಿಸ್ತಾನದ ಪ್ರಥಮ – ಏಕೈಕ ಧ್ರುಪದ್‌ ಗಾಯಕಿ; ಒಳಗಣ್ಣಿನ ಅಧಿನಾಯಕಿ
    admin
    • Website

    Related Posts

    ಇನ್ನು ಬಯಲಾಗಬೇಕಿರೋದು : ಮುಚ್ಚಿಟ್ಟ ಅಂಬೇಡ್ಕರ್ ಚರಿತ್ರೆ! ( “ಮುಚ್ಚಿಟ್ಟ ದಲಿತ ಚರಿತ್ರೆ: ಪುಸ್ತಕದ ಒಂದು ದಿಢೀರ್‌ ವಿಮರ್ಶೆ)

    October 4, 2020

    ಸಾವರ್‌ಕರ್‌ :  ಸ್ವಾತಂತ್ರ್ಯವೀರನಷ್ಟೇ ಅಲ್ಲ, ಖಚಿತ ವಿಚಾರಗಳ ಸ್ವತಂತ್ರ ಜೀವಿ      

    May 27, 2020

    `ಜೋಕರ್’ಗೆ ಇನ್ನುಮುಂದೆ ಬದುಕು ಕಾಮೆಡಿ

    October 6, 2019

    Leave A Reply Cancel Reply

    ವಿಮರ್ಶೆ
    • ಇನ್ನು ಬಯಲಾಗಬೇಕಿರೋದು : ಮುಚ್ಚಿಟ್ಟ ಅಂಬೇಡ್ಕರ್ ಚರಿತ್ರೆ! ( “ಮುಚ್ಚಿಟ್ಟ ದಲಿತ ಚರಿತ್ರೆ: ಪುಸ್ತಕದ ಒಂದು ದಿಢೀರ್‌ ವಿಮರ್ಶೆ)
    • ಸಾವರ್‌ಕರ್‌ :  ಸ್ವಾತಂತ್ರ್ಯವೀರನಷ್ಟೇ ಅಲ್ಲ, ಖಚಿತ ವಿಚಾರಗಳ ಸ್ವತಂತ್ರ ಜೀವಿ      
    • `ಜೋಕರ್’ಗೆ ಇನ್ನುಮುಂದೆ ಬದುಕು ಕಾಮೆಡಿ
    • ‘After I die, cut out my heart and eat it’ (Book Review: Tombstone)
    • `ದ ಸ್ವರ್ವ್’: ಆಧುನಿಕ ಯುರೋಪಿಗೆ ಮುನ್ನುಡಿಯಾದ ಕಾವ್ಯದ ಶೋಧ
    • `ಮ್ಯಾಡ್‌ ಮ್ಯಾಕ್ಸ್‌: ಫ್ಯೂರಿ ರೋಡ್‌’: ಶತಮಾನದ ಸಿನೆಮಾ!
    • ಡಿಸೆಂಟಿಂಗ್ ಡಯಾಗ್ನಸಿಸ್‌: ವೈದ್ಯಕೀಯ ರಂಗದ ದುರಾಚಾರ ರೋಗಕ್ಕೆ ವೈದ್ಯರದೇ ಚಿಕಿತ್ಸೆ
    • ಪಿಂಕ್: ಬಾಲಿವುಡ್ ಪಾಪಕರ್ಮಗಳಿಗೆ ಪುಟ್ಟ, ಅಸಂಪೂರ್ಣ ಪ್ರಾಯಶ್ಚಿತ್ತ!
    • ಪತ್ರಕರ್ತ ಸಿ ಎಸ್‌ ಚರಣ್‌ರ ಕಥಾಸಂಕಲನ `ಆಂಟಿ ಕ್ಲಾಕ್‌’ಗೆ ಬರೆದಿದ್ದೇನೆ ನನ್ನ ಮೊದಲ ಮುನ್ನುಡಿ!
    • ಕನ್ನಡದಲ್ಲಿ ವಿಜ್ಞಾನ ತಂತ್ರಜ್ಞಾನ ಸಾಹಿತ್ಯ : ವಿಶ್ವಾಸಾರ್ಹತೆ ಹೆಚ್ಚಿಸಿಕೊಂಡ ಕಸಾಪ | ಈ ಮಹತ್ವದ ಕೃತಿಗಳು ಜಾಲತಾಣದಲ್ಲೂ ಮುಕ್ತವಾಗಿ ಪ್ರಕಟವಾಗಲಿ!
    • ಅಂದು ಶಾಂತ ಕಡಲು, ಇಂದು ಹುಚ್ಚುಹೊಳೆ! : ವಿವೇಕ ಶಾನಭಾಗರ ಕಾದಂಬರಿ ‘ಊರುಭಂಗ’ದ ಇನ್‌ಸ್ಟಂಟ್‌ ವಿಮರ್ಶೆ
    • Climate thriller without Kalashnikov [Book Review: The Sands of Sarasvati by Risto Isomaki]
    • Sacred Plants of India: Marvellous lucidity of Puranic facts [book review]
    • Business Sutra : Desi Sutras for Modern Business [Book review]
    • ಹಲ್ಕಟ್‌ಗಿರಿ ಸ್ಟೋರಿಗೆ ಹೈದರ್‍ರೇ ಯೋಗ್ಯ!
    • ಖಗೋಳ ವೀಕ್ಷಣೆಯ ನೀರವದಲ್ಲಿ ಭೂ-ಗತಕಾಲದ ಹುಡುಕಾಟ : ‘ನಾಸ್ಟಾಲ್ಜಿಯಾ ಫಾರ್ ದ ಲೈಟ್’
    • ಈಮೈಲ್‌ ಜನಕ `ಶಿವ ಅಯ್ಯದೊರೈ’; ಇನ್ನುಮುಂದೆ `ರೇ ಟೋಮಿಲ್‌ಸನ್‌’ ಎನ್ನದಿರೈ!
    • THE ACCIDENTAL PRIME MINISTER : ಪುಸ್ತಕ ವಿಮರ್ಶೆ: `ಶಾಣ್ಯಾ’ ಸಂಜಯ ಬಾರು; `ಭೋಳ್ಯಾ’ ಡಾ||ಸಿಂಗ್‌!
    • `ಉಳಿದವರು ಕಂಡಂತೆ’ : ವೃತ್ತಿಪರ, ದಕ್ಷ ಮತ್ತು ಸಮಾಜ-ಸನ್ನಿವೇಶದ ಹೊಣೆಯರಿತ ನಿರ್ಮಾಣ
    • ಸ್ವರ್ಣಭರಿತ ದೇಗುಲದ ಶಿಲಾಮೂಲ: ರೋಚಕ ಸಂಶೋಧನೆಯ ಕೃತಿ ‘ಅಳಿವಿಲ್ಲದ ಸ್ಥಾವರ’
    • ‘ವಿಶ್ವ ಎನ್ನುವ ವಿಸ್ಮಯ’ ಪುಸ್ತಕ ವಿಮರ್ಶೆ : ಅಚ್ಚಗನ್ನಡದಲ್ಲಿ ಬ್ರಹ್ಮಾಂಡದ ಚಿಂತನೆಗೆ ಹಚ್ಚುವ ಕೃತಿ
    • Musical journey of a different kind
    • BOOK REVIEW [A FORT OF NINE TOWERS] : This Kabuliwala weaves a blood-chilling story
    • ಚಿಮಾಮಂಡ ಎನ್ಗೋಜಿ ಅದೀಚೆ: ಅಪ್ಪಟ ದೇಸಿ ಕತೆಗಾರ್ತಿ
    • ನಾನ್‌ಜಿಂಗ್ ! ನಾನ್‌ಜಿಂಗ್!! : ಲೈಫು ಇಷ್ಟೇನಾ?
    • ಹಾರರ್, ಸಸ್ಪೆನ್ಸ್ ಥ್ರಿಲ್ಲರ್‌ಗಳ ಹೊಸ ಹೀರೋ : ನಿರ್ದೇಶಕ ಬ್ರಾಡ್ ಆಂಡರ್‌ಸನ್
    • ನಿಂದನೆಯ ಕವಲೊಡೆದ ಚರ್ಚೆಗೆ ನನ್ನ ಪ್ರತಿಕ್ರಿಯೆ
    • ಎಸ್ ಎಲ್ ಭೈರಪ್ಪನವರ ‘ಕವಲು’ : ಹಳಸಲು ವಿಚಾರಗಳ ತೆವಲು
    • ಕಟಿನ್: `ಭೀಕರ’ವೂ ಕ್ಷುಲ್ಲಕವಾದ ಆ ಕ್ಷಣಗಳು…
    • ರೈನ್‌ಮ್ಯಾನ್ (೧೯೮೮) : ದಿವ್ಯಜ್ಞಾನಿ ಕಿಮ್ ಪೀಕ್ ಇನ್ನಿಲ್ಲ
    • ಅವತಾರ್ : ಅ‘ಮರ’ ಕಥೆಯ ಅದ್ಭುತ ನೇಯ್ಗೆ
    • ‘ದಿ ಮಿಶನ್’: ಜಲಪಾತ ಕಟ್ಟಿಕೊಡುವ ಅದ್ಭುತ ಕಥನ
    • ಓಮರ್ ಮುಖ್ತರ್ : ನೈಜ ಜೆಹಾದಿ ಅರಿಯಲು ಈ ಸಿನೆಮಾ ನೋಡಿ !
    • ವಿಶಿಷ್ಟ ಅನುಭವಕ್ಕೆ ಒಡ್ಡುವ `ಕಾಗದದ ದೋಣಿ’ಯ ಯಾನ
    • ದಿ ಕಿಲ್ಲಿಂಗ್ ಫೀಲ್ಡ್ಸ್ : ಕಮ್ಯುನಿಸಂನ ಕರಾಳಮುಖಕ್ಕೆ ಹಿಡಿದ ಕನ್ನಡಿ
    • ಡಿಸ್ಟ್ರಿಕ್ಟ್ ೯ : ಈ ವರ್ಷದ ರಮ್ಯ, ಅದ್ಭುತ, ನೈಜ ಸಿನೆಮಾ
    • ಹ್ಯಾನಿಬಾಲ್ ಲೆಕ್ಟರ್: ಆಂಥೋನಿ ಹಾಪ್‌ಕಿನ್ಸ್‌ನ ರೌದ್ರಾವತಾರ
    • ನನ್ನ ಫೇವರಿಟ್ ಹಾಲಿವುಡ್ ಸಿನಿಮಾಗಳು
    • ವುಮೆನ್ ಟ್ರಾಫಿಕಿಂಗ್ ಕುರಿತ ಎರಡು ಸಿನೆಮಾಗಳು : ವೆಲ್ ‘ಟೇಕನ್’ : ಬೆಸ್ಟ್ ‘ಟ್ರೇಡ್’
    • ಎಂಪೈರ್‍ಸ್ ಆಫ್ ದಿ ಇಂಡಸ್: ಥ್ರಿಲ್ಲರ್ ಪ್ರವಾಸಕಥನ : ಪರಿಚಯ ಭಾಗ ೧
    • ‘ದಿ ಕ್ಯೂಬ್’ ಸರಣಿ ಚಿತ್ರಗಳು: ದಿಕ್ಕೆಟ್ಟ ಬದುಕಿಗೆ ಆರೇ ಬಾಗಿಲು
    • “ನೋಯಿಂಗ್” : ನಿಕೋಲಾಸ್ ಕೇಜ್ ನ ಬತ್ತದ ಉತ್ಸಾಹ
    • ದಿ ವಿನ್ನರ್ ಸ್ಟಾಂಡ್ಸ್ ಅಲೋನ್: ಪಾಲೋ ಕೊಯೆಲ್ಹೋನ ವೈಚಾರಿಕ ಥ್ರಿಲ್ಲರ್
    • ಒಂದು ಮುಷ್ಟಿ ನಕ್ಷತ್ರ: ರಾಜಲಕ್ಷ್ಮಿಯ ಖಾಸಾ ಅನುಭವದ ಕಥೆಗಳು
    ಹುಡುಕಿ!
    ವಿಭಾಗಗಳು
    • FREE BOOK CULTURE (6)
    • News Flashes (25)
    • Reviews (15)
    • Uncategorized (4)
    • ಒಳಗಣ್ಣು (ಟಿ ಎಸ್‌ ಶ್ರೀಧರ ಅಂಕಣ) (4)
    • ಕಲಿ ಯುಗ (62)
    • ಕವನಗಳು (131)
    • ನನ್ನ ಮಾಧ್ಯಮಯಾನ (3)
    • ಮಕ್ಕಳ ಪ್ರಬಂಧಗಳು (7)
    • ಮಾಹಿತಿ / ಲೇಖನ (22)
    • ಲೇಖನಗಳು (240)
    • ವಿಮರ್ಶೆ (45)
    • ಶಂಕರ್ ಶರ್ಮ (22)
    • ಸಣ್ಣ ಕಥೆಗಳು (20)
    • ಸುದ್ದಿ (140)
    • ಹಿಮದೊಡಲ ತಳಮಳ (1)
    • ಹುಲ್ಲಿನ ಸಾರು (1)
    Archives
    © 2023 ಬೇಳೂರುಸುದರ್ಶನ.

    Type above and press Enter to search. Press Esc to cancel.