ನಾಯಿಬೆಲ್ಟು

ಅನಿಟಾ. ಟಿ ಬಂದ ಅಕ್ಷರಗಳೆಲ್ಲ ಟಕಾರದ್ದು ಎಂದು ತಿಳಿದೇ ಬೆಳೆದವಳು. ಈ ಡಿಜಿಟಲ್ ಕಚೇರಿಯಲ್ಲಿ ಪ್ರೊಡ್ಯೂಸರ್. ಅವಳ ಕಣ್ಣುಗಳಲ್ಲಿ ಏನಿದೆ ? 

ಯಾವುದೇ ಐಟಿ ಕಚೇರಿಗೆ ಹೋಗಿ ಶೂಟಿಂಗ್ ಮಾಡಬಲ್ಲೆ ಅನ್ನೋ ಉತ್ಸಾಹ. 

ಅವಳ ಉಡುಗೆ ಗರಿಗರಿ. ಒಮ್ಮೆ ಪ್ಯಾಂಟು, ಟೀ ಶರ್ಟು. ಇನ್ನೊಮ್ಮೆ ಚೂಡಿದಾರ್.

ಅವಳನ್ನೂ ಸೇರಿಸ್ಕೊಂಡು ಎಲ್ಲರ ಕುತ್ತಿಗೆಯಲ್ಲಿ ನಾಯಿಬೆಲ್ಟು ಮಾತ್ರ ಜೋತುಬಿದ್ದಿರುತ್ತೆ. ಅದನ್ನು ತೊಡೋದೂ ಒಂದು ಕಲೆ. ಕೆಲವರು ಸೊಂಟದ ಬೆಲ್ಟಿನ ಜೊತೆ ಸೇರಿಸ್ತಾರೆ. ಹುಡುಗೀರು ಅದನ್ನು ಸರದ ಬದಲಿಗೆ ತೊಟ್ಕೋತಾರೆ. ಈ ಬೆಲ್ಟಿನಲ್ಲಿರೋದೇ ಒಂದು ಡಿಜಿಟಲ್ ಐಡೆಂಟಿಟಿ ಕಾರ್ಡ್. ಹೊರಗೆ ವಿಸಿಟಿಂಗ್‌ಕಾರ್ಡ್ ಥರ. ಒಳಗೆ ಯಾವುದೋ ಸಂಕೇತ. ಕಚೇರಿಗೆ ಬಂದ, ಹೋದ ಸಮಯವನ್ನು ಒಳಗೆ ಕಂಪ್ಯೂಟರಿಗೆ ರವಾನಿಸೋ ವ್ಯವಸ್ಥೆ . 

ಎಲೆಕ್ಟ್ರಾನಿಕ್ ಬಿಲ್ಲೆಯನ್ನು ಉಜ್ಜಿದ ಕೂಡಲೇ ಹಸಿರು ದೀಪ ಮಿನುಗಿ ಕಚೇರಿಯ ಮರದ ಬಾಗಿಲು ತೆರೆದುಕೊಳ್ಳುತ್ತೆ. ಐದೇ ಸೆಕೆಂಡು. ಒಳಗೆ ಸೇರಿಕೊಳ್ಳದಿದ್ರೆ ಆಟೋಮ್ಯಾಟಿಕ್ ಆಗಿ ಮುಚ್ಚಿಕೊಳ್ಳುತ್ತೆ. ಹಸಿರು ದೀಪದ ಬದಲಿಗೆ ಕೆಂಪು ದೀಪ ಮತ್ತೆ ಹೊತ್ತಿಕೊಳ್ಳುತ್ತೆ. 

ಡಿಜಿಟಲ್ ಕಚೇರಿ. 

ಈ ಬಿಲ್ಲೆ ಸಿಗಿಸಿದ ಬೆಲ್ಟು ಸಿಕ್ಕಾಗ ಬೆಂಗಳೂರಿನಲ್ಲಿ ಒಬ್ಬ ಮಹಾನ್ ಮನುಷ್ಯನಾದೆ ಅಂತ ಉಬ್ಬಿದ್ದೆ. ಬ್ರಿಗೇಡ್ ರಸ್ತೆಯಲ್ಲಿ ಹಲವು ಹುಡುಗರು ಈ ಥರ ಬೆಲ್ಟು ತೂಗಿಸಿಕೊಂಡು ರೆಕ್ಸ್‌ಗೆ ನುಗ್ಗಿ ಹುಡುಗಿಯರ ಜೊತೆ ಲಲ್ಲೆ ಹೊಡೆಯೋದನ್ನು ಟೆರಿಕಾಟ್ ಪ್ಯಾಂಟುಧಾರಿಯಾಗಿ ನೋಡಿದವ. ಬೆಲ್ಟು ಸಿಕ್ಕರೆ ಹೇಗಾಗಿರಬೇಡ ? ಸೀದಾ ರ್‍ಯಾಂಗ್ಲರ್ ಜೀನ್ಸ್‌ಗೆ ಜಿಗಿದದ್ದೇ.

ಕಚೇರಿ ಒಳಹೊಕ್ಕ ಕೂಡಲೇ ವಿಶಾಲ ರೂಮು. ದುಬಾರಿ ಟೀಪಾಯ್ ಮೇಲೆ ಅಗ್ಗದ ಚಾಕಲೇಟ್‌ಗಳು. ಕಣ್ಣು ಚಾಚಿದಲ್ಲೆಲ್ಲ ಹೈಟೆಕ್ ಒಳಾಲಂಕಾರದ ಸೊಗಸು. ಎದುರಿಗೇ ಅದೇ ಸಂಸ್ಥೆಯ ಚಾನೆಲ್ ಹರೀತಾ ಇರೋ ಟಿವಿ. ಸದಾ ನಗುತ್ತಿರಬೇಕಾದ ಹುಡುಗಿ ರೇಖಾ ಅಲ್ಲಿ ಕುಳಿತಿದ್ದಾಳೆ. ಅವಳ ಮುಖದಲ್ಲಿ ನಗು ಇದೆ. ಅದು ಎಂದಿಗೂ ವಕ್ರವಾಗಲ್ಲ. ಪಕ್ಕದಲ್ಲಿ ಹೂವಿನ ಗುಚ್ಛ. ಇದಕ್ಕಾಗಿ ಆನುಯಲ್ ಕಾಂಟ್ರಾಕ್ಟ್. 

ಪ್ರತೀ ಶುಕ್ರವಾರ ವೋಹ್ ಇಟ್ ಈಸ್ ಫ್ರೈಡೇ ಎಂಬ ಕೂಟ ನಡೆಯುತ್ತೆ. ಆಗ ರೇಖಾ ಸೀರೆ ಉಟ್ಟಿದ್ದೂ ಇದೆ. ಅವತ್ತು ಟೆರೇಸಿನಲ್ಲಿರುವ ಕ್ಯಾಂಟೀನಿನಲ್ಲಿ ಮಜಾ. ಮಂಗಾಟಕ್ಕೆ ಇಲ್ಲಿ ಪ್ರಾಶಸ್ತ್ಯ . ಜಾಹೀರಾತುಗಳನ್ನು ಅಣಕಿಸೋ ಸ್ಪರ್ಧೆ ಜನಪ್ರಿಯ. ಮೂರ್‍ನಾಲ್ಕು ಗುಂಪುಗಳಲ್ಲಿ ಈ ಸಡಗರದ ಗಂಟೆಗಳು ಕಳೆದುಹೋಗುತ್ತವೆ. ರೂಪಾಲಿ ಇದ್ದ ದಿನ ಖುಷಿ. ತುಂಬುದೇಹದ ಪಕ್ಕ ಕೂತು ಹರಟೋದು ಅಂದ್ರೆ ತುಂಬಾ ಇಂಟರೆಸ್ಟಿಂಗ್. ಎಷ್ಟೆಂದ್ರೂ ಇವೆಲ್ಲ ಸಂಪ್ರದಾಯಕ್ಕೆ ಹೊಸಬ; ವಯಸ್ಕ. ಹುಡುಗರಿಗಿಂತ ಗಂಭೀರ. ರೂಪಾಲಿಗೆ ಸಲಿಗೆ ಜಾಸ್ತಿ. 

ಈ ಕಥೆ ಹೇಳ್ತಾ ಇರೋ ದಿನ ಸೋಮವಾರ. ಹೀಗಾಗಿ ಶುಕ್ರವಾರ ನಡೆದ ಜಾಲಿ ಕ್ಷಣಗಳನ್ನು ನಿಮಗೆ ಹೇಳುವ ಅಪಾಯ ಇಲ್ಲ. ಸೋಮವಾರ ಪ್ರೋಗ್ರಾಮ್ ಮೀಟಿಂಗ್. ಅವತ್ತು ಅದೇ ಕ್ಯಾಂಟೀನು ಒಂದು ಸೀರಿಯಸ್ ಮೀಟಿಂಗಿನ ಸಭಾಂಗಣವಾಗಿ, ಪ್ರೆಸೆಂಟೇಶನ್‌ನ ವೇದಿಕೆಯಾಗಿ ರೂಪಾಂತರಗೊಳ್ಳುತ್ತೆ. ಬೆಳಿಗ್ಗೆಯ ಬೆಂಗಳೂರು ಗೊತ್ತಲ್ಲ , ಅದರಲ್ಲೂ ಜನವರಿ ತಿಂಗಳು. ತಂಗಾಳಿಗೆ ಮೈ ಒಡ್ಡಿ ಚಹಾ ಹೀರುತ್ತ ಕುಳಿತರೆ ಸಭೆಗಳಲ್ಲಿ ತಂತಾನೇ ಆಹ್ಲಾದಕತೆ ತೂರಿ ಬರುತ್ತೆ. ಗಾಂಭೀರ್ಯಕ್ಕೆ ಯಾವ ಕೊರತೆಯೂ ಇಲ್ಲ. ಯಾಕೆಂದ್ರೆ ಬುಲ್ಗಾನಿನ್ ಗಡ್ಡದ ಮೃದುಲ್ ಸೂರಿ ಎಂಬ ತಲೆಯಿಲ್ಲದ ಮನುಷ್ಯ ಡೈರಿ ಹಿಡಿದು ಕುಳಿತಿರುತ್ತಾನೆ. ಅವನ ಉಡುಗೆಯನ್ನು ನೋಡಿದರೆ ಈತ ಸ್ಯಾಮ್ ಪಿತ್ರೊಡಾ ನಂತರದ ಕ್ರಾಂತಿಕಾರಿ ಎಂಬ ಭ್ರಮೆ ನಿಮ್ಮನ್ನು ಆವರಿಸಬಹುದು. ವಾಸ್ತವ ಹಾಗಿಲ್ಲ. ಅವನಿಗೆ ಹಿಂದಿ ಭಾಷೆ ಬಿಟ್ಟರೆ ಬೇರೆ ಭಾಷೆ ಬರಲ್ಲ. ಕನ್ನಡದಲ್ಲಿ ಸೂ..ಮಗನೆ ಎಂದರೆ ಅಚ್ಚಾ ಎನ್ನುತ್ತಾನೆ. ಆತ ಪ್ರೋಗ್ರಾಮ್ ಪ್ರೊಡ್ಯೂಸರ್. ಕನ್ನಡ, ಬೆಂಗಾಳಿ, ಹಿಂದಿ ಕಾರ್ಯಕ್ರಮಗಳಿಗೆ ಅವನೇ ಪ್ರೊಡ್ಯೂಸರ್- ಕೋ ಆರ್ಡಿನೇಟರ್ ಬಡ್ಡಿಮಗ.

“ನಾವಿನ್ನು ಮೀಟಿಂಗ್ ಶುರು ಮಾಡೋಣ” ಎಂದು ಇಡೀ ಸಂಸ್ಥೆಯ ಭಾರವನ್ನೆಲ್ಲ ತನ್ನ ಪಿರ್ರೆಗಳ ಮೇಲೆ ಹೊತ್ತ ಹಾಗೆ ಹುಶಾರಾಗಿ ಮೌಲ್ಡೆಡ್ ಕುರ್ಚಿಯ ಮೇಲೆ ಪವಡಿಸಿದ ನಿರ್ವೇದಿತಾ ಮುಖರ್ಜಿ ಶುರು ಹಚ್ಚಿಯೇ ಬಿಟ್ಟಳು. ಅವಳ ತಲೆಗೂದಲುಗಳು ಚಿಟ್ಟಾಣಿಯ ಕೀಚಕನ ಪಾತ್ರದ ಹಾಗೆ ಗೊಂಚಲು ಗೊಂಚಲಾಗಿ ಹರಡಿಕೊಂಡಿದ್ದವು. ಅವಳ ಮಾತೆಂದರೆ ಎಲ್ಲರಿಗೂ ವೇದ ವಾಕ್ಯ. ಆಧುನಿಕ ತಂತ್ರeನದ ಬಗ್ಗೆ , ಅದರಲ್ಲೂ ಮಾಹಿತಿತಂತ್ರeನದ ಬಗ್ಗೆ ಅವಳು ಹೂಸು ಬಿಟ್ಟರೂ ಅದನ್ನು ಸಿಬ್ಬಂದಿಗಳು ತಾಜಾ ಸುವಾಸಿತ ಸುದ್ದಿ ಥರ ಸ್ವೀಕರಿಸಬೇಕಾದ ಅನಿವಾರ್ಯತೆ.

“ಮೊದಲು ‘ಆ ಕ್ಷಣ’ ಕಾರ್ಯಕ್ರಮದ ಟೇಪ್ ಕಳಿಸೋ ಬಗ್ಗೆ ಒಂದು ನಿರ್ಧಾರ ಆಗ್ಲೇಬೇಕು” ಎಂದು ಸುನಿಲ್ ಪಾಂಡೆ ನೇರವಾಗಿ ನಿರ್ವೇದಿತಾ ಮುಖವನ್ನೇ ವೀಕ್ಷಿಸುತ್ತ ನುಡಿದ. ಮಾರ್ಚ್ ೩೦ ರಿಂದ ಈ ಕಾರ್ಯಕ್ರಮ ಪ್ರಸಾರ ಆಗಬೇಕು. ೩೦ ನಿಮಿಷಗಳ ಡಿಜಿಟಲ್ ಮಾಸ್ಟರ್ ಟೇಪನ್ನು ಬೀಟಾ ಆಗಿ ಕನ್ವರ್ಟ್ ಮಾಡಿ ಬ್ಯಾಂಕಾಕ್‌ಗೆ ಕಳಿಸುವುದು ಅಂದ್ರೆ ತಾನೇ ದಿನಾಲೂ ಖುದ್ದಾಗಿ ಹನುಮಂತನಂತೆ ಅಲ್ಲಿಗೆ ಹಾರಿ ಬರ್‍ತಾ ಇದ್ದೇನೆ ಎಂಬ ಭ್ರಮೆಯನ್ನು ಹುಟ್ಟಿಸುವುದು ಅವನ ಹುನ್ನಾರ. ವಾಸ್ತವವಾಗಿ ಈ ಥರ ಟೇಪ್‌ಗಳನ್ನು ಪಟ್ಟಿ ಮಾಡುತ್ತ ಕಳಿಸ್ತಾ ಇದ್ದವನು ಹೂಂಕಾರ್ ಚಟರ್ಜಿ. ಅವನೂ ಥೇಟ್ ಮಹಾನ್ ಎಕ್ಸಿಕ್ಯೂಟಿವ್ ಥರ ಕಾಣಿಸ್ತಾನೆ ಅನ್ನಿ. ನಿರ್ವೇದಿತಾಳ ಚೇಲಾ. ಸದಾ ಹೂ ಅಂತಾನೇ ಇರ್‍ತಾನೆ. 

ಆ ಕ್ಷಣ ಕಾರ್ಯಕ್ರಮದ ನಿರ್ಮಾಪಕನ ಬದಲಿಗೆ ಈ ಮೀಟಿಂಗುಗಳನ್ನು ಅಟೆಂಡ್ ಮಾಡಬೇಕಿದೆ. ಇಲ್ಲಿ ಈ ಬಿಸಿಲು ಮೈಯನ್ನು ಹದವಾಗಿ ಅಪ್ಪಿಕೊಂಡಿರುವಾಗ ಈ ನನ್ಮಕ್ಕಳು ಯಾಕಾದರೂ ಕೆಟ್ಟ ಯಾಂತ್ರಿಕ ಮೀಟಿಂಗ್ ಇಟ್ಕೊಂಡಿರ್‍ತಾರೆ ಅಂತ ಗೊತ್ತಿಲ್ಲ.

ಅವಳು ಇಲ್ಲಿದ್ದಿದ್ರೆ ನಾನು ಖಂಡಿತಾ ಅವಳ ಜೊತೆ ಕಾಫಿ ಹೀರ್‍ತಾ ಕುಳಿತಿರ್‍ತಿದ್ದೆ. ಅವಳು ಇದೇ ಕುರ್ಚಿಯಲ್ಲಿ ಕಾಲ ಮೇಲೆ ಕಾಲು ಹಾಕಿ ಕುಳಿತಿದ್ರೆ ಕಾಲುಗಳನ್ನು ಮುಂಚಾಚಿ ಕುತ್ತಿಗೆಯ ಹಿಂದೆ ಕೈಗಳನ್ನು ಜೋಡಿಸಿ ನಿರಾಳ ಫೋಸು ಕೊಡಬಹುದಿತ್ತು. ಅವಳನ್ನು ನೆನಪಿಸಿಕೊಂಡಾಗೆಲ್ಲ ಈ ತಾರಸಿ ನೆನಪಾಗುತ್ತೆ. ಒಂದು ದಿನವಾದ್ರೂ ಅವಳ ಜೊತೆ ಈ ಥರದ ಜಾಗದಲ್ಲಿ ಕಾಲ ಕಳೆದಿಲ್ಲ ಅನ್ನೋದು ನೆನಪಾದಾಗ ಮನಸ್ಸು ಕುಗ್ಗಿಹೋಗುತ್ತೆ. 

“ಕಾರ್ಯಕ್ರಮ ತುಂಬಾ ಚೆನ್ನಾಗಿ ಬರ್‍ತಾ ಇದೆ. ಆದ್ರೆ ಬ್ರೇಕ್ ನಂತರ ಸ್ವಲ್ಪ ಡ್ರಾಗ್ ಆಗ್ತಿದೆ” ಎಂದು ಮೃದುಲ್ ಸೂರಿ ತನ್ನ ಡೈರಿಯ ಬಟನನ್ನು ಮುಚ್ಚಿ ತೆಗೆಯುತ್ತ ಹೇಳತೊಡಗಿದ. ಈ ಮಗ ಕಾರ್ಯಕ್ರಮಾನ ಒಂದೈದು ನಿಮಿಷಾನೂ ನೋಡಿಲ್ಲ. ಬಾಯಿಂದಲೇ ಹೂಸು ಬಿಡ್ತಾ ಇದಾನೆ. ಟೈಟಲ್ ಕಾರ್ಡಿನಲ್ಲಿ ತನ್ನ ಹೆಸರು ಬಂದಿದೆಯಾ ಅಂತ ಎಡಿಟ್ ಮಾಡೋವಾಗ್ಲೇ ಬಂದು ವಿಚಾರಿಸಿಕೊಂಡು ಹೋದ ಕಳ್ಳಬಡ್ಡಿಮಗ. ಎಲ್ಲ ಗೊತ್ತು. ಈ ಮನುಷ್ಯರು ಯಾಕೆ ಹೀಗೆ ವೆಂಚರ್‌ಕ್ಯಾಪಿಟಲ್ ತಂದು ದೊಡ್ಡ ಘನಂದಾರಿ ಕೆಲಸ ಮಾಡೋ ಹಾಗೆ ವರ್ತಿಸ್ತಾರೆ ಅಂತ ಗೊತ್ತು.

ರೇಖಾ ಬಂದು ನಿರ್ವೇದಿತಾ ಕಿವಿಯಲ್ಲಿ ಏನೋ ಮಹತ್ವದ ಮಾತು ಉದುರಿಸಿದಳು. ಕೂಡಲೇ ನಿರ್ವೇದಿತಾ ತಲೆಯಲ್ಲಿ ಹುಳ ಬಂದ ಹಾಗೆ ಎದ್ದು ಬಿಡೋದೆ ? “ಕಂಟಿನ್ಯೂ ದಿ ಮೀಟಿಂಗ್, ಈ ಹ್ಯಾವ್ ಎ ವಿಸಿಟರ್” ಎಂದು ಸುರುಳಿ ಸುರುಳಿಯಾಗಿದ್ದ ಮೆಟ್ಟಿಲುಗಳನ್ನು ಇಳಿಯತೊಡಗಿದಳು. ಈ ಸುನಿಲ್ ಪಾಂಡೆ, ಈ ಹೂಂಕಾರ್, ಈ ಸೂರಿ ಎಲ್ಲರೂ ಇಲ್ಲಿ ಇರೋದೇ ದುಡ್ಡು ತಿನ್ನೋಕೆ. ಗೊತ್ತು. ಅವರ ನಾಲಿಗೆ ಸೀಳಿದ್ರೂ ಟಿವಿ ಪ್ರೋಗ್ರಾಮಿನ ಪಸೇನೂ ಇರಲ್ಲ ಗೊತ್ತು. ಪ್ರೊಡಕ್ಷನ್ ಅಂದ್ರೆ ರಿಪ್ರೊಡಕ್ಷನ್ ಥರ ಅಂತ ಇವ್ರೆಲ್ಲ ತಿಳ್ಕೊಂಡಿದಾರೆ ಗೊತ್ತು. ಅವರಿವರಿಗೆ ಟೇಪ್ ತಂಡುಕೊಡು ಎಂದು ಮಾತಿನ ಬಾಣ ಬಿಡುತ್ತಲೋ, ಸರಾಸರಿ ವಾರಕ್ಕೆ ಇಬ್ಬರಂತೆ ಸೇರಿಕೊಳ್ಳುತ್ತಿದ್ದ ಲಲನೆಯರ ಬೆನ್ನು ತಟ್ತಾನೋ ಇರೋದ್ರಲ್ಲೇ ಇವ್ರಿಗೆಲ್ಲ ಖುಷಿ. 

ಗೊತ್ತು. 

ಮೀಟಿಂಗ್‌ನಲ್ಲಿ ಮಾತನಾಡಿದ್ದು ಅಷ್ಟಾಗಿ ಕೇಳಿಸಿಕೊಳ್ಳದೆ ಕುಳಿತಿದ್ದ ನಿರೂಪಕ ವೆಂಕಟನಾರಾಯಣ ಬಂದ ಕೂಡಲೇ ಥತ್ ಇವರ, ಇಲ್ಲಿ ಸಿಕ್ಕಿ ಹಾಕ್ಕೊಂಬಿಟ್ಟಿದೇನೆ ಎಂದು ಜರಿದುಕೊಳ್ತಾ ಸುರುಳಿ ಸುರುಳಿಯಾಗಿ ಇದ್ದ ಮೆಟ್ಟಿಲುಗಳನ್ನು……..

*** 

ಸ್ಟ್ಯಾಂಡ್‌ಬೈ, ರೆಡಿ, ರೋಲಿಂಗ್, ಆಕ್ಷನ್. ಮತ್ತೆ ಮತ್ತೆ ಅವೇ ಪದಗಳು. ಕೆಲವೊಮ್ಮೆ ಬರೀ ಶಬ್ದಗಳು. ವೆಂಕಟನಾರಾಯಣ ಬೇರೆ ಬೇರೆ ವೇಷಗಳನ್ನು ಹಾಕಿಕೊಂಡು ಬಾ ಮಗ, ಸ್ವಲ್ಪ ತಲೆ ಹೀಗೆ ಬಾಚು, ಇಲ್ಲಿ ಈ ಕೆನ್ನೆಗೆ ಸ್ವಲ್ಪ ಬೇಸ್ ಹಾಕು, ಪೌಡರ್ ಹೊಡಿ ಅಂತ ಕ್ಯಾಮೆರಾ ಬಾಯ್‌ಗೆ ಹೇಳ್ತಾ ಇರ್‍ತಾನೆ. ಗಾಜಿನ ಆಚೆ ಇರೋ ಕ್ಯಾಮೆರಾಮನ್ ಕಿರುಚ್ತಾ ಇರ್‍ತಾನೆ… ಮೂರು ಇಂಚು ಅಡ್ಡಡ್ಡ ಆಕ್ಷನ್ ಮಾಡಬಹುದು. ಕಾಲನ್ನು ಸ್ವಲ್ಪ ಸರಿಸಬೇಕು. ಅಂಗಿ ನೆರಿಗೆ ಬಂದಿದೆ. ಥತ್ ಈ ಒಳಾಂಗಣ ಸಂಭಾಷಣೆಯ ಮೈಕು, ಹೆಡ್‌ಫೋನ್ ಕೆಟ್ಟಿವೆ. ಕಿರುಚಲೇಬೇಕು. ಸುಮ್ಮನೇ ಅಲ್ಲಿನ ಕಾರ್ಪೆಟ್ ಮೇಲೆ ಕೂತ್ಕೋಬೇಕು. ಮೊದಲ ದಿನದ ಭಯ ಈಗಿಲ್ಲ. ಕಾರ್ಪೆಟಿನ ಕಟು ಶೂ ನಾತವೂ ಅಡ್ಜಸ್ಟ್ ಆಗಿದೆ. 

ವೆಂಕಟನಾರಾಯಣನಿಗೆ ಧಾರವಾಡದ ಮುದುಕನ ಪಾರ್ಟು. ಆಮೇಲೆ ಅವನೇ ಶಿಶುನಾಳ ಶರೀಫನ ಪಾರ್ಟು ಹಾಕಿಕೊಳ್ಳಲು ಬೇಕಾದ ಏಕತಾರಿ ತಂದಿದಾನೆ. ಗಡ್ಡಕ್ಕೆ ಬೇಕಾದ ಕೂದಲು, ಸ್ಪಿರಿಟ್ ತಂದಿದಾನೆ. ಅವನೂ ನಾಟಕ ಮಾಡಬೇಕು. ಗ್ರಾಫಿಕ್ ಕಲಾವಿದನಾಗಿ ಈ ನಾಟಕದ ಹುಚ್ಚು ಹುಟ್ಟಿದ್ದೇ ಅವನನ್ನು ಆ ಬಾಸಿಣಿ ಆಯ್ಕೆ ಮಾಡಿದಾಳೆ. 

ಪ್ರಾಂಪ್ಟರ್ ಮುಂದೆ ಇದ್ರೂ ವೆಂಕಟನಾರಾಯಣನಿಗೆ ನಾಲಿಗೆ ಹೊರಳ್ತಾ ಇಲ್ಲ. ನಗ್ತಾ ನಗ್ತಾ ಇದಾನೆ. ಟೇಪು ಹಾಗೇ ಎಲ್ಲಾ ಟ್ರಯಲ್‌ಗಳನ್ನು ದಾಖಲಿಸಿಕೊಳ್ಳುತ್ತ ತಿರುಗ್ತಿದೆ. ನಾನು ಮತ್ತೆ ಮತ್ತೆ ಎದ್ದು ಡಯಲಾಗ್ ಹೇಳಿಕೊಡೋದು, ಅವ ತಪ್ಪೋದು ನಡೀತಾ ಇದೆ… ಮಧ್ಯೆ ಪ್ರತಿಭಾ ಬಂದು ಇವನ ವೇಷ ನೋಡಿ ತಮಾಷೆ ಮಾಡಿ ಹೋಗಿದಾಳೆ. ನ್ಯೂಸ್ ಕಾವೇರಿ ಅಲ್ಲೇ ರೆಕಾರ್ಡಿಂಗ್ ರೂಮಿನಲ್ಲಿ ಸನ್ನೆ ಮಾಡ್ತಾ ಅಣಗಿಸ್ತಾ ಇದಾಳೆ. ಯಾರೋ ಬಂಡವಾಳ ಹೂಡೋ ಭಂಡನಿಗೆ ಬಾಸ್ ತನ್ನ ಸ್ಟುಡಿಯೋ ಎಷ್ಟೆಲ್ಲಾ ಅತ್ಯಾಧುನಿಕ ಅಂತ ಬುರುಡೆ ಬಿಡ್ತಾ ಇದಾನೆ.

ಓಹ್… ತಲೆ ತಿರುಗ್ತಾ ಇದೆ… ಕವಿಹೃದಯಕ್ಕೆ ಬೇಕಾದ ವಾತಾವರಣ ಇಲ್ಲಿಲ್ಲ. ತಣ್ಣಗೆ ಗಾಳಿ ಬೀಸ್ತಾ ಇದೆ ನಿಜ. ಆದ್ರೆ ಅವಳ ಜೊತೆ ಇದ್ದಾಗ ಬೀಸೋ ಗಾಳಿ ಇಲ್ಲಿಲ್ಲ. ಅವಳನ್ನೂ ಇಲ್ಲೇ ಕಾರ್ಪೆಟ್ ಮೇಲೆ ಕೂರಿಸಿಕೊಂಡು ಮಾತಾಡಬಹುದಿತ್ತು. ಅವಳೇ ಹೇಳಿದ್ದಳು : ನೀನು ಯಾವಾಗ್ಲಾದ್ರೂ ಫೋನ್ ಮಾಡು…ನಾನು ಸೀದಾ ಬರ್‍ತೀನಿ….

ವೆಂಕಟನಾರಾಯಣ ಕೊನೆಗೂ ವೇಷ ಬದಲಿಸಿದಾನೆ. ಈಗ ಶಿಶುನಾಳ ಷರೀಫ. ಅಳಬೇಡಾ ತಂಗಿ ಅಳಬೇಡ…. ಬಿದ್ದೀಯಬೇ ಮುದಕಿ ಬಿದ್ದೀಯಬೇ…. ಹಾಗೇ ಹೊಸ ಧಾರ್ಮಿಕ ವೆಬ್‌ಸೈಟಿಗೆ ವಿಸಿಟ್ ಮಾಡಿ ಅನ್ನೋವರೆಗೆ 

ಬ್ರೇಕ್.

ಎಲ್ಲಾ ಗೊತ್ತು ಈ ಮಗನಿಗೆ. ಮೊದಲ ಸಲ ಶೂಟಿಂಗ್ ಇದ್ದಾಗ ಮನೆಯಿಂದ ಫೋನು ಬಂದಿತ್ತು. ಮಗ ಹುಟ್ಟಿದಾನೆ. ಎಲ್ಲ ವೇಷ ಕಳಚಿ ನಿಜಬದುಕಿನ ಸಂಭ್ರಮದಲ್ಲಿ ಮುಳುಗಲಿಕ್ಕೆ ಆತ ಹಾರಿಹೋದ ಪರಿ ಇನ್ನೂ ಚೆನ್ನಾಗಿ ನೆನಪಿದೆ. 

ಕಟ್.

ಮೃದುಲ್ ಸೂರಿ ಬಂದು ಕುಛ್ ಝೋಶ್ ಹೋನಾ ಭಾಯ್ ಅಂತಿದಾನೆ. ಹೋತದ ಗಡ್ಡದ ಈ ಮನುಷ್ಯನಿಗೆ ಝೋಶ್ ಅಂದ್ರೆ ಎಂ ಟಿ ವೀಲಿ ಇದ್ದ ಹಾಗೆ ತಲೆ ಇಲ್ದೆ ಕಿರುಚೋದೆ ಅಥವಾ ಎಫ್ ಟಿ ವೀಲಿ ಇದ್ದ ಹಾಗೆ ಬಟ್ಟೆ ಬಿಚ್ಚೋದೆ – ಗೊತ್ತಿಲ್ಲ. ಮೊನ್ನೆ ಜೇಮ್ಸ್‌ಬಾಂಡ್ ಆಂಕರ್ ಪಾತ್ರಕ್ಕೆ ಬಾಸ್‌ನ ಹಳೆ ಮನೆಗೆ ಹೋದಾಗಲೂ ಹೀಗೇ. ಎಷ್ಟೆಲ್ಲ ಕ್ಯಾಮೆರಾಮೆನ್‌ಗಳು… ಮೂರು ಕ್ಯಾಮೆರಾ, ನಾಲ್ಕು ಜ್ಯೂನಿಯರ್‌ಗಳು, ನಾಲ್ಕು ಬೇಬಿ…. ಕೊನೆಗೆ ಬಿರಿಯಾನಿ ಬರೋ ಹೊತ್ತಿಗೆ ರಾತ್ರಿ ಹನ್ನೊಂದು. ಈ ನನ್‌ಮಗ ಬಿರಿಯಾನಿ ತಿಂದು ಮಲಗಿದ್ದೇ. ಡೈಲಿ ಆಕ್ಟಿವಿಟಿ ಪುಸ್ತಕದಲ್ಲಿ ಖಂಡಿತಾ ರಾತ್ರಿ ಇಡೀ ಶೂಟಿಂಗ್‌ನಲ್ಲಿ ಭಾಗವಹಿಸಿದ್ದೆ ಅಂತ ಬರೀತಾನೆ. 

ಥತ್. 

ಇವರ ಬಗ್ಗೆ ಮಾತಾಡೋವಾಗೆಲ್ಲ ಎಷ್ಟೆಲ್ಲ ದರಿದ್ರ ಪದಗಳು ಬರ್‍ತಾ ಇವೆ ಅಂದುಕೊಂಡ ಹಾಗೇ ಕ್ಯಾಮೆರಾ ಮನೋಹರ ಬಂದಿದಾನೆ. ಅಸಿಸ್ಟಂಟ್‌ಗಳಿಗೆ ಥೂ ನನ್‌ಮಗನೇ ಅನ್ನದೆ ಮನೋಹರ್ ಶುರು ಮಾಡೋದೇ ಇಲ್ಲ. ತಗೋಳೋ ವೈಟ್. ಹಿಂದೆ ಲೈಟ್ ಕಟ್ ಮಾಡು. ಮನೋಹರ ಮಾತಾಡೋದು ಹೇಗೋ ಕೆಲಸ ಮಾತ್ರ ನೀಟು. ಉಳಿದವರ ಹಾಗೆ ಯಾವಾಗ್ಲೂ ಸೆಟ್ ಸರಿ ಮಾಡ್ತಾ ಕೂತ್ಕೋಳಲ್ಲ.

ಅವಳು ಈಗ ನನಗೆ ಫೋನ್ ಮಾಡಲಿಕ್ಕೆ ಪ್ರಯತ್ನ ಮಾಡ್ತಿರಬಹುದು. ಇದು ಹೊರಗಣ ಶಬ್ದವೇ ಒಳಬರಬಾರದ ಈ ಕೋಣೆಯಲ್ಲಿ. ಎಲ್ಲವೂ ಸನ್ನೆಯಲ್ಲಿ . 

ಅವಳ ಹತ್ರ ಮಾತಾಡಬೇಕು ಅಂದ್ರೆ ಶಾಂತವಾದ ವಾತಾವರಣ ಇರಬೇಕು. ಈ ಟಿವಿ ಆಫೀಸ್, ಈ ರೆಕಾರ್ಡಿಂಗ್, ಈ ಸ್ಕ್ರಿಪ್ಟ್, ಈ ಕ್ಯಾಮೆರಾ ಯಾವುದೂ ಇರಬಾರದು… ಈ ಡಿಜಿಟಲ್ ಯುಗದಲ್ಲಿ ಇರೋದು ಕೇವಲ ಭ್ರಮೆ. ಅವೆಲ್ಲ ಕಳಚಿದ ಮೇಲೆ ನಾನು ಮೆಜೆಸ್ಟಿಕ್ಕಿನಲ್ಲಿ ಯಾವಾಗ್ಲೂ ವಾಕಿಂಗ್ ಮಾಡೋ ಪುಟ್ಟ ಹುಡುಗ. ಅಲ್ಲಿನ ಥಿಯೇಟರುಗಳ ಪೋಸ್ಟರುಗಳನ್ನು ನೋಡುತ್ತ ನಡೆಯಬೇಕು. ಅಲ್ಲಿರೋ ಕೊಳಕು ಮ್ಯಾಗಜಿನ್‌ಗಳನ್ನು ವಾರೆ ನೋಟದಿಂದ ನೋಡುತ್ತ ನಡೆಯಬೇಕು. ಚಿಕ್ಕ ಲಾಲ್‌ಬಾಗಿನಲ್ಲಿ ನಡೆಯೋ ಸಂಬಂಧಗಳನ್ನು ನೋಡಬೇಕು. ಸ್ವಲ್ಪ ಬೆಳೆದದ್ದು ಹೌದಾದರೆ ನಾನು ಲಾಲ್‌ಬಾಗಿನಲ್ಲಿ ಅವಳ ಜೊತೆ ಕೂತು ಹರಟಬೇಕು. ಅವಳ ಕೈ ಬೆರಳುಗಳನ್ನು ನವಿರಾಗಿ ಹಿಡಿದು ಕೂರಬೇಕು. 

ಉಹು…. 

ಇವೆಲ್ಲ ಈ ವರ್ಷ ಸಾಧ್ಯವಿಲ್ಲ…. ಈ ಚಾನೆಲ್‌ನಲ್ಲಿ ಕನ್ನಡದ ಬ್ಯಾಂಡು ಬಾರಿಸಬೇಕು. ತಂತ್ರeನ ವಾರ್ತೆ ಓದಬೇಕು…. ಅಕಸ್ಮಾತ್ ಈ ಪ್ರಾಜೆಕ್ಟ್ ಯಶಸ್ವಿಯಾದರೆ ಇನ್ನೊಂದೇ ವರ್ಷದಲ್ಲಿ ಒಂದು ಕನ್ನಡ ಚಾನೆಲ್‌ಗೆ ಮುಖ್ಯಸ್ಥ. ಕನ್ನಡದ ಅನೇಕ ಹಿರಿಯ ಪತ್ರಕರ್ತರಿಗೆ ಸಿಗದ ಸೌಭಾಗ್ಯದ ಬಾಗಿಲು ತೆರೆದುಕೊಳ್ಳುತ್ತೆ. ಈ ಥರ ಎಷ್ಟಾದರೂ ಯೋಚಿಸಬಹುದು ಅನ್ನೋಹೊತ್ತಿಗೆ 

ಅಲಕಾ ನೆನಪಾಗ್ತಾಳೆ. 

ಗ್ರಾಫಿಕ್ ಸೆಕ್ಷನ್ನಿನ ನಾಯಕಿ. ಕಾರ್ಟೂನ್ ನೆಟ್‌ವರ್ಕಿನಲ್ಲಿ ಇರೋ ಹುಡುಗಿ ಥರ ತುಟಿಗಳು ಸದಾ ಕೆಂಪು. ಸದಾ ಮಾಯಾ ಸಾಫ್ಟ್‌ವೇರ್ ಜೊತೆ ಕೂತಿರ್‍ತಾಳೆ. ಅದರ ನಯಾಪೈಸೆ ವಿಚಾರ ಗೊತ್ತಿಲ್ಲ. 

ಆ ಹಳೇ ಆಫೀಸಿನ ತಾರಸಿ ಹತ್ತಿದರೆ ಮರಗಳು ಪೇಲವವಾಗಿ ಕಾಣುತ್ತಿವೆ. ಪಕ್ಕದಲ್ಲಿ ಅಪಾರ್ಟ್‌ಮೆಂಟಿನ ರಿಪೇರಿ ಕೆಲಸದ ಸದ್ದು. ಕೆಳಗೆ ಶ್ರೀನಿವಾಸ ಇಂಟರ್‌ನೆಟ್ ಟಿಪ್ಸ್ ಬಗ್ಗೆ ಮಾತಾಡ್ತಿದಾನೆ. 

ನಾಯಿಬೆಲ್ಟು ಎಲ್ಲರ ಬದುಕಿನ ಮೂಲಸೆಲೆ ಅನ್ನೋ ಹಾಗೆ ಕಾಣಿಸುತ್ತೆ. ಅನಿಟಾ, ರೇಖಾ, ಅಲಕಾ, ವೆಂಕಟನಾರಾಯಣ, ಶ್ರೀನಿವಾಸ ಎಲ್ಲರಿಗೂ ನಾಯಿಬೆಲ್ಟಿನ ಮೇಲೆ ಎಷ್ಟು ಪ್ರೀತಿ.

ಇಲ್ಲಿ ಅವಳ ಪ್ರೀತಿ ಎಷ್ಟು ? ಅವಳಿಗೆ ಈ ಬೆಲ್ಟಿನ ವಿಷಯ ಗೊತ್ತೆ ? ಟೊಣಪ ದೀಪಕ್ ಶೂಟಿಂಗ್‌ಗೆ ಹೋದಾಗಲೂ ಬೆಲ್ಟನ್ನು ಪದಕದ ಹಾಗೆ ಮೆರೆಸ್ತಾ ಇರೋದು ಅವಳಿಗೆ ಗೊತ್ತೆ ? 

ನಾಯಿಬೆಲ್ಟಿನ ವಿನ್ಯಾಸ ಮಾಡೋದಕ್ಕೆ ಜಾಹೀರಾತು ಸಂಸ್ಥೆ ಇದೆ. 

ಅದನ್ನು ಗಮನಿಸೋದಕ್ಕೆ ಸೆಕ್ಯುರಿಟಿಯವರಿದಾರೆ. 

ಅದು ಬಾಗಿಲಿನಲ್ಲಿ ಬೊಗಳಿದ್ದನ್ನೆಲ್ಲ ಕೇಳಿಸ್ಕೊಂಡು ದಾಖಲಿಸೋ ಎಚ್ ಆರ್ ಡಿ ವಿಭಾಗ ಇದೆ. 

ಮನುಷ್ಯರು ಇಲ್ಲಿ ನಾಬೆಲ್ಟಿನ ಅನುನಾಯಿಗಳು. ಅದು ಹೇಳಿದಂತೆ ಬದುಕ್ತಾರೆ.

*** 

ಆಗಸ್ಟ್ ತಿಂಗಳ ಸ್ಯಾಲರಿ ಸ್ವಲ್ಪ ತಡ ಅಂತ ಎಲ್ಲರಿಗೂ ಬಾಯಿಮಾತಿನ ಸಂದೇಶ ಬಂದಿದೆ. ಯಾಕೆ ಈ ಮೈಲನ್ನು ಬಳಸಿಲ್ಲ ? ಅದು ರೆಕಾರ್ಡ್ ಆಗಬಾರ್‍ದು. ಎಡಿಟಿಂಗ್ ರೂಮಿನಲ್ಲಿ ಅರವಿಂದ ಸಿಡಿ ಹಾಕಿದಾನೆ. ದೀಪಕ್ ಅಲ್ಲಿ ಅಂಜಲಿ ಜೊತೆ ಹರಟ್ತಿದಾನೆ. ಅಲ್ಲಿ ಸುಬ್ಬು ಹೊಸ ಇಂಟರ್‌ವ್ಯೂನ ಲಾಗ್ ಮಾಡ್ತಿದಾನೆ. ಮೆಟೀರಿಯಲ್ಸ್ ಮ್ಯಾನೇಜರ್ ಅಲ್ಲಿ ಹೊಸ ಕೇಬಲ್‌ಗಳನ್ನು ಎಳೀತಿದಾನೆ.

ಎಷ್ಟು ವಿವರಗಳು. ಇಲ್ಲಿ ಎಲ್ಲರ ಬಗ್ಗೇನೂ ಎಷ್ಟೆಲ್ಲ ಹೇಳಬಹುದು. ಗೌರಿ ಹೇಗೆ ಮೂಗು ಮುರೀತಾಳೆ, ವಿಕ್ಕಿ ಹೇಗೆ ವಾರಕ್ಕೆರಡು ಸಲ ಗಡ್ಡದ ಡಿಸೈನ್ ಬದಲಾಯಿಸ್ತಾನೆ, ಮಾರ್ಗರೆಟ್ ಉರುಫ್ ಮ್ಯಾಗಿ ಹೇಗೆ ತಾನೇ ದೊಡ್ಡ ಸಂಪಾದಕಿ ಅನ್ನೋ ಥರ ನಿರ್ವೇದಿತಾ ಚೇಂಬರಿನಲ್ಲಿ ಕೂತಿರ್‍ತಾಳೆ, ಅಲಾಫ್ಯಾ ಹೇಗೆ ಹಿಂದಿ ಹಾಡುಗಳನ್ನು ಗುನುಗ್ತಾಳೆ, ನಾಗರತ್ನ ಹ್ಯಾಗೆ ಅದ್ನಾನ್ ಸಾಮಿಯ ವಿಷಾದದ ಹಾಡನ್ನು ಕನಿಷ್ಠ ಇಪ್ಪತ್ತು ಸಲ ರಿಪೀಟ್ ಮಾಡ್ತಾಳೆ, ಸುರೇಶ್ ಹೇಗೆ ನೆಟ್‌ವರ್ಕ್ ಸಮಸ್ಯೆಗಳನ್ನು ಇದ್ದೂ ಇಲ್ಲದಂತೆ ನಿವಾರಿಸ್ತಾನೆ, ಉಮೇಶ್ ಪ್ರಭು ಹೇಗೆ ಅರಬ್ ದೈನಿಕದಿಂದ ಬಂದವನು ಅನ್ನೋ ಕ್ಷುಲ್ಲಕ ಕ್ವಾಲಿಫಿಕೇಶನ್‌ನ್ನೇ ಮುಂದೆ ಮಾಡಿಕೊಂಡು ಐಟಿ ಸ್ಟೋರೀಲಿ ಗೋಣು ಅಲ್ಲಾಡಿಸ್ತಾ ಇರ್‍ತಾನೆ….. ಜಡೆಮುನಿ ಥಾಮಸ್ ಹ್ಯಾಗೆ ತಿಕ ಮುಚ್ಚಿಕೊಂಡು ಕೆಲಸ ಮಾಡ್ತಾನೇ ಇರ್‍ತಾನೆ….

ಥತ್. 

ಈ ಕಚೇರೀಲಿ ಒಬ್ಬರಿಗೂ ನಾವು ಮನುಷ್ಯರು ಅನ್ನೋದೇ ಗೊತ್ತಿಲ್ಲ. 

ಯಾರಿಗೂ ಈ ತಾರಸಿ ಮೇಲಿರೋ ಗಾಳಿ ಬೇಡ. ಸಿಗರೇಟ್ ಹೊಗೆ ಅಡರಬೇಕು. 

ಗಾಜಿನಿಂದ ತೂರಿಬರೋ ಬಿಸಿಲು ಬೇಡ. ಟ್ಯೂಬ್‌ಲೈಟ್‌ಗಳು ಬೆಳ್ಳಗೆ ಉರೀಬೇಕು.

ಕಂಪ್ಯೂಟರಿನಲ್ಲಿ ಕೊನೇಪಕ್ಷ ಹಸಿರು ಎಲೆಯೂ ಬೇಡ. ಪೋರ್ನ್‌ಸೈಟ್ ಬೇಕು. ಅಡಲ್ಟ್ ಚಾಟ್ ಬೇಕು.

ಕಣ್ಣಿಲ್ಲದ ಜಸ್ಟಿನ್ ಮಾತ್ರ ಇಲ್ಲಿ ಕೆಲಸಗಾರ. ಒಳಗಣ್ಣಿನಲ್ಲೇ ಜಗತ್ತನ್ನು ಬ್ರೌಸ್ ಮಾಡೋ ರ. ‘ನಿಮ್ಮ ಕಾರ್ಯಕ್ರಮ ಚೆನ್ನಾಗಿತ್ತು. ವಾಯ್ಸ್ ಅದ್ಭುತ’ ಅಂತ ಕನ್ನಡದಲ್ಲಿ ಹೊಗಳ್ತಾನೆ. 

*** 

ತಿಂಗಳುಗಳು ಕಳೀತಾ ಇವೆ. ಸಂಬಳ ಡಿಲೇ ಆಗಿದೆ. ಯಾರೋ ದಿಲ್ಲಿಯಲ್ಲಿ ಕ್ಯಾಮೆರಾ ಕದ್ದು ಓಡಿಹೋದ ಕಥೆ, ಮುಂಬಯಿಯಲ್ಲಿ ಖ್ವಾಲಿಸ್ ಮಾರಿದ ಕಥೆ ಎಲ್ಲರನ್ನೂ ಹಾದುಹೋಗಿದೆ. ಫೈನಾನ್ಸ್ ಡೈರೆಕ್ಟರ್ ಕಲ್ಯಾಣರಾಮನ್ ರಾಜೀನಾಮೆ ಕೊಟ್ಟಿದ್ದಾನೆ. ಪೀಪಲ್ಸ್ ಮ್ಯಾನೇಜರ್ ಹೇಳದೆಕೇಳದೆ ಬಿಟ್ಟಿದಾನೆ. 

ಅವಳಿಗೆ ಎಲ್ಲವನ್ನೂ ವಿವರಿಸಬೇಕು. ಶಾಂತಿಸಾಗರದ ಎ ಸಿ ರೂಮಿನಲ್ಲಿ ಕೂತು ಗಂಟೆಗಟ್ಟಲೆ ಇಲ್ಲಿ ನಡೆದ ಜೋಕುಗಳನ್ನು ಹರಡಬೇಕು. ಈ ಬೆಲ್ಟನ್ನು ಬಿಸಾಕಿಬಿಡಬೇಕು. ಈ ಜೀತ ಸಾಕು.

ಡಿಜಿಟಲ್ ಕಚೇರಿ ನಮ್ಮನ್ನು ಎದೆಯನ್ನೇ ಸುಡುತ್ತೆ. ಮುಖ ಚೆನ್ನಾಗಿಲ್ಲ ಅಂತ ಕಾವೇರಿಗೆ ಟರ್ಮಿನೇಶನ್ ಲೆಟರ್ ಬಂದಿದೆ. ಪ್ಯಾಂಟು ಸರಿಯಾಗಿ ಹಾಕಲ್ಲ ಅಂತ ರಮೇಶನಿಗೆ ಪುಣೆಯಿಂದ ವಾಪಸಾಗಲಿಕ್ಕೆ ಬುಲಾವ್. 

ಥತ್. 

***

ನಿರ್ವೇದಿತಾ ಈಗ ಹೆಚ್ಚಾಗಿ ಕಾಣಿಸ್ತಿಲ್ಲ. ಮಾರ್ಕ್ ಡಿಡಿ ಸೇರಿದಾನೆ. ವಿಭಂಜನ್ ಚೇಂಬರಿನಲ್ಲಿ ಇದ್ದ ಥಿಂಕ್‌ಪ್ಯಾಡ್ ಕಳವಾಗಿದೆ. 

ರೇಖಾ ಈಗ ನಗುತ್ತಿಲ್ಲ. ಅವಳ ಕಣ್ಣುಗಳಲ್ಲಿ ವಿಷಾದವೂ ಇಲ್ಲ. ‘ಇರ್‍ಲಿ ಬಿಡಿ ಸರ್. ಅಪ್ಪ ಬೇರೆ ಕೆಲಸ ನೋಡೋಣ ಅಂದಿದಾರೆ. ಐದು ಸಾವಿರ ಸಿಕ್ರೂ ಸಾಕು’. 

ಡಿಜಿಟಲ್ ಕಚೇರಿಯ ಸ್ಯಾಲರಿ ಆಕಾಶ ಮುಟ್ಟಿತ್ತು. 

ಹುಡುಗರು, ಹುಡುಗೀರು ಬರೀ ಪಿಜ್ಜಾದಲ್ಲೇ ಮುಳುಗಿದ್ರು. 

೩೭ರ ಹರೆಯದ ಮುದುಕರು ಬರೀ ಕಾರು ಖರೀದಿಯಲ್ಲಿ ತೊಡಗಿದ್ರು. 

ಸೆಕ್ಯುರಿಟಿಗಳು ನಾಯಿಬೆಲ್ಟನ್ನು ಪರೀಕ್ಷೆ ಮಾಡ್ತಾನೇ ಇದ್ರು. 

ಈಗ ಎಲ್ಲವೂ ಬದಲು. ಅನಿಟಾ ಕೂಡಾ ನಗಲ್ಲ. 

ಎಷ್ಟೋ ಜನ ರಾಜೀನಾಮೆ ಕೊಟ್ಟ ಮೇಲೆ ನೀಟಾಗಿ ನಾಯಿಬೆಲ್ಟನ್ನು ಬ್ಯಾಜಿಗೆ ಸುತ್ತಿ ಸರಂಡರ್ ಮಾಡಿದ್ದಾರೆ. 

ಅವರ ಲೆಕ್ಕ ಕ್ಷಣಮಾತ್ರದಲ್ಲಿ ಚುಕ್ತಾ. ಪೋಸ್ಟ್ ಡೇಟೆಡ್ ಚೆಕ್ ಬರುತ್ತೆ. ಭವಿಷ್ಯದಲ್ಲಿ ಬರುವ ಹಣಕ್ಕೆ ಚೆಕ್. ಅದಕ್ಕೆ ಡಿಜಿಟಲ್ ಸಿಗ್ನೇಚರ್ ಇಲ್ಲ. ವಿಭಂಜನ್ ಅಂದವಾಗಿ ಕೆತ್ತಿದಾನೆ. ಅದು ಬೌನ್ಸ್ ಆಗುತ್ತೆ ಅಂತ ಚೆನ್ನಾಗಿ ಗೊತ್ತು. 

ಕಲಾವಿದ ಲಕ್ಕಿ ಮೊನ್ನೆ ಖಾಲಿಬಿದ್ದ ಕಚೇರಿಗೆ ಹೋಗಿದಾನೆ. ಅಲ್ಲಿ ಒಬ್ಬನೇ ಅಕೌಂಟಂಟ್ ಇದಾನೆ. ಡಿಜಿಟಲ್ ಕಚೇರೀಲಿ ನಾಯಿಬೆಲ್ಟಿಲ್ಲದೆ ಹೋದ ಮೊದಲ ದಿನ. ಕಂಪ್ಯೂಟರಿನಲ್ಲಿ ಟ್ಯಾಲಿ ಓಪನ್ ಆಗಿದೆ. ಲೆಕ್ಕಪತ್ರಗಳು ಅನಾಥವಾಗಿ ತೆರೆದುಕೊಂಡಿವೆ. 

ಚೇರ್‌ಮನ್ ವಿಭಂಜನ್ : ತಿಂಗಳಿಗೆ ಹದಿನೆಂಟು ಲಕ್ಷ. ನಿರ್ವೇದಿತಾ : ತಿಂಗಳಿಗೆ ಹದಿನೈದು ಲಕ್ಷ. ಖರ್ಚು, ಪ್ರವಾಸ ಪ್ರತ್ಯೇಕ. 

ಹೊರಗೆ ಒಣ ಎಲೆಗಳ ಸದ್ದು ಕೇಳ್ತಾ ಇದೆ. ಜುಜುಬಿ ಸ್ಕೂಟರ್ ಕೂಡಾ ನಿಂತಿರದ ಪೋರ್ಟಿಕೋದಲ್ಲಿ ಪೇರಲೆ ಹಣ್ಣುಗಳು ಉದುರಿಬಿದ್ದಿವೆ.

ಬಾರೆ..

ನಿನ್ನ ಭುಜಕ್ಕೆ ತಲೆಯಾನಿಸಿ ಮಲಗ್ತೇನೆ ಕಣೆ. ಬಾರೆ… ಎಷ್ಟು ವರ್ಷಗಳಿಂದ ಕೆಲಸ, ಕೆಲಸ. ಈ ಕಂಪನೀಲಿ ಒಂದು ವರ್ಷ ದುಡಿದಿದೀನಿ. ಇಲ್ಲಿ ಮಲಗಿದೀನಿ. ಇಲ್ಲೇ ನನ್ನ ಎಡಗೈ ಮುರ್‍ಕೊಂಡೂ ಎಡಿಟಿಂಗ್ ಮಾಡಿದೀನಿ. 

ಈಗ ನಾಯಿಬೆಲ್ಟು ಕಳಚಿದ ಮೇಲೆ ಮತ್ತೆ ಮತ್ತೆ ನಿನ್ನ ನೆನಪಾಗ್ತಿದೆ. ಆ ತಾರಸಿಯೂ ಬೇಡ ಬಿಡು. ಇಲ್ಲೇ ಫುಟ್‌ಪಾತಿನಲ್ಲಿ ಕೂತುಬಿಡೋಣ.

ಅಥವಾ

ನಾನು ಕರೆದದ್ದೇ ತಪ್ಪಾಯ್ತೇನೆ ?

2 thoughts on “ನಾಯಿಬೆಲ್ಟು

  1. ಇಂತಹ ಕೆಲಸಕ್ಕಾಗಿ ಹಂಬಲಿಸುವ ಯುವಜನಾಂಗಕ್ಕೆ ಸತ್ಯದರ್ಶನ ಮಾಡಿಸಿಬಿಟ್ರಿ ಸರ್. ಒಂದು ಕಾಲದಲ್ಲಿ ನಾನೂ ಇದಕ್ಕೆ ಆಸೆಪಟ್ಟವಳೇ. ಈಗ ಓದಿದರೆ ನಾನು ಬಚಾವಾದೆ ಅಂತನಿಸುತ್ತದೆ.

Leave a Reply

Your email address will not be published. Required fields are marked *