೧೯೮೩ರ ಅಕ್ಟೋಬರ್ ತಿಂಗಳಿನ ಮೂವತ್ತನೇ ತಾರೀಖಿನ ದಿನಚರಿ ಪುಟದಿಂದಲೇ ಈ ಕಥೆಯನ್ನು ಆರಂಭಿಸಬಹುದಾದರೆ…
ಭಾನುವಾರ ಮುತ್ತಣ್ಣ. ಸೋಮವಾರ ರಾಮರಾವ್. ಮಂಗಳವಾರ ಸುಬ್ರಹ್ಮಣ್ಯ ಭಟ್. ಬುಧವಾರ ಮಂಜಣ್ಣ. ಗುರುವಾರ ಕೃಷ್ಣಾರೆಡ್ಡಿ. ಶುಕ್ರವಾರ ಮಂಗಳಗೌರಿ. ಶನಿವಾರ ಖಾಲಿ.
ವಾರಾನ್ನದಲ್ಲೇ ಇಂಜಿನಿಯರಿಂಗ್ ಕೋರ್ಸ್ ಮಾಡಬೇಕೆಂಬ ಅನಿವಾರ್ಯತೆಗೆ ಪಕ್ಕಾದ ಶಂಕರನಾರಾಯಣ ದಾವಣಗೆರೆಯ ಬಡಾವಣೆಗಳಲ್ಲಿ ಸೈಕಲ್ ಏರಿ ತಿರುಗುವ ಗೂಳಿಯಂತೆ ಕಾಣಿಸುತ್ತಿದ್ದ. ಅವನನ್ನು ಆಗಾಗ್ಗೆ ಸ್ಟೇಡಿಯಂ ಒಳಗಿದ್ದ ಗ್ರಂಥಾಲಯದಲ್ಲೂ ಕಾಣಬಹುದಿತ್ತು. ಅರಿಂಜಯನ ಎಲ್ಲ ಸಾಹಸಗಳನ್ನೂ ಓದಿ ಮುಗಿಸಿದ್ದ ಶಂಕರನಾರಾಯಣ ಈಗ ಪುರುಷೋತ್ತಮನ ಸಾಹಸಗಳಿಗೆ ಕೈ ಹಾಕಿದ್ದ. ಸಾಗರದ ಅಗಡಿ ಮಠದಲ್ಲಿ ನಡೆದ ಯಾವುದೋ ಮದುವೆಯಲ್ಲಿ ತನ್ನ ಅಣ್ಣ, ಸೋದರಭಾವ ಎಲ್ಲರೂ ಎನ್. ನರಸಿಂಹಯ್ಯನವರ ಕಾದಂಬರಿಗಳನ್ನು ಕದ್ದುಮುಚ್ಚಿ ಓದುತ್ತಿದ್ದುದನ್ನು ಆತ ಗಮನಿಸಿದ ಕ್ಷಣದಿಂದಲೇ ಇವನ್ನು ಓದಲು ಏಟು ಹಾಕಿದ್ದ. ಈಗ ಎಲ್ಲ ಮುಕ್ತ. ಶಂಕರನಾರಾಯಣನಿಗೆ ಅವನದ್ದೇ ಆದ ಅಟ್ಲಾಸ್ ಬೈಸಿಕಲ್ ಇದೆ. ಬೇಕಾದ ಹಾಗೆ ಓಡಾಡಬಹುದು. ಗ್ರಂಥಾಲಯಕ್ಕೆ ದಿನಾಲೂ ಬಂದು ಒಂದಲ್ಲ ಒಂದು ಸಾಹಸವನ್ನು ಓದುತ್ತ ಶಂಕರನಾರಾಯಣ ತನ್ನೊಳಗೆ ತಾನೇ ಅರಳುತ್ತಿದ್ದ. ಕೆಲವು ಪುಟಗಳಲ್ಲಿ ಕಂಡುಬರುತ್ತಿದ್ದ ರೋಮಾನ್ಸ್ ದೃಶ್ಯಗಳನ್ನಂತೂ ಶಂಕರನಾರಾಯಣ ಸವಿಯುತ್ತ ಸವಿಯುತ್ತ… ಹಾಗೆಯೇ ಸೈಕಲ್ ಏರಿ ಹರಿಹರಕ್ಕೆ ಹೋಗಿದ್ದೂ ಇದೆ. ದೊಡ್ಡಬಾತಿಯನ್ನು ದಾಟಿದ ಮೇಲೆ ಸಿಗುವ ಭೂದೃಶ್ಯಗಳು ಶಂಕರನಾರಾಯಣನಿಗೆ ತುಂಬ ಖುಷಿ ಕೊಡುತ್ತಿದ್ದವು. ಶಂಕರನಾರಾಯಣ ಪೋಲಿಯಲ್ಲ. ದೃಶ್ಯಗಳನ್ನು ಕಲ್ಪಿಸಿಕೊಳ್ಳದ ಅರಸಿಕನೂ ಅಲ್ಲ. ಯಾವುದನ್ನೂ ಹೆಚ್ಚಾಗಿ ಪ್ರದರ್ಶಿಸದ, ಯಾವ ಭಾವನೆಗಳಿಗೂ ಮುಖದಲ್ಲಿ ವೇದಿಕೆ ನೀಡದ ಶಂಕರನಾರಾಯಣ ಚೆನ್ನಾಗಿ ಕರಿದರೂ,ಬಂಗಾರದ ಬಣ್ಣವಿದ್ದರೂ ರುಚಿಯಿಲ್ಲದ ಅಂಬೊಡೆಯ ಥರ ಇದ್ದ. ತುಂಬಾ ಸಿಲ್ಲಿ ಉಪಮೆ ಎಂದು ನೀವು ತಿಳಿದರೆ ಒಂದು ಸಲ ಅಂಥ ಅಂಬೊಡೆಯನ್ನು ತಿಂದೇ ನೋಡಿ.
ಮುತ್ತಣ್ಣನ ಮನೆಯಲ್ಲಿ ಎಂದಿನಂತೆ ಅನ್ನ – ಸಾಂಬಾರಿನ ಊಟ ಸವಿಯುತ್ತಿದ್ದ ಶಂಕರನಾರಾಯಣ ರಾಮರಾವ್ ಮನೆಯಲ್ಲಿ ಗೋಧಿ ರೊಟ್ಟಿಯ ಮೆದುವಿಗೆ, ಸ್ವಾದಕ್ಕೆ ಮೈ ಮರೆಯುತ್ತಿದ್ದ. ಮಂಜಣ್ಣನ ಮನೆಯಲ್ಲಿ ರಾಗಿಮುದ್ದೆಯನ್ನೋ, ಜೋಳದ ರೊಟ್ಟಿಯನ್ನೋ ನಿರೀಕ್ಷಿಸಬಹುದಿತ್ತು. ಕೃಷ್ಣಾರೆಡ್ಡಿಯ ಮನೆಯಲ್ಲಿ ಕಷ್ಟಪಟ್ಟು ಸೊಪ್ಪಿನ ಸಾರು ಮಾಡುತ್ತಿದ್ದರು. ಮಂಗಳಗೌರಿ ಮನೆಯಲ್ಲಿ ಪಕ್ಕಾ ದಾವಣಗೇರಿ ಶೈಲಿಯ, ಆದರೆ ಮಲೆನಾಡಿನ ಸೊಗಡೂ ಮಿಶ್ರಿತವಾದ ಸಾರು, ಹುಳಿಯ ರುಚಿಯನ್ನು ಶಂಕರನಾರಾಯಣ ಸವಿಯುತ್ತಿದ್ದ. ಖಾಲಿ ಬಿದ್ದ ದಿನವನ್ನು ಕೇಳುತ್ತೀರೋ….. ಸೀದಾ ರಾಜನಹಳ್ಳಿ ಛತ್ರದ ಹತ್ತಿರ ಇರೋ ಅಜ್ಜನ ಬಾಳೆಹಣ್ಣಿನ ಗಾಡಿಯ ಪಕ್ಕವೋ, ಅಲ್ಲೇ ಇದ್ದ ಆಮ್ಲೆಟ್ ಅಂಗಡಿಯ ಪಕ್ಕವೋ ಶಂಕರನಾರಾಯಣನನ್ನೂ, ಅವನ ಬೈಸಿಕಲ್ಲನ್ನೂ ಕಾಣಬಹುದಿತ್ತು. ಕೇವಲ ಮುಖಪರಿಚಯದಿಂದಲೇ ಅಜ್ಜನಾಗಲೀ, ಆಮ್ಲೆಟ್ ಅಂಗಡಿಯು ಉತ್ಸಾಹಿ ಹುಡುಗನಾಗಲೀ, ಶಂಕರನಾರಾಯಣನಿಗೆ ಒಂದೆರಡು ದಿನ ಉದ್ರಿ ನೀಡುತ್ತಿದ್ದುದೂ ಇದೆ. ಅಷ್ಟರಮಟ್ಟಿಗೆ ದಾವಣಗೆರೆಯ ಕಮ್ಯುನಿಸಂ ಚಳವಳಿ ಬಗ್ಗೆ ಶಂಕರನಾರಾಯಣನಿಗೆ ಪ್ರೀತಿಯಿತ್ತು. ತನ್ನಂಥ ಹಿಂದಿಲ್ಲದ, ಮುಂದಿಲ್ಲದ ಮನುಷ್ಯನನ್ನು ಮುಖಮಾತ್ರದಿಂದಲೇ ನಂಬುವ ಈ ಅಜ್ಜ, ಆ ಹುಡುಗ ಎಂಥ ಮಾನವಪ್ರೀತಿ ಉಳ್ಳವರು ಎಂದು ಶಂಕರನಾರಾಯಣ ಒಂದು ಸಲ ತನ್ನ ರೂಮಿನಲ್ಲೇ ಕೂತು ಸದ್ದಿಲ್ಲದೆ ಬಿಕ್ಕಳಿಸಿದ್ದೂ ಇದೆ.
ಬಾಪೂಜಿ ಕಾಲೇಜಿನಲ್ಲಿ ಓದುವುದೆಂದರೆ ಎಂಥ ಥ್ರಿಲ್ ಎಂಬ ಸಂಗತಿ ಶಂಕರನಾರಾಯಣನ ಅರಿವಿಗೆ ಬಂದಿದ್ದೇ ಅವನ ಮೊದಲನೇ ದಿನದ ಕಾಲೇಜು ಪ್ರವೇಶದಲ್ಲಿ ; ತರಹೇವಾರಿ ಉಡುಗ ತೊಡುಗೆಯ ಹುಡುಗಿಯರನ್ನು ಕಂಡಮೇಲೆ ಅವನಿಗೆ ಕೊಂಚ ದಿಗಿಲಾಗಿದ್ದು ನಿಜವಾದರೂ ಆಮೇಲೆ ಇವೆಲ್ಲ ಸಹಜ ಉಡುಗೆಗಳೇ ಹೊರತು ಬೆಂಗಳೂರಿನ ಥಳುಕಲ್ಲ ಎಂಬ ಸಮಾಧಾನವೂ ಆಯಿತು. ಯಾಕೆಂದರೆ ಶಂಕರನಾರಾಯಣ ಎಂದೂ ದಾವಣಗೆರೆಯಲ್ಲಿ ಹಾಗೆ ಹುಡುಗಿಯರ ಆಕರ್ಷಣೆಗೆ ಒಳಗಾದವನೇ ಅಲ್ಲ. ಯಾವತ್ತೂ ತನ್ನ ದೇಶಭಕ್ತಿಯಾಯಿತು, ವಿದ್ಯಾರ್ಥಿ ಚಳವಳಿಯಾಯಿತು, ಗೋಡೆ ಬರಹವಾಯಿತು; ಐದನೇ ಕ್ಲಾಸಿನಲ್ಲಿದ್ದ ತನ್ನ ನೆಚ್ಚಿನ ಕ್ಲಾಸ್‌ಮೇಟ್ ಒಬ್ಬಳನ್ನು ಬಿಟ್ಟರೆ ಇನ್ನಾರನ್ನೂ ಸ್ನೇಹಿತೆ ಎಂದೇ ನೋಡಬಾರದು ಎಂದು ಶಂಕರನಾರಾಯಣ ಪ್ರತಿe ಮಾಡಿದಂತೆ ಕಾಣಿಸುತ್ತಿತ್ತು. ಒಮ್ಮೆ ರಾಜ್ಯ ಸಮ್ಮೇಳನಕ್ಕೆ ಎಂದು ಬೆಂಗಳೂರಿಗೆ ಬಂದಿದ್ದ ಶಂಕರನಾರಾಯಣ ಬಂದ ರಾತ್ರಿಯೇ ಚಾಮರಾಜಪೇಟೆಯಲ್ಲಿ ಸಾಲಾಗಿ ನಿಲ್ಲಿಸಿದ್ದ ಟ್ರಕ್ಕುಗಳನ್ನು ನೋಡಿ ಬೆದರಿ, ಬೆವರಿ, ಡಿಸೆಂಬರಿನ ಚಳಿಯನ್ನೂ ಮರೆತು ಸಮ್ಮೇಳನದ ಸ್ಥಳಕ್ಕೆ ದಾಪುಗಾಲಿಟ್ಟೇ ತಲುಪಿದ್ದ. ಮರುದಿನ ಅವನ ಸೋದರಿ ಪ್ರತಿನಿಧಿಗಳು ಚಿತ್ರವಿಚಿತ್ರದ ಉಡುಗೆಗಳಲ್ಲಿ ಬಂದಿದ್ದರೂ ಶಂಕರನಾರಾಯಣ ಎಲ್ಲರನ್ನೂ ತಂಗಿಯರ ಹಾಗೆ ಪ್ರೀತಿಯಿಂದ ಕಂಡಿದ್ದ. ಹಾಗಂತ ಅವರಿಗೆ ಬಾಯಿಬಿಟ್ಟು ಹೇಳಲಿಲ್ಲ ಅನ್ನಿ…. ಎಷ್ಟೆಂದರೂ ಅವನು ಮೊದಲೇ ಹೇಳಿದ ಹಾಗೆ ಬಂಗಾರದ ಬಣ್ಣವಿದ್ದರೂ……
ಇಷ್ಟು ಕಥೆ ಹೇಳಿದ ಮೇಲೆ ಶಂಕರನಾರಾಯಣ ಎಲ್ಲಿ ವಾಸಿಸುತ್ತಿದ್ದ ಎಂದು ನೀವು ಕೇಳಿದರೆ ನಗುತ್ತೀರಿ. ಅವನು ಇದ್ದದ್ದು ಪಿ ಜೆ ಬಡಾವಣೆಯ ಐದನೇ ಕ್ರಾಸಿನ ಏಕೈಕ ಖಾಲಿ ಸೈಟಿನ ಒಳಗೆ ಇದ್ದ ಒಂದು ರೂಮಿನಲ್ಲಿ. ಈ ರೂಮಿನ ಓನರ್ ಒಬ್ಬ ಮುಸ್ಲಿಮ್ ಅಜ್ಜಿ. ಆಕೆ ಈ ರೂಮಿನ ಪಕ್ಕದಲ್ಲಿಯೇ ಇನ್ನೊಂದು ರೂಮಿನಲ್ಲಿ ಇರುತ್ತಿದ್ದಳು. ಒಂದು ಸಲ ಬಕ್ರೀದ್ ಇದ್ದಾಗ ಇವನು ಕೊಟ್ರೇಶಿ ಜೊತೆ ಸೇರಿ ಅಜ್ಜಿಯನ್ನು ಎದುರಿಗೆ ಇಟ್ಟುಕೊಂಡು ಮಟನ್ ಸಾಂಬಾರ್ ಮಾಡಿದ್ದನ್ನೂ ನೀವು ಶಂಕರನಾರಾಯಣನ ದಿನಚರಿಯಲ್ಲಿ ಕಾಣಬಹುದು.
ಅಕಾಡೆಮಿಕ್ ವರ್ಷ ಶುರುವಾಗುತ್ತಲೇ ಆ ರೂಮು ವಿದ್ಯಾರ್ಥಿ ಚಟುವಟಿಕೆಗಳ ಆಗರವಾಗುತ್ತಿತ್ತು. ಹಲವು ವಿದ್ಯಾರ್ಥಿ ನಾಯಕರು ಅಲ್ಲಿಗೆ ಬಂದು ಸಭೆ ಸೇರುತ್ತಿದ್ದರು. ಪ್ರತಿಭಾ ಪುರಸ್ಕಾರವೋ, ಅಸಾಮ್ ಚಳವಳಿಯೋ, ಯಾವುದೋ ಕಾರ್ಯಕ್ರಮದ ಬಗ್ಗೆ ಅಲ್ಲಿ ಚರ್ಚೆ ನಡೆಯುತ್ತಿತ್ತು. ಆಗ ಶಂಕರನಾರಾಯಣನ ಪ್ಯಾಂಟು, ಅಂಗಿ ಇತ್ಯಾದಿ ವಸ್ತುಗಳು ಅಟ್ಟ ಸೇರುತ್ತಿದ್ದವು. ಕಪಾಟಿನ ಒಳಗೇ ಎಲ್ಲ ಸಂದರ್ಯ ಸಾಧನಗಳನ್ನೂ ಇಟ್ಟು ಬೀಗ ಜಡಿಯುತ್ತಿದ್ದ ಶಂಕರನಾರಾಯಣ ವಿದ್ಯಾರ್ಥಿ ಚಳವಳಿಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದ. ಹಾಗೆ ನೋಡಿದರೆ ಆಗಿನ ಎಲ್ಲ ವಿದ್ಯಾರ್ಥಿ ನಾಯಕರಿಗೆ ಶಂಕರನಾರಾಯಣ ಅಚ್ಚುಮೆಚ್ಚು. ಅವನು ಕರಪತ್ರಕ್ಕೆ ವಿಷಯ ಬರೆಯುತ್ತಾನೆ. ಮಂಡಿಪೇಟೆಯಲ್ಲಿರೋ ಪ್ರೆಸ್ಸಿಗೆ ಹೋಗಿ ಪ್ರೂಫ್ ಹಾಕಿ ಅದನ್ನೆಲ್ಲ ಪ್ರಿಂಟ್ ಹಾಕಿಸಿ ತರುತ್ತಾನೆ. ಯಾವುದೇ ಸ್ಟ್ರೈಕ್ ಇದ್ದರೂ ಸರಿಯೆ, ರೆಡ್ ಆಕ್ಸೈಡ್ ತಂದು ಗೋಡೆ ಬರಹ ಮಾಡುತ್ತಾನೆ. ಇಂಟರ್ನಲ್ ಎಕ್ಸಾಮ್ ಇರಲಿ, ಬಿಡಲಿ, ಅವೆಲ್ಲ ಶಂಕರನಾರಾಯಣನಿಗೆ ಸಂಬಂಧಿಸಿದ್ದಲ್ಲ. ಚಳವಳಿ ಮುಖ್ಯವೇ ಹೊರತು ಓದುವುದಲ್ಲ ಎಂಬ ಪರಿಕಲ್ಪನೆಯೂ ಶಂಕರನಾರಾಯಣನ ತಲೆಯಲ್ಲಿ ಎಷ್ಟೋ ಸಲ ಹಾದುಹೋಗಿದೆ. ಹಾಗಂತ ಸಭೆಗೆ ಬಂದ ವಿದ್ಯಾರ್ಥಿಗಳಿಗೆ ಆತ ಈ ತತ್ವಗಳನ್ನು ಹೇಳಿ ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ.
ಇಂತಪ್ಪ ಶಂಕರನಾರಾಯಣ ಒಂದು ದಿನ ಮಂಗಳಗೌರಿಯ ಮನೆಗೆ ಹೋದಾಗ ಅವಳು ಧುಸುಧುಸು ಮುಖ ಮಾಡಿಕೊಂಡು ಕೂತಿದ್ದಳು. ಅವರ ಮನೆಗೆ ಹೋದಾಗೆಲ್ಲ ಕೇಳಿಸುತ್ತಿದ್ದ ಎಂ ಎಸ್ ಸುಬ್ಬುಲಕ್ಷ್ಮಿಯವರ ಗಾಯನವೂ ಅವತ್ತು ಕೇಳುತ್ತಿರಲಿಲ್ಲ. ಕರೆಂಟುಹೋದ ಮನೆಯಂತೆ ಕರ್ರಗಿದ್ದ ಅವಳ ಮುಖ ನೋಡಿ ಶಂಕರನಾರಾಯಣನ ಎದೆ ಬಿರಿಯಿತು. ಮಂಗಳಗೌರಿಯೂ ತನ್ನ ಅಣ್ಣನ ಜೊತೆಗೇ ವಿದ್ಯಾರ್ಥಿನಾಯಕಿಯಾಗಿ ಬೆಳೆದವಳು. ಅವಳು ಮತ್ತು ಅವಳ ಅಣ್ಣ ಗಣೇಶ, ಇಬ್ಬರೂ ಅವಳ – ಜವಳಿ ಮಕ್ಕಳು. ಅಪ್ಪ ಸಂಪ್ರದಾಯಸ್ಥ ವ್ಯಕ್ತಿ. ಇಡೀ ಮನೆ ಯಾವಾಗಲೂ ಒಂಥರ ಊದುಬತ್ತಿ ಪರಿಮಳದಿಂದಲೋ, ಕರ್ಪೂರದ ಕಂಪಿನಿಂದಲೋ, ಅಥವಾ ಪೂಜೆ ಪುನಸ್ಕಾರದ ಘಮ ಘಮ ಪರಿಮಳದಿಂದಲೋ ತುಂಬಿರುತ್ತಿತ್ತು. ಅಡುಗೆ ಮನೆಯ ಪಕ್ಕ ಕೂತು ಊಟ ಮಾಡುತ್ತಿದ್ದರೆ ಯಾವುದೋ ದೈವಿಕ ವಾತಾವರಣದ ನಡುವೆ ಭೋಜನ ಸ್ವೀಕರಿಸುತ್ತಿರುವ ಅಪೂರ್ವ ಅನುಭವಕ್ಕೆ ಶಂಕರನಾರಾಯಣ ಪಕ್ಕಾಗುತ್ತಿದ್ದ. ಗಣೇಶನೊಂದಿಗೆ ತಾನು ಮಂಗಳಗೌರಿಯ ಲೇಡೀಸ್ ಬೈಸಿಕಲ್‌ನಲ್ಲಿ ಡಬಲ್ ರೈಡ್ ಹೋಗಿದ್ದೂ ಶಂಕರನಾರಾಯಣನಿಗೆ ಮರೆಯಲಾಗದ ಸಂಗತಿ. ಮಂಗಳಗೌರಿಯನ್ನು ತನ್ನ ಪುಟ್ಟ ತಂಗಿಯಂತೆ ನೋಡುತ್ತಿದ್ದ ಶಂಕರನಾರಾಯಣ ಈಗ ಇವಳ ಮುಖ ನೋಡಿ ತೀವ್ರವಾದ ಆಘಾತಕ್ಕೆ ಒಳಗಾದ. ಆದರೆ ಮಂಗಳಗೌರಿಯ ಜೊತೆ ಆತನಿಗೆ ಸಲುಗೆಯಿಲ್ಲ. ಎಲ್ಲೋ ಒಂದು ಕಾರ್ಯಕ್ರಮದಲ್ಲಿ ಆಕೆಗೆ ಸ್ವಾಗತ ಭಾಷಣ ಬರೆದುಕೊಟ್ಟಿದ್ದಿದೆ. ಬಿಟ್ಟರೆ ಅವಳ ಜೊತೆ ಅಷ್ಟಾಗಿ ಮಾತನಾಡಿದ್ದೇ ಇಲ್ಲ.
ಹೇಗೋ ಊಟ ಮಾಡಿ ಬಂದ ಶಂಕರನಾರಾಯಣ ರೂಮಿನಲ್ಲಿ ಒಂದು ನಿದ್ದೆ ತೆಗೆದು ಸಂಜೆ ಕೊಟ್ರೇಶಿ ಮನೆಗೆ ಹೋದ. ಅಲ್ಲಿ ಸೋಮಣ್ಣ, ಮಂಜಣ್ಣ, ಶಿವಮೂರ್ತಿ, ಶಿವಾನಂದ, ಬಸವರಾಜ, ತಿಮ್ಮಪ್ಪ ಎಲ್ಲರೂ ಮಿರ್ಚಿ ಮಂಡಕ್ಕಿಯ ಸುತ್ತ ಕೂತಿದ್ದರು. `ಏನ್ರೋ ನನ್ನ ಕರೆಯೋದೆ ಬೇಡ್ವ?’ ಎಂದು ಶಂಕರನಾರಾಯಣ ತನ್ನದೇ ಆದ ಗಾಂಭೀರ್ಯದ ನಗು ಬೀರುತ್ತ ಕೂತ. ಕೊಟ್ರೇಶಿಯ ಅಮ್ಮ ಅವನಿಗೂ ಒಂದು ಲೋಟ ಚಾ ತಂದಿಟ್ಟರು. ಅವರಿಗೆ ಯಾವಾಗಲೂ ಇವರೆಲ್ಲ ಪುಂಡು ಪೋಕರಿಗಳಲ್ಲವಲ್ಲ ಎಂಬುದೊಂದೇ ಖುಷಿ.
`ಯಾಕೋ ಇವತ್ತು ಮಂಗಳಗೌರಿ ನನಗೆ ಸ್ಮೈಲ್ ಕೂಡಾ ಕೊಡ್ಲಿಲ್ಲ ಕಣ್ರೊ’ ಎಂದು ಶಂಕರನಾರಾಯಣ ಮೆಲ್ಲಗೆ ವಿಷಯ ಎತ್ತಿದ. ಎಲ್ಲರಿಗೂ ಈತ ಗಣೇಶ, ಮಂಗಳಗೌರಿಯರನ್ನು ಎಷ್ಟು ಹಚ್ಚಿಕೊಂಡಿದ್ದಾನೆ ಎಂದು ಗೊತ್ತಿತ್ತು. ಕೊಟ್ರೇಶಿ ಮತ್ತೊಂದು ಮಿರ್ಚಿಯನ್ನು ಕತ್ತರಿಸುತ್ತ `ಹೌದಣ, ಅವಳಿಗೆ ಗಣೇಶನ ಬಗ್ಗೆ ಡೌಟ್ ಶುರುವಾಗಿದೆ’ ಎಂದ.
`ಗಣೇಶ ಈಗ ಸ್ಮೋಕಿಂಗ್ ಶುರು ಮಾಡಿದಾನಂತೆ. ಅದಕ್ಕೆ ನೀನೇ ಕಾರಣವಂತೆ’ ಎಂದು ಕೊಟ್ರೇಶಿ ಹೇಳುತ್ತಿದ್ದರೆ ಶಂಕರನಾರಾಯಣ ಬೆಚ್ಚಿಬಿದ್ದ. ಈ ಬಂಬೂ ಬಜಾರಿನ ಬಿದಿರಿನ ಅಲಗುಗಳು ತನ್ನನ್ನು ಇರಿಯಬಾರದೇ ಎಂದೆನ್ನಿಸಿ ಒಂದು ಸಲ ಕಣ್ಣುಮುಚ್ಚಿ ತೆರೆದ.
ಕೊಟ್ರೇಶಿ ಏನೇನು ಹೇಳಿದ ಎಂಬುದನ್ನೆಲ್ಲ ಸಾರಾಂಶ ರೂಪದಲ್ಲಿ ಹೇಳುವುದಾದರೆ…
ಗಣೇಶ ಈಗೀಗ ಸಂಜೆ ತಡವಾಗಿ ಮನೆಗೆ ಬರುತ್ತಾನೆ. ಮೀಟಿಂಗ್ ಇತ್ತು, ಶಂಕರನಾರಾಯಣ ಕರೆದಿದಾನೆ ಎನ್ನುತ್ತಾನೆ. ಬಂದಾಗೆಲ್ಲ ಅವನ ಬಾಯಿಂದ ಮೆಂಥಾಲ್ ಚಾಕಲೇಟಿನ ವಾಸನೆ ಹೊಡೆಯುತ್ತದೆ. ಜೊತೆಗೇ ಸಿಗರೇಟಿನ ವಾಸನೆಯೂ ಅಮರಿಕೊಳ್ಳುತ್ತದೆ. ಅಪ್ಪ, ಅಮ್ಮಂದಿರಿಗೆ ಇವೆಲ್ಲ ಅಷ್ಟಾಗಿ ಗೊತ್ತಾಗಿಲ್ಲ. ಆದರೆ ಸದಾ ಇಂಜಿನಿಯರಿಂಗ್‌ಕಾಲೇಜಿನ ಅಕ್ಕಪಕ್ಕವೇ ಓಡಾಡುವ ಮಂಗಳಗೌರಿಗೆ ಸಿಗರೇಟಿನ ವಾಸನೆ ತಕ್ಷಣ ಗೊತ್ತಾಗುತ್ತೆ.
ಮೂರು ದಿನಗಳ ಹಿಂದೆ ಕೊಟ್ರೇಶಿಯು ಯಾವುದೋ ಸಭೆಯ ವಿಚಾರದ ಬಗ್ಗೆ ಮಾತನಾಡಲು ಹೋದಾಗ ಮಂಗಳಗೌರಿ ಈ ವಿಷಯ ಹೇಳಿ ಅತ್ತಳಂತೆ.
ಶಂಕರನಾರಾಯಣನಿಗೆ ಏನು ಹೇಳಬೇಕೆಂಬುದೇ ಗೊತ್ತಾಗಲಿಲ್ಲ. ತಾನೆಂದೂ ಸಿಗರೇಟು ಸೇದಿದವನಲ್ಲ. ಆದರ್ಶದ ಬೆನ್ನಿನಲ್ಲೇ ಬದುಕುತ್ತಿರೋ ತನ್ನ ಮೇಲೆ ಮಂಗಳಗೌರಿ ಈ ಬಗೆಯ ಆಪಾದನೆ ಮಾಡಬಹುದೆ? ಗಣೇಶ ನನಗೆ ಸಿಗದೇ ಒಂದು ವಾರವಾಯಿತು. ತಾನಾಯಿತು, ತನ್ನ ಇಂಜಿನಿಯರಿಂಗ್ ಕೋರ್ಸ್ ಆಯ್ತು, ವಾಲ್‌ರೈಟಿಂಗ್ ಆಯ್ತು ಎಂದು ಇದ್ದರೆ ಈ ರೀತಿ ಆಪಾದನೆ ಬರಬಹುದೆ?
ಶಂಕರನಾರಾಯಣನ ಮುಖವೆಲ್ಲ ಕೆಂಪಾಯಿತು.ಅವನ ಧಮನಿಗಳಲ್ಲಿ ರಕ್ತಸಂಚಾರ ಹೆಚ್ಚಾಯಿತು. ಕೊಟ್ರೇಶಿಯ ಅಮ್ಮನಿಗೂ ಹೇಳದೆ ಹೊರಬಿದ್ದ.
ವಾರಾನ್ನ ಮಾಡಿಕೊಂಡು ಬದುಕುತ್ತಿರೋ ತನ್ನ ಮೇಲೆ ಮಂಗಳಗೌರಿ ಈ ರೀತಿ ಆಪಾದನೆ ಹೊರಿಸಿದ್ದೇ ಶಂಕರನಾರಾಯಣನಿಗೆ ತಡೆಯಲಾರದ ಸಂಗತಿ ಎನಿಸಿತು. ನಾಳೆ ಇನ್ನೊಂದು ಮನೆಗೆ ಹೋದಾಗ ಈ ವಿಷಯ ಅವರಿಗೆ ಗೊತ್ತಿಲ್ಲ ಎಂದು ಸುಮ್ಮನೆ ಊಟ ಮಾಡಿಕೊಂಡು ಬರಲೆ? ಆಪಾದನೆ ಹೊತ್ತುಕೊಂಡು ವಾರಾನ್ನ ಮಾಡಿಕೊಂಡು ಇರುವುದಾದರೂ ಯಾಕೆ? ಮುಂದಿನ ವಾರ ಮಂಗಳಗೌರಿಯ ಮನೆಗೆ ಹೋಗುವುದಾದರೂ ಹೇಗೆ?
ಒಂದೂವರೆ ವರ್ಷದಿಂದ ಜೊತೆಯಾಗಿದ್ದ, ಒಂದು ರೀತಿಯಲ್ಲಿ ಚರ್ಮದ ಥರವೇ ಅಂಟಿಕೊಂಡ ಕಂದು ಬಣ್ಣದ ಕ್ವಾಡ್ರಾ ಪ್ಯಾಂಟಿನ ಹಿಂಬದಿ ಕಿಸೆಯಲ್ಲಿ ಮುದುರಿದ್ದ ಇಪ್ಪತ್ತು ರೂಪಾಯಿಯನ್ನೇ ಸ್ಪರ್ಶಿಸುತ್ತ ಶಂಕರನಾರಾಯಣ ಶಾಂತಿ ಥಿಯೇಟರಿಗೆ ಬಂದ. ಯಾವುದೇ ಹೊತ್ತಿನಲ್ಲಿಯೂ ಟಿಕೆಟ್ ಸಿಗಬಹುದಾದ ಏಕೈಕ ಥಿಯೇಟರ್ ಅದು. ಫರ್ಲಾಂಗುಗಳಷ್ಟು ಉದ್ದವಾದ ಸಭಾಂಗಣದ ಹಿಂಭಾಗದಲ್ಲಿ ಕೂತರೆ ಎಲ್ಲೋ ದೂರದಲ್ಲಿ ಸಿನೆಮಾ ನಡೆದ ಹಾಗೆ ಕಾಣುತ್ತಿತ್ತು. ಹತ್ತಿರದಲ್ಲೇ ಸ್ಪೀಕರ್ ಇದ್ದವಾದ್ದರಿಂದ ಪ್ರೇಕ್ಷಕರು ಮಾತುಗಳ ಅಬ್ಬರದಲ್ಲೇ ಸಿನಿಮಾ ಅನುಭವಿಸಿ ತೆರಳುತ್ತಿದ್ದರು. ಶಂಕರನಾರಾಯಣ ಹೋದಾಗ ಅಲ್ಲಿ `ಸಿಪಾಯಿ ರಾಮು’ ನಡೆಯುತ್ತಿತ್ತು.
ಎಲ್ಲಿಗೋ ಪಯಣ, ಯಾವುದೋ ದಾರಿ, ಏಕಾಂಗಿ ಸಂಚಾರಿ ……. ಹಾಡು ಕೇಳುತ್ತ ಶಂಕರನಾರಾಯಣನಿಗೆ ಅಳುವೇ ಬಂತು. ನಾನು ಎಲ್ಲಿಗೆ ಹೋಗುತ್ತಿದ್ದೇನೆ? ಈ ಥರ ದಾವಣಗೆರೆಯಲ್ಲೇ ಎಷ್ಟು ದಿನ ಕೊಳೆಯಬೇಕು? ಯಾಕೆ ನನಗೆ ಯಾರೂ ಪ್ರೀತಿ ತೋರಿಸುವುದಿಲ್ಲ…. ನಾನು ಎಷ್ಟೇ ಸ್ನೇಹ ಪ್ರಕಟಿಸಿದರೂ ಈ ಕೊಟ್ರೇಶಿ ಆದಿಯಾಗಿ ಯಾರೂ ತನ್ನನ್ನು ಜೀವದ ಗೆಳೆಯರ ಥರ ಕಾಣುವುದಿಲ್ಲ….
ನಾನು ಇದೇ ದಾವಣಗೆರೆಯಲ್ಲಿ ಎಷ್ಟೋ ವರ್ಷಗಳ ಹಿಂದೆ ಏಳನೇ ಕ್ಲಾಸನ್ನೂ ಓದಿದ್ದೇನೆ. ಕೆ ಬಿ ಬಡಾವಣೆಯ ಆ ಶಾಲೆಯಲ್ಲಿ ನಾನು ಎಷ್ಟು ಜಾಣನಾಗಿದ್ದೆ…. ಅಲ್ಲಿ ಇದ್ದ ನಾಗರಾಜ, ರಾಜು, ಡುಮ್ಮ ರಮೇಶ ಎಲ್ಲರೂ ಎಲ್ಲೆಲ್ಲೋ ಇದ್ದಾರೆ. ರಮೇಶನಿಗೆ ಎಂ ಬಿ ಬಿ ಎಸ್ ಸೀಟು ಸಿಕ್ಕಿದೆ. ನಾಗರಾಜ ಸಿವಿಲ್ ಇಂಜಿನಿಯರಿಂಗ್ ಮಾಡೋದಕ್ಕೆ ಬಿಡಿಟಿ ಕಾಲೇಜು ಸೇರಿದ್ದಾನೆ. ರಾಜು ಈಗ ಡಿಪ್ಲೋಮಾ ಮಾಡುತ್ತಿದನೆ…….
ಮೆರಿಟ್‌ಮೇಲೆ ಖಾಸಗಿ ಕಾಲೇಜಿನಲ್ಲಿ ಸೀಟು ದಕ್ಕಿಸಿಕೊಂಡ ನಾನು ಯಾರದ್ದೋ ಕಾಲು ಹಿಡಿದು ಬ್ಯಾಂಕ್ ಸಾಲವನ್ನೂ ಪಡೆದೆ… ಮೊದಲನೇ ಸೆಮಿಸ್ಟರಿನಲ್ಲಿ ಚೆನ್ನಾಗಿ ಮಾರ್ಕ್ಸ್ ತೆಗೆಯದಿದ್ದರೂ ಪಾಸಾಗಿದ್ದೇನೆ. ಈಗ ಹೇಗೋ ಮೂರನೇ ಸೆಮಿಸ್ಟರಿನವರೆಗೆ ಬಂದಮೇಲೆ…… ಥತ್ ಇಂಜಿನಿಯರಿಂಗ್ ಓದೋದೇ ಬೇಡ… ಯಾರಿಗಾಗಿ ಓದಬೇಕು?
ಶಂಕರನಾರಾಯಣ ಯೋಚಿಸುತ್ತಿದ್ದಂತೆ ಸಿನೆಮಾ ಮುಗಿದು ಜನ ಗುಜು ಗುಜು ಮಾತನಾಡುತ್ತ ಹೊರಬೀಳತೊಡಗಿದರು. ಶಂಕರನಾರಾಯಣನೂ ಹೊರಬಿದ್ದು ಬಸ್‌ಸ್ಟಾಂಡ್‌ಗೆ ಬಂದ. ಎಷ್ಟೋ ಜನ ಬೆಂಗಳೂರಿಗೆ ಹೋಗಲು ಬಸ್ಸು ಕಾಯುತ್ತಿದ್ದರು. ಇವರೆಲ್ಲ ಬೆಂಗಳೂರಿಗೆ ಹೋಗೆ ಏನು ಮಾಡುತ್ತಾರೆ? ಅದೆಂಥ ದೊಡ್ಡ ಊರು… ಶಂಕರನಾರಾಯಣ ಅಲ್ಲೇ ಡಬಲ್ ಆಮ್ಲೆಟ್ ಹೊಡೆದು ರೂಮಿಗೆಂದು ಹೊರಟರೆ ಹೈಸ್ಕೂಲ್ ಬಯಲು ಅವನನ್ನು ಕೈ ಬೀಸಿ ಕರೆಯಿತು.
ಅಲ್ಲೇ ಎಂಟನೇ ಕ್ಲಾಸನ್ನೂ ಮುಗಿಸಿದ್ದ ಶಂಕರನಾರಾಯಣನಿಗೆ ಈ ಹೈಸ್ಕೂಲು ಎಂದರೆ ಎಂಥದೋ ಆಕರ್ಷಣೆ. ತನ್ನ ಇಂಗ್ಲಿಶ್ ಮೀಡಿಯಂ ಶುರುವಾಗಿದೇ ಇಲ್ಲ. ಎಚ್ ಆರ್ ಆರ್ ಹೇಗೆ ತನಗೆ ಕನ್ನಡ ಕಲಿಸಿದರು…… ಶಂಕರನಾರಾಯಣ ಅಲ್ಲೇ ಇದ್ದ ಬ್ಯಾಸ್ಕೆಟ್ ಬಾಲ್ ಅಂಗಳದ ಬದಿ ಹಾಕಿದ್ದ ಕಲ್ಲುಬೆಂಚಿನ ಮೇಲೆ ಕೂತು ಆಕಾಶ ನೋಡತೊಡಗಿದ.
ಈ ನಕ್ಷತ್ರಗಳಿಗೆ ಹೀಗೆ ಮಿನುಗುವ ಹಾಗೆ ಮಾಡಿದವರು ಯಾರು? ಈ ಕ್ವಾಸಾರುಗಳು ಎಲ್ಲಿಂದ ಹುಟ್ಟಿದವು? ಈ ಗೆಲಾಕ್ಸಿಗಳಲ್ಲಿ ನಾವು ಎಂಥ ಕ್ಷುದ್ರಗ್ರಹಗಳಾಗಿ ಬಿದ್ದಿದ್ದೇವೆ? ಈ ಬ್ರಹ್ಮಾಂಡದ ಆಚೆಗೆ ಏನಿದೆ? ಅದರಾಚೆಗೆ? ಪರಮಾತ್ಮ ಎಂಬುವವ ಇಲ್ಲದೇ ಈ ಜಗತ್ತನ್ನು ಕಲ್ಪಿಸಿಕೊಳ್ಳಲು ಸಾಧ್ಯವೆ? ಇಷ್ಟೆಲ್ಲ ಕ್ಷುದ್ರಜೀವಿಗಳಾದ ನಾವು ಈ ಸಂಬಂಧಗಳಿಗೆ ಯಾಕೆ ತತ್ತರಗೊಳ್ಳುತ್ತೇವೆ…. ಪ್ರತೀ ಸಲ ಈ ಕುರ್ಚಿಯ ಮೇಲೆ ಕೂತಾಗ ಶಂಕರನಾರಾಯಣನಿಗೆ ಇಂಥದೇ ಯೋಚನೆಗಳು ಬರುತ್ತವೆ. ಯಾಕಾದರೂ ತಾನು ಹೀಗೆ ಭಾವುಕನಾಗುವೆ ಎಂದು ಆತ ಕೆಲವೊಮ್ಮೆ ತನ್ನ ಮೇಲೇ ಸಿಟ್ಟುಮಾಡಿಕೊಂಡಿದ್ದೂ ಇದೆ…… ಮೂರು ತಿಂಗಳುಗಳಷ್ಟು ಹಿಂದೆಯಷ್ಟೇ ವಿದ್ಯಾರ್ಥಿ ನಾಯಕ ಮಲ್ಲಿಕಾರ್ಜುನ ಜಯದೇವ ಹಾಸ್ಟೆಲಿನ ಪಾರ್ಕಿನಲ್ಲಿ ಕೂತು ತನ್ನ ಬಳಿ ಓದಿನ ಬಗ್ಗೆ ಮಾತಾಡಿದ್ದನಲ್ಲವೆ… ತಾನೇನು ದಡ್ಡನೆ? ಎಸೆಸೆಲ್ಸಿಯಲ್ಲೇ ಎಪ್ಪತ್ತಾರು ಪರ್ಸೆಂಟ್ ಪಡೆದವ ಪಿಯುಸಿಯಲ್ಲಿ ಎಪ್ಪತ್ತೆಂಟಕ್ಕೆ ಬಂದೆ. ಪಿ ಸಿ ಎಂ ನಲ್ಲಿ ಎಂಬತ್ಮೂರು ಬಂದಿದ್ದಕ್ಕೇ ಅಲ್ಲವೆ ತನಗೆ ಇಂಜಿನಿಯರಿಂಗ್ ಸೀಟು ಸಿಕ್ಕಿದ್ದು?
ರಾತ್ರಿಯ ಆ ನೀರವತೆಯಲ್ಲಿ ಎಷ್ಟು ವಾಹನಗಳು ಸುತ್ತಮುತ್ತ ಹರಿದರೂ ಅವುಗಳ ಬೆಳಕಿನ ಹೊನಲು ಬಯಲನ್ನು ಬೆಳಗುತ್ತಿರಲಿಲ್ಲ. ದೂರದಲ್ಲಿ ಚಂದ್ರೋದಯವಾಗುತ್ತಿದೆ. ಹೈಸ್ಕೂಲಿನ ಆ ದೊಡ್ಡ ಕಟ್ಟಡವೂ ಬಯಲಿಗೆ ಹೋಲಿಸಿದರೆ ಚಿಕ್ಕದೇ. ಅತ್ತ ಪಿ ಬಿ ರಸ್ತೆಯಲ್ಲಿ ವಾಹನಗಳ ಭರಾಟೆ ಹೆಚ್ಚಾಗುತ್ತಿದೆ. ಮಂದ ಬೆಳಕಿನಲ್ಲಿ ಯಾರೋ ಮೈದಾನದ ಒಂದು ಮೂಲೆಯಿಂದ ಇನ್ನೊಂದು ಮೂಲೆಗೆ ನಿಧಾನವಾಗಿ ಜಾರಿದಂತೆ ನಡೆಯುತ್ತಿದ್ದಾರೆ. ಕೆಲವರು ಸೈಕಲ್ ತಳ್ಳಿಕೊಂಡು ಮಾತನಾಡುತ್ತ ನಡೆಯುತ್ತಿದ್ದಾರೆ. ಯಾರೋ ಹೆಣ್ಣುಮಕ್ಕಳು ತಲೆಮೇಲೆ ಚೀಲ ಏರಿಸಿಕೊಂಡು ಹೋಗುತ್ತಿದ್ದಾರೆ.
ನಾಲ್ಕೇ ತಿಂಗಳುಗಳ ಹಿಂದೆ ಇದೇ ಕುರ್ಚಿಯಲ್ಲಿ ಕೂತು ತಾನು ಎರಡು ಪ್ಯಾಕ್‌ಸಿಗರೇಟು ಸೇದಿರಲಿಲ್ಲವೆ? ಗೂಡಂಗಡಿಯಲ್ಲಿ ಐ ಟಿ ಸಿ ಎಂದು ಬಾಯಿಪಾಠ ಮಾಡಿದಂತೆ ಹೇಳಿ ಪ್ಯಾಕ್ ಖರೀದಿಸಿ, ಬೆಂಕಿಕಡ್ಡಿ ಗೀರಲೂ ಬಾರದೆ ಗಾಳಿಯಲ್ಲಿ ಪೇಚಾಡಿಕೊಂಡೂ ಎರಡು ತಾಸು ಕೂತು ಎಲ್ಲಾ ಇಪ್ಪತ್ತೂ ಸಿಗರೇಟುಗಳನ್ನೂ ಮುಗಿಸಿರಲಿಲ್ಲವೆ? ಚೈನ್‌ಸ್ಮೋಕರ್ ಥರ ಒಂದಾದ ಮೇಲೆ ಇನ್ನೊಂದನ್ನು ಹೊತ್ತಿಸಿ ಭುಸುಭುಸು ಹೊಗೆ ಬಿಡಲಿಲ್ಲವೆ? ಆಮೇಲೆ ರಾಂ ಎಂಡ್ ಕೋ ಸರ್ಕಲ್ಲಿಗೆ ಬಂದವನೇ ರಸವಂತಿ ಕೂಲ್‌ಡ್ರಿಂಕ್ಸ್‌ನಲ್ಲಿ ಫ್ರುಟ್ ಜ್ಯೂಸ್ ಹೀರಿ ರೂಮಿಗೆ ಹೋಗಿ ಬಿದ್ದುಕೊಂಡಿದ್ದೆನಲ್ಲವೆ?
ನಾನು ಹಿಂದೆಯೂ ಸಿಗರೇಟು ಸೇದಿರಲಿಲ್ಲ. ಮುಂದೆಯೂ ಸೇದಲಿಲ್ಲ. ಆದರೆ ಇವತ್ತು ಮಂಗಳಗೌರಿ ಅಭಿಪ್ರಾಯ ಕೇಳಿದರೆ ಅವಳೂ ಆ ರಾತ್ರಿ ಇಲ್ಲೇ ಇದ್ದು ನನ್ನ ಸಿಗರೇಟಿನ ಹೊಗೆ ಕುಡಿದವಳ ಹಾಗೆ ಕಾಣುತ್ತಿದ್ದಾಳೆ..
ಶಂಕರನಾರಾಯಣ ಆ ತಣ್ಣನೆಯ ಗಾಳಿಯಲ್ಲೂ ಬೆವತುಹೋದ. ಮುಂದೆ ನಾನು ಅವಳನ್ನು ಮಾತನಾಡಿಸೋದಕ್ಕೇ ಆಗೋದಿಲ್ವೆ? ಹಾಗಾದರೆ ಈ ಬಗೆಯ ಆಪಾದನೆಗೆ ತುತ್ತಾಗಿ ಇಲ್ಲಿ ಇರೋದಾದ್ರೂ ಹ್ಯಾಗೆ? ಪರಿಹಾರ ಇದೆಯೆ?… ಶಂಕರನಾರಾಯಣನಿಗೆ ಫಕ್ಕನೆ ಅನ್ನಿಸಿತು.
ಹೌದಲ್ವ…. ಪರಿಹಾರ ಇದೆ…
—–
ಸಂಜೆ ಐದೂವರೆ. ಗಣೇಶ ಮನೆಯಿಂದ ಹೊರಟ. ಕ್ರಾಸಿಗೆ ಬಂದು ಎಡಕ್ಕೆ ತಿರುಗಿದವನೇ ಗೂಡಗಂಡಿಗೆ ಹೋಗಿ ಒಂದು ಪ್ಯಾಕ್ ಸಿಗರೇಟ್ ಖರೀದಿಸಿದ. ಅಲ್ಲೇ ಉರಿಯುತ್ತಿದ್ದ ಕತ್ತದ ಹಗ್ಗದಿಂದ ಒಂದು ಸಿಗರೇಟ್ ಹಚ್ಚಿಕೊಂಡು ಹಾಗೇ ಫಾಸ್ಟಾಗಿ ನಿಟುವಳ್ಳಿ ರಸ್ತೆಗೆ ತಿರುಗಿದ. ಕೆ ಟಿ ಜೆ ನಗರದ ನಾಲ್ಕನೇ ಕ್ರಾಸಿಗೆ ಬರುವಾಗ ಸಿಗರೇಟ್ ಮುಗಿದಿದೆ. ಅಲ್ಲಿ ಮತ್ತೆ ಒಂದು ಗೂಡಂಗಡಿಗೆ ಹೋಗಿ ಸಿಗರೇಟು ಹಚ್ಚಿದ್ದಾನೆ. ಒಂದೇ ಕೈಯಲ್ಲಿ ಸೈಕಲ್ ತುಳಿಯೋದು ಗಣೇಶನಿಗೆ ಚೆನ್ನಾಗಿ ಗೊತ್ತು. ಅಲ್ಲಿಂದ ೧೪ನೇ ಕ್ರಾಸಿಗೆ ಬಂದ ಗಣೇಶ ಮತ್ತೆ ನಿಂತಿದ್ದಾನೆ. ಅಲ್ಲಿ ಮೂರನೇ ಸಿಗರೇಟು ಹಚ್ಚಿದ್ದಾನೆ. ಸೀದಾ ಕಾಲೇಜು ರಸ್ತೆಗೆ ಬಂದಿದಾನೆ. ಅಲ್ಲಿ ವಿದ್ಯಾರ್ಥಿಭವನದ ಪಕ್ಕದ ಅಂಗಡಿಯಲ್ಲಿ ಇನ್ನೊಂದು ಸಿಗರೇಟು ಹಚ್ಚಿದಾನೆ. … ಅಲ್ಲಿಂದ ಹದಡಿ ರಸ್ತೆ. ಊರಿನ ತುದಿಗೆ ಬಂದು ಮತ್ತೆ ಬಿಡಿಟಿ ಕಾಲೇಜಿನ ಕಡೆಗೆ ತಿರುಗಿದಾನೆ. ಅಲ್ಲಿ ಫೀಲ್ಡಿನಲ್ಲಿ ಮತ್ತೊಂದು ಸಿಗರೇಟು ಎಳೆದ.
ರಾತ್ರಿ ಎಂಟೂವರೆಯಾಗುವ ಹೊತ್ತಿಗೆ ಒಟ್ಟು ಹದಿಮೂರು ಸಿಗರೇಟು ಎಳೆದ ಗಣೇಶ ಕೊನೆಗೆ ರಸವಂತಿ ಪಕ್ಕದಲ್ಲಿ ಮೆಂಥಾಲ್ ಚಾಕಲೇಟ್ ಜಗಿಯುತ್ತ ಮನೆಗೆ ತಿರುಗಿದ.
ಇದಿಷ್ಟನ್ನೂ ಶಂಕರನಾರಾಯಣ ತನ್ನ ಸೈಕಲ್ಲಿನಲ್ಲೇ ಫಾಲೋ ಮಾಡುತ್ತ ನೋಡಿದವನು ಡೈರಿಯಲ್ಲಿ ನೋಟ್ ಮಾಡಿಕೊಂಡ. ಸೀದಾ ಕೊಟ್ರೇಶನ ಮನೆಗೆ ಹೋಗಿ ಕೂತು ಪಟ್ಟಿ ಮುಂದಿಟ್ಟ.
ಶಂಕರನಾರಾಯಣನ ಪತ್ತೇದಾರಿ ಕೆಲಸವನ್ನು ಮೆಚ್ಚಿಕೊಳ್ಳಬೇಕೋ, ಗಣೇಶನ ಚೈನ್ ಸ್ಮೋಕಿಂಗ್‌ಗೆ ಅಳಬೇಕೋ ಎಂದು ಗೊತ್ತಾಗದೆ ಕೊಟ್ರೇಶಿ ಮರಗಟ್ಟಿ ಕೂತ. ಇನ್ನು ಮೀಟಿಂಗ್‌ಗಳಲ್ಲಿ ಗಣೇಶ ಮಾಡುತ್ತಿದ್ದ ಆದರ್ಶದ ಭಾಷಣಗಳು ಎಷ್ಟು ಬುರುಡೆ ಎಂದು ತಮಗಂತೂ ಗೊತ್ತಾಗುತ್ತಿದೆ. ಅವನ ಜೊತೆ ಮಾತಾಡೋದಕ್ಕೇ ಅಸಹ್ಯ ಹುಟ್ಟುತ್ತಿದೆಯಲ್ಲ ಎಂದು ಕೊಟ್ರೇಶಿ ಯೋಚಿಸಿದ. ಶಂಕರನಾರಾಯಣನಂತೂ ದುಃಖದ ಮಡಿಲಿಗೆ ಬಿದ್ದಿದ್ದ. ತನ್ನನ್ನು ಪಕ್ಕಾ ಸ್ನೇಹಿತ ಎಂದು ಕರೆಯುತ್ತ ಸೈಕಲ್‌ನಲ್ಲೇ ಕೂರಿಸಿಕೊಂಡು ಡಬಲ್‌ರೈಡ್ ಮಾಡಿದವನು, ತನ್ನ ಜೊತೆಗೇ ಎಷ್ಟೋ ಸಲ ಕಾರ್ಯಕ್ರಮಗಳನ್ನು ನಡೆಸಿಕೊಟ್ಟವನು, ಮಾತುಮಾತಿಗೆ ತಂಗಿಯ ಬಗ್ಗೆ ಅಕ್ಕರೆಯ ಮಾತುಗಳನ್ನು ಉದುರಿಸುತ್ತಿದ್ದವನು, ವಿದ್ಯಾರ್ಥಿಗಳ ಜವಾಬ್ದಾರಿಯ ಬಗ್ಗೆ ಅಷ್ಟೆಲ್ಲ ಕೊಚ್ಚಿಕೊಳ್ಳುವವನು ಒಂದು ಸಿಗರೇಟಿಗಾಗಿ ಇಷ್ಟೆಲ್ಲ ಬಗ್ಗಿದನಲ್ಲ….. ಅದರಲ್ಲೂ ಸಿಗರೇಟ್ ಕಂಡರೆ ಬೆಚ್ಚಿಬೀಳುವ ತನ್ನ ಮೇಲೆ ಬ್ಲೇಮ್ ಮಾಡಿದಾನಲ್ಲ ಎಂದು ಶಂಕರನಾರಾಯಣ ವ್ಯಥಿಸತೊಡಗಿದ.
`ನೋಡು ಕೊಟ್ರೇಶಿ, ನಾನು ಅವನಿಗೆ ಸಿಗರೇಟ್ ಕಲಿಸೋವಂಥ ಚಟಭಯಂಕರ ಅಲ್ಲ. ಇನ್ನು ನೀನಾಯ್ತು, ಗಣೇಶ ಆಯ್ತು, ಮಂಗಳಗೌರಿ ಆಯ್ತು…. ಏನಾದ್ರೂ ಮಾಡ್ಕೊಳಿ….. ನಾನು ಇನ್ನು ಗಣೇಶನ ಮನೆಗೂ ಹೋಗಲ್ಲ, ಅವನನ್ನು ಮಾತೂ ಆಡ್ಸಲ್ಲ’ ಎಂದು ಶಂಕರನಾರಾಯಣ ಎದ್ದವನೇ ಸೈಕಲ್ ಹತ್ತಿ ಭರಮಸಾಗರ ರಸ್ತೆ ಹಿಡಿದ.
ಈ ಬದುಕಿನಲ್ಲಿ ನನ್ನ ಬಗ್ಗೆ ನಂಬಿಕೆ ಇಟ್ಟವರು ಯಾರ್‍ಯಾದರೂ ಇದ್ದಾರೆಯೆ? ನಾನು ಬಡಪಾಯಿ ಥರ ಎಲ್ಲೋ ಇದ್ದುಕೊಂಡು ಇಂಜಿನಿಯರಿಂಗ್ ಕೋರ್ಸ್ ಸೇರಿದೀನಿ. ಒಳ್ಳೆ ಪ್ಯಾಂಟ್ ಹಾಕ್ಕೋಳಕ್ಕೂ ದುಡ್ಡಿಲ್ಲ. ಈಂಥ ಪರಿಸ್ಥಿತೀಲಿ ನನ್ನ ಪ್ರೀತಿಯ ಗೆಳೆಯನೇ ಡಿಚ್ ಮಾಡಬಹುದೆ? ಸೈಕಲ್ಲಿನ ಡೈನಮೋ ಹಚ್ಚಿದ ಶಂಕರನಾರಾಯಣ ಹುಚ್ಚು ಹಿಡಿದವರ ಹಾಗೆ ಭರಮಸಾಗರಕ್ಕೆ ಹೊರಟ. ಅರಾಸೇ ಇದ್ದರೆ ಅವರ ಹತ್ತಿರ ನನ್ನ ದುಃಖವನ್ನು ಹೇಳಿಕೊಂಡಾದರೂ ಹಗುರಾಗಬೇಕು. ಮೂರು ವರ್ಷಗಳ ಹಿಂದೆ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಬಂದವರು ಈಗ ಒಂಥರ ನನ್ನ ಆಧ್ಯಾತ್ಮಿಕ ಗುರುವಾಗಿದ್ದಾರೆ… ಹೋದಾಗೆಲ್ಲ ಎಷ್ಟು ಸಮಾಧಾನದ ಮಾತಾಡಿ ಕಳಿಸುತ್ತಾರೆ…. ಲಾರಿಗಳ ಮರ್ಮರದಲ್ಲೇ ಹೋಗುತ್ತ ಶಂಕರನಾರಾಯಣನಿಗೆ ಯಾವುದೋ ಲೋಕ ಪ್ರವೇಶಿಸಿದ ಹಾಗಾಯ್ತು. ಇಲ್ಲ… ಇವತ್ತು ಏನಾದರಾಗಲಿ, ಗಣೇಶನನ್ನು ಕಾಣಲೇಬೇಕು. ಸೀದಾ ಸೈಕಲ್ಲನ್ನು ತಿರುಗಿಸಿ….
——————
ಶಂಕರನಾರಾಯಣ ಬಂದಾಗ ಗಣೇಶ ಆರಾಮಾಗಿ ಕೂತು ಯಾವುದೋ ಪಠ್ಯಪುಸ್ತಕ ತಿರುಗಿಸುತ್ತ ಕೂತಿದ್ದ. `ಬಾರೋ ಮಾರಾಯ..’ ಎಂದು ಕರೆದವನೇ ಆ ಕಡೆ ಸೋಫಾದಲ್ಲಿ ಒರಗಿ ಕಾದಂಬರಿ ಓದುತ್ತಿದ್ದ ಮಂಗಳಗೌರಿಯತ್ತ ಮುಸುಮುಸು ನೋಡಿದ್ದನ್ನು ಶಂಕರನಾರಾಯಣ ಗಮನಿಸಿದ.
ಎಲ್ಲಿಂದ ಬಂತೋ ಸಿಟ್ಟು…. ಸೀದಾ ಗಣೇಶನ ಕೆನ್ನೆಗೆ ಸಮಾ ಬಾರಿಸಿದ ಶಂಕರನಾರಾಯಣ ಸೊಂಟದ ಮೇಲೆ ಕೈ ಇಟ್ಟುಕೊಂಡು `ನನ್ನಿಂದ ಸ್ಮೋಕಿಂಗ್ ಕಲಿತೆಯಾ? ಅಥ್ವಾ ಯಾವ ಬಡ್ಡೀಮಗ ಕಲಿಸಿದ್ದು?’ ಎಂದು ಕಿರುಚಿದ ಹೊತ್ತಿಗೆ ಮಂಗಳಗೌರಿ ದಿಕ್ಕಿಲ್ಲದ ಬಾಲೆಯ ಥರ ಒಳಗೆ ನಡೆದಳು.
ಯಾಕೆ ತನಗೆ ಈ ಹೊಡೆತ ಎಂದೇ ಅರಿಯದೆ ಗಣೇಶ `ಏನು? ಸ್ಮೋಕಿಂಗ್? ಅಲ್ವೋ ಶಂಕರ, ಯಾಕೋ ಹಿಂಗೆ ಹೊಡಿತೀಯ?’ ಎಂದು ಗತ್ತಿನಲ್ಲೇ ಕೇಳಿದರೂ ಅವನ ಮುಖದಲ್ಲಿ ಗುಟ್ಟು ಹೊರಬಿದ್ದ ಆತಂಕ ಕಾಣಿಸಿತ್ತು.
ಒಳಗೆ ಹೋಗಿ ಮಂಗಳಗೌರಿಯನ್ನು ಎಳೆದು ತಂದ ಶಂಕರನಾರಾಯಣ ಅವಳ ಕೈಯಲ್ಲಿ ಪತ್ತೇದಾರಿಕೆ ವರದಿಯ ಚೀಟಿಯನ್ನು ಇಟ್ಟ. ಅದನ್ನು ಓದುತ್ತ ಹೋದಂತೆ ಮೊದಲೇ ಮಂಕಾಗಿದ್ದ ಮಂಗಳಗೌರಿಯೂ ಮತ್ತಷ್ಟು ಕಂದಿಹೋದಳು. ಚೀಟಿಯನ್ನು ಮುದುರಿ ಗಣೇಶನ ಮುಖಕ್ಕೆ ಎಸೆದು ಮತ್ತೆ ಒಳನಡೆದಳು. ಸದ್ಯ ಅಪ್ಪ, ಅಮ್ಮ ರಾಘವೇಂದ್ರ ಮಠಕ್ಕೆ ಹೋಗಿದ್ದರಿಂದ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಲಿಲ್ಲ. ರಾತ್ರಿ ಗಣೇಶ ಬಂದನೆಂದರೆ ರೂಮಿನಲ್ಲಿ ಊದುಬತ್ತಿಯ ಕಂಪಿನ ಬದಲು ಮೆಂಥಾಲ್ ವಾಸನೆ ಅಮರುವುದು ಯಾಕೆ ಎಂದು ಮಂಗಳಗೌರಿಗೆ ಅರಿವಾಗಿತ್ತು. ಅದಕ್ಕೆ ಶಂಕರನಾರಾಯಣ ಕಾರಣನಲ್ಲ ಎಂಬುದೂ ಗೊತ್ತಾಗಿ ಅವಳಿಗೂ ಒಂಥರ ಅವಮಾನವಾದ ಹಾಗಾಗಿದ್ದರಿಂದಲೇ ಅವಳಿಗೆ ಶಂಕರನಾರಾಯಣನ ಎದುರು ಮಾತನಾಡಲು ಆಗಿರಲಿಲ್ಲ.
ಇನ್ನೇನು ಮಾಡಲಿ? ಮತ್ತೆ ಮತ್ತೆ ಗಣೇಶನನ್ನು ಚಚ್ಚಲೆ? ಅಥವಾ ಕೊಟ್ರೇಶಿಯನ್ನು ಕರೆದು ಇವೆಲ್ಲ ಇಲ್ಲಿಗೇ ಮುಗಿಯಲಿ ಎಂದು ಹಟ ಹಿಡಿಯಲೆ? ಇಷ್ಟಕ್ಕೂ ಅವನ ಸಿಗರೇಟು ಚಟವನ್ನು ಬಿಡಿಸಲು ನಾನು ಯಾರು? ಅಥವಾ ಮಂಗಳಗೌರಿಗೆ ನನ್ನ ಮೇಲೆ ಸಿಟ್ಟು ಬಂದರೆ ಅದನ್ನು ತಣಿಸಬೇಕು ಎಂದು ನನಗಾದರೂ ಯಾಕೆ ಅನ್ನಿಸಬೇಕು? ಅಲ್ಲಿ ಕೂರಲೂ ಮನಸಾಗದೆ ಶಂಕರನಾರಾಯಣ ಮತ್ತೆ ತನ್ನ ನಿತ್ಯಸಂಗಾತಿ ಸೈಕಲ್ಲನ್ನೇರಿ ಹೊರಟ. ಜಯದೇವ ಸರ್ಕಲ್ಲಿಗೆ ಬರುತ್ತಲೇ ಎಲ್ಲಿಗೆ ತಿರುಗಲಿ ಎಂಬ ಯೋಚನೆ ಹಾದುಹೋಯಿತು. ಬ್ರಹ್ಮಚೈತನ್ಯ ಹಾಸ್ಟೆಲಿನಲ್ಲಿ ಇರೋ ನಾಗರಾಜಭಟ್ಟನನ್ನು ನೋಡಲೆ? ಅಥವಾ ಮುರುಘರಾಜೇಂದ್ರ ಹಾಸ್ಟೆಲಿಗೆ ಹೋಗಿ ನಾಳೆಯ ಕಾರ್ಯಕ್ರಮದ ತಯಾರಿ ಮಾಡಲೆ?
ಏನೂ ಮಾಡಲು ತೋಚದೆ ಶಂಕನಾರಾಯಣ ಒಂದು ನಿಮಿಷ ಸರ್ಕಲ್ಲಿನಲ್ಲೇ ಸೈಕಲ್ಲನ್ನು ನಿಲ್ಲಿಸಿದ. ಅಲ್ಲಿ ಸುಪ್ರಸಿದ್ಧ ಮಸಾಲಾ ಅವಲಕ್ಕಿ ಅಂಗಡಿಯ ಮುಂದೆ ಜನ ಗುಂಪು ಸೇರಿದ್ದರು. ನಾಲಿಗೆ, ಮನಸ್ಸು, ಬುದ್ಧಿ, ದೇಹ ಎಲ್ಲವೂ ರುಚಿಯನ್ನು ಕಳೆದುಕೊಂಡಿವೆ ಎಂದು ಶಂಕರನಾರಾಯಣನಿಗೆ ಅನ್ನಿಸತೊಡಗಿತು. ಯಾರಿಗೂ ಗೊತ್ತಾಗದೇ ಸಿಗರೇಟ್ ಸೇದಿದ ತಾನು ಗಣೇಶನಿಗೆ ಹೊಡೆದದ್ದು ನ್ಯಾಯವೇ ಎಂಬ ಪ್ರಶ್ನೆಯೂ ಸುಳಿದುಹೋಯಿತು.
ಆದರ್ಶಗಳ ಸುಳಿಯಲ್ಲಿ ಸಿಕ್ಕಿದರೂ ಚಪಲಗಳನ್ನೂ ಹತ್ತಿಕ್ಕಿಕೊಳ್ಳಲಾಗದೆ ಬದುಕುತ್ತಿರುವ ತಾನು ಇಂಜಿನಿಯರಿಂಗ್ ಮುಗಿಸಿದರೇನು, ಬಿಟ್ಟರೇನು…… ಇಲ್ಲಿ ಗೆಳೆಯರನ್ನು ಕಟ್ಟಿಕೊಂಡರೇನು, ದೂರ ಇಟ್ಟರೇನು…. ಯಾರಿಗಾದರೂ ತಾನು ಯಾಕೆ ಬುದ್ಧಿವಾದ ಹೇಳಬೇಕು? ವಾಸ್ತವವಾಗಿ ತನಗೆ ನೋವಾಗಿದ್ದು ತನ್ನ ಮೇಲೆ ಸುಳ್ಳು ಆಪಾದನೆ ಬಂದಿದ್ದಕ್ಕಲ್ಲವೆ? ಇವರ ಚಟಗಳನ್ನು ಕಟ್ಟಿಕೊಂಡು ನನಗೇನಾಗಬೇಕು?
ಶಂಕರನಾರಾಯಣನ ಯೋಚನೆಗೆ ಭಂಗ ತರುವಂತೆ ಇಂಜಿನಿಯರಿಂಗ್ ಸೇರುವ ಮುನ್ನ ಡಿ ಆರ್ ಎಂ ಕಾಲೇಜಿನಲ್ಲಿ ಬಿ ಎಸ್ಸಿಯಲ್ಲಿ ಒಂದು ತಿಂಗಳು ಕ್ಲಾಸ್‌ಮೇಟ್ ಆಗಿದ್ದ ಮಲ್ಲಿಕಾರ್ಜುನ ಸೈಕಲ್ಲಿನಲ್ಲಿ ಬಂದಿಳಿದ.
`ಚಾಮುಂಡೇಶ್ವರಿಯಲ್ಲಿ ಶ್ರೀ ಕೃಷ್ಣದೇವರಾಯ ಹಾಕಿದಾರೆ, ಬರ್‍ತೀಯ?’ ಎಂದು ಮಲ್ಲಿಕಾರ್ಜುನ ಕೇಳುವುದಕ್ಕೂ, ಇವೆಲ್ಲ ಉಸಾಬರಿಯೇ ಬೇಡ ಎಂದು ನಿರ್ಧರಿಸಿದ ಶಂಕರನಾರಾಯಣನ ಮುಖದಲ್ಲಿ ಒಂದು ಖಚಿತ ನಿರ್ಧಾರದ ಗೆರೆ ಮೂಡುವುದಕ್ಕೂ ಸರಿಹೋಯಿತು.
———
ಇಪ್ಪತ್ತಮೂರು ವರ್ಷಗಳ ಮೇಲೆ ಇವೆಲ್ಲ ಒಂದು ಕಥೆಯ ಥರ ಸುಳಿಯುತ್ತಿದ್ದಂತೆ ನಮ್ಮ ಶಂಕರನಾರಾಯಣ ಯೋಚಿಸುತ್ತಿದ್ದಾನೆ… ಅವನ ಮುಖದಲ್ಲಿ ಈಗಲೂ ಜೀವನೋತ್ಸಾಹವನ್ನು ಕಾಣಬಹುದು. ಈ ದಿನಗಳಲ್ಲಿ ಅವನು ಸಿಗರೇಟು ಸೇದಿಲ್ಲ. ಗಣೇಶ ಎಲ್ಲಿರಬಹುದು? ಮಂಗಳಗೌರಿ ಈಗಲೂ ಅದೇ ಥರ ಮುಗ್ಧೆಯಾಗಿರಬಹುದೆ? ಮಲ್ಲಿಕಾರ್ಜುನ ಈಗಲೂ ಚಾಮುಂಡೇಶ್ವರಿಗೆ ಹೋಗ್ತಾನಾ? ಕೊಟ್ರೇಶಿಯ ವ್ಯವಹಾರಗಳು ಎಲ್ಲಿವೆ? ಮಂಜಣ್ಣ, ತಿಮ್ಮಪ್ಪ ಏನಾದರು? ಅಕಸ್ಮಾತ್ ಅವರೆಲ್ಲರೂ ಇದೇ ಥರ ಡೈರಿ ಇಟ್ಟುಕೊಂಡಿದ್ದರೆ ಅವರಿಗೂ ಇದೇ ಥರ ಕಥೆ ಕಣ್ಣಿಗೆ ಕಟ್ಟುತ್ತದೆಯೆ? ಅವರ ಭಾವನೆಗಳಲ್ಲಿ ನಾನು ಹೇಗಿರುತ್ತೇನೆ? ಕೊಳಕು ಹುಡುಗನಾಗೋ? ಯಾರಿಗೂ ಬೇಡದ ಬೇಜವಾಬ್ದಾರಿ ವಿದ್ಯಾರ್ಥಿಯಾಗೋ? ಪ್ರೀತಿಯ ಗೆಳೆಯನಾಗೋ? ಆದರ್ಶವನ್ನೆಲ್ಲ ಹೊತ್ತ ಸಂತನಾಗೋ?
ಸಿಗರೇಟಿನ ಪ್ರಕರಣದಿಂದ ಹಿಡಿದು ಮೀಟಿಂಗ್ ಜಗಳದವರೆಗೆ ನೂರಾರು ದೃಶ್ಯಗಳು ಚಕಚಕ ಬಂದು ಹೋಗುತ್ತಿವೆ. ಸಭೆಗಳು, ಸಾರ್ವಜನಿಕ ಸಮಾರಂಭಗಳು, ಪ್ರತಿಭಟನೆ, ಬಂದ್, ಕಾಲೇಜ್ ಸ್ಟ್ರೈಕ್, ವಾಲ್‌ರೈಟಿಂಗ್, ಲಾಠಿಚಾರ್ಜ್, ಬ್ಯಾನರ್, ಪೋಸ್ಟರ್, ಪಂಜಿನ ಮೆರವಣಿಗೆ……. ಎಲ್ಲೆಲ್ಲೂ ನನ್ನ ಗೆಳೆಯರೇ ಕಾಣುತ್ತಿದ್ದಾರೆ… ನಾನು ಮಾತ್ರ ಎಲ್ಲದರಿಂದ ಹೊರಗೆ ಬಂದು ಸುಮ್ಮನೆ ಅನಾಥನ ಹಾಗೆ ನಿಂತಿದ್ದೇನೆ. ಗೆಳೆಯರು ಯಾರು, ಗೆಳತಿಯರು ಯಾರು, ನಂಗೊತ್ತಿಲ್ಲ…. ಯಾರ್‍ಯಾರದೋ ಬದುಕಿನಲ್ಲಿ ಪ್ರವೇಶಿಸಿ ಹೊರಬಂದು ಈಗ ಇಲ್ಲಿ ಹೀಗೆ……..
———-
ವರ್ಷದಲ್ಲಿ ಒಂದೆರಡು ಸಲವಾದ್ರೂ ಹಳೆಯ ದಿನಚರಿಗಳನ್ನು ತೆಗೆದುನೋಡುವ ಶಂಕರನಾರಾಯಣ ಮತ್ತೆ ಮತ್ತೆ ಅಟ್ಟದ ಹಳೆಪುಸ್ತಕಗಳ ಮಾದಕ ಕಮಟು ವಾಸನೆಯಲ್ಲೂ ಮಧುರವೋ, ಕಟುವೋ ಆದ ಇಂಥವೇ ನೆನಪುಗಳನ್ನು ಮೂಸುತ್ತ, ಘಟನೆಗಳನ್ನು ತನ್ನೊಳಗೇ ಮೂಡಿಸಿಕೊಳ್ಳುತ್ತ ಕೂತಿರುತ್ತಾನೆ.ಮುದುರಿಹೋದ ಪ್ಲಾಸ್ಟಿಕ್ ಹೊದಿಕೆಗಳನ್ನು ಸರಿಪಡಿಸುತ್ತ, ಒಳಗಿರೋ ಹತ್ತಾರು ಚೀಟಿಗಳನ್ನು ಮತ್ತೆ ಮತ್ತೆ ತಿರುವುತ್ತ ಶಂಕರನಾರಾಯಣ ಕೆಲವು ಕ್ಷಣ ತನ್ನನ್ನು, ತನ್ನ ಇರವನ್ನು ಮರೆಯುತ್ತಾನೆ. `ಕನಸುಗಳಾಚೆಯ ತೀರದ ಮೇಲೆ ಜೀವನಪಟ ತೇಲಾಡುತಿದೆ’ ಎಂಬ ತನ್ನದೇ ಚುಟುಕು ಕವನದ ಸಾಲುಗಳನ್ನು ಶಂಕರನಾರಾಯಣ ಆಗಾಗ್ಗೆ ಗುನುಗುವುದೂ ಇದೆ. ಆ ಕ್ಷಣದಲ್ಲಿ ಅವನ ಮುಖದಲ್ಲಿ ಯಾವ ಭಾವನೆಯಿರುತ್ತೆ ಎಂದು ನೋಡುವುದಕ್ಕೆ ಇವರೆಗೆ ಯಾರಿಗೂ ಸಾಧ್ಯವಾಗಿಲ್ಲ. ಕೆಳಗೆ ಅವನ ಸ್ಟಡಿರೂಂ ಕಂಪ್ಯೂಟರಿನಲ್ಲಿ ಯಾವುದೋ ತೀರದಾಚೆಯ ಯಾವುದೋ ವಯಸ್ಸಿನ, ಯಾವುದೋ ಚಟದ ಯಾವುದೋ ವ್ಯಕ್ತಿ ಟ್ರಿಣ್ ಟ್ರಿಣ್ ಎಂದು ಇಂಟರ್‌ನೆಟ್ ಗಂಟೆ ಬಾರಿಸುತ್ತ ಕ್ಯಾಮೆರಾ ಆನ್ ಆಡಿದ್ದೇನೆ ಎಂದು ಕರೆಯುವುದನ್ನೂ ಕೇಳಿಸಿಕೊಳ್ಳದೆ ಶಂಕರನಾರಾಯಣ ದಾವಣಗೆರೆಯ ಯಾವುದೋ ಬಡಾವಣೆಯ ಯಾವುದೋ ಬೀದಿಯಲ್ಲಿ ಕಳೆದುಹೋಗಿರುತ್ತಾನೆ .