ಇನ್ನೇನು ವಿಮಾನ ಬೆಂಗಳೂರಿನಿಂದ ಬಂದೇ ಬಿಡುತ್ತದೆ ಎಂಬಂತೆ ದೂರದ ಗೋಪುರದ ಸೂಚಕ ದೀಪವು ಗಿರಗಿರ ತಿರುಗುತ್ತ ಮಿನುಗತೊಡಗಿತು. ನಮ್ಮ ಫೋಟೋಗ್ರಾಫರ್ ಗಡಬಡಿಸಿ ಸೀದಾ ಟರ್ಮಾಕಿನತ್ತ ನಡೆದ. ದಿನದ ಮೊದಲನೇ ವಿಮಾನ ಬಂತಲ್ಲ ಎಂಬ ಕರ್ತವ್ಯಪ್ರಜ್ಞೆಯಿಂದ ಪೇದೆಗಳು ಎದ್ದು ಟೋಪಿಯನ್ನು ಸರಿಪಡಿಸಿಕೊಂಡು, ಪ್ಯಾಂಟನ್ನು ಬಿಗಿ ಮಾಡಿಕೊಳ್ಳುತ್ತ ನಿಂತರು. ಸಖಿಯರೇ ಇಲ್ಲದ ಈ ನಿಲ್ದಾಣದ ಏಕಕ ಅಧಿಕಾರಿ ಯಾಂತ್ರಿಕವಾಗಿ ಆಕಾಶ ನೋಡತೊಡಗಿದ. ಅತಿಥಿಗಳನ್ನು ಸ್ವಾಗತಿಸಲೆಂದೇ ಹಾಕಿಕೊಂಡ ಯೂನಿಫಾರಂನ ವಿಚಿತ್ರ ಗಡಸಿನಲ್ಲಿ ನಾನೂ ಚಡಪಡಿಸತೊಡಗಿದೆ. ಗಾಜಿನ ಸೀಲಿಂಗಿನಿಂದ ನೇತಾಡುತ್ತಿದ್ದ ಆ ಮೀನಿನ ಬಲೂನುಗಳು ನಿಶ್ಚಲವಾಗಿದ್ದವು. `ನೋಡಿ, ನಮ್ಮೂರಿನಲ್ಲಿ ಬಣ್ಣ ಬಣ್ಣದ ಮೀನುಗಳು ಹ್ಯಾಗೆ ಬರಿ ಆಕಾಶದಲ್ಲಿ ಈಜಾಡುತ್ತಿವೆ, ನೀರಿಲ್ಲದೆ…’ ಎಂದು ನನ್ನ ಪ್ರಿಯ ಬಾಸ್ ಒಂದು ಸಲ ತಮಾಷೆ ಮಾಡಿದ್ದರು.
ಬಿಳಿಮೋಡಗಳ ನಡುವೆ ಆ ಪುಟ್ಟ ವಿಮಾನದಲ್ಲಿ ಆ ಪತ್ರಕರ್ತೆ ಬಂದಿಳಿಯಬೇಕು, ನಾನು ಅವಳಿಗೆ ಹೂಗುಚ್ಛ ಕೊಟ್ಟು ಸ್ವಾಗತಿಸಬೇಕು. ಅವಳ ಲಗೇಜನ್ನು ಡ್ರೈವರನಿಗೆ ಕೊಟ್ಟು, ಅವಳು ಕೂರುವ ಕಾರಿನ ಹಿಂಬದಿ ಬಾಗಿಲನ್ನು ತೆರೆದು ಮತ್ತೆ ಅವಳಿಗೆ ಸ್ವಾಗತ ಕೋರಿ ಕೂರಿಸಬೇಕು. ಹಾಗೇ ಅವಳನ್ನು ಹೋಟೆಲಿಗೆ ಕರೆದೊಯ್ದು, ಮೊದಲ ಮಹಡಿಯಲ್ಲಿರುವ ಅವಳ ಕೋಣೆಗೆ ಕರೆದುಕೊಂಡು ಹೋಗಿ ನಯವಾಗಿ ಬಾಗಿಲು ಎಳೆದುಕೊಂಡು ರಿಸೆಪ್ಶನ್‌ಗೆ ಬಂದು……
ನನ್ನ ಮೇಲಧಿಕಾರಿಗೆ ಅವಳ ಆಗಮನದ ಬಗ್ಗೆ ಫೋನಾಯಿಸಿ ಸಭೆಗೆ ಬರುವ ಎಲ್ಲರ ಒತ್ತಡ ಹೆಚ್ಚಿಸಬೇಕು. ವಿವಿಧ ಮಾಹಿತಿ ಸಭೆಗಳ ತಯಾರಿಗೆ ಇನ್ನಷ್ಟು ಉದ್ವೇಗದ ಕಿಡಿ ಹೊತ್ತಿಸಬೇಕು. ಕಾರ್ಖಾನೆಯ ಭೇಟಿಯ ವೇಳಾಪಟ್ಟಿಯನ್ನು ಮಸೆದು ಮಸೆದು ಖಚಕ್ ಎನ್ನುವಂತೆ ರೆಡಿ ಮಾಡಲು ನನ್ನ ಸಹಾಯಕನಿಗೆ ಹೇಳಬೇಕು. ಅವಳ ರುಚಿಯೇನು, ಅಭಿರುಚಿಯೇನು ಎಂದು ತಿಳಿದು ಹೋಟೆಲಿನ ಮ್ಯಾನೇಜರ್‌ಗೆ ತಿಳಿಸಿ ಯಾವ್ಯಾವಾಗ ಏನೇನು ಎಂಬ ಮೆನ್ಯುವನ್ನು ಅಪ್ಲಿಕೇಶನ್‌ನಲ್ಲಿ ಬರಕೊಡಬೇಕು. ಅವಳಿಗೆ ದೇವರ ದರ್ಶನ ಮಾಡುವುದಕ್ಕೆ, ಅವಳಿಗೆ ಸಮಾಜಸೇವಾ ಚಟುವಟಿಕೆಗಳ ಬಹುಮುಖ್ಯ ಸ್ಥಳಗಳಿಗೆ ಭೇಟಿ ಕೊಡುವುದಕ್ಕೆ ಮಾಡಿದ ತಯಾರಿಯನ್ನು ಮತ್ತೆ ಮತ್ತೆ ಖಚಿತಪಡಿಸಿಕೊಳ್ಳಬೇಕು. ಸಂಬಂಧಪಟ್ಟ ಸ್ವಯಂಸೇವಕರಿಗೆ ಸೂಚನೆ ನೀಡಬೇಕು. ವಾಹನದ ಬುಕಿಂಗ್ ಖಚಿತಪಡಿಸಿಕೊಳ್ಳಬೇಕು; ಅದರೊಳಗೆ ಸಾಗುವ ಸ್ನಾಕ್ ಕಿಟ್ ತಪಾಸಣೆ ಮಾಡಬೇಕು….
ಹಾಗೇ ಯೋಚಿಸುತ್ತ ಲಾಬಿಯೊಳಗೆ ಕೂತು ನಿನ್ನೆಯ ದಿನಪತ್ರಿಕೆಗಳನ್ನು ಓದುತ್ತಿದ್ದ ನನಗೆ ಯಾಕೋ ಈ ಕೆಲಸ ಇಷ್ಟೆಲ್ಲ ಮಜಾ ಇದೆಯಲ್ಲ ಎಂದೆನ್ನಿಸಿ ನಗು ಬಂತು. ಒತ್ತಡದಲ್ಲೂ ನಗು ಬರುವುದು ನನ್ನಂಥ ಮೂರ್ಖನಿಗೆ ಮಾತ್ರ ಎಂದುಕೊಂಡು ಎದ್ದು ಹೊರಗೆ ಬಂದೆ. ಹೊರಗೆ ತಣ್ಣಗೆ ಬೀಸುತ್ತಿದ್ದ ಗಾಳಿಗೆ ಟಾರು ರಸ್ತೆಯಲ್ಲಿ ಬಿದ್ದಿದ್ದ ಎಲೆಗಳು ಮೆಲ್ಲಗೆ ಹಾರುತ್ತ, ಏಳುತ್ತ ದಿಕ್ಕರಿಯದಂತೆ ತತ್ತರಿಸಿದ್ದವು. ಕೊನೆಗೆ ರಸ್ತೆಯ ಅಂಚಿಗೆ ಅಂಟಿಕೊಳ್ಳುತ್ತಿದ್ದವು.
ಈ ಹದಿನಾರನೇ ಕೆಲಸದಲ್ಲೂ ಎಷ್ಟೊಂದು ಸಂಕೀರ್ಣತೆಯಿದೆ……… ಬೆಂಗಳೂರಿನ ಯಾವುದೋ ಸರ್ಕಲ್ಲಿನ ಯಾವುದೋ ಕಟ್ಟಡದ ಯಾವುದೋ ಮಹಡಿಯಲ್ಲಿ ನಿಗೂಢವಾಗಿ ಜಾಹೀರಾತು ಸಂಭಾಷಣೆಗಳನ್ನು ಬರೆಯುತ್ತಿದ್ದ ನಾನು ಹೀಗೆ ಹಠಾತ್ತನೆ ಐನೂರು ಮೈಲಿ ದೂರದ ಈ ಕಾರ್ಖಾನೆಯ ಈ ಹೋಟೆಲ್ಲಿನ ಈ ಹುಲ್ಲುಹಾಸಿನ ಮೇಲೆ ನಡೆಯುತ್ತಿರುವುದೇ ಒಂದು ಮ್ಯಾಜಿಕ್ ಥರ ಅನ್ನಿಸಿದೆ. ಪ್ರತೀದಿನ ನಾಲ್ಕಾರು ಸಲ ಈ ಭಾವ ಬಂದು ಹೋಗುತ್ತಿರುತ್ತೆ. ಕೈ ತುಂಬ ಸಂಬಳ; ಇರಲೊಂದು ಮನೆ; ದಿನಾ ಉಡಲು ಯೂನಿಫಾರಂ. ಆತಿಥಿಗಳೊಂದಿಗೆ ವಾರಕ್ಕೆ ಏನಿಲ್ಲೆಂದರೂ ಎರಡು ಮೂರು ಸಲ ಭೋಜನಕೂಟ. ಗೊತ್ತೇ ಇರದ ವ್ಯಕ್ತಿತ್ವಗಳೊಂದಿಗೆ ದಿನಾಲೂ ಸಭೆಗಳು. ಹತ್ತಾರು ನಿರ್ಧಾರಗಳು. ಸದಾ ಹಸನ್ಮುಖಿ ಮ್ಯಾನೇಜಿಂಗ್ ಡೈರೆಕ್ಟರ್. ಬಿರುಬಿಸಿಲಿನ ಬಯಲುಸೀಮೆಯಲ್ಲಿ ಹಸಿರು ದ್ವೀಪದಂತೆ ಹಠಾತ್ತನೆ ಎದ್ದ ಈ ನಗರದಲ್ಲಿ ನಾನೂ ಒಬ್ಬ ಗೌರವಾನ್ವಿತ ಪ್ರಜೆ.
ವಿಮಾನ ಸರಿಯಾಗಿ ಇಪ್ಪತ್ತೇ ನಿಮಿಷ ತಡವಾಗಿ ಬಂತು. ನಾನು ಕಾಯುತ್ತ ನಿಂತೆ. ಎಷ್ಟೋ ಜನ ಇಳಿದ ಮೇಲೆ ಒಬ್ಬಳೇ ನಡೆದು ಬರುತ್ತಿದ್ದ ಅವಳೇ ನನ್ನ ಆತಿಥಿ ಎಂದು ಅನುಭವ ಹೇಳಿತು. ಕೈ ಬೀಸಿದೆ. ಅವಳೂ ನಸುನಗುತ್ತ ಬಂದಳು. ಹಿರಿಯಾಕೆ ಎಂದು ತಿಳಿದಿದ್ದೆ; ಹದಿಹರೆಯದ ಹುಡುಗಿ. ಬಲಗೈಗೆ ಬ್ಯಾಂಡ್ ಸುತ್ತಿಕೊಂಡಿದ್ದಳು. ರೂಢಿಯ ಮಾತಾದ ಮೇಲೆ `ಅರೆ! ಏನಾಯ್ತು?’ ಎಂದು ವಿಚಾರಿಸಿದೆ. ಎಲ್ಲೋ ಮಹಡಿ ಇಳಿಯುವಾಗ ಜಾರಿ ಬಿದ್ದು, ಕೈ ಎಲ್ಲಿಯೋ ಹೋಗಿ ಟ್ವಿಸ್ಟ್ ಆಗಿಹೋಯ್ತಂತೆ. ನಿನ್ನೆ ತಾನೇ ಹೀಗಾಗಿದ್ದು ಎಂದು ಮತ್ತೆ ಕೈ ಎತ್ತಿ ಮೆದುವಾಗಿ ಆಡಿಸಿದಳು. ಇಂಥ ಪುಟ್ಟ ಹುಡುಗಿ ಹೀಗೆ ಕಾರ್ಖಾನೆ ನೋಡಲು ಬಂದಿದ್ದಾಳಲ್ಲ ಎಂದು ನನಗೆ ಒಂದೆಡೆ ಅಚ್ಚರಿ; ಇನ್ನೊಂದೆಡೆ ಇವಳನ್ನು ಸಂಭಾಳಿಸುವುದು ಸುಲಭವೇನೋ ಎಂಬ ಊಹೆಗೆ ರೆಕ್ಕೆ ಪುಕ್ಕ. ಇನ್ನು ಮೂರು ದಿನ ಅಧಿಕೃತವಾಗಿ ಇವಳ ಜೊತೆ ತಿರುಗಾಡಿ ಆಫೀಸಿನ ಕಿರಿಕಿರಿಯಿಲ್ಲದೆ ಇರಬಹುದಲ್ಲ ಎಂಬ ಕಿರು ಸಂಭ್ರಮ.
ಹೋಟೆಲಿನ ರೂಮಿಗೆ ಹೋಗುವವರೆಗೆ ಎಲ್ಲವೂ ಸುಗಮವಾಗೇ ನಡೆಯಿತು. ಸೀದಾ ಇದೇ ಲಾಬಿಗೆ ಬನ್ನಿ, ಇಲ್ಲೇ ಕಾಯ್ತಾ ಇರುವೆ ಎಂದು ಹೊರಬಂದೆ. ಮೆದುವಾಗಿ ನಕ್ಕ ನಿವೇದಿತಾ ಮರಾಠೆ ಬಾಗಿಲು ಎಳೆದುಕೊಂಡಳು.
ನಾನು ಕೆಲಸಗಳ್ಳನೋ, ಅಥವಾ ಶ್ರದ್ಧಾವಂತ ಕೆಲಸಗಾರನೋ ಎಂದು ಗೊತ್ತಾಗಂಥ ಈ ಗೊಂದಲ ನನ್ನನ್ನು ಹಲವು ಸಲ ಕಾಡಿದ್ದಿದೆ. ಈ ಲಾಬಿಯಲ್ಲಿ ಸದಾ ಪ್ರತಿಧ್ವನಿಸುವ ಮೌನದಲ್ಲಿ ನನ್ನನ್ನು ನಾನೇ ಟೀಕಿಸಿಕೊಂಡಿದ್ದೇನೆ. ಎಷ್ಟು ಸಲ ಈ ಲಾಬಿಯಲ್ಲಿ ಕೂತು ಅತಿಥಿಗಳಿಗಾಗಿ ಕಾದಿಲ್ಲ; ಎಷ್ಟು ಸಲ ಪತ್ರಕರ್ತರು ಬದಾಮಿಗೆ ಹೊರಟಾಗ ಅವರಿಗಾಗಿ ಚಹಾ ತರಿಸಿಲ್ಲ, ಎಷ್ಟು ಸಲ ವಿದೇಶಿ ಪರಿಣತರು ಹರಟುತ್ತಿದ್ದಾಗ ಅವರ ಚಿತ್ರಗಳನ್ನು ಕ್ಲಿಕ್ಕಿಸಿಲ್ಲ….. ಲಾಬಿಯ ಮಧ್ಯಭಾಗದಲ್ಲಿ ನಡು ಬಗ್ಗಿಸಿ ಕೈ ಕಾಲುಗಳನ್ನು ಚಾಚಿ ನೆಲಕ್ಕೆ ಚುಚ್ಚಿ ಆಕಾಶಕ್ಕೆ ಕೈ ತೋರಿಸುತ್ತಿರೋ ಆ ನವ ಯುವಕನ ಹಿಂದೆ ಅತಿಥಿಗಳನ್ನು ನಿಲ್ಲಿಸಿ ಇತ್ತ ಪಶ್ಚಿಮದ ಮೂಲೆಯಲ್ಲಿ ಬಾಗಿ ಕೂತು ಅದೇ ಫ್ರೇಮ್‌ಗಾಗಿ ಮತ್ತೆ ಮತ್ತೆ ಹುಡುಕಾಡಿಲ್ಲ….
ಯಾರೋ ಚೀನೀ ತಂತ್ರಜ್ಞರು ಅಲ್ಲಿ ಕೂತು ವೈಫೈ ಮೂಲಕ ಇಂಟರ್‌ನೆಟ್ ಜಾಲಾಡುತ್ತಿದ್ದಾರೆ. ಅಲ್ಲಿ ವಾಹನ ಮುಖ್ಯಸ್ಥ ಬಂದು ಯಾರಿಗೋ ಯಾವುದೋ ಟವೇರಾ, ಯಾವುದೋ ಇಂಡಿಗೋ, ಯಾವುದೋ ಸ್ಕಾರ್ಪಿಯೋ ಅಣಿಗೊಳಿಸುತ್ತಿದ್ದಾನೆ. ಪಾರ್ಕಿಂಗ್ ಏರಿಯಾದಲ್ಲಿ ಮೈಕ್ ಮೆಲುವಾಗಿ ಉಲಿದಂತೆ ವಾಹನಗಳು ಬಂದು ಯಾರು ಯಾರನ್ನೋ ಕರೆದುಕೊಂಡು ಹೋಗುತ್ತಿವೆ. ಕಾರ್ಖಾನೆಯ ಕನ್ವೆಯರ್ ಬೆಲ್ಟಿನಂತೆ ಈ ರಸ್ತೆಗಳೇ ವಾಹನಗಳನ್ನು ಎಳೆದೆಳೆದು ತರುತ್ತಿದೆಯೇನೋ ಎಂಬಂತೆ ಸದ್ದಿಲ್ಲದೆ ಹಾಯುವ ಈ ವಾಹನಗಳು ನನ್ನೊಳಗೆ ಯಾಂತ್ರಿಕತೆಯ ಭಾವವನ್ನು ಹೆಚ್ಚಿಸುತ್ತಿವೆ.
ಗಾಜಿನ ಬಾಗಿಲಾಚೆ ನಿವೇದಿತಾ ಬರುವುದು ಕಾಣಿಸುತ್ತಿದ್ದಂತೆ ದಢೂತಿ ಬಾಗಿಲನ್ನು ಎಳೆದು ಸ್ವಾಗತಿಸಿದೆ. ಭೋಜನ ಕೊಠಡಿಗೆ ಹೋಗುವಾಗಲೂ ಇನ್ನೊಂದು ಭರ್ಜರಿ ಬಾಗಿಲನ್ನು ಎಳೆಯಬೇಕು. ಒಳಗೆ ಮ್ಯಾನೇಜರ್ ಎಂದಿನಂತೆ ಅರ್ಧ ಬಗ್ಗಿ ನಮಸ್ಕರಿಸಿದ. ಎಂದಿನಂತೆ ಅದೇ ಅತಿಥಿಗಳ ಮೇಜಿಗೆ ಬಂದು ಅವಳಿಗೆ ಕೂರಲು ಹೇಳಿ ನಾನೂ ಕುರ್ಚಿ ಆರಿಸಿಕೊಳ್ಳುತ್ತಿದ್ದಂತೆ ಎಲ್ಲರೂ ಸರಸರ ಬಂದು ಸೇವೆ ಆರಂಭಿಸಿದರು.
ತಾರಾ ಹೋಟೆಲಿನ ಲಂಚ್ ತಿನ್ನುವುದಕ್ಕೂ ನನಗೆ ಸಂಬಳವಿದೆ. ಅವಳ ಜೊತೆಗೆ ಕಾರ್ಖಾನೆಯ ಬಗ್ಗೆ ವಿವರಿಸುವುದಕ್ಕೂ ಸಂಬಳ ಇದೆ. ಅವಳಿಗೆ ಬದಾಮಿಯ ದೇಗುಲಗಳನ್ನು ತೋರಿಸುವುದಕ್ಕೆ, ಅವಳ ಜೊತೆ ಕಾಡು ತಿರುಗುವುದಕ್ಕೂ… ಅವಳ ಜೊತೆ ರಾತ್ರಿ ಕೂತು ಹರಟುವುದಕ್ಕೂ….
ನಿನ್ನ ಹವ್ಯಾಸಗಳೇನು ಎಂದು ನಿವೇದಿತಾ ಮಾತು ಆರಂಭಿಸಿದಳು. ಇತಿಹಾಸ, ಸಂಗೀತ, ಸಾಹಿತ್ಯ ಎಂದೆಲ್ಲ ಕೊಂಚ ವಿವರಿಸಿದೆ. ಈ ಕೆಲಸ ನನಗೆ ಎಷ್ಟು ಇಷ್ಟ… ಎಷ್ಟು ಜನ ಈ ಕಾರ್ಖಾನೆಗೆ ಬಂದು ಯಾರನ್ನೆಲ್ಲ ಭೇಟಿ ಮಾಡಿದರೂ, ಮೊದಲು ನನ್ನನ್ನೇ ಕಾಣುತ್ತಾರೆ ಎಂದು ಜೋಕ್ ಹಾರಿಸಿದೆ. ನಿವೇದಿತಾ ನಾನಂದುಕೊಂಡ ಹಾಗೆ ಕಠಿಣ ಪತ್ರಕರ್ತೆಯಲ್ಲ ಎಂದು ಗೊತ್ತಾಗುತ್ತಿದ್ದಂತೆ ಎಲ್ಲವೂ ಹಗೂರ ಎನಿಸಿತು. ಅವಳಿಗೆ ಅದು ತಿನ್ನಿ, ಇದು ಟೇಸ್ಟ್ ನೋಡಿ ಎಂದು ಮ್ಯಾನೇಜರ್ ಕಡ್ಡಾಯ ವಿನಯ ಪ್ರಕಟಿಸುತ್ತಿದ್ದ. ಎಡಗೈಯಲ್ಲೇ ಚಮಚ, ಫೋರ್ಕ್ ಹಿಡಿದು ನಿವೇದಿತಾ ನಯವಾಗಿ ತಿರಸ್ಕರಿಸುತ್ತ. ಸಿಂಪಲ್ ಮೆನ್ಯುಗೇ ಅಂಟಿಕೊಂಡಳು.
ಊಟ ಮುಗಿಸಿ ಸೀದಾ ಬೋರ್ಡ್ ರೂಮಿಗೆ ಹೋದಾಗ ಅಲ್ಲಿ ಎಲ್ಲ ವ್ಯವಸ್ಥೆಗಳೂ ಸಿದ್ಧವಾಗಿದ್ದವು. ಎಂಡಿ ಪಕ್ಕದ ಸೀಟಿನಲ್ಲಿ ಅವಳನ್ನು ಕೂರಿಸಿ, ಪ್ರೆಸೆಂಟೇಶನ್‌ಗಳೆಲ್ಲ ಸರಿಯಿದೆಯೆ ಎಂದು ನೋಡುವ ಹೊತ್ತಿಗೆ ಉಳಿದ ಅಧಿಕಾರಿಗಳೆಲ್ಲ ಸದ್ದಿಲ್ಲದೆ ಬಂದು ಕೂತರು. ಎಂ ಡಿ ಸೀದಾ ಬಂದವರೇ ನಿವೇದಿತಾ ಬಳಿ ಹೋಗಿ ಪರಿಚಯಿಸಿಕೊಂಡರು. ಅವರು ಯಾವಾಗಲೂ ಹಾಗೆ. ಅವರ ಈ ಸ್ಟೇಜ್ ಮ್ಯಾನರಿಸಂ ಕಲಿಯುವುದೇ ಒಂದು ಮಜಾ. ಅವರು ಹ್ಯಾಗೆ ಮಾತಾಡಿಸುತ್ತಾರೆ, ಹ್ಯಾಗೆ ಇರುವ ಸನ್ನಿವೇಶದಲ್ಲೇ ಒಂದು ಜೋಕ್ ಹುಡುಕಿ ಅದನ್ನೇ ಎಷ್ಟು ಸಲೀಸಾಗಿ ಹೇಳಿ ವಾತಾವರಣದ ಬಿಗು ಸಡಿಲಿಸುತ್ತಾರೆ…… ಗ್ರೇಟ್.
ನಿವೇದಿತಾಳ ಕೈ ನೋಡಿದವರೇ ಮಿನೆರಲ್ ವಾಟರ್ ಬಾಟಲಿಯ ಬಿರಡೆಯನ್ನು ಬಿಡಿಸಿ ನೀರು ಬಗ್ಗಿಸಿದ ಎಂ ಡಿ ಸೀದಾ ಸಭೆ ಶುರು ಮಾಡಿದರು. ನಾನು ನಿವೇದಿತಾ ಬಗ್ಗೆ ಕೊಟ್ಟ ಕಿರುಟಿಪ್ಪಣಿಯನ್ನೇ ತಮ್ಮ ಅಧಿಕಾರಿಗಳಿಗೆ ಸೊಗಸಾಗಿ ನಿರೂಪಿಸಿದ ಅವರು ಕಾರ್ಖಾನೆಯ ಬಗ್ಗೆ ಇರೋ ಫಿಲ್ಮುಗಳನ್ನು ಮೊದಲು ನೋಡೋಣವೇ ಎಂದು ಕೇಳಿದರು. ಅದಾಗಲೇ ಅವರ ವಿನಯ ಮತ್ತು ಹಸನ್ಮುಖಿ ವರ್ತನೆಗೆ ಸೋತವಳಂತಿದ್ದ ನಿವೇದಿತಾ ನೀವು ಹೇಳಿದ ಹಾಗೆ ಎಂದು ಕೂತಳು.
ಎಂದೂ ಇಂಥ ಬೋರ್ಡ್ ರೂಮ್ ಪ್ರೆಸೆಂಟೇಶನ್ ಇಷ್ಟು ಸ್ಮೂತ್ ಆಗಿ ನಡೆದೇ ಇರಲಿಲ್ಲ. ನಾವು ರೂಮಿನ ಕಿಟಕಿಗಳನ್ನು ಮುಚ್ಚಿದ ಹಾಗೆಯೇ ಎಲ್ಲ ಸಿನೆಮಾಗಳು, ಪ್ರೆಸೆಂಟೇಶನ್‌ಗಳು ಸೊಗಸಾಗಿ ಮುಗಿದವು. ಚಹಾ ಕಪ್ಪು- ಸಾಸರಿನ ಖಣ ಖಣವೊಂದನ್ನು ಬಿಟ್ಟರೆ ಇಡೀ ಸಭೆಯಲ್ಲಿ ಮೌನ ಮತ್ತು ಅರೆಗತ್ತಲು. ಟಿಪ್ಪಣಿ ಹಾಕಿಕೊಳ್ಳುವ ಯಾವುದೇ ಅಗತ್ಯವೂ ಅಲ್ಲಿರಲಿಲ್ಲ.
ಸಭೆ ಮುಗಿದ ಹಾಗೇ ಮತ್ತೆ ವಿರಾಮ. ನಿವೇದಿತಾಳನ್ನು ಮತ್ತೆ ನಗರದ ಹುಲ್ಲು ಹಾಸಿನ ಮೇಲೆ ನಡೆಸಿದೆ. ಅಲ್ಲಿರೋ ಮೆಮೋರಿಯಲ್‌ನ ಗುಂಜನವನ್ನು ಕೇಳಿಸಿದೆ. ಟವೇರಾ ಹತ್ತಿ ಹತ್ತಿರದ ಕಾಡುಮೇಡುಗಳ ದರ್ಶನ ಮಾಡಿಸಿದೆ. ಅಷ್ಟು ಹೊತ್ತಿಗೆ ಸಂಜೆಯಾಗಿ ನಗರವಿಡೀ ಬಗೆಬಗೆಯ ವಿದ್ಯುದ್ದೀಪಗಳಿಂದ ತಾರಾಲೋಕದ ಹಾಗೆ ಝಗಮಗಿಸತೊಡಗಿತ್ತು. ಕಾರ್ಖಾನೆಯ ಸಿಬ್ಬಂದಿಗಳು ಕೆಲಸ ಮುಗಿಸಿ ಬಂದು ಖರೀದಿಯಲ್ಲೋ, ಪಾನಿಪುರಿ ತಿನ್ನುವುದರಲ್ಲೋ ತೊಡಗಿದ್ದರು. ಔಷಧಗಳ ಜೊತೆಗೆ ದಿನಸಿ ಸಾಮಾನುಗಳೂ ಸಿಗುವ ಆ ಅಂಗಡಿಗೆ ಜನ ಮುಕುರಿದ್ದರು. ನಗರದಾಚೆ ಇರೋ ವನದಲ್ಲಿ ಕೆಲಸ ಮಾಡಿ ಬಂದ ಹೆಂಗಳೆಯರು ಖಾಲಿ ಬುತ್ತಿ ಹೊತ್ತು ಹಿಂದಿರುಗುತ್ತಿದ್ದರು. ನಿವೇದಿತಾ ಜೊತೆಗೆ ಇದ್ದ ಪರಿಚಯ ನಿಧಾನವಾಗಿ ಸ್ನೇಹಕ್ಕೆ ತಿರುಗಿತೋ ಎಂಬ ಅನುಮಾನ ಹುಟ್ಟಿಕೊಂಡಿತು. ಇವಳನ್ನು ನೋಡಿದರೆ ಯಾರೋ ನೆನಪಾಗುತ್ತಾರಲ್ಲಾ ಎಂದೆನ್ನಿಸಿತು. ಮುಂಬಯಿಯಲ್ಲಿ ತಾಯಿ ತಂದೆ ಜೊತೆ ಇರೋ ನಿವೇದಿತಾ ಒಬ್ಬ ಕಲಾವಿದೆ. ಕಲಾಕೃತಿಗಳನ್ನು ಮಾರುವ ಬ್ಯುಸಿನೆಸ್ ಕೂಡಾ ಮಾಡಿದಾಳಂತೆ.
ರಾತ್ರಿ ಊಟಕ್ಕೆ ಮೊದಲು ಅವಳೆದುರು ಬದಾಮಿಯ ಕಲಾಕೃತಿಗಳ ಪುಸ್ತಕ ಎದುರಿಗಿಟ್ಟಾಗ ಅವಳ ಖುಷಿ ನೋಡಬೇಕಿತ್ತು. ಅಂಥ ನೋವಿನಲ್ಲೂ ಕೈ ನೀಡಿ ಥ್ಯಾಂಕ್ಸ್ ಹೇಳಿದಳು. ನನ್ನ ಸಹಾಯಕನೂ ಈ ಡಿನ್ನರ್‌ಗೆ ಸೇರಿಕೊಂಡಿದ್ದ. ಇಂಗ್ಲಿಶ್ ಲಿಟರೇಚರ್ ಪ್ರಾಣಿ. ಇತಿಹಾಸವೆಂದರೆ ಲಿಟರೇಚರ್ ಮಾತ್ರ ಎಂದು ತಿಳಿದಿರುವಾತ. ಹಾಗೂ ಹೀಗೂ ಮಾತನ್ನು ನನ್ನ ಆಸಕ್ತಿಯ ವಿಷಯಕ್ಕೇ ತಿರುಗಿಸಿದೆ. ನಿವೇದಿತಾ ಹಣ್ಣಿನ ರಸ ಹೀರುತ್ತ ಹೇಳಿದಳು: ನನಗೆ ಕಲೆಯ ಇತಿಹಾಸ ಅಂದ್ರೆ ತುಂಬಾ ಇಷ್ಟ. ಯಾಕಂದ್ರೆ ನಮ್ಮಲ್ಲಿ ಇರೋವಷ್ಟು ಕಲೆ ಇನ್ನೆಲ್ಲೂ ಇಲ್ಲ. ನಾನು ಅಜಂತಾ – ಎಲ್ಲೋರ ಗುಹೆಗಳ ಗೈಡ್ ಥರ ಆಗಿದೀನಿ. ನೀನೇನಾದ್ರೂ ಬಂದ್ರೆ ಖಂಡಿತ ನಿನಗೆ ಆ ಗುಹೆಗಳ ಅದ್ಭುತ ಜಗತ್ತನ್ನು ಹೊಸಾ ರೀತಿಯಲ್ಲಿ ತೋರಿಸ್ತೀನಿ.
ಹೌದ ಎಂದು ನಾನು ಗಾಜಿನ ಬಟ್ಟಲನ್ನು ಹಿಡಿದು ನಸುನಕ್ಕೆ. ಇವೆಲ್ಲ ಅಧಿಕೃತ ಮಾತುಗಳೇನಲ್ಲ; ಆದರೂ ಕಾರ್ಖಾನೆ ನನಗೆ ವಹಿಸಿದ ಜವಾಬ್ದಾರಿ. ಇಲ್ಲಿಯೂ ಖಾಸಾತನಕ್ಕೆ ಅವಕಾಶ ಇದೆಯಲ್ಲ ಎಂಥ ಮಜಾ ಎಂದು ಮತ್ತೆ ನನ್ನೊಳಗೆ ಖುಷಿ ಆವರಿಸಿತು.
ನೀನು ಗ್ರಹಾಮ್ ಹ್ಯಾಂಕಾಕ್‌ನ ಪುಸ್ತಕ ಓದಿದೀಯ? ಸೂಪರ್ ನ್ಯಾಚುರಲ್ ಪುಸ್ತಕದಲ್ಲಿ ಅವರು ಗುಹಾಕಾಲದ ಕಲಾಕೃತಿಗಳನ್ನು ಭಿನ್ನವಾಗಿ ವಿಶ್ಲೇಷಿಸಿದ್ದಾರೆ, ಅವೆಲ್ಲವೂ ಒಂದು ಮಾದಕ ಸ್ಥಿತಿಯಲ್ಲಿ ಬರೆದಂಥವು; ಜಗತ್ತಿನ ಎಲ್ಲ ಖಂಡಗಳ ಎಲ್ಲ ಆದಿಮಾನವರೂ ಒಂದೇ ಥರ ಅನುಭವ ಹೊಂದಿ ಒಂದೇ ಥರ ಚಿತ್ರ ಬಿಡಿಸಿದ್ದಾರೆ ಎಂದು ಹ್ಯಾಂಕಾಕ್ ಹೇಳಿದಾನೆ ಎಂದೆ. ನಾನು ಕಷ್ಟಪಟ್ಟು ಓದುತ್ತಿದ್ದ ಆ ಪುಸ್ತಕದ ಟೈಟಲ್ ಕೇಳಿಯೇ ನಿವೇದಿತಾ ಕಣ್ಣರಳಿತು. ಇಬ್ಬರಿಗೂ ಕಲೆ – ಇತಿಹಾಸದ ಯಾವುದೋ ಕಾಮನ್ ರಿಲೇಶನ್ ಇದೆ ಎಂಬಂತೆ ನಾನು ಕಲ್ಪಿಸಿಕೊಂಡೆನಾ ಎಂದು ಒಂದು ಸಲ ಅನ್ನಿಸಿತು. ಹೀಗೆ ಬರುವ ಪ್ರತಿಯೊಂದೂ ಅತಿಥಿಯ ಜೊತೆ ನಾನೂ ಯಾವುದೋ ಕಾಮನ್ ವಿಷಯಕ್ಕಾಗಿ ಹುಡುಕಿ ಅದನ್ನೇ ಹೇಳುತ್ತೇನೆ.
ಕಳೆದ ವಾರ ಬಂದ ಪತ್ರಕರ್ತರ ದಂಡಿನಲ್ಲಿ ನಾನು ಅರ್ಬನ್ ಬ್ಯಾಂಕಿಂಗ್ ತಜ್ಞ ಎಂಬಂತೆ ಮಾತಾಡಿದ್ದೆ. ಮೂರು ತಿಂಗಳುಗಳ ಹಿಂದೆ ಬಂದ ವಿದೇಶಿ ನಿಯೋಗಕ್ಕೆ ನಾನು ಇಂಟರ್‌ನೆಟ್ ಫ್ರೀಕ್ ಎಂದೇ ಹೇಳಿಕೊಂಡಿದ್ದೆ. ಅತಿಥಿಗಳಿಗೆ ಗೊತ್ತಿರೋ ವಿಷಯವನ್ನೇ ನಾನೂ ಮಾತಾಡಿದರೆ ಮಾತುಕತೆಯೂ ಚೆನ್ನಾಗಾಗುತ್ತೆ; ದಿನವಿಡೀ ಕಾರ್ಖಾನೆಯ ಬಗ್ಗೆಯೇ ಕೇಳಿದ ಇಂಥ ಅತಿಥಿಗಳಿಗೆ ಈ ವಿಷಯಾಂತರ ಖುಷಿ ಕೊಡುತ್ತೆ ಅನ್ನೋದು ನನಗೆ ಈ ಆರು ತಿಂಗಳುಗಳಲ್ಲೇ ಗೊತ್ತಾಗಿದೆ.
ನಿವೇದಿತಾ ಮತ್ತೆ ಮತ್ತೆ ಇತಿಹಾಸಕ್ಕೆ ತಿರುಗಿದಳು. ಬೌದ್ಧರ ಕಲಾವಂತಿಕೆಯನ್ನು ವಿವರಿಸಿದಳು. ಬದಾಮಿಯ ಬಗ್ಗೆ ತಾನು ಓದಿದ್ದೆಲ್ಲವನ್ನೂ ತಿಳಿಸಿದಳು.
ಊಟ ಮುಗಿಯೋ ಹೊತ್ತಿಗೆ ರಾತ್ರಿ ಹನ್ನೊಂದು ದಾಟಿತ್ತು. ಮತ್ತೆ ಔಪಚಾರಿಕ ಮಾತುಗಳು. ನಿವೇದಿತಾಳನ್ನು ಅವಳ ರೂಮಿಗೆ ಬಿಟ್ಟು ಹೊರಬಂದರೆ ಮಳೆ ಮೋಡಗಳು ಕಟ್ಟಿಕೊಳ್ಳುತ್ತಿದ್ದವು. ಹಠಾತ್ತನೆ ವಾತಾವರಣ ಬದಲಾದಂತೆ ಅನ್ನಿಸಿ ಮನೆಯತ್ತ ನಡೆದೆ. ನನ್ನ ಅವತ್ತಿನ ಕೆಲಸ ಮುಗಿದಿದೆ.
ಮನೆಗೆ ಹೋಗುವುದು ಇದ್ದೇ ಇದೆಯಲ್ಲ ಎಂದು ಸರೋವರದತ್ತ ನಡೆದೆ. ಅಲ್ಲಿ ಕಲ್ಲುಬೆಂಚಿನ ಮೇಲೆ ಕುಳಿತು ತಂಗಾಳಿಯ ಹಿತದಲ್ಲಿ ಏನಾದರೂ ಯೋಚಿಸುವುದು ನನ್ನ ಅಪರೂಪದ ದಿನಚರಿ. ಕತ್ತಲಿನ ಮಬ್ಬಿನಲ್ಲೂ ಏರಿ ಹತ್ತಿ ಕೂತೆ.
ಈ ಇತಿಹಾಸವನ್ನು ನಾನು ಈ ಕಾರ್ಖಾನೆಯ ಈ ಹೋಟೆಲಿನಲ್ಲಿ ಯಾಕಾದರೂ ಕೆದಕಬೇಕು…. ನಿವೇದಿತಾ ನಾಳೆ ವಿಮಾನ ಹತ್ತಿ ಹೋದಮೇಲೆ ನನಗೂ ಅವಳಿಗೂ ಏನಾಗಬೇಕು? ಅವಳೇನಾದರೂ ನನಗೆ ಈ ಮೈಲ್ ಮಾಡುತ್ತಾಳಾ ಅಥವಾ ಕಳೆದೇ ಹೋಗುತ್ತಾಳಾ…. ಅವಳಿಗೆ ಇನ್ನಾವುದೋ ಕಾರ್ಖಾನೆಯ ಅಸೈನ್‌ಮೆಂಟ್ ಸಿಗುತ್ತದೆ. ಇನ್ನಾವುದೋ ಊರಿನಲ್ಲಿ ನನ್ನಂಥ ಇನ್ನೊಬ್ಬ ಅಧಿಕಾರಿ ಜೊತೆ ಊಟ. ಅವನೂ ಏನಾದರೂ ಕಲೆ – ಇತಿಹಾಸ ಅಂತ ಗೊಣಗಬಹುದೇನೋ. ನಾನೂ ಮುಂದಿನ ವಾರ ಬರುವ ನನ್ನ ಕಾರ್ಖಾನೆಯ ವಿದೇಶಿ ಪರಿಣತರ ಭೇಟಿಗೆ ತಯಾರಿ ನಡೆಸಬೇಕು. ಅವರು ಯಾರು ಎಂದು ಇಂಟರ್‌ನೆಟ್‌ನಲ್ಲಿ ಜಾಲಾಡಿ ಮಾಹಿತಿ ಸಂಗ್ರಹಿಸಿ ಶ್ಲಾಘನೆಯ ಡೈಲಾಗ್‌ಗಳನ್ನು ಜೋಡಿಸಿಟ್ಟುಕೊಂಡರೆ ಅನುಕೂಲ. ಇವೆಲ್ಲ ನನ್ನ ಟ್ರೇಡ್ ಸೀಕ್ರೆಟ್ ಥರ. ಯಾರ ಭೇಟಿ ಆಗುವುದಿದ್ದರೂ ಅವರ ಬಗ್ಗೆ ಮೊದಲೇ ತಿಳಿದುಕೊಳ್ತೇನೆ.
ನಿವೇದಿತಾ ಮುಂಬಯಿಯಲ್ಲಿ ಒಬ್ಬ ಕಲಾವಿದೆ, ಲೇಖಕಿ, ಕಲಾ ವಿಮರ್ಶಕಿ ಎಂದು ನನಗೆ ಮೊದಲೇ ಗೊತ್ತಿತ್ತು. ಆದರೂ ಅವಳಿಂದಲೇ ಎಲ್ಲವನ್ನೂ ಹೇಳಿಸಿಕೊಂಡು ಹೌದ ಎಂದು ಬೆರಗುಗಣ್ಣುಗಳನ್ನು ಬಿಟ್ಟೆನಲ್ಲವೆ? ನನಗೆ ಗೊತ್ತಿದ್ದ ಉತ್ತರಗಳಿಗೆ ಪ್ರಶ್ನೆಗಳನ್ನು ಪೋಣಿಸಿ ಅವಳಿಂದಲೇ ಮಾತಾಡಿಸಿ ಅವಳಿಗೂ ಒಂದು ಚಟುವಟಿಕೆ ಕೊಟ್ಟೆನಲ್ಲವೆ? ಇದೇ ಚಾಣಾಕ್ಷತೆಗೇ ನನಗೆ ಈ ಕೆಲಸ ಸಿಕ್ಕಿತೋ ಹೇಗೆ ಎಂದು ಗೊತ್ತಾಗುತ್ತಿಲ್ಲ.
ನಿವೇದಿತಾಳದ್ದು ಒಂದು ಬ್ಲಾಗ್ ಇದೆ. ಅಲ್ಲಿ ಅವಳು ತನ್ನೆಲ್ಲ ಭಾವನೆಗಳನ್ನು ಮುಕ್ತವಾಗಿ ಹೇಳಿಕೊಂಡಿದ್ದಾಳೆ. ಅದನ್ನೆಲ್ಲ ನನ್ನ ಕಂಪ್ಯೂಟರಿಗೆ ಇಳಿಸಿಕೊಂಡು ಪೆನ್ ಡ್ರೈವ್‌ನಲ್ಲಿ ಹಾಕಿ ಮನೆಗೆ ತಂದು ಓದಿರಲಿಲ್ಲವೆ? ಅವಳ ಅಜಂತಾ – ಎಲ್ಲೋರದ ಛಾಯಾಚಿತ್ರಗಳೂ ನನಗೆ ಸಿಕ್ಕಿದ್ದವು. ಅವಳ ಮುಖ ಹೀಗೆಯೇ ಇದೆ, ಅವಳ ಉಡುಗೆ ಹೀಗೆಯೇ ಇರುತ್ತೆ ಎಂದು ನಾನು ಚೆನ್ನಾಗಿ ತಿಳಕೊಂಡಿದ್ದೆ. ಆದರೂ ಅವಳು ವಿಮಾನದಿಂದ ಇಳಿದಾಗ ಯಾಕೆ ಏನೂ ಗೊತ್ತಿಲ್ಲದ ಹಾಗೆ ನಟಿಸಿದೆ?
ಕೆಲಸ ಎಂದರೆ ಎಷ್ಟೆಲ್ಲ ಮಜಾ ಇರುತ್ತೆ… ಗೊತ್ತಿದ್ದೂ ಗೊತ್ತಿಲ್ಲದ ಹಾಗೆ…. ಗೊತ್ತಿಲ್ಲದೆಯೂ ಗೊತ್ತಿರೋ ಹಾಗೆ ಇರಬೇಕು.
ನಿವೇದಿತಾ ಕುತೂಹಲದಿಂದ ಹುಬ್ಬೇರಿಸಬೇಕು. ಓಹ್ ಎಂಥ ಸಂಕೀರ್ಣ ವಿಷಯದ ಬಗ್ಗೆ ಈ ಬಡ್ಡಿಮಗ ಮಾತಾಡ್ತಾನೆ ಎಂದು ಕಣ್ಣರಳಿಸಬೇಕು. ಇವನಿಗೆ ಈ ವಿಷಯ ಗೊತ್ತಿಲ್ಲ, ವಿವರಿಸೋಣ ಎಂದು ನಿವೇದಿತಾ ಶಾಲೆ ಟೀಚರ್ ಥರ ಮಾತಾಡಬೇಕು…. ನಾನು ಸುಮ್ಮನೆ ಎಲ್ಲವನ್ನೂ ಕೇಳಿಸಿಕೊಂಡು ಕೂರುತ್ತೇನೆ. ಅವಳ ಮಾತುಗಳಿಗೆ ದಾರಿ ಮಾಡಿಕೊಟ್ಟು ನಾನು ನನ್ನೆದೆಯನ್ನೇ ಸಪಾಟಾಗಿ ಹಾಸುತ್ತೇನೆ. ಮನಸ್ಸುಕೊಟ್ಟು ಕೇಳುವಂತೆ ವರ್ತಿಸುತ್ತೇನೆ.
ನಕ್ಷತ್ರಗಳನ್ನು ಮರೆಮಾಚಿದ ಮೋಡಗಳು ಹನಿಹನಿಯಾಗಿ ಇಡೀ ನಗರದ ಮೇಲೆ ಹಾಸಿಕೊಳ್ಳುತ್ತಿವೆ. ಕಾರ್ಖಾನೆಯ ಗರಗರ ಸದ್ದು ಕೊಂಚ ಹೆಚ್ಚಾದಂತೆ ಅನ್ನಿಸುತ್ತಿದೆ. ಎಲ್ಲೋ ಲಾರಿಗಳು ಗೋಳಿಡುತ್ತ ರಸ್ತೆಯಲ್ಲಿ ಹಾಯುತ್ತಿವೆ. ದೂರದ ಬೆಟ್ಟಗುಡ್ಡಗಳಲ್ಲಿ ಮಿಣಕುದೀಪಗಳು ಕಾಣಿಸಿಕೊಂಡಿವೆ. ಹನ್ನೆರಡು ಗಂಟೆಯಾದಂತೆ ನಗರದ ದೊಡ್ಡ ಗಡಿಯಾರದ ಗಂಟೆ ಬಾರಿಸುತ್ತಿದೆ. ಮತ್ತೊಂದು ದಿನಾಂಕ ಈಗಷ್ಟೇ ಶುರುವಾಯಿತು.
ಮತ್ತೆ ಇವತ್ತು ನಿವೇದಿತಾಳಿಗೆ ಅವಳ ಕಲಾವಿಮರ್ಶೆಯ ಲೇಖನಗಳ ಬಗ್ಗೆ ತಲೆ ತಿನ್ನಬೇಕು. ಅವಳಿಗೆ ಖುಷಿಯಾದಷ್ಟೂ ನನಗೂ ಖುಷಿ. ಕಾರ್ಖಾನೆಯ ಆಡಳಿತ ವರ್ಗಕ್ಕೂ ಖುಷಿ. ಎಲ್ಲರಿಗೂ ಖುಷಿ. ಎಲ್ಲರನ್ನೂ ಹದವಾಗಿ ಖುಷಿಯಲ್ಲಿಡೋ ಈ ಕೆಲಸದಲ್ಲಿ ನಾನು ಇನ್ನಷ್ಟು ಖುಷಿಯಿಂದ ತೊಡಗಬೇಕು ಅನ್ನಿಸುತ್ತಿದೆ. ನಾಳೆ ಮತ್ತಷ್ಟು ನಗುತ್ತೇನೆ; ಮತ್ತಷ್ಟು ಜೋಕ್ ಹುಡುಕಿಕೊಂಡು ಹೋಗುತ್ತೇನೆ.
ಈ ಕೆಲಸದಲ್ಲಿ ಖುಷಿಯೂ ಒಂದು ಅಜೆಂಡಾ.
ಬೆಳಗ್ಗೆ ಆರೂವರೆಗೇ ನಿವೇದಿತಾಳನ್ನು ಎಬ್ಬಿಸಿ ಕೈ ಕುಲುಕಿ `ಗುಡ್ ಮಾರ್‍ನಿಂಗ್ ನಿವೇದಿತಾ. ಇವತ್ತು ಈ ಪುಸ್ತಕ ನಿಮ್ಮಲ್ಲೇ ಇರಲಿ, ವಿಮಾನ ಹತ್ತುವ ಮುನ್ನ ಕೊಡಿ. ಈಗ ಇನ್ನು ಅರ್ಧ ಗಂಟೇಲಿ ತಯಾರಾದ್ರೆ ಮಾತ್ರ ನೀವು ಬದಾಮಿಯನ್ನು ಎಂಜಾಯ್ ಮಾಡಬಹುದು’ ಎಂದವನೇ ಸೂಪರ್ ನ್ಯಾಚುರಲ್ ಪುಸ್ತಕವನ್ನು ಅವಳ ಕೈಗಿತ್ತೆ.
ನಿವೇದಿತಾ ಕಣ್ಣುಜ್ಜಿಕೊಂಡು ಅರೆ ಎನ್ನುತ್ತಿದ್ದಂತೆ ಮತ್ತೆ ಬಾಗಿಲೆಳೆದುಕೊಂಡು ಬಂದು ಲಾಬಿಗೆ ಬಂದೆ. ಒಂದು ಚಹಾ ಸಿಗಬಹುದೆ ಎಂದು ಬೆಳಗಿನ ಪಾಳಿಯ ಮ್ಯಾನೇಜರನಿಗೆ ಕೇಳಿ ನಿನ್ನೆಯ ಪೇಪರ್ ಹಿಡಿದು ಕೂತೆ.
————-