ಆರ್ ಜಿ ಹಳ್ಳಿ ನಾಗರಾಜ್ ಎಂಬ ನಿತ್ಯನೂತನ, ಚಿರ ಪುರಾತನ, ಜನರ ನೋವಿಗೆ ಮಿಡಿವ ನೈಜ ಸಮಾಜವಾದಿ ಮಿತ್ರ!
೨೦೧೭ ನವೆಂಬರ್ ೨೪. ಮೈಸೂರಿನ ಕನ್ನಡ ಸಾಹಿತ್ಯ ಸಮ್ಮೇಳನದ ಪುಸ್ತಕ ಪ್ರದರ್ಶಿನಿಯಲ್ಲಿ ಅಡ್ಡಾಡುತ್ತಿದ್ದಾಗ ಥಟ್ಟನೆ ಎದುರಾಗಿದ್ದು `ಅನ್ವೇಷಣೆ’ಯ ಆರ್ ಜಿ ಹಳ್ಳಿ ನಾಗರಾಜ್ ಮಳಿಗೆ. ಅವರೇ ಒಂದು ಕುರ್ಚಿ ಹಾಕಿಕೊಂಡು ಕೂತಿದ್ದರು. ಕಂಡೊಡನೆ `ಏನ್ ಸುದರ್ಶನ್’ ಎಂದು ಅದೇ ಆತ್ಮೀಯತೆಯಿಂದ ಕರೆದು ಮಾತನಾಡಿಸಿ, ಖರೀದಿಸುವೆ ಎಂದು ಹೇಳಲೂ ಆಸ್ಪದ ಕೊಡದೆ (ಅವರ ಭೇಟಿಗಿಂತ ಮುನ್ನ ಇನ್ನೊಬ್ಬ ಪ್ರಕಾಶಕರು ಉಚಿತ ಕೊಡಲು ಯತ್ನಿಸಿದರೂ ದುಡ್ಡು ಕೊಟ್ಟೇ ಬಂದಿದ್ದೆ ಎನ್ನಿ!) ತಮ್ಮ ಹೊಸ ಪುಸ್ತಕವನ್ನು (ಹೆದ್ದಾರಿ ಕವಲು) ತೆರೆದು ಆಟೋಗ್ರಾಫ್ ಕೊಟ್ಟೇಬಿಟ್ಟರು.
ಆದರೆ ಬೆಂಗಳೂರಿನಲ್ಲಿ ೧೯೮೬ರ ಕೊನೆಯ ದಿನಗಳು ಇಷ್ಟು ಸುಖವಾಗಿರಲಿಲ್ಲ.
ದಾವಣಗೆರೆಯಲ್ಲಿದ್ದ ನಾನು ಇಂಜಿನಿಯರಿಂಗ್ ಶಿಕ್ಷಣ ಬಿಡುವ ಕರಾಳ ಸನ್ನಿವೇಶ ಎದುರಾಯಿತು. ಅಲ್ಲಿನ ಮಿತ್ರ ಬಿ ಎನ್ ಮಲ್ಲೇಶ್ (`ನಿನ್ನಜ್ಜಿ, ಇನ್ವಿಟೇಶನ್ ಇದೆ, ಬಾ ಮಗನೆ’ ಎಂದು ಕವನ ಸಂಕಲನಕ್ಕೆ ಮಲ್ಲೇಶ್ ಕರೆದು ಬರೆದ ಪತ್ರ ನನ್ನ ಮೇಜಿನ ಮೇಲೇ ಇದೆ!) ಹತ್ತಿರ ಹೇಳಿಕೊಂಡೆ. `ನೋಡು ಬೆಂಗಳೂರಲ್ಲಿ ಆರ್ ಜಿ ಹಳ್ಳಿ ಅಂತ ಇದಾನೆ. ಚಿತ್ರದುರ್ಗ ಜಿಲ್ಲೆಯ ರಾಮಗೊಂಡನಹಳ್ಳಿಯವನು. ನನ್ನ ಮಿತ್ರ. ಅವನ ಮನೆಗೆ ಹೋಗು. ಅವನಿಗೆ ತಿಳಿಸ್ತೇನೆ’ ಎಂದ.
ಒಂದು ಹಾಸಿಗೆ, ಅರಸೀಕೆರೆ ಜಂಕ್ಷನ್‌ನಲ್ಲಿ ಎಲ್ಲ ಮೂರು ಜೊತೆ ಉಡುಗೆಗಳೂ ಕಳವಾದ ಮೇಲೆ ಉಳಿದ ಹಳದಿ ಬ್ಯಾಗು, ಹಳೆಬಟ್ಟೆಯೊಂದಿಗೆ ಆ ಕೊರೆವ ಚಳಿಯಲ್ಲಿ ನಾಗರಬಾವಿ ರಸ್ತೆಯಲ್ಲಿದ್ದ ಆರ್ ಜಿ ಹಳ್ಳಿ ಮನೆಗೆ ಹೋದೆ. ಆರ್ ಜಿ ಹಳ್ಳಿ ನನ್ನನ್ನು ಹಳೆಯ ಮಿತ್ರನ ರೀತಿಯಲ್ಲಿ ಕಂಡು ಉಪಚರಿಸಿದರು. ಮನೆಯ ಮೊದಲ ರೂಮಿನ ಒಂದು ಮೂಲೆಯನ್ನು ನನಗೆ ಕೊಟ್ಟರು. ಏಕೆಂದರೆ ಆ ಮನೆಯಲ್ಲಿ ಇನ್ನೂ ಮೂವರಿಗೆ ಬೇರೆ ಬೇರೆ ಮೂಲೆಗಳನ್ನು ನೀಡಲಾಗಿತ್ತು! ಮನೆಯ ಯಜಮಾನನಾಗಿ ಆರ್‌ಜಿ ಒಂದು ಪ್ರತ್ಯೇಕ ರೂಮಿನಲ್ಲಿದ್ದರು!
ಅಲ್ಲಿದ್ದದ್ದು ಮೂರ್‍ನಾಲ್ಕು ತಿಂಗಳುಗಳು. ಅವರೇ ಕೆಲಸಕ್ಕೆ ಇಟ್ಟುಕೊಂಡಿದ್ದ ಹುಡುಗನಿಂದ ಅಡುಗೆ. ಕೆಲವೊಮ್ಮೆ ಹೊರಗೆ, ಕೆಲವೊಮ್ಮೆ ಮನೆಯಲ್ಲಿ…. ಹೇಗೋ ಬದುಕಲು ಆರಂಭಿಸಿದೆ, ಥ್ಯಾಂಕ್ಸ್ ಟು ಆರ್‌ಜಿ.
ಮಲ್ಲೇಶನೇ ಹುಡುಕಿಕೊಟ್ಟಿದ್ದ ಆ ಕಾಲದ ಯುವ ಪತ್ರಕರ್ತನು ನನಗೆ ಮಾಡಿದ ವಂಚನೆಗಳ ನಂತರ ನಾನು ಕೆಲಸ ಬದಲಿಸಬೇಕಾಯಿತು(ಆ ವಂಚಕ ಇನ್ನೂ ಆಗಿನ ಬಿಟಿಎಸ್ ಓಡಾಟದ ಖರ್ಚು ಕೊಟ್ಟಿಲ್ಲ ಎಂದು ಆ ದಿನದ ಡೈರಿ ನೆನಪಿಸುತ್ತಿದೆ); ಆರ್‌ಜಿ ಮನೆ ಬಿಡಬೇಕಾಯಿತು. ಆದರೆ ಆರ್‌ಜಿಗೆ ಬಾಡಿಗೆ, ಮೆಸ್ ಬಾಕಿ ಕೊಡಲಾಗದೆ, ಪರಾರಿಯಾದೆ! ನನ್ನ ಹಾಸಿಗೆ ಅಲ್ಲೇ ಇತ್ತು. ಆರ್‌ಜಿ ಬಿಡಲಿಲ್ಲ. ಆ ಹಾಸಿಗೆಯನ್ನೇ ಅಡ ಇಟ್ಟುಕೊಂಡರು. ಅವರೇನೂ ಸುಖದ ಸುಪ್ಪತ್ತಿಗೆಯಲ್ಲಿ ಇದ್ದವರಲ್ಲ. ಪ್ರತಿದಿನದ ಸಂಪಾದನೆ ಅವರ ಸವಾಲೂ ಆಗಿತ್ತು. ಎಲ್ಲರೂ ತಿಂಗಳ ಕೊನೆಗೆ ಕೈಕೊಟ್ಟರೆ ಅವರು ತಾನೇ ಹೇಗೆ ಸಹಿಸಬಲ್ಲರು?
ಅವರು ವಿಜಯನಗರದಲ್ಲಿ (ನನ್ನ ನೆನಪಿನ ಮಟ್ಟಿಗೆ ವಿಜಯನಗರ ಅಂಚೆ ಕಚೇರಿ ಎದುರಿನ ಪಾರ್ಕಿನ ಬಳಿ) ಆಗತಾನೇ ಸರ್ಕುಲೇಟಿಂಗ್ ಲೈಬ್ರರಿ ಆರಂಭಿಸಿದ್ದೂ ಗೊತ್ತಾಗಿತ್ತು. ಒಮ್ಮೆ ಕರೆ ಮಾಡಿದಾಗ ಸರೀ ದಬಾಯಿಸಿದರು. ಒಂದೆರಡು ತಿಂಗಳುಗಳ ನಂತರ ನಾನು ಅವರ ಬಳಿ ಹೋಗಿ ಕಂತಿನಲ್ಲಿ ತಿಂಗಳಿಗೆ ಐವತ್ತು ರೂಪಾಯಿ ತಲುಪಿಸುವುದಾಗಿಯೂ, ನನ್ನ ಹಾಸಿಗೆಯನ್ನು ಕೊಡಬೇಕೆಂದೂ ವಿನಂತಿಸಿದೆ. ಅದಾಗಲೇ ಅವರ ಮನೆಯಿಂದ ಹೊರಹೋಗಿದ್ದ ಇನ್ನೊಬ್ಬ ಮಿತ್ರರಿಗೆ ಆ ಹಾಸಿಗೆಯನ್ನು ಕೊಟ್ಟಿದ್ದರು. ನಾನು ಶಿವನಹಳ್ಳಿಯಲ್ಲಿದ್ದ ಆ ಮನೆಗೆ ಹೋಗಿ ಹಾಸಿಗೆ ವಶಪಡಿಸಿಕೊಂಡೆ. ಪ್ರತಿ ತಿಂಗಳೂ ತಪ್ಪದೆ ಆರ್‌ಜಿಗೆ ಬಾಕಿ ಕಂತು ಕೊಟ್ಟಿ ತೀರಿಸಿದೆ. ಕೊನೆಯ ಕಂತು ಕೊಡಲು ಹೋದಾಗ ಆರ್‌ಜಿ ತುಂಬಾ ಪ್ರೀತಿಯಿಂದ ಚಾ ಕುಡಿಸಿ `ಸುದರ್ಶನ್, ನಾನು ಎಷ್ಟೋ ಸಲ ಹೀಗೆ ಯಾರ್‍ಯಾರಿಗೋ ಸಹಾಯ ಮಾಡಿ ಯಾಮಾರಿಸಿಕೊಂಡಿದ್ದೇನೆ. ನೀನು ಮಾತ್ರ ಬಾಕಿ ಚುಕ್ತಾ ಮಾಡಿದ್ದೀಯ. ನಿನ್ನ ಬಗ್ಗೆ ನನ್ನ ಗೌರವ ಹೆಚ್ಚಾಗಿದೆ’ ಎಂದುಬಿಟ್ಟರು.
ಆಗಿನಿಂದ ಈವರೆಗೂ ಆರ್‌ಜಿ ಎಂದರೆ ನನ್ನ ಗೌರವಕ್ಕೆ ಪಾತ್ರರಾದ ಕೆಲವೇ ಸಮಾಜವಾದಿ ಮಿತ್ರರಲ್ಲಿ ಒಬ್ಬರಾದರು. ಮೊನ್ನೆ ಮೈಸೂರಿನಲ್ಲಿ ಕಂಡಾಗಲೂ ನನಗೆ ಆರ್‌ಜಿ ಅದೇ ರೀತಿ ಇದ್ದಾರೆ, ನಾನು ಮಾತ್ರ ಬದಲಾಗಿದ್ದೀನಿ ಅನ್ನಿಸಿಬಿಟ್ಟಿತು.
ಆರ್‌ಜಿ ಬದುಕಿನಲ್ಲಿ ಅನ್ನಕ್ಕಿಂತ ಜಾಸ್ತಿ ನೋವನ್ನೇ ಉಂಡಿದ್ದಾರೆ. ನನ್ನ ಹಾಗೆಯೇ ಅನಿಶ್ಚಿತತೆಯಲ್ಲೇ ಬದುಕಿನ ಸ್ವಾರಸ್ಯವನ್ನು ಕಂಡವರು ಅವರು. ಆದರೆ ನನ್ನಂತಹ ಹಲವರಿಗೆ ನೆರವಾಗಿದ್ದಾರೆ. ನಿಜವಾಗಿ ಅವರು ಜನರ ನೋವಿಗೆ ಮಿಡಿವ ಪ್ರಾಣಮಿತ್ರ.
ಅವರ ತಲೆಗೂದಲೇ ಅವರ ಟ್ರೇಡ್ ಮಾರ್ಕ್ ಆಗಿದ್ದ ದಿನಗಳೂ ಇದ್ದವು. ಸಾಹಿತ್ಯದ ಸಭೆಗಳಲ್ಲಿ ಅವರು ಎದ್ದುನಿಂತು ತಲೆ ಕೊಡವಿದರು ಎಂದರೆ ಬಿಸಿ ಚರ್ಚೆ ಶುರುವಾಯಿತು ಎಂದೇ ತಿಳಿಯಬೇಕು! ಆ ಶೈಲಿ ಅವರ ವೈಯಕ್ತಿಕ ಆಯ್ಕೆಯಾಗಿತ್ತು. ಅದನ್ನೇ ಹಿರಿಯ ಪತ್ರಕರ್ತನೊಬ್ಬ ಅತ್ಯಂತ ಅಮಾನವೀಯವಾಗಿ ಟೀಕಿಸಿದ ದಿನ ನಾನು ಅವರ ಜೊತೆಗೆ ಕೆಲಸ ಮಾಡುತ್ತಿದ್ದೆ. ಅದೇ ಪತ್ರಕರ್ತ ನನ್ನ ಮಿತ್ರ ರಾಮನಾಥ ಮಯ್ಯರ ಮೊಬೈಲ್ ನಂಬರನ್ನೂ ತನ್ನ ಕಿಡಿಗೇಡಿ ಅಂಕಣದಲ್ಲಿ ಕೊಟ್ಟು ಬೇಕಂತಲೇ ಅವಾಂತರ ಸೃಷ್ಟಿಸಿದ್ದೂ ಆಗಲೇ ನಡೆದಿತ್ತು. ಇಬ್ಬರೂ ಆಕ್ರೋಶದಿಂದ ಕುದ್ದುಹೋಗಿದ್ದರು. ಅವರದಲ್ಲದ ತಪ್ಪಿಗೆ ಅವರನ್ನು ಹಿಂಸಿಸುವ ತೀಟೆ ಪತ್ರಿಕೋದ್ಯಮವನ್ನು ಕಂಡು ನಾವು ಹೇಸಿಹೋಗಿದ್ದೆವು.
ಆರ್‌ಜಿಯನ್ನು ಹಲವು ಪತ್ರಿಕೆಗಳು ಬಳಸಿಕೊಂಡಿವೆ. ಅವರೆಂದರೆ ಕನ್ನಡ ಸಾಹಿತ್ಯದ ರೆಡಿ ರೆಕೊನರ್ ಇದ್ದ ಹಾಗೆ ಎಲ್ಲರೂ ಗೊತ್ತು (ಏಕೆಂದರೆ ಹಲವರ ಬಳಿ ಅವರು ಜಗಳ ಆಡಿಯೇ ಇರುತ್ತಿದ್ದರು! 🙂 ) ವಿಶ್ವಕನ್ನಡ ಎಂಬ ಪ್ರಥಮ ಕನ್ನಡ ಆನ್‌ಲೈನ್ ಮ್ಯಾಗಜಿನ್‌ನಲ್ಲಿ ಸಾಹಿತಿಗಳ ಮಾಹಿತಿ ಸಂಚಯ ಮಾಡಿದ್ದು ಇದೇ ಆರ್‌ಜಿ. ಒಂದೆರಡು ಮುಖ್ಯವಾಹಿನಿ ಪತ್ರಿಕೆಗಳು ಅವರನ್ನು ತುಂಬಾ ಅವಮಾನಕರವಾಗಿ ನಡೆಸಿಕೊಂಡಿವೆ ಎಂಬುದನ್ನು ಅವರೇ ಬರೆದಿದ್ದಾರೆ. ಆರ್‌ಜಿಯನ್ನು ಹೇಗೆ ವಿಧಾಯಕವಾಗಿ ಬಳಸಿಕೊಳ್ಳಬೇಕು ಎಂಬ ಸಾಮಾನ್ಯ ಜ್ಞಾನವಿಲ್ಲದಿದ್ದರೆ ಹೀಗಾಗುತ್ತದೆ.
ನನ್ನ ಮತ್ತು ಆರ್‌ಜಿ ನಡುವಣ ವೃತ್ತಿ ಜುಗಲ್‌ಬಂದಿ ಎರಡು ವರ್ಷಗಳ ಹಿಂದೆ ನನ್ನ ಬದಲಿಗೆ ಅವರು ಮಾಲಿನ್ಯ ನಿಯಂತ್ರಣ ಮಂಡಳಿಗೆ ಮಾಧ್ಯಮ ಸಲಹೆಗಾರರಾಗುವರೆಗೂ ಮುಂದುವರಿಯಿತು. ಯಾವ ಸಂಕೋಚವೂ ಇಲ್ಲದೆ ಕರೆ ಮಾಡಿ `ಸುದರ್ಶನ್ ನೀನು ಯಾವ ಕೆಲಸಗಳನ್ನು ಹೇಗೆ ಮಾಡುತ್ತಿದ್ದೀ ವಿವರಿಸು’ ಎಂದು ಕೇಳಿ ತಿಳಿದುಕೊಂಡು ತನ್ನೆಲ್ಲ ಶ್ರಮವನ್ನು ಹಾಕಿದರು.
ಒಬ್ಬ ಸಮಾಜವಾದಿ ಆಗಿಯೂ ಬದುಕಿನ ವ್ಯವಹಾರದಲ್ಲಿ ಜಾಣತನವನ್ನು ತೋರಲೂ ಆರ್‌ಜಿ ಯತ್ನಿಸಿದ್ದಿದೆ. ಪ್ರಕಾಶನವನ್ನೂ ಏಳುಬೀಳುಗಳ ನಡುವೆಯೂ ನಡೆಸಿದ್ದಾರೆ. `ಅನ್ವೇಷಣೆ’ ವೈಚಾರಿಕ ಪತ್ರಿಕೆಯು ಭಯಂಕರ ಕ್ರಾಂತಿಯನ್ನೇ ಮಾಡದಿದ್ದರೂ ಎಡಪಂಥೀಯರ ನೈಜ ಆಶಯಗಳ ದಾಖಲೆಯನ್ನು ಪ್ರಾಮಾಣಿಕವಾಗಿ ನಡೆಸಿದೆ. ನನ್ನೆಲ್ಲ ವೈಚಾರಿಕ ಭಿನ್ನಾಭಿಪ್ರಾಯಗಳ ನಡುವೆಯೂ ನನಗೆ ಆರ್‌ಜಿ ಎಂದರೆ ಪ್ರೀತಿ, ಅಭಿಮಾನ. ಅವರ ಹಾಗೆ ಬದುಕನ್ನು ಉತ್ಕಟತೆಯಿಂದ, ಹೊಸ ಹೊಸ ನಿರೀಕ್ಷೆಗಳಿಂದ ನೋಡುವ ಅನುಭವಿಸುವ ಜೀವನಪ್ರೀತಿಯ ಸಮಾಜವಾದಿಗಳು ತೀರಾ ಕಡಿಮೆ ಸಂಖ್ಯೆಯಲ್ಲಿದ್ದಾರೆ (ಅದೇ ಈ ಬಗೆಯ ಚಳವಳಿಯ ವೈಫಲ್ಯದ ಅಂಶ ಕೂಡ).
ಇಷ್ಟೆಲ್ಲ ಬರೆದ ಮೇಲೆ ನನಗೆ ಆರ್‌ಜಿ ಬಗ್ಗೆ ತಕರಾರುಗಳೇ ಇಲ್ಲ ಎಂದುಕೊಳ್ಳಬೇಡಿ. ಆ ತಕರಾರುಗಳನ್ನು ಅವರೊಂದಿಗೇ ಚರ್ಚಿಸುತ್ತೇನೆ ಬಿಡಿ! ಎಷ್ಟೋ ಸಲ ಅವರನ್ನು ನಾನೂ ಪ್ರೀತಿಯಿಂದ ಬೈದಿದ್ದೇನೆ. ಅವರೂ ತಮ್ಮ ಸುಖ-ದುಃಖಗಳನ್ನು ಆಗಾಗ ಹಂಚಿಕೊಂಡಿದ್ದಾರೆ. ನಾವಿಬ್ಬರೂ ವಿಭಿನ್ನ ನೆಲೆಯ ಚಿಂತನೆಯಲ್ಲಿ ಬೆಳೆದವರು. ನಮ್ಮಿಬ್ಬರ ನಡುವೆ ಈವರೆಗೂ, ೩೧ ವರ್ಷಗಳ ನಂತರವೂ ಯಾವುದೇ ಕಂದರ ಬೆಳೆದಿಲ್ಲ; ಮುಂದೂ ಬೆಳೆಯುವುದಿಲ್ಲ ಎಂಬ ಆಶಯ ನನಗಿದೆ. ಏಕೆಂದರೆ ಬದುಕಿನ ಬಗ್ಗೆ ಅವರ ಕಾಳಜಿ ಹುಸಿಯಲ್ಲ ಎಂಬುದು ನನಗೆ ಅರಿವಿದೆ. ಕೆಲವೊಮ್ಮೆ ಕಾಂಪ್ರಮೈಸ್ ಅನಿವಾರ್ಯವೇನೋ ಎನ್ನುವ ಹಂತಕ್ಕೂ ಅವರು ಹೋಗಿದ್ದಿದೆ. ಆದರೂ ಸಾವರಿಸಿಕೊಂಡು ತನ್ನ ಒರಿಜಿನಲ್ ಚಹರೆಯನ್ನು ಉಳಿಸಿಕೊಳ್ಳಲು ಅವರು ಯತ್ನಿಸಿದ್ದನ್ನೂ ನಾನು ಕಂಡಿದ್ದೇನೆ (ನಾನೂ ಹಾಗೇ!) . ನನಗೆ ಬೇಡದವರ ಜೊತೆಗೆ ಇದ್ದಾರೆ ಎಂಬ ಕಾರಣವನ್ನು ಕೊಟ್ಟು ಆರ್‌ಜಿಯನ್ನು ಕಳೆದುಕೊಳ್ಳಲು ನಾನು ಸಿದ್ಧನಿಲ್ಲ! ಆರ್‌ಜಿಯಾಗಲೀ, ನಾನಾಗಲೀ ಈ ನಾಡಿನ ಪ್ರಜೆಗಳಾಗಿದ್ದೇವೆ. ಇಬ್ಬರೂ ನಂನಮ್ಮ ಅಭಿವ್ಯಕ್ತಿಯ ಹಕ್ಕಿನಡಿಯಲ್ಲೇ ಬದುಕುತ್ತಿದ್ದೇವೆ; ಅಷ್ಟೇ ಸಾಕು. ಸಂಘರ್ಷದ ಹಾದಿಗಿಂತ ಸಂವಾದದ ಹಾದಿಯೇ ಸಮಾಜದ ಒಳಿತಿಗೆ ಸೂಕ್ತ ಎಂಬ ಸಲಹೆಯನ್ನು ಮಾತ್ರವೇ ನಾನು ಇಲ್ಲಿ ಕೊಡಬಲ್ಲೆ.
ಭವಿಷ್ಯದ ಆತಂಕ ಮತ್ತು ನೆಲೆಯ ಅನ್ವೇಷಣೆಯಲ್ಲಿದ್ದ, ಯಾವ ಪರಿಚಯವೂ ಇಲ್ಲದ ನನಗೆ ಅನ್ನ, ನೆಲೆ ಕೊಟ್ಟ ಆರ್‌ಜಿ ನನ್ನ ಪ್ರಾತಃಸ್ಮರಣೀಯ ವ್ಯಕ್ತಿಗಳಲ್ಲಿ ಒಬ್ಬರು ಎನ್ನುವುದಕ್ಕೆ ನನಗೆ ಯಾವ ಸಂಕೋಚವೂ ಇಲ್ಲ.
ಆರ್‌ಜಿ, ನೀವು ತುಂಬಾ ಒಳ್ಳೆಯವರು; ಹೀಗೇ ಇರಿ!