ಇದೇ ಗುರುವಾರ ಪ್ರಜಾವಾಣಿಯಲ್ಲಿ ಶ್ರೀ ನಾಗೇಶ ಹೆಗಡೆಯವರು ಬರೆದ ವಿದ್ಯುತ್ ಕುರಿತ ಲೇಖನವನ್ನು ನೀವು ಓದಿರುತ್ತೀರಿ. ಈಗ ಇಂಧನ ಬಡತನದ ಕುರಿತ ಜಾಗತಿಕ ವರದಿ(ವಿಶ್ವ ಇಂಧನ ಮುನ್ನೋಟ, ವರ್ಲ್ಡ್ ಎನರ್ಜಿ ಔಟ್ಲುಕ್) ಯನ್ನು ಓದಿ!
ಅಂತಾರಾಷ್ಟ್ರೀಯ ಇಂಧನ ಸಂಸ್ಥೆ (ಇಂಟರ್ನ್ಯಾಶನಲ್ ಎನರ್ಜಿ ಅಸೋಸಿಯೇಶನ್ – ಐ ಇ ಎ)ಯು ವಿಶ್ವಸಂಸ್ಥೆಯ ಸಹಸ್ರಮಾನದ ಅಭಿವೃದ್ಧಿ ಗುರಿಗಳ ಸಮೀಕ್ಷೆ ಸಂದರ್ಭದಲ್ಲಿ ಈ ವರದಿಯ ಮುಖ್ಯಾಂಶಗಳನ್ನು ಬಿಡುಗಡೆ ಮಾಡಿದೆ. ವರದಿಯ ಹಲವು ಅಂಶಗಳು ಮಾಧ್ಯಮಗಳಲ್ಲಿ ಪ್ರಕಟವಾಗಿದೆ. ಈ ವರದಿಯ ಮೂಲಪ್ರತಿಯನ್ನು ಓದಿ ಮಹತ್ವದ ಅಂಶಗಳನ್ನು ‘ಮಿತ್ರಮಾಧ್ಯಮ’ದ ಓದುಗರಿಗೆ ಕೊಡುತ್ತಿದ್ದೇನೆ.
ಐ ಇ ಎ ಯು ಅಂತರ್ ಸರ್ಕಾರಿ ಸಂಸ್ಥೆ ಎಂದು ಹೇಳಿಕೊಂಡಿದೆಯಾದರೂ ಅದರ ಸದಸ್ಯ ದೇಶಗಳ ಸಂಖ್ಯೆ ಕೇವಲ ೨೮. ಭಾರತವು ಈ ಸಂಸ್ಥೆಯ ಸದಸ್ಯತ್ವವನ್ನು ಹೊಂದಿಲ್ಲ. ಆದರೂ ಐ ಇ ಎ ಯು ತನ್ನ ಸದಸ್ಯ ದೇಶಗಳಿಗಾಗಿ ಜಾಗತಿಕ ವರದಿಗಳನ್ನು ರೂಪಿಸುತ್ತಿದೆ. ಅದರಲ್ಲಿ ವಿಶ್ವ ಇಂಧನ ಮುನ್ನೋಟವೂ ಒಂದು.
ಈ ಮುನ್ನೋಟದ ಮುಖ್ಯಾಂಶಗಳು ಹೀಗಿವೆ:
ಆಫ್ರಿಕಾದ ಸಹಾರಾ ಮರುಭೂಮಿಯ ಕೆಳಗಿರುವ ದೇಶಗಳಲ್ಲಿ ವಿದ್ಯುದೀಕರಣದ ಪ್ರಮಾಣ ಶೇ. ೩೧ರಷ್ಟು ಮಾತ್ರ. ಇಲ್ಲಿನ ಶೇ. ೮೦ರಷ್ಟು ಜನರು ತಮ್ಮ ಇಂಧನದ ಅಗತ್ಯಕ್ಕಾಗಿ ಬಯೋಮಾಸ್ (ಸೌದೆ ಇತ್ಯಾದಿ ನೈಸರ್ಗಿಕ ಇಂಧನಮೂಲಗಳು)ನ್ನು ಬಳಸುತ್ತಿದ್ದಾರೆ. ಬಯೋಮಾಸ್ ಬಳಸುವವರ ಸಂಖ್ಯೆ ೨೦೩೦ರ ಹೊತ್ತಿಗೆ ೨೮೦ ಕೋಟಿ ದಾಟುತ್ತದೆ.
ಇಡೀ ಪ್ರಪಂಚದಲ್ಲಿ ಈಗ ೧೪೦ ಕೋಟಿ ಜನರಿಗೆ ವಿದ್ಯುತ್ ಸಂಪರ್ಕ ಇಲ್ಲ. ಅವರಲ್ಲಿ ಶೇ. ೮೫ರಷ್ಟು ಜನರು ಹಳ್ಳಿಗಳಲ್ಲಿ ಬದುಕುವವರು. ೨೦೩೦ರಲ್ಲಿ ಈ ಸಂಖ್ಯೆ ೧೨೦ ಕೋಟಿಗೆ ಇಳಿಯಬಹುದು ಅಷ್ಟೆ.
೨೦೩೦ರ ಹೊತ್ತಿಗೆ ಬಯೋಮಾಸ್ ಮತ್ತು ಅವೈಜ್ಞಾನಿಕ ಒಲೆಗಳ ಬಳಕೆಯಿಂದುಂಟಾಗುವ ವಾಯುಮಾಲಿನ್ಯವು ವರ್ಷಕ್ಕೆ ೧೫ ಲಕ್ಷ ಮಕ್ಕಳ ಮರಣಕ್ಕೆ ಕಾರಣವಾಗುತ್ತದೆ. ಈ ಸಂಖ್ಯೆಯು ಮಲೇರಿಯಾ, ಕ್ಷಯ, ಎಚ್ ಐ ವಿ ಏಡ್ಸ್ನಿಂದ ಸಾಯುವ ಮಕ್ಕಳ ಸಂಖ್ಯೆಗಿಂತ ಹೆಚ್ಚು.
ಎಲ್ಲರಿಗೂ ಇಂಧನ ನೀಡುವ ಸಹಸ್ರಮಾನದ ಗುರಿಯ ಪ್ರಕಾರ (ಮಿಲೆನಿಯಂ ಡೆವಲಪ್ಮೆಂಟ್ ಗೋಲ್) ಹೋಗುವುದಾದರೆ, ೩೯.೫ ಕೋಟಿ ಜನರಿಗೆ ವಿದ್ಯುತ್ತನ್ನೂ, ೧೦೦ ಕೋಟಿ ಜನರಿಗೆ ಸುಧಾರಿತ ಒಲೆಗಳನ್ನೂ ನೀಡಬೇಕಿದೆ. ಇದಕ್ಕೆ ೨೦೧೦-೧೫ರ ಅವಧಿಯಲ್ಲಿ ೪೧೦ ಕೋಟಿ ಡಾಲರ್ಗಳನ್ನು ಖರ್ಚು ಮಾಡಬೇಕಾಗುತ್ತದೆ. ಈ ಮೊತ್ತವು ಜಾಗತಿಕ ಆಂತರಿಕ ಉತ್ಪನ್ನದ ಶೇ. ೦.೦೬ರಷ್ಟು ಮಾತ್ರ ಎಂಬುದನ್ನು ಮರೆಯಬಾರದು.
ಭಾರತ: ವಿವಾದಾತ್ಮಕ ಅಂಕಿ ಅಂಶಗಳೆ?
ಭಾರತದಲ್ಲಿ ವಿದ್ಯುತ್ ಸಂಪರ್ಕ ಇಲ್ಲದೇ ಇರುವ ಮತ್ತು ಬಯೋಮಾಸ್ ಬಳಸುವ ಜನರ ಸಂಖ್ಯೆ ೪೦೪ ಮಿಲಿಯ ಅಂದರೆ ೪೦.೪ ಕೋಟಿ ಎಂದು ಈ ವರದಿ ಹೇಳುತ್ತದೆ. ೨೦೩೦ರಲ್ಲಿ ಇಂಥ ವಿದ್ಯುತ್ ಸಿಗದವರ ಸಂಖ್ಯೆ ಹಳ್ಳಿ ಪ್ರದೇಶದ ೨೮ ಕೋಟಿ ಜನ ಸೇರಿದಂತೆ ೩೦ ಕೋಟಿ ದಾಟುತ್ತದೆ ಎನ್ನುವುದು ಈ ವರದಿಯ ಅಂದಾಜು. ಸಾಂಪ್ರದಾಯಿಕ ಬಯೋಮಾಸ್ ಬಳಸುವ ಜನರ ಸಂಖ್ಯೆ ೮೫.೫ ಕೋಟಿಯಂತೆ!! ಬಯೋಮಾಸ್ ಎಂದರೆ ಏನು? ಈ ವರದಿಯ ಪ್ರಕಾರ ಬಯೋಮಾಸ್ ಎಂದರೆ …..
The traditional use of biomass refers to the basic technology used, such as a three-stone fire or inefficient cookstove, and not the resource itself. The number of people relying on the traditional use of biomass is based on survey and national data sources and refers to those households where biomass is the primary fuel for cooking. While the analysis in this report focuses on biomass, it is important to note that, in addition to the number of people relying on biomass for cooking, some 0.4 billion people, mostly in China, rely on coal for cooking. This is a highly polluting fuel when used in traditional stoves and has serious health implications.
ಭಾರತದಲ್ಲಿ ೮೫ ಕೋಟಿ ಜನ ಇಂಧನಕ್ಕಾಗಿ ಬಯೋಮಾಸ್ ಬಳಸುತ್ತಿದ್ದಾರೆ ಎಂಬುದು ಉತ್ಪ್ರೇಕ್ಷೆಯ ವರದಿಯೆ ಅನ್ನಿಸುವುದಿಲ್ಲವೆ? ತಜ್ಞರೇ ಇದಕ್ಕೆ ಉತ್ತರ ಹೇಳಬೇಕು.
ಜಗತ್ತಿನ ಎಲ್ಲೆಡೆ ವಿದ್ಯುದೀಕರಣ ಮುಂದುವರೆದ ಮೇಲೆಯೂ ಇರಬಹುದಾದ ವಿದ್ಯುತ್ ಸಂಪರ್ಕರಹಿತರ ಸಂಖ್ಯೆ ಹೀಗೆ ಬೆಳೆಯಲಿದೆ ಎಂದು ಈ ವರದಿ ಪಟ್ಟೀಕರಿಸಿದೆ:
ಒಟ್ಟಿನಲ್ಲಿ ವಿದ್ಯುತ್ ಸಂಪರ್ಕವನ್ನು ಎಲ್ಲರಿಗೂ ನೀಡುವ ಗುರಿಗೆ ಸಾಕಷ್ಟು ಅಡೆತಡೆಗಳಿವೆ ಎಂಬುದು ಈ ವರದಿಯ ಮುಖ್ಯಾಂಶ.
ಹಾಗಾದರೆ ವಿದ್ಯುತ್ ಉತ್ಪಾದನೆ ಹೆಚ್ಚಬೇಡವೆ?
ನಿಜ. ವಿದ್ಯುತ್ತಿನಿಂದ ಬದುಕಿನ ಹಲವು ಅಗತ್ಯಗಳು ಸುಲಭವಾಗಿ ಪೂರೈಕೆಯಾಗುತ್ತವೆ. ಇಂಧನ, ಬೆಳಕು, ಉಷ್ಣ – ಎಲ್ಲವೂ ಸಿಗುತ್ತದೆ. ಆದರೆ ವಿದ್ಯುತ್ತಿನ ಉತ್ಪಾದನೆಯ ಮೂಲ ನೈಸರ್ಗಿಕ ಉತ್ಪನ್ನಗಳೇ. ನೀವು ಕಲ್ಲಿದ್ದಲನ್ನು ಬಳಸಿದರೆ ಉಂಟಾಗುವ ಮಾಲಿನ್ಯ ಹೇಳಲಿಕ್ಕೆ ಆಗದಷ್ಟು. ಜಲವಿದ್ಯುತ್ತಿನ ಬಳಕೆಯ ಮಿತಿ ಈಗಾಗಲೇ ಮೀರಿದೆ. ಪರಮಾಣು ಶಕ್ತಿಯನ್ನು ವಿದ್ಯುತ್ತಿಗೆ ಬಳಸುವುದೂ ಅತ್ಯಂತ ಅಪಾಯಕಾರಿ. ಸೌರವಿದ್ಯುತ್ – ಗಾಳಿಯಿಂದ ವಿದ್ಯುತ್ – ಇವೇ ಮುಂದಿನ ದಾರಿಗಳು. ಈಗಿರುವ ವಿದ್ಯುತ್ ಸ್ಥಾವರಗಳ ಸಾಮರ್ಥ್ಯ ಹೆಚ್ಚಿಸಿ, ದುಂದು ಮತ್ತು ಅನಗತ್ಯ ಬಳಕೆಯನ್ನು ತಗ್ಗಿಸಿ, ಬದುಕನ್ನು ಮತ್ತಷ್ಟು ಸರಳಗೊಳಿಸಿ, ನಾಗರಿಕಯ ನಾಗಾಲೋಟಕ್ಕೆ ಕೊಂಚ ಮೂಗುದಾರ ಹಾಕಿ…… ಹೀಗೆ ಮಾಡಿದರೇನೇ ನಮ್ಮ ವಿದ್ಯುತ್ ಬೇಡಿಕೆಯನ್ನು ತಗ್ಗಿಸಬಹುದು.
ಅದಿಲ್ಲದೇ ಹೋದರೆ ಇಂಥ ವರದಿಗಳನ್ನು ಓದಿ ಬೆಚ್ಚಿ ಬೀಳುತ್ತ ಕೂರಬಹುದು.
ಈ ವರದಿಯನ್ನು ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ.
ವಿದ್ಯುತ್ ರಂಗದ ಬಗ್ಗೆ ಮಿತ್ರಮಾಧ್ಯಮವು ಪ್ರಕಟಿಸಿರುವ ವಿಶೇಷ ಲೇಖನಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ