ರಾಗ ಮಧುವಂತಿ
ಮಧುವಂತಿ ಒಂದು ಆಧುನಿಕ ರಾಗ. ಈ ರಾಗದಿಂದ ಪ್ರಭಾವಿತರಾಗದವರು ವಿರಳ! ಮುಲ್ತಾನಿ ರಾಗದಲ್ಲಿ ರುಷಭ ಮತ್ತು ಧೈವತವನ್ನು ಶುದ್ಧ ಮಾಡಿಕೊಂಡರೆ ಸಾಕು, ಮಧುವಂತಿ ರಾಗವು ಹುಟ್ಟುತ್ತದೆ. ಉತ್ತರ ಭಾರತದ ಹತ್ತು ಥಾಟ್‌ಗಳ ಮೇಲೆ ಒಂದು ವಿಹಂಗಮ ದೃಷ್ಟಿಯನ್ನು ಹರಿಸಿದರೆ ಈ ರಾಗವು ಈ ಯಾವುದೇ ಥಾಟ್‌ನಲ್ಲೂ ಸೇರಿಕೊಳ್ಳುವುದಿಲ್ಲ ಎಂಬ ವಾಸ್ತವಿಕತೆ ಆರಿವಾಗುತ್ತದೆ. ಆದರೆ ಈ ರಾಗದ ಚಲನೆಯು ಬಹುತೇಕ ಮುಲ್ತಾನಿ ರಾಗದ ಹಾಗೆಯೇ ಇರುವುದರಿಂದ ಇದನ್ನು ಗುಣಿಜನ ತೋಡಿ ತಾಟ್‌ಗೆ ಸೇರಿದ ರಾಗ ಎಂದು ಬಗೆಯುತ್ತಾರೆ. ಆದರೆ ಈ ಮಾತನ್ನು ಲೇಖಕ ಒಪ್ಪಲಾರ. ಈ ರಾಗವನ್ನು ಕೇವಲ ಮುಲ್ತಾನಿ ರಾಗದ ಒಂದು ಅಂಗ ಎಂದಷ್ಟೆ ಪರಿಗಣಿಸಬೇಕು ಎಂಬುದು ಈ ಲೇಖಕನ ನಿಲುವು. ಈ ರಾಗವನ್ನು ಯಾವುದಾದರೂ ಥಾಟ್‌ಗೆ ಸೇರಿಸಲೇಬೇಕು ಎಂದಿದ್ದರೆ ಇದನ್ನು ವ್ಯಂಕಟಮುಖಿಯವರು ಸೂಚಿಸಿದ ೭೩ ಥಾಟ್‌ಗಳಲ್ಲಿ ಧರ್ಮವತಿ ತಾಟ್‌ಗೆ ಸೇರಿಸಬಹುದು. ಈ ಥಾಟ್‌ನಲ್ಲಿ ಗಂಧಾರವು ಕೋಮಲ, ಮಧ್ಯಮವು ತೀವ್ರ ಮತ್ತು ಉಳಿದ ಸ್ವರಗಳು ಶುದ್ಧ. ಮಧುವಂತಿಯ ಆರೋಹದಲ್ಲಿ ರುಷಭ ಹಾಗೂ ಧೈವತಗಳು ವರ್ಜ್ಯ; ಅವರೋಹದಲ್ಲಿ ಎಲ್ಲಾ ಸ್ವರಗಳೂ ಬರುತ್ತವೆ. ಆದ್ದರಿಂದ ಇದರರ ಜಾತಿ ಔಡವ-ಸಂಪೂರ್ಣ.
ಈ ರಾಗದಲ್ಲಿ ಪಂಚಮವು ವಾದಿ ಸ್ವರ; ರಿಷಭವು ಸಂವಾದಿ ಸ್ವರ. ಎಲ್ಲಾ ಪಂಡಿತರೂ ಪಂಚಮಕ್ಕೆ ವಾದಿಸ್ಥಾನವನ್ನು ನೀಡಿದರೂ, ಸಂವಾದಿ ಸ್ವರದ ಬಗ್ಗೆ ಒಂದೇ ಆದ ಅಭಿಮತವನ್ನು ಹೊಂದಿಲ್ಲ. ಕೆಲವು ವಿದ್ವಾಂಸರು ಷಡ್ಜವು ಸಂವಾದಿ ಎನ್ನುತ್ತಾರೆ. ಆದರೆ ಲೇಖಕನ ಅಭಿಪ್ರಾಯದಲ್ಲಿ ಈ ರಾಗಕ್ಕೆ ರುಷಭವೇ ಸಂವಾದಿ ಎನ್ನುವುದು ಸೂಕ್ತ. ಯಾಕೆಂದರೆ ಪೂರ್ವಾಂಗದಲ್ಲಿ ರುಷಭವೇ ಹೆಚಚು ಮಿಂಚುತ್ತದೆ. ರುಷಭದ ಬಳಕೆಯಿಂದ ಈ ರಾಗವು ಅರಳಿಕೊಳ್ಳುತ್ತದೆ. ಷಡ್ಜವಂತೂ ಎಲ್ಲಾ ರಾಗಗಳಲ್ಲೂ ಇರಲೇಬೇಕಾದ ಸ್ವರ ತಾನೆ? ಹೀಗಾಗಿ ಷಡ್ಜಕ್ಕೆ ವಾದಿ ಅಥವಾ ಸಂವಾದಿ ಸ್ಥಾನ ನೀಡುವುದೇ ಆದರೆ ಉಳಿದ ಸ್ವರಗಳಿಗೆ ಈ ಸ್ಥಾನಗಳನ್ನು ನೀಡುವ ಪ್ರಶ್ನೆಯೇ ಬರುವುದಿಲ್ಲ!
ಈ ರಾಗವನ
;&
#3277;ನು ಬೆಳಗಿನ ಹನ್ನೆರಡು ಗಂಟೆಯಿಂದ ಮಧ್ಯಾಹ್ನ ನಾಲ್ಕು ಗಂಟೆಯವರೆಗೆ ಹಾಡಬಹುದು. ಈ ರಾಗವನ್ನು ಕೆಲವು ವಿದ್ವಾಂಸರು ರಾತ್ರಿಯೂ ಬಳಸುತ್ತಾರೆ. ಮಧ್ಯ ಸಪ್ತಕದಲ್ಲಿ ಈ ರಾಗದ ವಿಸ್ತಾರ ಹೆಚ್ಚು. ಈ ರಾಗದಲ್ಲಿ ಕೆಲವು ವಿದ್ವಾಂಸರು ಕೇವಲ ಕೋಮಲ ನಿಷಾದವನ್ನು ಬಳಸಿದರೆ, ಕೆಲವು ವಿದ್ವಾಂಸರು ಎರಡೂ ನಿಷಾದಗಳನ್ನು ಬಳಸುತ್ತಾರೆ. ಆದರೆ ಈಗ ಪ್ರಚಾರದಲ್ಲಿ ಇರುವ ಮಧುವಂತಿ ರಾಗದಲ್ಲಿ ಶುದ್ಧ ನಿಷಾದವನ್ನೇ ಹೆಚ್ಚು ಬಳಸುತ್ತಾರೆ. ಈ ರಾಗದಲ್ಲಿ ಧೈವತ ಹಾಗೂ ಹಾಗೂ ರುಷಭದ ಪ್ರಯೋಗವು ನಿಜಕ್ಕೂ ಕರ್ಣಾನಂದಕರ. ಈ ರಾಗದಲ್ಲಿ ಷಡ್ಜ, ಗಂಧಾರ, ಪಂಚಮ ಹಾಗೂ ನಿಷಾದಗಳು ನ್ಯಾಸ ಸ್ವರಗಳು. ಈ ರಾಗದಲ್ಲಿ ರುಷಭದಲ್ಲಿ ಷಡ್ಜದ ಕಣ ಹಾಗೂ ಗಂಧಾರದಲ್ಲಿ ತೀವ್ರ ಮಧ್ಯಮದ ಕಣಗಳನ್ನು ಜೋಡಿಸುವ ಬಗ್ಗೆ ಅತ್ಯಂತ ಹೆಚ್ಚಿನ ಗಮನವನ್ನು ನೀಡಬೇಕು. ಯಾಕೆಂದರೆ ಅದೇ ಈ ರಾಗದ ಅರಳುವಿಕೆಗೆ ಕಾರಣ.
ಈ ರಾಗದಲ್ಲಿ ಸ ಮ ಗ ಪ, ಗ ಮ ಪ, ಸ ಮ ಗ , ಮ ಗ ಪ – ಈ ಬಗೆಯ ಸ್ವರಪ್ರಯೋಗಗಳು ಮುಲ್ತಾನಿ ರಾಗದ ಭಾವವನ್ನು ಬಿಂಬಿಸುತ್ತವೆ. ಆದರೆ ಇಲ್ಲಿ ಗ ಸ ರೆ, ಮತ್ತು ಮ ಧ ಪ ಈ ರೀತಿಯಾಗಿ ಶುದ್ಧ ರುಷಭ ಹಾಗೂ ಶುದ್ದ ಧೈವತವನ್ನು ಬಳಸಿ ಮುಲ್ತಾನಿ ರಾಗದ ಛಾಯೆಯನ್ನು ಹೋಗಲಾಡಿಸಬಹುದು. ಇದಲ್ಲದೆ ಉತ್ತರಾಂಗದಲ್ಲಿ ಪ ನಿ ಸ, ಗ ಸ ರೆ ಸ, ನಿ ಸ ಧ ಪ, – ಈ ಬಗೆಯ ಸ್ವರ ಸಮೂಹಗಳನ್ನು ಬಳಸಿದಾಗ ಪಟದೀಪ ರಾಗದ ಛಾಯೆ ಬರುತ್ತದೆ. ಈ ಛಾಯೆಯನ್ನು ಹೋಗಲಾಡಿಸಲು ನಿ ಸ ಧ ಪ ಆದಮೇಲೆ ಧ ಮ ಪ ಸ್ವರಸಮೂಹವನ್ನು ಜೋಡಿಸಬೇಕು. ಇಲ್ಲಿ ಇನ್ನೂ ಒಂದು ಮಾತನ್ನು ಹೇಳಲೇಬೇಕು: ಸ ಧವನ್ನು ಬಳಸುವಾಗ ಅದಾದ ಮೇಲೆ ಪಂಚಮವನ್ನು ಬಳಸಿ ಮ ಸ್ವರಕ್ಕೆ ಬಂದು ಮತ್ತೆ ಪಂಚಮಕ್ಕೆ ಹೋಗಬೇಕು. ಉದಾಹರಣೆಗೆ: ಸ ಧ ಪ ಮ ಪ ಹೀಗೆ.