ಕನ್ನಡದ ಅತ್ಯುತ್ತಮ ಕಾದಂಬರಿಯನ್ನು ಆಧರಿಸಿದ ಸಿನೆಮಾ ತಯಾರಾಗುತ್ತದೆ ಎಂದುಕೊಳ್ಳಿ. ಅದನ್ನು ನೋಡುವವರಾರು?
ಕನ್ನಡದ ಒಂದು ಒಳ್ಳೆಯ ಪುಸ್ತಕವೊಂದು ಕಾಂಪಾಕ್ಟ್ ಡಿಸ್ಕ್‌ನಲ್ಲೋ, ಕ್ಯಾಸೆಟ್ಟಿನಲ್ಲೋ ಬಂತು ; ಅಥವಾ ಯಾರೋ ಕನ್ನಡದ ಆಡಿಯೋ ಕವನಸಂಕಲನವನ್ನು ಬಿಡುಗಡೆ ಮಾಡಿದರು ಎಂದುಕೊಳ್ಳಿ. ಎಷ್ಟು ಜನ ಅದನ್ನು ಓದುತ್ತಾರೆ ಮತ್ತು ವಿಮರ್ಶಿಸುತ್ತಾರೆ?
ಕನ್ನಡದಲ್ಲಿ ಬಿಡುಗಡೆಯಾಗುವ ಯುವಪೀಳಿಗೆಯ ಲೇಖಕರ ಕಾದಂಬರಿಗಳ ಬಗ್ಗೆ ಕನ್ನಡ ಪತ್ರಿಕೆಗಳಲ್ಲಿ ವಿಮರ್ಶೆ ಪ್ರಕಟವಾಗಲು ಎಷ್ಟು ವಾರ ಬೇಕು?
ಸಂಬಂಧವಿಲ್ಲದ ಪ್ರಶ್ನೆಗಳು ಎನ್ನಿಸಬಹುದು. ಸಿನೆಮಾ ಕೂಡಾ ತಂತ್ರeನವೇ. ಸಿನೆಮಾ ನೋಡುವವರ ಸಂಖ್ಯೆ ಜಾಸ್ತಿ. ಕಾಗದದಲ್ಲಿ ಅಕ್ಷರಗಳನ್ನು ಮೂಡಿಸಲು ಬಾರದವರೂ ಸಿನೆಮಾ ನೋಡುತ್ತಾರೆ. ಕನ್ನಡದ ಸಾಹಿತ್ಯವನ್ನು ಸಿನೆಮಾ ಮಾಡಿದರೆ ಅದು ಅವರಿಗೆ ತಲುಪುತ್ತದೆ. ವಿಚಿತ್ರ ಎಂದರೆ ಈ ಬಗೆಯ ಸಾಹಿತ್ಯ ಆಧಾರಿತ ಸಿನೆಮಾಗಳು ಪ್ರಶಸ್ತಿಗಳನ್ನು ಪಡೆಯುತ್ತವೆಯೇ ಹೊರತು ಜನಪ್ರಿಯವಾಗುವುದಿಲ್ಲ. ಯಾವ ಥಿಯೇಟರಿನಲ್ಲಿ ಈ ಸಿನೆಮಾ ಬಂದಿದೆ ಎಂದು ಹುಡುಕುವ ಹೊತ್ತಿಗೆ ಸುಸ್ತಾಗುತ್ತದೆ !
ಇನ್ನು ಕಾಂಪಾಕ್ಟ್ ಡಿಸ್ಕ್‌ಗಳಲ್ಲಿ ಪ್ರಕಟವಾಗುವ ಪುಸ್ತಕಗಳು (ಬೆರಳೆಣಿಕೆಯಷ್ಟು ಮಾತ್ರವೇ ಬಂದಿವೆ) ಕಂಪ್ಯೂಟರ್ ಉಳ್ಳವರನ್ನು ತಲುಪುತ್ತವೆ. ಅವರಲ್ಲಿ ಕನ್ನಡ ಸಾಹಿತ್ಯವನ್ನು ಪ್ರೀತಿಸುವವರೆಷ್ಟು ಎಂದು ಲೆಕ್ಕ ಹಾಕಬೇಕಾಗುತ್ತದೆ.
ಈ ಮೈಲ್ ವ್ಯವಸ್ಥೆಯು ಬಲವಾಗಿ ಬೇರೂರಿರುವಾಗ ನಮ್ಮಲ್ಲಿ ವಿಮರ್ಶೆಗಳು ತಡವಾಗುತ್ತಿರುವುದಕ್ಕೆ ವಿಮರ್ಶಕರು ಈ ಮೈಲ್ ಬಳಸದಿರುವುದೇ ಮುಖ್ಯ ಕಾರಣ ಎಂಬುದು ನನ್ನ ಗುಮಾನಿ. ‘ಒಂದು ಬದಿ ಕಡಲು’ ಪುಸ್ತಕವನ್ನು ನಾನು ವಿಮರ್ಶೆ ಮಾಡಿದ ಮತ್ತು ನನ್ನ ಜಾಲತಾಣದಲ್ಲಿ ಪ್ರಕಟಿಸಿದ ಎಷ್ಟೋ ವಾರಗಳ ತರುವಾಯ ಈಗ ಆ ಪುಸ್ತಕದ ವಿಮರ್ಶೆಗಳು ಮುದ್ರಿತ ದಿನಪತ್ರಿಕೆಗಳಲ್ಲಿ ಬರತೊಡಗಿವೆ.
ಅಂದರೆ ಕನ್ನಡ ಸಾಹಿತ್ಯವನ್ನು ತಂತ್ರeನದ, ಆಧುನಿಕತೆಯ ಹಿನ್ನೆಲೆಯಲ್ಲಿ ನೋಡಿದರೆ ನಮಗೆ ಕಾಣಿಸುವುದು ಒಂದಷ್ಟು ನವೀನ ಪ್ರಯೋಗಗಳ ತುಣುಕುಗಳು. ಅವುಗಳನ್ನು ಅಚ್ಚರಿಯಿಂದ ಮತ್ತು ಉತ್ಸಾಹದಿಂದ ಸ್ವಾಗತಿಸಬಹುದಷ್ಟೇ ವಿನಃ ಕನ್ನಡದಲ್ಲಿ ಆಮೂಲಾಗ್ರ ಬದಲಾವಣೆ ಕಾಣುತ್ತಿದೆ ಎಂದು ಭಾವಿಸಲಾಗದು. ಮುಖ್ಯವಾಗಿ ಈ ರೀತಿ ತಂತ್ರeನದ ಬಳಕೆಯಾಗುತ್ತಿರುವುದು ಕಂಪ್ಯೂಟರ್ ಬಲ್ಲ ಹೊಸಪೀಳಿಗೆಯ ಲೇಖಕರಿಂದ ಮತ್ತು ಪತ್ರಕರ್ತರಿಂದ; ಮತ್ತು ಕಂಪ್ಯೂಟರ್ ಬಲ್ಲ ಕನ್ನಡಿಗರಿಂದ. ಬರೆಯವುದನ್ನು ಮೊದಲು ಕಲಿತು ಲೇಖಕರಾಗಿ ಈಗ ಕಂಪ್ಯೂಟರ್ ಕಲಿಯುತ್ತಿರುವವ ಸಂಖ್ಯೆ ಕಡಿಮೆ. ಹೆಚ್ಚಿನವರು ಕನ್ನಡದಲ್ಲಿ ಬೆಳರಚ್ಚು ಮಾಡುತ್ತಾರೆ; ಅವರಲ್ಲಿ ಕೆಲವರು ತಾವೇ ಸ್ವತಃ ಈ ಮೈಲ್ ಮಾಡುತ್ತಾರೆ. ಇನ್ನೂ ಕೆಲವರು ತಾವೇ ಪುಸ್ತಕವಿನ್ಯಾಸ ಮಾಡುತ್ತಾರೆ. ಮತ್ತೂ ಕೆಲವರು ತಾವೇ ಚಿತ್ರವನ್ನೂ ಹುಡುಕಿ ಹಾಕುತ್ತಾರೆ. ಬೆರಳೆಣಿಕೆಯವರು ಇಂಟರ್‌ನೆಟ್‌ನ ಹೊಸ ಅವತಾರವಾದ ಬ್ಲಾಗನ್ನು ಬಳಸುತ್ತಾರೆ. ಅವರಲ್ಲೇ ಇನ್ನೂ ವಿರಳ ಮಂದಿ ತಮ್ಮ ಜಾಲತಾಣವನ್ನು ತಾವೇ ರೂಪಿಸಿಕೊಳ್ಳುತ್ತಾರೆ.
ಹೀಗೆ ತಂತ್ರeನದ ಆಳ ಹೆಚ್ಚಾದಷ್ಟೂ ಇವರಲ್ಲಿ ಕನ್ನಡ ಸಾಹಿತ್ಯದ ಅರಿವಿದ್ದವರ ಸಂಖ್ಯೆ ಕಡಿಮೆಯಾಗುತ್ತದೆ. ಮಾಹಿತಿ ತಂತ್ರeನದ ಬಗ್ಗೆ ಈಗ ಹೆಚ್ಚು ಮಾತನಾಡುವ ಚಂದ್ರಶೇಖರ ಕಂಬಾರರಂಥವರು ಮಾಹಿತಿ ತಂತ್ರeನದ ಥಿಯರಿಸ್ಟ್ ಎನ್ನಬಹುದಾದರೆ, ಯು. ಆರ್. ಅನಂತಮೂರ್ತಿಯವರನ್ನು ಜಾಗೃತ ಈ ಮೈಲ್ ಬಳಕೆದಾರ ಎನ್ನಬಹುದು. ಓ. ಎಲ್. ನಾಗಭೂಷಣಸ್ವಾಮಿಯವರು ಒಳ್ಳೆಯ ಬ್ಲಾಗಿಗಳು. ಇಂಟರ್‌ನೆಟ್ ಜಗತ್ತಿನಲ್ಲಿ ಅವರ ಅಸ್ತಿತ್ವ ಗಮನಾರ್ಹವಾಗಿದೆ. ಎಂ. ಎಸ್. ಶ್ರೀರಾಂರವರ ಬ್ಲಾಗಿನಲ್ಲಿ ಆಧುನಿಕತೆಯ ದಟ್ಟ ವಾಸನೆಯನ್ನು ಕಾಣಬಹುದು. ಅಬ್ದುಲ್ ರಶೀದ್ ಬ್ಲಾಗಿನಲ್ಲಿ ನಿಜಕ್ಕೂ ಭಾವುಕತೆಯ ಕಣಗಳಿವೆ. ಯು.ಬಿ. ಪವನಜರ ಜಾಲತಾಣದಲ್ಲಿ ಕನ್ನಡದ ತಂತ್ರeನ ಬಳಕೆಯ ಕುರುಹುಗಳನ್ನೂ ಕಾಣಬಹುದು. ಕನ್ನಡದ ಯುವ ಪೀಳಿಗೆಯ ಎಲ್ಲ ಪತ್ರಕರ್ತರೂ ಬ್ಲಾಗ್‌ನ ಹುಚ್ಚಿಗೆ ಮರುಳಾಗುತ್ತಿದ್ದಾರೆ.
ಏನಾದರೂ ಹೊಳೆಯಿತೆ? ನಮ್ಮಲ್ಲಿ ದಿನವೂ ಕಂಪ್ಯೂಟರನ್ನು ಬಳಸುವವರು ಮಾತ್ರವೇ ಈ ಬಗೆಯ ತಂತ್ರeನದ ಬಳಕೆಗೆ ಮುಂದಾಗಿದ್ದಾರೆ.
ನಮ್ಮ ರಂಗನಟರು, ಸಾಮಾಜಿಕ ಕಾರ್ಯಕರ್ತರು, ವೇಶ್ಯೆಯರು, ಕಳ್ಳರು, ದುಃಖಿಗಳು, ವಿರಹಿಗಳು, ಮಾದಕವ್ಯಸನಿಗಳು, – ಇವರಲ್ಲಿ ಯಾರಾದರೂ ಬ್ಲಾಗ್‌ಮಾಡಿದ್ದನ್ನು ನಾನಂತೂ ಗಮನಿಸಿಲ್ಲ. ನಮ್ಮ ಪಂಚಾಯತಿ ಸದಸ್ಯರು, ರಾಜಕಾರಣಿಗಳು, ಮಾಹಿತಿ ತಂತ್ರeನದ ಕಚೇರಿಗಳಲ್ಲಿ ಇರುವ ಹಿರಿಯ ತಂತ್ರಜ್ಞರು, – ಯಾರೂ ಬ್ಲಾಗ್‌ಮಾಡುತ್ತಿಲ್ಲ. ತಮ್ಮ ಭಾವನೆಗಳನ್ನು ಹಂಚಿಕೊಳ್ಳುತ್ತಿಲ್ಲ. ಎಲ್ಲರಿಗೂ ಅವರ ಕೆಲಸವೇ ಮುಖ್ಯ, ಬ್ಲಾಗ್ ಮಾಡುವುದು ಸಮಾಜದ ಅಭಿವ್ಯಕ್ತಿ ಎಂದು ಅವರಿಗೆ ಅನ್ನಿಸಿಯೇ ಇಲ್ಲ. ಪತ್ರಿಕಾ ಹೇಳಿಕೆಗಳೇ ಈಗಲೂ ಹಲವರ ಬಂಡವಾಳ; ಮುದ್ರಣದಲ್ಲಿ ಎಷ್ಟಂತ ಈ ಹೇಳಿಕೆಗಳನ್ನು ಮುದ್ರಿಸಬಹುದು ಎಂಬ ಮಿತಿಯೇ ಇವರಿಗೆ ಗೊತ್ತಿಲ್ಲ. ಹಾಗಂತ ಜಾಲತಾಣದಲ್ಲೋ, ಕಂಪ್ಯೂಟರಿನಲ್ಲೋ ಬರೆದದ್ದು ಸಾಮಾನ್ಯರಿಗೆ ತಲುಪುವುದೂ ಇಲ್ಲ.
ಅಂದರೆ, ಮುದ್ರಣಮಾಧ್ಯಮದಷ್ಟು ಪ್ರಭಾವಿಯಾಗಿ ಇಂಟರ್‌ನೆಟ್‌ಮಾಧ್ಯಮವು ಬೆಳೆದಿಲ್ಲ. ಕೆಲವೇ ಆಪ್ತರ ನಡುವೆ, ಹೆಚ್ಚೆಂದರೆ ವಿದೇಶದಲ್ಲಿ ಇರುವ ಕನ್ನಡಪ್ರಿಯರಿಗಾಗಿ ಬರೆಯುವ ಕನ್ನಡ ಸಾಹಿತ್ಯವು ಸೀಮಿತ ಓದುಗವರ್ಗವನ್ನಷ್ಟೇ ಬೆಳೆಸಿದೆ.
ಇದು ಇಂಟರ್‌ನೆಟ್‌ನ ಅರೆಬರೆ ಬೆಳವಣಿಗೆಯ ಕಥೆಯಾದರೆ, ಸಿನೆಮಾದ್ದು ಇನ್ನೂ ವಿಚಿತ್ರ. ಸಿನೆಮಾದಂಥ ಪ್ರಭಾವಿ ಮಾಧ್ಯಮವು ಜನರನ್ನು ತಟ್ಟುವುದೇ ಮಚ್ಚು ಲಾಂಗುಗಳಿಂದ ಎನ್ನುವ ಹಾಗೆ ಸಿನೆಮಾಗಳು ಬರುತ್ತಿವೆ. ಕಾವ್ಯಾತ್ಮಕವಾದ, ಸತ್ಯದ ತಲೆಯ ಮೇಲೆ ಮೊಟೆಯುವಂಥ ವೈeನಿಕ ಕಥೆಯನ್ನು ಹಾಲಿವುಡ್ ಮಾದರಿಯಲ್ಲಿ ಕಾಣುವುದಕ್ಕೆ ನಾವು ಇನ್ನೆಷ್ಟು ದಶಕಗಳ ಕಾಲ ಕಾಯಬೇಕೋ ಗೊತ್ತಿಲ್ಲ. ಎಲ್ಲ ಸ್ಪೆಶಿಯಲ್ ಎಫೆಕ್ಟ್‌ಗಳೂ ದೇವಾನುದೇವತೆಗಳ ಪಾಲಾಗಿವೆ.
‘ನೆಕ್ಸ್ಟ್’ ಸಿನೆಮಾದಲ್ಲಿ ಭವಿಷ್ಯವನ್ನು ಕಾಣುವ ಜಾನ್‌ಸನ್ ಪಾತ್ರವನ್ನು ನಿಕೋಲಾಸ್ ಕೇಜ್ ಹ್ಯಾಗೆ ನಿಭಾಯಿಸಿದ್ದಾನೆ ಎಂದರೆ ನೀವು ಅವನು ನಿಜಕ್ಕೂ ಭವಿಷ್ಯಕಾರ ಎಂದು ನಂಬಲೇಬೇಕು. ಸಿನೆಮಾದಲ್ಲಿ ನಡೆಯುವ ಘಟನೆಗಳೆಲ್ಲವನ್ನೂ ನಿಜ ಎಂದೇ ಭಾವಿಸಬೇಕು. ಕೊನೆಗೆ ಕಥೆಯೂ ಕಾವ್ಯಾತ್ಮಕವಾಗಿ ಕೊನೆಗೊಳ್ಳುತ್ತದೆ. ಎಲ್ಲೋ ಸಾಹಿತ್ಯವೂ ಈ ಸಿನೆಮಾದ ಮೇಲೆ ಪರಿಣಾಮ ಮಾಡಿದೆ ಎಂದೆನಿಸುತ್ತದೆ. ಸಾಹಿತ್ಯ, ಸಂಗೀತ, ನಟನೆ, ತಂತ್ರeನ, ಕಲ್ಪನೆ ಎಲ್ಲವೂ ಮಿಳಿತಗೊಂಡ ಹದವಾದ ಕನ್ನಡ ಸಿನೆಮಾವನ್ನು ಕಾಣಬೇಕೆಂದು ನಾನು ಬಯಸುವುದೇ ಆದರೆ ಪುನರ್ಜನ್ಮದಲ್ಲಿ ನಂಬಿಕೆ ಇಡಲೇಬೇಕು!
ಎಲ್ಲ ಮನರಂಜನೆಯ ಹಿಂದೆ, ಎಲ್ಲ ತಾಂತ್ರಿಕ ಬೆಳವಣಿಗೆಗಳ ಹಿಂದೆ ಸುಮಧುರ ಸಂಸ್ಕೃತಿಯೊಂದರ ಬೇರು ಇದ್ದೇ ಇರುತ್ತದೆ ಎಂಬುದು ಕನ್ನಡಿಗರಿಗೆ ಮಾತ್ರ ಗೊತ್ತಾಗುತ್ತಿಲ್ಲ! ಉದಾಹರಣೆಗೆ ಮಧ್ಯಪ್ರದೇಶದಲ್ಲಿ ಗಣಕಗಳ ಬಳಕೆಯ ಬಗ್ಗೆ ಪುಸ್ತಕಗಳು ಬಂದು ವರ್ಷಗಳಾದವು. ನಾವು ಈಗಷ್ಟೇ ಕಣ್ಣು ಬಿಡುತ್ತಿದ್ದೇವೆ!
ಕನ್ನಡ ಸಾಹಿತ್ಯದ ಮುದ್ರಣದಲ್ಲಿ ತಂತ್ರeನದ ಪ್ರಭಾವ ಹೇಗಾಗಿದೆ ಎಂದು ನೋಡಬೇಕಾದರೆ ನೀವು ಕಂಬಾರರು ಬರೆದ, ಅಕ್ಷರ ಪ್ರಕಾಶನದ ‘ಶಿಖರ ಸೂರ್ಯ’ ಕಾದಂಬರಿಯನ್ನು ಓದಬೇಕು. ಗಣಕದ ಅವಾಂತರದಿಂದಾಗಿ ಪುಟಗಟ್ಟಳೆ ಮುದ್ರಣದೋಷವಿದ್ದರೂ ಕಣ್ಣೆತ್ತಿ ನೋಡದ ಪ್ರಕಾಶಕರೇ ದಶಕಗಳಿಂದ ಅತ್ಯುತ್ತಮ ಸಾಹಿತ್ಯವನ್ನು ನೀಡಿದವರೆ ಎಂದು ಬೆಚ್ಚಿಬೀಳುತ್ತೀರಿ. ಈ ಉದಾಹರಣೆಯ ಹೊರತಾಗಿಯೂ ಕನ್ನಡ ಪುಸ್ತಕಗಳು ಈಗ ಸಾಕಷ್ಟು ಚೆನ್ನಾಗಿ ಮುದ್ರಿತವಾಗುತ್ತಿವೆ ಎಂಬುದೊಂದೇ ಈಗ ನಾವು ಕಂಡುಕೊಳ್ಳಬಹುದಾದ ಸಮಾಧಾನ.
ಕನ್ನಡ ತಂತ್ರಾಂಶಗಳ ಬಗ್ಗೆ ನಾನು ಮಾತನಾಡಿದರೆ ಅದೇ ಹಳವಂಡವನ್ನೇ ಹೇಳಬೇಕು: ಕನ್ನಡ ತಂತ್ರಾಂಶದ ಬೆಳವಣಿಗೆ, ನಾವು ಕೆಲವರು ಮಿತ್ರರು ಅಂದುಕೊಂಡಂತೆ, ನಿಂತೇ ಹೋಗಿದೆ. ಕರ್ನಾಟಕ ಸರ್ಕಾರವು ಕನ್ನಡ ತಂತ್ರಾಂಶವನ್ನು ಬೆಳೆಸುವದರ ಬಗ್ಗೆ ನೂರು ಕನಸುಗಳನ್ನು ಹೆಣೆದು ನಿದ್ದೆ ಹೋಗಿದೆ. ಸಿಲಿಕಾನ್ ಸಿಟಿಯ ವಿಶ್ವಪ್ರಸಿದ್ಧ ಶ್ರೀಮಂತ ಸಾಫ್ಟ್‌ವೇರ್ ಸಂಸ್ಥೆಗಳ ಒಡೆಯರು ಜಮೀನು ಕೊಡಲಿಲ್ಲ ಎಂದು ಕಣ್ಣೀರು ಹಾಕುತ್ತಿದ್ದಾರೆಯೇ ಹೊರತು ಕನ್ನಡ ತಂತ್ರಾಂಶ, ತಂತ್ರeನದ ಬಗ್ಗೆ ನಯಾಪೈಸೆ ಚಿಂತಿಸುವುದಕ್ಕೂ ಹೋಗಿಲ್ಲ. ಅವರ ರಫ್ತು ಉತ್ಪನ್ನಗಳ ಮೇಲೆ ತೆರಿಗೆ ವಿನಾಯ್ತಿ ಇದ್ದರೆ ಕನ್ನಡದ ನೆಲದಲ್ಲೇ ಮಾರಾಟವಾಗುವ ತಂತ್ರಾಂಶಗಳ ಮೇಲೆ ಇನ್ನಿಲ್ಲದ ತೆರಿಗೆಯನ್ನು ವಿಧಿಸಲಾಗಿದೆ. ತೇಜಸ್ವಿ ಹಂಬಲದಿಂದ ಹೊರಬಂದ ಕುವೆಂಪು ತಂತ್ರಾಂಶವನ್ನು ಯಾರು ಬಳಸುತ್ತಿದ್ದಾರೆ ಎಂದು ನಾನು ತನಿಖೆ ಮಾಡಬೇಕಿದೆ.
ಇಂದಿಗೂ ಕನ್ನಡದಲ್ಲಿ ಮುಕ್ತ ತಂತ್ರಾಂಶವೇ ಮೂಡಿಲ್ಲ! ಮುಕ್ತ ತಂತ್ರಾಂಶದ ಲೋಕಲೈಸೇಶನ್ ಬಗ್ಗೆ (ತಂತ್ರeನವನ್ನು ಸ್ಥಳೀಯ ಬದುಕಿನ ಅಗತ್ಯಕ್ಕೆ ತಕ್ಕಂತೆ, ಸ್ಥಳೀಯ ಭಾಷೆಯಲ್ಲಿ ರೂಪಿಸುವುದು) ಅವುಗಳಿಂದಾಗುವ ಲಾಭದ ಬಗ್ಗೆ ವಿಶ್ವಸಂಸ್ಥೆಯೇ ಮುಂದಾಗಿ ಹಲವು ಪುಸ್ತಕಗಳನ್ನು ಪ್ರಕಟಿಸಿ ವರ್ಷಗಳಾದವು. ಆಫ್ರಿಕಾದಂಥ ಕಗ್ಗತ್ತಲ ನಾಡಿನಲ್ಲೇ ಮುಕ್ತ ತಂತ್ರಾಂಶದಕ್ರಾಂತಿ ನಡೆಯುತ್ತಿರುವಾಗ, ಕರ್ನಾಟಕದಲ್ಲಿ ಯಾಕೆ ನಮ್ಮ ತಂತ್ರಜ್ಞರು ತೆಪ್ಪಗೆ ಕೂತಿದ್ದಾರೆ ಎಂದು ನನಗಂತೂ ಅರ್ಥವಾಗುತ್ತಿಲ್ಲ. ಕೇವಲ ಸಾಮಾನ್ಯ ಗಣಕ ಬಳಕೆದಾರನಾದ, ತಂತ್ರeನದ ಬಗ್ಗೆ ಅಧಿಕೃತಕವಾಗಿ ಮಾತಾಡುವ ಯಾವುದೇ ಗುಣಗಳನ್ನೂ ಹೊಂದಿಲ್ಲದ ನಾನು ಈ ಲೇಖನವನ್ನು ಬರೆಯಬೇಕಾದ ಪ್ರಸಂಗವೇ ವಿಚಿತ್ರ ಎನಿಸುತ್ತದೆ. ಬಿಡಿ ಬಿಡಿ ಬೆಳವಣಿಗೆಗಳನ್ನೇ ಮಹಾನ್ ಎಂದು ಚಿತ್ರಿಸಿ ವೈಭವೀಕರಿಸುವುದನ್ನು ಮೊದಲು ನಿಲ್ಲಿಸಬೇಕಲ್ಲವೆ?
ಇನ್ನು ಕನ್ನಡ ಸಾಹಿತ್ಯದಲ್ಲಿ ತಂತ್ರeನ ಎಂಬ ಮಾತನ್ನು ಇನ್ನೂ ಆಳವಾಗಿ ನೋಡುವುದಾದರೆ, ಡಾಟಾಬೇಸ್ ನಿರ್ವಹಣೆಯನ್ನೂ ಗಮನಕ್ಕೆ ತೆಗೆದುಕೊಳ್ಳಬೇಕು. ಕನ್ನಡದ ಡಾಟಾಬೇಸ್ ತಂತ್ರeನ ಬೆಳವಣಿಗೆಯಂತೂ ಶೈಶವಾವಸ್ಥೆಯಲ್ಲಿದ್ದೇ ಕೆಲವು ವರ್ಷಗಳಾದವು. ಕನ್ನಡದ ಲೇಖಕರು ತಮ್ಮ ಲೇಖನಗಳ ಡಾಟಾಬೇಸ್ ಮಾಡಿಕೊಂಡಿದ್ದರೆ ಎಷ್ಟು ಸಲ ತಮಗೆ ಗೊತ್ತಿಲ್ಲದೇ ಒಂದೇ ಬಗೆಯ ಕಲ್ಪನೆಗಳನ್ನು ಹರಿಬಿಡುತ್ತಿದ್ದೇವೆ ಎಂದು ತಿಳಿದುಕೊಂಡು ತಮ್ಮ ಶೈಲಿಯನ್ನು, ಪದನಳಕೆಯನ್ನು ಬದಲಿಸಿಕೊಳ್ಳುತ್ತಿದ್ದರು. ಗಣಕವೂ ಕನ್ನಡ ಸಾಹಿತ್ಯದ ಗುಣಮಟ್ಟವನ್ನು ಹೆಚ್ಚಿಸಬೇಕೆಂದರೆ ಡಾಟಾಬೇಸ್‌ನಲ್ಲೂ ಕನ್ನಡದ ದ್ರವ್ಯ ಹರಿಯಬೇಕು. ಅದಾಗುತ್ತಿಲ್ಲ. ಅದಿರಲಿ, ನಮ್ಮ ಸರ್ಕಾರಿ ಸಂಸ್ಥೆಗಳು ನಡೆಸುತ್ತಿರುವ ವಿವಿಧ ಜಾಲತಾಣಗಳಲ್ಲಿ ಕೂಡಾ ಇಂಗ್ಲಿಶಿನ ಡಾಟಾಬೇಸ್ ಇದೆ. ಇದನ್ನು ತಪ್ಪಿಸುವುದು ಹೇಗೆ?
ಮೊಬೈಲ್ ಫೋನ್‌ಗಳು, ಎ ಟಿ ಎಂಗಳು, ಹೋರ್ಡಿಂಗ್‌ಗಳು, ಟಿವಿ ಪರದೆಗಳು, ವಾಶಿಂಗ್ ಮೆಶಿನ್‌ಗಳು, ಮೈಕ್ರೋವೇವ್ ಓವೆನ್‌ಗಳು ಮಾತಾಡುತ್ತವೆ. ಅವಕ್ಕೆ ಕನ್ನಡ ಕಲಿಸುವುದು ಕಷ್ಟದ ಮಾತಾಗಿಹೋಗಿದೆ.
ತಮಾಷೆ ಎಂದರೆ ವಿವಿಧ ಸಂಸ್ಥೆಗಳು ರೂಪಿಸಿರುವ ಕನ್ನಡದ ಅಕ್ಷರಗಳಲ್ಲಿ ಸಮಾನತೆಯೇ ಇಲ್ಲ. ಯೂನಿಕೋಡ್‌ಎಂಬುದು ಇದಕ್ಕೆ ತಕ್ಕ ಪರಿಹಾರವೇನೋ ನಿಜ ; ಆದರೆ ಇದೆಲ್ಲವೂ ಭಾರೀ ಹೂಡಿಕೆದಾರರ ನಡುವಣ ಕಸರತ್ತಾಗಿದೆ; ಬಳಕೆದಾರ ಮಾತ್ರ ದುಡ್ಡು ಕಕ್ಕಿಯೇ ಕನ್ನಡಕ್ಕೆ ಕೈ ಎತ್ತುವ ಸ್ಥಿತಿ ಉಂಟಾಗಿದೆ. ಉಳ್ಳದವರು ಮತ್ತು ಉಳ್ಳವರ ನಡುವೆ ಇರುವ ಡಿಜಿಟಲ್ ಕಂದರವನ್ನು ಮುಚ್ಚುವುದು ಯಾವಾಗ? ಕನ್ನಡವನ್ನೂ ಹೊಂದಿದ ಸಿಂಪ್ಯೂಟರ್ ಎಂಬ ಅಂಗೈ ಗಣಕವೇ ಇನ್ನೂ ಸಾಕಷ್ಟು ದೂರ ಕ್ರಮಿಸಬೇಕಾದ ಸ್ಥಿತಿ ಇರುವಾಗ ಅನಕ್ಷರತೆಯನ್ನು ಮೀರಿ ಕನ್ನಡದ ಕಂಪು ಬೆಳೆಯುವುದು ಯಾವಾಗ?
ನಮ್ಮ ಉಳಿದೆಲ್ಲ ಸಮಸ್ಯೆಗಳ ಹಾಗೆಯೇ ತಂತ್ರeನದಲ್ಲಿ ಕನ್ನಡದ ಸಾಂಸ್ಕೃತಿಕ ಬೆಳವಣಿಗೆಯೂ ಸಿರಿವಂತಿಕೆಗೆ ಸಾಪೇಕ್ಷವಾಗಿದೆ ಎಂಬುದು ಕಟು ವಾಸ್ತವ. ನಮ್ಮ ಸಮಾಜದಲ್ಲಿ ಮೊದಲು ಸಾಕ್ಷರತೆ, ಆಮೇಲೆ ಗಣಕ ಸಾಕ್ಷರತೆ ಮೂಡಿ, ಎಲ್ಲ ಕೈಗಳಿಗೂ ಕೀಲಿಮಣೆ ಸಿಕ್ಕಿದ ಮೇಲೆ ಕನ್ನಡ ಸಾಹಿತ್ಯದ ಬಗ್ಗೆ ಮಾತಾಡುವುದು ಸೂಕ್ತ. ಅಲ್ಲಿಯವರೆಗೆ ನೇಯ್ದ ಮೂರು ಮೊಳವನ್ನೇ ಹಿಗ್ಗಿಸಿ ಖುಷಿಪಡುವುದಾದರೆ ಪರವಾಗಿಲ್ಲ.
ಏನಾದರೂ ಸಲಹೆಯನ್ನೇ ಕೊಡಬೇಕೆಂದರೆ …. ಮೊದಲು ‘ಬೆಂಗಳೂರು ಸಿಲಿಕಾನ್ ಸಿಟಿ’ ಎಂಬ ಮರುಳು ಹೇಳಿಕೆಯನ್ನು ರದ್ದು ಮಾಡಿ. ಹಳ್ಳಿಗೊಂದು ಕಂಪ್ಯೂಟರ್ ಕೊಡಿ. ಅದರೊಳಗೆ ಕನ್ನಡ ಇಡಿ. ಕಂಪ್ಯೂಟರನ್ನು ಮೊದಲು ರೇಡಿಯೋ, ಟಿವಿ ಥರ ಬಳಸಿಯಾದರೂ ಜನಪ್ರಿಯಗೊಳಿಸಿ. ರಾಜಧಾನಿಯಲ್ಲೇ ಕೂತು ಕನ್ನಡದ ಬಾವುಟ ಹಾರಿಸುವ ತಂತ್ರಜ್ಞರು, ಭಾಷಾ ಪ್ರೇಮಿಗಳು ಕೊನೇ ಪಕ್ಷ ಜಿಲ್ಲಾ / ತಾಲೂಕು ಕೇಂದ್ರಗಳಿಗೆ ಹೋಗಿ ನಾಲ್ಕು ಜನರ ಜೊತೆ ಬೆರೆಯಲಿ. ಎಲ್ಲೆಲ್ಲೂ ಬ್ರಾಡ್‌ಬ್ಯಾಂಡ್ ಬಂದಿರುವ ಈ ಕಾಲದಲ್ಲೂ ಬೆಂಗಳೂರಿನಲ್ಲೇ ಕನ್ನಡಕ್ಕಾಗಿ ಹೋರಾಡುವ ಚಟವನ್ನು ಕೈ ಬಿಡಿ.
ವಿಶೇಷ ಸಂದರ್ಭಗಳಲ್ಲಿ ಇಂಥದೊಂದು ಲೇಖನವನ್ನು ನಾನು ಬರೆಯುವುದರ ಮತ್ತು ನೀವು ಓದುವುದರ ಹೊರತು ಈ ವಿಷಯದ ಬಗ್ಗೆ ಆಂಥ ಗುರುತರವಾಗಿ ತಲೆಕೆಡಿಸಿಕೊಳ್ಳುವುದೇನೂ ಬೇಕಾಗಿಲ್ಲ.
Article published in The Sunday Indian, Dec 10-16, 2007 issue
1 Comment
dear sir,
I cannot read properly the kannada words in all above sites . please reply to my e mail.I read your likhana in udayavani on 24-11-08 about : SUMMSNE HUDUKONA,NERAVAGONA. i BOOKMARKED THE SITE CLICK NOW,MAGIC TAXI.
YOURS,
DR.SADASHIVA.RAO
drsadashiva@yahoo.com
24-11-08