ಒಂದು ಮುತ್ತಿನ ಕಥೆ

ಈ ಸಲ ರಾಜಿಗೆ ಸರಿಯಾಗಿ ಹೇಳಿಬಿಡಬೇಕು.ನಾಳೆ ಎಷ್ಟು ಹೊತ್ತಾದರೂ ಸರಿ, ನನ್ನ ಜೊತೆಗೆ ಕಾಲ ಕಳೆಯಲು ಬರಲೇಬೇಕೆಂದು.ಅವಳಿಗೆ ಹೇಳಲೇಬೇಕು, ನಾನು ಅವಳಿಗೆ ಒಂದು ಮುತ್ತು ಕೊಡುವುದು ಬಾಕಿ ಇದೆ ಎಂದು.ಎಷ್ಟು ದಿನ ಆಂತ ಹೀಗೆ ಕಾಯುವುದು ? ಅವಳಿಗೆ ಈಗಲಾದರೂ ಗೊತ್ತಾಗುವುದಿಲ್ವಾ ? ಹಾಗಾದರೆ ಅವಳು ನನಗೆ ದಿನಾಲೂ ಫೋನು ಮಾಡುವುದಾದರೂ ಯಾಕೆ ? ವಾರಕ್ಕೊಂದು ಇ-ಮೈಲು ಕಳಿಸುವುದಾದರೂ ಯಾಕೆ ? ಪ್ರೀತಿ ಇಲ್ಲದ ಮೇಲೆ ಮಾತುಕತೆಯ ಹೂವು ಅರಳಿದ್ದಾದರೂ ಹೇಗೆ ? ಪತ್ರ ಬರೆಯಲಿಕ್ಕೆ ಬರುತ್ತೆ. ಇ-ಮೈಲು ಕಳಿಸಲಿಕ್ಕೆ ಬರುತ್ತೆ. ಒಮ್ಮೊಮ್ಮೆ ಚಾಯ್‌ಟೈಮ್ ಡಾಟ್ ಕಾಮ್‌ನ ಚಾಟ್‌ರೂಮಿಗೆ ಬಂದು ಹರಟಲು ಬರುತ್ತೆ.ಫೋನಿನಲ್ಲಿ ಮಾತಾಡಿದಾಗ ಆಳಕ್ಕೆ ಬರುತ್ತೆ. ಒಂದು ಮುತ್ತು ತಗೊಳ್ಳಲಿಕ್ಕೆ ಬರಲ್ವಾ? ಒಂದು ಮೆದುವಾದ ಅಪ್ಪುಗೆಗೆ ಬಿಡುವಾಗಲು ಬರಲ್ವಾ? ಒಂದು ಅರೆಗಳಿಗೆ ಒಟ್ಟಿಗೆ ಅಂಟಿ ಕೂತು ನಾಸ್ಟಾಲ್ಜಿಯಾಗೆ ಮರಳಲು ಬರಲ್ವಾ ? 

ಅವಳಿಗೆ ಆಫೀಸಿರುತ್ತೆ, ನಿಜ. ಆದರೆ ಅವಳು ಸಮಯ ಹುಡುಕಿ ಮಾತಾಡುವುದಾದರೂ ಹ್ಯಾಗೆ ? ಅವಳಿಗೆ ಮನೆ ಇರುತ್ತೆ. ಆದರೆ ಅವಳು ನನಗೆ ಫೋನು ಮಾಡುವುದಾದರೂ ಹ್ಯಾಗೆ ? ಅವಳಿಗೆ ಮಗ ಇದ್ದಾನೆ .ಮೂರನೆಯ ಕ್ಲಾಸು ಓದುತ್ತಿದ್ದಾನೆ. ಅವನ ಹೆಸರು ಗೊತ್ತಿಲ್ಲ. ನನ್ನ ಮಗಳ ಹೆಸರು ಅವಳಿಗೆ ಗೊತ್ತು. ಯಾಕೆಂದರೆ ಅವಳು ಕೆಲವು ಸಲ ನಾನು ಇಲ್ಲದಾಗ ಫೋನು ಮಾಡಿದರೆ ನನ್ನ ಮಗಳೇ ಫೋನು ಎತ್ತುತ್ತಾಳೆ.ಅವಳಿಗೆ ಗೊತ್ತು. ಈ ಅಪ್ಪ ಭಾವುಕ.ಯಾರ್‍ಯಾರೋ ಗೆಳೆಯರು ಗೆಳತಿಯರು ಇದ್ದಾರೆ.ಅವಳಿಗೆ ತಪ್ಪು ತಿಳಿದುಕೊಳ್ಳಲು ಬರಲ್ಲ. ಸರಿಯಾಗಿ ತಿಳಿದುಕೊಳ್ಳಲು ಆಸಕ್ತಿಯಿಲ್ಲ. ಫೋನು ಮಾಡಿದರೆ ನಿರ್ಭಾವುಕಳಾಗಿ ಮೆಸೇಜು ಬರೆದುಕೊಂಡು ನನ್ನ ಮೇಜಿನ ಮೇಲೆ ಇಡುತ್ತಾಳೆ. ಅಷ್ಟೆ. ನನ್ನ ಮತ್ತು ರಾಜಿಯ ಸಂಬಂಧ ಎಷ್ಟು ಗಾಢವಾಗಿ ಬೆಳೆದಿತ್ತು, ಎಷ್ಟು ಆಳವಾಗಿ ಬೇರೂರಿತ್ತು ಎಂಬುದು ಅವಳಿಗೆ ಬೇಕಾಗಿಲ್ಲ.

ನಾನಾದರೂ ಅಷ್ಟೆ. ರಾಜಿಗೆ ನಾನು ಒಂದೂ ಮುತ್ತನ್ನು ಕೊಡಲಿಲ್ಲ ಎಂದು ಯಾರಲ್ಲೂ ಹೇಳಿಲ್ಲ. ನನ್ನ ಪ್ರಿಯ ಸ್ನೇಹಿತೆ ವೀಣಾಗೆ ಮಾತ್ರ ಒಮ್ಮೆ ಹಾಗೆ ಕಾಗದ ಬರೆದಿದ್ದೆ.ಅವಳೂ ಈಗ ಅದನ್ನೆಲ್ಲ ಮರೆತಿರಬಹುದು. ರಾಜಿಗೆ ನಾನು ಮಾತಿಗಿಂತ ಪತ್ರ ಬರೆದದ್ದೇ ಹೆಚ್ಚು ಎಂದು ಅವಳಿಗೆ ಗೊತ್ತು.ಆದರೆ ಮಾತುಕತೆ ನಡೆಸಿದ ದಿನಗಳು ಗಮನಾರ್ಹವಾಗಿ ಇದ್ದವು ಎಂಬುದೂ ಅವಳಿಗೆ ಗೊತ್ತು. ಇದಕ್ಕಿಂತ ಹೆಚ್ಚಾಗಿ ಸಂಬಂಧ ಬೆಳೆಯುತ್ತಿರುವುದೇ ಈಗ.ನಾನು ಅವಳಿಗೆ ಒಂದು ಸಲ ಸಮಯ ಕೊಡಲೇಬೇಕೆಂದು ಕೇಳಲು ನಿರ್ಧರಿಸಿದಾಗ.ಇವತ್ತೇ ಆ ಕೆಲಸ ಮಾಡಬೇಕು.

ರಾಜಲಕ್ಷ್ಮಿಇದಾರಾ ? ಒನ್ನಿಮಿಷ ಕರೀತೀರಾ ? ನಾನು ಕಣೇ … ಹ್ಯಾಗಿದೀಯಾ…

ಅವಳಿಗೆ ಮಾತು ಹೊರಡುವುದಿಲ್ಲ. ನಾನು ಅವಳ ಆಫೀಸಿಗೆ ನಾನಾಗೇ ಫೋನು ಮಾಡಿದ್ದೇ ಇಲ್ಲ. ಅಚ್ಚರಿ, ಭಯ. ನಾನೂ ಬಿಡಲಿಲ್ಲ.

ಮುಂದಿನ ಶುಕ್ರವಾರ ಸಂಜೆ ಏನಾದರೂ ನೆಪ ಹೇಳಿ ಬಂದುಬಿಡು.ನಿನ್ನತ್ರ ಒಂದಷ್ಟು ಕಾಲ ಕಳೀಬೇಕು ಅಂತ ಅನ್ನಿಸ್ತಾ ಇದೆ. ದಯವಿಟ್ಟು ಬೇಡ ಅಂತ ಹೇಳ್ಬೇಡ ಕಣೆ.ಬೆಳಿಗ್ಗೆ  ನನ್ನ ಮೊಬೈಲಿಗೇ ಫೋನಾಯಿಸು. ನಾನು ನಿಂಜೊತೆ, ಕೇವಲ ನಿಂಜೊತೆ ಕಾಲ ಕಳೀಬೇಕು ಅಂತ….. ಬೇಡ ಅನ್ಬೇಡ ಮಾರಾಯ್ತಿ … ನಿನಗೆ ಯಾವ ಎಂಬರಾಸ್‌ಮೆಂಟೂ ಆಗದ ಹಾಗೆ ನೋಡ್ಕೋತೀನಿ…..

ಅವಳಿಗೆ ಈಗಲೂ ಏನು ಹೇಳಬೇಕು ಅಂತ ಗೊತ್ತಾಗ್ತಿಲ್ಲ.ಸರಿ ಕಣೋ, ನಾಳೆ ಮತ್ತೆ ತಿಳಿಸ್ತೀನಿ ಅಂದಳು. ಅಬ್ಬ, ಅಂತೂ ರಾಜಿ ಈಗಲೂ ನನ್ನ ಜೊತೆ ಇದಾಳಲ್ಲ ಅನ್ನೋ ಸಮಾಧಾನ ಆವರಿಸಿತು. ವಿಧಾನಸೌಧದ ಪಕ್ಕ ಸ್ಕೂಟರು ನಿಲ್ಲಿಸಿ ಕೋರ್ಟಿನ ಹಿಂದೆ ಇರುವ ಹುಲ್ಲುಹಾಸಿನ ಪಕ್ಕ ನಡೆಯತೊಡಗಿದೆ. 

ಅವಳೇ ಅಲ್ಲವೇನೋ ನಿನಗೆ ೧೦ ವರ್ಷಗಳ ನಂತರ ಫೋನು ಮಾಡಿದವಳು ? ಅವಳೇ ಅಲ್ಲವೇನೋ ಈಗಲಾದರೂ ನಾವು ಪರಸ್ಪರ ಸುಖ ದುಃಖಗಳನ್ನು ಹಂಚಿಕೊಳ್ಳೋಣ ಎಂದು ಹೇಳಿದವಳು ? ಯಾಕೋ ನೀನು ಸುಮ್ಮನೆ ಇರ್‍ತೀಯ, ಮಾತೇ ಆಡೋಲ್ಲ ಎಂದು ಚುಡಾಯಿಸಿದವಳು ? ನಿನ್ನ ಹೆಂಡತಿ ನನಗಿಂತ ಹೆಚ್ಚು ಅರ್ಹಳು ಕಣೋ ಎಂದು ತನ್ನ ಕೀಳರಿಮೆಯನ್ನು ಎತ್ತಿ ತೋರಿಸಿದವಳು.ಅವಳ ಗಂಡನೆದುರೇ ನೋಡಿ, ಇವರು ನಿಮಗಿಂತ ಒಳ್ಳೆಯವರು, ಸಿಗರೇಟು ಸೇದಲ್ಲ ಎಂದು ಮೆದುವಾಗಿ ನಕ್ಕವಳು…ಅವಳೇ ರಾಜಿ. ನನ್ನ ಕಾಲೇಜು ದಿನಗಳ ರಾಣಿ.ನನ್ನ ಹೋರಾಟದ ದಿನಗಳ ಖಳನಾಯಕಿ.ನನ್ನ ವರ್ತಮಾನದ ಒಬ್ಬ ಒಳ್ಳೆಯ ಗೆಳತಿ ? ಅಂದಮೇಲೆ ನನಗೆ ಅವಳನ್ನು ಏಕಾಂತಕ್ಕೆ ಕರೆಯುವ ಹಕ್ಕು ಇದ್ದೇ ಇದೆ. ಅವಳು ನನ್ನ ಗೆಳತಿ ಅಂದಮೇಲೆ ಯಾರಾದರೂ ಯಾಕೆ ತಪ್ಪು ತಿಳಿಯಬೇಕು ? ನಾನೇನೂ ಅವಳ ಮಾನಭಂಗ ಮಾಡಲು ಕರೀತಿಲ್ಲವಲ್ಲ ? ಅವಳ ದುಃಖವನ್ನು ನಾನು ಹಂಚಿಕೊಳ್ಳಲು ಸಿದ್ಧನಿರುವೆ ಎಂದಾದರೆ ಅವಳೂ ನನ್ನ ಈ ಒಂದಾದರೂ ಕಿರು ಬೇಡಿಕೆಯನ್ನು ಮನ್ನಿಸಬೇಕಲ್ಲವೆ ? ಅವಳ ಸಂಸಾರ ಅವಳಿಗೇ ಇರಲಿ. ನನಗೊಂದು, ಒಂದೇ ಒಂದು ಮುತ್ತು ಕೊಟ್ಟು ಹೋಗಿಬಿಡಲಿ ….

ಮನೆಗೆ ಬಂದರೆ ಹೆಂಡತಿ ಕೇಳುತ್ತಾಳೆ : ನಾಳೆ ಅವರ ಮನೆಗೆ ಹೋಗೋಣವಾ ? ಅಥವಾ ಅವರನ್ನು ಮನೆಗೆ ಕರೆಯೋಣವಾ ? ಎರಡೂ ಬೇಡ ಎಂದು ಹೇಳಿ ಸೀದಾ ಮಲಗಿಕೊಂಡೆ.ನಾನು ನನ್ನ ಹೆಂಡತಿಗೇ ದ್ರೋಹ ಬಗೆಯುತ್ತಿಲ್ಲ ಎಂದು ಸಮಾಧಾನ ಮಾಡಿಕೊಂಡು ನಿದ್ದೆ ಮಾಡಿದೆ. ಕನಸಿನಲ್ಲಿ ಇಬ್ಬರೂ ಬಂದರು. ಇಬ್ಬರೂ ನನಗೆ ಬೇಕು. ಬಹುಶಃ ರಾಜಿಗೆ ಅವಳ ಗಂಡನಿಗಿಂತ ನಾನೇ ಹೆಚ್ಚು ಬೇಕು. ಅದಿಲ್ಲವಾದರೆ ಯಾಕೆ ಅವಳು ನನ್ನನ್ನು ಆ ಪರಿ ಹಚ್ಚಿಕೊಳ್ಳಬೇಕು ? ನಾನು ಅವಳಿಗೆ ಅವಳ ಗಂಡನ ಬಗ್ಗೆ ಯಾವ ಪ್ರಶ್ನೆಯನ್ನೂ ಕೇಳುವುದಿಲ್ಲ. ನನಗೆ ಗೊತ್ತು, ಅವಳಿಂದ ಸರಿಯಾಗಿ ಉತ್ತರವೂ ಬರುವುದಿಲ್ಲ. ಬೇಡ. ನನಗೆ ರಾಜಿಯ ಒಂದು ಮುತ್ತು ಬೇಕು. ಅವಳು ನನ್ನ ಯೌವ್ವನದ ದಿನಗಳಲ್ಲಿ ಆಪ್ತಳಾಗಿದ್ದಳು ಎಂಬುದಕ್ಕೆ ಕುರುಹಾಗಿ ಒಂದು ಮುತ್ತನ್ನು ದಾಖಲಿಸಲೇ ಬೇಕು. ನನ್ನ ತುಟಿಗಳಲ್ಲಿ ಅವಳ ನೆನಪು ಸದಾ ಕುಳಿತಿರಬೇಕು. ಅವಳು ನನ್ನ ಹಳೆಯ ಡೈರಿಯಲ್ಲಿ ಇಟ್ಟ ಹೂವಿನ ಹಾಗೆ ಒಣಗಿಹೋಗಬಾರದು. ಅವಳು ನನಗೆ ಬರೆದ ಆಗಿನ ಪತ್ರಗಳ ಹಾಗೆ ಮಾಸಬಾರದು. ಒಮ್ಮೆ ಮೂರ್ತವಾದ ಮುತ್ತು ಕ್ಷಣಮಾತ್ರದಲ್ಲಿ ಅಮೂರ್ತವಾಗುತ್ತೆ. ಅದು ಹಾಗೆ ಅಮರವಾಗುತ್ತೆ.ಒಣಗುವುದಿಲ್ಲ. ಮಾಸುವುದಿಲ್ಲ. ಅಳಿಸಿಹೋಗುವುದಿಲ್ಲ. ರಾಜಿ ಎಂದೂ ನನ್ನ ಒಡಲ ಆಪ್ತರಾಗಗಳಿಂದ ಬೇರೆ ಆಗಬಾರದು. ಒಂದು ಸಲ ಅವಳು ನನನ ತುಟಿಗಳಿಗೆ ತುಟಿ ಕೊಟ್ಟರೆ ಸಾಕು. ಆಮೇಲೆ ಅವಳು ಸಿಗದಿದ್ದರೂ ಪರವಾ ಇಲ್ಲ.

ಇವತ್ತು ಅವಳ ಫೋನು ಬಂತು.ಅದೂ ಇದೂ ಮಾತನಾಡಿದೆವು. ಆಮೇಲೆ ಅವಳೇ ಕೇಳಿದಳು : ಎಲ್ಲಗೆ ಹೋಗೋಣ ? ಬೇರೆ ಊರಿಗಾ ? ಇಲ್ಲೇ ಯಾವುದಾದರೂ ಲಾಡ್ಜಿಗಾ ? ನಾನು ನನ್ನ ಗೆಳತಿಯ ಮನೆಗೆ ಹೋಗ್ತಾ ಇದೀನಿ ಅಂತ ಹೇಳಿ ಒಂದು ರಾತ್ರಿ ಮಟ್ಟಿಗೆ ನಿನ್ನ ಜೊತೆ ಇರಲಿಕ್ಕೆ ರೆಡಿ ಆಗಿದೀನಿ ಕಣೋ. ನೀನೇನೂ ವಿಲನ್ ಅಲ್ಲವಲ್ಲಾ ….ನಾಳೆ ಮಧ್ಯಾಹ್ನ ನಾಕೂವರೆಗೆ ಸರಿಯಾಗಿ ಗಾಂನಗರದ ಶ್ರೀರಾಜ್ ಲಸ್ಸಿ ಬಾರಿನಲ್ಲಿ ಕುಳಿತಿರ್‍ತೇನೆ. ಬಾ. ಆದರೆ ನೀನು ಯಾಕೆ ನನ್ನ ಹೀಗೆ ಒತ್ತಾಯ ಮಾಡ್ತಾ ಇದೀಯ ಅಂತ ಅರ್ಥಾನೇ ಆಗ್ತಿಲ್ಲ ಕಣೋ….ಬರ್‍ಲಾ ? 

ಎಷ್ಟು ಒಳ್ಳೆಯವಳು ರಾಜಿ ….ನನ್ನ ಮಾತನ್ನು ಮೀರಲ್ಲ .ಒಂದು ಮುತ್ತಿನ ರಹಸ್ಯ ಅವಳಿಗೆ ಗೊತ್ತಿಲ್ಲದೇ ಇರಬಹುದು.ಆದರೆ ರವಿ ಯಾರು ಎಂದು ಅವಳಿಗೆ ಗೊತ್ತು. ಇವ ಎಂಥ ಭಾವುಕ ಅಂತ ಅವಳಿಗೆ ಗೊತ್ತು. ಹೆಚ್ಚು ದುಃಖ ಹಂಚಿಕೊಂಡರೆ ತನ್ನ ಜೊತೆಗೆ ಕೂತು ಅತ್ತೇ ಬಿಡುತ್ತಾನೆ ಅಂತಲೂ ಗೊತ್ತು.ಆದರೂ ಅವಳಿಗೆ ಒಂದು ವಿಷಯ ಗೊತ್ತಿಲ್ಲ.ಎಲ್ಲೋ ಒಂದು ಸಲ ‘ಟೈಟಾನಿಕ್’ ನೋಡುವಾಗ ಅವಳ ನೆನಪು ಹುಚ್ಚು ಹೊಳೆಯಂತೆ ಅಪ್ಪಳಿಸುತ್ತದೆ. ಎಲ್ಲೋ ಒಂದು ಸಲ ಮಹಾರಾಣಿ ಕಾಲೇಜಿನ ಬಳಿ ಹಾದು ಹೋಗುವಾಗ ಅವಳು ತೊಟ್ಟಿದ್ದ ಚೂಡಿದಾರದ ಬಣ್ಣಗಳು ಹೊಳೆಯುತ್ತವೆ. ಯಾವುದೋ ಕಾರ್ಯಕ್ರಮಕ್ಕೆ ಹೋಗಿದ್ದಾಗ ಅವಳು ಇಲ್ಲೇ ಪಕ್ಕದಲ್ಲಿ ಕುಳಿತಿದ್ದರೆ ಎಷ್ಟೆಲ್ಲ ತಂಟೆ ಮಾತು ಆಡಿಕೊಂಡು ಇರಬಹುದಿತ್ತಲ್ಲ ಅನ್ನಿಸುತ್ತದೆ. ಚಿತ್ರಕಲಾ ಪರಿಷತ್ತಿಗೆ ಹೋದಾಗ ಹೊರಗಡೆ ಕಟ್ಟೆಯ ಮೇಲೆ ಅವಳ ಮಗ್ಗುಲಲ್ಲಿ ಕೂತು ನಾನೂ ಮೆರೆಯಬಹುದಿತ್ತಲ್ಲ ಅನ್ನಿಸುತ್ತದೆ. ಒಬ್ಬನೇ ಇದ್ದಾಗ ಮುಖೇಶ್, ರಫಿ ಹಾಡುತ್ತ ಹಾಡುತ್ತ ಅವಳ ನೆನಪು ತರುತ್ತಾರೆ….. ರಾಜಿ, ಓ ರಾಜಿ…. ಬಾರೆ, ಒಂದೇ ಒಂದು ಮುತ್ತು ಕೊಡೆ…ಒಂದು ಸಲ ಸಾಕು ಕಣೆ.. ಎಲ್ಲಾ ರಗಳೆ ಮರೆತುಬಿಡೋಣ…. ನಾನು ನಿನಗೆ ಬರೆದ ಪತ್ರಗಳನ್ನು ಮರೀತೇನೆ. ನಿನ್ನ ಮನೆಗೆ ಬಂದು ಗಂಟೆಗಟ್ಟಲೆ ಹರಟಿದ್ದನ್ನು ಮರೀತೇನೆ. ನಿನ್ನ ಅಮ್ಮ ನನಗೆ ಹೇಳಿದ್ದನ್ನು ಮರೀತೇನೆ. ಎಲ್ಲವನ್ನೂ ಮರೀತೇನೆ ಕಣೆ…. ನಿನ್ನ ಒಂದು ಮುತ್ತನ್ನು ಮಾತ್ರ ಬಿಟ್ಟು. ಕೊಟ್ಟು ಬಿಡೆ…..

ಎಲ್ಲೋ ಒಂದು ಹಾರನ್ ಕೇಳಿಸುತ್ತದೆ. ಯಾರೊ ಎದ್ದಿದ್ದಾರೆ. ಇಷ್ಟು ಬೇಗ ಎಲ್ಲಿಗೆ ಹೋಗುತ್ತಾರೆ ? ರಾಜಿಯಂತೂ ಹೇಳಿದ್ದಾಳೆ.ಮಧ್ಯಾಹ್ನ ನಾಕೂವರೆಗೆ.ಹೌದು. ಅಲ್ಲಿಯವರೆಗೆ ನಾನು ಆರಾಮಾಗಿ ಕನಸು ಕಾಣುತ್ತ ಇರಬಹುದು. ಕಚೇರಿ ಕೆಲಸಕ್ಕಾಗಿ ಊರು ತಿರುಗುತ್ತ ಬೆಳಗಿನ ಕನಸು, ಮಧ್ಯಾಹ್ನದ ಕನಸು, ಕಾಣಬಹುದು.ಸಂಜೆಯ ಕನಸಿಗೆ ಅವಕಾಶವಿಲ್ಲ. ರಾಜಿ ಬರುತ್ತಾಳೆ. ಒಂದು ದಿನ ನನ್ನ ಜೊತೆಗೆ ಇರುತ್ತಾಳೆ.ಅವಳ ಜೊತೆ ಕಳೆವ ಆ ಕ್ಷಣಗಳೆಲ್ಲವೂ ಅಪೂರ್ವ. 

ಹಾಗೇ ಆಯಿತು.ನಾಕೂವರೆಗೆ ಸರಿಯಾಗಿ ಹಾಳು ಬಿದ್ದ ರಸ್ತೆಗಳನ್ನು ಹಾದು ಹೋದರೆ ಅಲ್ಲಿ ರಾಜಿ ಕುಳಿತಿದ್ದಾಳೆ.ಕೈಯಲ್ಲಿ ಒಂದು ಚಿಕ್ಕ ಬ್ಯಾಗಿದೆ.ಲಕ್ಷಣವಾಗಿ ಸೀರೆ ಉಟ್ಟಿದ್ದಾಳೆ. ಮಾಂಗಲ್ಯ ?  ಇದೆ. ಆದರೆ ಅದರ ಜೊತೆಗೆ ಇನ್ನೂ ಒಂದು ಸರ ಇದೆ. ಆಡಂಬರ ಇಲ್ಲ. ಮೇಕಪ್ ಇಲ್ಲ. ಸೀದಾ ಸಾದಾ ಬಂದಿದ್ದಾಳೆ. ಎಷ್ಟಂದರೂ ನನ್ನ ರಾಜಿ. ಅವಳಿಗೆ ಬಿಗುಮಾನ ಇಲ್ಲ ಅಂತಲೇ ಅವಳು ನನಗೆ ಅಷ್ಟು ಪ್ರಿಯವಾಗಿದ್ದು. ಈಗಲೂ ಹಾಗೇ ಇದ್ದಾಳೆ. ಹತ್ತಿರ ಹೋದಕೂಡಲೇ ನಕ್ಕಳು. ಲಸ್ಸಿ ಕುಡಿದೆವು. ಮಾತಿಲ್ಲ. ಕತೆಯಿಲ್ಲ. ಎಲ್ಲಕ್ಕೂ ಆ ಕ್ಷಣ ಬರಬೇಕು. ಬಿಲ್ಲು ಕೊಟ್ಟವಳೂ ಅವಳೇ. ಅಲ್ಲಿಂದ ಹೊರಟೆವು. ನಾನು ತುಂಬಾ ಜಾಣ. ಸ್ಕೂಟರು ತಂದಿರಲಿಲ್ಲ. 

ಹೊರಗೆ ಬಂದ ಕೂಡಲೇ ಕೇಳಿದಳು. ಎಲ್ಲಿಗೋ ಮಾರಾಯ ಹೋಗುವುದು ? ಅವಳು ಮಾತಾಡಿದ್ದು ಪಿಸುಗುಟ್ಟಿದ ಹಾಗೆ ಇತ್ತು. ನನ್ನ ಹತ್ತಿರ ಅವಳು ಹಾಗೆ ಎಂದೂ ಪಿಸುಗುಟ್ಟಿದ್ದಿಲ್ಲ. ಈಗ ಆ ಕ್ಷಣ ಬಂದಿದೆ. ಬಾ ಅಂದೆ. ಇಬ್ಬರೂ ಹೊಸ ಜೋಡಿಯ ಹಾಗೆ ನಡೆಯತೊಡಗಿದೆವು. ಮೆಜೆಸ್ಟಿಕ್ ಮಾರುಕಟ್ಟೆ ಬೀದಿ ಬದಿಯ ಮಾರಾಟಗಾರರಿಲ್ಲದೆ ಬಿಕೋ ಎನ್ನುತ್ತಿತ್ತು. ಅಲ್ಲಿ ಓಡಾಡುತ್ತಿದ್ದವರು ತುಂಬಾ ಕಡಿಮೆ. ಯಾರೂ ನಮ್ಮನ್ನು ಗಮನಿಸುತ್ತಿಲ್ಲ. ಹಾಗಂತ ಅಂದುಕೊಂಡೇ ನಾವು ಮುಂದೆ ಸಾಗುತ್ತಿದ್ದೇವೆ.ಆಟೋಗಳು ಭರ್ರೆಂದು ನಮ್ಮನ್ನು ದಾಟಿ ಹೋಗುತ್ತಿವೆ. ಕಾರುಗಳು, ಸ್ಕೂಟರುಗಳು …. ಈ ಬೆಂಗಳೂರಿನಲ್ಲಿ ಯಾವುದು ಕಡಿಮೆ ? ಯಾವುದು ಹೆಚ್ಚು ? ಈ ನಗರದಲ್ಲಿ ಯಾರನ್ನು ಯಾರು ಪ್ರೀತಿಸುತ್ತಾರೆ ? ನನ್ನ, ರಾಜಿಯಂಥ ಜೊತೆ ಇನ್ನೆಷ್ಟು ಇಲ್ಲಿ ಓಡಾಡಿಕೊಂಡಿವೆ ? ಯಾರು ನನ್ನ ಹಾಗೆ ಭಾವುಕರಾಗಿದ್ದಾರೆ ? ಯಾರು ರಾಜಿಯ ಹಾಗೆ ಗಾಬರಿಯಾಗಿದ್ದಾರೆ ? ಈ ಹೋಟೆಲುಗಳಲ್ಲಿ ಯಾರ್‍ಯಾರು ನಮ್ಮ ಹಾಗೆ ಒಂದೇ ಒಂದು ಮುತ್ತಿಗಾಗಿ ಕಾತರಿಸಿಕೊಂಡಿದ್ದಾರೆ ? ನನಗೆ ಗೊತ್ತಿಲ್ಲ. ಪಕ್ಕದಲ್ಲಿ ರಾಜಿ ಸುಮ್ಮನೇ ನಡೆಯುತ್ತಿದ್ದಾಳೆ. ಅವಳಿಗೆ ಏನನ್ನಿಸಿದೆ ? ಈ ಮನುಷ್ಯನಿಗೆ ಒಂದು ಪಾಠ ಕಲಿಸಿಬಿಡಬೇಕು ಅಂತ ಬಂದಿದ್ದಾಳಾ ? ಅಥವಾ ನಿಜಕ್ಕೂ ರವಿಯನ್ನು ಆತುಗೊಳ್ಳಲು ಬಂದಿದ್ದಾಳಾ ? ಇವಳು ನಿಜಕ್ಕೂ ಯಾರು ? ನನ್ನ ರಾಜೀನೇ ಹೌದಾ ? ಅವನಿಗೆ ಮಾತ್ರ ಸೇರಿದ ರಾಜಿಜನಾ ? ನಾನು ಹೀಗೇ ನಡೀತಾ ಇದ್ದರೆ ಅವಳು ನನ್ನ ಜೊತೆ ಹೀಗೇ ನಿರಂತರ ನಡೀತಾ ಇರ್‍ತಾಳಾ ? 

ಒಂದು ಲಾಡ್ಜಿಗೆ ಹೋದೆವು. ಸರಳಾ-ಸಂಜೀವ್ ಎಂದು ಹೆಸರು ಬರೆಸಿದೆವು.ನಾನೇ ದುಡ್ಡು ಕೊಟ್ಟೆ. ಎಷ್ಟಂದರೂ ದುಬಾರಿ ಲಾಡ್ಜು. ಯಾರು, ಏನು ಎಂದು ಕೇಳುವುದಿಲ್ಲ. ಅವರಿಗೆ ಈ ಸಂಬಂಧಗಳು ಹೇಗಿವೆ ಎಂಬುದು ಬೇಕಾಗಿಲ್ಲ. ನಾನು ಇವಳ ಜೊತೆ ಯಾಕೆ ಬಂದಿದ್ದೀನಿ ಎಂಬುದು ಬೇಕಿಲ್ಲ. ನನ್ನ ದುಗುಡ ಅವರಿಗೆ ಗೊತ್ತಾಗಲ್ಲ. ಅವಳ ಒಳಗುದಿ ಕೂಡಾ. ಹಾಗೆ ನೋಡಿದರೆ ಅವರಿಗೆ ಯಾರ ಮನಸ್ಸೂ ಕಾಣಿಸಲ್ಲ. 

ಹೀಗೆಲ್ಲ ಸರಳವಾಗಿ ಘಟನೆಗಳು ನಡೀತವೆ ಎಂದು ನಾನು ಯೋಚಿಸಿರಲಿಲ್ಲ. ಅವಳು ರೂಮಿನ ಒಳಗೆ ಬಂದ ಕೂಡಲೇ ಕುರ್ಚಿಯಲ್ಲಿ ಕುಳಿತು ಮನೆಯಲ್ಲಿ ಇದ್ದಂತೆ ಕೂದಲು ಬಿಚ್ಚಿ ಹರಡುವಳು ಎಂದು ನಾನು ಊಹಿಸಿರಲಿಲ್ಲ. ಒಳ ರೂಮಿಗೆ ಹೋಗಿ ಬಟ್ಟೆ ಬದಲಿಸಿ ಒಂದು ನೈಟಿ ಧರಿಸಿ ಬರುತ್ತಾಳೆ ಎಂದು ಊಹಿಸಿರಲಿಲ್ಲ. ಬಿಗು ವಾತಾವರಣವನ್ನು ನಾನು ನಿರೀಕ್ಷಿಸಿದ್ದೆ. ಹಾಗಾಗಲಿಲ್ಲ. ಎಲ್ಲವೂ ಸಹಜವಾಗೇ ನಡೆಯುತ್ತಿದ್ದವು. ಹೊರಗಡೆ ವಾಹನಗಳು ಸಾಗುವ ಸದ್ದು ಸಹಜವಾಗಿತ್ತು. ಆಗಾಗ ಪಕ್ಕದ ರೂಮುಗಳಿಂದ ಕರೆಗಂಟೆ ಒತ್ತುವ ಕ್ರಿಯೆಗಳು ಎಂದಿನಂತೆ ನಡೆದಿದ್ದವು. ಎಲ್ಲೋ ಒಂದು ವಿಮಾನ ಸರಿದ ಸದ್ದು ಕೇಳಿಸುತ್ತಿತ್ತು. ನಾವಿದ್ದ ಮೂರನೆಯ ಮಹಡಿಯಿಂದ ಬೆಂಗಳೂರಿನ ದೃಶ್ಯಲೋಕ ತೆರೆದುಕೊಂಡಿತ್ತು. ಬಾಲ್ಕನಿಯಲ್ಲಿ ನಿಂತರೆ ಊರು ಸಂಜೆಯ ಭ್ರಮೆಗಳಿಗೆ ಸಿದ್ಧವಾಗುತ್ತಿರುವುದು ಕಾಣಿಸಿತು. ಇಲ್ಲಿ ನಾನು, ರಾಜಿ ಹೀಗೆ ಒಂದು ಕಡೆ ಬಂದು ನಿಂತಿರುವುದು ಯಾಕೆ ? ಈ ಭ್ರಮೆಯ ಒಂದು ಭಾಗವಾಗಿ ನಾವು ಇದ್ದೇವಾ ? ಅಥವಾ ಇದು ವಾಸ್ತವ ಬದುಕಿನ ಒಂದು ಭಾಗವೆ ? ಸಂಬಂಧಗಳು ಹೀಗೆ ಬೆಳೆಯುವುದು ನಮ್ಮಲ್ಲಿ ಮಾತ್ರವಾ ? ಅಥವಾ ಇದು ಒಂದು ಸಹಜ ಕ್ರಿಯೆಯಾ ? 

ನಾನು ತಂದ ಬಟ್ಟೆಗಳೂ ಕಡಿಮೆ. ಯಾರಿಗೂ ಗೊತ್ತಾಗಬಾರದಲ್ಲ ? ಅವಳೂ ಅಷ್ಟೆ. ಮುಖ ತೊಳೆದು ಬಂದು ಕೂತಳು. ನಾನು ಕಾಫಿ ತರಿಸಿದೆ. ಒಬ್ಬರ ಮುಖ ಒಬ್ಬರು ನೋಡುತ್ತ ಕುಳಿತೆವು.ಹೀಗೆ ನೋಡುವುದು ಕೂಡಾ ಅಸಾಧ್ಯ ಎಂದು ನಾನು ಅಂದುಕೊಂಡಿದ್ದೆಲ್ಲ ಸುಳ್ಳಾಯಿತು.ಅವಳು ನನ್ನನ್ನು ನೋಡುತ್ತ ಕಾಫಿ ಹೀರುತ್ತ ಹಾಗೆ ಕುಳಿತಿದ್ದಂತೆ ನನ್ನನ್ನು ಮುಜುಗರ ಆವರಿಸಿತು.

ಮನೇಲಿ ಎಲ್ಲ ಆರಾಮ ?  

ಯಾಕೋ ? ಆರಾಮು ಇರಬಾರದಾ ?

ಮಗ ಹ್ಯಾಗಿದಾನೆ ? 

ನಿಂಥರಾನೇ ಇದಾನೆ ಕಣೋ…. ಥೇಟ್ ನಿನ್ನದೇ ಹಟ.ಬಾ ಬಾ ಅಂತಿರ್‍ತಾನೆ. ಅವನ ಮಗ್ಗುಲಲ್ಲಿ ಮಲಗಿದರೆ ಎಷ್ಟು ಸುಖ ಗೊತ್ತ ?

ಅರೆ…. ಇಷ್ಟು ಬೇಗ ಹೀಗೆ … ರಾಜಿ ಮಾತಾಡ್ತಾ ಇದ್ದ ವಿಷಯ ಯಾವುದು ? ನನ್ನ ಮಗ್ಗುಲಲ್ಲಿ ಮಲಗಿಬಿಡುವ ಬಯಕೆ ಆಗ್ತಾ ಇದೆಯೆ ? ಇಷ್ಟಕ್ಕೂ ಅವಳು ಯಾವಾಗ ತಾನೇ ನನಗೆ ಸನಿಹ ಆಗಿದ್ದಳು ? ಅವಳು ನನ್ನ ಕಾಲೇಜು ಜೀವನಕ್ಕೆ ಒಂದು ಬಗೆಯ ಮಾದಕತೆಯನ್ನು ತಂದುಕೊಟ್ಟಿದ್ದಳು. ಕೇವಲ ಒಂದೇ ವರ್ಷ ಕಂಡವಳು ಉಳಿದೆರಡು ವರ್ಷಗಳ ಕಾಲವೂ ಅಪರಿಚಿತಳಾಗಿಯೇ ಇದ್ದಳು.ಒಂದೂ ನಗು ಇಲ್ಲ, ಒಂದೂ ಮಾತಿಲ್ಲ. ನಾನು ಕಾಲೇಜು ಬಿಟ್ಟ ಮೇಲೆಯೇ ಅವಳು ನನಗೆ ಹತ್ತಿರವಾದದ್ದು. ನಾಟಕದ ತಂಡದಲ್ಲಿ ಅವಳಿಲ್ಲದೆ ಹೋಗಿದ್ದರೆ ನಾನೂ ಹೀಗೆ ಇರುತ್ತಿರಲಿಲ್ಲ. ಇಲ್ಲಿ ಜೀವನದ ವಾಸ್ತವಿಕತೆಯನ್ನು ಅನುಭವಿಸ್ತಾ ಇರೋ ಈ ಕ್ಷಣದಲ್ಲಿ ಈ ಪ್ರಹಸನವನ್ನು ರೂಪಿಸ್ತಾ ಇರಲಿಲ್ಲ.ಆಮೇಲೆ ಅವಳು ಒಂದು ದಿನ ಅತ್ತು ಬಿಟ್ಟಿದ್ದಳು…. ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ಅವಳು – ನಾನು ಸಾವಿರಾರು ಜನರ ನಡುವೆ ಕೂತು ಹತ್ತಿರ ಆಗಿದ್ದೆವು. ಅವಳು ಅವತ್ತು ನನಗೆ ತನ್ನ ಕಥೆ ಹೇಳದೆ ಹೋಗಿದ್ದರೆ ನಾನು ಅವಳಿಗಾಗಲೀ ಅವಳು ನನಗಾಗಲೀ ಗೊತ್ತಾಗ್ತಾ ಇರಲಿಲ್ಲ.ಆ ನಿಲ್ದಾಣ ಈ ರೂಮಿಗೆ ಕೆಲವೇ ಹೆಜ್ಜೆಗಳ ದೂರದಲ್ಲಿದೆ.

ನಾವು ಅಲ್ಲಿಗೆ ಹೋಗೋಣವಾ ಎಂದು ಕೇಳಿದೆ.ವಿಷಯ ಬದಲಿಸಬೇಕಿತ್ತು.ಅವಳು ನೇರವಾಗಿ ಮಾತನಾಡಿ ಗೊಂದಲ ಹುಟ್ಟಿಸಿದ್ದಳು. ನನಗೆ ಬೇಕಾಗಿದ್ದು ರಾಜಿಯ ಸಾಮೀಪ್ಯ ಮಾತ್ರ ಅಲ್ಲ.ಅವಳ ಜೊತೆ ಕನಿಷ್ಟ ಪಕ್ಷ ಒಂದೆರಡು ಗಳಿಗೆಯಾದರೂ ಹದವಾಗಿ ನಡೆಯಬೇಕು.ಮತ್ತೆ ನಿಲ್ದಾಣಕ್ಕೆ. ಅಲ್ಲಿ ಅದೇ ಕುರ್ಚಿಗಳಲ್ಲಿ ಕೂತೆವು. ಏನೂ ಬದಲಾವಣೆ ಇಲ್ಲ. ಹಿಂದೆ ಇದ್ದ ಅಂಗಡಿಗಳ ರೂಪ ಬದಲಾಗಿದೆ. ಬಸ್ಸುಗಳು ಬದಲಾಗಿರಬಹುದು.ವೇಳಾಪಟ್ಟಿ ಬದಲಾಗಿರಬಹುದು.ಪಿಕ್‌ಪಾಕೆಟ್ ಮಾಡುವವರು ಬದಲಾಗಿರಬಹುದು.ಭಿಕ್ಷುಕರು, ಟೆಲಿಫೋನ್ ಆಪರೇಟರ್‌ಗಳು, ಜಾಹೀರಾತುಗಳು, ಕಾಯುವ ಜನ, ಲಗೇಜುಗಳ ಆಕಾರಗಳು, ಎಲ್ಲವೂ ಬದಲಾಗಿರಬಹುದು.ನನ್ನ ರಾಜಿ ಬದಲಾಗಿಲ್ಲ. ಅವಳ ಮುಖದಲ್ಲಿ ಅದೇ ಸ್ನೇಹದ ಕಳೆ. ಅದೇ ಪ್ರೀತಿಯ ಕರೆ. ಅವಳು ರಾಜಿ ಮಾತ್ರ ಅಲ್ಲ.. ನನ್ನ ಜೀವನದಲ್ಲಿ ಈಗಲೂ ಸಕ್ರಿಯವಾಗಿರುವ ಒಂದು ಮಹತ್ವದ ಪಾತ್ರ. ಇಲ್ಲಿ ಈಗ ನನ್ನ ಪಕ್ಕ ಕೂತಿದ್ದಾಳೆ. ಅವಳು ಮಾತಾಡದಿದ್ದರೂ ಪರವಾ ಇಲ್ಲ.ನನ್ನ ಕಡೆ ನೋಡದಿದ್ದರೂ ಪರವಾ ಇಲ್ಲ. ನನ್ನ ಜೊತೆಗಿದ್ದಾಳಲ್ಲ… ಅದೇ ಸಮಾಧಾನ. ಎಷ್ಟೋ ವರ್ಷಗಳ ಹಿಂದೆ ಅವಳನ್ನು ನೆನಪಿಸಿಕೊಂಡು ಒಂದು ಕವನ ಬರೆದಿದ್ದೆ… ಒಂದಷ್ಟು ಕಾಲಮಾನದ ಕೆಳಗೆ,ಬಹುಶಃ ಇಂಥದೇ ಮನೆಯೊಳಗೆ ಕಾಲ ಕಳೆದಿದ್ದೆವಲ್ಲಾ ಎಂಬ ಅನುಮಾನ… ಈಗ ಜೊತೆಗಿದ್ದೀರಲ್ಲಾ , ಅದೇ ಸಮಾಧಾನ…ರಾಜಿ ನನ್ನ ಜೊತೆ ಕೂತು ಈ ಜೀವನವನ್ನು ಅನುಭವಿಸ್ತಾ ಇದಾಳೆ ಅಂದರೆ ನನ್ನ ಬೆಲೆ ಎಷ್ಟು !! ಅವಳಿಗೆ ನಾನು ಎಷ್ಟೆಲ್ಲಾ ಕೃತಜ್ಞನಾಗಿರಬೇಕು…..

ಅವಳಿಗೆ ಏನು ಅನ್ನಿಸ್ತಾ ಇದೆಯೋ ಗೊತ್ತಾಗಲಿಲ್ಲ. ನಾನು ಸುಮ್ಮನೇ ಕುಳಿತೆ. ರಾಜಿಗಾಗಿ ಅವಳ ಹಳ್ಳಿಗೆ ಹೋಗಿದ್ದು ನೆನಪಾಯಿತು. ಅಲ್ಲಿ ಇರುವುದಾದರೂ ಏನು ? ಗೋಡೆಗಳು ಎಂದು ಹೇಳಬಹುದಾದ ನಾಲ್ಕು ಮಣ್ಣಿನ ಕಾಂಪೌಂಡುಗಳು, ಅಡಿಗೆ ಮನೆ ಎನ್ನಬಹುದಾದ ಒಂದು ಕಡಿಮಾಡು, ಒಂದು ಅಂಗಳ.ಅಲ್ಲಿ ದಾಸವಾಳ, ಮಲ್ಲಿಗೆ ಮತ್ತು ಅಬ್ಬಲಿಗೆ ಹೂವುಗಳ ರಾಶಿ. ಎದುರಿಗೆ ಏರಿ ಹತ್ತಿದರೆ ಒಂದು ಸಣ್ಣ ದೇವಸ್ಥಾನ. ರಾಜಿಯ ಅಜ್ಜ ಅದನ್ನು ಕಟ್ಟಿದ್ದು. ಅದಕ್ಕೆ ಇರುವುದು ಒಂದೇ ಪ್ರಾಂಗಣ.ಅಲ್ಲಿ ನಾಲ್ಕು ಕಂಭಗಳು. ಗಾರೆ ಹಾಕಿದ ಕಟ್ಟೆಯ ಮೇಲೆ ಕುಳಿತು ನಾನು ರಾಜಿ ಹಾಡಿದ್ದೇನು… ಮಾತಾಡಿದ್ದೇನು.. ಅವಳ ತಂಗಿ ನನಗೆ ಪ್ರಶ್ನೆ ಕೇಳಿದ್ದೇನು…. ಅವಳ ಅಮ್ಮ ನನಗೆ ಕಾಫಿ ಕೊಟ್ಟಿದ್ದೇನು… ವಿದ್ಯುದ್ದೀಪ ಇಲ್ಲದ, ಕ್ಯಾಲೆಂಡರ್ ಇಲ್ಲದ, ಗಡಿಯಾರ ಇರದ, ದಿನಪತ್ರಿಕೆ ಬರದ, ಆ ಮನೆಯಲ್ಲಿ ನಾನು ಕಳೆದ ನಾಲ್ಕು ದಿನಗಳನ್ನು ನಾನು ಮರೆಯಲಾಗಿಯೇ ಇಲ್ಲ. ಇಲ್ಲಿ ಈ ಕಾಂಕ್ರೀಟು ಕಾಡಿನಲ್ಲಿ ಹತ್ತು ವರ್ಷ ಕಳೆದ ಮೇಲೂ ನನಗೆ ಆ ದಿನಗಳ ನೆನಪಾದರೆ ಸಾಕು… ತಟಕ್ಕನೆ ವಿಚಿತ್ರ ಭಾವಜೀವಿಯಾಗಿಬಿಡುತ್ತೇನೆ. ಆ ಮನೆಯ ಅಂಗಳದಲ್ಲಿ ಚಾಪೆ ಹಾಕಿ ಕೂತು ಆಕಾಶ ನೋಡಿದರೆ ಸಾಕು.. ಅಬ್ಬ… ಎಷ್ಟೊಂದು ನಕ್ಷತ್ರಗಳು.. ನಾನು ರಾಜಿಯ ಮನೆಯಲ್ಲಿ ಮಾತ್ರ ಅಷ್ಟೊಂದು ನಕ್ಷತ್ರಗಳನ್ನು ಕಂಡದ್ದು. ಆ ಚಳಿಯಲ್ಲಿ ಕಂಬಳಿ ಹೊದದು ಕೂತರೆ ಸಾಕು, ನನಗೆ ಏನೂ ಬೇಕಾಗಿರಲಿಲ್ಲ. ನನ್ನ ಓದು, ಬರೆಹ, ಕೆಲಸ, ಸಂಸಾರ, ಸಂಬಳ, – ಯಾವುದೂ ಅದಕ್ಕೆ ಸಮವಾಗಿ ಬಂದಿಲ್ಲ.

ಬಸ್ಸುಗಳು ಬಂದು ಹೋಗುತ್ತಿದ್ದವು. ಪ್ರತಿಯೊಂದು ಬಸ್ಸಿಗೂ ಜನ ಕಾಯ್ತಾ  ಇದ್ದರು. ಹತ್ತುವ ಇಳಿಯುವ ಭರಾಟೆ. ಸೀಟಿ. ಕೂಗು. ಗದ್ದಲ. ಟಿವಿಯಿಂದ ಅರ್ಥವಾಗದ ಹಾಡು, ಕುಣಿತ. ಅಂಥ ಯಾಂತ್ರಿಕ ಸನ್ನಿವೇಶದಲ್ಲೂ ನನಗೆ ನೆನಪಾಗಿದ್ದು ರಾಜಿಯ ಮನೆ, ಅಮ್ಮ, ತಂಗಿ ! ರಾಜಿ ಈಗಲೂ ಸುಮ್ಮನೇ ಕೂತಿದ್ದಾಳೆ.ಬಸ್ಸನ್ನು, ಜನರನ್ನು ನೋಡ್ತಾ ಇದ್ದಾಳೆ. ಏನೆಲ್ಲ ದಿನಚರಿಯನ್ನು ನನಗಾಗಿ ನಿರಾಕರಿಸಿ ಬಂದಿದ್ದಾಳೆ.ಗಂಡನ ಜೊತೆ ಎಲ್ಲಿಗಾದರೂ ಹೋಗುವುದಿತ್ತಾ ? ಮಗನ ಹೋಮ್‌ವರ್ಕ್‌ಗೆ ಸಹಾಯ ಮಾಡುವುದಿತ್ತ ?ಸುಮ್ಮನೆ ಮಲಗಿಬಿಡುವುದಿತ್ತ? ನನಗೆ ಅವಳ ದಿನಚರಿ ಗೊತ್ತಿಲ್ಲ. ಆದರೆ ಅವಳು ದಿನಾ ರಾತ್ರಿ ತಡವಾಗಿ ಮಲಗ್ತಾಳೆ ಅಂತ ಗೊತ್ತು. ಅವಳೇ ಒಂದಿನ ಹೇಳಿದ್ದಳು ತಾನು ದಿನಾ ಒಂದಲ್ಲಾ ಒಂದು ಕಾದಂಬರಿ ಕೈಯಲ್ಲಿ ಹಿಡಿದೇ ಮಲಗ್ತೇನೆ ಅಂತ.

ರಾತ್ರಿ ಆಗ್ತಾ ಬಂತು ಕಣೋ ಅಂದಳು ಹಠಾತ್ತನೆ. ನಾನು ಮಾತನಾಡದೆ ಎದ್ದೆ. ಇಬ್ಬರೂ ನಡೆದೆವು. ಒಬ್ಬರ ಕೈ ಇನ್ನೊಬ್ಬರಿಗೆ ತಾಗುತ್ತಿತ್ತು. ನಾನೇ ಅವಳ ಕೈ ಹಿಡಿದುಕೊಂಡೆ. ಎಷ್ಟು ಒರಟಾಗಿಹೋಗಿದೆ…ಸೀಮೆಸುಣ್ಣ ಹಿಡಿದು ಸದಾ ಮ್ಯಾನೇಜ್‌ಮೆಂಟ್ ಪಾಠ ಹೇಳುತ್ತಾಳೆ. ಆದರೆ ಎಂಥ ರೋಮಾಂಚನ … ಬಹುಶಃ ನನ್ನ ಒಳಗೆ ಇದ್ದ  ಕಾಮಸೂರ್ಯ ಎಚ್ಚರಗೊಂಡಿದ್ದ. ಅದು ನನ್ನ ಉದ್ದೇಶವೇನೂ ಆಗಿರಲಿಲ್ಲ. ಆದರೆ ನಾನು ಸಂಸಾರಸ್ಥ. ಇವಳು ಪರಸ್ತ್ರೀ ಅನ್ನೋ ಭಾವ ಎಲ್ಲೋ ಕುಟುಕುತ್ತಾ ಇರುತ್ತೆ. ಆದರೆ ರಾಜಿ ನನ್ನನ್ನು ನಂಬಿ ಬಂದಿದ್ದಾಳೆ. ಅವಳಿಂದ ನನಗೆ ಬೇಕಾಗಿರುವುದು ಒಂದು ಮುತ್ತು ಮಾತ್ರ. 

ಲಾಡ್ಜಿಗೆ ಹೊಂದಿಕೊಂಡೇ ಇದ್ದ ಹೋಟೆಲಿನಲ್ಲಿ ಊಟ ಮುಗಿಸುವಾಗಲೂ ಅಷ್ಟೆ. ಮೌನ. ಎದೆಯ ಪ್ರಾಂಗಣದಲ್ಲಿ ನಡುಗಂಭ ಮೌನ, ಗಾಢಾಂಧಕಾರ ಅಂತ ನಾನೇ ಅವತ್ತು ದೇವಸ್ಥಾನದ ನೆನಪಿನಲ್ಲಿ ಬರೆದಿದ್ದೆ…..

ರೂಮಿಗೆ ಬಂದು ಬಾಗಿಲು ಹಾಕಿಕೊಂಡಾಗ ಒಂಭತ್ತು ದಾಟಿತ್ತು. ಟಿವಿಯಲ್ಲಿ ವಾರ್ತೆ, ಸಿನಿಮಾಗಳ ಗೋಜಲು ಮುಂದುವರೆದಿತ್ತು. ಒಂದೊಂದೇ ಚಾನೆಲನ್ನು ಬದಲಾಯಿಸುತ್ತಾ ಕುಳಿತೆ. ರಾಜಿಯೂ ಬಂದು ನನ್ನ ಪಕ್ಕ ಕೂತಳು. ನನ್ನ ಕೈಯನ್ನು ಹಿಡಿದು ಕುರ್ಚಿಯ ತೋಳಿನ ಮೇಲೆ ಇಟ್ಟುಕೊಂಡಳು.

ರವಿ, ಇವತ್ತು ಒಳ್ಳೆಯ ದಿನ ಕಣೋ. ನಾನು ನಿನ್ನ ಜೊತೆ ಹೀಗೆ ಕೈಗೆ ಕೈ ಜೋಡಿಸಿ ಕೂತುಗೊಳ್ಳಬೇಕು ಅಂತ ಎಂದೋ ಅಂದುಕೊಂಡಿದ್ದೆ. ನಾನು ಇಲ್ಲಿ ಕುಳಿತಿರೋದು ನನ್ನ ಒಬ್ಬ ಅತ್ಯಂತ ಆಪ್ತಗೆಳೆಯನ ಜೊತೆಗೆ ಅನ್ನೋ ಭಾವ ಇವಾಗ ಹ್ಯಾಗೆ ಖುಷಿ ಕೊಡ್ತಾ ಇದೆ ಗೊತ್ತಾ ? ರಾಜಿ ಮಾತಾಡ್ತಾ ಇದ್ದಳು. ಅವಳ ಮಾತುಗಳಲ್ಲಿ ಮೊದಲಿನ ಸಂದೇಶಗಳಿರಲಿಲ್ಲ. ಇವಳೇ ನನ್ನ ಪ್ರಿಯ ರಾಜಿ ಅನ್ನೋ ಭಾವ ಮತ್ತೆ ಮತ್ತೆ ನನ್ನನ್ನು ಸೆಳೆಯತೊಡಗಿತು. ಇವಳ ಹತ್ತಿರ ಒಂದು ಮುತ್ತು ಕೇಳುವುದು ತಪ್ಪಲ್ಲ; ಇವಳ ಭುಜವನ್ನು ತಟ್ಟಿ ಕಣ್ಣಿನಲ್ಲಿ ಕಣ್ಣಿಟ್ಟು ನೋಡುವುದು ತಪ್ಪಲ್ಲ; ಇವಳ ತಲೆಗೂದಲನ್ನು ಮುಟ್ಟಿ …. ಯಾವುದೂ ತಪ್ಪಲ್ಲವಾ ? ಪ್ರಶ್ನೆಗಳು ಹುಟ್ಟಿಕೊಳ್ಳುತ್ತಲೇ ಇದ್ದವು. ಈ ಕಥೆಯ ಆರಂಭದಿಂದಲೂ ಪ್ರಶ್ನೆಗಳೇ ! ಉತ್ತರ ನನ್ನಲ್ಲಿ ಇದ್ದರೆ ತಾನೆ ? ರಾಜಿ ಮಾತನಾಡುತ್ತಿದ್ದಾಳೆ. 

ನಾನು ಬರಲ್ಲ ಅಂತ ನೀನು ಅಂದ್ಕೊಂಡಿರಬೇಕು  ಅಲ್ವಾ ? ನನಗೂ ನಿನ್ನ ಹಾಗೇ ಕನಸುಗಳಿದ್ದವು ಕಣೋ.ನಾನೂ ನಿನ್ನ ಥರಾನೇ.ನಿನಗೆ ನನ್ನ ಮೇಲೆ ಇರೋ ಪ್ರೀತಿಯಷ್ಟೇ ಪ್ರೀತಿ ನನಗೂ ನಿನ್ನ ಮೇಲೆ ಇದೆ. ಮೊನ್ನೆ ಏನಾಯ್ತು ಗೊತ್ತ.. ನಾನು ಹೀಗೇ ನನ್ನ ಗಂಡನ ಪಕ್ಕ ಕೈಗೆ ಕೈ ಜೋಡಿಸಿ ಕೂತಿದ್ದೆ. ಎಷ್ಟಂದರೂ  ನನ್ನ ಜೀವನಸಂಗಾತಿ. ಏನೇನೋ ಮಾತಾಡ್ತಾ ಇದ್ದ. ಮುಂದಿನ ವೃತ್ತಿಜೀವನದ ಬಗ್ಗೆ ಚರ್ಚೆಮಾಡಿದೆವು. ನನ್ನ ಕಾಲೇಜು ಜೀವನದ ಬಗ್ಗೆ ಹೇಳಿದೆ. ಎಷ್ಟೊಂದು ಬದಲಾಗಿದೆ ಈ ಬದುಕು.. ಈಗಿನ ಕಾಲದ ಹುಡುಗರು ಟೀಚರಿಗೇ ಪ್ರೇಮ ಪತ್ರ ರವಾನಿಸ್ತಾರೆ. ನಮ್ಮ ಕಾಲೇಜಿನಲ್ಲೂ ಹೀಗೇ ಆಯ್ತು ಅಂದೆ.ನನ್ನ ಪತಿರಾಯ ನಕ್ಕುಬಿಟ್ಟ. ಎಂಥ ಒಳ್ಳೆಯ ಮನಸ್ಸು ನನ್ನವರದು ಗೊತ್ತ? ಭಾನುವಾರ ಆದರೆ ಸಾಕು, ಅಡಿಗೆ ಮಾಡಲು ಹಾಜರ್. ಎಷ್ಟೋ ಸಲ ನನಗೆ ಇಂಥ ಜೀವನ ಎಷ್ಟು ಆರಾಮು ಅನ್ನಿಸಿಬಿಡುತ್ತೆ. ಹೀಗೆ ಗಂಡ, ಮಕ್ಕಳು, ಮನೆ ಅಂತ ಇದ್ದರೆ ಬೇರೆ ಏನು ಬೇಕು ಅಂತ ಅನ್ನಿಸ್ತಾ ಇರುತ್ತೆ… ಅದಕ್ಕೇ ನಿನಗೆ ಫೋನ್ ಮಾಡ್ತಾ ಇರ್‍ತೇನೆ. ಏನು ಬೇಕು ಅಂತ ನನಗೆ ಗೊತ್ತಿಲ್ಲ ರವಿ… ಆದರೆ ನೀನು ಹೀಗೆ ಪಕ್ಕ ಕೂತಿದ್ದರೆ ಸಾಕು, ನನಗೆ ನಾನು ಕಳೆದುಕೊಂಡಿರೋದು ಸಿಗುತ್ತೆ ಅನ್ನೋ ಭಾವ ಬಂದುಬಿಡುತ್ತೆ…

ರವಿ, ನನ್ನ ಮನೆಗೆ ಬಾರೋ. ಮಾತಾಡೋ. ನಿನಗೆ ಯಾರೂ ಏನೂ ಕೇಳಲ್ಲ ಕಣೋ.ನನ್ನ ಮಗನಿಗೆ ಚೆಸ್ ಹೇಳಿಕೊಡೋ. ನೀನು ಫೋನ್ ಮಾಡ್ತಾ ಇರೋವಾಗೆಲ್ಲಾ ನನಗೆ ತೀವ್ರವಾಗಿ ಅನ್ನಿಸೋದೇನು ಹೇಳ್ಲಾ ? ಈ ರವಿ ನನ್ನ ಮನೇಲಿ ಇರಬೇಕು. ದಿನಾಲೂ ನಾನು ರವಿ ಜೊತೆ ಹರಟುತ್ತಾ ಕೂರಬೇಕು. ನನ್ನ ಗಂಡ ನನ್ನ ಪಕ್ಕ ಕೂತು ನಗುತ್ತಾ ನನ್ನ ಪ್ರತಿಕ್ರಿಯೆಯನ್ನು ಗಮನಿಸಬೇಕು. ನೀನಿಲ್ಲದೆ ಇದ್ರೆ ನಾನು ಖುಷಿಯಾಗಿ ಇರಲ್ಲ ಅಂತಲ್ಲ…. ನೀನಿಲ್ಲದಿದ್ರೆ ನಾನು ಮಂಕಾಗಿರ್‍ತೇನೆ ಅಂತಲೂ ಅಲ್ಲ.  ಏನೇನೋ ಹೇಳ್ತಾ ಇದೀನಿ ಅಲ್ವಾ ? ಬಿಡು.. ನೀನೇ ಮಾತಾಡು ರವಿ.. ನನಗೆ ಒಂಥರಾ ಕನ್‌ಫ್ಯೂಸ್ ಆಗ್ತಾ ಇದೆ….

ರಾಜಿ ಮಾತು ನಿಲ್ಲಿಸಿದಾಗ ಹನ್ನೊಂದು ಘಂಟೆ. ನಾನು ಗಡಿಯಾರದ ಸೆಕೆಂಡಿನ ಕೆಂಪು ಮುಳ್ಳು ತಿರುಗೋದನ್ನು ನೋಡುತ್ತಾ ಅವಳ ಮಾತುಗಳನ್ನು ಕೇಳ್ತಾ ಕೂತಿದ್ದೆ. ಹೀಗೆ ಹಠಾತ್ತಾಗಿ ಅವಳು ಮಾತು ಮುಗಿಸಿದ್ದರಿಂದ ನನಗೆ ಏನು ಹೇಳಬೇಕು ಅಂತ ತೋಚಲಿಲ್ಲ. ಅವಳ ಕೈಬೆರಳುಗಳನ್ನು ನಯವಾಗಿ ಒತ್ತುತ್ತ ಕೂತುಬಿಟ್ಟೆ. ನಾನು ಮಾತನಾಡುವುದು ಏನೂ ಉಳಿದಿಲ್ಲ. ಬಾ ಮಲಗೋಣ ಎಂದೆ. ಮಂದ ಬೆಳಕಿನ ದೀಪವನ್ನೂ ಆರಿಸಿದರೆ ಹೊರಗಡೆಯಿಂದ ಸೋಡಿಯಂ ಬೆಳಕಿನ ದಾಳಿ. ಅದೂ ಒಂದು ರೀತಿ ಮುಸ್ಸಂಜೆಯನ್ನು ನೆನಪಿಗೆ ತರುತ್ತಿತ್ತು. ನಗರದಮುಸ್ಸಂಜೆ ಅಂದರೆ ಇನ್ನು ಹೇಗಿರಬೇಕು ? ನಾನು ರಾಜಿಯ ದೇಹಕ್ಕೆ ಆತುಗೊಳ್ಳಲಿಲ್ಲ. ಅವಳ ಅಂಗೈಯನ್ನು ಭದ್ರವಾಗಿ ಹಿಡಿದೆ. ಅವಳ ಕಣ್ಣುಗಳು ಹೊಳೆಯುತ್ತಿದ್ದವು. ನನ್ನನ್ನು ಅವಳು ಒಂದೇ ಸಮ ನೋಡುತ್ತಿದ್ದಳು. ರಾಜಿಗೆ ನಾನು ಹೇಳುವುದಾದರೂ ಏನು ಎಂದು ಮತ್ತೆ ಯೋಚಿಸಿದೆ. ಹೊಳೆಯಲಿಲ್ಲ. ಕೇಳಿಯೇ ಬಿಡಲೆ ಒಂದು ಮುತ್ತು… ನನಗೆ ರಾಜಿ ಒಂದು ಮುತ್ತು ಕೊಡುವ ಕ್ಷಣ ಹತ್ತಿರ ಬಂತೆ ? ಓಹ್, ಇದು ಎಂಥ ಕಷ್ಟದ ಕೆಲಸ ಮುತ್ತು ಕೇಳುವುದು. ಅವಳು ಕೊಡ್ತಾಳ? 

ರಾಜಿಯ ದೇಹ,ಮನಸ್ಸು ಎಲ್ಲವೂ ಈಗ ನನ್ನ ಜೊತೆಗೆ.ನಾನು ರಾಜಿಯನ್ನು ಈಗಂತೂ ಪಡೆದಿದ್ದೇನೆ. ಅವಳು ಎಂಥ ಹೃದಯವಂತೆ. ಮಗನನ್ನು,ಗಂಡನನ್ನು ಬಿಟ್ಟು ಹೀಗೆ ನನ್ನ ಜೊತೆ ಮಲಗಿದ್ದಾಳೆ.ಮದುವೆಯಾದ ಮೇಲೆ ಹೀಗೆ ಆಗಬಹುದೆ? ಗಂಡಿಗೆ ಸರಿ, ಹೆಣ್ಣಿಗೆ ? ಇದು ತರಾ ನೈತಿಕ ಪ್ರಶ್ನೆ. ತಲೆ ಕೆಡಿಸುವ ಪ್ರಶ್ನೆ. ನನಗೆ ಈ ಚರ್ಚೆ ಬೇಕಿಲ್ಲ. ನನಗೆ ಈ ರಿವಾಜುಗಳು ಬೇಕಿಲ್ಲ. ನನಗೆ ನನ್ನ ರಾಜಿ ಒಬ್ಬಳೇ ಸಾಕು. ಇಲ್ಲಿ, ಈ ಹೊತ್ತಿನಲ್ಲಿ ಅವಳು ಲಿಬೆರೇಟ್ ಸ್ಥಿತಿಯಲ್ಲಿ ನಿರಾಳವಾಗಿ ಕಾಲು ಚಾಚಿ ಮಲಗಿದ್ದಾಳೆ. ಅವಳ ಕೂದಲುಗಳು ದಿಂಬಿನ ತುಂಬಾ ಹರಡಿವೆ. ಅವಳ ಉಸಿರು ನನಗೆ ಕೇಳಿಸುತ್ತಿದೆ. ರಾಜಿ ನನ್ನ ಕೈಯನ್ನು ಗಟ್ಟಿಯಾಗಿ ಹಿಡಿದಿದ್ದಾಳೆ. ಅವಳು ನನ್ನ ಮಾನಸ ಪತ್ನಿಯೆ? ಅಥವಾ ನಾನು ? ಗೊತ್ತಿಲ್ಲ. ಹೀಗೆ ಇರುವುದು ಎಂದರೆ ಯಾವುದಾದರೂ ಒಂದು ಬಗೆಯಲ್ಲಿ  ಪತಿ-ಪತ್ನಿ ಎಂದೇ ಅರ್ಥವೆ? ಗೊತ್ತಿಲ್ಲ. ಸ್ನೇಹವೂ ಒಂದು ಸಂಬಂಧವಲ್ಲವೆ ? ಗೊತ್ತಿಲ್ಲ. ನನಗೆ ಗೆಳೆಯರು ಯಾರು ಗೆಳತಿಯರು ಯಾರು ಗೊತ್ತಿಲ್ಲ. ಇಲ್ಲಿ ರಾಜಿ ನನ್ನ ಕೈ ಹಿಡಿದು ಮಲಗಿದ್ದಾಳೆ ಅಷ್ಟೆ. 

ನಾನು ರಾಜಿ ಜೊತೆ ತೇಲಿ ಹೋಗುತ್ತಿದ್ದೇನೆ. ಹಾಗೆಯೇ ಕಿಟಕಿಯಿಂದ ಹಾರಿ ಮೆಜೆಸ್ಟಿಕ್ ನಿಲ್ದಾಣವನ್ನು ದಾಟಿ ಹೋಗುತ್ತಿದ್ದೇವೆ. ಅಲ್ಲಿ ಈಗ ಬಟಾಬಯಲು. ನಾನು ಅನಾಥನಲ್ಲ. ರಾಜಿ ಇದ್ದಾಳೆ. ನಾನು ದಿಕ್ಕು ತಪ್ಪಿದವನಲ್ಲ. ನಾನು ಅಲೆಮಾರಿ ಹುಡುಗನಲ್ಲ. ನಾನು ಭಾವುಕತೆಯನ್ನು ಹೊದ್ದುಕೊಂಡು ಮಲಗಿದ ಒಂಟಿಯಲ್ಲ. ಇಲ್ಲಿದ್ದಾಳೆ ರಾಜಿ. ಅವಳು ನನ್ನ ದಾರಿಯಲ್ಲಿ ಜೊತೆಗೂಡಿದ್ದಾಳೆ.

ದಾರಿ ಹಠಾತ್ತಾಗಿ ಕಿರಿದಾಗಿದೆ. ಮುಂದೇನೂ ಕಾಣುತ್ತಿಲ್ಲ. ಉಸಿರು ಯಾಕೋ ಬಿಸಿ. ಮುಖದ ಮೇಲೆಲ್ಲ ಏನೋ ನವಿರಾಗಿ ಹಾಸಿದಂತೆ ಭಾಸವಾಗುತ್ತಿದೆ.

ರಾಜಿ ನನ್ನ ಹಣೆಗೆ ಒಂದು ಮುತ್ತು ಕೊಡುತ್ತಿದ್ದಾಳೆ. ಸೂರ್ಯನ ಕಿರಣಗಳು ಅವಳ ಬೆನ್ನ ಹಿಂದೆ ಅಡಗಿವೆ. ಅವಳ ಮುಖದಿಂದ ಯಾವುದೋ ಸುಗಂಧದ ಪರಿಮಳ ಸೂಸುತ್ತಿದೆ. ಅದಾಗಲೇ ಸ್ನಾನ ಮಾಡಿ ಸೀರೆ ಉಟ್ಟಿದ್ದಾಳೆ. ಕೂದಲುಗಳು ನನ್ನ ಮುಖದ ಮೇಲೆ ಆರಾಮಾಗಿ ಹರಡಿವೆ. 

ರಾಜಿ ಬಾಗಿಲು ತೆರೆದು ಹೊರಟಿದ್ದಾಳೆ.

One thought on “ಒಂದು ಮುತ್ತಿನ ಕಥೆ

Leave a Reply

Your email address will not be published. Required fields are marked *