ಕಥೆ: ಜೀತ [೨೦೧೦]

ಹೆಗ್ಗಡದೇವನಕೋಟೆಯಡೀ ಬಕಾಸುರನಂತೆ ತಿಂದ ಆ ಕತ್ತಲಿನಲ್ಲಿ ಗೆಸ್ಟ್‌ಹೌಸ್‌ನ ಕಿರುದಾರಿಯನ್ನು ಹುಡುಕುವುದು ಕಷ್ಟವೇನಲ್ಲ. ಎಲ್ಲರ ಹತ್ರಾನೂ ಮೊಬೈಲ್ ಇದೆಯಲ್ಲ! ರಮೇಶನ ನೋಕಿಯಾ ಮೊಬೈಲಿಂದ ಸೂಸಿದ ಬೆಳಕಿನಲ್ಲಿ ಮಣ್ಣುಹಾದಿ ಸ್ಪಷ್ಟವಾಗಿ ಗೋಚರವಾಗುತ್ತಿದ್ದಂತೆ ನಮ್ಮ ಕಾಟೇಜೂ ಬಂತು ಎಂದು ರಮೇಶ ಘೋಷಿಸಿದ. ಎಡಗಡೆ ನೀವು, ಪ್ರಸಾದ್ ಸರ್ ಉಳೀರಿ ಸರ್, ಬಲಗಡೆ ರಾಬಿನ್ ಮತ್ತು ಡಕೋಡ ಎಂದು ಮೊದಲೇ ಅಲಾಟ್ ಮಾಡಿದ ಹಾಗೆ ಸೂಚಿಸಿದ ರಮೇಶ.

ತನ್ನ ವಿಚಿತ್ರ ಆಕ್ಸೆಂಟಿನ ಇಂಗ್ಲಿಶಿನಲ್ಲಿ ಡಕೋಡನನ್ನು ಸಮಾ ದಬಾಯಿಸಿದ ರಾಬಿನ್ ಟೆಂಪೋದಿಂದ ಕ್ಯಾಮೆರಾ ಮತ್ತು ಅದರ ಜೊತೆಗಿರೋ ಎಲ್ಲ ಪರಿಕರಗಳನ್ನು ಸರಸರ ಇಳಿಸತೊಡಗಿದ. ಡ್ರೈವರ್ ಮುಯಪ್ಪನ್ ಸಹಾಯಕ್ಕೆ ಮುಂದಾದರೂ ನೋ ಅಂತ ತಾನೇ ಎಲ್ಲ ಕಿಟ್‌ಗಳನ್ನೂ ರೂಮಿಗೆ ಸಾಗಿಸಿದ ರಾಬಿನ್ ಜಕ್ಕೂ ಎಕ್ಸೆಂಟ್ರಿಕ್ ಕ್ಯಾರಕ್ಟರ್ ಇರಬೇಕು…

ಎಷ್ಟೋ ದಿನಗಳಿಂದ ಬಳಸದಂತೆ ಕಂಡ ಆ ರೂಮಿನಲ್ಲಿ ಎರಡು ಕಾಟುಗಳು ನಿರ್ಲಿಪ್ತವಾಗಿ ಬಿದ್ದಿದ್ದವು. ಬಾತ್‌ರೂಮಿನಲ್ಲಿ ನಿಂತ ನೀರಿನಲ್ಲಿ ಹುಟ್ಟುವ ಹುಳಗಳು ಹರಿದಾಡುತ್ತಿದ್ದವು. ಇಂಥ ರೂಮಿನಲ್ಲಿ ಐದು ದಿನ ಇರಬೇಕು. ದಿನಾಲೂ ಬೆಳಗಿಂದ ಸಂಜೆವರೆಗೆ ಸಾರಾ ಜೊತೆಗೆ ಓಡಾಡಿ ಎಲ್ಲ ಸಂದರ್ಶನಗಳನ್ನೂ ಇಂಗ್ಲಿಶಿಗೆ ರೂಪಾಂತರಿಸಬೇಕು.

ಪ್ರಸಾದ್ ಸರ್ ತಮ್ಮ ಪುಟ್ಟ ಕೈಚೀಲವನ್ನು ಮಂಚದ ಮೇಲಿಟ್ಟು ನೋಡಿ, ಸ್ವಲ್ಪ ಹುಡುಗರ ಹತ್ರ ಹೋಗಿ ಬರ್‍ತೇನೆ, ನಾಳೆಗೆ ತಯಾರಿ ಮಾಡ್ಬೇಕು ಎಂದು ಹೊರಟರು. ಐವತ್ತು ದಾಟದ ಈ ಮನುಷ್ಯ ಈ ಹುಡುಗರನ್ನು ಹೇಗೆ ಸಂಘಟಿಸಿದ, ಜೀತ ಸಮಸ್ಯೆ ವಿರುದ್ಧ ದಯೆತ್ತುವಂತೆ ಮಾಡಿದ, ಜೀತದಾಳುಗಳನ್ನು ಬಿಡುಗಡೆಗೊಳಿಸಿದ ಎಂಬೆಲ್ಲ ಪ್ರಶ್ನೆಗಳಿಗೆ ಉತ್ತರ ಸಿಗಲಿದೆಯೆ?

ಗುಂಯ್‌ಗುಡುವ ಸೊಳ್ಳೆಗಳನ್ನು ಹೆದರಿಸಲು ಫ್ಯಾನ್ ಹಾಕಿ ಕೂರಲೂ ಮನಸ್ಸಾಗಲಿಲ್ಲ. ಹೊರಗಿನ ಜೀರುಂಡೆಗಳ ಸದ್ದೇ ಎಷ್ಟೊಂದು ಖುಷಿ ಕೊಡುತ್ತೆ. ಬೆಂಗಳೂರಿನಲ್ಲಿ ಸಿಗಲಾರದ ಸುಖವನ್ಯಾಕೆ ಫ್ಯಾಗೆ ಬಲಿ ಹಾಕಬೇಕು ? ಹಾಗೇ ಹಾಸಿಗೆಯಲ್ಲಿ ಒರಗಿದವಗೆ ಹಠಾತ್ತನೆ ಇಲ್ಲಿಗೆ ಬಂದು ಐದಾರು ದಿನ ಕಳೆಯುವ ಅವಕಾಶ ಒದಗಿದ್ದಾದರೂ ಹ್ಯಾಗೆ ಎಂದು ಅಚ್ಚರಿಯಾಗತೊಡಗಿತು.

ದಾವಣಗೆರೆಯಿಂದ ಪತ್ರಕರ್ತ ಮಿತ್ರ ತಿಮ್ಮಪ್ಪ ಈ ಲಿಂಕ್ ಕೊಡದೇ ಇದ್ದಿದ್ದರೆ ನಾಲ್ಲಿ ಬರ್‍ತಾನೇ ಇರ್‍ಲಿಲ್ಲ. ನಂಗೆ ಟೈಮಿಲ್ಲ. ಹೇಗೂ ನೀನು ನಿರುದ್ಯೋಗಿ. ಟ್ರಾನ್ಸ್‌ಲೇಶನ್ ಗೊತ್ತು. ಅಮೆರಿಕಾದ ಮಟ್ಟದಲ್ಲೇ ದುಡ್ಡು ಕೊಡ್ತಾರೆ. ಯಾಕೆ ನಾಲ್ಕು ದಿನ ಮಜಾ ಮಾಡಿ ಬರಬಾರದು? ಎಂದು ತಿಮ್ಮಪ್ಪ ಹೇಳಿದ ಕೂಡಲೇ ನಾನು ಒಪ್ಪಿಕೊಂಡೆನಲ್ಲ… ದುಡ್ಡಿಗಾ… ಆಸಕ್ತಿಗಾ…. ಗೊತ್ತಿಲ್ಲ. ದಿನಕ್ಕೆ ಏಳೂವರೆ ಸಾವಿರ ದೊಡ್ಡದೇ. ಇಡೀ ವರ್ಷದ ನನ್ನ ಸಂಪಾದನೆಯೇ ಇಪ್ಪತ್ತು ಸಾವಿರ ದಾಟಿಲ್ಲ. ಯಾಕಾಗಬಾರದು ಅಂತ ತಾನೇ ಒಳಮನಸ್ಸು ಹೇಳಿದ್ದು? ಇನ್ನು ಈ ಸಂಘಟನೆ ಏನು ಎಂತು ಅಂತ ವಿಚಾರಿಸಿಕೊಂಡಂತೆಯೂ ಆಯ್ತು ಎಂಬ ದುರುಳ ಚಿಂತನೆ.

ಕರೆಂಟು ಇನ್ನೂ ಬಂದಿಲ್ಲ. ಅತ್ತ ರಾಬಿನ್ ಏನೋ ಗಲಾಟೆ ಮಾಡ್ತಿದಾನೆ. ಡಕೋಡನ ಸದ್ದಿಲ್ಲ. ಸುಮ್ಮನೆ ಹೋಗಿ ನೋಡಿದರೆ ತಲೆಗೆ ಬ್ಯಾಟರಿ ಕಟ್ಟಿಕೊಂಡು ಏನೇನೋ ವಿಚಿತ್ರ ಸಾಧನಗಳನ್ನು ಬಿಚ್ಚಿ ಚೆಕ್ ಮಾಡ್ತಿದಾನೆ. ರೂಮಿಡೀ ಸಿಗರೇಟು ಹೊಗೆ. ತಾನು ಮಾಡುವುದೇನೂ ಇಲ್ಲವೆಂಬಂತೆ ನಿಂತಿರೋ ಡಕೋಡ. ಸ್ಕೂಬಿ ಡೂ ಕಾಮಿಕ್ಸ್‌ನ ಹೀರೋ ಥರ ಜೂಲು ಕೂದಲು ಬಿಟ್ಟ ಡಕೋಡ ಇನ್ನೂ ಹದಿನೈದರ ಹರೆಯದವ. ಆದರೆ ನನಗಿಂತ ಎತ್ತರ ಬೆಳೆದಿದ್ದಾನೆ. ದೇಶ ತಿಳ್ಕೋಳೋದಕ್ಕೆ ಬಂದಿದಾನಂತೆ.

ಮತ್ತೆ ರೂಮಿಗೆ ಬಂದು ಒರಗಿದರೆ ….

ನಿನ್ನೆ ಪ್ರಸಾದ್ ಸರ್ ಆಫೀಸಿನಲ್ಲೂ ಇದೇ ಪ್ರಶ್ನೆ ಮೂಡಿತ್ತಲ್ಲವೆ? ಮುನಿರತ್ನಮ್ಮ ಗಟ್ಟಿಯಾಗಿ, ರಾಗವಾಗಿ ಹಾಡುತ್ತಿದ್ದ ವಿಮೋಚನೆಯ ಹಾಡನ್ನು ಹೆಣ್ಣುಮಕ್ಕಳು ಒಡಲಾಳದಿಂದ ಪ್ರತಿಧ್ವಸುತ್ತಿದ್ದ ದೃಶ್ಯ ಈಗಲೂ ಕಣ್ಣಿಗೆ ಕಟ್ಟಿದಂತಿದೆ. ಕರೆಂಟು ಹೋದ ಆ ರೂಮಿನಲ್ಲಿ ಎಂಥ ಬೆಳಕಿತ್ತು… ಅವರ ಮುಖದಲ್ಲಿ ಮೂಡಿದ್ದ ಆತ್ಮವಿಶ್ವಾಸದ ಗೆರೆಗಳನ್ನು ನೋಡಿದ ನನಗೆ ಇದೇನೋ ಹೊಸತು ಅಸಿ ಒಂದು ಕ್ಷಣ ರಾಬಿನ್‌ಗೆ ಏನೂ ಹೇಳದೆ ಸುಮ್ಮದ್ದೆನಲ್ಲವೆ? ಆನೇಕಲ್ಲಿನ ಗುಡ್ಡಹಟ್ಟಿಯಿಂದ ಹಿಡಿದು ಗೌರಿಬಿದನೂರು, ಮಾಗಡಿ, ಹಳ್ಳಿಕೆರೆ, ರಾಮಗೋವಿಂದಪುರ, ರಗಂಟಪಲ್ಲಿ, ಬಾಗೇಪಲ್ಲಿ…. ಅದ್ಯಾವ ಊರು…. ಬೈರಶೆಟ್ಟಿಹಳ್ಳಿ, ವೀರಗೌಡನದೊಡ್ಡಿ.. ಎಲ್ಲ ಡೈರಿಯಲ್ಲಿ ಬರ್‍ಕೊಂಡಿದೇನೆ. ಸಾರಾಗೆ ಎಲ್ಲವನ್ನೂ ಇಂಗ್ಲೀಶಿನಲ್ಲಿ ಕೊಡಬೇಕಲ್ಲ… ಯಾವ್ಯಾವುದೋ ಕಾರ್ಪೋರೇಟ್ ಮೀಟಿಂಗುಗಳನ್ನೂ ದಾಖಲಿಸಿಕೊಂಡ ಈ ಡೈರಿಯಲ್ಲಿ ಇವರೆಲ್ಲ ಹೇಗೆ ಬಂದರು? ಸಾರಾ ಅವರೆಲ್ಲರಿಗೂ ನಮಸ್ಕಾರ ಮಾಡಿದಳು; ತನ್ನ ತಂಡವನ್ನು ಪರಿಚಯಿಸಿದಳು. ನಾನೂ ಪತ್ರಕರ್ತ ಎಂದೇನೋ ಗೊಣಗಿದೆ. ಅವರೆಲ್ಲ ಅಣ್ಣಾ, ಕನ್ನಡದಲ್ಲಿ ಹೇಳದಕ್ಕೆ ನೀವಿದರಲ್ಲ.. ನೀವೂ ನಮ್ ಜತಿಗೆ ಬರಬೇಕು, ಸಪೋರ್ಟ್ ಕೊಡಬೇಕು ಎಂದು ಉತ್ಸಾಹದಿಂದ ಹೇಳಿದಾಗ, ಇದೇನು ಸ್ಟೇಜ್ ಮ್ಯಾನೇಜಡ್ ಸಂಘಟನೆಯೂ ಅಲ್ಲ, ಇಲ್ಲಿ ಎಂಥ ರಹಸ್ಯವೂ ಇಲ್ಲ ಅನ್ನಿಸಿ  ಮನಸ್ಸು ನಿರಾಳವಾಗಿತ್ತು…. ಎಲ್ಲೋ ರಮೇಶ ಮಾತಾಡ್ತಾ ಇದಾನೆ….

ಸಾರ್, ಬನ್ನಿ, ಡೈಂಗ್ ರೂಮಿಗೆ ಹೋಗಿ ಊಟ ಮಾಡಣ ಎಂದು ರಮೇಶ ಬ್ಯಾಟರಿ ಬಿಟ್ಟ. ಹಾಗೇ ತಡವುತ್ತ ಹೊರಗೆ ಬಂದು ದಾರಿಗೆ ಇಳಿದಂತೆ ಝಲ್ಲನೆ ಬೆಳಕು ಬಂದು.. ಬೆಂಗಳೂರಿನ ಪ್ರಖರತೆಯಿಲ್ಲದ, ಫಿಲಮೆಂಟ್ ಬಲ್ಬುಗಳ ಹಳದಿ ಬಣ್ಣ ಹರಡಿಕೊಂಡಿತು. ಹಾಗೇ ನಡೆಯುತ್ತ ರಮೇಶ ಡಕೋಡನ್ನ ನೋಡಿದ್ರ, ಏನೂ ಮಾತೇ ಆಡಲ್ಲ, ರಾಬಿನ್ ಹೇಳಿದ ಕೂಡಲೇ ದಿಕ್ಕು ದೆಸೆ ಇಲ್ದೆ ದಪದಪ ಓಡಿಬಿಡ್ತಾನೆ ಎಂದು ನಕ್ಕ.

ಡೈನಿಂಗ್ ಹಾಲಿನಲ್ಲಿ ಸಾರಾ, ಪ್ರಸಾದ್‌ರಿಂದ ಹಿಡಿದು ಹಲವು ಹುಡುಗರು, ವೃಶಾಲಿ ಎಲ್ರೂ ಸುತ್ತ ಕೂತಿದ್ದರು. ಬನ್ನಿ. ಬನ್ನಿ ಎಂದು ಪ್ರಸಾದ್ ಕುರ್ಚಿ ಸರಿಸಿದರು. ಎಲ್ಲಾ ಎನ್ ಜಿ ಓ ಥರಾನೇ ಇಲ್ಲೂ ಸೆಲ್ಫ್ ಸರ್ವಿಸ್. ಅನ್ನ, ಸಾರು, ಪಲ್ಯ, ಉಪ್ಪಿನಕಾಯಿ ಹಾಕಿಕೊಂಡು ಕೂರುತ್ತಿದ್ದಂತೆ, ಸಾರಾ ಎಂದಿನ ನಗು ಬೀರಿದಳು. ಅಂಥ ಊಟದ ಹೊತ್ತಿನಲ್ಲೂ ವೃಶಾಲಿ ತನ್ನ ಡೈರಿಯನ್ನು ಬಿಚ್ಚಿ ಕೂತಿದ್ದಳು.

ಮುಂದಿನ ನಾಲ್ಕು ದಿನಗಳಲ್ಲಿ ಎಲ್ಲೆಲ್ಲಿಗೆ ಹೋಗಬೇಕು, ಯಾರ್‍ಯಾರಿಗೆ ಏನೇನು ಕೆಲಸ, ಎಲ್ಲೆಲ್ಲಿ ಜೀತಪದ್ಧತಿ ಬಗ್ಗೆ ಲೈವ್ ಶೂಟಿಂಗ್ ಮಾಡಬಹುದು, ಜೀತಮುಕ್ತ ನಾಯಕ ಶಿವಪ್ಪನ ಸಂದರ್ಶನದ ಊರಿಗೆ ಹೋಗೋದು ಯಾವಾಗ…. ಸಾರಾ ಮತ್ತು ವೃಶಾಲಿ ಚರ್ಚಿಸಿ ನಮಗೂ ಒಂದಷ್ಟು ಸೂಚನೆ ಕೊಟ್ಟರು. ನಿರ್ಧಾರಗಳಾದ ಕೂಡಲೇ ಅದನ್ನು ಪ್ರಸಾದ್ ಮೊಬೈಲಿನಲ್ಲಿ ದಾಟಿಸುತ್ತಿದ್ದ ಕೇಳತೊಡಗಿದ. ಎರಡೇ ಮಿಷದಲ್ಲಿ ಬಿಸಿರಿನ ಪಾತ್ರೆ ಹಿಡಿದುಕೊಂಡು ಬಂದು ನೂಡಲ್ ಮಗ್ಗನ್ನು ಒಡೆದು ನೀರು ಹಾಕಿ ಕೂತ. ಪಕ್ಕದಲ್ಲೇ ಡಕೋಡ ಕೈಯಲ್ಲೇ ಅನ್ನ ಕಲಸಿಕೊಂಡು ಪಲ್ಯದಷ್ಟು ಉಪ್ಪಿನಕಾಯಿ ಹಾಕಿಕೊಂಡು ಕೂತಿದ್ದ.

ಊಟ ಮುಗಿಸಿ ಬರುವಷ್ಟರಲ್ಲಿ ಮತ್ತೆ ಕರೆಂಟು ಹೋಗಿ ರಮೇಶನೂ ನಮ್ಮೊಂದಿಗೆ ಬಂದು ಮಂಚದ ಮೇಲೆ ಕೂತು… ಪ್ರಸಾದ್ ಸರ್ ಅಂದ್ರೆ ಅವಗಂತೂ ದೇವರಿದ್ದ ಹಾಗೆ ಇರಬೇಕು. ಅವರು ಹೇಳಿದ್ದಕ್ಕೆಲ್ಲ ಹೂ ಸಾರ್ ಹೂ ಸಾರ್ ಎನ್ನುತ್ತಿದ್ದ ರಮೇಶನನ್ನು ನೋಡಿ ಇವನೇನು ಮನೆ ಮಠ ಎಲ್ಲ ಬಿಟ್ಟವನೇ ಇರಬೇಕು ಅನ್ನಿಸ್ತಿದೆ.

ಮತ್ತೆ ಜೀತ ಪದ್ಧತಿ, ರಾಜ್ಯ ಸರ್ಕಾರಕ್ಕೆ ಸಲ್ಲಿಸಿರೋ ಆಕ್ಷನ್ ಪ್ಲಾನ್ ಬಗ್ಗೆ ಪ್ರಸಾದ್ ಮಾತನಾಡತೊಡಗಿದರು. ಅವರಿಗೆ ಬೇರೆ ಜಗತ್ತೇ ಇಲ್ಲ. ನಮ್ಮ ಪ್ರಸಾದ್ ಸರ್ ಇಲ್ದೇ ಹೋಗಿದ್ರೆ ನಾನು ನಿಮ್ಮ ಹತ್ರ ಹಿಂಗೆಲ್ಲ ಇರೋದೇ ಆಗ್ತಿರಲಿಲ್ಲ ಸರ್ ಎಂದು ರಮೇಶ ಅಭಿಮಾನದಿಂದ ಉಸುರಿದ. ಸಾರ್ ನಾನು ಇದೇ ಗೆಸ್ಟ್‌ಹೌಸ್‌ನ ಎನ್ ಜಿ ಓ ಇದೆಯಲ್ಲ, ಮೈರಡಾ ಅಂತ, ಇಲ್ಲೇ ನಾನು ಎಫ್ ಸಿ ಸರ್. ಅದೇ ಫಂಡೆಡ್ ಕ್ಯಾಂಡಿಡೇಟ್. ಅದಕ್ಕೇ ನಾನು ಓದಿ ಇಷ್ಟು ನಾಲೆಜ್ ಪಡ್ಕಂಡಿದೀನಿ.

ನೀವು ರಮೇಶನ ಹಾಡು ಕೇಳಿದೀರ? ಪ್ರಸಾದ್ ನನ್ನ ಕೇಳುತ್ತಲೇ ಆ ಹಾಡು ಹೇಳಪ್ಪ ಎಂದು ರಮೇಶಗೆ ಸೂಚಿಸಿದರು. ರಮೇಶ ತಡಮಾಡಲಿಲ್ಲ. ಬದುಕಿನ ಕಥೆಯನ್ನೇ ಹಾಡು ಮಾಡಿದವನಂತೆ ಜೀತ ವಿಮೋಚನೆಯ ಹಾಡುಗಳನ್ನು ಭಾವಪೂರ್ಣವಾಗಿ ಹಾಡಿದ. ಅವನದೇ ತಾಳ. ಮಂಚವೇ ತಮಟೆಯಾಯ್ತು. ಸಾರ್, ಈ ಹಾಡು ನಾನೇ ಬರ್‍ದಿದ್ದು ಎಂದಾಗ ನನಗೂ ಅಚ್ಚರಿ.

ಬದುಕು, ಜನ, ಸರ್ಕಾರ, ರಾಜಕಾರಣಿಗಳು, ಅಧಿಕಾರಿಗಳು – ಎಂದಿನಂತೆ ಎಲ್ಲ ವಿಷಯಗಳ ಬಗ್ಗೆ ಮಾತನಾಡುತ್ತ ಮಧ್ಯರಾತ್ರಿ ಮೀರಿತು. ಪ್ರಸಾದ್ ನಾಳೆ ಮುಂಚೆ ಏಳಬೇಕು ಎಂದು ಮೀಟಿಂಗ್ ಮುಗಿಸಿದರು.

ಕತ್ತಲಿನಲ್ಲೇ ಹೊದಿಕೆ ಜೋಡಿಸಿಕೊಂಡು ಮಲಗಿದರೆ ಪ್ರಸಾದ್ ಕೂಡಾ ಶಾಲು ಹೊದ್ದು ಮಲಗಿದರು. ತಣ್ಣಗಿನ ಈ ವ್ಯಕ್ತಿತ್ವ ಏನೆಲ್ಲ ಕಡೆದಿಟ್ಟಿದೆ… ರಮೇಶನಂಥ ನಾಯಕನನ್ನು. ಶಿವಪ್ಪನಂಥ ಹೋರಾಟಗಾರನನ್ನು, ಚನ್ನಮ್ಮನಂಥ ಧೀರೆಯನ್ನು….

ಏಟ್ರಿಯಾದಲ್ಲಿ ವೃಶಾಲಿ ಮಾತಾಡಿದಾಗಲೇ, ಇನ್ನು ನಾಲ್ಕು ದಿನ ಜೀತಪದ್ಧತಿಯ ಬಗ್ಗೆ ಚೆನ್ನಾಗೇ ಗೊತ್ತಾಗುತ್ತೆ ಎಂದು ಖಚಿತವಾಗಿತ್ತಲ್ಲವೆ? ಅದಕ್ಕೇ ನಾನು ಒಪ್ಪಿಕೊಂಡಿದ್ದು. ಕೆಳಜಾತಿಯವರ ಬದುಕನ್ನು ಹತ್ತಿರದಿಂದ ನೋಡದೇ ಎಷ್ಟೋ ವರ್ಷವಾಯ್ತು… ಅಜ್ಜಿ ಊರಿನಲ್ಲಿ ಹೊಲೇರ ಕೇರಿ ಹಾಯುತ್ತಿದ್ದಾಗೆಲ್ಲ ಚೆ, ಕನಕ, ಈರಿಶೆಟ್ಟಿ ಸಿಗುತ್ತಿದ್ದರು. ಎಂಟು ವರ್ಷಗಳ ಹಿಂದೆ ಹೋದಾಗ ಹರಿಜನ ಕೇರಿ ಎಷ್ಟು ಚಂದ ಬೆಳೆದಿತ್ತು… ಅವರನ್ನೆಲ್ಲ ನಾನು ಯಾಕೆ ಮುಟ್ಟಲಾಗಲೇ ಇಲ್ಲ…. ಹೊಲೇರ ಬಯಲಾಟದಲ್ಲಿ ನಾನೂ ಡ್ಯಾನ್ಸ್ ಮಾಡಿ ಆಮೇಲೆ ಸ್ನಾನ ಮಾಡಿಯೇ ಅಟ್ಟ ಹತ್ತಿ ಮಲಗಿದ್ದಲ್ಲವೆ? ನಾಳೆಯಿಂದ ಇಂಥ ಅವಕಾಶ ಮತ್ತೆ ಸಿಕ್ಕಿದೆ. ಅವರ ಬದುಕಿನ ಸ್ಪರ್ಶ ನನಗೂ ಏನಾದ್ರೂ ಕಲಿಸೀತೆ?

ಮೊನ್ನೆ ರಾತ್ರಿಯಷ್ಟೆ ಇವೆಲ್ಲ ನಿಶ್ಚಯವಾಗಿದ್ದು…. ಫೋನಲ್ಲಿ ಒಳ್ಳೆ ಹಿರಿಯ ಹೆಣ್ಣುಮಗಳ ಹಾಗೆ ಕೇಳಿಸಿದ್ದವಳು ಇವಳೇನಾ ಎನ್ನಿಸುವಂತೆ ವೃಶಾಲಿ ನನ್ನನ್ನು ಅಚ್ಚರಿಗೆ ತಳ್ಳಿದ್ದಳು. ಏಟ್ರಿಯಾದ ಲಾಬಿಯಲ್ಲಿ ಹತ್ತು ನಿಮಿಷ ಕಾಯಿಸಿದ ಮೇಲೆ ಅವಳೇ ಅಂತ ಗೊತ್ತಾಗೋ ಹಾಗೆ ಬಂದರೆ, ಎಲ್ಲೋ ಕವಳ ಹಾಕದ ಬಿಳಿ ಹಲ್ಲುಗಳ ಹವ್ಯಕ ಮಾಣಿ ಥರ ಇದಾಳೆ. ಇನ್ನೇನು ಯಕ್ಷಗಾನದಲ್ಲಿ ಪಾರ್ಟು ಮಾಡಲು ತಯಾರಾದ ಯುವ ಕಲಾವಿದನ ಥರವೇ ಚೊಕ್ಕವಾದ ಮುಖ.

ನಿಮ್ಮ ಕೆಲ್ಸ ಬರೀ ಅನುವಾದ ಮಾಡೋದಲ್ಲ, ವೇ ಡಾಕ್ಯುಮೆಂಟರಿಯ ಕಣ್ಣು, ಕಿವಿ, ಬಾಯಿ, ಮೂಗು ಎಲ್ಲ ಎಂದು ವೃಶಾಲಿ ಮತ್ತೆ ದಿಲ್ಲಿಯಿಂದ ಉಸುರಿದ್ದನ್ನೇ ಶುರು ಹಚ್ಚಿದಾಗ ಇವಳು ಊಟಕ್ಕಾದರೂ ಕರೆಯಬಹುದೆ ಅಸಿತ್ತು. ಸುಮಾರು ಅರ್ಧ ತಾಸು ತನ್ನ ಬಿಹಾರದ ಅನುಭವವನ್ನು ಹೇಳಿಕೊಳ್ಳುತ್ತಲೇ ತಾನೆಂಥ ನಿಷ್ಠಾವಂತ ಅಧಿಕಾರಿ, ಇಡೀ ದಕ್ಷಿಣ ಏಶ್ಯಾದ ನಿರ್ದೇಶಕಿಯಾಗಿ ಏನೆಲ್ಲ ಸಾಧಿಸಿದ್ದೇನೆ ಅಂತ ತಣ್ಣಗೆ ವಿವರಿಸಿದ ಆ ಬಗೆಯಲ್ಲಿ ಮೋಸವೇನೂ ಕಾಣಲಿಲ್ಲ. ಸಾವಿರಾರು ಸಾಲು ಅನುವಾದಿಸಿದ ನನಗೆ ಇದೇನು ಮಹಾ ಕೆಲಸವೇನಲ್ಲ ಅಸಿದ್ದಕ್ಕೇ ಇಲ್ಲಿಗೆ ಬಂದಿದ್ದಲ್ಲವೆ? ಟಿವಿ ಚಾನೆಲ್‌ನಲ್ಲಿ ಕೆಲಸ ಮಾಡಿದ ಅನುಭವವೂ ಇದೆ.

ನೀನು ಕ್ಯಾಮೆರಾ ಹಿಂದೆ ಅಥವಾ ಸಾರಾ ಹಿಂದೆ ಇರಬೇಕು ಸರೀನ?

ಸಾರಾ ರಾಬರ್ಟ್ಸ್ ರಾತ್ರಿ ಫ್ಲೈಟಿಗೆ ಬರ್‍ತಿದಾಳೆ. ನು ಯಾಕೆ ರಾತ್ರಿ ಡಿನ್ನರ್‌ಗೆ ಬರಬಾರದು? ಅಥ್ವಾ ಇಲ್ಲೇ ಉಳಿದು ನಾಳೆ ಎಲ್ರೂ ಒಟ್ಟಿಗೇ ಟೆಂಪೋ ಹತ್ತಬಹುದಲ್ವ ಎಂದು ವೃಶಾಲಿ ಕೇಳಿದ್ದಳು.

ಸಂಜೆ ಅದೇ ಏಟ್ರಿಯಾದ ಡಿನ್ನರ್ ಹಾಲ್‌ನ ಒಳಹೋಗುತ್ತಲೇ ಕೈ ಮಾಡಿ ಕರೆದ ವೃಶಾಲಿ ದುಂಡುಮೇಜಿನತ್ತ ನಡೆದಳು. ಅದೇ ಇಂಟರ್‌ನೆಟ್‌ನಲ್ಲಿ ನೋಡಿದ ಅಜ್ಜಿ ಇವಳೇ ಸಾರಾ ಇರಬೇಕು; ಅವಳ ಪಕ್ಕದಲ್ಲಿ ಇನ್ನಾರೋ ಕೂತಿದ್ದಾಳೆ. ಜೊತೆಗೆ ಇನ್ನೂ ಒಬ್ಬ ಹುಡುಗಿ, ಹುಡುಗ ಇದ್ದಾರೆ. ಎಲ್ಲರ ಪರಿಚಯವನ್ನೂ ವೃಶಾಲಿಯೇ ಮಾಡಿದಳು. ಐವತ್ತರ ಹರೆಯದ ಸಾರಾ, ಮಾರ್ಟಿನಾ ನವ್ರಾಟಿಲೋವಾ ಥರ ಇದ್ದಳು. ಅವಳ ಜೊತೆಗಾತಿ ಒಬ್ಬ ಸಂತಳಂತೆ ಕಂಡಳು. ಬಿಳಿ ಉಡುಪಿನಲ್ಲಿದ್ದ ಆಕೆ ಒಬ್ಬ ಮಿಶನರಿಯೂ ಇರಬಹುದೆ ಎಂಬ ಅನುಮಾನ ಬರುತ್ತಿತ್ತು. ಸಂಶೋಧನೆ, ಬರವಣಿಗೆಯೇ ಅವಳ ವೃತ್ತಿ ಎಂದಾಗ ಸಮಾಧಾನವಾಯಿತು. ಅವರಿಬ್ಬರ ಮಕ್ಕಳೂ ದೇಶ ನೋಡೋದಕ್ಕೆ ಬಂದಿದಾರೆ.

ಪಕ್ಕದಲ್ಲಿ ಕೂತ ರಾಬಿನ್ ಥೇಟ್ ದಪ್ಪಗಾದ ನಾಸಿರುದ್ದೀನ್ ಶಾನ ಥರಾನೇ. ಕೆಂಪಗಿನ ಗುಂಡುಮುಖ. ವೈನನ್ನು ಬಿಟ್ಟರೆ ಬೇರೆ ಏನನ್ನೂ ಮುಟ್ಟಲಿಲ್ಲ. ವಿಮಾನದಲ್ಲಿ ಬರೀ ರೆಡಿಮೇಡ್ ಫುಡ್ ತಿಂದಿದ್ದು ಅಜೀರ್ಣವಾಗಿದೆ ಎಂದ.

ಡೈಂಗ್ ಹಾಲಿನ ಮಂದ ಬೆಳಕಿನಲ್ಲಿ ಸಾರಾ ತನ್ನ ಸಂಸ್ಥೆಯ ಕಿರು ಪರಿಚಯ ಮಾಡಿಕೊಟ್ಟಳು. ಇಡೀ ಜಗತ್ತಿನಲ್ಲಿ ಎಲ್ಲೆಲ್ಲಿ ಬಾಂಡೆಡ್ ಲೇಬರ್ ಇದೆಯೋ, ಅಲ್ಲೆಲ್ಲ ಅವಳು ಹೋಗ್ತಾಳೆ. ಅವಳಿಗೆ ರಾಬಿನ್ ಖಾಯಂ ಕ್ಯಾಮೆರಾಮನ್. ಈ ಸಲದ ಅವರ ಸಂಸ್ಥೆಯ ವಾರ್ಷಿಕ ಪ್ರಶಸ್ತಿ ಪ್ರಸಾದ್‌ಗೆ ಬಂದಿದೆ. ನವೆಂಬರಿನಲ್ಲಿ ಅಮೆರಿಕಾದಲ್ಲೆ ಪ್ರಶಸ್ತಿ ಕೊಡ್ತಾರೆ.

ಯಾಕೋ ನಿದ್ದೇನೇ ಬರ್‍ತಿಲ್ಲ. ಎಂಥೆಂಥ ಅನುಭವಗಳಿಗೆ ಪಕ್ಕಾಗ್ತಾ ಇದೇನೆ… ತಿಮ್ಮಪ್ಪ ಹೇಳಿದ ಮರುದಿನವೇ ಪ್ರಸಾದ್ ಫೋನ್ ಮಾಡಿದ್ದರು. ತಿಮ್ಮಪ್ಪ ಹೇಳಿದ ಮೇಲೆ ನೀವೇ ಈ ಕೆಲಸ ಮಾಡಿಕೊಡಬೇಕು ಎಂದು ವಿನಂತಿಸಿದ್ದರು. ನಾಗರಭಾವಿ ರಸ್ತೆಯಲ್ಲಿದ್ದ ಅವರ ಸಂಘಟನೆಯ ಕಚೇರಿ ಒಂದು ಕಲ್ಯಾಣ ಮಂಟಪದ ಹಾಗಿತ್ತು. ಚಿಕ್ಕ ರೂಮಿನಲ್ಲಿ ಫೈಲುಗಳು ಹರಡಿದ್ದವು. ಹಾಲಿನಲ್ಲಿ ಹಳೇ ಮೇಜು, ಹತ್ತಾರು ಲಟಕಲಾಸಿ ಕುರ್ಚಿಗಳು. ಅಂಬೇಡ್ಕರ್ ಬಿಟ್ರೆ ಯಾವ ಫೋಟೋನೋ ಇಲ್ಲ.. ಅತ್ತ ಜೀತ ವಿಮುಕ್ತಿ ಕುರಿತ ಒಂದು ದೊಡ್ಡ ಕಲಾಕೃತಿ ಗೋಡೆಗೆ ಒರಗಿದೆ. ಜೀತ ವಿಮೋಚನೆ ಕುರಿತ ಹೋರಾಟದ ಸಾಹಿತ್ಯ, ವರದಿಗಳು, ಸರ್ಕಾರದ ಆದೇಶಗಳು ಎಲ್ಲವನ್ನೂ ಪ್ರಸಾದ್ ಕೊಟ್ಟು…. ಮೊದಲು ನಾನು ಸಿದ್ದಿಗಳ ಜೊತೆಗೂ ಕೆಲವು ವರ್ಷಗಳ ಕಾಲ ಇದ್ದೆ, ಬೇರೆ ಬೇರೆ ದೇಶಗಳಲ್ಲಿ ಇರೋ ಸಿದ್ದಿಗಳ ಬಗ್ಗೆ ಒಂದು ಪುಸ್ತಕ ಬಂದಿದೆ. ಅದಕ್ಕೆ ನಾನೂ ಸಂಪಾದಕ ಎಂದು ಬೆರಗು ಹುಟ್ಟಿಸಿದ್ದರು. ನೂರಾರು ಪುಟಗಳ ಆ ಪುಸ್ತಕ ಕೈಗಿತ್ತಾಗ ಹಾಗೇ ಕಣ್ಣಾಡಿಸಿದೆ. ಪಾಕಿಸ್ತಾನದಿಂದ ಯಾರೂ ವರದಿ ಮಾಡಿರಲಿಲ್ಲ. ಪಾಕಿಸ್ತಾನದಲ್ಲೂ ಸಾವಿರಾರು ಆಫ್ರಿಕನ್ ಮೂಲದ ಜನ ಇದಾರಲ್ಲ ಎಂದೆ. ಹೌದ? ಮಾಹಿತಿ ಕೊಡಿ ಎಂದು ಕುತೂಹಲ ತೋರಿಸಿದ್ದರು. ಎರಡು ತಾಸುಗಳ ಕಾಲ ಅವರೊಂದಿಗೆ ಮಾತನಾಡಿದಾಗ ಎಂದೂ ಕಾಣದ ಒಬ್ಬ ಅಧ್ಯಯನಶೀಲ ಹೋರಾಟಗಾರನನ್ನು ಕಂಡ ಅನುಭವ ಆಗಿತ್ತಲ್ಲವೆ?

ಹೌದು…. ಫಸ್ಟ್ ಪಿಯುಸಿ ಓದೋವಾಗ ಹರಪನಹಳ್ಳಿ, ಹೂವಿನಹಡಗಲಿಯ ಎಸ್ ಎಫ್ ಐ ಚಳವಳಿಗೆ ಕಾರಣರಾದ ಕನ್ನಡ ಮಾಸ್ತರ್ ನನ್ನಲ್ಲೂ ದಲಿತರ ಹೋರಾಟದ ಬೀಜ ಬಿತ್ತಿ….. ಈಗ ಎಲ್ಲಿದಾರೋ… ಆಗ ಚಳವಳಿಯನ್ನು ಅನುಮಾನದಿಂದ್ಲೇ ಕಂಡಿದ್ದೆ…. ಎಡ, ಬಲ ಪಂಥದ ಒಗಟಿನಲ್ಲಿ ಸಿಲುಕಿಕೊಂಡಿದ್ದೆ….

ಬೆಳಗ್ಗೆ ಎಲ್ಲರೂ ತಯಾರಾಗಿ ಹೊರಟಾಗ ಒಂಬತ್ತು ದಾಟಿ, ಸಾರಾ ಮುಖದಲ್ಲಿ ತಡವಾಯಿತು ಎಂಬ ಮುದ್ರೆ. ದಾರಿಯಲ್ಲಿ ವೃಶಾಲಿ ನೀರಿನ ಬಾಟಲಿಗಳನ್ನು ಖರೀದಿಸಿ ಇನ್ನಷ್ಟು ತಡ. ಯಲಮತ್ತೂರಿಗೆ ತಿರುಗುವ ಹಾದಿಯಲ್ಲೇ ಚಿರತೆಯ ಮರಿಯೊಂದು ಸತ್ತು ಬಿದ್ದಿದ್ದನ್ನು ಕಂಡಕೂಡಲೇ ರಾಬಿನ್ ಸ್ಟಿಲ್ ಕ್ಯಾಮೆರಾದೊಂದಿಗೆ ಹಾರಿ ಇಳಿದು ಹಗೂರಾಗಿ ಎತ್ತಿ ಬದಿಗಿಟ್ಟು ಫೋಟೋ ತೆಗೆದ. ಸಾರಾ ಮತ್ತು ಗುರಾಯಿಸಿದಳು. ಮೊದಲ ದಿನವೇ ಹೀಗೆ ತಡವಾದ್ರೆ ಹೇಗೆ ಎಂದಳು. ಊರು ತಲುಪೋ ಹೊತ್ತಿಗೆ ಶಿವಪ್ಪ ಕಾಯ್ತಾ ಇದ್ದ. ನಿನ್ನೆಯಷ್ಟೇ ಅವನ ಮಗಳ ಮದುವೆಯಾಗಿದೆ. ಇವತ್ತು ಸಂದರ್ಶನ ಕೊಡಬೇಕು. ಶಿವಪ್ಪನ ಮನೆಯೊಳಗೆ ಹೋದರೆ ಏದೆ? ಬರೀ ಜಲ್ಲಿ ಕಲ್ಲು…. ಇಲ್ಲಿ ಮದುವೆ ನಡೆದಿದ್ದಾದರೂ ಹ್ಯಾಗೆ? ಇಲ್ಲ ಸಾರ್, ಬೀದೀಲೇ ಶಾಮಿಯಾನಾ ಹಾಕಿದ್ವಿ ಎಂದು ಶಿವಪ್ಪ ನಕ್ಕ. ರಾಬಿನ್ ಒಳ್ಳೇ ಆಂಗಲ್ ಹುಡುಕಿ ಶಿವಪ್ಪನ ಮನೆ ಎದುರುಮನೆಯ ಕಟ್ಟೆಯನ್ನೇ ಆರಿಸಿಕೊಂಡ. ಕಾಂಟ್ರಾಸ್ಟಿಂಗ್ ಬಣ್ಣ ಬೇಕು ಎಂದು ಶಿವಪ್ಪನನ್ನು ಒತ್ತಾಯಿಸಿದಾಗ.. ಒಳ್ಳೆ ಫಜೀತಿಗೆ ಬಂತು. ಶಿವಪ್ಪನ ತಮ್ಮನೇ ತನ್ನ ಅಂಗಿ ಬಿಚ್ಚಿಕೊಟ್ಟ. ಊರಿನ ಚಳ್ಳೆಪಿಳ್ಳೆ ಮಕ್ಕಳು ಗುಂಪುಗೂಡಿದವು. ರಮೇಶ ಅವರನ್ನೆಲ್ಲ ಉಶ್ ಎಂದು ಬದಿಗೆ ಸರಿಸಿ, ನಾನು, ಸಾರಾ ಕ್ಯಾಮೆರಾ ಹಿಂದೆ ಕೂತು ಶಿವಪ್ಪನನ್ನು ತಯಾರು ಮಾಡಿದೆವು. ಸುಮ್ನೆ ನೀನು ನನ್ನ ನೋಡ್ತಾ ಮಾತಾಡು… ಟೆನ್ಶನ್ ತಗಾಬ್ಯಾಡ ಎಂದು ಅವನ ಆಡುಭಾಷೆಯಲ್ಲೇ ಹೇಳಿದೆ.

ಸಾರಾ ಸಹ ತುಂಬ ಸೂಕ್ಷ್ಮ. ತುಂಬಾ ಗಾಸಿ ಮಾಡೋ ಪ್ರಶ್ನೇನ ತಾನು ಕೇಳಿದ್ರೂ, ಅದನ್ನು ಕನ್ನಡಕ್ಕೆ ಅನುವಾದಿಸೋವಾಗ ಯೋಚಿಸು; ಬೇಡ ಅಂದ್ರೆ ಕೇಳಬೇಡ. ಅಥ್ವಾ ಅದನ್ನ ಕನ್ನಡದಲ್ಲಿ ಕೌನ್ಸೆಲ್ ಮಾಡೋ ಥರ ಧಾನವಾಗಿ ವಿವರಿಸು ಅಂತ ಖಚಿತ ಸೂಚನೆ ಕೊಟ್ಟಿದ್ದಳು.

ಶಿವಪ್ಪ, ನಿಮ್ಮ ಬಾಲ್ಯ ಹೇಗಿತ್ತು ಅಂತ ಸ್ವಲ್ಪ ತಿಳುಸ್ತೀರ?

ನಾನು ಜೀತಕ್ಕೆ ಸೇರ್‍ಕಂಡಾಗ ೧೨ ವರ್ಷ ಆಗಿತ್ತು ಸರ್. ಅಪ್ಪ – ಅಮ್ಮಗೆ ನಾವು ಮೂರು ಹೆಣ್ಣುಮಕ್ಕಳು, ನಾಲ್ವರು ಗಂಡುಮಕ್ಕಳು. ಮನೆತುಂಬಾ ಬಡತನ. ಮನೆ ಊಟಕ್ಕೆ, ಮದುವೆಗೆ ಎಲ್ಲಿಗೆ ಹೋಗಬೇಕು? ಅದುಕ್ಕೇ ನಾನು ಬೆಳಗನಹಳ್ಳಿಲಿ ಜೀತಕ್ಕೆ ಸೇರ್‍ಕಂಡೆ.

ಕಟ್ ಎಂದು ಸಾರಾ ನಿಲ್ಲಿಸಿದಳು. ನೋಡು, ಪ್ರತೀ ಹದಿನೈದು, ಇಪ್ಪತ್ತೈದು ಸೆಕೆಂಡ್‌ಗೆ ನಂಗೆ ಟ್ರಾನ್ಸ್‌ಲೇಟ್ ಮಾಡು.. ಇಲ್ಲಾಂದ್ರೆ ನಂಗೆ ಅಮೆರಿಕಾಕ್ಕೆ ಹೋದಮೇಲೆ ತಲೆ ಬುಡ ಗೊತ್ತಾಗಲ್ಲ.. ಅಲ್ಲಿಗೆ ನಿನ್ನ ಕರುಸ್ಕಳಕ್ಕೆ ಆಗಲ್ಲ ಎಂದು ನಕ್ಕಳು.

ಶಿವಪ್ಪ, ನೀವು ಜೀತ ಮಾಡ್ತಿದ್ರಲ್ಲ, ಆ ದಿನಗಳಲ್ಲಿ ನಿಮ್ಮ ದಿನಚರಿ ಹ್ಯಾಗಿತ್ತು ಅಂತ ಹೇಳ್ತೀರ?

ನಾನು ದಿನಾ ಬೆಳಗ್ಗೆ ಆರಕ್ಕೆಲ್ಲ ಏಳ್ತಾ ಇದ್ದೆ. ಇಲ್ಲಾಂದ್ರೂ ಯಜಮಾನ್ರು ಎಬ್ಬುಸ್ತಿದ್ರು. ಚಳೀ – ಮಳೆ ಏನೂ ಇಲ್ಲ. ಕಸ ಬಳೀಬೇಕಾಗಿತ್ತು. ಹುಲ್ಲು ತರಬೇಕಾಗಿತ್ತು. ಸೌದೆ ಹೊಡೀಬೇಕಿತ್ತು… ಒಂಬತ್ತು ಗಂಟೆಗೆ ತಿಂಡಿ ಕೊಡ್ತಿದ್ರು. ಎಷ್ಟೋ ಸಲ ಹಿಂದಿನ ದಿನದ ತಂಗಳೇ ಗತಿಯಾಗಿತ್ತು….

ದನ ಮೇಯ್ಸಕ್ಕೂ ಹೋಗ್ತಿದ್ವಿ. ಜಮೀನು ಕೆಲ್ಸಾನೂ ಮಾಡ್ತಾ ಇದ್ವಿ.

ಶಿವಪ್ಪ, ರಾತ್ರಿ ಎಲ್ಲಿ ಉಳೀತಿದ್ರಿ?

ರಾತ್ರಿ ಮನೆಯಿಂದ ಹೊರಗೆ ಕೊಟ್ಟಿಗೇಲಿ ಮಲಗ್ತಾ ಇದ್ದೆ. ಅದ್ರಲ್ಲೂ ನಾವು ಬೇರೆ ಜಾತಿ ಜನಾಂಗ; ಯಜಮಾನ್ರು ಬೇರೆ ಜಾತಿ. ನಮ್ಮ ತಟ್ಟೆ – ಬಟ್ಟೆ ಎಲ್ಲಾನೂ ಸಪರೇಟಾಗಿ ಇಟ್ಕೊಂಡಿದ್ವಿ. ಕೊಟ್ಟಿಗೆ ಕತ್ತಲಿನಲ್ಲಿ ಎಷ್ಟೋ ಸಲ ಭಯ ಆಗ್ಬುಟ್ಟು ಅಳು ಬರ್‍ತಿತ್ತು…. ದೆವ್ವದ್ದೂ ಭಯ, ಕಪ್ಪೆ, ಹಾವಿಂದೂ ಭಯ.. ಹುಡುಗನಾಗಿದ್ನಲ್ವ?

ನಾವು ಮಲಗಾದಕ್ಕೆ ಒಳ್ಳೆ ಜಾಗನೇ ಸಿಗ್ಲಿಲ್ಲ. ಎಲ್ಲೆಲ್ಲೂ ವಾಸ್ನೆ. ಪಕ್ಕದಲ್ಲೇ ನಾಯಿಗಳೂ ಮಲಗ್ತಿದ್ವು…

ಶಿವಪ್ಪ ಅಳೋದಕ್ಕೇ ಶುರು ಮಾಡಿದಾಗ ಸಾರಾ ನನ್ನನ್ನೇ ನೋಡಿದಳು. ಅವನೇ ಭಾವುಕನಾಗಿ ಅತ್ತಿದ್ದು; ಹಳೇದೆಲ್ಲ ನೆನಪಾಗಿ ಅವನು ಎಮೋಶನಲ್ ಆಗಿದಾನೆ ಎಂದೆ. ಸರಿ, ಶಿವಪ್ಪ ಸಮಾಧಾನ ಮಾಡ್ಕೊಂಡ ಮೇಲೆ ಶೂಟಿಂಗ್ ಅಂದಳು. ರಾಬಿನ್ ಕೂಡಲೇ ಬದಿಗೆ ಸರಿದು, ಕ್ಯಾಮೆರಾವನ್ನು ಡಕೋಡನ ಕೈಲಿ ಕೊಟ್ಟು ಸಿಗರೇಟು ಹಚ್ಚಿದ.

ಎಷ್ಟೋ ಸಲ ಹಳಸಿದ ಊಟಾನೂ ಮಾಡ್ತಾ ಇದ್ವಿ. ನಮಗೂ ತಿಳಿವಳಿಕೆ ಇರ್‍ಲಿಲ್ಲ. ದೊಡ್ಡವನಾಗ್ತಾ ಇದ್ದ ಹಾಗೆ ಮನಸ್ನಲ್ಲೇ ಎಲ್ಲಾರೂ ಓಡಿಹೋಗಬೇಕು ಅನ್ನಿಸ್ತಾ ಇತ್ತು. ಆವಾಗ ಈ ಸಂಘಟನೆ ಪರಿಚಯ ಆಯ್ತು. ನಿಧಾನವಾಗಿ ಎಲ್ಲ ತಿಳ್ಕಂಡೆ.

ಸಂಘಟನೆ ಮೀಟಿಂಗಿಗೆ ಯಜಮಾನ ಬಿಡ್ತಾ ಇರ್‍ಲಿಲ್ಲ; ನಾನು ಏನೋ ಸುಳ್ಳು ಹೇಳಿ ಬರ್‍ತಾ ಇದ್ದೆ. ಕೊನೆಗೆ ಜೀತ ವಿಮೋಚನೆಗೆ ಅರ್ಜಿ ಬರೆದೆ.

ಜಾಸ್ತಿ ಊಟ ಕೊಡ್ತೀವಿ, ಇಲ್ಲೇ ಇರು ಅಂತ ಯಜಮಾನ್ರು ಒತ್ತಾಯ ಮಾಡಿದ್ರು. ಆದ್ರೆ ನನ್ ಮನಸ್ಸು ಬೇಡ ಅಂತ್ಲೇ ಹೇಳ್ತಾ ಇತ್ತು. ಎಲ್ಲ ಬಿಟ್ಟುಬಿಟ್ಟೆ. ಈಗ ನಾನು ಸ್ವತಂತ್ರ ವ್ಯಕ್ತಿ ಆಗಿದೀನಿ.

ನನಗೆ ಈ ಥರ ಹೊಸ ಜೀವ್ನ ಕೊಟ್ಟ ಪ್ರಸಾದ್ ಸರ್ ನಂಗೆ ಅಪ್ಪ, ಅಮ್ಮ ಎಲ್ಲಾ ಆಗಿದಾರೆ ಶಿವಪ್ಪನ ಮಾತಿನಲ್ಲಿ ಕೃತಕತೆಯೇ ಇರಲಿಲ್ಲ.

ನಾನೇನೋ ಹೊರಗೆ ಬಂದೆ. ನನ್ ಥರ ಇದಾರಲ್ಲ ಅವ್ರನ್ನೂ ಹೀಗೇ ತರಬೇಕು ಅಂತ ಅನ್ನಿಸಿ ಈ ಸಂಘಟನೆ ಹೋರಾಟದಲ್ಲಿ ಸೇರ್‍ಕಂಡಿದೀನಿ. ಜೀತದಲ್ಲಿ ಇರೋರು ತಾವಾಗೇ ತಮ್ಮ ಹಕ್ಕನ್ನು ಕೇಳೋ ಹಾಗೆ ಮಾಡೋದಕ್ಕೆ ನಾನು ಟ್ರೈ ಮಾಡ್ತಾ ಇದೀನಿ.

ಶಿವಪ್ಪ ಹಾಗೆ ಮಾತಾಡುತ್ತ ಹೋದ. ಮನುಕುಲ ಎಲ್ಲ ಒಂದೇ ಅಲ್ವ ಸರ್ ಎಂದು ಪ್ರಶ್ನಿಸಿದ. ಹಳ್ಳಿಗೆ ಹೋಗ್ತೀ, ಮನೆಮನೆ ಸರ್ವೆ ಮಾಡ್ತೀ, ಎಲ್ರ ಹತ್ರ ಮಾತಾಡಿ ಒಲಿಸ್ತೀನಿ ಅಂದ. ಒಂದ್ಸಲ ಈ ದಲಿತರೆಲ್ಲ ಜೀತಕ್ಕೇ ಹುಟ್ಟಿದೋರು ಅಂತ ಮೇಲಿನ ಜಾತಿಯವ್ನು ಹೇಳ್ದ. ಅದುಕ್ಕೆ ನಾನು ನಿಮ್ಮ ಜಾತೀನಲ್ಲಿ ಕದ್ದು ಬಸಿರಾಗಿರೋರು ಇಲ್ವ ಅಂತ ಕೇಳೇ ಬಿಟ್ಟೆ ಎಂದೂ ನೆನಪಿಸಿಕೊಂಡ.

ಜೀತದ ತೊಟ್ಟಿಲಿನಲಿ, ಮುಳ್ಳಿನ ಹಾಸಿಗೆಯಲ್ಲಿ, ಮಲಗಿರುವೆ ಯಾಕೋ? ಏಳು, ಏಳು, ಸ್ವಾಭಿಮಾನಿಯಾಗು, ಎಂದು ಕೈಯೆತ್ತಿ ಹಾಡಿದ ಶಿವಪ್ಪ ಕೊನೆಗೂ ರೋಷವನ್ನೇ ವ್ಯಕ್ತಪಡಿಸಲಿಲ್ಲ. ಹೋರಾಟದ ಝೋಶ್ ಇರಬೇಕಿತ್ತು ಎಂದು ಸಾರಾ ಗೊಣಗಿದಳು. ಮಗಳ ಮದುವೆ ಮಾಡಿದ ಟೆನ್‌ಶನ್‌ನಲ್ಲಿ ಇದಾನೆ. ನಾಳೆ ಮತ್ತೆ ಹಾಡನ್ನೇ ಶೂಟ್ ಮಾಡೋಣ ಎಂದೆ.

ಆಮೇಲೆ ಶಿವಪ್ಪ ತನ್ನ ಸಂಸಾರದೊಂದಿಗೆ ತನ್ನದೇ ಹೊಲಕ್ಕೆ ಹೋಗಿ ಕೆಲಸ ಮಾಡೋ ದೃಶ್ಯಗಳನ್ನೆಲ್ಲ ಶೂಟ್ ಮಾಡಿದೆವು.

ಚಿಕ್ಕನಂದಿ ಸೇರುವ ಹೊತ್ತಿಗೆ ಸಂಜೆಯಾಗಿತ್ತು. ಈಗಲೂ ಜೀತದಾಳಾಗಿರುವ ಅಣ್ಣಯ್ಯ ಮತ್ತು ರಂಗಣ್ಣರನ್ನು ಕಂಡೆವು. ಅವರನ್ನೆಲ್ಲ ಶಿವಪ್ಪನೇ ಮಾತಾಡಿಸಿದ. ಅಲ್ಲೇ ಹತ್ತಿರದಲ್ಲಿದ್ದ ಶುಂಠಿ ತೋಟಕ್ಕೆ ಹೋದರೆ ಅಲ್ಲಿ ನೀರು ಹಾಯಿಸುತ್ತಿದ್ದ ಇಬ್ಬರು ಜೀತದಾಳುಗಳನ್ನು ರಾಬಿನ್ ಒಂದು ತಾಸು ಚಿತ್ರಿಸಿ ಬರೋ ಹೊತ್ತಿಗೆ ಅವನ ಬೂಟೆಲ್ಲ ಕೆಸರುಮಯ.

ಹೊನ್ನಮ್ಮನಕಟ್ಟೆಯಲ್ಲಿ ನೀಲಮ್ಮ ತನ್ನ ಗಂಡ ಹೇಗೆ ಜೀತದಿಂದ ಹೊರಬಂದ ಎಂದು ಅಪ್ಪಟ ಹಳೆ ಮೈಸೂರು ಶೈಲಿಯಲ್ಲಿ ಎಡಬಿಡದೆ ವಿವರಿಸಿದಳು. ಅವಳು ಮಾತು ನಿಲ್ಲಿಸದೇ ನಾನು ಸಾರಾಳಿಂದ ಬೈಸಿಕೊಂಡಿದ್ದೂ ಆಯ್ತು. ನೀಲಮ್ಮನ ಮನೆಯ ಅಂಗಳದಲ್ಲಿ ಮತ್ತೆ ಶಿವಪ್ಪ ಹಾಡಿದಾಗ ಉತ್ಸಾಹ ಮೂಡಿತ್ತು. ಸಂಜೆಯ ಸೂರ್ಯನ ಬೆಳಕು ರಾಬಿನ್‌ನ ಮೂಡನ್ನು ಸರಿಯಾಗಿಟ್ಟಿತ್ತು.

ಆಮೇಲೆ ಆಗಷ್ಟೇ ಜೀತದಿಂದ ಹೊರಬಂದ ಸರಸ್ವತಿ ಮತ್ತು ರಾಮಯ್ಯನ ಸಂಸಾರವನ್ನೂ ಸಂದರ್ಶಿಸಿದೆವು. ಅರಳಿಕಟ್ಟೆಯ ಮೇಲೆ ನಡೆದ ಈ ಸಂದರ್ಶನ ನಡೆಯುವಾಗ ಊರಿನವರೆಲ್ಲ ಶಾಂತವಾಗಿ ಅವರ ಕಥೆ ಕೇಳಿದರು. ಪಾತ್ರೆ – ಪಡಗವನ್ನೆಲ್ಲ ಎಸೆದ ಯಜಮಾನನ ಕ್ರೌರ್ಯವನ್ನು ವಿವರಿಸುವಾಗ ರಾಮಯ್ಯನ ಕಣ್ಣಲ್ಲಿ ನೀರು ತುಂಬಿತ್ತು. ಮೆಲುದನಿಯಲ್ಲಿ ಮಾತನಾಡಿದ ರಾಮಯ್ಯನ ಮಾತನ್ನು ಸಾರಾಗೆ ತಿಳಿಸೋ ಹೊತ್ತಿಗೆ ನನಗೂ ಸಾಕಾಯಿತು. ಪಿಣ್ಣಯ್ಯ, ಗೌರಮ್ಮ, ಚಿಕ್ಕನಾಯಕ, ಚನ್ನಪ್ಪ, ವೀರಯ್ಯ…. ಹೆಸರುಗಳು ಬೆಳೆದವು. ಸಾರಾ ಒಬ್ಬರನ್ನೂ ಬಿಡಲಿಲ್ಲ. ಎಲ್ಲರ ಕಥೆಯನ್ನೂ ಕೇಳಿದಳು. ಬರೀ ಫಿಲ್ಮ್ ಅಲ್ಲ, ಅವರ ಸಂದರ್ಶನದ ಮಾತನ್ನೆಲ್ಲ ನಾನು ಆರ್ಕೈವ್ ಮಾಡಿ ಇಡ್ತೀನಿ ಅಂದಳು.

ಹಗಲು ರಾತ್ರಿ ಜೀತವಿಮುಕ್ತರನ್ನು ಕಂಡೆವು. ಜೀತ ವಿಮೋಚನೆಯ ಬೀದಿ ನಾಟಕ ನೋಡಿದೆವು. ರಾತ್ರಿಯೆಲ್ಲ ಸುಸ್ತಾಗಿ ಮಲಗಿದೆವು. ಯೋಚಿಸಲೂ ಸಮಯ ಇರಲಿಲ್ಲ. ಗೆಸ್ಟ್‌ಹೌಸಿನಲ್ಲಿಯೇ ಪ್ರಸಾದರನ್ನೂ ಸಂದರ್ಶಿಸಿದೆವು. ಸರಳವಾದ ಇಂಗ್ಲೀಷಿನಲ್ಲಿ ಪ್ರಸಾದ್ ಮಾತಾಡಿದ್ದರಿಂದ ನನ್ನ ಕೆಲಸವೂ ಹಗೂರಾಯ್ತು.

ಚನ್ನಾಪುರದಲ್ಲಿ ಜೀತ ವಿಮೋಚನೆ ಕುರಿತ ಸಭೆಯನ್ನು ಅರೇಂಜ್ ಮಾಡಿ ಶೂಟ್ ಮಾಡುವಾಗ ರಾಬಿನ್ ಹುಚ್ಚನಂತೆ ತಿರುಗಿದ. ಮನೆ ಮನೆ ಭೇಟಿಯ ಶೂಟಿಂಗಿನಲ್ಲಿ ಬಿಸಿಲೋ ಬಿಸಿಲು. ಕ್ಯಾಮೆರಾ ಇರಲಿ, ನಾವ್ಯಾರೂ ನೆರಳು ಬೀಳದಂತೆ ಅವನ ಜತೆ ಓಡುವುದೇ ದೊಡ್ಡ ಕಸರತ್ತಾಯಿತು. ಕೊನೆಗೆ ಗಲಾಟೆ ಮಾಡುತ್ತಿದ್ದ ಮಕ್ಕಳೊಂದಿಗೆ ಕುಣಿದ ರಾಬಿನ್ ಕಣ್ಣಿಗೆ ಹುಡುಗನೊಬ್ಬನ ಕೈಬೆರಳು ಗಾಯವಾಗಿದ್ದು ಕಂಡು, ಕೂಡಲೇ ತನ್ನ ಬ್ಯಾಗು ಬಿಚ್ಚಿದ. ಹತ್ತಾರು ಬಗೆಯ ಫಸ್ಟ್ ಏಡ್ ಪರಿಕರಗಳನ್ನು ಹುಡುಕಿ ಅವನ ಬೆರಳಿಗೆ ಬ್ಯಾಂಡೇಜು ಕಟ್ಟಿದ. ನಾನು ಈ ಥರ ಚಿಕಿತ್ಸೆ ಮಾಡೋದಕ್ಕೆ ಅಧಿಕೃತ ಸರ್ಟಿಫಿಕೇಟ್ ಹೊಂದಿದೀನಿ ಎಂದು ನನಗೆ ಕಣ್ಣು ಹೊಡೆದ. ಹಳ್ಳಿಯವರು ತಂದುಕೊಟ್ಟ ಚಾ ತುಂಬಿದ ಚೊಂಬನ್ನೇ ಎತ್ತಿ ಗಟಗಟ ಕುಡಿದ.

ಸಾರಾಗೆ ಎಷ್ಟು ಸರಿಯಾಗಿ ಇಂಗ್ಲೀಷಿನಲ್ಲಿ ಹೇಳಿದೆನೋ ಬಿಟ್ಟೆನೋ… ನನಗಂತೂ ಈ ದಿನಗಳೆಲ್ಲ ಕನಸಿನಂತೆ ಕಂಡವು. ಆದರೆ ಇದೆಲ್ಲ ವಾಸ್ತವ; ಜೀತ ವ್ಯವಸ್ಥೆ ಜೀವಂತವಾಗಿದೆ ಎಂಬ ಬೇಸರವೂ ಹೆಚ್ಚಿತು. ಪ್ರಸಾದ್ ಬಳಿ ಹೀಗಂದಾಗ ನೀವೂ ನಮ್ಮ ಹೋರಾಟಕ್ಕೆ ಸಹಾಯ ಮಾಡಿ, ನಿಮಗಿರೋ ರಾಜಕೀಯ ಸಂಪರ್ಕವನ್ನು ಈ ಸಮಸ್ಯೆ ನಿವಾರಣೆಗೆ ಯೂಸ್ ಮಾಡಿ ಎಂದರು.

ಆ ರಾತ್ರಿ ಶುಲ್ಕದ ಜೊತೆಗೆ ಸಾರಾ ಜೀತ ವಿಮೋಚನೆಯ ಸಂದೇಶ ಹೊತ್ತ ಕಪ್ಪು ಟೀ ಶರ್ಟನ್ನು ಕೊಟ್ಟು ಸಾಂಪ್ರದಾಯಿಕವಾಗಿ ಅಪ್ಪಿಕೊಂಡು ಬೀಳ್ಕೊಟ್ಟಳು. ರೂಮಿಗೆ ಬಂದು ಲಗೇಜು ಜೋಡಿಸಿಕೊಂಡೆ. ರಮೇಶನೂ ತುಂಬಾ ಥ್ಯಾಂಕ್ಸ್ ಎಂದ. ನನ್ನ ಮೈಸೂರಿನಲ್ಲೇ ಬಿಡಿ ಎಂದೆ.

ರಾತ್ರಿಯೇ ಬೆಂಗಳೂರಿಗೆ ಹೊರಟ ಟೆಂಪೋದಲ್ಲಿ ನನ್ನ ಬದಿಯಲ್ಲೇ ಕೂತ ರಾಬಿನ್ ಮಾತಿಗೆ ಶುರು ಹಚ್ಚಿಕೊಂಡ. ಅವನು ಅಮೆರಿಕಾದ ಖ್ಯಾತ ಫೋಟೋಗ್ರಾಫರ್ ಮತ್ತು ಡಾಕ್ಯುಮೆಂಟರಿ ಪ್ರವೀಣ. ಮುಂದಿನ ತಿಂಗಳು ಸಾರಾ ಜೊತೆಗೆ ಆಫ್ರಿಕಾಗೆ ಹೋಗ್ತಿದಾನೆ.

ನಿನ್ನೆ ರಾತ್ರಿ ನು ಗಲಾಟೆ ಮಾಡ್ತಾ ಇದ್ದೆಯಲ್ಲ, ಯಾಕೆ, ನಿದ್ದೆ ಬರ್‍ಲಿಲ್ವ? ಎಂದು ಕೇಳಿದೆ.

ಇಲ್ಲ. ಅಮೆರಿಕಾದಲ್ಲಿ ನಾನು ನನ್ನಮ್ಮ ಇಬ್ರೇ ಇರೋದು. ಅವಳು ಸ್ವಲ್ಪ ಮೆಂಟಲ್.. ಅವಳು ನಿನ್ನೆ ರಾತ್ರಿ ತುಂಬಾ ಗಲಾಟೆ ಮಾಡಿದ್ಲಂತೆ. ಅದಕ್ಕೇ ನಾನು ಆಸ್ಪತ್ರೆ ಸಿಬ್ಬಂದಿಗೆ ಫೋನ್ ಮಾಡ್ತಾ ಇದ್ದೆ. ಈಗ ನಾನು ಕೂಡ್ಲೇ ವಾಪಸು ಹೋಗೋದಕ್ಕೂ ಆಗಲ್ವಲ್ಲ… ಸದ್ಯ ಶೂಟಿಂಗ್ ಒಂದಿನ ಮುಂಚೇನೇ ಮುಗೀತು ಎಂದ.

ಅಸ್ವಸ್ಥ ಅಮ್ಮನನ್ನು ಅಲ್ಲಿ ಬಿಟ್ಟು ಶೂಟಿಂಗ್‌ಗೆ ಯಾಕೆ ಬರಬೇಕಿತ್ತು ಎಂದು ಕೇಳಿದೆ.

ಅಮ್ಮಗೆ ಸೋಶಿಯಲ್ ಸೆಕ್ಯುರಿಟೀನೂ ಇದೆ. ನಾನೂ ಪ್ರೀತಿಯಿಂದ ನೋಡ್ಕೋತಾ ಇದೀನಿ. ಆದ್ರೆ ಬಾಂಡೆಡ್ ಲೇಬರ್ ವಿಷ್ಯ ಹಾಗಲ್ಲ. ಅವರ ಕಥೇನ ಎಲ್ರಿಗೂ ತಿಳಿಸ್ದೇ ಇದ್ರೆ ತಪ್ಪಾಗುತ್ತಲ್ವ? ರಾಬಿನ್ ಕೇಳಿದ. ತನ್ನ ಬ್ಲಾಕ್‌ಬೆರ್ರಿಯಿಂದಾನೇ ನನಗೊಂದು ಟೆಸ್ಟ್ ಮೈಲ್ ಕಳಿಸಿದ ರಾಬಿನ್ ಒಳ್ಳೇದು. ಈ ಮೈಲ್‌ನಲ್ಲಿ ಸಿಗೋಣ ಎಂದು ಕೈಚಾಚಿದ.

ಒಂದಷ್ಟು ಕಾಸಿಗಾಗಿ ಪರಿಚಯವೇ ಇಲ್ಲದವರ ಜತೆಗೆ ಬಂದ ನಾನು ರಾಬಿನ್ ಮುಖದಲ್ಲಿ ಎಂಥ ಭಾವ ಇರಬಹುದು ಎಂದು ಊಹಿಸುತ್ತ ಕಿಟಕಿಯಾಚೆ ನೋಡತೊಡಗಿದೆ.

Leave a Reply

Your email address will not be published. Required fields are marked *