ಯಕ್ಷ ಸಿಂಚನ ದಶಮಾನೋತ್ಸವ : ಒಂದು ಖುಷಿಯ ದಿನ

ಚಿಕ್ಕ ಹುಡುಗನಾಗಿದ್ದ ದಿನಗಳಿಂದ ಯಕ್ಷಗಾನ ಪ್ರಸಂಗಗಳನ್ನು ರಾತ್ರಿಯಿಡೀ ನೋಡುತ್ತ ಬೆಳೆದ ನನಗೆ ಅದೊಂದು ತಮ್ಯ ಲೋಕ. ನಿನ್ನೆ (೮ ಸೆಪ್ಟೆಂಬರ್‍ ೨೦೧೯) ಬೆಂಗಳೂರಿನಲ್ಲಿ ಯಕ್ಷ ಸಿಂಚನದ ದಶಮಾನೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾದಾಗ ತುಂಬಾ ಸಂತೋಷವಾಯಿತು. ಬಹುದಿನಗಳ ನಂತರ ಅರ್ಧ ದಿನದಷ್ಟಾದರೂ ಯಕ್ಷಗಾನದ ವಿವಿಧ ಆಯಾಮಗಳನ್ನು ಅರಿಯುವುದಕ್ಕಾಗಿ  ಕಳೆದೆ ಎಂಬ ಸಮಾಧಾನವಾಯಿತು. ಈ ಕಾರ್ಯಕ್ರಮಕ್ಕೆ ಮಿತ್ರಮಾಧ್ಯಮ ಟ್ರಸ್ಟ್‌ನಿಂದಲೂ ಕಿರು ಬೆಂಬಲ ನೀಡಿದ್ದು ಸಾರ್ಥಕ ಅನ್ನಿಸಿತು.

ಕಾರ್ಯಕ್ರಮದಲ್ಲಿ ಯಕ್ಷಗಾನ ಪರಂಪರೆಯಲ್ಲಿ ಮರೆತೇ ಹೋದ / ಅಪರೂಪದ ಬಳಕೆಯಲ್ಲಿರುವ ಕೆಲವು ಹೆಜ್ಜೆಗಳನ್ನು ಹಿರಿಯ ಕಲಾವಿದ ಶ್ರೀ ಬನ್ನಂಜೆ ಸಂಜೀವ ಸುವರ್ಣರು ತೋರಿಸಿದ್ದು ಮರೆಯಲಾಗದ ಅನುಭವವೇ. ೬೫ರ ಹರೆಯದಲ್ಲೂ ಅವರ ಅಭಿನಯ, ಲಾಲಿತ್ಯ, ಲಯ-ಲಾಸ್ಯ, ಗತಿ – ಎಲ್ಲವೂ ಪರಂಪರೆಯ ಬಿಳಲುಗಳೊಂದಿಗೇ ಚಿತ್ತಾಕರ್ಷಕವಾಗಿ ಮೂಡಿದ್ದನ್ನು ನೋಡಿ ತುಂಬಾ ಖುಷಿಯಾಯಿತು.

ಬನ್ನಂಜೆ ಸಂಜೀವ ಸುವರ್ಣ ಪ್ರಾತ್ಯಕ್ಷಿಕೆ
ಹೂವಿನ ಕೋಲು: ಮಕ್ಕಳಿಂದ ತಾಳ ಮದ್ದಳೆ
ಶಶಾಂಕ್‌ ಕಾಶಿ

ಈ ಕಾರ್ಯಕ್ರಮದಲ್ಲೇ ಬೆಂಗಳೂರಿಗೆ ಬಂದು ನೆಲೆಸಿ ಯಕ್ಷಗಾನ ಕಲಿಕೆಯನ್ನೇ ಬದುಕನ್ನಾಗಿ ಮಾಡಿಕೊಂಡ, ಆದರೆ ತನ್ನ ಗುರು ಶ್ರೀ ಬನ್ನಂಜೆ ಸಂಜೀವ ಸುವರ್ಣರ ಹಾದಿಯನ್ನು ಮರೆಯದ ಶ್ರೀ ಕೃಷ್ಣಮೂರ್ತಿ ತುಂಗ ಅವರಿಗೆ ಸಾರ್ಥಕ-ಸಾಧಕ ಪ್ರಶಸ್ತಿ ನೀಡಿದ್ದು ಅತ್ಯಂತ ಯೋಗ್ಯವಾಗಿತ್ತು. ಅದಕ್ಕೆ ಮುನ್ನ ಅವರ ಪರಿಚಯವಾಗಿ ಕೆಲವು ನಿಮಿಷಗಳ ಕಾಲ ಮಾತನಾಡಿದ್ದೂ ನನಗೆ ಸಂತೋಷ ಕೊಟ್ಟಿತು.

ಯಕ್ಷಸಿಂಚನವು ಏರ್ಪಡಿಸಿದ್ದ ಪ್ರಸಂಗ ರಚನಾ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದ  ದೇವಸೇನಾ ಪರಿಣಯ ಪ್ರಸಂಗದಲ್ಲಿ ನನ್ನ ಪ್ರಾಥಮಿಕ ಶಾಲಾ ಸಹಪಾಠಿ (ಹೊಡಬಟ್ಟೆ ಗ್ರಾಮದ) ಕಾಶಿ ಮಂಜುನಾಥನ ಮಗ, ಕೃಷ್ಣಮೂರ್ತಿ ತುಂಗರವರ ಶಿಷ್ಯ ಶಶಾಂಕ್‌ನ ಅಗ್ನಿ ಪಾತ್ರವು ತುಂಬಾ ಹಿಡಿಸಿತು. ಅವನು ಚೋಟುದ್ದ ಇದ್ದಾಗಲೂ ಯಕ್ಷಗಾನದ ಕುಣಿತ ಮಾಡಿದ್ದನ್ನು ನೋಡಿದ್ದ ನನಗೆ ನಿನ್ನೆ ಅವನ ಪಾತ್ರದ ಅಭಿನಯ, ಕುಣಿತದ ಲವಲವಿಕೆ ತುಂಬಾ ಹಿಡಿಸಿತು.

ಯಕ್ಷಗಾನದ ಪರಂಪರೆಯಲ್ಲಿ ಕೇವಲ ಪುರಾಣವಲ್ಲ; ದೊಡ್ಡ ಕಲಾ ಪರಂಪರೆಯೇ ಇದೆ. ನನ್ನ ಅಲ್ಪ ಅರಿವಿನ ಪ್ರಕಾರ ತಾರ ಸಪ್ತಕದ ಹಿಂದುಸ್ತಾನಿ ಸಂಗೀತ ಶೈಲಿಯನ್ನು ತಾಳ,ಮದ್ದಳೆಯ ಜೊತೆಗೆ ಹಾಡುವುದು ನಿಜಕ್ಕೂ ಒಂದು ಪಾರಂಪರಿಕ ಫ್ಯೂಜನ್‌.  

ಯಕ್ಷಸಿಂಚನದ ಪ್ರಸಂಗ ಡಿಜಿಟಲೀಕರಣದ ಬಗ್ಗೆಯೂ ಅದರ ಪ್ರಮುಖ ಶ್ರೀ ರವಿ ಮಡೋಡಿಯವರಿಂದ ಮಾಹಿತಿ ತಿಳಿಯಿತು. ಐದು ಸಾವಿರ ಪ್ರಸಂಗಗಳನ್ನು ದಾಖಲಿಸಿದರೆ ಖಂಡಿತ ಅದೊಂದು ದೊಡ್ಡ ಕಾರ್ಯವೇ.

ಆದರೆ ಬೆಂಗಳೂರಿನಲ್ಲಿ ಯಕ್ಷಗಾನದ ವಿದ್ಯಾರ್ಥಿಗಳಿರುವ ಕುಟುಂಬಗಳನ್ನು ಹೊರತುಪಡಿಸಿ ಬೆಂಗಳೂರಿನವರೇ ಆಗಿರುವ ಪ್ರೇಕ್ಷಕರು ತುಂಬಾ ಕಡಿಮೆ ಸಂಖ್ಯೆಯಲ್ಲಿದ್ದರು. ಈ ಸಮಸ್ಯೆ ಎಲ್ಲರದ್ದೂ ಹೌದು. ಆದರೆ ಅಚ್ಚಗನ್ನಡದ ಕಲೆಯೊಂದನ್ನು ಉಳಿಸಿಕೊಳ್ಳಲು ಕನ್ನಡಿಗರು ಮುಂದಾಗದಿದ್ದರೆ ಹೇಗೆ ಎಂಬ ಪ್ರಶ್ನೆ ಕಾಡಿತು. ಭಾಗವತಿಕೆಯಲ್ಲಾಗಲೀ, ಪದ್ಯಗಳಲ್ಲಾಗಲೀ, ಪಾತ್ರಗಳು ತಮ್ಮ ಪ್ರತಿಭೆ, ಜ್ಞಾನಕ್ಕೆ ತಕ್ಕಂತೆ ಆಡುವ ಅರ್ಥ ಆಧಾರಿತ ಸಂಭಾಷಣೆಗಳಲ್ಲಾಗಲೀ ಕನ್ನಡ ಬಿಟ್ಟರೆ ಬೇರೆ ಇಲ್ಲವೇ ಇಲ್ಲ.  ಬೆಂಗಳೂರಿನ ಧಾವಂತಕ್ಕೆ ಹೆಸರಾದ ಜೆಸಿ ರಸ್ತೆಯ ಅಕ್ಕಪಕ್ಕದಲ್ಲೇ ರವೀಂದ್ರ ಕಲಾಕ್ಷೇತ್ರ, ಕನ್ನಡ ಭವನ ಮತ್ತು ಎಡಿಎ ರಂಗಮಂದಿರ ಇರುವುದು ವಿಚಿತ್ರ ಸನ್ನಿವೇಶ! ಕೋಟಿ ದಾಟಿದ ಜನಸಂಖ್ಯೆಯಲ್ಲಿ ೫೦೦ ಜನ ಇಂತಹ ಕಾರ್ಯಕ್ರಮಕ್ಕೆ ಸೇರುವುದೂ ದೊಡ್ಡ ವಿಷಯವಾಗಬಾರದಿತ್ತು. ಧಾರ್ಮಿಕ ಕಾರ್ಯಕ್ರಮಗಳು, ಹೊಸಕಾಲದ ಇವೆಂಟ್‌ಗಳಿಗೆ ತೋರುವ ಉತ್ಸಾಹವನ್ನೇ ಕಲಾ ಕಾರ್ಯಕ್ರಮಗಳಿಗೂ ತೋರಬೇಕು ಎಂಬುದು ನನ್ನ ಅನಿಸಿಕೆ.  

ಅದೇನೇ ಇರಲಿ, ಕೃಷ್ಣಮೂರ್ತಿ ತುಂಗ, ಯಕ್ಷಸಿಂಚನ ಮುಂತಾದ ವ್ಯಕ್ತಿ ಸಂಸ್ಥೆಗಳಿಂದ ನಗರಗಳಲ್ಲಿಯೂ ಈ ಕಲೆಗಳ ಕಲಿಕೆ, ಪ್ರದರ್ಶನ ಆಗುತ್ತಿರುವುದು ಸಂತಸದ ವಿಷಯ.        

Leave a Reply

Your email address will not be published. Required fields are marked *