ಈಗ ಫುಲ್ಬ್ರೈಟ್ ಸ್ಕಾಲರ್ ಶಿಪ್ ಪಡೆದು ಅಮೆರಿಕಾದಲ್ಲಿ ಅಧ್ಯಯನ ನಡೆಸುತ್ತಿರುವ ನವೀನ್ ತೇಜಸ್ವಿಯವರ ಟೋಟೋ ಪ್ರಶಸ್ತಿ ವಿಜೇತ ಕತೆಗಳ ಸಂಕಲನ ‘ಬಂಗಾರಕಡ್ಡಿ ಡೇರೆ ಹೂವು’ ಸೊರಬ-ಸಾಗರ ಸೀಮೆಯ ಶ್ರಮಿಕ ವರ್ಗದ ನೈಜ ಚಿತ್ರಣವನ್ನು ಬಿಂಬಿಸುವ ಮತ್ತು ಅದನ್ನು ಸೂತ್ರಬದ್ಧ ಕತೆಗಳ ರೂಪದಲ್ಲಿ ಹೇಳುವ ಯುವ ಲೇಖಕನ ಅತ್ಯುತ್ತಮ ಮತ್ತು ಪ್ರೌಢ ಪ್ರಯತ್ನವಾಗಿದೆ ಎಂದು ಹೊಗಳುವುದಕ್ಕೆ ನನಗೆ ಸಂತೋಷವಾಗುತ್ತಿದೆ!
ನವೀನ್ ತೇಜಸ್ವಿ ನಾನು ಹುಟ್ಟಿ ಬೆಳೆದ ಹೊಡಬಟ್ಟೆ ಗ್ರಾಮದ ಪಕ್ಕದಲ್ಲೇ ಇರುವ ಹೊಸಬಾಳೆಯಲ್ಲಿ ಹುಟ್ಟಿ ಬೆಳೆದ, ಯುವ ಉತ್ಸಾಹಿ ಲೇಖಕ; ಊರಿನವರನ್ನೇ ನಟರನ್ನಾಗಿ ಬಳಸಿ ಕಿರುಚಿತ್ರಗಳನ್ನು ರೂಪಿಸಿದ ಚಲನಚಿತ್ರಗಾರ. ಮೊನ್ನೆ ಈ ಪುಸ್ತಕವನ್ನು ಓದಿ ಮುಗಿಸಿದ ಮೇಲೆ ನಾನು ಕೂಡಾ ನವೀನ್ ತೇಜಸ್ವಿ ಬೆಳೆದ ಭೂಪ್ರದೇಶದಲ್ಲೇ ನನ್ನ ಕೆಲವೇ ವರ್ಷಗಳನ್ನು ಕಳೆದಿದ್ದರೂ ಯಾಕೆ ಕತೆ-ಕವನಗಳ ರೂಪದಲ್ಲಿ ದಾಖಲಿಸಲಿಲ್ಲ ಎಂದು ನನ್ನನ್ನೇ ಪ್ರಶ್ನಿಸಿಕೊಂಡೆ. ಅಷ್ಟರಮಟ್ಟಿಗೆ ಈ ಕತೆಗಳು ನನ್ನನ್ನು ಕಾಡಿದವು.
ಈ ಸೀಮೆಯ ಊರುಗಳಲ್ಲಿ ಸಾಮಾನ್ಯವಾಗಿ ಹವ್ಯಕ ಬ್ರಾಹ್ಮಣರೇ ಹೆಚ್ಚಾಗಿರುವ ಮುಖ್ಯ ವಸತಿ ಪ್ರದೇಶವನ್ನು ಮುಖ್ಯ ಊರೆಂದೂ, ಅವುಗಳಿಂದ ದೂರವಿರುವ ಕೇರಿಗಳು (ಆಗ ಹೊಲೇರು ಎಂದು ಕರೆಯುತ್ತಿದ್ದೆವು) ಶ್ರಮಿಕವರ್ಗದ್ದೆಂದೂ ಗುರುತಿಸುವ ಅಲಿಖಿತ ಪದ್ಧತಿ ಇತ್ತು. ಇವರೆಡರ ನಡುವೆ ಶೇರೇಗಾರರು (ಸಾಮಾನ್ಯವಾಗಿ ದಕ್ಷಿಣಕನ್ನಡದಿಂದ ಬಂದ ಶೆಟ್ಟಿ ಕುಟುಂಬಗಳು/ಬಂಟರು) ಮನೆ ಕಟ್ಟಿಕೊಂಡು ಶ್ರಮಿಕ ವರ್ಗದ ಕಂಟ್ರಾಕ್ಟು ತೆಗೆದುಕೊಂಡು ಅಡಿಕೆ ತೋಟಗಳಲ್ಲಿ ಕೆಲಸ ಮಾಡಿಸುತ್ತಿದ್ದರು. ಈ ವ್ಯವಸ್ಥೆ ಈಗಲೂ ಇರಬಹುದು; ನನಗೆ ಗೊತ್ತಿಲ್ಲ!
ನವೀನ್ ತೇಜಸ್ವಿ ಈ ಶ್ರಮಿಕ ವರ್ಗದ ಕತೆಗಳನ್ನು ಪ್ರಜ್ಞಾಪೂರ್ವಕವಾಗಿ ಕಟ್ಟಿಕೊಟ್ಟಿದ್ದಾರೆ. ಪ್ರಜ್ಞಾಪೂರ್ವಕ ಎಂದು ಹೇಳಿದ್ದೇಕೆ ಎಂದರೆ, ಕಥೆಗಳಲ್ಲಿ ಯಾವ್ಯಾವ ಸಂಗತಿಗಳು ಎಲ್ಲೆಲ್ಲಿ ಬರಬೇಕು ಎಂದು ನವೀನ್ ಸಾಕಷ್ಟು ಯೋಚಿಸಿದ್ದಾರೆ. ನಾಟಕ ರಂಗದ ಬಗ್ಗೆಯೂ ಒಲವಿರುವ ನವೀನ್ ಗೆ ಈ ಸಂಕೀರ್ಣ ಸಂಯೋಜನೆಗಳನ್ನು ಮಾಡುವ ಬಗ್ಗೆ ಒಲವೂ ಇದೆ; ಕುಶಲತೆಯೂ ಇದೆ. ಆದ್ದರಿಂದಲೇ, ಅವರೇ ಹೇಳಿದಂತೆ ಈ ಸಂಕಲನವು ಒಂದು ಕಾಂಪೋಸಿಟ್ ನಾವೆಲ್ (ಸಂಕೀರ್ಣ ಕಾದಂಬರಿ ಎಂಬುದು ನವೀನ್ ಪದಗುಚ್ಛ. ನಾನು ಅದನ್ನು ಸಂಯೋಜಿತ ಕಾದಂಬರಿ ಎನ್ನುವೆ) ಆಗಿಯೂ ಓದಬಹುದು. ಒಂದು ಕತೆಯ ಕೆಲವು ಪಾತ್ರಗಳು ಇನ್ನೊಂದು ಕತೆಯಲ್ಲೂ ಚಿಕ್ಕ ಪುಟ್ಟ ಪಾತ್ರಗಳಾಗಿ ಕಾಣಿಸಿಕೊಳ್ಳುತ್ತವೆ. ಮಾಲ್ಗುಡಿ ಡೇಸ್ ಅಥವಾ ಅಂತಹ ಊರು – ಕೇರಿಯನ್ನೇ ನವೀನ್ ಇಲ್ಲಿ ಚಿತ್ರಿಸಿದ್ದಾರೆ. ಆದ್ದರಿಂದ ಪಾತ್ರಗಳ ಹೆಸರುಗಳು, ಕುಟುಂಬಗಳು ಬದಲಾದರೂ, ಒಟ್ಟಾರೆ ಸನ್ನಿವೇಶಗಳು ಅವೇ: ಶ್ರಮಿಕ ವರ್ಗದ ಹಾಡು-ಪಾಡು, ಕಷ್ಟ-ಸುಖ(?); ಸಂಕಟ-ಸಮಾಧಾನ.

ನವೀನ್ ತೇಜಸ್ವಿ ಕಥಾಶೈಲಿ ಕೂಡ ತುಂಬಾ ವಿಶಿಷ್ಟ. ಅತ್ಯಂತ ಸರಳ ವಾಕ್ಯಗಳಲ್ಲಿ, ನೇರವಾಗಿ ಕತೆಯನ್ನು ಬಿಡಿಸುತ್ತ ಹೋಗುವುದು ನವೀನ್ ಶೈಲಿ. ಆದರೆ ಕೆಲವು ಪ್ರಸಂಗಗಳನ್ನು ಕಾವ್ಯಾತ್ಮಕವಾಗಿ ತಿಳಿಸಿ ನಮಗೊಂದು ಭಾವುಕತೆಯ ಅನುಭವ ನೀಡಲು ನವೀನ್ ಮರೆಯುವುದಿಲ್ಲ. ಈ ಶ್ರಮಿಕ ಸಮುದಾಯದ ಮನೆ, ಕೇರಿಯ ಚಿತ್ರಣಗಳು ಪ್ರತಿ ವಾಕ್ಯದಲ್ಲೂ ಇವೆ. ಇದೇ ನವೀನ್ ಶಕ್ತಿ. ಪ್ರತಿಯೊಂದೂ ಸಾಲನ್ನು ಓದುತ್ತಿದ್ದ ಹಾಗೆ ದೃಶ್ಯವೊಂದು ಕಣ್ಣಿಗೆ ಕಟ್ಟುತ್ತದೆ. ಸೊಸೈಟಿ ಪಂಚೆಯಿಂದ ಹಿಡಿದು ರಾಜೇಶ್ ಸೋಪಿನವರೆಗೆ ಈ ಸಮುದಾಯದ ಆಗುಹೋಗುಗಳನ್ನು ಸಮಾಜದ ಇತರೆ ಅಂಶಗಳ ಜೊತೆಗೇ ಸೇರಿಸಿ ವಿವರಿಸಿರುವುದು ಒಂದು ಬಗೆಯ ದಾಖಲೀಕರಣವೂ ಹೌದು; ಸ್ವಲ್ಪ ತಮಾಶೆಯ ವಿಷಯವೂ ಹೌದು.
ಈ ವಯಸ್ಸಿನ, ಈ ಕಾಲದ ಕನ್ನಡ ಲೇಖಕರಲ್ಲಿ ನವೀನ್ ಖಂಡಿತ ತನ್ನದೇ ಸ್ವತಂತ್ರ ಹಾದಿ ತುಳಿದಿರುವುದು ಸ್ಪಷ್ಟ. ಅವರ ಎಲ್ಲ ಕತೆಗಳೂ ಕಥಾಹಂದರದಲ್ಲಿ ಎದೆ ಸೀಳುವಂತೆ ಕಟುವಾಗಿದ್ದರೂ ನಿರೂಪಣೆಯಲ್ಲಿ ಸುಂದರವಾಗಿವೆ; ಅಚ್ಚುಕಟ್ಟಾಗಿವೆ; ಸಮಾಜದ ಸಮಕಾಲೀನ ಸವಾಲುಗಳನ್ನು ಮತ್ತು ಸಂಕಷ್ಟಗಳನ್ನು ಬಿಂಬಿಸುವಲ್ಲಿ ಗೆದ್ದಿವೆ. ಆದ್ದರಿಂದ ನವೀನ್ ಕನ್ನಡದಲ್ಲಿ ಮೂಡಿರುವ ಅತಿ ಮಹತ್ವದ ಯುವ ಲೇಖಕ ಎಂದು ಪಟ್ಟೀಕರಿಸಲು ನನಗೆ ಸಂತೋಷವಾಗುತ್ತದೆ.
ಕೆಲವು ಕತೆಗಳಲ್ಲಿ ಅಥವಾ ಕೆಲವು ನಿರೂಪಣೆಗಳಲ್ಲಿ ನವೀನ್ ಒಂದು ನಿರ್ದಿಷ್ಟ ಕಾರ್ಯಸೂಚಿಯ ಭಾಗವಾಗಿಯೇ ವಾಕ್ಯಗಳನ್ನು ಜೋಡಿಸಿರುವುದು ಕಾಣುತ್ತದೆ. ಇದು ಉತ್ಸಾಹಿ ಯುವ ಲೇಖಕನೊಬ್ಬ ಸಹಜವಾಗಿಯೇ ಅನುಸರಿಸಬಹುದಾದ ಸೂತ್ರ. ಸಿದ್ಧಾಂತದ ಸಂಗತಿಗಳನ್ನು ಸಂಪೂರ್ಣವಾಗಿ ಕತೆಯನ್ನಾಗಿ ಮಾಡಲಾಗದ ಸವಾಲು ಅವರಂತಹವರಿಗೆ ಇರುವುದು ಸಹಜ. ಆದರೆ ಅದು ಈ ಕತೆಗಳ ಉತ್ಕೃಷ್ಟತೆಯನ್ನು ಕುಂದಿಸಿಲ್ಲ. ಇಂತಹ ಹಲವು ಸನ್ನಿವೇಶಗಳನ್ನು ನವೀನ್ ಸಂಘರ್ಷದ ಅಂಚಿಗೆ ತಂದು ನಿಲ್ಲಿಸಬಹುದಿತ್ತು. ಆದರೆ ಸಮಾಜದ ಹೊಣೆಯರಿತ ಬರೆಹಗಾರನಾಗಿ ಅವರು ಸಂವಾದದ ಹೊಸಿಲಿಗೆ ತಂದಿಟ್ಟಿದ್ದಾರೆ.
ಶ್ರಮಿಕ ವರ್ಗದ ಕತೆಗಳು ಎಂದಮೇಲೆ ಬಂಡಾಯದ ಭಾವತೀವ್ರತೆ ಇರುವ ಸನ್ನಿವೇಶಗಳು ಇರಬಹುದು ಎಂಬ ನಿಮ್ಮ ನಿರೀಕ್ಷೆ ನಿಜವೇ. ಒಂದೆರಡು ಕತೆಗಳ ಕೆಲವು ಸನ್ನಿವೇಶಗಳು ತುಂಬಾ ಪ್ರಭಾವಿಸುವುದೂ ಹೌದು. ಆದರೆ ಇಲ್ಲಿ ಬಂಡಾಯವು ಹಿಂಸೆಗೆ ತಿರುಗಿಲ್ಲ; ಬದಲಿಗೆ ಓದಿಗೆ ತಿರುಗಿದೆ. ‘ಚೆಂಡು’ ಕತೆಯಲ್ಲಿನ ಹುಡುಗ ಅರುಣ ಮೊದಲು ‘ದನದ್ ಡಾಕ್ಟರ್ ಆಕ್ಕನಿ’ ಎಂದವ ಕೊನೆಯಲ್ಲಿ ‘ದೊಡ್ಡುಕಾದ್ಮೇಲೆ ನಾನು ಮುನುಷ್ರ ಡಾಕ್ಟರ್ ಆಕ್ಕನಿ’ ಎನ್ನುವ ಬದಲಾವಣೆ ಇಡೀ ಕತಾ ಸಂಕಲನದ ಸಂಕೇತವಾಗಿದೆ ಎನ್ನಬಹುದು. ಪ್ರಾಣಿಗಳಿಗಿಂತ ಕೀಳಾದ ಸನ್ನಿವೇಶದಲ್ಲಿ ಬದುಕುತ್ತಿರುವ ಮನುಷ್ಯರ ಕಾಯಿಲೆ ಗುಣಪಡಿಸಲು ಅರುಣ ನಿರ್ಧರಿಸುವುದು ಸಾಂಕೇತಿಕ. ಒಟ್ಟಿನಲ್ಲಿ ಸಾಮಾಜಿಕ ಬದಲಾವಣೆ, ಅಭ್ಯುದಯ ಆಗಬೇಕೆಂದರೆ ಓದು ತುಂಬಾ ಮುಖ್ಯ ಎಂಬ ತರ್ಕವನ್ನು ನವೀನ್ ಹಲವು ಕತೆಗಳಲ್ಲಿ ತಂದಿದ್ದಾರೆ. ಇದನ್ನೇ ನಾನು ಪ್ರಜ್ಞಾಪೂರ್ವಕ ಹೊಣೆಯರಿತ ಬರೆವಣಿಗೆ ಎಂದು ಕರೆಯುವುದು; ಈ ಸಂಯಮಕ್ಕಾಗಿ ನವೀನ್ ಅಭಿನಂದನಾರ್ಹರು. ಅವರ ಕತಾಸಂಕಲನದ ಮೊದಲ ಪುಟದಲ್ಲೇ ಕವಿ ಸಿದ್ದಲಿಂಗಯ್ಯನವರ ಪದ್ಯದ ಸಾಲುಗಳಿವೆ. ಅದು ಬಂಡಾಯ ಸಾಹಿತ್ಯದ ಆರಂಭದ ಕಾಲದ್ದೇ. ಆದರೆ ಆ ಸಾಲುಗಳನ್ನು ಓದಿ ಕತೆಗಳಲ್ಲೂ ತಥಾಕಥಿತ ಬಂಡಾಯದ ಧ್ವನಿ ಇದೆಯೇ ಎಂದು ಭಾವಿಸಿಕೊಂಡರೆ : ಖಂಡಿತ ಇದೆ. ಅವೆಲ್ಲ ಆಕ್ರೋಶ, ವ್ಯಥೆ, ಸಿಟ್ಟು, ಅವಮಾನ, ಬಡತನದ ನಡುವೆಯೂ ಓದಿಕೊಂಡು ಇವನ್ನೆಲ್ಲ ನೀಗಿಸಿಕೊಳ್ಳಬೇಕು ಎಂಬ ಭಾವವೊಂದು ಈ ಸಂಕಲನದಲ್ಲಿ ಹರಿದಿರುವುದು ಸ್ಪಷ್ಟ. ಇದನ್ನು ನಾನು ಮನಃಪೂರ್ವಕ ಬೆಂಬಲಿಸುತ್ತೇನೆ.
ಭಾಷೆಯ ಬಳಕೆಯಲ್ಲಿ ನವೀನ್ ತೋರಿರುವ ಕಾಳಜಿ ಗಮನಾರ್ಹ. ಶ್ರಮಿಕ ಸಮುದಾಯದ ಭಾಷೆ ಒಂದು ರೀತಿಯಲ್ಲಿ ದೇಸಿಯೂ ಹೌದು; ಸ್ವಲ್ಪ ಮಟ್ಟಿಗೆ ಹವ್ಯಕ ಭಾಷೆಯ ಕೆಲವು ಧ್ವನಿಗಳನ್ನು ಹೊಂದಿರುವುದೂ ಹೌದು; ಶೇರೇಗಾರರ ನುಡಿಗಟ್ಟುಗಳನ್ನು ಸೇರಿಸಿಕೊಂಡಿರುವುದೂ ನಿಜ. ಈ ಭಾಷೆಯನ್ನು ನವೀನ್ ತುಂಬಾ ಚೆನ್ನಾಗಿ ಅರಗಿಸಿಕೊಂಡೇ ಕತೆಗಳನ್ನು ಹೆಣೆದಿದ್ದಾರೆ.
ಇಲ್ಲಿರುವುದು ಹತ್ತೇ ಕತೆಗಳಾದರೂ ಅವು ಸುದೀರ್ಘವಾಗಿವೆ; ಪ್ರತಿಯೊಂದೂ ಕತೆಯ ಹರಿವು ಸ್ಪಷ್ಟವಾಗಿದೆ; ಎಲ್ಲೂ ದೊಡ್ಡ ಕೊರತೆ ಕಾಣುವುದಿಲ್ಲ. ಒಂದು ಕತೆಯ ಚಿಕ್ಕ ಪಾತ್ರವು ಇನ್ನೊಂದು ಕತೆಯ ಮುಖ್ಯ ಪಾತ್ರವಾಗುವ ಬಗೆಯು ಕನ್ನಡ ಸಾಹಿತ್ಯ ಶೈಲಿಯನ್ನು ಹಿಗ್ಗಿಸಿದೆ.
ನನಗೆ ವಿಷಾದವೆನಿಸುವುದು ಏನೆಂದರೆ: ನನ್ನ ಬಾಲ್ಯದಲ್ಲೇ ಈ ಕತೆಗಳು ನಡೆಯುತ್ತಿದ್ದವು. ಒಮ್ಮೆ ನಾನು ಹೊಡಬಟ್ಟೆ ಗ್ರಾಮದಲ್ಲಿ ಹೊಲೇರ ಬಯಲಾಟ ಪ್ರಸಂಗಕ್ಕೆ ಹೋಗಿದ್ದೆ. ಅದಕ್ಕೆ ಹವ್ಯಕ ಕುಟುಂಬಗಳವರೇ ಮುಖ್ಯ ವೀಕ್ಷಕರಾಗಿದ್ದರು. ಬಯಲಾಟವು ಮುಂಜಾನೆ ಮುಗಿಯುವ ಹೊತ್ತಿಗೆ ಇನ್ನೂ ಸಮಯವಿತ್ತು. ಎಲ್ಲರೂ ನನಗೆ ಮತ್ತು ನನ್ನ ಅಕ್ಕನಿಗೆ ‘ನೂಲೊಲ್ಯಾಕ ಚೆನ್ನಿ’ ಜನಪದ ನೃತ್ಯವನ್ನು ಆಡಲು ತಿಳಿಸಿದರು. ನಾವು ಬಾಲ್ಯದ ಹುಡುಗಾಟದಲ್ಲಿ ಕೂಡಲೇ ವೇದಿಕೆಗೆ ಹೋಗಿ ನಮಗೆ ಬಂದಷ್ಟು ಪ್ರದರ್ಶನ ನೀಡಿದೆವು. ಆಮೇಲೆ ಎಲ್ಲರೂ ಮನೆಗೆ ಹೊರಟೆವು; ನಮ್ಮನ್ನು ಯಾವ ಹವ್ಯಕರೂ ಮುಟ್ಟಿಸಿಕೊಳ್ಳಲಿಲ್ಲ! ‘ಮನಿಗೆ ಹೋದಕೂಡ್ಲೇ ಇಬ್ರೂ ಸ್ನಾನ ಮಾಡಿ’ ಎಂದರು. ನಾವು ಹಾಗೆಯೇ ಮಾಡಿದೆವು. ಇದು ಅಸ್ಪೃಶ್ಯತೆ ಎಂಬ ಚಿಕ್ಕ ಅರಿವೂ ನಮಗಿರಲಿಲ್ಲ. ಈಗ ಅದನ್ನು ನೆನಪಿಸಿಕೊಂಡಿದ್ದೇಕೆ ಎಂದರೆ, ನನ್ನ ನಂತರದ ಪೀಳಿಗೆಯ ನವೀನ್ ಕೂಡಾ ತನ್ನ ಬಾಲ್ಯದಿಂದ ಹಲವು ವರ್ಷಗಳವರೆಗೆ / ಅಥವಾ ಈಗಲೂ ಇಂತಹ ಸನ್ನಿವೇಶಗಳನ್ನೇ ಕಂಡಿರಬೇಕು ಎಂದಾದರೆ ನಾವೆಲ್ಲಿ ಬದಲಾಗಿದ್ದೇವೆ?
‘ಬಂಗಾರ ಕಡ್ಡಿ ಡೇರೆ ಹೂವು’ – ಇದನ್ನು ಬಹುಶಃ ನವೀನ್ ತಾವೇ ಸ್ವತಃ ಪ್ರಕಟಿಸಿದ್ದಾರೆ. ಇದು ಮುಂದಿನ ದಿನಗಳಲ್ಲಿ ಇನ್ನೂ ಹಲವು ಪ್ರಶಸ್ತಿಗಳನ್ನು ಪಡೆದರೆ ಆಶ್ಚರ್ಯವಿಲ್ಲ. ನಿರೂಪಣೆ, ಭಾಷೆ, ಪಾತ್ರಪೋಷಣೆ, ಹಂದರ – ಇವೆಲ್ಲದರಲ್ಲೂ ಆರಂಭದಲ್ಲೇ ಅತ್ಯಂತ ಭರವಸೆ ಮೂಡಿಸಿರುವ ನವೀನ್ ಮುಂದಿನ ದಿನಗಳಲ್ಲಿ ಸಾಮಾಜಿಕ ಜಾಗೃತಿಯ ಹಲವು ಕಾರ್ಯಗಳಲ್ಲಿ ತೊಡಗಲಿ, ಸಂಘರ್ಷವಲ್ಲ – ಶಿಕ್ಷಣ ಮತ್ತು ಸಂವಾದವೇ ಬದಲಾವಣೆಯ ಸೂತ್ರ ಎಂಬ ನನ್ನ ನಂಬಿಕೆಯನ್ನು ಉಳಿಸಿಕೊಳ್ಳಲಿ ಎಂದು ಹಾರೈಸುತ್ತೇನೆ.
ಲೇಖಕರ ಪರಿಚಯ:
ನವೀನ್ ತೇಜಸ್ವಿಒಬ್ಬ ಬರಹಗಾರ, ಸಿನಿಮಾ ನಿರ್ದೇಶನ ಮತ್ತು ಸಂಗೀತಗಾರ. ಬಿಡುಗಡೆ, ಹಬ್ಬಹರಿದಿನ ಸುಗ್ಗಿ ಶಿವರಾತ್ರಿ, ಇಮಾನ ಇವರ ಕಿರುಚಿತ್ರಗಳು. ಈ ಎಲ್ಲ ಚಿತ್ರಗಳು ಊರಿನ ಜನರೊಟ್ಟಿಗೆ ಕೂಡಿ ಮಾಡಿದ ಕಿರುಚಿತ್ರಗಳು. ಇಲ್ಲಿಯವರೆಗೆ ಸುಮಾರು ನೂರು ಮಂದಿ ಊರಿನ ಜನರ ಅವರ ಸಿನಿಮಾಗಳಲ್ಲಿ ಬೇರೆ ಬೇರೆ ವಿಭಾಗಗಳಲ್ಲಿ ಭಾಗವಹಿಸಿದ್ದಾರೆ. ಈ ಕಿರುಚಿತ್ರಗಳು ಜಗತ್ತಿನಾದ್ಯಂತ ಚಿತ್ರೋತ್ಸವಗಳಲ್ಲಿ ಭಾಗವಹಿಸಿ ಪ್ರಶಸ್ತಿಗಳನ್ನು ಪಡೆದಿವೆ. ಇಂಗ್ಲೀಷಿನಲ್ಲಿ ಬರೆದ ಇವರ ಪ್ರಬಂಧ ‘ಟ್ರ್ಯಾಕ್ ಒನ್’ ೨೦೨೩ರ ಬಾರ್ಬ್ರ ನಾಯ್ಡು ಪ್ರಶಸ್ತಿಯನ್ನು ಪಡೆದಿದೆ. ಸದರಿ ಪ್ರಬಂಧ ಸಂತ ಜೋಸೆಫರ ವಿಶ್ವವಿದ್ಯಾಲಯದ ಬಿಎ ಇಂಗ್ಲೀಷ್ ಪಠ್ಯಕ್ರಮದ ಭಾಗವಾಗಿದೆ. ಕನ್ನಡ ಕ್ರಿಯಾಶೀಲ ಬರಬಣಿಗೆಗೆ ನೀಡಲಾಗುವ ಪ್ರತಿಷ್ಟಿತ ಟೋಟೋ ಪ್ರಶಸ್ತಿ 2024, ಮತ್ತು ಡೆಕ್ಕನ್ ಹೆರಾಲ್ಡ್ ಚೇಂಜ್ ಮೇಕರ್ಸ್ 2026 ಪ್ರಶಸ್ತಿ ಇವರಿಗೆ ಲಭಿಸಿದೆ. ಇವರು ತಮ್ಮ ಬರಹ ಮತ್ತು ಸಿನಿಮಾದ ಮೂಲಕ ಅವರ ಊರಿನ ಕತೆಗಳನ್ನು ಹೇಳುತ್ತಾರೆ. ತಮ್ಮ ಹಳ್ಳಿಯಲ್ಲಿನ ಸುಮಾರು 200ಕ್ಕೂ ಅಧಿಕ ಮಕ್ಕಳಿಗಾಗಿ ಸಮುದಾಯ ಕಲಿಕಾ ಕೇಂದ್ರವೊಂದನ್ನು (ಭೀಮಶಾಲೆ) ತೆರೆದಿದ್ದಾರೆ. ಪ್ರಸ್ತುತ ಇವರು ಅಮೇರಿಕಾದ ನ್ಯೂಯಾರ್ಕ್ ವಿಶ್ವವಿದ್ಯಾಲಯದಲ್ಲಿ ಫುಲ್ಬ್ರೈಟ್ ಫೆಲೋ ಆಗಿದ್ದಾರೆ.
