ಕುಸುಮ ಆಯರಹಳ್ಳಿಯವರ ‘ಪಾಳೆಯಪಟ್ಟು’: ಇತಿಹಾಸದ ಅಲಗಿನ ಮೇಲಿನ ದಿಟ್ಟ ನಡಿಗೆ
……………………………………………………………….
ಈಗಾಗಲೇ ಈ ಕಾದಂಬರಿಯನ್ನು ಮೆಚ್ಚಿ ಹತ್ತಾರು ಓದುಗರು, ಲೇಖಕರು ತಮ್ಮ ಅಭಿಪ್ರಾಯಗಳನ್ನು ಬರೆದಾಗಿದೆ. ಆ ಲೆಕ್ಕದಲ್ಲಿ ಕಾದಂಬರಿಗೆ ಸಮಕಾಲೀನ ಸಾಹಿತ್ಯ ಸನ್ನಿವೇಶದಲ್ಲಿ ಒಂದು ಮಹತ್ವದ ಸ್ಥಾನವಂತೂ ಸಿಕ್ಕಿದೆ. ಈ ಬೆಳವಣಿಗೆಯ ನಂತರದಲ್ಲಿ ನಾನೇನು ಬರೆಯುವುದಿದೆ ಎಂದು ಯೋಚಿಸಿದೆ. ನಿನ್ನೆ ರಾತ್ರಿ ಕಾದಂಬರಿಯನ್ನು ಓದಿ ಮುಗಿಸಿದಾಗಿನಿಂದ ಅದೇ ಯೋಚನೆಯಲ್ಲೇ ದಿನ ಕಳೆದೆ. ಏನಾದ್ರೂ ಆಗ್ಲಿ, ನನ್ನ ಒಂದು ದಿಢೀರ್ ವಿಮರ್ಶೆಯನ್ನು ಬರೆದೇಬಿಡೋಣ ಎಂದು ನಿರ್ಧರಿಸಿದೆ.
ಗಳಗನಾಥರು, ಮಾಸ್ತಿ, ಶ್ರೀನಿವಾಸರಾವ್ ಕೊರಟಿ, ತರಾಸು, ಎಸ್ ಎಲ್ ಭೈರಪ್ಪ ಆದಿಯಾಗಿ (ಈ ಪಟ್ಟಿ ಅಪೂರ್ಣ) ಕನ್ನಡ ಕಾದಂಬರಿ ಲೋಕದಲ್ಲಿ ಐತಿಹಾಸಿಕ ಕಾದಂಬರಿಗಳನ್ನು ಬರೆದವರ ಸಂಖ್ಯೆ ಗಮನಾರ್ಹವಾಗಿಯೇ ಇದೆ. ಕಳೆದ ಕೆಲವು ದಶಕಗಳಲ್ಲಿ ಐತಿಹಾಸಿಕ ಕಾದಂಬರಿಗಳನ್ನು ಬರೆಯುವವರ ಸಂಖ್ಯೆ ಕಡಿಮೆಯಾದಂತೆ (ನನಗೆ) ಕಂಡಿತ್ತು. ಆದರೆ ಕೆಲ ವರ್ಷಗಳಿಂದ ಮತ್ತೆ ಐತಿಹಾಸಿಕ ಕಾದಂಬರಿಗಳು ಕನ್ನಡದಲ್ಲಿ ಪ್ರಕಟಗೊಳ್ಳುತ್ತಿವೆ. ಈ ಕುರಿತ ಹೆಚ್ಚಿನ ಚರ್ಚೆಗೆ ಹೋಗದೆ ನೇರವಾಗಿ ಕುಸುಮ ಆಯರಹಳ್ಳಿಯವರ ‘ಪಾಳೆಯಪಟ್ಟು’ ಕಾದಂಬರಿಗೆ ಬಂದುಬಿಡುತ್ತೇನೆ!

ಐತಿಹಾಸಿಕ ಕಾದಂಬರಿಗಳನ್ನು ಬರೆಯಲು ಹಲವು ವಿಧಾನಗಳಿವೆ. ಗಳಗನಾಥರು ಆ ಕಾಲದ ಸರಳಗನ್ನಡದಲ್ಲಿ ಇರುವ ಇತಿಹಾಸವನ್ನು ತಮ್ಮದೇ ಶೈಲಿಯಲ್ಲಿ ಕಟ್ಟಿಕೊಡುತ್ತಿದ್ದರು. ಜೊತೆಗೇ ಕನ್ನಡಿಗರ ಅಭಿಮಾನವನ್ನೂ ಬಡಿದೆಬ್ಬಿಸಿದ್ದರು. ಈ ನಿಟ್ಟಿನಲ್ಲಿ ಐತಿಹಾಸಿ ಕಾದಂಬರಿಗಳಿಗೆ ಒಂದು ಜನಪ್ರಿಯತೆಯ ಸ್ಥಾನವನ್ನು ಒದಗಿಸಿಕೊಟ್ಟಿದ್ದು ಶ್ರೀನಿವಾಸರಾವ್ ಕೊರಟಿ ಎಂಬುದು ನನ್ನ ಅಲ್ಪ ಓದಿನ ಅಭಿಮತ. ಇದನ್ನು ಸಾಹಿತಿ – ವಿಮರ್ಶಕರು ಒಪ್ಪದೇ ಇದ್ದರೆ ನನಗೇನೂ ಬೇಜಾರಿಲ್ಲ. ಅವರು ಈ ಕಾದಂಬರಿಗಳ ಪಾತ್ರಧಾರಿಗಳಿಂದ ಸಾಕಷ್ಟು ಮಾತುಕತೆ ಮಾಡಿಸುತ್ತಿದ್ದರು.
ಈ ಕಾಲದ ಕಾದಂಬರಿಗಳಲ್ಲಿ ಐತಿಹಾಸಿಕ ಕಾಲಘಟ್ಟದ ಮುಖ್ಯಪಾತ್ರಗಳು ಹೇಗೂ ಇರಲಿ, ಸ್ವತಂತ್ರವಾದ ಪಾತ್ರಗಳನ್ನೇ ಸೃಷ್ಟಿಸಿ ಬರೆಯುವ ವಿಧಾನವೂ ಬಂತು. ಮುಖ್ಯವಾಗಿ ಇದು ಪಾಶ್ಚಾತ್ಯ ಕಥನಶೈಲಿಯಿಂದ ಮತ್ತು ಬಹುಕಾಲದಿಂದಲೂ ನಿರ್ಮಾಣವಾಗುತ್ತಿರುವ ಐತಿಹಾಸಿಕ ಸಿನೆಮಾಗಳ ನಿರೂಪಣಾ ವಿಧಾನಗಳಿಂದಲೂ ಪ್ರಭಾವಕ್ಕೆ ಒಳಗಾಗಿದೆ ಎಂಬುದು ನನ್ನ ಅನುಮಾನ. ನಾನು ಇಂಗ್ಲಿಶಿನಲ್ಲಿ ಹೆಚ್ಚಿನ ಐತಿಹಾಸಿಕ ಕಾದಂರಿಗಳನ್ನು ಓದದೇ ಇದ್ದರೂ, ಅವುಗಳಲ್ಲಿ ಉಂಬರ್ಟೋ ಇಕೋ ಅವರ ಪ್ರಮುಖ ಕೃತಿಗಳಾದ ಬಾಡೊಲಿನೋ, ದ ನೇಮ್ ಆಫ್ ದ ರೋಸ್, – ಇವುಗಳನ್ನು ಓದಿದ್ದೇನೆ. ಅವರ ಕಥನವೇ ಒಂದು ಕಡೆಯಾದರೆ, ನಿರೂಪಣೆಯ ಸೊಗಸೇ ಇನ್ನೊಂದು ಮಹಾನ್ ಅನುಭವ. ಒಬ್ಬ ತತ್ವಜ್ಞಾನದ ಪ್ರಾಧ್ಯಾಪಕರೂ ಆಗಿದ್ದ ಇಕೋ ನಮ್ಮ ಕಾಲದ ಅತ್ಯದ್ಭುತ ಕಾದಂಬರಿಕಾರರೇ ಬಿಡಿ. ಇವರ ಕಾದಂಬರಿಗಳ ಮುಖ್ಯ ಲಕ್ಷಣ ಏನೆಂದರೆ ಸ್ವತಂತ್ರ ಕಥೆಗಳು. ಇತಿಹಾಸದ ಯಾವುದೇ ಮುಖ್ಯಪಾತ್ರವನ್ನೂ ತೆಗೆದುಕೊಳ್ಳದೆ, ತನ್ನದೇ ಆದ ಐತಿಹಾಸಿಕ ಭಿತ್ತಿಯ ಮೂಲಕ ಕಥನವನ್ನು ಮುಂದಿಡುವುದು ಅವರ ಶೈಲಿ.
ಕುಸುಮ ಇಲ್ಲಿ ಮಾರನಾಯಕ ಎಂಬ ನಿಜ ಐತಿಹಾಸಿಕ ವ್ಯಕ್ತಿಯನ್ನೇ ಕಾದಂಬರಿಯ ಮುಖ್ಯ ಪಾತ್ರವಾಗಿ ನಿರೂಪಿಸಿದ್ದಾರೆ. ಅಷ್ಟಾಗಿದ್ದರೆ ಬರವಣಿಗೆ ಹೆಚ್ಚಿನ ಸವಾಲಿನದಾಗುತ್ತಿರಲಿಲ್ಲ. ಆದರೆ ಮೈಸೂರಿನ ಒಡೆಯರ್ ಸಂಸ್ಥಾನವು ಹೇಗೆ ಉಗಮಿಸಿತು ಎಂದು ಇತಿಹಾಸಕಾರರೇ ಸ್ಪಷ್ಟವಾಗಿ ಗುರುತಿಸಿರುವ 1399ರ ಘಟನೆಯ ಕೇಂದ್ರಬಿಂದುವಾದ ಮಾರನಾಯಕನನ್ನು ಕುಸುಮ ಚಿತ್ರಿಸಿದ್ದಾರೆ. ಇದು ಕಡುಕಷ್ಟದ ಕೆಲಸ. ಜೊತೆಗೆ ಈಗಿನ ಸುಪ್ರಸಿದ್ಧ ಸುತ್ತೂರು ಶ್ರೀಮಠದ ಮೂಲಸ್ಥಾನವಾದ ಸುತ್ತೂರು ಕೂಡಾ ಕಾದಂಬರಿಯಲ್ಲಿ ಪ್ರಮುಖವಾಗಿದೆ. ಪುರವೆಂದೇ ಮೊದಲು ಪ್ರಸಿದ್ಧವಾಗಿದ್ದ ಮೈಸೂರಿನ ಚಾಮುಂಡಿಬೆಟ್ಟವು ಮೂಲತಃ ಮಹಾಬಲಗಿರಿಯಾಗಿದ್ದರಿಂದ ಹಿಡಿದು, ಕಾರುಗಹಳ್ಳಿ (ಹಲವು ಸಂದರ್ಭಗಳಲ್ಲಿ ಕಾರುಗಳ್ಳಿ ಎಂದೇ ಇದೆ), ಹದಿನಾಡು (ಹದಿನಾರು) ಮುಂತಾಗಿ ಆ ಕಾಲದ ಇತಿಹಾಸದ ಪ್ರಮುಖ ಸ್ಥಳಗಳೆಲ್ಲವನ್ನೂ ಆವರಿಸಿಕೊಂಡ ಕಥನವನ್ನು ಕುಸುಮ ಹೆಣೆದಿದ್ದಾರೆ. ಸಾಹಿತ್ಯ ಸಾಂಸ್ಕೃತಿಕ ನಗರಿಯಾದ ಮೈಸೂರಿನಿಂದ ಈವರೆಗೆ ಇಂತಹ ಮಹತ್ವದ ಐತಿಹಾಸಿಕ ಘಟನೆ ಆಧಾರಿತ ಕೃತಿ ಮೂಡಿಬಂದಿರಲಿಲ್ಲ ಎಂಬುದೇ ಆಶ್ಚರ್ಯದ ಸಂಗತಿ. ಕುಸುಮ ಈ ಇತಿಹಾಸದ ಕಂದರಕ್ಕೇ ಹಾರಿ ತಮ್ಮ ವಿಶಿಷ್ಟ ಕಲ್ಪನಾಸಾಮರ್ಥ್ಯದಿಂದ ಕಾದಂಬರಿಯನ್ನು ಸಶಕ್ತ ಕೃತಿಯಾಗಿಸಿದ್ದಾರೆ.
ಪುಸ್ತಕದ ಕೊನೆಯಲ್ಲಿ ಕುಸುಮ ಕೊಟ್ಟ ಆಕರಗಳ ಪಟ್ಟಿಯಲ್ಲಿರುವ ಕೆಲವು ಪುಸ್ತಕಗಳು ಆನ್ಲೈನಿನಲ್ಲೇ ಸಿಕ್ಕಿದ್ದರಿಂದ ಈ ವಿಮರ್ಶೆ ಬರೆಯುವಾಗ ಅವುಗಳನ್ನೂ ವಾರೆನೋಟದಿಂದ ಗಮನಿಸಿ ಬರೆಯುತ್ತಿದ್ದೇನೆ. ಸಿ ಹಯವದನರಾವ್, ಮಾರ್ಕ್ ವಿಲ್ಕ್ಸ್ , ಮೈಸೂರು ಗೆಜೆಟಿಯರ್ ಅಲ್ಲದೆ, ಅವರು ಪಟ್ಟೀಕರಿಸದ ಮೈಸೂರು ವಿವಿ ವಿಶ್ವಕೋಶದ ಪುಟಗಳನ್ನೂ ಗಮನಿಸಿದೆ.
ಐತಿಹಾಸಿಕವಾಗಿ ಈ ಮೇಲಿನ ಸಂಶೋಧಕ ಗ್ರಂಥಕರ್ತರಿಗೆ ಆಕರವಾಗಿ ಸಿಕ್ಕಿದ್ದೇ 17ರಿಂದ 18ನೇ ಶತಮಾನದಲ್ಲಿ ಬರೆದಿವೆ ಎನ್ನಲಾದ ತಾಳೆಗರಿ ಗ್ರಂಥಗಳೇ ಹೊರತು ಅವು ಕೂಡಾ 1399ರ ಕಾಲಘಟ್ಟದ್ದಲ್ಲ ಎಂಬುದು ಪ್ರಮುಖ ಅಂಶ. ವಿಶ್ವಕೋಶದಲ್ಲಂತೂ ಕುಸುಮ ಬರೆದ ಕಥನವೂ, ಬೇರೊಂದು ಕೋನದಲ್ಲಿ ನಡೆದಿದೆ ಎನ್ನಲಾದ ಘಟನೆ ಕುರಿತ ಲಾವಣಿ ಮತ್ತು ಜಾನಪದ ಗೀತೆಗಳ ಉಲ್ಲೇಖವೂ ಇದೆ. ಮಾರನಾಯಕ ಕುಸುಮರ ಕಾದಂಬರಿಯಲ್ಲಿನ ಮುಖ್ಯಪಾತ್ರ; ಧೀರ, ನಿಲುವುಗಳನ್ನು ಬಿಟ್ಟುಕೊಡಲಾರದ ಗಟ್ಟಿಗ, ಸಮರದಲ್ಲಿ ನಿಪುಣ. ಇದನ್ನು ಯಾವುದೇ ಐತಿಹಾಸಿಕ ದಾಖಲೆಯೂ ಅಲ್ಲಗಳೆದಿಲ್ಲ. ಆದರೆ ಅವನು ಒಳ್ಳೆಯವನೇ, ಅಲ್ಲವೇ ಎಂಬುದೇ ಚರ್ಚೆಗೆ ಒಳಪಟ್ಟ ವಿಚಾರ. ತಾಳೆಗರಿ ಗ್ರಂಥಗಳ ಪ್ರಕಾರ ಹೋದರೆ ಮಾರನಾಯಕ ದಾಳಿಕೋರ. ಆದರೆ ಜಾನಪದೀಯ ಮೂಲಗಳಿಗೆ ಹೋದರೆ ಆತ ಒಬ್ಬ ಮಹಾನ್ ಹೋರಾಟಗಾರ. ಹಾಗಾದರೆ ನಿಜ ಎಲ್ಲಿದೆ?
ಈಗಲೂ ಆ ಭಾಗದಲ್ಲಿ ಇರುವ ಮಾರನಾಯಕನ ವಿಗ್ರಹಗಳ ಚಿತ್ರಗಳನ್ನು ಕುಸುಮರವರೇ ಕಾದಂಬರಿಯಲ್ಲಿ ಕೊಟ್ಟಿದ್ದಾರೆ; ಅದೇ ಚಿತ್ರವೇ ವಿಶ್ವಕೋಶದಲ್ಲೂ ಇದೆ. ಮಾರನಾಯಕ ಅಂತಹ ಕೇಡುಗನಾಗಿದ್ದರೆ ಅವನ ವಿಗ್ರಹ ಇಷ್ಟುದಿನವೂ ಮೈಸೂರು ಅರಸರ ದೃಷ್ಟಿಗೆ ಬೀಳದೆಯೇ ಉಳಿದುಕೊಳ್ಳಲು ಸಾಧ್ಯವೆ? ಈ ಪ್ರಶ್ನೆ ನನಗೆ ಹುಟ್ಟಿದೆ. ಇದಕ್ಕೆ ಕೊಡಬಹುದಾದ ಒಂದೇ ಉತ್ತರ ಎಂದರೆ, ಮಾರನಾಯಕನು ಗ್ರಂಥಗಳಲ್ಲಿ ಉಲ್ಲೇಖಿತವಾದಂತೆ ಕೆಟ್ಟನಾಗಿರಲಿಲ್ಲ ಎಂಬುದೇ ಆಗಿದೆ. ಲಾವಣಿಗಳು ನಿರೂಪಣೆಗಳಲ್ಲಿ ಉತ್ಪ್ರೇಕ್ಷಿತವಾಗಿರುತ್ತವೆ ಎಂದು ಒಪ್ಪಿಕೊಳ್ಳೋಣ. ಆದರೆ ಅವುಗಳಲ್ಲಿ ವಾಸ್ತವವೂ ಇರುತ್ತವೆ.
ಇಷ್ಟೆಲ್ಲ ಯಾಕೆ ಬರೆದೆನೆಂದರೆ ‘ಯಾವ ಇತಿಹಾಸವೂ ಪೂರ್ತಿ ನಿಜವಲ್ಲ; ಯಾವ ಕತೆಯೂ ಪೂರ್ತಿ ಸುಳ್ಳಲ್ಲ’ ಎಂದು ಕುಸುಮ ಕಾದಂಬರಿಯ ಶೀರ್ಷಿಕೆಯ ಕೆಳಗೇ ಬರೆದಿರುವ ಸಾಲು. ನನ್ನ ಅಲ್ಪ ಮತ್ತು ಸ್ವತಂತ್ರ ಅಧ್ಯಯನದ ಪ್ರಕಾರ ಹೇಳುವುದಾದರೆ, ಅವರ ಮಾತು ನಿಜವೇ. ಸ್ವಾತಂತ್ರ್ಯ ಹೋರಾಟಗಾರರ ಇತಿಹಾಸವೇ ಇಂದು ಚರ್ಚೆಗೆ, ವಿವಾದಕ್ಕೆ ಒಳಗಾಗುತ್ತಿರುವ ಈ ದಿನಗಳಲ್ಲಿ ಆರು ಶತಮಾನಗಳ ಹಿಂದಿನ ಕಥನವು ಹೀಗೇ ಇತ್ತೆಂದು ಐತಿಹಾಸಿಕವಾಗಿ ಖಚಿತಪಡಿಸುವುದು ದೊಡ್ಡ ಸವಾಲು. ಆದ್ದರಿಂದಲೇ ಮಾರನಾಯಕ ಹೇಗಿದ್ದ ಎಂಬ ಕುಸುಮರ ವ್ಯಾಖ್ಯಾನವೂ ಐತಿಹಾಸಿಕವಾಗಿ ಸರಿಯೇ ಆಗಿದೆ. ಈವರೆಗೂ ಮೈಸೂರು ಅರಸರ ಮೂಲ ದೊರೆಗಳು ಹೇಗೆ ಮೈಸೂರಿಗೆ ಬಂದರು ಎಂಬ ಬಗ್ಗೆಯೇ ವಿದ್ವಾಂಸರಲ್ಲಿ ಒಮ್ಮತವಿಲ್ಲ! ಗುಜರಾತಿನಿಂದ ಬಂದು ಯದುಗಳೋ, ವಿಜಯನಗರ ಅರಸರ ಕಡೆಯಿಂದ ಬಂದವರೋ, ಮೈಸೂರಿನ ಆಸುಪಾಸಿನ ಸ್ಥಳೀಯರೋ ಎಂಬ ಚರ್ಚೆ ಇನ್ನೂ ನಡೆದಿದೆಯಂತೆ. ವಿಲ್ಕ್ಸ್ ಆಧರಿಸಿದ್ದು 18ನೆಯ ಶತಮಾನದ ‘ಮೈಸೂರು ನಗರದ ಪೂರ್ವೋತ್ತರ’ ಎಂಬನ 18ನೆಯ ಶತಮಾನದ ಕೃತಿಯನ್ನು. ಆ ಪ್ರಕಾರ ದ್ವಾರಕೆಯಿಂದ ಬಂದ ವಿಜಯ ಮತ್ತು ಕೃಷ್ಣ ಎಂಬುವವರು ಒಡೆಯರ್ ಮನೆತನದ ಸ್ಥಾಪಕರು. ಈ ಇಬ್ಬರೇ ‘ಪಾಳೆಯಪಟ್ಟು’ವಿನ ಕೊನೆಯ ಪುಟಗಳಲ್ಲಿ, ಮುಖ್ಯವಾಗಿ ಅಂತ್ಯದ ಘಟನೆಗಳಲ್ಲಿ ಕಾಣಿಸಿಕೊಳ್ಳುವ ಪುರದ ಯುವಕರಾ ಅನ್ನೋದು ಓದುಗರಿಗೇ ಬಿಟ್ಟ ವಿಚಾರ!
ಇಷ್ಟೆಲ್ಲ ಇತಿಹಾಸವನ್ನು ನಾನು ಕೆದಕಿದ್ದೇಕೆಂದರೆ, ಕುಸುಮ ಅವರ ಹೋಮ್ ವರ್ಕ್ ಎಷ್ಟು ಶಿಸ್ತಿನದಾಗಿದೆ ಎಂದು ತಿಳಿಸಲು! ಅವರು ಉಲ್ಲೇಖಿಸದ ದಾಖಲೆಗಳೂ, ಮೌಖಿಕ ಮಾಹಿತಿಗಳೂ ಹಲವಿರಬಹುದು. ಆದರೆ ಇರುವ ದಾಖಲೆಗಳನ್ನು ಪರಿಗಣಿಸಿ, ಅವೇ ಊರುಗಳಲ್ಲೇ ಹುಟ್ಟಿ ಬೆಳೆದವರಾಗಿ ಕುಸುಮ ಕೈಗೊಂಡ ಈ ಸಾಹಸ ನಿಜಕ್ಕೂ ಅದ್ಭುತವೇ. ಇದು ಅವರ ಎರಡನೆಯ ಕಾದಂಬರಿ ಎಂದೇ ಗೊತ್ತಾಗದ ಹಾಗೆ ತಮ್ಮ ಪ್ರಬುದ್ಧ ಕಥನಶೈಲಿಯಿಂದ ಸೆಳೆಯುತ್ತಾರೆ.
ಆಹಾರ ಸಂಸ್ಕೃತಿ ಎಂಬುದು ಜಾತಿಪದ್ಧತಿಗಿಂತ ಮುಖ್ಯ ಎಂಬುದು ನನ್ನ ಹಲವು ವರ್ಷಗಳ ಅನುಭವ. ಜಾತಕದಲ್ಲಿ ನಕ್ಷತ್ರ-ತಿಥಿಗಳು ಎಷ್ಟು ಹೊಂದಿಕೆಯಾಗಿವೆ ಎಂಬುದಕ್ಕಿಂತ ಇಬ್ಬರ ರಕ್ತದ ಗುಂಪುಗಳು ಕೂಡಿದರೆ ಸಮಸ್ಯೆ ಇಲ್ಲವೆ, ಇವರಿಬ್ಬರ ಆಹಾರ ಸಂಸ್ಕೃತಿಗಳು ಹೊಂದಿಕೆಯಾಗುತ್ತವೆಯೇ ಎಂಬುದೇ ವೈಜ್ಞಾನಿಕವಾದ ತಾಳೆ ಆಗಬೇಕಿವೆ. ಈ ಕಾಲದಲ್ಲೇ ಆಹಾರದ ಆಯ್ಕೆಯೇ ಕುಟುಂಬಗಳನ್ನು ಒಡೆದಿರುವುದನ್ನೂ ನಾನು ಕಂಡಿದ್ದೇನೆ. ಹೀಗಿರುವಾಗ ಆರುನೂರು ವರ್ಷಗಳ ಹಿಂದೆ ಈ ಸಮಸ್ಯೆ ಇನ್ನೂ ಗಂಭೀರವಾಗಿಯೇ ಇತ್ತು ಎಂಬುದರಲ್ಲಿ ಸಂಶಯವೇ ಇಲ್ಲ. ಕಾದಂಬರಿಯಲ್ಲಿ ಈ ಆಹಾರ ಸಂಘರ್ಷವು ಎರಡು ತಲೆಮಾರುಗಳಿಗೆ ಹಬ್ಬಿದ ಕಥನವಿದೆ. ಆದ್ದರಿಂದ ಕುಸುಮ ಈ ಅಂಶದಲ್ಲಿ ಯಾವುದೇ ಅನುಮಾನಗಳಿಲ್ಲದೆಯೇ ಗೆದ್ದಿದ್ದಾರೆ.
ಮುಖ್ಯವಾಗಿ ಕುಸುಮ ಸ್ಥಳೀಯತೆಯ ಪ್ರತಿಪಾದಕಿ. ಅವರ ಇತರೆ ಬರಹಗಳನ್ನು ಗಮನಿಸದೆಯೇ ಈ ಕಾದಂಬರಿಯ ಭಿತ್ತಿಯ ಕಾರಣವನ್ನು ತಿಳಿಯಲಾಗದು. ಯೋಳ್ತೀನ್ ಕೇಳಿ, ಕಪಿಲೆ ಕಂಡ ಕಥೆಗಳು, ದಾರಿ (ಕಾದಂಬರಿ) – ಇವೆಲ್ಲವನ್ನೂ ನೀವು ಓದಿದರೆ ಈ ಸ್ಥಳೀಯತೆಯ ಗಾಢ ಅನುಭವವಾಗುತ್ತದೆ. ಆಯರಹಳ್ಳಿಯ ಕಟ್ಟೆಯ ಮೇಲೆ ಕುಳಿತು ಸುತ್ತಲೂ ತನ್ನ ಕುತೂಹಲದ, ಜೀವನಮುಖಿ ನೋಟ ಬೀರುವ ಕುಸುಮ ತನ್ನ ಪ್ರಬಂಧಗಳಲ್ಲಿ, ಮೊದಲ ಕಾದಂಬರಿಯಲ್ಲಿ ದಾಖಲಿಸಿದ್ದು ಇವೇ ಸ್ಥಳೀಯ ದೃಶ್ಯಗಳನ್ನು; ವ್ಯಕ್ತಿಗಳನ್ನು, ಸನ್ನಿವೇಶಗಳನ್ನು. ಸಮಕಾಲೀನದಲ್ಲೂ ಸ್ಥಳೀಯ ಪ್ರಜ್ಞೆಯನ್ನು ಕಾಪಿಟ್ಟುಕೊಂಡ ಕುಸುಮ ಆರುನೂರು ವರ್ಷಗಳ ಹಿಂದೆ ಹೋದರೂ, ಅಲ್ಲೇ ತಮ್ಮ ಮನೆಯಲ್ಲೇ ಕುಳಿತಿದ್ದರು! ಸುತ್ತಮುತ್ತಲಿನ ಹಳ್ಳಿ, ಕೆರೆ, ಪತನಗೊಂಡ ಕೋಟೆ, ದೂರದಲ್ಲಿ ಎದ್ದು ನಿಂತ ಮಹಾಬಲಾಚಲ (ಹೊಯ್ಸಳ ದೊರೆ ವಿಷ್ಣುವರ್ಧನನ ಕಾಲದಲ್ಲಿ ಚಾಮುಂಡಿ ಬೆಟ್ಟಕ್ಕೆ ಈ ಹೆಸರಿತ್ತಂತೆ!) – ಎಲ್ಲವನ್ನೂ ಕುಸುಮ ಗತಕಾಲದ ಕ್ಷಣಗಳಲ್ಲಿ ಕಂಡು ಈ ಕಾದಂಬರಿಯನ್ನು ಸೃಷ್ಟಿಸಿದ್ದಾರೆ. ಕುಸುಮ ಅವರ ಈ ಸಾಹಸವನ್ನು ನಾನು ಮನಸಾರೆ ಮೆಚ್ಚಿದ್ದೇನೆ.
ಕುಸುಮ ಅವರ ಇನ್ನೊಂದು ಕುಶಲತೆ – ಆತ್ಮನಿರೀಕ್ಷಣ ಭಾವಗಳ ನಿರೂಪಣೆ. ಇದನ್ನು ‘ದಾರಿ’ಯಲ್ಲಿಯೇ ಚೆನ್ನಾಗಿ ಅನುಭವಿಸಬಹುದು.’ಪಾಳೆಯಪಟ್ಟು’ ಕೂಡಾ ಕುಸುಮ ಈ ಸಾಹಿತ್ಯಕ ಗುಣವನ್ನು ಹೀರಿ ವಿಸ್ತರಿಸಿದೆ. ಪ್ರತಿಯೊಂದು ಪಾತ್ರವನ್ನೂ ಹೊರಗೆ ನಿಂತೇ ಬರೆದಿದ್ದರೂ, ಆ ಪಾತ್ರಗಳು ಭೂಮಿಕೆಗೆ ಬಂದಕೂಡಲೇ ತಮ್ಮನ್ನು ತಾವೇ ಚಿಂತನೆಗೆ ಒಳಪಡಿಸಿಕೊಳ್ಳುವುದು ಸೃಜನಶೀಲ ಸಾಹಿತ್ಯ ರಚನೆಯ ಒಂದು ಸಹಜ ಶೈಲಿ. ಮತ್ತೊಂದು ಪಾತ್ರದ ಜೊತೆಗೆ ಮಾತಾಡುವಾಗ ಸ್ಥಳೀಯ ದೇಸಿ ಸೊಗಡಿನ ಭಾಷೆಯನ್ನೇ ಬಳಸುವ ಈ ಪಾತ್ರಗಳು ತಮ್ಮೊಳಗೇ ಚಿಂತಿಸುವಾಗ ಶಿಷ್ಟ ಭಾಷೆಗೆ ಮೊರೆಹೋಗುವ ಅಂಶವೊಂದು ಮಾತ್ರ ನನಗೆ ಸ್ವಲ್ಪ ಹಿಡಿಸಲಿಲ್ಲ. ಕುಸುಮ ಅವರ ಸಾಮರ್ಥ್ಯಕ್ಕೆ ಇದನ್ನೂ ದೇಸೀಕರಣ ಮಾಡಲು ಯಾವ ಸಮಸ್ಯೆಯೂ ಇರಲಿಲ್ಲ. ಆದರೆ ಕಾದಂಬರಿಯ ಒಟ್ಟಾರೆ ಓದಿಗೆ ಈ ಅಂಶವೇನೂ ಭಂಗ ತಂದಿಲ್ಲ ಬಿಡಿ.
ಏನೇ ಇರಲಿ, ನಮ್ಮ ಕಾಲದ ಉತ್ಸಾಹಿ, ಶಿಸ್ತಿನ ಬರಹಗಾರ್ತಿಯಾಗಿ ಕುಸುಮ ತಮ್ಮ ಎರಡನೆಯ ಕಾದಂಬರಿಯ ಮೂಲಕವೇ ಮುಂದೇನು? ಎಂಬ ಕುತೂಹಲ ಮೂಡಿಸಿದ್ದಾರೆ. ‘ಪಾಳೆಯಪಟ್ಟು’ವಿನ ಸಿಕ್ವೆಲ್ / ಪ್ರಿಕ್ವೆಲ್ ಬರೀತಾರಾ? ಗೊತ್ತಿಲ್ಲ! ಹಾಗೆ ಸಿದ್ಧ ಸೂತ್ರಗಳಲ್ಲಿ ಸಿಕ್ಕಿಕೊಳ್ಳುವುದು ಅವರ ಸ್ವಭಾವವಲ್ಲ.
ಮುಖ್ಯ: ಕುಸುಮ ಅವರು ಕಪಿಲೆಯ ಮಗಳು!
ನಾನು ಕುಸುಮ ಅವರನ್ನು ಅವರ ಕೃತಿಗಳಿಗಿಂತ ಮುಂಚೆಯೇ ಪರಿಚಯ ಮಾಡಿಕೊಂಡು ಅವರ ಮನೆಗೆ ಹೋಗಿ ಬಂದಿದ್ದೆ. ಈಗಷ್ಟೇ ಅವರ ಇತರೆ ಕೃತಿಗಳನ್ನೂ ಓದಿದ ನಂತರವೇ ‘ಪಾಳೆಯಪಟ್ಟು’ ಓದಿ ಇಷ್ಟು ಬರೆದೆ.
ಕುಸುಮ ಆಯರಹಳ್ಳಿಯವರೆ, Take a bow, for this bold attempt! We need more such works from you!
