ನೀವು ವಿವೇಕ್ ಅಗ್ನಿಹೋತ್ರಿಯವರ `ಬುದ್ಧ ಇನ್ ಎ ಟ್ರಾಫಿಕ್ ಜಾಮ್’ ಸಿನೆಮಾ ನೋಡಿದ್ದರೆ ಅಲ್ಲೊಂದು ದೃಶ್ಯ ಬರುತ್ತದೆ. ಅದರಲ್ಲಿ ಚಿತ್ರದ ನಾಯಕ ಬಾರಿನಲ್ಲಿ ಇರುತ್ತಾನೆ. ಅವನನ್ನು ದೇಶಭಕ್ತನೊಬ್ಬ (ಭಕ್ತ ಎಂದೂ ಅಂದುಕೊಳ್ಳಿ) ಛೇಡಿಸುತ್ತಾನೆ. ಊರಲ್ಲೆಲ್ಲ ಕ್ರಾಂತಿ ಮಾತಾಡೋನಿಗೆ ಬಾರಿನಲ್ಲೇನು ಕೆಲಸ ಎಂಬುದು ಅವನ ವಾದ. ನವ ಕ್ರಾಂತಿಕಾರಿಗಳು ಅತ್ಯಾಧುನಿಕ ಬಾರಿನಲ್ಲೇ ಕ್ರಾಂತಿಯ ವಿವರಗಳನ್ನು ಚರ್ಚಿಸುತ್ತಾರೆ ಎಂಬುದು ಅವನಿಗೆ ಗೊತ್ತಿಲ್ಲ ಪಾಪ!!
ಎಡ-ಬಲದ ಚರ್ಚೆ ಮಾಡುತ್ತಾ ಕೊನೆಗೆ ಬಲಕ್ಕೆ ಹೊರಳಿಕೊಳ್ಳುವ ನಾಟಕೀಯ ಚಿತ್ರಣದ ಈ ಸಿನೆಮಾ ಏನು ಹೇಳಿದೆ ಅನ್ನೋದನ್ನು ಬಿಟ್ಟುಬಿಡೋಣ. ಹೊರಗೆ ಬಂದು ನೋಡಿ, ನಮ್ಮ ನವ ಲಿಬರಲ್‌ಗಳ ಬದುಕು ಎಷ್ಟು ನಕಲಿಯಾಗಿದೆ ಎಂದು ಗಮನಿಸಿ.
ಮುಖ್ಯವಾಗಿ ಈ ಲಿಬರಲ್‌ಗಳು ಇತಿಹಾಸ-ಪರಂಪರೆಯನ್ನು ಓದುವುದಿರಲಿ, ಅದನ್ನು ನಂಬುವುದೂ ಇಲ್ಲ. ಸಿಂಧೂ, ಚೀನಾ, ಈಜಿಪ್ಟ್ ನಾಗರಿಕತೆಗಳ ಪ್ರಾಚೀನತೆಯ ಬಗ್ಗೆ ಇವರಿಗೆ ಯಾವುದೇ ಗೌರವವೂ ಇಲ್ಲ; ಪೂರ್ವದ ದೇಶಗಳು ಉಚ್ಛ್ರಾಯ ಸ್ಥಿತಿಯಲ್ಲಿದ್ದಾಗ ಕಣ್ಣುಬಿಟ್ಟು, ಮುಸ್ಲಿಮ್ ಆಕ್ರಮಣಕಾರರ ಕರಾಳಯುಗ ಮುಗಿದ ಕಾಲದಲ್ಲಿ, ಬಂದೂಕಿನ ಬಲದಲ್ಲಿ ವಸಾಹತುಗಳನ್ನು ಸ್ಥಾಪಿಸಿ ನಮ್ಮೆಲ್ಲ ಕಾಡು ಮೇಡುಗಳ ಸಿರಿಯನ್ನೆಲ್ಲ ದೋಚಿದರೂ, ಈ ದೇಶಗಳೇ ಇವರ ಆದರ್ಶ! ಕೊಳ್ಳುಬಾಕ ಬದುಕನ್ನು ಹುಟ್ಟುಹಾಕಿ ಈಗ ಪರಿಸರ ರಕ್ಷಣೆಯ ದೇಶಾವರಿ ನಗೆ ಬೀರುತ್ತಿರುವ ದೇಶಗಳೇ ಇವರ ಹಕ್ಕಿನ ಮಾನದಂಡ ! ಕಾರ್ಬನ್ ರೇಟಿಂಗ್ ನೀಡಿ ಪರಿಸರ ವ್ಯವಹಾರ ನಡೆಸಲು ಮುಂದಾಗಿರುವ ಈ ದೇಶಗಳು ತಾವು ಹಲವು ಪೀಳಿಗೆಗಳ ಕಾಲ ಕೊಳ್ಳೆ ಹೊಡೆದ ಪೂರ್ವದ ಸಂಪತ್ತನ್ನೆಲ್ಲ ವಾಪಸು ಕೊಡಲು ಶತಮಾನಗಳೇ ಬೇಕು!
ಅಮೆರಿಕಾ ಸಾಮ್ರಾಜ್ಯಶಾಹಿ ದೇಶ; ಅದು ಬಂಡವಾಳಶಾಹಿಯೂ ಹೌದು. ಈಗ ಈ ದೇಶವೂ ಸೇರಿದಂತೆ ಎಲ್ಲ ಬಹುರಾಷ್ಟ್ರೀಯ ಸಂಸ್ಥೆಗಳ ಗ್ಯಾಜೆಟ್‌ಗಳನ್ನು ಇವರು ಬಳಸುತ್ತಲೇ ಇದ್ದಾರೆ; ದಕ್ಷಿಣ ಕೊರಿಯಾ ಇರಲಿ, ಲಾಗೋಯ್ ಎಂಬ ಕಾರ್ಮಿಕ ಯಾತನಾಶಿಬಿರಗಳಲ್ಲಿ ಉತ್ಪನ್ನಗಳನ್ನು ತಯಾರಿಸುವ ಚೀನಾ ಇರಲಿ, – ಎಲ್ಲವೂ ಇವರಿಗೆ ಸಲ್ಲುತ್ತದೆ. ಅಮೆಝಾನ್, ಸ್ಯಾಂಸಂಗ್‌ನಿಂದ ಹಿಡಿದು ಫ್ಲಿಪ್‌ಕಾರ್ಟ್‌ವರೆಗೆ ಎಲ್ಲ ಬಂಡವಾಳಶಾಹಿ ಕಂಪೆನಿಗಳಿಂದಲೂ ಇವರಿಗೆ ಪುಸ್ತಕಗಳಿಂದ ಹಿಡಿದು ಎಲ್ಲ ವಸ್ತುಗಳೂ ಮನೆಗೇ ಸರಬರಾಜಾಗಬೇಕು.
ಸಮಾಜವಾದ, ಕಾರ್ಮಿಕ ಕಲ್ಯಾಣ – ಇತ್ಯಾದಿ ಮಾತನಾಡುವ ಸಾಹಿತಿಗಳು ಲೆಟರ್‌ಪ್ರೆಸ್ ( ಅಚ್ಚುಮೊಳೆ) ಉದ್ಯಮವನ್ನಾದರೂ ರಕ್ಷಿಸಿ ನೂರಾರು ಜನರಿಗೆ ಕೆಲಸ ಕೊಡಬಹುದಿತ್ತು. ಏಕೆಂದರೆ ಎಂತಹ ತಂತ್ರಜ್ಞಾನ ಕ್ರಾಂತಿಯ ಪ್ರವಾಹದಲ್ಲೂ ಅಚ್ಚುಮೊಳೆ ಮುದ್ರಣದ ತಂತ್ರಜ್ಞಾನವನ್ನು ಉಳಿಸಿಕೊಳ್ಳಬಹುದು. ಆದರೆ ನೋಡಿ: ಎಲ್ಲರ ಪುಸ್ತಕಗಳೂ ಉಳಿದವರಂತೆಯೇ ಒಳ್ಳೆಯ ಕಾಗದದಲ್ಲಿ ಆಫ್‌ಸೆಟ್ ಮುದ್ರಣದಲ್ಲಿ ಪ್ರಕಟವಾಗುತ್ತಿವೆ. ಈ ಪ್ರಕಾಶಕರೆಲ್ಲರೂ ಒಂದು ರೀತಿ ಬಂಡವಾಳ ಹೂಡಿ ತೆಗೆಯುವವರೇ. ವಿಚಾರದಲ್ಲಿ ವಿಪರೀತ; ಆಚಾರದಲ್ಲಿ ಅನಾಹುತ! ನಾನು ನಿಜಕ್ಕೂ ಅಪಾರವಾಗಿ ಗೌರವಿಸುವ ಶ್ರೀ ಟಿ ಪ್ರಸನ್ನರ ಅತ್ಯುತ್ತಮ ಚಿಂತನೆಗಳನ್ನು ಒಳಗೊಂಡ `ಯಂತ್ರಗಳನ್ನು ಕಳಚೋಣ ಬನ್ನಿ’ ಪುಸ್ತಕವೂ ಆಫ್‌ಸೆಟ್‌ನಲ್ಲೇ ಮುದ್ರಿತವಾಗಿದೆ!
ಇನ್ನು ಇವರ ದಿನಚರಿಯಲ್ಲಿ ಬಳಸು ಪೆನ್, ಪುಸ್ತಕ, ಉಡುಗೆಗಳು, ವಾಹನ, ಸಿಗರೇಟು – ಎಲ್ಲವೂ ವಸ್ತುಶಃ ಬಂಡವಾಳಶಾಹಿ ಉತ್ಪನ್ನಗಳೇ. ಖಾದಿಯನ್ನು ಧರಿಸಿ, ಕೈಯಿಂದಲೇ ಮಾಡಿದ ಚಪ್ಪಲಿಯನ್ನು ಖರೀದಿಸಿ ಬಳಸಿದ ಉದಾರವಾದಿಗಳನ್ನು ಕಾಣುವುದೇ ಅಪರೂಪ (ಅಂತಹವರು ಕೆಲವರಿದ್ದಾರೆ ಎಂದು ನಂಬಿದ್ದೇನೆ). ಕೊನೇ ಪಕ್ಷ ಇವರು ಬೀಡಿ ಕಾರ್ಮಿಕರನ್ನು ಬೆಂಬಲಿಸಲು ಬೀಡಿಯನ್ನೇ ಸೇದಿದ್ದರೂ ಸಾಕಾಗಿತ್ತು….
ಸಾಮಾನ್ಯವಾಗಿ ಬಂಡವಾಳಶಾಹಿ ಸಂಸ್ಥೆಗಳೇ ಮಹಿಳೆಯನ್ನು ಲಿಬರಲ್ ಎಂದು ಬಣ್ಣಿಸಿ ತಮ್ಮ ಉತ್ಪನ್ನಗಳನ್ನು ಮಾರುತ್ತವೆ. ಖಾಸಗಿ ಸಂಸ್ಥೆಗಾಗಿ ಮಹಿಳಾ ಉದಾರೀಕರಣದ ಜಾಹೀರಾತು ನೀಡಿದ ದೀಪಿಕಾ ಪಡುಕೋಣೆಯಿಂದ ಹಿಡಿದು ಎಲ್ಲರೂ ದುಡ್ಡಿಗಾಗಿ ನಟಿಸಿದ್ದಾರೆಯೇ ಹೊರತು ಅದರಲ್ಲಿ ಬೀದಿ ಬದಿಯ ಮಹಿಳೆಯರ ಮಾನರಕ್ಷಣೆಯ ಸೊಲ್ಲೂ ಇಲ್ಲ. ಆದರೂ ಈ ಬಗೆಯ ಮಹಿಳಾ ಹಕ್ಕುಗಳೇ ಬದುಕಿನ ಸರ್ವಸ್ವ ಎಂದು ನವ ಲಿಬರಲ್‌ಗಳು ವಾದಿಸುತ್ತಾರೆ. ಬಹುರಾಷ್ಟ್ರೀಯ ಖಾಸಗಿ ಸಂಸ್ಥೆಗಳು ಇಂಥ ನಟಿಯರ ಉದಾರತೆಯ ಸಂದೇಶವನ್ನೇ ಬಿಕರಿಗಿಟ್ಟು ಹಳ್ಳಿಯ ಮುಗ್ಧ ಹೆಣ್ಣುಗಳ ಸೌಂದರ್ಯಸಾಧನಗಳ ಕೊಳ್ಳುಬಾಕತನವನ್ನು ಹೆಚ್ಚಿಸುತ್ತವೆ. ಹೀಗೆ ಹೇಳಿದ ಕೂಡಲೇ `ಪೇಟೆಯವರಿಗೆ ಸಿಗುವ ಸಾಧನಗಳು ಹಳ್ಳಿಯವರಿಗೆ ಸಿಗಬಾರದೇ? ‘ ಎಂದು ಎಗರಿಬೀಳುತ್ತಾರೆ.
ಭೂಮಂಡಲದ ಬಹುಭಾಗವನ್ನು ಆಕ್ರಮಿಸಿ ಕೊಳ್ಳೆ ಹೊಡೆದ ಇಂಗ್ಲಿಶರು ಶಿಕ್ಷಣ ವ್ಯವಸ್ಥೆಯಲ್ಲಿ ಗೂಟ ಹೊಡೆದ ಇಂಗ್ಲಿಶ್ ಭಾಷಾ ಪ್ರಾಬಲ್ಯವನ್ನು ತಗ್ಗಿಸೋಣ ಎಂದರೆ, ಇಂಗ್ಲಿಶಿನಲ್ಲಿಯೇ ಶಾಲೆಗಳಿರಬೇಕು ಎಂಬುದು ಇವರ ವಾದ. ಭಾಷೆಯಾಗಿ ಇಂಗ್ಲಿಶ್ ಕಲಿಕೆ ಇರಲಿ, ಮಾಧ್ಯಮವಾಗಿ ಮಾತೃಭಾಷೆಯೇ ಇರಲಿ ಎಂದರೆ ಇವರಿಗೆ ಆಗಿಬರುವುದಿಲ್ಲ.
`ದನದ ಮಾಂಸ ತಿನ್ನುವುದು ಜನರ ಹಕ್ಕು’ ಎಂದು ವಾದಿಸುವ ಇವರು `ಮಾಂಸಾಹಾರದ ಸಂಸ್ಕರಣೆಯು ಅತಿ ಹೆಚ್ಚು ನೀರನ್ನು ಬೇಡುತ್ತದೆ; ಹವಾಗುಣ ವೈಪರೀತ್ಯದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ’ ಎಂದರೆ ಮೂಗು ಮುರಿಯುತ್ತಾರೆ. ದನದ ಮಾಂಸವು ತುಂಬಾ ಅಗ್ಗ ಎಂದು ವಾದಿಸುವ ಇವರು ಹಂದಿಯ ಮಾಂಸ ದನದ ಮಾಂಸಕ್ಕಿಂತ ಅಗ್ಗ ಎನ್ನುವುದನ್ನು ಅವಶ್ಯ ಮರೆಯುತ್ತಾರೆ.
ಆಕ್ರಮಣಕಾರಿ ಮುಸ್ಲಿಂ ದೊರೆಯೊಬ್ಬ ಕೆಡವಿದ ರಾಮಮಂದಿರವನ್ನು ಮತ್ತೆ ಕೊಟ್ಟೋಣ ಎಂದರೆ ಇವರದು ಭಯಂಕರ ವಿರೋಧ. ರಾಮಮಂದಿರವಿದ್ದ ಜಾಗವನ್ನು ಸಾರ್ವಜನಿಕ ಶೌಚಾಲಯ ಮಾಡಿ ಎಂದೂ ಈ ವಾದಿಗಳನ್ನು ಉಲ್ಲೇಖಿಸಿ ಇಂಡಿಯಾ ಟುಡೇಯಂಥ ಪ್ರಸಿದ್ಧ ಇಂಗ್ಲಿಶ್ ಪತ್ರಿಕೆಯೂ ಚಿತ್ರ ಬರೆಯುತ್ತದೆ. ಇತಿಹಾಸವನ್ನು ಮರೆತುಬಿಡೋಣ ಎಂದು ಇವರೆಲ್ಲ ಕಿರುಚುತ್ತಾರೆ. ಔರಂಗಜೇಬ್ ರಸ್ತೆಗೆ ಅಬ್ದುಲ್ ಕಲಾಂ (ಇಬ್ಬರೂ ಮುಸ್ಲಿಮರೇ, ಒಬ್ಬಾತ ಕ್ರೂರಿ ದೊರೆ; ಇನ್ನೊಬ್ಬರು ಸ್ವತಂತ್ರ ಭಾರತ ಕಂಡ ಮಹಾ ವಿಜ್ಞಾನಿ) ಹೆಸರು ಇಡೋಣ ಎಂದರೆ ಪತ್ರಿಕೆಗಳು `ಇತಿಹಾಸವನ್ನು ಮರೆಯಕೂಡದು’ ಎಂದು ಬೊಬ್ಬಿರಿಯುತ್ತವೆ!
ಸಮಾನತೆ ಎಂದು ಕೂಗಾಡುವ ಈ ಲಿಬರಲ್‌ಗಳು ಸಮಾನ ನಾಗರಿಕ ಸಂಹಿತೆಯ ಮೂಲಕ ಹಿಂದು-ಮುಸ್ಲಿಂ-ಕ್ರೈಸ್ತರಾದಿಯಾಗಿ ಎಲ್ಲ ಮತಧರ್ಮಗಳ ಸ್ತ್ರೀಯರಿಗೆ ಆಸ್ತಿಯಿಂದ ಹಿಡಿದು ಎಲ್ಲ ಹಕ್ಕುಗಳನ್ನೂ ಕೊಡೋಣ ಎಂದರೆ ವಿರೋಧಿಸುತ್ತಾರೆ. ಬಹುಬಗೆಯ ಆಚರಣೆ, ಮತಗಳು, ಪರಂಪರೆಗಳು, ಉಚ್ಚ ನೀಚ ಸಮುದಾಯಗಳು ಇರುವ ಭಾರತದಲ್ಲಿ ಸಮಾನ ನಾಗರಿಕ ಸಂಹಿತೆ ತರದೆಯೇ ಮಹಿಳೆಯರ ಹಕ್ಕುಗಳನ್ನು ಸ್ಥಾಪಿಸಲು ಸಾಧ್ಯವೇ ಇಲ್ಲ ಎಂಬುದನ್ನು ಇವರೆಲ್ಲರೂ ಜಾಣತನದಿಂದ ಮರೆಯುತ್ತಾರೆ. ಇಂಥ ಸಂಹಿತೆಯೇನು ಭಾರತದಲ್ಲಿರದೆ ಇರಾಖ್, ಇರಾನಿನಲ್ಲಿ, ಸೌದಿ ಅರೇಬಿಯಾದಲ್ಲಿ ಇರಲು ಸಾಧ್ಯವೇ? ಅಮೆರಿಕಾಗಿಂತ ದಶಕಗಳ ಮೊದಲೇ ಮಹಿಳೆಯರಿಗೆ ಮತದಾನದ ಹಕ್ಕನ್ನು ನೀಡಿದ ಭಾರತಕ್ಕೆ ಅಮೆರಿಕಾದ ಬುದ್ಧಿಜೀವಿಗಳಿಂದಲೇ ಉಪದೇಶ ಸಿಗುತ್ತಿದೆ!
ಭಾರತೀಯ ಪರಂಪರೆಯ ಆಯುರ್ವೇದ ಮತ್ತು ಸಸ್ಯ ವಿಜ್ಞಾನವು ನೈಸರ್ಗಿಕ ಉತ್ಪನ್ನಗಳ ಚಿಕಿತ್ಸೆಯನ್ನು ರೂಪಿಸಿದರೂ ಇವರಿಗೆಲ್ಲ ಅಸಡ್ಡೆ. ಅತಿ ರಾಸಾಯನಿಕಗಳ ಕಾಸ್ಮೆಟಿಕ್‌ಗಳ ಬಗ್ಗೆ ಇವರದು ವಿರೋಧವಿಲ್ಲ. ಧಾರ್ಮಿಕ ಆಚರಣೆಗಳಲ್ಲಿ ಅಡಗಿರುವ ವಿಚಾರಗಳನ್ನು ಅತಿಯಾಗಿ ಬಣ್ಣಿಸಿದ್ದನ್ನು ಹೊರತುಪಡಿಸಿದರೂ, ಹಲವು ಅಪೂರ್ವ ಬದುಕಿನ ಸತ್ಯಗಳು ಕಾಣಸಿಗುತ್ತವೆ ಎಂಬುದನ್ನು ಒಪ್ಪಲು ಇವರು ತಯಾರಿಲ್ಲ.
ಇಷ್ಟೆಲ್ಲ ಆದಮೇಲೆ ಫೇಸ್‌ಬುಕ್ ಎಂಬ ಅಪ್ಪಟ ಬಂಡವಾಳಶಾಹಿ ವೇದಿಕೆಯಲ್ಲಿ ಇವರ ಆರ್ಭಟ! ಇವರು ಕಿರುಚಿದಷ್ಟೂ ಮಾರ್ಕ್ ಝುಕರ್‌ಬರ್ಗ್‌ನ ಕಿಸೆ ಭಾರವಾಗುತ್ತದೆ ಎಂಬುದು ಇವರಿಗೆ ಗೊತ್ತಿಲ್ಲವೆ?
ನವ ಲಿಬರಲ್‌ಗಳ ಈ ನಕಲಿ ಬದುಕು ಹೇಳಿದಷ್ಟೂ ಇದೆ. ಸದ್ಯಕ್ಕೆ ಇಷ್ಟು ಸಾಕು.
My blog may hurt other genuine liberals,I am deeply sorry about that.