ಪಿಯೆರೆ ಒಮಿಡ್ಯಾರ್ ದಾನಪಾಶ: ಅಲಿಪ್ತ ಮಾಧ್ಯಮದ ಸರ್ವನಾಶ

ನೀವು ಹಣ ಪಾವತಿಗೆ ಪೇಪಾಲ್ (paypal.com) ) ಬಳಸಿ; ಖರೀದಿಗೆ ಈಬೇ (ebay.com) ತಾಣವನ್ನು ಬಳಸಿ; ಸರ್ಕಾರಕ್ಕೆ ಯಾವುದೋ ಸಾಮಾಜಿಕ ಬೇಡಿಕೆಯೊಂದನ್ನು ಸಲ್ಲಿಸಲು ಚೇಂಜ್ ಡಾಟ್ ಆರ್ಗ್ (change.org) ತಾಣಕ್ಕೆ ಹೋಗಿ ಸಹಿ ಹಾಕಿ; ಸರ್ಕಾರದ ವಿರುದ್ಧ ಬರುವ ಹಲವು ಲೇಖನಗಳನ್ನು, ಹೊಸ ಜಾಲತಾಣಗಳಲ್ಲಿ ಬರುವ ತನಿಖಾ ವರದಿಗಳನ್ನು ಓದಿ; ಕ್ವಿಕ್ರ್‌ನಲ್ಲಿ (quikr.com) ನಿಮ್ಮ ಹಳೆಯ ವಸ್ತುವನ್ನು ಮಾರಿ; ಮೊಬೈಲ್‌ನಲ್ಲಿ ಭಾರತೀಯ ಭಾಷೆಗಳೇ ಇರಬೇಕೆಂದು ಹಟ ಹಿಡಿದು ಇಂಡಸ್‌ಓಎಸ್ (indusos.com) ಸ್ಮಾರ್ಟ್‌ಫೋನ್ ಖರೀದಿಸಿ; ರಾಜಕಾರಣಿಗಳ ಭ್ರಷ್ಟಾಚಾರ – ಅಕ್ರಮ ಸಂಪತ್ತು – ಅಪರಾಧಗಳ ಬಗ್ಗೆ ತಿಳಿಯಲು (adrindia.org) ಹೊರಡಿ; ಉದ್ಯಮ ಆರಂಭಿಸಿ ಸಾಲಕ್ಕಾಗಿ ಹುಡುಕಾಡಿ : – ನಿಮ್ಮ ಇಂದಿನ ಇಂಥ ಹಲವು ಚಟುವಟಿಕೆಗಳಲ್ಲಿ ಅಮೆರಿಕಾದ ದಾನಶೂರ ಪಿಯೆರೆ ಒಮಿಡ್ಯಾರ್ ಪಾತ್ರವಿದೆ. ಮೇಲೆ ಉದಾಹರಿಸಿದ ಎಲ್ಲ ಸಂಸ್ಥೆಗಳಲ್ಲೂ ಈತನ ಪಾಲಿದೆ.

ಈಬೇ ಎಂಬ ವಾಣಿಜ್ಯ ಜಾಲತಾಣದ ಸ್ಥಾಪಕ ಪಿಯೆರೆ ಒಮಿಡ್ಯಾರ್ ಈಗ ಜಗತ್ತಿನ ಹಲವು ದೇಶಗಳ ಚಳವಳಿಗಳು, ನೀತಿ ನಿಲುವುಗಳನ್ನು ನಿರ್ಧರಿಸುವ ಹೋರಾಟಗಳು, ಸರ್ಕಾರದ – ಚುನಾವಣೆಗಳ ಮೇಲೆ ಪ್ರಭಾವ ಬೀರುವ ವಿಷಯಗಳು – ಇವೆಲ್ಲವನ್ನೂ ನಿರ್ಧರಿಸುವ ಅಸೀಮ ನಿಯಂತ್ರಣ ಸಾಧಿಸಿದ್ದಾರೆ. ಭಾರತದ ಮಾಧ್ಯಮ ಮತ್ತು ಇತರೆ ಸೇವಾ ಸಂಸ್ಥೆಗಳಿಗೆ ಒಮಿಡ್ಯಾರ್ ಅತಿಹೆಚ್ಚಿನ ಪ್ರಮಾಣದಲ್ಲಿ ದಾನ ನೀಡಿದ್ದಾರೆ. ಉದಾರವಾದಿ ಚಿಂತನೆಯ ಈ ಬಂಡವಾಳಶಾಹಿ ಸಿರಿವಂತನ ವಿಶ್ವವ್ಯಾಪಿ ಕಾರ್ಯಸೂಚಿಯನ್ನು ತಿಳಿಯುವುದು ಎಡ-ಬಲ ಸಿದ್ಧಾಂತಿಗಳಿಗೂ ಆಗಿಲ್ಲ. ಹಣ ಎಲ್ಲಿಂದ ಬಂದರೇನು, ನಮ್ಮ ಕಾರ್ಯಸೂಚಿಗೆ ಅಡ್ಡಿಯಿಲ್ಲವಲ್ಲ ಎಂಬಂತೆ ಮುಖ್ಯವಾಗಿ ಎಡಪಂಥೀಯ ಪತ್ರಕರ್ತರು ಮತ್ತು ಚಿಂತಕರು ಮಾಧ್ಯಮರಂಗಕ್ಕೆ ಧುಮುಕಿದ್ದಾರೆ. ಅದರೆ ಫಲವೇ ಈಗ ನೀವು ಎಲ್ಲೆಲ್ಲೂ ಲಿಬರಲ್ ವಾದದ ಹೆಸರಿನಲ್ಲಿ ಕಾಣುತ್ತಿರುವ ಆನ್‌ಲೈನ್ ಇಂಗ್ಲಿಶ್ ಸುದ್ದಿತಾಣಗಳು.

ಇತ್ತೀಚೆಗೆ ಹತ್ಯೆಯಾದ ಕರ್ನಾಟಕದ ಪತ್ರಕರ್ತೆ ಗೌರಿ ಲಂಕೇಶ್ ಕುರಿತು ಇಂಗ್ಲಿಶ್ ಪತ್ರಕರ್ತರು ಸಮಾಜತಾಣದಲ್ಲಿ ಭಾರೀ ಪ್ರಮಾಣದಲ್ಲಿ ಬರೆದಾಗ, ಹಲವೆಡೆ ಇನ್ನೂ ಹತ್ತಾರು ಪತ್ರಕರ್ತರು ಸತ್ತರೂ ಈ ಇಂಗ್ಲಿಶ್ ಪತ್ರಕರ್ತರೇಕೆ ಸುಮ್ಮನಿದ್ದರು ಎಂದು ಆನಂದ್ ರಂಗನಾಥನ್ ಎಂಬ ಪತ್ರಕರ್ತರೊಬ್ಬರು ಟ್ವಿಟರ್‌ನಲ್ಲಿ ಪ್ರಶ್ನಿಸಿದ್ದರು. ಈ ಪ್ರಶ್ನೆಯ ಜಾಡು ಹಿಡಿದು ಹೋದಾಗ ಕಳೆದ ಐದಾರು ವರ್ಷಗಳಲ್ಲಿ ಒಮಿಡ್ಯಾರ್ ಕೈಗೊಂಡ ಮಾಧ್ಯಮ ವಿಪ್ಲವ ನನ್ನೆದುರು ಅನಾವರಣವಾಯಿತು. ಹಲವಾರು ನೂರು ಕೋಟಿ ರೂ.ಗಳ ಈ ಮಹಾ ಕಾರ್ಯಸೂಚಿಯ ಆಳ – ಅಗಲ ನನಗಿನ್ನೂ ಅರಿವಾಗಿಲ್ಲ. ಆದ್ದರಿಂದ ಈ ಲೇಖನ ಹೆಚ್ಚೆಂದರೆ ಒಂದು ಪ್ರಥಮ ಮಾಹಿತಿ ವರದಿ!

ಮೊದಲ ಪೀಳಿಗೆಯ ಆನ್‌ಲೈನ್ ವಾಣಿಜ್ಯತಾಣಗಳಲ್ಲಿ ಒಂದಾದ ಈಬೇ ಎಂಬುದು ಮೂಲತಃ ಸರಕುಗಳನ್ನು ಹರಾಜಿನ ಮೂಲಕ ಮಾರುವ, ಖರೀದಿಸುವ ವೇದಿಕೆ. ಇದರ ಈಗಿನ ಅಂದಾಜು ಆಸ್ತಿ ೨೪೦೦ ಕೋಟಿ ಡಾಲರ್ (ಸುಮಾರು ೧.೫ ಲಕ್ಷ ಕೋಟಿ ರೂ.). ಈ ತಾಣವನ್ನು ೧೯೯೫ರಲ್ಲಿ ಹುಟ್ಟುಹಾಕಿದ ಒಮಿಡ್ಯಾರ್ ಈಗ ೯೦೦ ಕೋಟಿ ಡಾಲರ್‌ಗಳನ್ನು ಹೊಂದಿದ್ದಾರೆ. ಈ ಮೊತ್ತದಲ್ಲಿ ಈವರೆಗೆ ೧೦೦ ಕೋಟಿ ಡಾಲರ್ (೬೪೦೦ ಕೋಟಿ ರೂ.)ಗಳನ್ನು ವಿವಿಧ ಸಂಘ, ಸಂಸ್ಥೆಗಳಿಗೆ ದಾನ ನೀಡಲಾಗಿದೆ. (ಈ ದಾನಗಳ ವಿವರಕ್ಕೆ ಬಾಕ್ಸ್ ನೋಡಿ). ಇವುಗಳಲ್ಲಿ ಅರ್ಧದಷ್ಟು ಮೊತ್ತವು ಲಾಭಸಹಿತ ಯೋಜನೆಗಳಿಗೂ, ಇನ್ನರ್ಧವು ಲಾಭರಹಿತ ಯೋಜನೆಗಳಿಗೂ ಹರಿದಿದೆ. ಲಾಭಸಹಿತ ಉದ್ದಿಮೆಗಳಲ್ಲಿ ಹೂಡಿದ ಹಣದ ವಿವರ ಸಿಗುತ್ತಿಲ್ಲ.

ಪಿಯೆರೆ ಒಮಿಡ್ಯಾರ್‌  ಇನ್ನೂ 8 ಬಿಲಿಯ ಡಾಲರ್‌ಗಳನ್ನು ದಾನ ಮಾಡಬೇಕಿದೆ!

ಪಟ್ಟಿಯಲ್ಲಿ ಇರುವ ಮಾಧ್ಯಮ ಸಂಸ್ಥೆಗಳ ಜಾಲತಾಣಗಳನ್ನು ನೀವು ನೋಡಿದರೆ ಒಂದು ವಿಷಯ ಗಟ್ಟಿಯಾಗುತ್ತದೆ: ಪಾರದರ್ಶಕತೆಯ ಹೆಸರಿನಲ್ಲಿ ಅಭಿವೃದ್ಧಿಯನ್ನೆಲ್ಲ ಟೀಕೆ ಮಾಡುತ್ತ, ಸದಾ ಎಡ ಸಿದ್ಧಾಂತಗಳನ್ನೇ ಪೋಷಿಸುತ್ತ ಅಬ್ಬರದ ಪ್ರಚಾರ ಮಾಡುವುದು. ಹೇಳುವ ವಿಷಯಗಳಲ್ಲಿ ವಾಸ್ತವತೆ ಇದ್ದರೂ ಅದನ್ನೆಲ್ಲ ಒಂದು ಸಿದ್ಧಾಂತದ ರೂಪದಲ್ಲಿ ಮಂಡಿಸುವುದು. ಸದ್ಯಕ್ಕಂತೂ ‘ಬಲಪಂಥೀಯ’ ಮೋದಿ ಸರ್ಕಾರವು ಇರುವುದರಿಂದ ಈ ಜಾಲತಾಣಗಳಿಗೆ ಬಿಡುವೇ ಇಲ್ಲ. ಪ್ರತಿದಿನವೂ ಒಂದಿಲ್ಲೊಂದು ಬಗೆಯ ಸರ್ಕಾರ ವಿರೋಧಿ ವಿಶ್ಲೇಷಣೆಗಳು ಈ ಜಾಲತಾಣಗಳಲ್ಲಿ ಬರುತ್ತಲೇ ಇರುತ್ತವೆ. ಸ್ಕ್ರೋಲ್ ತಾಣದ (scroll.in) ಮೂಲ ಕಂಪನಿ ಅಮೆರಿಕಾದಲ್ಲಿದೆ. ನ್ಯೂಸ್‌ಲಾಂಡ್ರಿ ಎಂಬ ತಾಣದಲ್ಲಿ (www.newslaundry.com) ಒಮಿಡ್ಯಾರ್‌ನ ಪಾಲು ಶೇಕಡಾ ೧೮ ದಾಟಿದೆ. ಸ್ಕ್ರೋಲ್‌ನಲ್ಲಿ ಒಮಿಡ್ಯಾರ್ ಏನಿಲ್ಲೆಂದರೂ ೨೦ ಕೋಟಿ ಡಾಲರ್ (೧೨೮೦ ಕೋಟಿ ರೂ.) ಹೂಡಿಕೆಯಾಗಿದೆ ಎಂಬ ವರದಿಯಿದೆ. ಈ ಹಣವನ್ನು ನ್ಯೂಯಾರ್ಕ್‌ನಲ್ಲಿರುವ ಮೀಡಿಯಾ ಡೆವಲಪ್‌ಮೆಂಟ್ ಇನ್ವೆಸ್ಟ್‌ಮೆಂಟ್ ಫಂಡ್ (ಎಂಡಿಐಎಫ್ www.mdif.org) ಮೂಲಕ ಹರಿಸಲಾಗಿದೆ. ಅಂದರೆ ದೇಣಿಗೆ ರೂಪದ ವೆಂಚರ್ ಕ್ಯಾಪಿಟಲ್ ಹೂಡಿಕೆಯಲ್ಲಿ ಆಸಕ್ತಿ ಇರುವ ಜಾಗತಿಕ ಸಂಸ್ಥೆಯೊಂದು ‘ಭಾರತದಲ್ಲಿ ಸ್ವತಂತ್ರ ಮಾಧ್ಯಮ’ಕ್ಕಾಗಿ ಹೂಡಿಕೆ ಮಾಡುತ್ತದೆ! ಸ್ಕ್ರೋಲ್ ಕಚೇರಿಯಿಂದ ಸಿಬ್ಬಂದಿಗೆ ಮತ್ತು ಲೇಖಕರಿಗೆ ಕೈತುಂಬ ಹಣ ಬರುತ್ತದೆ ಎಂಬುದು ಸಂಬಳದ ದೃಷ್ಟಿಯಿಂದ ಒಳ್ಳೆಯದೇ. ಸಮಾಜದ ದೃಷ್ಟಿಯಿಂದ ನೋಡಿದಾಗ ಪ್ರಶ್ನೆ ಮೂಡುತ್ತದೆ.

ರಾಜಕೀಯ ಬದಲಾವಣೆಗಾಗಿ

ಪಿಯರೆ ಒಮಿಡ್ಯಾರ್ ೨೦೦೪ರಲ್ಲಿ ಒಮಿಡ್ಯಾರ್ ನೆಟ್‌ವರ್ಕ್ ಸ್ಥಾಪಿಸಿದಾಗ ಈ ಜಾಲದ ಹೇಳಿಕೆ ತುಂಬಾ ಖಚಿತವಾಗಿಯೇ ಇತ್ತು; ಈಗಲೂ: ’ನಾವು ಜನರ ಬದುಕನ್ನು, ಸಮುದಾಯಗಳನ್ನು ಮತ್ತು ತಮ್ಮ ಸುತ್ತಲಿನ ಜಗತ್ತನ್ನು ಸುಧಾರಿಸುವ ಅವಕಾಶಗಳನ್ನು ಸೃಷ್ಟಿಸುವ ಉದ್ಯಮಶೀಲರಲ್ಲಿ ಮತ್ತು ಅವರ ದೂರದೃಷ್ಟಿಯ ಕನಸುಗಳಲ್ಲಿ ಹೂಡಿಕೆ ಮಾಡುತ್ತೇವೆ’ ಎಂಬುದು ಈ ಜಾಲದ ಹೇಳಿಕೆ. ‘ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯ ಬದಲಾವಣೆಗೆ ರಭಸ ನೀಡುತ್ತೇವೆ’ ಎಂಬುದು ಈ ಜಾಲದ ಇನ್ನೊಂದು ನಂಬಿಕೆ. ಇದರ ಅರ್ಥ ನಿಗೂಢವಾಗೇನೂ ಉಳಿದಿಲ್ಲ; ರಾಜಕೀಯ ಉಲ್ಲಟಪಲ್ಲಟಗಳನ್ನು ಉಂಟುಮಾಡಲು ಎಲ್ಲಾ ಬಗೆಯ ಕಾನೂನಾತ್ಮಕ ಮತ್ತು ಕಾನೂನೇತರ ರಾಜಕೀಯ ಚಟುವಟಿಕೆಗಳನ್ನು ನಡೆಸುವ ಹುನ್ನಾರ ಇದು ಎಂದು ಪತ್ರಕರ್ತ ಪಂಕಜ್ ಸಕ್ಸೇನಾ ಬರೆಯುತ್ತಾರೆ.

ಇದಕ್ಕೆ ಯುಕ್ರೇನ್‌ನ ರಾಜಕೀಯ ಸ್ಥಿತ್ಯಂತರದ ಉದಾಹರಣೆಯೂ ಇದೆ. ಅಲ್ಲಿ ನ್ಯೂ ಸಿಟಿಝನ್ ಎಂಬ ಸ್ಕ್ರೋಲ್‌ನಂಥದ್ದೇ ಜಾಲತಾಣ ಮಾಧ್ಯಮದ ಮೂಲಕ ರಶ್ಯಾ ಪರವಾಗಿದ್ದ ಅಧ್ಯಕ್ಷ ಯಾನುಕೋವಿಚ್‌ನನ್ನು ಪದಚ್ಯುತಗೊಳಿಸಲಾಯಿತು ಎಂಬ ವಿಶ್ಲೇಷಣೆಗಳೂ ಇವೆ. ಇದನ್ನೇ ಒಮಿಡ್ಯಾರ್ ‘ಆಕ್ರಮಣಕಾರಿ ಮತ್ತು ಸ್ವತಂತ್ರ ಪತ್ರಿಕೋದ್ಯಮ’, ’ಹೆಚ್ಚಿನ ಪಾರದರ್ಶಕತೆ’ ಎಂದು ಕರೆಯುತ್ತಾರೆ.

ವಿಕಿಲೀಕ್ಸ್‌ಗೆ ವಿರೋಧ; ಸ್ನೋಡೆನ್‌ಗೆ ಮಣೆ!

ಈ ಸ್ವತಂತ್ರ ಪತ್ರಿಕೋದ್ಯಮದ ವಿಚಿತ್ರವೆಂದರೆ, ಇಂಥದ್ದೇ ಸ್ವತಂತ್ರ ಮತ್ತು ನಿರ್ಭೀತ ಪತ್ರಿಕೋದ್ಯಮ ಕೈಗೊಂಡ ವಿಕಿಲೀಕ್ಸ್‌ನ್ನು ದಮನಿಸಲು ಸ್ವತಃ ಒಮಿಡ್ಯಾರ್ ಯತ್ನಿಸುತ್ತಿರುವುದು! ವಿಕಿಲೀಕ್ಸ್‌ನ ಪೇಪಾಲ್ ಆನ್‌ಲೈನ್ ಹಣ ಪಾವತಿ ವ್ಯವಸ್ಥೆಯನ್ನು ಸ್ತಂಭನಗೊಳಿಸಿದ್ದು ಇದೇ ಒಮಿಡ್ಯಾರ್. ಏಕೆಂದರೆ ಪೇಪಾಲ್ ಆನ್‌ಲೈನ್ ಪಾವತಿ ಜಾಲವು ಈಗ ಒಮಿಡ್ಯಾರ್ ಕೈಯಲ್ಲಿದೆ. ಪೇಪಾಲ್ ಎಂಬುದೀಗ ಈ-ಬೇಯ ಅತಿ ಪ್ರಮುಖ ಅಂಗ. ಖರೀದಿ ಮಾಡುವವರಿಂದ ಉತ್ಪನ್ನದ ಮೇಲೆ ಲಾಭ ಪಡೆಯುವುದಲ್ಲದೆ ಪೇಪಾಲ್ ಮೂಲಕ ಹಣ ವರ್ಗಾವಣೆ ಶುಲ್ಕವನ್ನೂ ಒಮಿಡ್ಯಾರ್ ಪಡೆಯುತ್ತಾರೆ. ಅಭಿವ್ಯಕ್ತಿ ಹಕ್ಕಿನ ಬಗ್ಗೆ ಇಷ್ಟೆಲ್ಲ ಕಾಳಜಿ ಇರುವ ಒಮಿಡ್ಯಾರ್ ಇಲ್ಲಿ ವಿಕಿಲೀಕ್ಸ್‌ನ್ನು ಏಕೆ ವಿರೋಧಿಸುತ್ತಾರೆ ಎಂಬುದಕ್ಕೆ ಈವರೆಗೂ ಖಚಿತ ಉತ್ತರ ದೊರಕಿಲ್ಲ. ಜೂಲಿಯಾನ್ ಅಸಾಂಜೆ ರೀತಿಯಲ್ಲೇ ಅಮೆರಿಕಾದ ರಹಸ್ಯ ದಾಖಲೆಗಳನ್ನು ಬಹಿರಂಗಪಡಿಸಿದ ಎಡ್ವರ್ಡ್ ಸ್ನೋಡೆನ್ ಮೇಲೆ ಒಮಿಡ್ಯಾರ್ ಸಂಪೂರ್ಣ ನಿಯಂತ್ರಣ ಸಾಧಿಸಿದ್ದಾರೆ; ಈ ಪ್ರಕರಣದಲ್ಲಿ ಸಕ್ರಿಯನಾಗಿರುವ ಪತ್ರಕರ್ತ ಗ್ಲೆನ್‌  ಗ್ರೀನ್‌ವಾಲ್ಡ್ ಈಗ ಒಮಿಡ್ಯಾರ್‌ನ ಸಂಬಳ ಪಡೆಯುತ್ತಿದ್ದಾರೆ. ಒಮಿಡ್ಯಾರ್ ಹುಟ್ಟುಹಾಕಿದ ಫರ್ಸ್ಟ್ ಲುಕ್ ಮೀಡಿಯಾದಲ್ಲಿ(www.firstlook.media) ಗ್ರೀನ್‌ವಾಲ್ಡ್ ಹಿರಿಯ ಪತ್ರಕರ್ತ. ಈ ಸಂಸ್ಥೆಯ ಮೂಲಕವೇ ದ ಇಂಟರ್‌ಸೆಪ್ಟ್ (theintercept.com) ಎಂಬ ಸುದ್ದಿತಾಣ ನಡೆಯುತ್ತಿದೆ.

‘ಒಮಿಡ್ಯಾರ್ ಜೊತೆಗೆ ಕೆಲಸ ಮಾಡೋದ್ರಲ್ಲಿ ಸಾಕಷ್ಟು ಸಮಸ್ಯೆಗಳಿವೆ’ ಎಂದು ಚೆಲ್ಸಿಯಾ ಮ್ಯಾನಿಂಗ್ (ವಿಕಿಲೀಕ್ಸ್‌ಗೆ ಲಕ್ಷಗಟ್ಟಲೆ ಪುಟದ ಅಮೆರಿಕಾ ದಾಖಲೆಯನ್ನು ಒದಗಿಸಿ ಸೆರೆಯಾಳಾಗಿ, ಈಗ ಬಿಡುಗಡೆಯಾದ ವ್ಯಕ್ತಿ) ಬಗ್ಗೆ ವಿಶೇಷ ತನಿಖಾ ವರದಿಗಳನ್ನು ಪ್ರಕಟಿಸಿದ ಅಮೆರಿಕಾದ ಇನ್ನೊಬ್ಬ ಫ್ರೀಲಾನ್ಸ್ ಪತ್ರಕರ್ತೆ ಅಲೆಕ್ಸಾ ಓಬ್ರೈನ್ ಖಡಾಖಂಡಿತವಾಗಿ ಹೇಳುತ್ತಾರೆ. ಪೇಪಾಲ್ ಕುರಿತು ತನ್ನ ಎಲ್ಲ ಪ್ರಶ್ನೆಗಳಿಗೂ ಒಮಿಡ್ಯಾರ್ ಖಚಿತವಾಗಿ ಉತ್ತರಿಸಲಿಲ್ಲ ಎನ್ನುವ ಅಲೆಕ್ಸಾಗೆ ಒಮಿಡ್ಯಾರ್ ಮಾಧ್ಯಮ ಜಾಲಕ್ಕೆ ಸೇರುವ ಆಸೆ ಇಲ್ಲ. ‘ನಿಮಗೆ ಎಷ್ಟು ಸಾವಿರ ಡಾಲರ್ ಬೆಂಬಲ ಇದೆ ಅನ್ನೋದಕ್ಕಿಂತ ನೀವು ಎಷ್ಟು ಚೆನ್ನಾಗಿ ವರದಿ ಮಾಡುತ್ತೀರಿ ಎಂಬುದೇ ಮುಖ್ಯ’ ಎಂದು ಅಲೆಕ್ಸಾ ಹೇಳುತ್ತಾರೆ.

ಒಂದು ಆಯಾಮದಲ್ಲಿ ಸ್ವತಂತ್ರ ಪತ್ರಿಕೋದ್ಯಮದ ಹರಿಕಾರನಂತೆ ಕಾಣುವ ಒಮಿಡ್ಯಾರ್ ಇನ್ನೊಂದು ಆಯಾಮದಲ್ಲಿ ತನ್ನ ಮೂಗಿನ ನೇರಕ್ಕೇ ಅಭಿವ್ಯಕ್ತಿಯನ್ನು ವ್ಯಾಖ್ಯಾನಿಸುತ್ತಾರೆ. ಇದಕ್ಕೂ ಕಾರಣವಿದೆ. ಒಮಿಡ್ಯಾರ್ ಎಂದೆಂದಿಗೂ ಶ್ವೇತಭವನದ ಸ್ನೇಹಿತ ಎಂದು ಪಂಕಜ್ ಬರೆಯುತ್ತಾರೆ. ಅಮೆರಿಕಾದ ನೆರವು ಸಂಸ್ಥೆ ಯುಎಸ್‌ಏಡ್ (ಯುನೈಟೆಡ್ ಸ್ಟೇಟ್ಸ್ ಏಜೆನ್ಸಿ ಫಾರ್ ಇಂಟರ್‌ನ್ಯಾಶನಲ್ ಡೆವಲಪ್‌ಮೆಂಟ್- USAID) ಜೊತೆಗೆ ಸೇರಿ ಯುಕ್ರೇನಿನಲ್ಲಿ, ನೈಜೀರಿಯಾದಲ್ಲಿ, ಸುಡಾನಿನಲ್ಲಿ, ಹವಾಯಿ ದ್ವೀಪದಲ್ಲಿ ಚಿಲಿಯಲ್ಲಿ ಭಾಗೀದಾರರಾಗಿರುವ ಒಮಿಡ್ಯಾರ್ ಭಾರತದಲ್ಲೂ ಇಂಥದ್ದೇ ಅಮೆರಿಕಾ ಪರ ಚಟುವಟಿಕೆಗಳಲ್ಲಿ ತೊಡಗಿದ್ದಾರೆ ಎಂದು ಅನುಮಾನಿಸಲು ಸಾಕಷ್ಟು ಹಿನ್ನೆಲೆ ಇದೆ.

ಲಾಭಸಹಿತ ಯೋಜನೆಗಳಿಗೂ ಹಣ

ಭಾರತದಲ್ಲಿ ಒಮಿಡ್ಯಾರ್ ಮಾಡಿರುವ ಹೂಡಿಕೆಗಳನ್ನೇ ಗಮನಿಸಿ: ಒಂದೆಡೆ ಸದಾ ಎಡ ಸೈದ್ಧಾಂತಿಕ ನೀತಿಗಳನ್ನೇ ಬಿಂಬಿಸುತ್ತ ವಸ್ತುನಿಷ್ಠ ಮತ್ತು ಸಮಾಜನಿಷ್ಠ ಪತ್ರಿಕೋದ್ಯಮವನ್ನೇ ಮರೆತ ಜಾಲತಾಣಗಳು, ನೀರಿನ ಖಾಸಗೀಕರಣಕ್ಕೂ ಬೆಂಬಲ ನೀಡಿತ್ತು ಎನ್ನಲಾದ ಜನಾಗ್ರಹದಂತದ ಸಾಮಾಜಿಕ ಸಂಸ್ಥೆಗಳು, ಒಂದಷ್ಟು ಲಾಭರಹಿತ ಸೇವೆ; ಬಹಳಷ್ಟು ಲಾಭಸಹಿತ ಸಂಸ್ಥೆಗಳು! ಒಮಿಡ್ಯಾರ್ ನೆಟ್‌ವರ್ಕ್ ಮೂಲಕ ಲಾಭರಹಿತ ಮತ್ತು ಲಾಭಸಹಿತದ ಎರಡೂ ಬಗೆಯ ಸಂಸ್ಥೆಗಳಿಗೆ ಉದಾರವಾಗಿ ಹಣ ನೀಡುವುದು ಬಹುಶಃ ಅತ್ಯಂತ ಅಪರೂದ ವಿದ್ಯಮಾನ. ಕಾರ್ಪೋರೇಟ್ ಸಮಾಜಸೇವಾ ಹೊಣೆಗಾರಿಕೆಗಳನ್ನು (ಸಿಎಸ್‌ಆರ್) ನಿರ್ವಹಿಸಲು ಸಾಮಾನ್ಯವಾಗಿ ಒಂದು ಲಾಭವೇತರ ಸಂಸ್ಥೆ ಇರುತ್ತದೆ; ಆದರೆ ಇಲ್ಲಿ ಮಾತ್ರ ವಾಣಿಜ್ಯದ ಉದ್ದೇಶಗಳು ಮತ್ತು ಸಾಮಾಜಿಕ ಉದ್ದೇಶಗಳ ನಡುವಣ ಗೆರೆಯೇ ಮಾಯವಾಗಿದೆ. ‘ಲಾಭಸಹಿತ ವ್ಯವಹಾರವೋ, ಲಾಭರಹಿತ ಸಂಘಟನೆಯೋ – ಎರಡೂ ಬಗೆಯ ಸಂಸ್ಥೆಗಳು ಮತ್ತು ವ್ಯಕ್ತಿಗಳು ಸಮಾಜದ ಒಳಿತಿಗಾಗಿ ಕೊಡುಗೆ ನೀಡಬಹುದು’ ಎಂಬುದು ಒಮಿಡ್ಯಾರ್ ನೆಟ್‌ವರ್ಕ್ ಪ್ರಕಟಿಸಿರುವ ಅಧಿಕೃತ ಪ್ರತಿಪಾದನೆ. ಸಮಾಜದ ಸಮಸ್ಯೆಗಳನ್ನು ನಿವಾರಿಸಲು ಮಾರುಕಟ್ಟೆಯನ್ನು ನಿರ್ಲಕ್ಷಿಸಲಾಗದು ಎಂಬುದು ಈ ಸಂಘಟನೆಯ ವಾದ.

ಈಗ ಹವಾಯಿ ದ್ವೀಪದಲ್ಲಿ ನೆಲೆಸಿರುವ, ಬೌದ್ಧ ಧರ್ಮದ ಕಟ್ಟಾ ಅಭಿಮಾನಿಯಾಗಿರುವ ಒಮಿಡ್ಯಾರ್ ಗ್ರೀನ್‌ವಾಲ್ಡ್‌ನಂತಹ ಹಿರಿಯ ಪತ್ರಕರ್ತನಿಗೂ ಸಿಗುವುದು ಕಷ್ಟವಂತೆ; ಹಾಗೆಂದು ಅಮೆರಿಕಾದ ಹಿರಿಯ ಫ್ರೀಲಾನ್ಸರ್ ಪತ್ರಕರ್ತ ಆಂಡ್ರೂ ರೈಸ್ ‘ನ್ಯೂಯಾರ್ಕ್ ಮ್ಯಾಗಜಿನ್’ ತನಿಖಾ ವರದಿಯಲ್ಲಿ ದಾಖಲಿಸಿದ್ದಾರೆ. ಸ್ನೋಡೆನ್ ದಾಖಲೆಗಳು ಸಿಕ್ಕಿದ್ದೇ ಒಮಿಡ್ಯಾರ್‌ರ ಮಾಧ್ಯಮ ಯೋಜನೆಗಳು ಗರಿಗೆದರಲು ಕಾರಣ ಎಂಬುದು ರೈಸ್ ತರ್ಕ. ‘ನಮ್ಮ ಸಮಾಜದಲ್ಲಿ ಮತ್ತು ಸರ್ಕಾರದಲ್ಲಿ ಹೆಚ್ಚಿನ ಉತ್ತರದಾಯಿತ್ವ ಮತ್ತು ಪಾರದರ್ಶಕತೆ ಇರಬೇಕೆಂದೇ ನಾನು ಗಮನಿಸುತ್ತಿದ್ದೇನೆ’ ಎಂದು ಒಮಿಡ್ಯಾರ್ ರೈಸ್‌ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದರೂ, ಅದೇ ಮುಂಜಾನೆಯ ಕಾಲಂನಲ್ಲಿ ಒಬಾಮಾರ ಸಿರಿಯಾ ಬಾಂಬಿಂಗ್‌ನ್ನು ಕಟುವಾಗಿ ಟೀಕಿಸಿ ಗ್ರೀನ್‌ವಾಲ್ಡ್ ಬರೆದಿದ್ದನ್ನೂ ರೈಸ್ ಉಲ್ಲೇಖಿಸುತ್ತಾರೆ. ಶತಕೋಟ್ಯಧಿಪತಿಗಳಿಗೆ ತಮ್ಮ ಅಸಂತೋಷವನ್ನು ಪ್ರಕಟಿಸಲು ಚೆನ್ನಾಗಿ ಗೊತ್ತು ಎಂದು ರೈಸ್ ಹೇಳುತ್ತಾರೆ.

ಸಾಂಸ್ಕೃತಿಕ ಮಾರ್ಕ್ಸಿಸಂ?

‘ಹಿಂದೆ ಇದ್ದಿದ್ದು ಕೇವಲ ಕ್ಲಾಸಿಕಲ್ ಮಾರ್ಕ್ಸಿಸಂ. ಈಗ ಚಾಲ್ತಿಯಲ್ಲಿರುವುದು ಕಲ್ಚರಲ್ ಮಾರ್ಕ್ಸಿಸಂ – ಸಾಂಸ್ಕೃತಿಕ ಕಮ್ಯುನಿಸಂ. ಇದನ್ನು ಕಡೆಗಣಿಸುವುದು ದೊಡ್ಡ ಪ್ರಮಾದ’ ಎಂದು ಒಪ್‌ಇಂಡಿಯಾ ಜಾಲತಾಣದಲ್ಲಿ ಇಂಥ ಬೆಳವಣಿಗೆ ಬಗ್ಗೆ ಬ್ಲಾಗ್ ಬರೆದಿರುವ ಡಿ ವಿ ಶ್ರೀಧರ್ ಎಂಬ ಮಾಜಿ ನೌಕಾ ವೃತ್ತಿಪರ ಹೇಳುತ್ತಾರೆ. ಈಗ ೭೫ರ ಹರೆಯದಲ್ಲಿರುವ ಶ್ರೀಧರ್‌ಗೆ ೨೦೦೦ದ ಇಸವಿಯವರೆಗೂ ತಾನು ಹಿಂದೂ ಎಂಬ ಅರಿವೇ ಇರಲಿಲ್ಲವಂತೆ. ’ಭಾರತದ ಮಾಧ್ಯಮಗಳು ತೆಗೆದುಕೊಂಡ ಪಕ್ಷಪಾತಿ ನಿಲುವುಗಳು, ಬುದ್ಧಿಜೀವಿಗಳು, ಪ್ರಗತಿಪರರು ಎನ್ನಿಸಿಕೊಂಡವರು ನನ್ನನ್ನು ಹಿಂದು ಅಥವಾ ಬಲಪಂಥೀಯನನ್ನಾಗಿಸಿದರು’ ಎಂದು ಶ್ರೀಧರ್ ತಮ್ಮನ್ನು ಪರಿಚಯಿಸಿಕೊಳ್ಳುತ್ತಾರೆ.

ಜಗತ್ತಿನ ಎಲ್ಲೆಡೆ, ಎಲ್ಲ ರಂಗಗಳಲ್ಲೂ ದಮನಕಾರರು ಮತ್ತು ದಮನಿತರನ್ನು ಗುರುತಿಸುವುದು- ಈ ಮೂಲಕ ಹೊಸ ಬಗೆಯ ಸಾಂಸ್ಕೃತಿಕ ಸಂಘರ್ಷಗಳನ್ನು ಹುಟ್ಟುಹಾಕುವುದು – ಇದೇ ಸಾಂಸ್ಕೃತಿಕ ಕಮ್ಯುನಿಸಂನ ಮೂಲ ತಂತ್ರ. ಭಾರತವೂ ಸೇರಿದಂತೆ ಎಲ್ಲ ದೇಶಗಳಲ್ಲೂ ಇಂಥ ಸಮಸ್ಯೆಗಳು ಇದ್ದೇ ಇರುವುದು ನಿಜ. ‘ಹಾಗಂತ ಎಲ್ಲೆಲ್ಲೂ ತಮ್ಮ ವಾದವೊಂದೇ ನಿಜ ಎಂಬ ಮಂಡನೆಯೂ ನಡೆಯುತ್ತಿರುವುದು ಸರಿಯೆ?’ ಎಂಬುದು ಶ್ರೀಧರ್ ಪ್ರಶ್ನೆ.

‘ಸಾಂಸ್ಕೃತಿಕ ಕಮ್ಯುನಿಸಂಗೆ ಬೆಂಬಲವಾಗಿ ನಿಂತಿರುವವರು ಏಕವ್ಯಕ್ತಿ ಬಂಡವಾಳಶಾಹಿಗಳು. ಇವರೆಲ್ಲ ಗಂಭೀರ ಚಿಂತಕರು. ಇವರಿಗೆ ತಮ್ಮ ಖಾಸಗಿ ಆಸ್ತಿಯನ್ನೆಲ್ಲ ಹೀಗೆ ಬಳಸುವಲ್ಲಿ ದೂರಗಾಮಿ ಕಾರ್ಯತಂತ್ರವಿದೆ. ಅವರಿಗೆ ತುಂಬಾ ಸ್ಥಿರವಾಗಿಯೂ ಇರದ, ಆದರೆ ತುಂಬಾ ಅಸ್ತಿರವೂ ಆಗಿರದ ದೇಶಗಳು, ಸರ್ಕಾರಗಳು ಇರಬೇಕು. ಆಗಲೇ ಅವರಿಗೆ ಭಾರೀ ಪ್ರಮಾಣದ ಲಾಭವಾಗುತ್ತದೆ. ಅವರು ಮಾಧ್ಯಮಗಳಿಗೆ, ಸರ್ಕಾರೇತರ ಸಂಸ್ಥೆಗಳಿಗೆ ಹಣ ಊಡಿಸುತ್ತಾರೆ; ಸಭೆ – ಕಾರ್ಯಕ್ರಮ, ಸೆಮಿನಾರುಗಳಿಗೆ ಪ್ರಾಯೋಜಕತ್ವ ನೀಡುತ್ತಾರೆ. ಹೀಗಿದ್ದ ಮೇಲೆ ಸಾಂಸ್ಕೃತಿಕ ಕಮ್ಯುನಿಸಂನ ಸಿಪಾಯಿಗಳಿಗೇನೂ ಕೊರತೆಯಿಲ್ಲ. ಹಲವು ಪೀಠಗಳಿಗೆ, ಅಧ್ಯಯನ ಕೇಂದ್ರಗಳಿಗೆ ಇವರೆಲ್ಲರನ್ನೂ ನೇಮಿಸಲಾಗುತ್ತದೆ. ಇಲ್ಲಿ ದಡ್ಡತನದ ಅಭಿಯಾನಕ್ಕೆ ಯಾರೂ ಹೋಗುವುದಿಲ್ಲ. ಅಂಕಿ ಅಂಶಗಳಿಂದ ಕೂಡಿದ ಸಂಶೋಧನಾತ್ಮಕ ವಿಶ್ಲೇಷಣೆಗಳನ್ನು ನಾಜೂಕಿನಿಂದ ಪ್ರಕಟಿಸಲಾಗುತ್ತದೆ.’ – ಇದು ಶ್ರೀಧರ್ ನೀಡಿರುವ ವಿವರಣೆ.

ಅಮೆರಿಕಾದಲ್ಲಿ ಒಮಿಡ್ಯಾರ್ ಸೇರಿದಂತೆ ಐವರು ಗರಿಷ್ಠ ಪ್ರಮಾಣದಲ್ಲಿ ಮಾಧ್ಯಮ ಹೂಡಿಕೆಯಲ್ಲಿ ತೊಡಗಿದ್ದಾರೆ ಎಂದು ಅಮೆರಿಕಾದ ಮಾಧ್ಯಮ ನಿಗಾ ಸಂಸ್ಥೆ ಮೀಡಿಯಾ ವಾಚ್ ಸೆಂಟರ್ (www.mrc.org) ಹೇಳುತ್ತದೆ. ೨೦೦೦ರಿಂದ ೨೦೧೧ರವರೆಗೆ ಜಾರ್ಜ್ ಸೊರೋಸ್ ಅಮೆರಿಕಾದಲ್ಲಿ ಹೂಡಿದ ಎಡ ಸಿದ್ಧಾಂತ ಪರ ಮಾಧ್ಯಮ ಹೂಡಿಕೆಯ ಮೊತ್ತ ೫೫ ಕೋಟಿ ಡಾಲರ್; ಸೊರೊಸ್‌ನ ಒಟ್ಟು ದೇಣಿಗೆಯ ಮೊತ್ತ ಬರೋಬ್ಬರಿ ೯೦೦ ಕೋಟಿ ಡಾಲರ್‌ಗಳು. ಈಗ ಅವರ ಮಗ ಜೊನಾಥನ್, ಮೈಕೇಳ್ ಬ್ಲೂಮ್‌ಬರ್ಗ್, ವಾರೆನ್ ಬಫೆಟ್, ಪಿಯೆರೆ ಒಮಿಡ್ಯಾರ್, ಟಾಮ್ ಸ್ಟೇಯರ್ – ಇವರೇ ಈ ಪಂಚ ಹೂಡಿಕೆದಾರರು. ಒಟ್ಟು ೮೮ ಮಾಧ್ಯಮ ಸಂಸ್ಥೆಗಳು ಒಟ್ಟು ೨೭೦೦ ಕೋಟಿ ಡಾಲರ್ ಮೊತ್ತದ ಈ ದೇಣಿಗೆಗಳನ್ನು ಪಡೆದಿವೆ. ಹೀಗೆ ದೇಣಿಗೆ ನೀಡಿದ ಈ ಐವರ ಬಗ್ಗೆಯೂ ಮಾಧ್ಯಮಗಳು ಮೆದುವಾಗೇ ನಡೆದುಕೊಂಡಿವೆ; ಋಣಾತ್ಮಕ ವರದಿಗಳನ್ನು ಪ್ರಕಟಿಸಿಲ್ಲ ಎಂದು ನಿಗಾ ಸಂಸ್ಥೆ ಹೇಳುತ್ತದೆ. ಮಾಧ್ಯಮಗಳ ಮೇಲೆ ಹಿಡಿತ ಸಾಧಿಸಿ ಸರ್ಕಾರಗಳ ಮೇಲೆ ಪ್ರಭಾವ, ನಿಯಂತ್ರಣ ಸಾಧಿಸುವುದು ಇವರೆಲ್ಲರ ಗುರಿ. ೨೦೦೪ರಿಂದ ಅಮೆರಿಕಾದ ಮಾಧ್ಯಮಗಳಲ್ಲಿ ಒಮಿಡ್ಯಾರ್ ಹೂಡಿದ ಮೊತ್ತ ಸುಮಾರು ೨೭.೩೦ ಕೋಟಿ ಡಾಲರ್.

ಭಾರತೀಯರಿಂದಲೂ…

ಭಾರತದಲ್ಲೂ ಇಂತಹ ಹೂಡಿಕೆಗಳು ನಡೆದಿವೆ. ಅರ್ಘ್ಯಂ ಸಂಸ್ಥೆಯ ಅಧ್ಯಕ್ಷೆ ರೋಹಿಣಿ ನಿಲೇಕಣಿಯವರು ಎಕನಾಮಿಕ್ ಎಂಡ್ ಪೊಲಿಟಿಕಲ್ ವೀಕ್ಲಿ ಪತ್ರಿಕೆಯಲ್ಲಿ ಹೂಡಿಕೆ ಮಾಡಿದ್ದಾರೆ. ಅವರೂ ಒಳಗೊಂಡಿರುವ, ಪತ್ರಕರ್ತ ರಾಮಚಂದ್ರ ಗುಹಾರವರೂ ಇರುವ ಸಂಸ್ಥೆ ಇಂಡಿಪೆಂಡೆಂಟ್ ಎಂಡ್ ಪಬ್ಲಿಕ್ ಸ್ಪಿರಿಟೆಡ್ ಮೀಡಿಯಾ ಫೌಂಡೇಶನ್ – ಐಪಿಎಸ್‌ಎಂಎಫ್- ipsmf.org) ಸಂಸ್ಥೆಯು ಒಟ್ಟಾರೆ ೧೫೦ ಕೋಟಿ ರೂ.ಗಳನ್ನು ೧೦-೧೫ ಸಂಸ್ಥೆಗಳಲ್ಲಿ ಹೂಡಲು ನಿರ್ಧರಿಸಿದೆ. ಈ ಸಂಸ್ಥೆಯ ಮೂಲಕ ಈಗಾಗಲೇ ದ ವೈರ್, ಇಂಡಿಯಾ ಸ್ಪೆಂಡ್, ದ ಬೆಟರ್ ಇಂಡಿಯಾ, ಲೈವ್ ಲಾ, ಸಿಜಿನೆಟ್ ಸ್ವರ, ಗಾಂವ್ ಕನೆಕ್ಷನ್ – ಹೀಗೆ ಹಲವು ಮಾಧ್ಯಮ ಪ್ರಯೋಗಗಳಲ್ಲಿ ಹೂಡಿಕೆ ಮಾಡಿದೆ. ಇದೇ ರಾಮಚಂದ್ರ ಗುಹಾ ಈಗ ಸ್ಕ್ರೋಲ್‌ನ ಅಂಕಣಕಾರರೂ ಹೌದು!

ಪರಿಣಾಮಗಳೇನು?

ಹೀಗೆ ಭಾರತದಲ್ಲಿ ಭಾರೀ ಪ್ರಮಾಣದಲ್ಲಿ ದಾನ ಮಾಡುತ್ತ ಸಾಮಾಜಿಕ, ಸಾಂಸ್ಕೃತಿಕ, ಮಾಧ್ಯಮ ಸಂಘಟನೆಗಳ ಮೇಲೆ ಹಿಡಿತ ಸಾಧಿಸುತ್ತ, ಲಾಭ – ಲಾಭರಹಿತ ಸಂಸ್ಥೆಗಳನ್ನು ಒಂದೊಂದಾಗಿ ಹುಟ್ಟುಹಾಕಿದ ಒಮಿಡ್ಯಾರ್ ಸಾಧಿಸುವುದಾದರೂ ಏನು? ಈ ಬೆಳವಣಿಗೆಗಳು ಭಾರತದಲ್ಲಿ ಯಾವ ಪರಿಣಾಮವನ್ನು ಉಂಟು ಮಾಡಲಿವೆ?

  • ಅಸ್ಥಿರತೆ,ನಿಯಂತ್ರಣ: ಭಾರತವೂ ಸೇರಿದಂತೆ ಜಗತ್ತಿನಲ್ಲಿ ಸಾಮಾಜಿಕ ಸಮಸ್ಯೆಗಳು, ಸವಾಲುಗಳು ಇದ್ದೇ ಇವೆ; ಆದರೆ ಅವುಗಳನ್ನು ಬಂಡವಾಳವಾಗಿಸಿಕೊಂಡ ಬಂಡವಾಳಶಾಹಿ ನಿದರ್ಶನ ಹಿಂದೆ ಇರಲಿಲ್ಲ. ಈಗ ಸಾಮಾಜಿಕ ಸಮಸ್ಯೆಗಳೂ ಬಂಡವಾಳಶಾಹಿಗಳ ಲಾಭದ ಅಸ್ತ್ರಗಳಾಗಿವೆ. ಸ್ನೋಡೆನ್ ದಾಖಲೆಗಳ ಅಸ್ತ್ರದ ಮೂಲಕ ಅಮೆರಿಕಾದ ಸರ್ಕಾರವನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳುವ ಮಾನಸಿಕತೆಯನ್ನೇ ಭಾರತದಲ್ಲೂ ಒಮಿಡ್ಯಾರ್ ಬಳಸಬಹುದು. ಸರ್ಕಾರಗಳನ್ನು ಅಸ್ಥಿರಗೊಳಿಸಿದರೆ ಇಂಥ ಕೆಲಸ ಸುಲಭ. ಸಾಮರಸ್ಯದ ಬಾಳುವೆಗಾಗಿ, ಸರ್ವಾಂಗೀಣ ಅಭ್ಯುದಯಕ್ಕಾಗಿ ನೀಲನಕಾಶೆ ಹಾಕಿಕೊಳ್ಳುವುದು ವಸಾಹತುಶಾಹಿಯನ್ನೇ ಧಿಕ್ಕರಿಸಿ ಸ್ವತಂತ್ರವಾದ ಭಾರತಕ್ಕೆ ದೊಡ್ಡ ಸಮಸ್ಯೆಯಲ್ಲ. ಸಾಮಾಜಿಕ ಸಮಸ್ಯೆಗಳನ್ನು ಸಾಮಾನ್ಯೀಕರಿಸಿ ಅವುಗಳಿಗೆ ಇಂಜಿನಿಯರಿಂಗ್ ಸಮೀಕರಣಗಳನ್ನು ಅನ್ವಯಿಸಿ ಪರಿಹಾರ ಹುಡುಕುವುದು ಮತ್ತು ಅದನ್ನೂ ಲಾಭಕ್ಕೆ ಜೋಡಿಸುವುದು ಸಾಮಾಜಿಕ ಅಭ್ಯುದಯ ಅಭಿಯಾನಕ್ಕೇ ದೊಡ್ಡ ಸಮಸ್ಯೆಯಾಗಬಹುದು. ಇಂಥ ಜಾಗತೀಕರಣದಿಂದ ಸ್ಥಳೀಯತೆಯ ಅಂಶಗಳು ನಿರ್ಲಕ್ಷಕ್ಕೆ ಒಳಗಾಗಿ, ಹಲವು ವಿಷಯಗಳಿಗೆ ಈ ದೈತ್ಯ ಸಂಸ್ಥೆಗಳೇ ಸರ್ಕಾರದಂತೆ ವರ್ತಿಸುವ ಸಾಧ್ಯತೆಯನ್ನೂ ಅಲ್ಲಗಳೆಯಲಾಗದು.
  • ಪ್ರಬಲ ಎಡ ವೇದಿಕೆ:ತನ್ನ ನೈಜ ವಾದಗಳನ್ನು ಜನರಲ್ಲಿ ಬಿಂಬಿಸಲಾಗದೆ ವಿಫಲವಾದ ಕಮ್ಯುನಿಸ್ಟರು ಈಗ ಕಾಂಗ್ರೆಸ್ ಸರ್ಕಾರದ ನೆರಳಿನಿಂದಲೂ ವಂಚಿತರಾಗಿದ್ದಾರೆ. ಇವರಿಗೆಲ್ಲ ಒಮಿಡ್ಯಾರ್ ದೇಣಿಗೆಗಳು ಅತಿ ದೊಡ್ಡ ಬೆಂಬಲವಾಗಿ ಒದಗಿವೆ. ಬಹುತೇಕ ಎಲ್ಲ ಎಡಪಂಥೀಯ ಇಂಗ್ಲಿಶ್ ಪತ್ರಕರ್ತರಿಗೆ ಈಗ ಕೆಲಸವೋ ಕೆಲಸ; ಸಂಬಳವೋ ಸಂಬಳ. ವಿಫಲವಾದ ಜನಪರ ಚಳವಳಿಯನ್ನು ಬಂಡವಾಳಶಾಹಿ ನೆರವಿನಿಂದ ಮತ್ತೆ ಕಟ್ಟಲು ಹೊರಟಿರುವ ವಿಪರ್ಯಾಸ ಇಲ್ಲಿ ಕಾಣುತ್ತಿದೆ. ತಳಮಟ್ಟದಿಂದ ಚಳವಳಿಯನ್ನು ಕಟ್ಟುವ ಬದಲು, ಮೇಲುಹಂತದ ಮಾಧ್ಯಮ ಮತ್ತು ಹಣದ ಬಲದ ಸಂಘಟನೆಗಳ ಮೂಲಕ ಚಳವಳಿಗಳನ್ನು ಹುಟ್ಟುಹಾಕಿ ಸರ್ಕಾರದ ಮೇಲೆ ಒತ್ತಡ ಬೀರುವ, ಪ್ರಭಾವಿಸುವ ವಿದ್ಯಮಾನ ಈಗ ಆರಂಭವಾಗಿದೆ. ಇದು ಎಡಪಂಥೀಯರ ದ್ವಂದ್ವವಾದರೂ ಇವರ ಧ್ವನಿಗೆ ವೇದಿಕೆಯಂತೂ ಸಿಕ್ಕಿದಂತಾಗಿದೆ.
  • ಯುವ ಸಮುದಾಯದ ಮೇಲೆ ಪ್ರಭಾವ:ಮುದ್ರಣ ಮಾಧ್ಯಮಕ್ಕಿಂತ ಆನ್‌ಲೈನ್ ಮಾಧ್ಯಮದಲ್ಲೇ ತನಗೆ ಬೇಕಾದ ಮಾಹಿತಿಗಳನ್ನು ಪಡೆಯುವ ಯುವ ಸಮುದಾಯವೀಗ ಇಂತಹ ನವ ಮಾಧ್ಯಮ ತಾಣಗಳನ್ನೇ ನಿಜವಾದ ಹೋರಾಟ ಎಂದು ನಂಬುತ್ತಿದೆ. ಬಂಡವಾಳ ಆಧಾರಿತ ಯಾವುದೇ ಹೋರಾಟವೂ ಪ್ರಾಮಾಣಿಕವಾಗಿರಲು ಸಾಧ್ಯವಿಲ್ಲ ಎಂದು ಈ ಯುವ ಸಮುದಾಯಕ್ಕೆ ಹೇಳುವ ಅಧಿಕಾರವನ್ನೂ ಹಿರಿಯರು ಕಳೆದುಕೊಂಡಿದ್ದಾರೆ. ಸಾಂಪ್ರದಾಯಿಕ ಮಾಧ್ಯಮಗಳಲ್ಲೇ ಹಳೆಯ ಜನರು ಬದುಕುತ್ತ, ಹೊಸ ಮಾಧ್ಯಮಗಳಲ್ಲೇ ಯುವಜನರು ಬದುಕುತ್ತ, ಬಹುದೊಡ್ಡ ಆರ್ಥೈಸುವಿಕೆಯ ಕಂದರ ಉಂಟಾಗಿದೆ. ಇದು ಭಾರತವಷ್ಟೇ ಅಲ್ಲ, ಯಾವುದೇ ದೇಶಕ್ಕೂ ಅಪಾಯಕಾರಿ. ಪರಂಪರೆಯ ಓದು, ಅರಿವು – ಎಲ್ಲದಕ್ಕೂ ಆನ್‌ಲೈನ್ ಮೂಲಗಳೇ ಆಧಾರವಾದರೆ ಅಪಾಯ ತಪ್ಪಿದ್ದಲ್ಲ. ಮಾಹಿತಿ ಮೂಲಗಳೇ ಅಪಕ್ವ ಮತ್ತು ವಸ್ತುನಿಷ್ಠವಲ್ಲದ ಮಾಹಿತಿಯನ್ನು ವ್ಯಾಪಕವಾಗಿ, ಬಳಕೆದಾರ ಸ್ನೇಹಿಯಾಗಿ ಕೊಟ್ಟರೆ ನಿಷ್ಠುರ ಸಂವಾದವೂ ವಿಫಲವಾಗುತ್ತದೆ. ಈ ‘ಅರಿವಿನ ಕಂದರ’ವು ಮುಂದಿನ ದಿನಗಳಲ್ಲಿ ಬಹುದೊಡ್ಡ ಸವಾಲಾಗಲಿದೆ. ಅಭ್ಯುದಯದ ಕುರಿತು ಅರೆಬೆಂದ ವಿಚಾರಗಳನ್ನೇ ಮುಂದಿಟ್ಟು ಅಧಿಕಾರಕ್ಕೆ ಬಂದ ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಈ ಬೆಳವಣಿಗೆಯ ಒಂದು ಉದಾಹರಣೆ.
  • ’ಬಂಡವಾಳಶಾಹಿ ಉದಾರವಾದ’ (ಕ್ಯಾಪಿಟಲಿಸ್ಟಿಕ್ ಲಿಬರಲಿಸಂ): ಇದೊಂದು ವಿರೋಧಾಭಾಸದ ಬೆಳವಣಿಗೆ. ಈ ವಿಚಿತ್ರ ಸನ್ನಿವೇಶಕ್ಕೆ ಇಂಟರ್‌ನೆಟ್ ಕಾರಣವಾಗಿರುವುದು ವಿಚಿತ್ರವಾದರೂ ಸತ್ಯ. ಈ ವಿದ್ಯಮಾನಗಳು ರಾತ್ರೋರಾತ್ರಿ ಸರಿಹೋಗುವುದಿಲ್ಲ. ಅದರಲ್ಲೂ ಸರ್ಕಾರಗಳು, ಸಮುದಾಯಗಳು ಈ ಕುರಿತು ಸತತ ನಿಗಾ ಇಡದಿದ್ದರೆ, ಎಲ್ಲ ಸಾಮಾಜಿಕ ಹೋರಾಟಗಳೂ ‘ಬಂಡವಾಳಶಾಹಿ ಸಾಂಸ್ಕೃತಿಕ ಮಾರ್ಕ್ಸಿಸಂ’ ಆಗುತ್ತವೆ. ಉದಾರೀಕರಣದಿಂದ ಭಾರತವನ್ನು ಪ್ರವೇಶಿಸಿದ ಬಂಡವಾಳಶಾಹಿ ಬಹುರಾಷ್ಟ್ರೀಯ ಕಂಪೆನಿಗಳೇ ಈಗ ಸೇವಾ ರಂಗದಲ್ಲಿ ಹೂಡಿಕೆ ಮಾಡಿ ಉದಾರವಾದಿ ಎಡಪಂಥೀಯರಿಗೆ ಆಶ್ರಯ ನೀಡುತ್ತಿರುವುದು ವಿಚಿತ್ರವಾದರೂ ನಿಜ.
  • ಪೂರ್ವಾಗ್ರಹದ, ಅಸಂತುಲಿತ ಪತ್ರಿಕೋದ್ಯಮ: ವಿದೇಶಗಳಿಂದ ದಾನ ಹರಿದು ಬರಲೇಕೂಡದು ಎಂಬ ಅಭಿಪ್ರಾಯ ನನ್ನದಲ್ಲ. ಆದರೆ ಈ ದಾನಪ್ರವಾಹವು ನಮ್ಮ ನೆಲದ ಮೂಲ ಸಂಸ್ಕೃತಿ- ಪರಂಪರೆಯನ್ನೇ ಧಿಕ್ಕರಿಸುವ, ಎಲ್ಲವನ್ನೂ ಉದಾರವಾದದ, ಎಡಪಂಥೀಯ ಕಣ್ಣಿನಲ್ಲೇ ನೋಡುವ ಪ್ರಯತ್ನವನ್ನು ಖಂಡಿಸಲೇಬೇಕಾಗಿದೆ. ಜಾತ್ಯತೀತತೆಯ ನಿಜವಾದ ಅರ್ಥವು ಎಲ್ಲ ಮಾನವೀಯ ನಂಬಿಕೆಗಳನ್ನು ಗೌರವಿಸುವುದೇ ಆಗಿದೆಯೇ ಹೊರತು ಯಾವುದೋ ಒಂದು ಧರ್ಮ – ಮತದ ಧಿಕ್ಕಾರವಲ್ಲ. ಈಗ ಹುಟ್ಟಿರುವ ಎಡ ಮಾಧ್ಯಮತಾಣಗಳನ್ನು ನೋಡಿದರೆ ಅಲ್ಲಿ ಈ ಬಗೆಯ ಸಂತುಲನೆ, ಸಹಿಷ್ಣುತೆ ಏನೂ ಕಾಣುತ್ತಿಲ್ಲ. ಪತ್ರಕರ್ತರು, ಲೇಖಕರು ಎಲ್ಲರೂ ಒಂದೇ ನಂಬಿಕೆಯ ಮೇಲೆ ಕಾರ್ಯಾಚರಿಸುತ್ತಿದ್ದಾರೆ. ಇದು ಪ್ರಜಾತಂತ್ರವೂ ಅಲ್ಲ; ಸಮಾನತೆಯೂ ಅಲ್ಲ. ವಸ್ತುನಿಷ್ಠ ವಿಶ್ಲೇಷಣೆ ಮತ್ತು ತಜ್ಞರ ಕಾಮೆಂಟರಿಗಳು ಇರುತ್ತವೆ ಎನ್ನುವ ಸ್ಕ್ರೋಲ್‌ನಲ್ಲಿ ಅದರ ಮೂಗಿನ ನೇರಕ್ಕೆ ಬರೆಯುವವರೇ ಇದ್ದಾರೆಯೇ ವಿನಃ ಮುದ್ರಣ ರಂಗದಲ್ಲಿ ಈಗಲೂ ಗಮನಾರ್ಹವಾಗಿ ಬಳಕೆಯಲ್ಲಿರುವ ವಿವಿಧ ಆಯಾಮಗಳ – ಕೋನಗಳ ವಿಚಾರ ಮಂಡನೆ ಇಲ್ಲವೇ ಇಲ್ಲ. ಎಡ ಪರ ಎಂದೇ ಗುರುತಿಸುವ ‘ದ ಹಿಂದೂ’ ಪತ್ರಿಕೆಯಲ್ಲೂ ಎಲ್ಲ ಬಗೆಯ ಅಭಿಪ್ರಾಯಗಳಿಗೆ ವಾರಕ್ಕೊಮ್ಮೆಯಾದರೂ ಜಾಗ ಕೊಡಲಾಗಿದೆ. ಇಲ್ಲಿ ಅವನ್ನೆಲ್ಲ ನಿರೀಕ್ಷಿಸುವಂತಿಲ್ಲ.
  • ದೇಸಿ ಸಮಸ್ಯೆಗೆ ಅನ್ಯ ಪರಿಹಾರ: ಯುರೋಪ್ ಕೇಂದ್ರಿತ ಸಮಾನತೆಗಳ ಸೂತ್ರವನ್ನು ಭಾರತದ ಬಹುಸಂಸ್ಕೃತಿಯ ಮೇಲೆ ಹೇರುವುದು ನಮ್ಮ ವೈವಿಧ್ಯಮಯ ಸಮಾಜಕ್ಕೆ ದೊಡ್ಡ ಹೊಡೆತ. ಜಾತೀಯತೆ, ಲಿಂಗ ತಾರತಮ್ಯ, ಬಡತನ, ನಿರುದ್ಯೋಗ – ಎಲ್ಲವನ್ನೂ ಅವುಗಳದ್ದೇ ಆದ ನಿರ್ದಿಷ್ಟ ಕೋನಗಳಿಂದ ನೋಡಬೇಕೇ ವಿನಃ ಎಲ್ಲವನ್ನೂ ಮಿತಿಯಿಲ್ಲದಂತೆ ಮಿಶ್ರಣ ಮಾಡಿ ಗೊಂದಲ ಹುಟ್ಟಿಸುವುದಲ್ಲ. ೨೦೧೨ರಲ್ಲಿ ಆಂಧ್ರಪ್ರದೇಶದಲ್ಲಿ ೨೦೦ಕ್ಕೂ ಹೆಚ್ಚು ಜನರು ಮೈಕ್ರೋಫೈನಾನ್ಸ್ ಸಾಲಗಳ ಬಾಧೆಯಿಂಧಾಗಿ ಆತ್ಮಹತ್ಯೆ ಮಾಡಿಕೊಂಡರು. ಹೀಗೆ ಬಡ್ಡಿ ಸಾಲವನ್ನು ವಸೂಲಿ ಮಾಡಲು ರೈತರ ಮೇಲೆ ಒತ್ತಡ ಹಾಕಿದ ಸಂಸ್ಥೆಗಳಲ್ಲಿ ಒಮಿಡ್ಯಾರ್ ಬೆಂಬಲಿಸಿದ್ದ ಎಸ್‌ಕೆಸ್ ಮೈಕ್ರೋಫೈನಾನ್ಸ್ ಕೂಡಾ ಒಂದು (ಅದರ ಈಗಿನ ಹೆಸರು ಭಾರತ್ ಫೈನಾನ್ಸಿಯಲ್ ಇನ್‌ಕ್ಲೂಜನ್ ಲಿಮಿಟೆಡ್). ಎಲ್ಲ ಜನ ಕೇಂದ್ರಿತ ಉದ್ಯಮಗಗೆ ಒಂದೇ ಬಗೆಯ ವರಮಾನ ಸೂತ್ರ ಇರಲು ಸಾಧ್ಯವಿಲ್ಲ ಎಂಬುದಕ್ಕೆ ಇದೇ ಉದಾಹರಣೆ. ಇಂಧು ನಿದರ್ಶನ: ಇಂಡಸ್ ಓಎಸ್ ಮೂಲಕ ಸ್ಮಾರ್ಟ್‌ಫೋನ್‌ಗಳಲ್ಲಿ ಭಾರತೀಯ ಭಾಷೆಗಳನ್ನು ಅಳವಡಿಸುವುದು ಒಳ್ಳೆಯ ಕೆಲಸವಲ್ಲವೇ ಎಂದು ಅನ್ನಿಸಬಹುದು. ಆದರೆ ಈ ಸಂಸ್ಥೆಯು ಕೇಂದ್ರ ಸರ್ಕಾರದ ನೆರವಿನ ಸಂಶೋಧನೆಯಾದ ಭಾರತೀಯ ಭಾಷೆಗಳಲ್ಲಿ ಪಠ್ಯವನ್ನು ಧ್ವನಿಯಾಗಿ ಪರಿವರ್ತಿಸುವ ತಂತ್ರಾಂಶವನ್ನು ಹಕ್ಕುಸ್ವಾಮ್ಯ ಸಹಿತ ಖರೀದಿಸಿದೆ. ಭಾಷಾ ಬೆಳವಣಿಗೆಗೆ ಪೂರಕವಾದ ಈ ತಂತ್ರಜ್ಞಾನವನ್ನು ಸರ್ಕಾರವೇ ಮುಕ್ತ ತಂತ್ರಾಂಶವಾಗಿ ಬಿಡುಗಡೆ ಮಾಡಿದ್ದರೆ ಯಾವುದೇ ಸಂಸ್ಥೆಯೂ ಇದನ್ನು ಅಳವಡಿಸಿಕೊಳ್ಳಬಹುದಾಗಿತ್ತು; ಏಕಸ್ವಾಮ್ಯದ ಸಮಸ್ಯೆಯೇ ಇರುತ್ತಿರಲಿಲ್ಲ.

ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಾಧ್ಯಮಗಳೇ ಈಗ ವರಮಾನದ ಮೂಲಗಳಾಗಿ ಪರಿವರ್ತಿತವಾಗಿವೆ. ಒಮಿಡ್ಯಾರ್ ವಿದ್ಯಮಾನದಿಂದ ಜನಪರ ಕಾಳಜಿಯ ವಿಷಯಗಳೂ ಲಾಭ ಗಳಿಸುವ ಸರಕುಗಳಾಗಿವೆ ಎಂಬುದನ್ನು ಎಡ-ಬಲ ಪಂಥದ ಚಿಂತಕರು ಅರಿಯಬೇಕಾಗಿದೆ. ‘ಮಾಧ್ಯಮದ ಕಾರ್ಪೋರೇಟೀಕರಣ ತಪ್ಪಲ್ಲ’ ಎಂಬ ವಿಚಾರ ಸಂಕಿರಣವನ್ನು ನ್ಯೂಸ್‌ಲಾಂಡ್ರಿಯೇ ಸಂಘಟಿಸುತ್ತದೆ; ಅದರಲ್ಲಿ ಒಮಿಡ್ಯಾರ್‌ನ ಪ್ರತಿನಿಧಿಯೂ, ಬಲ ಚಿಂತನೆಯ ಕಾರ್ಪೋರೇಟ್ ಹೂಡಿಕೆದಾರರೂ ಭಾಗವಹಿಸುತ್ತಾರೆ!

‘ದ ಮ್ಯಾಟ್ರಿಕ್ಸ್’ ಸಿನೆಮಾದಲ್ಲಿ ಆದಂತೆ ಮನುಕುಲವೇ ತನಗೆ ಗೊತ್ತಿಲ್ಲದಂತೆ ಒಮಿಡ್ಯಾರ್ ಎಂಬ ಬಂಡವಾಳಶಾಹಿ ಯಂತ್ರದ ದಾಸ್ಯಕ್ಕೆ ಸಿಲುಕುತ್ತದೆ. ಒಮಿಡ್ಯಾರ್ ಎತ್ತಿಕೊಂಡ ವಿಷಯಗಳೆಲ್ಲವೂ ಹೆಚ್ಚುಕಡಿಮೆ ಗಮನಿಸಬೇಕಾದ ಸಂಗತಿಗಳೇ. ಆದರೆ ಒಮಿಡ್ಯಾರ್ ಹಣದ ಮೂಗು ತೂರಿಸುವಿಕೆಯಿಂದ ಈ ಸಮಸ್ಯೆಗಳು ಇನ್ನಷ್ಟು ಜಟಿಲವಾಗುತ್ತವೆಯೇ ಹೊರತು ಪರಿಹಾರವಾಗುವುದಿಲ್ಲ. ಹೀಗಾಗಿ ವಿದೇಶಿ ನೆರವಿನ ಕಬಂಧ ಬಾಹುಗಳನ್ನು ದೂರವಿಡುವ ಯತ್ನ ಮಾಡಬೇಕಿದೆ. ನನ್ನ ಅಧ್ಯಯನದ ಪ್ರಕಾರ ಈ ಯಾವುದೇ