ಸಾವಿರದ ಒಂಬೈನೂರ ಎಂಭತ್ತನೇ ದಶಕದಲ್ಲಿ ನಮ್ಮ ಮಲೆನಾಡಿನ ರೈತರು ಯಾವುದೇ ಬೆಳೆಗೆ ಯಾವ ಪೀಡೆ ಕಂಡರೂ, “ಎಂಡೋ ಸಲ್ಫಾನ್” ಎಂಬ ವಿಷವನ್ನು ಸಿಂಪಡಿಸಲು ಶುರು ಮಾಡಿದರು.
ಅಂದು ನಮ್ಮ ಮಲೆನಾಡಿನ ಅಡಿಕೆ ತೋಟಗಳಲ್ಲಿ ಅಡಿಕೆಯ ಹರಳು ಉದುರುವ ರೋಗ ವ್ಯಾಪಕವಾಗಿ ಕಂಡುಬಂದಿತ್ತು. ಅದೇ ಸಮಯ ನಮ್ಮ ಕಾಫಿಯ ತಾಕುಗಳಲ್ಲಿ ‘ಮೀಲೀ ಬಗ್ ಮತ್ತು ಗ್ರೀನ್ ಬಗ್ ‘ ಎಂಬ ಕೀಟಗಳ ಕಾಟ ವ್ಯಾಪಕವಾಗಿ ಕಂಡು ಬಂತು.
ಈ ಪಿಡುಡುಗುಗಳಿಗೆ ಸೂಕ್ತವಾದ ಪರಿಹಾರ ಕೇಳಿ ಸಲಹೆ ಪಡೆಯಲು ರೈತರುಗಳಿಗೆಲ್ಲಾ ನಮ್ಮ ವ್ಯವಸಾಯ ಇಲಾಖೆ, ಕಾಫಿ ಬೋರ್ಡ್ ಮತ್ತು ತೋಟಗಾರಿಕೆ ಇಲಾಖೆಗಳ ಸಲಹಾ ವಿಭಾಗಗಳನ್ನು ಸಂಪರ್ಕಿಸಿದರು.
ಆಗ ಎಂಡೋ ಸಲ್ಫಾನ್ ಎಂಬ ಕೀಟನಾಶಕವನ್ನು ಮುಕ್ತ ಕಂಠದಿಂದ ಅವರೆಲ್ಲಾ ಶಿಫಾರಸು ಮಾಡಿದರು.ಇದಕ್ಕೆ ಕಾರಣ, ಎಂಡೋ ಸಲ್ಫಾನ್ ಎಂಬುದು ಬಹು ಪರಿಣಾಮ ಕಾರೀ ಕೀಟ ನಾಶಕ. ಇವು ರೋಗವಾಹಕಗಳದ ಕೀಟಗಳನ್ನು ಕೂಡಾ ಸಂಪೂರ್ಣವಾಗಿ ಕೊಲ್ಲುವುದರಿಂದ, ಆ ಕೀಟಗಳಿಂದ ಬರುವ ಪೀಡೆ ಮತ್ತು ಆ ಕೀಟಗಳಿಂದಾಗಿ ಹರಡುವ ಶಿಲೀಂದ್ರ ರೋಗಗಳು ಹತೋಟಿಗೆ ಬರುತ್ತವೆ! – ಎಂದು ಅವರ ಅಂಬೋಣವಾಗಿತ್ತು.
ಈ ಕೀಟನಾಶಕವನ್ನು ನಾವು ಸಾಂಪ್ರದಾಯಕವಾಗಿ ಸಿಂಪಡಿಸುತ್ತಿದ್ದ ಬೋರ್ಡೋ ದ್ರಾವಣ ಸ್ಪ್ರೇ ಮಾಡುವ ಮೊದಲೇ ಸ್ಪ್ರೇ ಮಾಡಬೇಕೆಂದು ಅವರು ಸಲಹೆ ಕೊಡುತ್ತಾ ಇದ್ದರು.
ಇದು ಸಾಲದು ಎಂಬಂತೆ, ಅದೇ ಸಮಯದಲ್ಲಿ ದಿನ ಬೆಳಗಾದರೆ ನಮ್ಮ ಬಾನುಲಿಯಲ್ಲಿನ ‘ರೈತರಿಗಾಗಿ ಪ್ರಸಾರ ಆಗುವ ಕಾರ್ಯಕ್ರಮಗಳಲ್ಲಿ’ ಕೂಡಾ ಈ ಎಂಡೋ ಸಲ್ಫಾನ್ ಕ್ರಿಮಿನಾಶಕದ ಗುಣಗಾನವೇ ಹರಿದು ಬರುತ್ತಾ ಇತ್ತು.
ನಮ್ಮ ಮಲೆನಾಡಿನ ಎಲ್ಲಾ ಕ್ರಿಮಿನಾಶಕ ಮತ್ತು ರಾಸಾಯನಿಕ ಗೊಬ್ಬರದ ಅಂಗಡಿಗಳಲ್ಲೂ ಎಂಡೋ ಸಲ್ಫಾನ್ ಕ್ರಿಮಿನಾಶಕದ ಬಾಟಲಿಗಳು ರಾರಾಜಿಸಲಾರಂಭಿಸಿದವು.
ದೊಡ್ಡ ಕಾಫಿ ತೋಟಗಳಿಗೆ ಸಲಹೆ ಕೊಡುವ ಹಲವು ‘ವಿಜಿಟಿಂ ಗ್ ಮ್ಯಾನೇಜರುಗಳು’ ಎಂದು ಸ್ಥಳೀಯವಾಗಿ ಕರೆಯಲ್ಪಡುವ ತಾಂತ್ರಿಕ ಸಲಹೆಗಾರರು ಕೂಡಾ ವ್ಯಾಪಕವಾಗಿದ್ದ ಮೀಲೀ ಬಗ್ ಮತ್ತು ಗ್ರೀನ್ ಗ್ ಕೀಟಗಳಿಗೆ ಮತ್ತು ಅಡಿಕೆಯ ಹರಳು ಅಥವಾ ಎಳೇ ಹೀಚುಗಳನ್ನು ಉದುರಿಸುವ ರೋಗ ಹರಡುವ ಒಂದು ಬಗೆಯ ಹೇನಿನ ಜಾತಿಯ ಕೀಟಗಳ ಹತೋಟಿಗೆ ಎಂಡೋ ಸಲ್ಫಾನ್ ಸ್ಪ್ರೇ ಮಾಡುವುದೇ ರಾಮಬಾಣ ಎಂದೂ ಒತ್ತಾಸೆ ಕೊಟ್ಟರು.
ಮಲೆನಾಡಿನ ಬಹುಮಂದಿ ರೈತರು ಈ ಶಿಫಾರಸುಗಳನ್ನು ನಂಬಿ ಈ ಕ್ರಿಮಿನಾಶಕವನ್ನು ಧಾರಾಳವಾಗಿ ಉಪಯೋಗಿಸ ತೊಡಗಿದರು.
ಮೊದಲ ಬಾರಿಗೆ ಸಿಂಪಡಣೆ ಮಾಡಿದಾಗ ಸ್ವಲ್ಪ ಮಟ್ಟಿನ ಹತೋಟಿಯನ್ನು ಕಂಡ ಕೃಷಿಕರು ಕೂಡಾ “ ಈ ಎಂಡೋ ಸಲ್ಫಾನ್ ಸ್ಪ್ರೇ ಮಾಡಿದ್ದರಿಂದ ನಮಗೆ ಈ ಕೀಟಮತ್ತು ರೋಗಗಳಿಂದ ರಕ್ಷಣೆ ಸಿಕ್ಕಿತು! “ ಅಂತ ಸಹ ಕೃಷಿಕರಿಗೆ ಹೇಳಿದರು.
ಬಾಯಿಂದ ಬಾಯಿಗೆ ಹರಡುವ ರೈತರ ಗಾಳಿ
ಮಾತಿನ ಅಭಿಪ್ರಾಯದಲ್ಲಿ ಎಂಡೋ ಸಲ್ಫಾನ್ ಸ್ಪ್ರೇ ಬಗ್ಗೆ ಉತ್ತಮ ನಂಬಿಕೆಯೇ ಮೂಡಿತು.
ಹಳ್ಳಿ ಹಳ್ಳಿಯಲ್ಲೂ ಹುಟ್ಟಿಕೊಂಡ ಚಿಲ್ಲರೆ ವ್ಯಾಪಾರಿಗಳು ಮನೆ ಬಾಗಿಲಿಗೇ ಎಂಡೋ ಸಲ್ಫಾನ್ ಬಾಟಲಿಗಳನ್ನು ತಂದು ಮಾರಲು ತೊಡಗಿದರು.
ಮಲೆನಾಡಿನಲ್ಲಿ ತೋಟಗಾರಿಕೆ ಮಾಡಿ ಜೀವಿಸುವ ರೈತರಾದ ನಮಗೆ ವರುಷಕ್ಕೆ ಒಂದೇ ಬಾರಿ ಫಸಲು ಕೊಡುವ ಬೆಳೆಗಳಾದ ಕಾಫಿ, ಅಡಿಕೆ ಮತ್ತು ಯಾಲಕ್ಕಿ ಬೆಳೆಗಳೇ ಜೀವನಾಧಾರ.
ಈ ವ್ಯಾಪಾರಿಗಳು ಎಂಡೋ ಸಲ್ಫಾನ್ ಸ್ಪ್ರೇ ಮಾಡುವುದರಿಂದ ಕೊಳೆ ರೋಗ ಅಥವಾ ಮಹಾಳಿ ರೋಗವನ್ನು ಹರಡುವ ವಾಹಕಗಳದ ಕೀಟಗಳೂ ಸಾಯುತ್ತವೆ. ನೀವು ಮಳೆಗಾಲಕ್ಕೆ ಮೊದಲು ಮತ್ತು ಮಳೆಗಾಲದ ಮಧ್ಯೆ ಮಾಡುವ ‘ಬೋರ್ಡೋ ದ್ರಾವಣ ಸ್ಪ್ರೇ’ ಗಳ ಮೊದಲು ಇದನ್ನೊಮ್ಮೆ ಸಿಂಪಡಣೆ ಮಾಡಿದರೆ ನಿಮ್ಮ ತೋಟದ ಫಸಲು ಹೇಗೆ ಹೆಚ್ಚಿ ಬರುತ್ತದೆ. ನೋಡಿ! – ಎಂತ ಪ್ರಚಾರ ಮಾಡಿದರು.
ಯಾವರೈತನಿಗೆ ಹೆಚ್ಚಿನ ಬೆಳೆ ಬೆಳೆಯುವ ಆಸೆ ಇಲ್ಲ?
ಇಂತಹಾ ಸಾರ್ವತ್ರಿಕ ಪ್ರಚಾರದ ಅಬ್ಬರಕ್ಕೆ ನಾನೂ ಬಲಿಯಾದೆ!
ಮುಂದಿನ ಎರಡು ವರ್ಷಗಳ ಕಾಲ ಮಳೆಗಾಲ ಹಿಡಿಯುವ ಮೊದಲು, ನಮ್ಮ ಅಡಿಕೆಯ ತೋಟದಲ್ಲಿ ಹೀಚು ಹಿಡಿಯುತ್ತಾ ಇರುವ ಅಡಿಕೆಯ ಕೊನೆಗಳಿಗೆ ಮತ್ತು ಗ್ರೀನ್ ಬಗ್ ಮತ್ತು ಮೀಲೀ ಬಗ್ ಕಾಟ ಕಂಡುಬಂದ ಕಾಫಿಯ ತಾಕುಗಳಿಗೆ ಎಂಡೋ ಸಲ್ಫಾನ್ ದ್ರಾವಕ ಸಿಂಪಡಿಸಿ ‘ ಧನ್ಯೋಸ್ಮಿ’ ಅಂತ ಬೀಗಿದೆ.
ಈ ಎಂಡೋ ಸಲ್ಫಾನ್ ಎಂಬ ವಿಷವು ಕೃಷಿಗೆ ಅಪಾಯಕಾರಿಯಾದ ಕೀಟಗಳು ಮತ್ತು ಜಂತುಗಳನ್ನು ನಾಶಪಡಿಸುವುದರ ಜತೆಗೆ, ಕೃಷಿಗೆ ಸಹಾಯಕಾರಿಯಾದ ಹಲವಾರು ಕೀಟಗಳನ್ನು ಹಾಗೂ ಇತರೇ ಜೀವಿಗಳನ್ನು ಕೂಡಾ ನಾಶಪಡಿಸಿತು.
ಒಮ್ಮೆ ಒಗ್ಗಿಕೊಂಡ ನಂತರ, ಮುಂಬರುವ ವರ್ಷಗಳಲ್ಲಿ ಈ ಕಾಲಕೂಟದಂತಹಾ ವಿಷವನ್ನು ಪ್ರತೀ ವರ್ಷ ಬೆಳೆಗಳಿಗೆ ಸಿಂಪಡಿಸುವ `ಅನಿವಾರ್ಯತೆಯನ್ನು‘ ರೈತರು ಕಂಡುಕೊಳ್ಳ ಬೇಕಾಯಿತು.
ನಮ್ಮ ಮಲೆನಾಡಿನ ಭಾಗದಲ್ಲಿ ಮೊದಲಿಗೆ ಮೊದಲಿಗೆ ಈ ಕೀಟನಾಶಕ ತಾತ್ಕಾಲಿಕ ಪರಿಹಾರವನ್ನೇನೋ ನೀಡಿತು.
ಆನಂತರ ಈ ಸಿಂಪಡಣೆಯ ಪರಿಣಾಮ ಕಡಿಮೆ ಆಯಿತು! ಆಗ ಈ ಕೀಟ ನಾಶಕದ ಸ್ಥಳೀಯ ವ್ಯಾಪಾರಿಗಳು ‘ ಡಬಲ್ ಡೋಸ್ ‘ ಹೊಡೆದು ನೋಡಿ! ’ ಅಂದರು!
ಈ ವ್ಯಾಪಾರೀ ಬುದ್ಧಿವಂತಿಕೆ ಮಾತುಗಳನ್ನು ನಾನು ನಂಬಲಿಲ್ಲ. ರೆಕಮೆಂಡೆಡ್ ಡೋಸ್ ಮಾತ್ರ ಆ ಮಳೆಗಾಲಕ್ಕೆ ಮೊದಲು ಸಿಂಪಡಿಸಿದೆ.
ಎಂಡೋ ಸಲ್ಫಾನ್ ಉಪಯೋಗಿಸಲು ಸುರುಮಾಡಿದ ಮೂರನೇ ವರ್ಷದ ಮಳೆಗಾಲದಲ್ಲಿ ನಮ್ಮ ಅಡಿಕೆ ತೋಟದಲ್ಲಿ ಅದುವರೆಗೆ ಕಂಡು ಬರದೇ ಇದ್ದ ಮಹಾಳಿ ರೋಗ ಹಟಾತ್ತಾಗಿ ಕಾಣಿಸಿಕೊಂಡಿತು! ನಾಲ್ಕು ಸಲ ಎಂಡೋ ಸಲ್ಫಾನ್ ಮತ್ತು ನಾಲ್ಕು ಸಲ ಬೋರ್ಡೋ ದ್ರಾವಣ ಸ್ಪ್ರೇ ಮಾಡಿದರೂ, ಮಹಾಳಿ ರೋಗ ಬಗ್ಗಲಿಲ್ಲ.
ಆಡಿಕೆ ತೋಟದ ಫಸಲು ಮೊದಲಿನ ಅರ್ಧಕ್ಕೇ ಬಂದು ನಿಂತಿತು. ಕಾಫಿ ತೋಟದಲ್ಲಿ ಮಾತ್ರ ಇದ್ದ ಮೀಲಿ ಬಗ್ ಮತ್ತು ಗ್ರೀನ್ ಬಗ್ ಕಾಟವು ನಮ್ಮ ತೋಟದ ಬೇಲಿಗೆ ಹಾಕಿದ್ದ ಕಾಡು ಪಾರಿಜಾತ ಎಂಬ ಜೈವಿಕ ಬೇಲಿಕಂಬದ ಮರಗಳಿಗೂ ಹಬ್ಬಿತು.
ತೋಟದ ಫಸಲು ಅರ್ಧಕ್ಕೆ ಇಳಿದಾಗ ನಾವು ಅರ್ಧ ಹೊಟ್ಟೆ ಉಂಡು ಬದುಕಲು ಸಾಧ್ಯವೆ? ಅಥವಾ ಅರ್ಧ ವಾಸಿ ಕೂಲಿ ಸಂಬಳ ಕೊಟ್ಟರೆ ನಮ್ಮ ಆಳುಗಳು ಅಥವಾ ಸಿಬ್ಬಂದಿ ಒಪ್ಪುತ್ತಾರೆಯೇ?
ಮುಂದಿನ ಗತಿ ಏನು? – ಅಂತ ತಲೆಯ ಮೇಲೆ ಕೈಹೊತ್ತು ಕುಳಿತೆ! ಮನೆಯಲ್ಲಿ ಸುಮ್ಮಗೆ ಕುಳಿತಿರಲಾರದೆ, ಮುಂಜಾವಿಂದ ಸಂಜೆಯ ತನಕ ತೋಟದ ಒಳಗೇ ಕಿಂಕರ್ತವ್ಯಥಾ ಮೂಢನಂತೆ ಗೊತ್ತುಗುರಿ ಇಲ್ಲದೇ ತಿರುಗ ಹತ್ತಿದೆ.
ಆಗ ನಮ್ಮ ತೋಟದ ಪರಿಸರದಲ್ಲಿ ಆದ ಬದಲಾವಣೆಗಳು ಒಂದೊಂದಾಗಿ ನನ್ನ ಕಣ್ಣಿಗೆ ಗೋಚರ ಆದುವು.
ಕೃಷಿಕನಿಗೆ ಸಹಾಯಕ ಎನ್ನಿಸುವ ದೇವರ ಗುಬ್ಬಿ (ಲೇಡಿ ಬರ್ಡ್) ಎಂಬ ಕೀಟ ಬಹು ಉಪಕಾರಿಯಾದ ಕೀಟ. ಈ ಕೀಟವು ಸಸ್ಯಗಳ ರಸ ಹೀರಿ ಬದುಕುವ ಹೇನಿನ ಜಾತಿಯ ಕೀಟಗಳನ್ನು ಭಕ್ಷಿಸಿ ಬದುಕುತ್ತೆ.
ಇದು ಭಕ್ಷಿಸಿ ನಾಶಪಡಿಸುವ ಕೀಟಗಳು ಕೊಳೆ ಅಥವಾ ಮಹಾಳಿ ರೋಗ ಹರಡುವ ಕೀಟಗಳು!
ಎಂಡೋಸಲ್ಫಾನ್ ಕ್ರಿಮಿನಾಶಕವನ್ನು ವ್ಯಾಪಕವಾಗಿ ನಮ್ಮೂರವರು ಉಪಯೋಗ ಮಾಡಕು ಶುರು ಮಾಡಿದ ಮೇಲೆ, ಹಲವು ತರಹೆಯ ಕಪ್ಪೆಗಳು, ಓತಿಗಳು, ಹಸಿರು ಹಾವುಗಳು, ಇತರೇ ಸಾಮಾನ್ಯ ಹಾವುಗಳಾದ ಕೇರೆ ಹಾವು, ನೀರು ಹಾವು, ಪಗೇಲ ಎಂಬ ವಿಷರಹಿತ ಹಾವು, ಗದ್ದೆ ಆಮೆ, ಪ್ರೇಯಿಂಗ್ ಮ್ಯಾಂಟಿಸ್, ಸಿಕಾಡಾ ಮುಂತಾದ ಜೀವಿಗಳು ನಮ್ಮ ಪರಿಸರದಲ್ಲಿ ಬಹಳ ದೊಡ್ಡ ಪ್ರಮಾಣದಲ್ಲಿ ನಿರ್ಣಾಮ ಆಗಿದ್ದುವು.
ಇವುಗಳ ಜತೆಗೆ ಧಾರಾಳವಾಗಿ ಕಾಣಬರುತ್ತಾ ಇದ್ದ ಗುಬ್ಬಚ್ಚಿ, ಮಡಿವಾಳ ಹಕ್ಕಿ, ಗಿಣಿಗಳು, ಪಿಕಳಾರಗಳು, ಬೂದು ಬಣ್ಣದ ಪಾರಿವಾಳ, ಜೇನು ಬಾಕ ಹಕ್ಕಿ, ಮರಕುಟಿಗ, ಹಸಿರು ಪಾರಿವಾಳ, ಕೆಂಬತ್ತು ಮುಂತಾದ ಪಕ್ಷಿಗಳೂ ಬಹುಪಾಲು ಕಾಣೆ ಆಗಿದ್ದವು. ಸಾಮಾನ್ಯ ಅಳಿಲುಗಳು ಮತ್ತು ನಮ್ಮಲ್ಲಿ ಅಪರೂಪಕ್ಕೆ ಕಾಣಸಿಗುತ್ತಾ ಇದ್ದ ಕೆಂಪು ಅಳಿಲು ಕೂಡಾ ಕಾಣೆಯಾದುವು.
ಈ ಎಂಡೋ ಸಲ್ಫಾನ್ ನಮ್ಮ ತೋಟಗಳನ್ನು ಪ್ರವೇಶಿಸಿದ ಒಂದೆರಡು ವರ್ಷಗಳಲ್ಲೇ ನಮ್ಮ ಪರಿಸರದಲ್ಲಿ ಧಾರಾಳವಾಗಿ ಗೂಡು ಕಟ್ಟುತ್ತಾ ಇದ್ದ ಜೇನು ನೊಣಗಳೂ ಕಡಿಮೆ ಆದುವು.
ಹೀಗೆಯೇ, ನಮ್ಮ ಬೆಳೆಗಳಿಗೆ ಸಹಾಯಕಾರಿಯಾಗುತ್ತಾ ಇದ್ದ ಹಲವಾರು ಕ್ರಿಮಿಕೀಟ ಮತ್ತು ಜೀವಿಗಳು ಕಣ್ಮರೆ ಆಗುವುದರ ಬೆನ್ನಿಗೇ ಎಂಡೋ ಸಲ್ಫಾನ್ ಎಂಬ ಈ ಕೀಟನಾಶಕದ ಉಪಯೋಗ ನಮಗೆ ಬೇಕಾದ ಪ್ರತಿಫಲ ನೀಡಲಿಲ್ಲ.
ಬದಲಾಗಿ, ಇದನ್ನು ಉಪಯೋಗಿಸಿದ ಕಡೆಗಳಲ್ಲೆಲ್ಲಾ ಸಸ್ಯಗಳಿಗೆ ವ್ಯಾಪಕವಾಗಿ ಶಿಲೀಂದ್ರ ರೋಗ ವ್ಯಾಪಿಸಿದ್ದು ಕಂಡು ಬಂತು.
ಈ ಕೀಟನಾಶಕದ ಬಗ್ಗೆ ರೈತರಿಗೆ ಸರಿಯಾಯಾದ ಅರಿವು ಮೂಡುವಷ್ಟರಲ್ಲಿ, ನಮ್ಮ ಪರಿಸರಕ್ಕೆ ತುಂಬಲಾರದ ನಷ್ಟ ಆಗೇ ಬಿಟ್ಟಿತ್ತು.
ನಾನು ತಿಳಿದುಕೊಂಡಂತೆ, ಈ ಕೀಟನಾಶಕದ ಉಪಯೋಗ ನಮ್ಮ ಪರಿಸರಕ್ಕೆ ಮಾರಕ ಆಗಿ ಪರಿಣಮಿಸಿತ್ತು.
ಅಂದಿಗೇ ಎಂಡೋ ಸಲ್ಫಾನ್ ಸಿಂಪಡಣೆಯನ್ನು ನನ್ನ ಸ್ವಂತ ನಿರ್ಧಾರದ ಪ್ರಕಾರ ನಿಲ್ಲಿಸಿದೆ.
ನಮ್ಮ ತೋಟದ ಒಳಗೆ ಹೊಕ್ಕ ಮಹಾಳಿಯನ್ನು ಹೊರಗೆ ಅಟ್ಟಲು ‘ಹಳೆಯ ಗಂಡನ ಪಾದವೇ ಗತಿ’ ಎಂಬ ಗಾದೆಯಂತೆ ವರುಷಕ್ಕೆ ಮೂರು ನಾಲ್ಕು ಸಲ ಬೋರ್ಡೋ ದ್ರಾವಣದ ಸ್ಪ್ರೇ ಮಾತ್ರ ಮಾಡಿದೆವು. ಒಮ್ಮೆ ಕಾಲಿಟ್ಟ ಮಹಾಳಿಯನ್ನು ದೂರೀಕರಿಸಲು ನಮಗೆ ಸುಮಾರು ನಾಲ್ಕು ವರುಷಗಳೇ ಬೇಕಾದುವು.
ಮಲೆನಾಡಿನ ರೈತರಾದ ನಾವು ಇಂದು ಶಿಲೀಂದ್ರ ಬಾಧೆಯನ್ನು ನಿಯಂತ್ರಿಸಲು ಬಹು ಹಿಂದಿನ ಕಾಲದಿಂದಲೂ ರೂಢಿಸಿಕೊಂಡಿದ್ದ ಸಾಂಪ್ರದಾಯಿಕ ಕೃಷಿ ಕ್ರಮಗಳ ಕಡೆಗೆಯೇ ವಾಲುತ್ತಾ ಇದ್ದೇವೆ.
ಅಡಿಕೆಯ ಕೊಳೆ ರೋಗ ನಿಯಂತ್ರಣಕ್ಕೆ ಇಂದಿಗೂ ನಾವು ಶತಮಾನದಷ್ಟು ಹಳೆಯ ಆವಿಷ್ಕಾರವಾದ ಬೋರ್ಡೋ ದ್ರಾವಣವನ್ನು ಹಿಂದಿನಂತೆ ಇಂದಿಗೂ ಉಪಯೋಗಿಸುತ್ತಾ ಇದ್ದೇವೆ.
೧೯೨೦ನೇ ದಶಕದಲ್ಲಿ ಅಂದಿನ ಮೈಸೂರುರಾಜ್ಯದ ವ್ಯವಸಾಯ ಇಲಾಖೆಯ ನಿರ್ದೇಶಕರಾಗಿದ್ದ ಡಾ. ಕೋಲ್‌ಮನ್ ಎಂಬ ಮಹನೀಯರು ಮಹಾಳಿಯ ರೋಗ ಮತ್ತು ಕಾಫಿಯ ಎಲೆಉದುರುವಿಕೆಯ ರೋಗಗಳಿಗೆ ಪರಿಹಾರವಾಗಿ ಶಿಫಾರಸು ಮಾಡಿದ್ದ ಬೋರ್ಡೋ ದ್ರಾವಣದ ಉಪಯೋಗವನ್ನು ನಾವು ಇಂದಿಗೂ ಕೈಬಿಟ್ಟಿಲ್ಲ.
ಬೋರ್ಡೋ ದ್ರಾವಣವು ಕಾಫಿ ಮತ್ತು ಅಡಿಕೆಯ ಶಿಲೀಂದ್ರ ರೋಗಗಳ ಹತೋಟಿಗೆ ತುಂಬಾ ಸಹಕಾರಿ ಹಾಗೂ ಪರಿಸರದ ಜೀವಸಂಕುಲಕ್ಕೆ ಇದು ಮಾರಕವಲ್ಲ.
ಇತ್ತೀಚೆಗೆ ಹೆಚ್ಚಿನ ಅಡಿಕೆ ಬೆಳೆಗಾರರು ಪುನಹಾ ಸಾವಯವ ಕೃಷಿಯ ವಿಧಾನಗಳತ್ತ ಒಲವು ತೋರುತ್ತಾ ಇದ್ದಾರೆ.
ಇದು ಸಂತಸದ ಸಂಗತಿ.
ಪರಿಸರಕ್ಕೆ ಹಾನಿಕರ ಪರಿಣಾಮ ಬೀರುವ ಕೆಲವು ರಾಸಾಯನಿಕಗಳು ಮತ್ತು ಕ್ರಿಮಿನಾಶಕಗಳಿಗೆ ನಾವು ವಿದಾಯ ಹೇಳಿದ ಮೇಲೆ ನಮ್ಮ ತೋಟದಲ್ಲಿ ಇತ್ತೀಚೆಗೆ ಅಪರೂಪಕ್ಕೆ ಒಂದೊಂದು ಹೆಜ್ಜೇನಿನ ಹುಟ್ಟು ಕಂಡು ಬರುತ್ತಾ ಇವೆ. ಇತ್ತೀಚೆಗೆ ಮುಂಜಾನೆ ಎದ್ದೊಡನೆ ಹಕ್ಕಿಗಳ ಚಿಲಿಪಿಲಿ ಶಬ್ದವನ್ನು ಪುನಹಾ ಕೇಳುತ್ತಾ ಇದ್ದೇವೆ.
ನಾವು ಈಗ ಹೆಜ್ಜೇನಿನ ಗೂಡಿನಿಂದ ಜೇನು ಸಂಗ್ರಹಿಸುವ ಬಗ್ಗೆ ಚಿಂತಿಸುತ್ತಾ ಇಲ್ಲ. ಅವುಗಳ ಸಂತತಿ ಹೆಚ್ಚಲಿ!” ಎಂದು ಆಶಿಸುತ್ತೇವೆ.
ನಮ್ಮಲ್ಲಿಯ ಪರಿಸರಕ್ಕೆ ಎಂಡೋಸಲ್ಫಾನ್ ಮಾಡಿದ ದುಷ್ಪರಿಣಾಮದ ಕರಿನೆರಳು ದೂರಾಗಲು ಇನ್ನೂ ಹಲವು ದಶಕಗಳೇ ಬೇಕಾದಾವು.
ಎಂಡೋ ಸಲ್ಫಾನ್ ಅಂದು ನಮ್ಮ ಮುಖದ ಮೇಲೆ ಕೊಟ್ಟ ಒದೆಯ ನೆನಪು ಮನದಿಂದ ಇಂದಿಗೂ ಮಾಸಿಲ್ಲ.
*****