ಕ್ರಿಸ್ತಶಕ ೭೯ರಲ್ಲಿ ವೆಸೂವಿಯೆಸ್ ಅಗ್ನಿಪರ್ವತದ ಲಾವಾರಸದಲ್ಲಿ ಹೂತುಹೋದ ಪಾಂಪೇ ನಗರ ಗೊತ್ತಲ್ಲ? ಕ್ರಿಸ್ತಶಕ ೧೭೫೦ರಲ್ಲಿ ನಡೆದ ಉತ್ಖನನದ ಸಂದರ್ಭದಲ್ಲಿ ಈ ನಗರದ ಕೆಲವು ಮನೆಗಳಲ್ಲಿ ಸುರುಳಿಯಾಗಿ ಸುತ್ತಿಕೊಂಡ ಹಲವು ವಸ್ತುಗಳು ದೊರೆತವು. ಅವೆಲ್ಲವೂ ಸುಟ್ಟುಹೋದ ಬಟ್ಟೆಗಳಿರಬಹುದು ಎಂದೇ ಊಹಿಸಿದ್ದರು. ಅಕಸ್ಮಾತ್ತಾಗಿ ಅಂಥ ಒಂದು ಸುರುಳಿ ಕೆಳಗೆ ಬಿದ್ದು ಒಡೆದುಹೋದಾಗ ಪುಸ್ತಕವೊಂದು ಹೊರಬಿತ್ತು! ಇಂಥ ನೂರಾರು ಪುಸ್ತಕಗಳನ್ನು ಅಲ್ಲಿ ಪತ್ತೆ ಹಚ್ಚಲಾಯಿತು. ಅವುಗಳಲ್ಲಿ ಲೂಕ್ರಿಶಿಯಸ್‌ನ ಸಮಕಾಲೀನ ಗ್ರೀಕ್ ತತ್ವಶಾಸ್ತ್ರಜ್ಞ ಫಿಲೋಡೆಮಸ್‌ನ ಕೃತಿಗಳೂ ಇದ್ದವು. ಮುಂದೆ ೧೯೮೭ರಲ್ಲಿ ಹೊಸ ತಂತ್ರಜ್ಞಾನದ ನೆರವಿನ ಮೂಲಕ ಈ ಸುರುಳಿಗಳಲ್ಲಿ ಏನಿದೆ ಎಂಬ ಬಗ್ಗೆ ಮತ್ತೊಂದು ಸಂಶೋಧನಾ ಅಭಿಯಾನ ನಡೆಯಿತು. ತೊಮಾಸೋ ಸ್ಟಾರೇಸ್ ಎಂಬಾತ ಒಂದು ಸುರುಳಿಯ ಮೈಕ್ರೋ ಛಾಯಾಗ್ರಹಣ ಮಾಡಿದ. ಲೂಕ್ರಿಶಿಯಸ್ ಬಗ್ಗೆ ಸ್ಟೀಫನ್ ಗ್ರೀನ್‌ಬ್ಲಾಟ್ ಬರೆದ ‘ದ ಸ್ವರ್ವ್’ ಪುಸ್ತಕವನ್ನು ನಾನು ಓದಿದ ಮೇಲೆ ಇವೆಲ್ಲ ಸಂಗತಿಗಳೂ ತಿಳಿದವು. ಕ್ರಿಸ್ತಪೂರ್ವದ ವೈಜ್ಞಾನಿಕ ಚಿಂತಕನ ಗ್ರಂಥವು ಅತ್ಯುತ್ತಮ ದಾಖಲೀಕರಣದ ತಂತ್ರಗಳಿಂದಾಗಿ ಸಂಪೂರ್ಣವಾಗಿ ದೊರೆಯಿತು; ಅವನ ಚಿಂತನೆಗಳ ಬಗ್ಗೆ ಹೊಸ ಚರ್ಚೆ ಶುರುವಾಯಿತು.
ಕಳೆದೇಹೋಗಿದೆ ಎಂದು ನಂಬಲಾದ ಒಂದೇ ಒಂದು ಪುಸ್ತಕವನ್ನು ನಾವು ಮರಳಿ ಪಡೆದರೆ ಎಂತಹ ತಿರುವು ಸಿಗುತ್ತದೆ ನೋಡಿ!
ಗ್ರಂಥ ಸಂಪಾದನೆ ಮತ್ತು ತಂತ್ರಜ್ಞಾನ ಎಂಬುದು ಹೊಸ ವಿಷಯವೇನಲ್ಲ; ಆದರೆ ಈಗಿನ್ನೂ ಪ್ರೌಢಹಂತ ತಲುಪುತ್ತಿರುವ ವಿಷಯ. ಇಲ್ಲಿ ಗ್ರಂಥಗಳನ್ನು ಮಾಹಿತಿ / ಆಕರಗಳು ಎಂದೇ ಪರಿಗಣಿಸಿದರೆ ತಂತ್ರಜ್ಞಾನದ ಬಳಕೆಯ ಹಲವು ಆಯಾಮಗಳನ್ನು ವಿವರಿಸಬಹುದು. ಗ್ರಂಥ ಎಂದರೆ ಸಾಮಾನ್ಯವಾಗಿ ಹಸ್ತಪ್ರತಿ, ಪುಸ್ತಕ ಎಂದೇ ಪರಿಗಣಿಸುತ್ತೇವೆ. ಆದ್ದರಿಂದ ಹಸ್ತಪ್ರತಿಗಳನ್ನೂ ಒಳಗೊಂಡಂತೆ ಹಳೆಯ ಮತ್ತು ಪ್ರಾಚೀನ ಶಾಸನಗಳ, ಕೃತಿಗಳ ಸಂಪಾದನೆಯ ತಂತ್ರಜ್ಞಾನದ ಬಗ್ಗೆ ಕೆಲವು ಮಾಹಿತಿಗಳನ್ನು ಹಂಚಿಕೊಳ್ಳುತ್ತೇನೆ.
ಕನ್ನಡದ ಶಾಸನಗಳು
ಶಾಸ್ತ್ರೀಯ ಕನ್ನಡದ ಹಿನ್ನೆಲೆಯಲ್ಲಿ ನೋಡುವುದಾದರೆ ಕನ್ನಡದ ಶಾಸನಗಳಲ್ಲಿ ಇರುವ ಪಠ್ಯಗಳನ್ನು ಸಂಗ್ರಹಿಸುವುದು ಮೊದಲ ಕೆಲಸ. ಎಪಿಗ್ರಾಫಿಯ ಕರ್ನಾಟಕದಿಂದ ಆರಂಭಿಸಿ ನಮ್ಮಲ್ಲೀಗ ಶಾಸನಗಳ ದೊಡ್ಡ ಸಂಗ್ರಹವೇ ಇದೆ. ಆದರೆ ಆಗಿನ ಕಾಲದಲ್ಲಿ ಶಾಸನಗಳ ಛಾಯಾಚಿತ್ರಗಳನ್ನು ತೆಗೆಯುತ್ತಿದ್ದರು ; ಸ್ವತಃ ಪ್ರತಿ ಮಾಡಿಕೊಳ್ಳುತ್ತಿದ್ದರು. ಆದಾಗ್ಯೂ ಇವುಗಳನ್ನು ನಾವು ಒಂದೇ ಸ್ಥಳದಲ್ಲಿ ನೋಡಲು ಸಾಧ್ಯವಿಲ್ಲ. ಮೊದಲಿನಿಂದಲೂ ಇಂಥ ಏಕೀಕೃತ ಶಾಸನ ಪಠ್ಯ ಭಂಡಾರ ನಮ್ಮಲ್ಲಿ ಇದ್ದಿದ್ದರೆ ನಾವು ಈಗ ಅವುಗಳನ್ನು ಡಿಜಿಟಲೀಕರಿಸಲು ಸುಲಭವಾಗುತ್ತಿತ್ತು. ಈಗ ನಮ್ಮ ಸರ್ಕಾರಗಳು, ಶಾಸ್ತ್ರೀಯ ಕನ್ನಡದಂತಹ ಕೇಂದ್ರಗಳು ಇಂತಹ ದಾಖಲೀಕರಣಕ್ಕೆ ಮುಂದಾಗಬೇಕಿದೆ. ಇರುವ ಶಾಸನಗಳನ್ನು ವೈಜ್ಞಾನಿಕವಾಗಿ ಪಟ್ಟಿ ಮಾಡಿ, ಅತ್ಯುಚ್ಚ ಗುಣಮಟ್ಟದ ಕ್ಯಾಮೆರಾಗಳು, ಕ್ರೌಡ್‌ಸೋರ್ಸಿಂಗ್ ಮತ್ತು ಸ್ಮಾರ್ಟ್‌ಫೋನ್ ಬಳಕೆಯ ಮೂಲಕ ಒಂದೇ ಕಡೆಗೆ ಸಂಗ್ರಹಿಸಬೇಕಿದೆ.
ಇನ್ನು ಶಾಸನಗಳಲ್ಲಿ ಇರುವ ಲಿಪಿಗಳು ವಿವಿಧ ಕಾಲಘಟ್ಟಕ್ಕೆ ಸೇರಿವೆ. ಆದ್ದರಿಂದ ಕಾಲಾನುಕ್ರಮದಲ್ಲಿ ಲಿಪಿಗಳಲ್ಲಿಯೂ ಸಾಕಷ್ಟು ಬದಲಾವಣೆಗಳಾಗಿವೆ. ಇಂತಹ ಲಿಪಿಗಳಲ್ಲಿ ಇರುವ ಅಕ್ಷರಭಾಗಗಳನ್ನು ಮತ್ತು ಅವುಗಳ ವಿವಿಧ ಸ್ವರೂಪಗಳನ್ನು ಡಿಜಿಟಲೀಕರಿಸುವ ಮಹತ್ವದ ಕೆಲಸ ಆಗಬೇಕಿದೆ. ಹೀಗೆ ಅಕ್ಷರಭಾಗಗಳ ಮ್ಯಾಟ್ರಿಕ್ಸ್ ಒಂದನ್ನು ರೂಪಿಸಿದ ಮೇಲೆ ಇವುಗಳೆಲ್ಲವಕ್ಕೂ ಹೊಂದುವ ಒಂದು ಆಪ್ಟಿಕಲ್ ಕ್ಯಾರಕ್ಟೆರ್ ರೆಕಗ್ನಿಶನ್ ತಂತ್ರಾಂಶವನ್ನು (ಓಸಿಆರ್) ತಯಾರಿಸಬಹುದಾಗಿದೆ. ಈ ದಿಕ್ಕಿನಲ್ಲಿ ಕೆಲವು ಪ್ರಯತ್ನಗಳು ನಡೆದಿವೆ. ಇದಕ್ಕೂ ಹಲವು ವಿಶ್ವವಿದ್ಯಾಲಯಗಳು, ಪುರಾತತ್ವ ಇಲಾಖೆ, ಕನ್ನಡ ಸಂಸ್ಕೃತಿ ಇಲಾಖೆ, ಶಾಸ್ತ್ರೀಯ ಕನ್ನಡ ಕೇಂದ್ರ – ಎಲ್ಲವೂ ಸೇರಿ ಒಂದು ಏಕೀಕೃತ ಯತ್ನವನ್ನು ಕೈಗೊಂಡರೆ ಕೆಲವೇ ವರ್ಷಗಳಲ್ಲಿ ನಮ್ಮ ಎಲ್ಲ (ಓದಿರದ) ಶಾಸನಗಳನ್ನೂ ಒಂದೇ ದತ್ತಸಂಚಯಕ್ಕೆ ಸೇರಿಸಬಹುದು.
ಸಂಚಯ ಎಂಬ ಸಮುದಾಯವೊಂದು ಈ ನಿಟ್ಟಿನಲ್ಲಿ ಒಳ್ಳೆಯ ಕೆಲಸವನ್ನು ಮಾಡಿರುವುದನ್ನು ಇಲ್ಲಿ ಗಮನಕ್ಕೆ ತರಬೇಕಿದೆ. ಡಾ| ಓ ಎಲ್ ನಾಗಭೂಷಣ ಸ್ವಾಮಿಯವರಂತಹ ಹಿರಿಯರು ಇರುವ ಈ ಸಮುದಾಯವು ಈಗಾಗಲೇ ವಚನ ಸಾಹಿತ್ಯ ಮತ್ತು ದಾಸ ಸಾಹಿತ್ಯದ ಸಂಚಯವನ್ನು (www.sanchaya.org) ಆನ್‌ಲೈನ್‌ನಲ್ಲಿ ತಂದಿದೆ. ಒಂದು ಸರ್ಕಾರವು ಮಾಡಬೇಕಾಗಿದ್ದ ಕೆಲಸವನ್ನು ಈ ಸಮುದಾಯವು ಸದ್ದಿಲ್ಲದೆ ಮಾಡಿದೆ ಎಂಬುದು ತುಂಬಾ ಶ್ಲಾಘನೀಯ ಸಂಗತಿ. ಇದೇ ರೀತಿಯಲ್ಲಿ ಶಾಸನಗಳ ಪಠ್ಯಗಳನ್ನೂ ಒಂದೆಡೆಗೆ ತಂದರೆ ಸಾರ್ವಜನಿಕರಿಗೂ ಉಪಯೋಗ. ಇತಿಹಾಸದ, ಭಾಷೆಯ ಮತ್ತು ಸಾಮಾಜಿಕ ಸಂಗತಿಗಳ ಸಂಶೋಧಕರಿಗೆ ಇದು ತುಂಬಾ ಉಪಯುಕ್ತ. ಒಂದು ಪದದ ಬಳಕೆ ಯಾವ ಯಾವ ಕಾಲದಲ್ಲಿ ಹೇಗೆ ಆಗಿದೆ ಎಂಬುದನ್ನೆಲ್ಲ ಒಂದೇ ಕೀಲಿಯನ್ನು ಒತ್ತುವುದರ ಮೂಲಕ ತಿಳಿಯಬಹುದು.
ತಾಳೆ ಗ್ರಂಥಗಳು
ಇನ್ನು ತಾಳೆಯೋಲೆಗಳ ವಿಷಯಕ್ಕೆ ಬರುವುದಾದರೆ, ಶಾಸನಗಳ ಕುರಿತು ಆಗಿರುವಷ್ಟು ಕೆಲಸ ಆಗಿಲ್ಲ ಎಂದು ಹೇಳಬೇಕಾಗುತ್ತದೆ. ಬಹುಶಃ ಜಗತ್ತಿನಲ್ಲೇ ಭಾರತವನ್ನು ಬಿಟ್ಟರೆ ಇಂತಹ ಪ್ರಾಚೀನ ಗ್ರಂಥಭಂಡಾರ ಇಲ್ಲ. ಮೈಸೂರಿನ ಓರಿಯೆಂಟಲ್ ರಿಸರ್ಚ್ ಲೈಬ್ರರಿಯಿಂದ ಹಿಡಿದು, ದೇಶದ ೯೦ಕ್ಕೂ ಹೆಚ್ಚು ತಾಳೆಯೋಲೆ ಸಂಪನ್ಮೂಲ ಅಥವಾ ಭಾಗೀದಾರಿ ಕೇಂದ್ರಗಳಲ್ಲಿ, ಹಲವು ವಿಶ್ವವಿದ್ಯಾಲಯಗಳಲ್ಲಿ, ಸಂಶೋಧನಾ ಕೇಂದ್ರಗಳಲ್ಲಿ ಇರುವ ೪೨ ಲಕ್ಷಕ್ಕೂ ಹೆಚ್ಚಿನ ತಾಳೆಯೋಲೆ ಗ್ರಂಥಗಳ ಡಿಜಿಟಲೀಕರಣ ಮಂದಗತಿಯಲ್ಲಿದೆ. ಈಗ ಕೆಲವೆಡೆ ದಾಖಲೀಕರಣ ಆರಂಭವಾಗಿದ್ದರೂ, ಕಾಲಮಿತಿಯ ಅಭಿಯಾನದ (ಮಿಶನ್ ಮೋಡ್) ರೀತಿಯಲ್ಲಿ ಕೆಲಸ ನಡೆಯುತ್ತಿಲ್ಲ. ಈವರೆಗೆ ೨.೯೬ ಲಕ್ಷ ತಾಳೆಗ್ರಂಥಗಳನ್ನು ಮಾತ್ರ ಡಿಜಿಟಲೀಕರಿಸಲಾಗಿದೆ (ಮಾಹಿತಿ:https://www.namami.gov.in/)
ತಾಳೆಯೋಲೆಗಳೂ ಶಿಲಾಶಾಸನಗಳೊಂದಿಗೇ ರೂಪುಗೊಂಡಿವೆ. ಆದ್ದರಿಂದ ಶಿಲಾಶಾಸನಗಳನ್ನು ಓದುವುದಕ್ಕೆ ರೂಪಿಸುವ ತಂತ್ರಜ್ಞಾನವನ್ನೇ ಇಲ್ಲೂ ಬಳಸಬೇಕಿದೆ. ಗೂಗಲ್ ಸಂಸ್ಥೆಯು ಕೈಬರಹ ಮಾಡುತ್ತಿರುವಂತೆಯೇ ಅದನ್ನು ಗುರುತಿಸಿ ಪಠ್ಯವನ್ನಾಗಿ ಪರಿವರ್ತಿಸುತ್ತಿದೆ ಎಂಬುದನ್ನು ನೀವು ಗಮನಿಸಿರಬಹುದು. ಇಲ್ಲಿರುವ ತಂತ್ರಜ್ಞಾನವು ಕೈಬರಹದ ಚಲನವಲನಗಳನ್ನು (ಡೈನಮಿಕ್ ಮೂವ್‌ಮೆಂಟ್) ಅವಲಂಬಿಸಿದೆ. ಆದರೆ ಶಾಸನ ಮತ್ತು ತಾಳೆಯೋಲೆಗಳದ್ದು ಸ್ಥಿರ (ಸ್ಟಾಟಿಕ್) ರೂಪ. ಆದ್ದರಿಂದ ಈ ತಂತ್ರಜ್ಞಾನವನ್ನು ರೂಪಿಸುವುದಕ್ಕೆ ಇನ್ನೊಂದಷ್ಟು ಹೆಚ್ಚಿನ ಪ್ರಮಾಣದ ಮಾಹಿತಿ ಊಡಿಸುವಿಕೆ ಬೇಕಾಗುತ್ತದೆ. ತಾಳೆಯೋಲೆಗಳನ್ನು ಓದಿ ಡಿಜಿಟಲೀಕರಿಸುವ ಕೆಲಸ ತುಂಬಾ ಮಹತ್ವದ್ದು. ಇದನ್ನೂ ಮಿಶನ್ ಮೋಡ್ ರೀತಿಯಲ್ಲೇ ಮಾಡದಿದ್ದರೆ ನಾವು ಲಭ್ಯ ಗ್ರಂಥಗಳ ಚೌಕಟ್ಟಿನಲ್ಲೇ ಸಂಶೋಧನೆಗಳನ್ನು ಮಾಡಬೇಕಾಗುತ್ತದೆ. ಕೌಟಿಲೀಯ ಅರ್ಥಶಾಸ್ತ್ರವು ಮೈಸೂರಿನಲ್ಲಿ ಸಿಗದಿದ್ದರೆ ಏನಾಗುತ್ತಿತ್ತು ಎಂದು ಯೋಚಿಸಿ. ಅಥವಾ ಅಂತಹ ಮಹತ್ವದ ಕೃತಿಗಳು ಈಗಲೂ ಎಲ್ಲೋ ಒಂದು ಕೇಂದ್ರದಲ್ಲಿ ಅಡಗಿರಬಹುದಲ್ಲವೆ?
ನಾವು ಎಲ್ಲರಿಗೂ ತಾಳೆಯೋಲೆ – ಶಾಸನಗಳನ್ನು, ಮೋಡಿ ಲಿಪಿಗಳನ್ನು ಕಲಿಸುವ ಬದಲು, ಎಲ್ಲವನ್ನೂ ಡಿಜಿಟಲೀಕರಿಸಿದರೆ ಓದುವಿಕೆ ಸರಳವಾಗುತ್ತದೆ. ಅಂತರ್ ಶಾಸ್ತ್ರೀಯ ಸಂಶೋಧನೆಗಳು ವೇಗ ಪಡೆಯುತ್ತವೆ. ಆದ್ದರಿಂದ ಮಾಹಿತಿ ತಂತ್ರಜ್ಞಾನದ ಈ ಯುಗವನ್ನು ನಮ್ಮ ಪರಂಪರೆಯ ಕೊಂಡಿಗಳ ರಕ್ಷಣೆಗೆ ಬಳಸುವುದು ಅತ್ಯಂತ ಜರೂರಿನ ಕೆಲಸವಾಗಿದೆ.
ತಾಳೆಯೋಲೆಗಳನ್ನು ಡಿಜಿಟಲೀಕರಿಸುವ ಬಗ್ಗೆ ಕೆಲವು ಸಂಶೋಧನೆಗಳು ನಡೆದಿವೆ ಎಂಬುದು ಸಂತೋಷದ ವಿಷಯ. ಈ ಸಂಶೋಧನೆಗಳು ಕಾರ್ಯರೂಪಕ್ಕೆ ಬಂದರೆ ತಾಳೆಯೋಲೆಗಳ ದತ್ತಸಂಚಯವನ್ನು ರೂಪಿಸುವ ಕೆಲಸ ವೇಗ ಪಡೆಯುತ್ತದೆ.
ಆರ್ಕೈವ್ ಆರ್ಗ್ ಅಭಿಯಾನ ಮತ್ತು ಹಕ್ಕುಸ್ವಾಮ್ಯದ ಸಮಸ್ಯೆಗಳು
ಈ ಮೊದಲೇ ಉಲ್ಲೇಖಿಸಿದ ಸಂಚಯ ಸಮುದಾಯ ವೇದಿಕೆಯು ಕಳೆದ ಮೂರು ತಿಂಗಳುಗಳಲ್ಲಿ ೮೫೦ ಪುಸ್ತಕಗಳನ್ನು ಆರ್ಕೈವ್ಸ್‌ನ ಸ್ಕ್ರೈಬ್ ಯಂತ್ರದ ಮೂಲಕ ಓಸಿಆರ್ ಮಾಡಿದೆ ಎಂದು ಮೊನ್ನೆಯಷ್ಟೇ ಪ್ರಕಟಿಸಿದೆ. ಒಟ್ಟು ೨.೪೦ ಲಕ್ಷ ಪುಟಗಳನ್ನು ಈ ಸಮುದಾಯವು ಪಿಡಿಎಫ್ ಮತ್ತು ಇತರೆ ಫಾರ್ಮಾಟ್‌ಗಳಿಗೆ (ಡಿಜೆವಿಯು, ಟಿಫ್ ಇತ್ಯಾದಿ) ಪರಿವರ್ತಿಸಿದೆ. ಭಾರತದ ಮಟ್ಟಿಗೆ ಇದೂ ಕೂಡ ಪುಸ್ತಕ ಸಂಗ್ರಹದ ನೂತನ ವಿಧಾನ. ಆದರೆ ಈ ಎಲ್ಲ ಹಕ್ಕುಸ್ವಾಮ್ಯ ಮುಕ್ತ ಪುಸ್ತಕಗಳೂ ಆರ್ಕೈವ್ ಜಾಲತಾಣಕ್ಕೆ (www.archive.org) ಸೇರ್ಪಡೆಯಾಗುತ್ತಿವೆ ಎಂಬುದನ್ನು ಗಮನಿಸಬೇಕಿದೆ. ಇಂತಹ ಯತ್ನವನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳೇ ಮಾಡಿ ಸರ್ಕಾರದ ತಾಣಗಳಲ್ಲೇ ಪ್ರಕಟಿಸುವುದು ಅತ್ಯಂತ ಸೂಕ್ತ. ಇಂತಹ ವೇದಿಕೆಗಳಿಂದ ಆರ್ಕೈವ್ ಸಂಸ್ಥೆಯು ಅಧಿಕೃತವಾಗಿ ತನ್ನ ವೇದಿಕೆಯಲ್ಲಿ, ಸೂಕ್ತ ಹಕ್ಕುಸ್ವಾಮ್ಯಗಳ ಮುಕ್ತತೆ ವಿವರಗಳೊಂದಿಗೆ ಪ್ರಕಟಿಸಬಹುದಾಗಿದೆ. ಆರ್ಕೈವ್ ಜಾಲತಾಣದಲ್ಲಿ ಹಕ್ಕುಸ್ವಾಮ್ಯ ಇರುವ ಪುಸ್ತಕಗಳನ್ನೂ ಯಾವುದೇ ಅನುಮತಿ ಇಲ್ಲದೆ ಪ್ರಕಟಿಸುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ. ಇದು ಸ್ವಯಂಸೇವಾ ಕಾರ್ಯಕರ್ತರ ಅತ್ಯುತ್ಸಾಹ ಮತ್ತು ಅತಿರೇಕದ ಉದಾಹರಣೆಗಳು. ಸ್ವಯಂ ನಿಯಂತ್ರಣ, ಸ್ವಯಂ ಪ್ರಜ್ಞೆ ಇಲ್ಲದ ಇಂತಹ ವ್ಯಕ್ತಿಗಳಿಂದ ಆರ್ಕೈವ್‌ನ ಮೂಲ ಆಶಯಕ್ಕೇ ಧಕ್ಕೆ ಆಗುವುದರಲ್ಲಿ ಸಂಶಯವಿಲ್ಲ.
ಓಸಿಆರ್ ತಂತ್ರಜ್ಞಾನದ ಓಟ
ಆಪ್ಟಿಕಲ್ ಕ್ಯಾರಕ್ಟರ್ ರೆಕಗ್ನಿಶನ್ ತಂತ್ರಜ್ಞಾನದಲ್ಲಿ ಮುಖ್ಯವಾಗಿ ಅಕ್ಷರಭಾಗಗಳನ್ನು ತಂತ್ರಾಂಶಕ್ಕೆ ಊಡಿಸಿ ಗುರುತಿಸುವುದಕ್ಕೆ ತರಬೇತಿ ನೀಡುತ್ತಾರೆ. ಒಂದು ಅಕ್ಷರಭಾಗ, ಅಕ್ಷರ, ಸಂಯುಕ್ತಾಕ್ಷರ ಎಲ್ಲವೂ ಏನೇನೆಲ್ಲ ಸಾಧ್ಯತೆಗಳೊಂದಿಗೆ ಕಾಣಸಿಗಬಹುದು ಎಂಬುದನ್ನು ಗರಿಷ್ಠ ಪ್ರಮಾಣದಲ್ಲಿ ತಂತ್ರಾಂಶಕ್ಕೆ ಊಡಿಸಬೇಕಾಗುತ್ತದೆ. ಇದಕ್ಕಾಗಿ ಅಪಾರ ಪ್ರಮಾಣದಲ್ಲಿ ವಿವಿಧ ಕಾಲಘಟ್ಟಗಳ ವಿವಿಧ ಅಕ್ಷರಭಾಗಗಳ ಬಹುದೊಡ್ಡ ಕಣಜವನ್ನೇ ನಿರ್ಮಿಸಬೇಕಿದೆ.
ನೀವು ಗೂಗಲ್ ಡ್ರೈವ್ ಮೂಲಕ ಸೀಮಿತ ಚಿತ್ರ / ಪಿಡಿಎಫ್ ಕಡತವನ್ನು ಏರಿಸಿ, ನಿಮ್ಮ ಭಾಷೆಯಲ್ಲೇ ಪಠ್ಯವನ್ನಾಗಿ ಪರಿವರ್ತಿಸಬಹುದು.
ಟೆಸೆರಾಕ್ಟ್ : ಯಶಸ್ವೀ ಪ್ರಯೋಗ
ಗೂಗಲ್ ಸಂಸ್ಥೆಯು ೨೦೧೮ರ ನವೆಂಬರಿನಲ್ಲಿ ಬಿಡುಗಡೆ ಮಾಡಿದ ಟೆಸೆರಾಕ್ಟ್ ೪.೦ ಆವೃತ್ತಿಯ ಮುಕ್ತತಂತ್ರಾಂಶವನ್ನು ಬಳಸಿ (https://github.com/tesseract-ocr/tesseract) ಭಾರತವಾಣಿಯಲ್ಲಿ ಸಂಗ್ರಹವಾದ ಇರುವ ೧೦೦೦ಕ್ಕೂ ಹೆಚ್ಚು ಕೃತಿಗಳನ್ನು ಪಠ್ಯರೂಪಕ್ಕೆ ತರಲಾಗಿದೆ. ಕರಡು ಸ್ಥಿತಿಯಲ್ಲಿ ಇರುವ ಈ ಪುಸ್ತಕಗಳಲ್ಲಿ ಒಟ್ಟು ೩.೫೦ ಕೋಟಿ ಪದಗಳಿವೆ. ಸಾಮಾನ್ಯ ಡಿಟಿಪಿ ಮಾಡಿಸಿದ್ದರೆ ಈ ಕೆಲಸಕ್ಕೆ ಹಲವು ತಿಂಗಳುಗಳ ಕಾಲ ಶ್ರಮಿಸಿ ೫೦ ಲಕ್ಷ ರೂ. ಖರ್ಚು ಮಾಡಬೇಕಿತ್ತು. ಮೂರು ತಿಂಗಳುಗಳಲ್ಲಿ ಈ ಕರಡು ಸಿದ್ಧವಾಯಿತೆಂದರೆ ನಮ್ಮ ಮುಂದಿನ ಡಿಜಿಟಲೀಕರಣದ ವೇಗ ಎಷ್ಟೆಂದು ಊಹಿಸಬಹುದು. ಹೀಗೆ ಕೋಟಿಗಟ್ಟಲೆ ಪದಗಳ ಕರಡು ತಿದ್ದಿದರೆ ಯಂತ್ರಾನುವಾದದಿಂದ ಹಿಡಿದು ಎಲ್ಲ ತಾಂತ್ರಿಕ ಸಾಧನಗಳನ್ನೂ ಸಲೀಸಾಗಿ, ಹೆಚ್ಚು ನಿಖರ ಫಲಿತಾಂಶ ಸಿಗುವಂತೆ ರೂಪಿಸಬಹುದು.
ಪಿಡಿಎಫ್ ಮತ್ತು ಪಠ್ಯದ ಪುಸ್ತಕಗಳು : ಅನುಕೂಲ ಮತ್ತು ಅನಾನುಕೂಲ
ಡಿಜಿಟಲ್ ಸ್ವರೂಪದಲ್ಲಿ ಗ್ರಂಥ ಸಂಪಾದನೆ ಎಂದ ಕೂಡಲೇ ಎಲ್ಲರಿಗೂ ಮೊದಲು ನೆನಪಾಗುವುದು ಮತ್ತು ಸುಲಭವಾಗಿ ಬಳಕೆಗೆ ಸಿಗುವುದು ಪಿಡಿಎಫ್ (ಪೋರ್ಟಬಲ್ ಡಾಕ್ಯುಮೆಂಟ್ ಫಾರ್ಮಾಟ್) ಮಾತ್ರ. ಭಾರತೀಯ ಭಾಷೆಗಳಿಗೆ ಅತ್ಯಂತ ನಿಖರವಾದ ಓಸಿಆರ್ ಸಿಗುವವರೆಗೂ ಪಿಡಿಎಫ್ ಒಂದು ರೀತಿಯಲ್ಲಿ ಅಪಾಯಕಾರಿಯೇ ಆಗುತ್ತದೆ. ಏಕೆಂದರೆ ಇವುಗಳಲ್ಲಿ ಭಾರತೀಯ ಪಠ್ಯಗಳನ್ನು ಹುಡುಕಲು ಬರುವುದಿಲ್ಲ. ಇತ್ತೀಚೆಗಷ್ಟೆ ಆರ್ಕೈವ್ ಅಭಿಯಾನಿ ಕಾರ್ಲ್ ಮಲಮುಡ್ ಕನ್ನಡ ಪುಸ್ತಕದ ಪುಟದ ಮೇಲೆ ಕನ್ನಡ ಓಸಿಆರ್ ಪದರವನ್ನು ಹಾಸುವ ಮೂಲಕ ಹೊಸ ಯತ್ನ ಮಾಡಿದ್ದಾರೆ. ಹೀಗೆ ಮಾಡಿರುವುದರಿಂದ ಪಿಡಿಎಫ್ ಪುಸ್ತಕಗಳ ಒಳಗೆ ಇರುವ ಕನ್ನಡ ಪದಗಳನ್ನು ಹುಡುಕಬಹುದು ಎಂಬ ಆಶಯ ಹೊಂದಲಾಗಿದೆ. ಇದು ಈಗಿನ್ನೂ ಆರಂಭವಾದ ಯತ್ನ. ಯಶಸ್ಸಿನ ದಾರಿ ಇನ್ನೂ ದೂರ ಇದೆ.
ಮುಕ್ತ ಜ್ಞಾನ ತಾಣಗಳು ಮತ್ತು ಪಾವತಿಸುವ ತಾಣಗಳು
ಗ್ರಂಥ ಸಂಪಾದನೆಯ ನಂತರದ ಹೆಜ್ಜೆಯೇ ಗ್ರಂಥಗಳನ್ನು ಸಾರ್ವಜನಿಕ ಬಳಕೆಗೆ ಮುಕ್ತವಾಗಿಡುವುದು. ಇಲ್ಲಿ ೭೦ರ ದಶಕದಿಂದಲೇ ಆರಂಭವಾದ ಪ್ರಾಜೆಕ್ಟ್ ಗುಟೆನ್‌ಬರ್ಗ್ (https://www.gutenberg.org/) ಎಂಬ ಐತಿಹಾಸಿಕ ಯೋಜನೆಯನ್ನು ಸ್ಮರಿಸಿಕೊಳ್ಳಲೇಬೇಕಿದೆ. ಹದಿನೈದು ವರ್ಷಗಳ ಹಿಂದೆಯೇ ನಾನು ಅವರಿಗೆ ಒಂದು ಈ ಮೈಲ್ ಕಳಿಸಿದಾಗ, ಅವರ ಯೋಜನೆಯ ಸ್ವಯಂಸೇವಾ ಕಾರ್ಯಕರ್ತರೊಬ್ಬರು ಎರಡು ಸಿಡಿಗಳಲ್ಲಿ ಎಲ್ಲವನ್ನೂ ಅಡಕಗೊಳಿಸಿ ನನಗೆ ಅಂಚೆ ಮೂಲಕ ಕಳಿಸಿದ್ದರು. ಈಗ ಈ ಜಾಲತಾಣವು ೫೭ ಸಾವಿರ ಪಠ್ಯಗಳನ್ನು ಹೊಂದಿದೆ. ಈಗಲೂ ಈ ಸಂಸ್ಥೆಯು ಹಕ್ಕುಸ್ವಾಮ್ಯದ ಸಂಗತಿಗಳನ್ನು ಆದಷ್ಟೂ ಚೆನ್ನಾಗಿ ನಿರ್ವಹಿಸುತ್ತಿದೆ ಎಂಬುದು ಗಮನಾರ್ಹ.
ಗುಟೆನ್‌ಬರ್ಗ್ ಯೋಜನೆಯನ್ನು ರೂಪಿಸಿದ ಮೈಕೇಲ್ ಎಸ್ ಹಾರ್ಟ್ ೧೯೭೧ರಿಂದ ೧೯೮೭ರ ವರೆಗೆ ೩೧೩ ಗ್ರಂಥಗಳನ್ನು ಸ್ವತಃ ಅಕ್ಷರ ಜೋಡಿಸಿ ಸಾರ್ವಜನಿಕರಿಗೆ ನೀಡಿದರು ಎಂಬ ಇತಿಹಾಸವು ನಮಗೆಲ್ಲ ಪ್ರೇರಣೆ ನೀಡಬೇಕಿದೆ. ಆಮೇಲೆ ಸಮುದಾಯದ ಬೆಂಬಲದಿಂದ ಅವರು ತಮ್ಮ ಪಠ್ಯ ಸಂಪಾದನೆಯ ವೇಗ ಹೆಚ್ಚಿಸಿದರು. ಇತ್ತೀಚೆಗೆ ನಾನು ಜಾನಪದ ಸಾಹಿತ್ಯ ಸಂಗ್ರಹಕಾರ ದಿ. ಎಲ್ ಆರ್ ಹೆಗಡೆಯವರ ಅಪ್ರಕಟಿತ ಸಂಗ್ರಹದ ಅಕ್ಷರ ಜೋಡಣೆಗೆ ಸಮಾಜತಾಣದ ಮಿತ್ರರ ನೆರವು ಕೇಳಿದ್ದೂ ಇಂತಹ ಸಮುದಾಯ ಭಾಗಿತ್ವಕ್ಕಾಗಿಯೇ. ಪರಂಪರೆಯ ಜನಪದವನ್ನು ಉಳಿಸಲು ಡಿಜಿಟಲ್ ಜನಪದವು ಮುಂದಾಗಿ ಇದೀಗ ಹತ್ತು ಸಂಗ್ರಹಗಳು ಪ್ರಕಟಣೆಯ ವಿವಿಧ ಹಂತಗಳಲ್ಲಿವೆ. ಇವೆಲ್ಲವನ್ನೂ ಈ ವರ್ಷದೊಳಗೆ (೨೦೧೯) ಮುಕ್ತವಾಗಿ ನೀಡಲಾಗುವುದು.
ಭಾರತವಾಣಿಯ ಉಪಯುಕ್ತ ಜಾಲತಾಣಗಳು (http://bharatavani.in/useful-links/) ಎಂಬ ಪುಟದಲ್ಲಿ ಈ ಬಗೆಯ ಮುಕ್ತ ಜ್ಞಾನವನ್ನು ನೀಡುವ ಭಾರತೀಯ ಜಾಲತಾಣಗಳ ಪಟ್ಟಿಯನ್ನು ಸಂಗ್ರಹಿಸಿ ನೀಡಲಾಗುತ್ತಿದೆ.
ಮುಂದಿನ ಹಾದಿ?
- ಡಿಜಿಟಲ್ ಜಗತ್ತು ಮತ್ತು ಸಂಶೋಧನೆ – ಇವುಗಳ ನಡುವೆ ಸಂಬಂಧ ಗಟ್ಟಿಯಾಗಬೇಕು. ಡಿಜಿಟಲ್ ಜಗತ್ತಿನಲ್ಲಿ ಪ್ರಾಚೀನ ಗ್ರಂಥಗಳು ಪೂರ್ಣ ಪ್ರಮಾಣದಲ್ಲಿ ದಕ್ಕಬೇಕು. ಶಾಸ್ತ್ರೀಯ ಭಾಷೆಗಳ ಅಧ್ಯಯನದಲ್ಲಿ ತೊಡಗಿರುವವರು ಪರಂಪರೆಯ ಮೇಲಿನ ಗೌರವವನ್ನು ಬೆಳೆಸಿಕೊಂಡು ಮತ್ತು ಅಧ್ಯಯನಶೀಲತೆಯನ್ನು ಉಳಿಸಿಕೊಳ್ಳಬೇಕು. ಇಲ್ಲವಾದರೆ ಇಂತಹವರು ಅಲ್ಪಸಂಖ್ಯಾತರಾಗುವ ಭಯ ಇದ್ದೇ ಇದೆ.
- ಗ್ರಂಥ ಸಂಪಾದನೆಯ ಹೆಜ್ಜೆಗಳು: ಮೊದಲು ಪುಸ್ತಕಗಳನ್ನು, ಹಸ್ತಪ್ರತಿಗಳನ್ನು, ತಾಳೆಗರಿಗಳನ್ನು ಸಂಗ್ರಹಿಸಬೇಕು ಎಂಬುದು ಎಲ್ಲರಿಗೂ ತಿಳಿದಿರುವ ಅಂಶ. ಇವುಗಳು ಹಾಳಾಗದಂತೆ ಸಂರಕ್ಷಿಸಬೇಕಿದೆ. ಉಡುಪಿಯ ಪ್ರಾದೇಶಿಕ ಸಂಶೋಧನಾ ಕೇಂದ್ರವು ಕಳೆದ ೩೦ ವರ್ಷಗಳಿಂದ ತನ್ನ ಎಲ್ಲ ಆಡಿಯ ವಿಡಿಯೋ ಸಂಗ್ರಹಗಳನ್ನು ಸಂರಕ್ಷಿಸಿ ಇಟ್ಟುಕೊಂಡು ಬಂದ ಮಾದರಿಯನ್ನು ಈಗಿನ ದಾಖಲೀಕರಣ ಸಂಸ್ಥೆಗಳು ಅನುಸರಿಸಬೇಕಿದೆ. ಅದಿಲ್ಲವಾದರೆ ಲಭ್ಯ ಸಂಗ್ರಹಗಳೂ ನಾಶವಾಗುವ ಸಾಧ್ಯತೆ ಇದೆ.
- ಇದಾದ ನಂತರ ಈ ಸಂಗ್ರಹಗಳನ್ನು ಪಿಡಿಎಫ್ ಮತ್ತು ಬಹುಫಾರ್ಮಾಟ್ ರೂಪದಲ್ಲಿ ಸಂಗ್ರಹಿಸಬೇಕು. ಇದನ್ನು ಮೊದಲ ಹಂತದ ಡಿಜಿಟಲ್ ಗ್ರಂಥ ಸಂಪಾದನೆ ಎಂದು ಕರೆಯಬಹುದು.
- ಎರಡನೆಯ ಹಂತದ ಡಿಜಿಟಲೀಕರಣವೇ ತುಂಬಾ ಮುಖ್ಯ. ಇದು ಚಿತ್ರದ ಪುಟಗಳನ್ನು ಪಠ್ಯವಾಗಿ ಪರಿವರ್ತಿಸುವ ಹಂತ. ಹೀಗೆ ಸಂಗ್ರಹಿತ ಗ್ರಂಥಗಳನ್ನು ಪಠ್ಯ ಡಿಜಿಟಲೀಕರಣ ಮಾಡುವ ಮೂಲಕ ಬಹುದೊಡ್ಡ ಗ್ರಂಥ ಸಂಚಯವನ್ನು ರೂಪಿಸಬಹುದು. ಇದು ಸಾರ್ವಜನಿಕವಾಗಿ ಜ್ಞಾನದ ರೂಪದಲ್ಲೂ, ಸಂಶೋಧಕರಿಗೆ ಆಕರ ದತ್ತ ಸಂಚಯ ರೂಪದಲ್ಲೂ (ಕಾರ್ಪಸ್) ದೊರಕಿದರೆ ಮುಂದಿನ ದಿನಗಳು ಆಶಾದಾಯಕವಾಗಲಿವೆ. ಈ ಹಿನ್ನೆಲೆಯಲ್ಲಿ ಕಣಜ ಜಾಲತಾಣದ ಪಠ್ಯಗಳು, ಭಾರತವಾಣಿ, ಸಂಚಯ, ವಿಕಿಪೀಡಿಯ ಮುಂತಾದ ಜಾಲತಾಣಗಳು ರೂಪಿಸಿ ಪ್ರಕಟಿಸಿದ ಪಠ್ಯಗಳು ಪ್ರಮುಖ ಪಾತ್ರ ವಹಿಸುತ್ತವೆ. ಯುನಿಕೋಡ್ ಇಲ್ಲದ ದಿನಗಳಲ್ಲೇ ಗುಟೆನ್‌ಬರ್ಗ್ ಯೋಜನೆಯು ಪಠ್ಯರೂಪಕ್ಕೇ ಅಂಟಿಕೊಂಡಿದ್ದರ ಮಹತ್ವ ಈಗ, ೪೮ ವರ್ಷಗಳ ನಂತರ ಗೊತ್ತಾಗುತ್ತಿದೆ.
- ಪದಗಳ ಅರ್ಥ ನೀಡುವ ಗ್ರಂಥಗಳನ್ನು ಪಠ್ಯರೂಪದಲ್ಲಿ ಪ್ರಕಟಿಸುವ ಭಾರತವಾಣಿ ಯೋಜನೆಯು ದೇಶದಲ್ಲೇ ವಿನೂತನವಾಗಿದೆ. ಈಗ ೧೫೧ಕ್ಕೂ ಹೆಚ್ಚು ನಿಘಂಟುಗಳು ಭಾರತವಾಣಿ ಆಪ್‌ನಲ್ಲಿ ಪಠ್ಯರೂಪದ ಹುಡುಕಾಟಕ್ಕೆ ಸಿಗುತ್ತಿವೆ. ಇಂತಹ ಕೃತಿಗಳಿಂದ ಪದಸಂಚಯವನ್ನು ರೂಪಿಸಿದಾಗ ಮುಂದಿನ ದಿನಗಳಲ್ಲಿ ಅನುವಾದ ತಂತ್ರಾಂಶ, ಬುಕ್‌ರೀಡರ್, ದೇಸೀಕರಣ ಮುಂತಾದ ಕೆಲಸಗಳನ್ನು ಸುಲಭವಾಗಿ ನಿರ್ವಹಿಸಬಹುದು.
- ನಮ್ಮ ಪ್ರೌಢಶಾಲೆ, ಪದವಿ ಪಠ್ಯಕ್ರಮದಲ್ಲಿ ಕನ್ನಡ ಗ್ರಂಥಗಳ ಓದಿನ ಕುರಿತು ಜಾಗೃತಿ, ಅವುಗಳು ಆನ್‌ಲೈನ್‌ನಲ್ಲಿ ಸಿಗುತ್ತಿರುವ ಬಗ್ಗೆ ಮಾಹಿತಿ, ಅವುಗಳನ್ನು ಪ್ರಯೋಗಾತ್ಮಕವಾಗಿ ಬಳಸುವುದು – ಈ ಚಟುವಟಿಕೆಗಳ ಮೂಲಕ ಮೊದಲ ವರ್ಷಗಳಲ್ಲೇ ಮಕ್ಕಳು ಇಂತಹ ಓದಿನ ಬಗ್ಗೆ ಆಸಕ್ತಿ ವಹಿಸುವಂತೆ ಮಾಡಬೇಕಾದ್ದು ಈಗಿನ ಜರೂರು. ಹಠಾತ್ತಾಗಿ ಯಾರೂ ಸಂಶೋಧನೆ ಮಾಡುವುದಿಲ್ಲ. ಸಂಶೋಧಕ ಪ್ರವೃತ್ತಿಯೇ ಕಡಿಮೆಯಾಗುತ್ತಿರುವಾಗ, ಮುಕ್ತ ವೇದಿಕೆಗಳಲ್ಲಿ ಅಪಾರ ಪ್ರಮಾಣದ ಜ್ಞಾನ ಇದೆ ಎಂಬ ಪ್ರಚಾರವನ್ನು ಕೈಗೊಂಡು ಸಂಶೋಧನಾ ಅಭಿಯಾನವನ್ನು ಉಳಿಸಿ ಬೆಳೆಸುವುದು ನಮ್ಮ ಕರ್ತವ್ಯ. ನಮ್ಮ ಪರಂಪರೆಯ ಅರಿವು ಮೂಡಿಸುವುದು; ತಾಳೆ ಓಲೆಗಳ ಮೇಲೆ ಅರಿವು ಮೂಡಬೇಕಾದುದು ಬಾಲ್ಯದಿಂದಲೇ ಹೊರತು ಕಾಲೇಜಿಗೆ ಹೋದಾಗ ಅಲ್ಲ ಎಂಬುದು ನನ್ನ ಸ್ಪಷ್ಟ ಅಭಿಮತ.
- ಗ್ರಂಥ ಸಂಪಾದನೆ ವಿಷಯದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ಸೂಕ್ತ ಮಿಶನ್ ಮೋಡ್ ಕಾರ್ಯಾಚರಣೆ ಆಗಬೇಕಿದೆ. ಈಗಿರುವ ಎಲ್ಲಾ ಗ್ರಂಥ ಸಂಪಾದನಾ ಕಾರ್ಯಗಳೂ ಒಂದಲ್ಲ ಒಂದು ಸಮಸ್ಯೆಯಿಂದ ಬಳಲುತ್ತಿವೆ. ಇವನ್ನೆಲ್ಲ ಒಂದು ಕೇಂದ್ರೀಕೃತ ನಿರ್ವಹಣಾ ಜಾಲದೊಳಗೆ ತಂದು ಕಾಲಮಿತಿಯಲ್ಲಿ ಗ್ರಂಥ ಸಂಪಾದನೆ ಮಾಡಬೇಕಿದೆ. ಇದಕ್ಕೆ ಆಡಳಿತಾತ್ಮಕ ದೃಢನಿಶ್ಚಯವೊಂದೇ ಅಗತ್ಯವಾಗಿದೆ.
- ಇನ್ನು ಸಾರ್ವಜನಿಕ ನಿಧಿಯಿಂದ, ಸರ್ಕಾರಗಳ ಬೆಂಬಲದಿಂದ ಪ್ರಕಟಣೆ ಮಾಡುವಾಗ ಅದರ ಲಾಭವನ್ನಷ್ಟೇ ನೋಡದೆ ಮುಕ್ತಜ್ಞಾನದ ಭಾಗವಾಗಿ ಪರಿಗಣಿಸುವ ವರ್ತನೆಯನ್ನು ಸರ್ಕಾರಗಳು ತೋರಬೇಕಿದೆ. ಪ್ರಕಟಣೆಯ ಹಂತದಲ್ಲೇ ಅವುಗಳನ್ನು ಮುಕ್ತಜ್ಞಾನ ಎಂದು ಘೋಷಿಸಬೇಕು ಎಂಬುದು ನನ್ನ ಅಭಿಪ್ರಾಯ. ಸಾರ್ವಜನಿಕ ಹಣದ ನೆರವಿನಿಂದ ಪ್ರಕಟವಾದ ಗ್ರಂಥಗಳು ಸಾರ್ವಜನಿಕರಿಗೆ ಮುಕ್ತವಾಗಿ ಸಿಗಲೇಬೇಕಿದೆ. ಸಾರ್ವಜನಿಕ ಹಣದಿಂದ ಕಟ್ಟುವ ರಸ್ತೆ, ಸೇತುವೆಗಳ ರೀತಿಯಲ್ಲೇ ಗ್ರಂಥಗಳೂ ಎಲ್ಲ ಜನತೆಗೂ ಸಮಾನವಾಗಿ ಸಿಗಬೇಕಿದೆ ಎಂದು ನಿರೀಕ್ಷಿಸುವುದರಲ್ಲಿ ತಪ್ಪೇನೂ ಕಾಣುತ್ತಿಲ್ಲ.
ಕನ್ನಡವೂ ಸೇರಿದಂತೆ ಭಾರತೀಯ ಭಾಷೆಗಳಲ್ಲಿ ಗ್ರಂಥ ಸಂಪಾದನೆಯ ಸುಲಭ ತಂತ್ರಜ್ಞಾನವನ್ನು ರೂಪಿಸುವುದು ಒಂದು ಸಂಘಟಿತ ಕಾರ್ಯವಾಗಬೇಕಿದೆ. ಪಠ್ಯರೂಪದಲ್ಲಿ ಸಂಗ್ರಹವಾಗಿರುವುದನ್ನು ತಪ್ಪಿಲ್ಲದಂತೆ ನೋಡಿಕೊಂಡು ನಮ್ಮ ಭಾಷೆಯ ಪರಂಪರೆಯನ್ನು ಉಳಿಸಿಕೊಳ್ಳಬೇಕಿದೆ. ಗ್ರಂಥಗಳ ವಿಷಯಗಳಿಂದ ಹಿಡಿದು, ಗ್ರಂಥಸೂಚಿಯವರೆಗೆ ಎಲ್ಲ ಬಗೆಯ ಸಾಧನಗಳನ್ನು ತಂತ್ರಜ್ಞಾನದ ಮೂಲಕವೇ ನಿರ್ವಹಿಸಿದರೆ ಮಾತ್ರವೇ ನಮ್ಮ ಭಾಷಾ ರಕ್ಷಣೆಯ ಕೆಲಸವು ನೈಜವಾಗುತ್ತದೆ.
(ದಿನಾಂಕ ೭ ಆಗಸ್ಟ್ ೨೦೧೯ರಂದು ಮಂಗಳೂರಿನಲ್ಲಿ ನಡೆದ “ಕನ್ನಡ ಗ್ರಂಥ ಸಂಪಾದನೆ: ಹೊಸ ಚಿಂತನೆಗಳು” ವಿಚಾರ ಸಂಕಿರಣದಲ್ಲಿ ಮಂಡಿಸಿದ ಪ್ರಬಂಧ)