ಬಗೆಬಗೆಯ ಯುನಿಕೋಡ್ ಅಕ್ಷರಗಳಲ್ಲಿ ಮುಕ್ತ ಮತ್ತು ಉಚಿತ ಡಿಟಿಪಿ ತಂತ್ರಾಂಶಗಳನ್ನು ಬಳಸಿ ಯಾವುದೇ ಹಿಂಜರಿಕೆಯಿಲ್ಲದೆ ಕನ್ನಡದಲ್ಲೇ ಪುಟವಿನ್ಯಾಸ ಮಾಡಬಹುದು ಎಂಬ ಹೊಸ ಬೆಳವಣಿಗೆ ನಮಗೆಲ್ಲರಿಗೂ ಸಂತೋಷ ತರಬೇಕಾದ ವಿಚಾರವಾಗಿದೆ. ಸ್ಕ್ರೈಬಸ್ ಎಂಬ ಮುಕ್ತ ಡಿಟಿಪಿ ವಿನ್ಯಾಸ ತಂತ್ರಾಂಶದಲ್ಲಿ ಕನ್ನಡದ ಯುನಿಕೋಡ್ ಅಕ್ಷರಗಳನ್ನು ಬಳಸಿ, ವಿನ್ಯಾಸ ಮಾಡಿದ ನನ್ನದೇ ಅನುಭವದ ಆಧಾರದಲ್ಲಿ ಹೇಳುವುದಾದರೆ: ಇನ್ನುಮುಂದೆ ಪೇಜ್‌ಮೇಕರ್‌ನಂತಹ ಕಾಲಬಾಹಿರ ತಂತ್ರಾಂಶವೂ ಬೇಡ;ಇನ್‌ಡಿಸೈನ್‌ನಂತಹ ದುಬಾರಿ ವಿನ್ಯಾಸ ಸಾಧನವೂ ಬೇಡ ಎಂದು ನಾವು ನಿರ್ಧರಿಸಬಹುದಾಗಿದೆ. ಸ್ಕ್ರೈಬಸ್ ತಂತ್ರಾಂಶವು ನಮ್ಮನ್ನು ಖಾಸಗಿ ಸಂಸ್ಥೆಗಳ ಲೈಸೆನ್ಸ್ ರಾಜ್ಯದ ಗುಲಾಮಗಿರಿಯಿಂದ ಬಿಡುಗಡೆಗೊಳಿಸಿದೆ. ಈ ಉತ್ತೇಜನಕಾರಿ ಬೆಳವಣಿಗೆಯು ಕನ್ನಡ ತಂತ್ರಾಂಶಗಳ ಸಂಶೋಧನೆಗಳ ಮುಂದಿನ ಹಾದಿಗೂ ಹಲವು ಮಹತ್ವದ ಸಂದೇಶಗಳನ್ನು ನೀಡಿದೆ.
ಆಸ್ಕಿ ಫಾಂಟ್ ಯುಕ್ತ ಹಳೆ ತಂತ್ರಾಂಶ ಗೊಂಚಲು ಬಿಸಾಕುವ ಸಮಯವಿದು : ಸ್ಕ್ರೈಬಸ್‌ನಲ್ಲಿ ಯುನಿಕೋಡ್ ಅಕ್ಷರಗಳನ್ನು ಸಲೀಸಾಗಿ, ಹಳೆಯ ಫಾಂಟ್‌ಗಳಂತೆಯೇ ಬಳಸಬಹುದು. ಹಳೆಯ ಫಾಂಟ್‌ಗಳನ್ನು ಬಳಸಿದರೆ ಇಲ್ಲಿ ಹೈಫೆನೇಶನ್ ಇಲ್ಲ. ಆದ್ದರಿಂದ ಯುನಿಕೋಡ್‌ನ್ನು ಬಳಸುವುದೇ ಸೂಕ್ತ. ಇನ್ನಾದರೂ ನಾವು ಆಸ್ಕಿ ಫಾಂಟ್‌ಗಳ ಬಳಕೆಯನ್ನು ತಗ್ಗಿಸುವ ಅಭಿಯಾನ ಮಾಡಬೇಕಿದೆ. ಇಲ್ಲದ ಸಬೂಬುಗಳನ್ನು ಹೇಳುತ್ತ ಅದೇ ಹಳೆಯ ಫಾಂಟ್ (ಆಸ್ಕಿ), ಹಳೆಯ ತಂತ್ರಾಂಶ (ಪೇಜ್‌ಮೇಕರ್) ಮತ್ತು ಪ್ರಾಚೀನ ಆಪರೇಟಿಂಗ್ ವ್ಯವಸ್ಥೆಗೆ(ವಿಂಡೋಸ್ ಎಕ್ಸ್‌ಪಿ) ಜೋತು ಬೀಳುವ ಅನಿವಾರ್ಯತೆಯಿಂದ ಹೊರಬರಲು ಇದು ಸಕಾಲ . ಸರ್ಕಾರಿ ಕಚೇರಿಗಳಲ್ಲಿ, ಖಾಸಗಿ ಪ್ರಕಾಶಕರಲ್ಲಿ ಈಗಲೂ ವಿಂಡೋಸ್ ಎಕ್ಸ್ ಪಿ ಆಪರೇಟಿಂಗ್ ವ್ಯವಸ್ಥೆಯೇ ಇರುವುದು ಇನ್ನೊಂದು ದುರಂತ. ವಿಂಡೋಸ್ ೧೦ಕ್ಕೆ ಮೇಲ್ದರ್ಜೆಗೇರಿಸಿಕೊಳ್ಳಲು ಇದ್ದ ಉಚಿತ ಅವಕಾಶವನ್ನೂ ನಾವು ಕಳೆದುಕೊಂಡೆವು. ಕನ್ನಡ ಗಣಕ ಪರಿಷತ್ ಟ್ರಸ್ಟ್ ಈಗ ನುಡಿ ೬.೦ ಆವೃತ್ತಿಯನ್ನೂ ತರಲಿದೆ ಎಂಬ ಸುದ್ದಿ ಇದೆ; ಅದರಲ್ಲೂ ಆಸ್ಕಿ ಫಾಂಟ್‌ಗಳು ಇರಲಿವೆ. ಕರ್ನಾಟಕ ಸರ್ಕಾರವು ಇನ್ನುಮುಂದೆ ಕೇವಲ ಯುನಿಕೋಡ್, ಆಸ್ಕಿ ಇಲ್ಲ’ ಎಂಬ ನೀತಿ ಅನುಸರಿಸಿ ಯಾವುದೇ ಆಸ್ಕಿ ತಂತ್ರಾಂಶ ಅಭಿವೃದ್ಧಿಗೆ ಬೆಂಬಲ ಕೊಡಬಾರದು. ಯುನಿಕೋಡ್ ಅಕ್ಷರಗಳನ್ನೇ ಬಳಸಿ ಎಂದು ಸರ್ಕಾರವು ಅಧಿಸೂಚನೆ ಹೊರಡಿಸಿದ ನಾಲ್ಕು ವರ್ಷಗಳ ನಂತರವೂ ಈ ಒತ್ತಾಯ ಮಾಡಬೇಕಿರುವುದು ಕನ್ನಡಿಗರ ದುರಂತ. ದತ್ತಾಂಶ ನಿರ್ವಹಣೆ, ಪದ ಹುಡುಕಾಟ, ಅಕಾರಾದಿ ವರ್ಗೀಕರಣ – ಎಲ್ಲವೂ ಯುನಿಕೋಡ್ ಮೂಲಕ ನಡೆದರೆ ವೃತ್ತಿದಕ್ಷತೆ ಹೆಚ್ಚುತ್ತದೆ. ಯುನಿಕೋಡ್ ವಿಶ್ವಮಾನ್ಯ ಮಾನದಂಡವಾಗಿರುವುದರಿಂದ ಇನ್ನೂ ಹಲವು ಅನುಕೂಲಗಳು ನಮಗೆ ದಕ್ಕುತ್ತವೆ:
- ಅನುವಾದ ತಂತ್ರಾಂಶ : ಯುನಿಕೋಡ್ ದತ್ತಸಂಚಯದಿಂದಲೇ ಹೈದರಾಬಾದಿನ ಪ್ರೊ|| ಕವಿ ನಾರಾಯಣಮೂರ್ತಿಯವರು ಕನ್ನಡದಿಂದ ತೆಲುಗಿಗೆ ಸೆಕೆಂಡಿಗೆ ಒಂದು ಲಕ್ಷ ವಾಕ್ಯಗಳನ್ನು ನಿರ್ಲಕ್ಷಿಸಲಾಗದ ಗುಣಮಟ್ಟದಲ್ಲಿ ಅನುವಾದಿಸುವ ತಂತ್ರಾಂಶವನ್ನು ರೂಪಿಸಿರುವುದನ್ನು ನಾವು ಮರೆಯಕೂಡದು. ಈ ತಂತ್ರಾಂಶದ ದಕ್ಷತೆಯನ್ನು ನಾನು ಸ್ವತಃ ಪರಿಶೀಲಿಸಿ ಖಚಿತಪಡಿಸಿಕೊಂಡಿದ್ದೇನೆ.
- ಲಿಪ್ಯಂತರಣ : ಲಿಪಿ ಪರಿವರ್ತನೆಯ ಈ ಸರಳ ತಂತ್ರಜ್ಞಾನವನ್ನು ಭಾರತವಾಣಿಯ ನಿಘಂಟು ಆಪ್‌ನಲ್ಲಿ ಬಳಸಿರುವುದರಿಂದ ಯಾವುದೇ ಲಿಪಿಯಲ್ಲಿ ಅರ್ಥಗಳನ್ನು ಓದಲು ಸಾಧ್ಯವಾಗಿದೆ. ಲಿಪ್ಯಂತರಣವು ಭಾಷೆಗಳ ನಡುವಣ ಕಂದಕವನ್ನು ಮುಚ್ಚುತ್ತದೆ; ಸಂಶೋಧನೆಗೂ ಸಹಾಯಕ.
- ಬೇಕಾದ ಫಾಂಟ್ ಆಯ್ಕೆ : ಎಲ್ಲರೂ ತಮಗೆ ಬೇಕಾದ ಫಾಂಟ್‌ನ್ನು ಆಯ್ಕೆ ಮಾಡಿಕೊಳ್ಳಬಹುದು; ಹಲವು ಆಸ್ಕಿ ಅಕ್ಷಭಾಗಗಳಿಂದ ನಾವೆಲ್ಲೂ, ಪರಿವರ್ತನೆ, ವೆಕ್ಟರ್ ಗ್ರಾಫಿಕ್ಸ್ – ಹೀಗೆ ಹಲವು ತಂತ್ರಜ್ಞಾನಗಳ ಕೆಲಸವೂ ಸುರಳೀತವಾಗಲಿದೆ.
- ಪಠ್ಯದಿಂದ ಧ್ವನಿಗೆ: ಯುನಿಕೋಡ್‌ನಲ್ಲಿ ಇರುವ ಪಠ್ಯದ ಮೂಲಕ ಧ್ವನಿಗೆ ಪರಿವರ್ತಿಸಬಲ್ಲ ಮುಕ್ತ ತಂತ್ರಾಂಶಗಳ ಮೂಲಕ ಅಂಧರು ಮತ್ತು ಅನಕ್ಷರಸ್ತರಿಗೆ ಹೆಚ್ಚು ಹೆಚ್ಚು ಮಾಹಿತಿಗಳನ್ನು ನೀಡಬಹುದು.
ಬೇಕಾಗಿದೆ, ತಂತ್ರಾಂಶ ಮಾಹಿತಿ ಕನ್ನಡೀಕರಣ (ಲೋಕಲೈಸೇಶನ್): ಉತ್ಸಾಹಿ ಕನ್ನಡಿಗರು ಸಮೂಹಕಾರ್ಯದ ಮೂಲಕ ಸ್ಕ್ರೈಬಸ್ ತಂತ್ರಾಂಶದ ಬಳಕೆಯ ಆದೇಶಗಳನ್ನು (ಮೆನು) ಕನ್ನಡೀಕರಿಸುವ, ಅಲ್ಲಲ್ಲಿ ಇರುವ ಸಣ್ಣಪುಟ್ಟ ಸಮಸ್ಯೆಗಳನ್ನು ಪರಿಹರಿಸುವ ಅಗತ್ಯವಿದೆ. ಇದೇ ತಂತ್ರಾಂಶದ ಮೂಲಕ ಇನ್‌ಡಿಸೈನ್ / ಪೇಜ್‌ಮೇಕರ್ ಕಡತಗಳನ್ನೂ ತೆರೆಯುವಂತೆ ಮಾಡುವ ಪ್ರಯತ್ನ ಮುಂದುವರಿದಿದೆ. ಆದ್ದರಿಂದ ಸದ್ಯದಲ್ಲೇ ಹಳೆಯ ಕಡತಗಳನ್ನೂ ಸ್ಕ್ರೈಬಸ್ ಮೂಲಕವೇ ತೆರೆದು ಬಳಸಬಹುದು. ಈಗ ಲಿಬ್ರೆ ಆಫೀಸ್ ಪದಸಂಸ್ಕರಣ ತಂತ್ರಾಂಶ ಗೊಂಚಲು ಕನ್ನಡ ಮಾಧ್ಯಮದಲ್ಲೂ ಸಿಗುತ್ತದೆ.
ಮುಕ್ತ ಡಿಟಿಪಿ ಮೂಲಕ ಹೊಸ ಸುಧಾರಿತ ವಿನ್ಯಾಸ: ಸ್ಕ್ರೈಬಸ್ ಕೇವಲ ಕನ್ನಡಕ್ಕೆ ಪರಿಹಾರ ಕೊಟ್ಟಿದ್ದಲ್ಲ; ಇನ್‌ಡಿಸೈನ್‌ಗಿಂತ ಶಕ್ತಿಯುತವಾದ ವಿನ್ಯಾಸ ತಂತ್ರಾಂಶವಾಗಿ ಹೊರಹೊಮ್ಮಿದೆ ಎಂಬುದು ಅದನ್ನು ಮೊದಲ ಸಲ ಬಳಸಿದ ನನ್ನ ಅನುಭವ. ಇನ್‌ಡಿಸೈನ್‌ನಲ್ಲಿ ಇಲ್ಲದ ಹಲವು ಸಾಧ್ಯತೆಗಳನ್ನು ಸ್ಕ್ರೈಬಸ್ ನೀಡಿದೆ. ವೃತ್ತಿಪರ ಇನ್‌ಡಿಸೈನ್ ಬಳಕೆದಾರರಿಗೆ ಸ್ಕ್ರೈಬಸ್‌ನ ಸಾಧನಪಟ್ಟಿಗಳನ್ನು (ಟೂಲ್‌ಬಾರ್) ಬಳಸುವುದು ಕೊಂಚ ತೊಡಕಾಗಬಹುದು. ಒಮ್ಮೆ ಅಭ್ಯಾಸವಾದರೆ ಮುಗಿಯಿತು; ಇನ್‌ಡಿಸೈನ್‌ನ್ನೂ ಹೀಗೆಯೇ ತಾನೆ ಕಲಿತಿದ್ದು? ಒಮ್ಮೆ ಸ್ಕ್ರೈಬಸ್‌ನಲ್ಲಿ ಯುನಿಕೋಡ್ ಅಕ್ಷರಗಳಿಂದ ವಿನ್ಯಾಸ ಮಾಡಿದ ಕಡತವನ್ನು ಜಾಲತಾಣಗಳಿಗೆ ವರ್ಗಾಯಿಸುವುದು ತುಂಬಾ ಸಲೀಸು. ಇದರಿಂದಾಗಿ ಆಸ್ಕಿಯಿಂದ ಯುನಿಕೋಡ್‌ಗೆ ಪರಿವರ್ತನೆ ಮಾಡುವ ಕಸರತ್ತಿಗೆ ವಿದಾಯ ಹೇಳಬಹುದು.
ಸ್ಕ್ರೈಬಸ್‌ನ ಬಳಕೆ ಹೆಚ್ಚಾದಂತೆ ಅರೆಕೊರೆಗಳನ್ನು ಸಮುದಾಯವೇ ತಿದ್ದುತ್ತದೆ; ಖಾಸಗಿ ತಯಾರಕರ ಮರ್ಜಿ ಇಲ್ಲಿಲ್ಲ.
ಮುಕ್ತ ತಂತ್ರಾಂಶಗಳ ಗೊಂಚಲನ್ನೇ ಹೊಂದಿ: ಗಮನಿಸಿ, ನೀವು ಪುಟವಿನ್ಯಾಸಕ್ಕಾಗಿ ಸ್ಕ್ರೈಬಸ್ (scribus.net) ಬಳಸುವಿರಾದರೆ, ಈ ಕಿವಿಮಾತನ್ನೂ ಕೇಳಿ: ಫೋಟೋಶಾಪ್ ಬದಲಿಗೆ ‘ಗಿಂಪ್’(gimp.org) ಮತ್ತು ‘ಕ್ರಿಟಾ’ (krita.org) ಬಳಸಿ; `ಕೋರೆಲ್‌ಡ್ರಾ’ ಬದಲಿಗೆ `ಇಂಕ್‌ಸ್ಕೇಪ್’ (inkscape.org) ಬಳಸಿ. ಇವು ಮೂರೂ ಮುಕ್ತ, ಉಚಿತ ತಂತ್ರಾಂಶಗಳು. ನಿಮ್ಮ ಕಚೇರಿ ಕಡತಗಳ ನಿರ್ವಹಣೆಗಾಗಿ `ಲಿಬ್ರೆ ಆಫೀಸ್’ (libreoffice.org) ಬಳಸಿ; ಇದು ಮೈಕ್ರೋಸಾಫ್ಟ್ ಆಫೀಸ್‌ಗಿಂತ ಇಮ್ಮಡಿ ಸೌಲಭ್ಯಗಳನ್ನು ಹೊಂದಿದೆ. ಮೈಕ್ರೋಸಾಫ್ಟ್ ವರ್ಡ್ ಕಡತಗಳನ್ನೂ ಇದರಲ್ಲಿ ತೆರೆದು ಸಂಪಾದಿಸಬಹುದು – ಹೀಗೆ ಹಲವು ತಂತ್ರಾಂಶಗಳು ಹಿಂದೆಂದಿಗಿಂತ ಸುಧಾರಿಸಿವೆ; ಕೊಂಚ ದೇಸಿ ಆಯ್ಕೆಗಳನ್ನೂ ಹೊಂದಿವೆ. ಒಟ್ಟಿನಲ್ಲಿ ಮುಕ್ತ,ಉಚಿತ ತಂತ್ರಾಂಶಗಳಿಂದಲೇ ನಮ್ಮ ದಿನವಹಿ ಕೆಲಸಗಳನ್ನು ನಿರ್ವಹಿಸಬಹುದು. ಕರ್ನಾಟಕ ಸರ್ಕಾರವಂತೂ ಈ ಕೂಡಲೇ ಮೇಲಿನೆಲ್ಲ ತಂತ್ರಾಂಶಗಳನ್ನು ಅಳವಡಿಸಿಕೊಂಡು ಕೋಟಿಗಟ್ಟಲೆ ರೂಪಾಯಿ ಉಳಿತಾಯ ಮಾಡಬಹುದು. ಉಬುಂಟುವಿನಂತಹ ಮುಕ್ತ ಆಪರೇಟಿಂಗ್ ವ್ಯವಸ್ಥೆಯನ್ನು ಬಳಸಿದರಂತೂ ಉಳಿತಾಯದ ಪ್ರಮಾಣ ಹಲವು ಪಟ್ಟು ಹೆಚ್ಚು. ಮೊದಲ ಹಂತವಾಗಿ ವಿಂಡೋಸ್ ಆಪರೇಟಿಂಗ್ ವ್ಯವಸ್ಥೆಯಲ್ಲೇ ಮುಕ್ತ ತಂತ್ರಾಂಶಗಳನ್ನು ಅಳವಡಿಸಿ, ಕಲಿಯುವುದು ಸೂಕ್ತ ಹೆಜ್ಜೆ. ಅದಾದ ಮೇಲೆ ಉಬುಂಟುವಿಗೆ ಬದಲಾಯಿಸಿಕೊಂಡು ಮೈಕ್ರೋಸಾಫ್ಟ್ ಪಾರಮ್ಯಕ್ಕೆ ಕೊನೆ ಕಾಣಿಸಬಹುದಾಗಿದೆ.
ಯುನಿಕೋಡ್ ಫಾಂಟ್ ಅಭಿಯಾನ : ಮೈಕ್ರೋಸಾಫ್ಟ್‌ನ `ತುಂಗಾ’ದಿಂದ ಹಿಡಿದು ಗೂಗಲ್‌ನ `ನೋಟೋ ಸ್ಯಾನ್ಸ್’ವರೆಗೆ ಹಲವು ಒಳ್ಳೆಯ ವಿನ್ಯಾಸದ ಕನ್ನಡ ಫಾಂಟ್‌ಗಳು ಉಚಿತವಾಗಿ ಸಿಗುತ್ತವೆಯೇನೋ ನಿಜ. ಇಂಥ ಇನ್ನೂ ಹಲವು ಹೊಸ ಫಾಂಟ್‌ಗಳ ಅಕ್ಷರಭಾಗಗಳಲ್ಲಿ ಕನ್ನಡ ಲಿಪಿಯ ಹಲವು ಕಡ್ಡಾಯ ಶೈಲಿಗಳು, ಸೂತ್ರಗಳು ಲೋಪಗಳಿಂದ ಕೂಡಿವೆ. ಇವನ್ನೆಲ್ಲ ತಿದ್ದುವ ತಾಪತ್ರಯವೂ ಕನ್ನಡಿಗರ ಮೇಲಿದೆ. ಈ ಸಮಸ್ಯೆಗೆ ಪರಿಹಾರವಾಗಿ ಕನ್ನಡ ತಂತ್ರಾಂಶ ತಯಾರಕರಾದ ಸೊನಾಟ (ಪ್ರಜಾ ಫಾಂಟ್), ಮಾಡ್ಯುಲಾರ್ (ಶ್ರೀಲಿಪಿ), ಸೈಬರ್‌ಸ್ಕೇಪ್ (ಆಕೃತಿ), ಕನ್ನಡ ಗಣಕ ಪರಿಷತ್ (ನುಡಿ) ಮುಂತಾದವರು ತಮ್ಮ ಆಸ್ಕಿ ಫಾಂಟ್‌ಗಳನ್ನು ಸಮುದಾಯದ ಹೊಣೆಗಾರಿಕೆಗೆ ಕೊಡಲು ಮುಂದಾದರೆ ಅದಕ್ಕಿಂತ ಒಳ್ಳೆಯ ಕೆಲಸ ಇನ್ನೊಂದಿಲ್ಲ. ಅದಿಲ್ಲದೇ ಹೋದರೆ ಇದ್ದಬದ್ದ ಅರೆಬರೆ ಫಾಂಟ್‌ಗಳನ್ನೇ ಡಿಟಿಪಿಯವರು, ಬ್ಯಾನರ್ ಬರೆಯುವವರು, ಸಿನೆಮಾ ಉಪಶೀರ್ಷಿಕೆಯವರು, ಭಿತ್ತಿಚಿತ್ರಗಳನ್ನು ರೂಪಿಸುವವರು, ಬಹುಭಾಷೆಗಳಲ್ಲಿ ಮಾಹಿತಿ ಕೊಡಬೇಕಾದ ಜಾಲತಾಣಗಳು, ಪೊಟ್ಟಣಗಳಲ್ಲಿ ಉತ್ಪನ್ನದ ಮಾಹಿತಿ ಮುದ್ರಿಸುವವರು – ಎಲ್ಲರೂ ಬಳಸಿ ಕನ್ನಡ ಲಿಪಿಯೇ ಯದ್ವಾತದ್ವಾ ಬದಲಾಗುವ ಅಪಾಯವನ್ನು ನಾವು ಕಡೆಗಣಿಸುವಂತಿಲ್ಲ. ಗೂಗಲ್ ಯಾಂತ್ರಿಕ ಅನುವಾದಕದಿಂದ ಉಂಟಾಗಿರುವ ಅನಾಹುತಗಳನ್ನು ನಾವು ಮರೆಯಬಹುದೇ? ಮುಂದೆ ಗೂಗಲ್ ಸಂಸ್ಥೆ, ಇತರೆ ದೈತ್ಯ ಸಂಸ್ಥೆಗಳು ತಮಗೆ ಬಂದಹಾಗೆ ಕನ್ನಡ ಲಿಪಿಯ ಬದಲಾವಣೆಗೆ ತೊಡಗಿದರೆ, ಸರ್ಕಾರವಾಗಲೀ, ಕನ್ನಡ ತಂತ್ರಾಂಶ ತಯಾರಿಕಾ ಸಂಸ್ಥೆಗಳಾಗಲೀ ಏನೂ ಮಾಡಲಾಗದೆ ಕೈಕಟ್ಟಿ ಕೂತುಕೊಳ್ಳಬೇಕಾಗುತ್ತದೆ. ಈ ಸನ್ನಿವೇಶ ಬರದಂತೆ ನೋಡಿಕೊಳ್ಳಬೇಕಿದೆ.
ಸಮಿತಿಯಲ್ಲ, ಸಮುದಾಯ ಆಧಾರಿತ ‘ಡಿಜಿಟಲ್ ಜಗಲಿ ‘ : ಕೆಲವು ತಜ್ಞರು ಇರುವ ಸಮಿತಿಗಳನ್ನು ಮಾಡಿ, ಅದರ ಶಿಫಾರಸಿನ ಮೇಲೆ ಎಲ್ಲ ತಂತ್ರಾಂಶಗಳನ್ನೂ ಯಾವ ನ್ಯೂನತೆಯೂ ಇಲ್ಲದೆ ರೂಪಿಸಬಹುದು ಎಂಬ `ಬಾವಿಕಪ್ಪೆ ಚಿಂತನೆ’ಯೇ ಕರ್ನಾಟಕ ಸರ್ಕಾರವು ಕಳಪೆ ಗುಣಮಟ್ಟದ ಯುನಿಕೋಡ್ ಫಾಂಟ್, ಪರಿವರ್ತಕ, ಬ್ರೈಲ್ ಅಕ್ಷರ ಜೋಡಣೆ, ಮೊಬೈಲ್ ಕೀಲಿಮಣೆಗಳನ್ನು ತಯಾರಿಸಿ ಬಿಡುಗಡೆ ಮಾಡಲು ಕಾರಣವಾಯಿತು. ಹೊರಗಣ ವಿಶಾಲ ಐಟಿ ಸಮುದಾಯದಲ್ಲಿ ಇರುವ ಕನ್ನಡ ತಂತ್ರಾಂಶ ಕುರಿತ ಸ್ವಯಂಸೇವಾ ಕಾರ್ಯಕರ್ತರ ಸೇವೆಯನ್ನು ಪಡೆಯುವುದು ಸರ್ಕಾರದ ಆದ್ಯತೆಯಾಗಬೇಕು. ಸರ್ಕಾರವು ಸಂಸ್ಥೆಗಳು, ಸಮುದಾಯವನ್ನು ಕರೆದು ಮುಕ್ತ ತಂತ್ರಾಂಶ ಅಭಿವೃದ್ಧಿಯ ಒಂದು ಸಮುದಾಯ ಆಧಾರಿತ `ಡಿಜಿಟಲ್ ಜಗಲಿ’ ಯನ್ನು ರೂಪಿಸುವುದಕ್ಕೆ ಯಾವ ಅಡೆತಡೆಯೂ ಇಲ್ಲ; ಕನ್ನಡದ ಕುರಿತು ರಾಜಕೀಯ – ಆಡಳಿತಾತ್ಮಕ ದೃಢತೆಯೊಂದೇ ಇಲ್ಲಿ ಬಾಕಿ! ಕನ್ನಡ ತಂತ್ರಾಂಶದ ಬಗ್ಗೆ ಆಸಕ್ತಿ ಇರುವ ಯಾರಾದರೂ ಈ ಜಗಲಿಗೆ ಬಂದು (ಆನ್‌ಲೈನ್ / ಭೌತಿಕವಾಗಿ) ಕೂತು ಮಾಹಿತಿ ಹಂಚಿಕೆ ಮಾಡಿಕೊಳ್ಳುವ ವಾತಾವರಣ ನಿರ್ಮಿಸಬೇಕಿದೆ. ನಾಲ್ಕು ಗೋಡೆಗಳ ನಡುವೆ ತೆಗೆದುಕೊಳ್ಳುವ ನಿರ್ಣಯವನ್ನು ಈ ಸಮುದಾಯಮುಖಿ `ಡಿಜಿಟಲ್ ಜಗಲಿ ’ಯಲ್ಲಿ ಚರ್ಚಿಸಬೇಕಿದೆ.
ಕನ್ನಡ ಕಲಿಕೆಗೆ ಆಧುನಿಕ ಮಾಧ್ಯಮ ಸಾಧನಗಳನ್ನು ಬಳಸಿ ಆನ್‌ಲೈನ್ ತರಗತಿಗಳನ್ನು ನಡೆಸುವುದು, ರಾಜ್ಯ ಸರ್ಕಾರಗಳ ಎಲ್ಲ ಜಾಲತಾಣಗಳಲ್ಲೂ ಏಕರೂಪದ ಯುನಿಕೋಡ್ ಆಧಾರಿತ ಕನ್ನಡ ಪುಟಗಳನ್ನೇ ಸಜ್ಜುಗೊಳಿಸುವುದು, ಕನ್ನಡ ಕುರಿತ ಬಗೆಬಗೆಯ ನಿಘಂಟುಗಳನ್ನು ಕ್ರೋಡೀಕರಿಸಿ ದತ್ತಸಂಚಯವಾಗಿಸಿ ಕನ್ನಡ, ಇಂಗ್ಲಿಶ್ ಓದುಗರಿಗೆ ಅರ್ಥ ಒದಗಿಸುವುದು, ಇಂಥ ಹತ್ತು ಹಲವು ಕನ್ನಡ ತಂತ್ರಜ್ಞಾನ ಕೆಲಸಗಳು ಈಗಲೂ ಬಾಕಿ ಉಳಿದಿವೆ.
ಹಳೆ ತಂತ್ರಾಂಶಗಳ ಕತ್ತಲಕೋಣೆಯಲ್ಲೇ ಕಾಲಹರಣ ಮಾಡುವುದನ್ನು ನಿಲ್ಲಿಸೋಣ; ಸ್ಕ್ರೈಬಸ್ ತಂದ ಪುಟ್ಟ ತಂಗಾಳಿಗೆ ಮೈಯೊಡ್ಡೋಣ!
————————–
ಬೇಳೂರು ಸುದರ್ಶನ
ಭಾಷಾ ತಂತ್ರಜ್ಞಾನ ಅಭಿಯಾನಿ
——————————————-
(೬ ಜೂನ್ ೨೦೧೭ರಂದು ಪ್ರಜಾವಾಣಿಯಲ್ಲಿ ಪ್ರಕಟಿತ)