ಬಿಜಾಪುರ ಜಿಲ್ಲೆಯ ಯತ್ನಾಳ ಗ್ರಾಮ. ರಾತ್ರಿ ಹನ್ನೊಂದು ಗಂಟೆಗೆ ಶಿಕ್ಷಕ ರಾಮಣ್ಣ ಹಡಗಲಿಯವರು ತಮ್ಮ ಮನೆಯಲ್ಲಿದ್ದ ರೇಡಿಯೋ ಆನ್ ಮಾಡಿದರು. ಬಿಜಾಪುರ ಎಫ್‌ಎಂ ಕೇಂದ್ರವನ್ನು ಹಚ್ಚಿದರು. ಅಲ್ಲಿಂದ ವಾರ್ತೆಗಳ ಮುಖ್ಯಾಂಶ ಪ್ರಸಾರವಾಗುತ್ತಿತ್ತು. ಅದು ಮುಗಿದ ಮೇಲೆ ರೇಡಿಯೋ ಜಾಕಿಯು `ಇಲ್ಲಿಗೆ ಮಂಗಳೂರು ಆಕಾಶವಾಣಿಯ ಇಂದಿನ ಕಾರ್ಯಕ್ರಮಗಳು ಮುಗಿದವು. ಈಗ ಎಂಟನೇ ತರಗತಿಯ ಇಂಗ್ಲಿಶ್ ವಿಷಯದ ಹನ್ನೊಂದನೇ ಪಾಠ ಪ್ರಸಾರವಾಗಲಿದೆ’ ಎಂದು ಉಲಿದಳು. ಅದಾಗಿ ಹದಿನೈದು ಸೆಕೆಂಡುಗಳ ನಂತರ ರೇಡಿಯೋ ಕೇಂದ್ರದಿಂದ ಗಶ್‌ಶ್‌ಶ್ ಎಂಬ ಸದ್ದು ಶುರುವಾಯಿತು. ರಾಮಣ್ಣನವರ ಮುಖ ಅರಳಿತು.
ಅದಾಗಲೇ ರಾಮಣ್ಣನವರು ರೇಡಿಯೋದ ಹೆಡ್‌ಸೆಟ್ ಕೊಂಡಿಯಲ್ಲಿ ಟು-ವೇ ಆಡಿಯೋ ಪಿನ್ ಚುಚ್ಚಿ ಅದರ ಇನ್ನೊಂದು ತುದಿಯನ್ನು ಸರ್ಕಾರದಿಂದ ಸರಬರಾಜಾದ ಲ್ಯಾಪ್‌ಟಾಪ್‌ಗೆ ಚುಚ್ಚಿದ್ದರು. ಸುಮಾರು ಇಪ್ಪತ್ತು ನಿಮಿಷಗಳ ಕಾಲ ಈ ಗಶ್‌ಶ್‌ಶ್ ಸದ್ದು ಮುಂದುವರಿಯಿತು. ರಾಮಣ್ಣನವರು ಕಂಪ್ಯೂಟರಿನಲ್ಲಿ ಸರಸರನೆ ಮೂಡುತ್ತಿದ್ದ ಅಲೆಗಳ ಚಿತ್ರವನ್ನೇ ನೋಡುತ್ತ ಕೂತರು.
ಹಠಾತ್ತಾಗಿ ಕರೆಂಟ್ ಹೋಯಿತು. ರೇಡಿಯೋ ಆಫ್ ಆಯಿತು. ರಾಮಣ್ಣ ತಣ್ಣಗೆ ತಮ್ಮ ಮೊಬೈಲ್ ಆನ್ ಮಾಡಿದರು. ಆಡಿಯೋ ಜಾಕನ್ನು ಮೊಬೈಲಿಗೆ ಸಿಕ್ಕಿಸಿ ಅದರಲ್ಲಿದ್ದ ರೇಡಿಯೋ ಆನ್ ಮಾಡಿದರು. ಹನ್ನೊಂದು ಗಂಟೆ ಇಪ್ಪತ್ತೈದು ನಿಮಿಷಕ್ಕೆ ಸರಿಯಾಗಿ ಮತ್ತೆ `ಗಶ್‌ಶ್’ ಆರಂಭವಾಯಿತು. ರಾಮಣ್ಣ ನಿಟ್ಟುಸಿರು ಬಿಟ್ಟರು. ನಾಳೆಯ ಪಾಠ ಸಿಕ್ಕಿತಲ್ಲ ಎಂದು ಸಮಾಧಾನಗೊಂಡು ಹೊರಗೆ ಬಂದರು. ನಗರದ ಬೆಳಕಿನ ಹಾವಳಿಯಿಲ್ಲದ ನಿರಭ್ರ ಕಡುನೀಲ ಆಗಸದ ನಕ್ಷತ್ರಗಳನ್ನು ನೋಡುತ್ತ `ನಾಳೆ ಭೌತಶಾಸ್ತ್ರದ ಪಾಠ ಬರುತ್ತಲ್ಲ’ ಎಂದು ನೆನಪಿಸಿಕೊಂಡರು.
ಕಟ್ಟುಕತೆಯಲ್ಲ
ಇಂಥದ್ದೇ ಇನ್ನೊಂದು `ಕಟ್ಟುಕಥೆ’ಯನ್ನು ನಾನು ಹತ್ತು ವರ್ಷಗಳ ಹಿಂದೆ (ಸಿಂಪ್ಯೂಟರ್ ಎಂಬ ಅಪ್ಪಟ ಭಾರತೀಯ ಅಂಗೈ ಗಣಕ ಮಾರುಕಟ್ಟೆಗೆ ಬರುವುದರಲ್ಲಿದ್ದಾಗ) ಬರೆದಿದ್ದೆ. ನುಡಿಚಿತ್ರಗಳನ್ನು ಬರೆಯುವಾಗ ಇಂಥ ಕಲ್ಪನೆಗಳನ್ನು ಮೂಡಿಸುವುದು, ಓದುಗರನ್ನು ಮೊದಲ ಪ್ಯಾರಾದಲ್ಲಿಯೇ ಸೆಳೆಯುವುದು ಸಹಜಸೂತ್ರ.
ಈ ಸಲ ರಾಮಣ್ಣ ಹಡಗಲಿಯವರು ಏನು ಮಾಡಬಹುದು ಎಂಬ ಕಲ್ಪನೆಗೆ ಕಾರಣವಾಗಿದ್ದು ಒನ್‌ಬೀಪ್. ನಮ್ಮ ಜನಪರ ತಂತ್ರಜ್ಞಾನಗಳು ಸರಿಯಾದ ಬೆಂಬಲದೊಂದಿಗೆ ಜಾರಿಯಾದರೆ ರಾಮಣ್ಣನವರ ಕಥೆಯೂ ಬಹುತೇಕ ವಾಸ್ತವವೇ ಆಗಲಿದೆ. ಉತ್ಪ್ರೇಕ್ಷೆಯ ಮಾತೇ ಇಲ್ಲ.
ಎಫ್‌ಎಂ ಬ್ಯಾಂಡಿನ ಸಮುದಾಯ ಬಳಕೆ
ಕೆಲವು ವರ್ಷಗಳ ಹಿಂದೆ ನಾನು ವಾಚಕರ ವಾಣಿ ಬರೆಯುತ್ತ ಎಫ್ ಎಂ ಬ್ಯಾಂಡಿನ ತರಂಗಗಳು ಸಾರ್ವಜನಿಕ ಆಸ್ತಿಯೇ ಹೊರತು ನಗರವಾಸಿಗಳ ಹಕ್ಕೇನಲ್ಲ; ಶಿಕ್ಷಣ ನೀಡುವ ಗ್ಯಾನ್‌ವಾಣಿ ಮುಂತಾದ ಎಫ್ ಎಂ ಕೇಂದ್ರಗಳನ್ನು ಗ್ರಾಮೀಣ ಪ್ರದೇಶದಲ್ಲೂ ಸ್ಥಾಪಿಸಬೇಕು ಎಂದು ವಾದಿಸಿದ್ದೆ. ಕನ್ನಡವನ್ನೇ ಮರೆಯುತ್ತಿರುವ ಬೆಂಗಳೂರಿಗಿಂತ ಕನ್ನಡದಲ್ಲೇ ಬದುಕಲು ಹೆಣಗುತ್ತಿರುವ ಗ್ರಾಮೀಣ ಕರ್ನಾಟಕಕ್ಕೆ ಎಫ್ ಎಂ ಬೇಕು ಎಂಬುದು ನನ್ನ ವಾದವಾಗಿತ್ತು. ಈಗಲೂ ಗ್ಯಾನ್‌ವಾಣಿಯು ಸೀಮಿತವಾಗೇ ಕಾರ್ಯಾಚರಿಸುತ್ತಿದೆ.
ಈಗ ನ್ಯೂಝಿಲೆಂಡ್‌ನ ವಿನ್ನಿ ಲೋಹಾನ್ ಮತ್ತು ಅವರ ಯುವತಂಡ ಈಗ ಎಫ್ ಎಂ ಬ್ಯಾಂಡಿನ ತರಂಗಗಳ ಮೂಲಕ ಹಳ್ಳಿ ವಾಸಿಗಳಿಗೆ ಕಲಿಕೆಯ ಪಾಠಗಳನ್ನು ರವಾನಿಸಲು ಸಿದ್ಧವಾಗಿದೆ! `ಕುಗ್ರಾಮ ಗುರುತಿಸಿ’ ಸ್ಪರ್ಧೆಯನ್ನು ದಶಕಗಳ ಹಿಂದೆಯೇ ಏರ್ಪಡಿಸಿ ಅಭಿವೃದ್ಧಿಯ ಹೆಜ್ಜೆಗುರುತುಗಳನ್ನು ಹುಡುಕಲು ಯತ್ನಿಸಿದ್ದ `ಉದಯವಾಣಿ’ ಪತ್ರಿಕೆಯಲ್ಲೇ ಬಂದ ಈ ಸುದ್ದ ನನಗೆ ತುಂಬಾ ಖುಷಿ ಕೊಟ್ಟಿತು. ಕೂಡಲೇ ವಿನ್ನಿ ಲೋಹಾನ್‌ರನ್ನು ಸಂಪರ್ಕಿಸಿ `ಮಿತ್ರಮಾಧ್ಯಮ’ದ ಓದುಗರಿಗಾಗಿ ಈ ಲೇಖನ ಸಿದ್ಧಪಡಿಸಿದ್ದೇನೆ.
ಇಂಟರ್‌ನೆಟ್ ಇಲ್ಲದ ಪ್ರದೇಶಗಳಲ್ಲಿ ರೇಡಿಯೋ ತರಂಗಗಳ ಮೂಲಕ ಪಠ್ಯವನ್ನು ಕಂಪ್ಯೂಟರಿಗೆ ವರ್ಗಾಯಿಸಿ ಗ್ರಾಮೀಣ ಪ್ರದೇಶದಲ್ಲಿ ಪಾಠ ಕಲಿಕೆಯನ್ನು ಸುಲಭಗೊಳಿಸುವುದು – ಇದು ವಿನ್ನಿ ಲೋಹಾನ್ ತಂಡ ರೂಪಿಸಿದ `ಒನ್‌ಬೀಪ್’ ತಂತ್ರಜ್ಞಾನದ ಸರಳ ವಿವರಣೆ. ಈ ಪಾಠಗಳನ್ನು ಓದಲು ವಿದ್ಯಾರ್ಥಿಗಳಿಗೆ (ಬಳಕೆದಾರರಿಗೆ) ಬೇಕಾಗಿರೋದು: ಹೆಡ್‌ಸೆಟ್ ಪಿನ್ ಇರುವ ರೇಡಿಯೋ; ಅದನ್ನು ಕಂಪ್ಯೂಟರಿಗೆ ಸಂಪರ್ಕಿಸುವ ಒಂದು ಟು-ವೇ ಪಿನ್ ಮತ್ತು ಒಂದು ಕಂಪ್ಯೂಟರ್. ಇಂಟರ್‌ನೆಟ್ ಸಂಪರ್ಕ ಬೇಡವೇ ಬೇಡ.
ಗ್ರಾಮೀಣ ಪ್ರದೇಶಗಳ ವಿದ್ಯಾರ್ಥಿಗಳಿಗೆ ತಲಾ ಒಂದು ಲ್ಯಾಪ್‌ಟಾಪ್ / ಅಗ್ಗದ ಬೆಲೆಯಲ್ಲಿ ಪಿಸಿ ಟ್ಯಾಬ್ಲೆಟ್ ಕೊಡುವ ಸರ್ಕಾರಿ ಯೋಜನೆಗಳು ಭಾರತವೂ ಸೇರಿದಂತೆ ಹಲವು ದೇಶಗಳಲ್ಲಿ ಜಾರಿಯಾಗ್ತಾ ಇವೆ ತಾನೆ? ಇತ್ತೀಚೆಗಷ್ಟೆ ಭಾರತದಲ್ಲಿ ಆಕಾಶ್ ೨ ಪಿಸಿ ಟ್ಯಾಬ್ಲೆಟ್ ಅವತರಣಿಕೆ ಬಿಡುಗಡೆಯಾಗಿ ವಿದ್ಯಾರ್ಥಿಗಳ ಕೈ ಸೇರಿದೆ ತಾನೆ? ಈ ಬೆಳವಣಿಗೆಯನ್ನು ಗಮನದಲ್ಲಿ ಇಟ್ಟುಕೊಂಡೇ ವಿನ್ನಿ ಲೋಹಾನ್ ತಂಡ `ಒನ್‌ಬೀಪ್’ ತಯಾರಿಸಿದೆ.
ಈ ತಂತ್ರಜ್ಞಾನ ಹೇಗೆ ಕೆಲಸ ಮಾಡುತ್ತೆ ನೋಡೋಣ: (ಚಿತ್ರವನ್ನೂ ನೋಡಿ)
ಮೊದಲು ಮಕ್ಕಳಿಗೆ ಕಲಿಸಬೇಕಾದ ಪಾಠವನ್ನು ಕಂಪ್ಯೂಟರಿನಲ್ಲಿ ಬರೆಯಬೇಕು. ಅದನ್ನು ಒನ್‌ಬೀಪ್ ತಂತ್ರಾಂಶದ ಮೂಲಕ ರೇಡಿಯೋ ಅಲೆಯಾಗಿ ಪರಿವರ್ತಿಸಬೇಕು. ಈ ಪಾಠದ ಅಲೆಯನ್ನು ಎಫ್ ಎಂ ಅಥವಾ ಎ ಎಂ (ಮೀಡಿಯಂ ವೇವ್) ರೇಡಿಯೋ ಕೇಂದ್ರಗಳ ಮೂಲಕ ಬಿತ್ತರಿಸಬೇಕು. ಹೀಗೆ ಬಿತ್ತರಿಸಿದ ಪಾಠವು ಹಳ್ಳಿಯಲ್ಲಿರುವ ರೇಡಿಯೋಗೆ ತಲುಪುತ್ತದೆ. ಈ ರೇಡಿಯೋವನ್ನು ಒಂದು ದ್ವಿಮುಖಿ ಆಡಿಯೋ ಪಿನ್ ಮೂಲಕ ಕಂಪ್ಯೂಟರಿಗೆ ಹರಿಸಬೇಕು. ಅಲ್ಲಿ ಈ ಅಲೆಯನ್ನು ಒನ್‌ಬೀಪ್ ಮೂಲಕವೇ ಮತ್ತೆ ಪಠ್ಯವಾಗಿ ಪರಿವರ್ತಿಸಬೇಕು. ಈ ಪಠ್ಯವೀಗ ಓದಲು ಸಿದ್ಧ. ಒಮ್ಮೆ ಪಠ್ಯವು ಬಂದ ಮೇಲೆ ಇನ್ನೇನು ತಡ? ಅದನ್ನು ಹಾಗೆಯೇ ಮಕ್ಕಳಿಗೆ ನೀಡಬಹುದು; ಮುದ್ರಿಸಿ ಹಂಚಬಹುದು; ದೊಡ್ಡ ಪರದೆಯ ಮೇಲೆ ಮೂಡಿಸಿ ಪಾಠ ಮಾಡಬಹುದು. ಅವಕಾಶಗಳು ಅಪಾರ.
ಒನ್‌ಬೀಪ್ ತಂಡವು ಇಂಥ ಪಾಠಗಳನ್ನು ಎಫ್‌ಎಂ ರೇಡಿಯೋ ಮೂಲಕ ೧೦೦ ಕಿಲೋಮೀಟರ್ ದೂರದ ಕಂಪ್ಯೂಟರಿಗೆ ಕಳಿಸಿ ಯಶ ಪಡೆದಿದೆ. ಸದ್ಯದಲ್ಲೇ ೨೦೦ ಕಿಲೋಮೀಟರ್ ದೂರಕ್ಕೂ ಪಾಠವನ್ನು ಅಲೆಗಳ ಮೂಲಕ ರವಾನಿಸುವ ಪ್ರಯೋಗ ನಡೆದಿದೆ.
ವಿಶೇಷ ಎಂದರೆ ಈಗ ಒನ್‌ಬೀಪ್ ತಂತ್ರಾಂಶವನ್ನು ಮುಕ್ತ ತಂತ್ರಾಂಶವಾಗಿ ರೂಪಿಸಲು ಒನ್‌ಬೀಪ್ ತಂಡವು ಮುಂದಾಗಿದೆ. ಮೈಕ್ರೋಸಾಫ್ಟ್‌ನ ಸ್ಪರ್ಧೆಯಲ್ಲಿ ಭಾಗವಹಿಸುವುದಕ್ಕಾಗಿಯೇ ಈ ತಂತ್ರಾಂಶವು ರೂಪುಗೊಂಡಾಗ, ಅದನ್ನು ಸಂಪೂರ್ಣವಾಗಿ ಮೈಕ್ರೋಸಾಫ್ಟ್ ಸಾಧನಗಳನ್ನೇ (ಅಂದರೆ ಮುಕ್ತವಲ್ಲದ, ಖಾಸಗಿ ಒಡೆತನದ) ಬಳಸಿ ರೂಪಿಸಲಾಗಿತ್ತು. ಈಗ ಅದೇ ತಂತ್ರಾಂಶವು ಮುಕ್ತಸಂಕೇತಗಳಲ್ಲಿ (ಓಪನ್‌ಸೋರ್ಸ್) ಅನಾವರಣಗೊಳ್ಳಲಿದೆ. ಈ ತಂತ್ರಾಂಶವು ಸಮಾಜದ ಏಳಿಗೆಗಾಗಿ, ಸಾಮಾಜಿಕ ಉದ್ದೇಶಗಳಿಗಷ್ಟೇ ಬಳಕೆಯಾಗಬೇಕು ಎಂಬ ಕಾಳಜಿಯೇ ಈ ಬದಲಾವಣೆಗೆ ಕಾರಣ ಎಂದು ವಿನ್ನಿ ಲೋಹಾನ್ `ಮಿತ್ರಮಾಧ್ಯಮ’ಕ್ಕೆ ತಿಳಿಸಿದರು. ಈಗಲೂ ಯೂಟ್ಯೂಬ್‌ನಲ್ಲಿ ಮೈಕ್ರೋಸಾಫ್ಟ್ ಆಧಾರಿತ ತಂತ್ರಾಂಶದ ವಿವರಣೆಯನ್ನು ನೋಡಿ ನಾನು ಸಂಶಯ ವ್ಯಕ್ತಪಡಿಸಿದಾಗ `ಇಲ್ಲ, ಅದು ಎರಡೂವರೆ ವರ್ಷಗಳ ಹಿಂದೆ ಅಪ್‌ಲೋಡ್ ಮಾಡಿದ್ದು’ ಎಂದು ವಿನ್ನಿ ಸ್ಪಷ್ಟನೆ ನೀಡಿದರು.
ಹಾಗಾದರೆ ಇಂಥ ಪಾಠಗಳನ್ನು ಹಳ್ಳಿಗಳಿಗೆ ರವಾನಿಸಲು ಎಫ್‌ಎಂ ರೇಡಿಯೋ ಕೇಂದ್ರಗಳ ಸಹಾಯ ಬೇಕು ಎಂದಾಯಿತು. `ಹೌದು. ಈಗ ಇರೋ ರೇಡಿಯೋ ಕೇಂದ್ರಗಳು ತಮ್ಮ ಬಿಡುವಿನ ವೇಳೆಯಲ್ಲಿ ಈ ಪಾಠಗಳನ್ನು ಪ್ರಸಾರ ಮಾಡಬಹುದು. ಕೇಂದ್ರ ಅಥವಾ ರಾಜ್ಯ ಸರ್ಕಾರಗಳು, ಸ್ವಯಂಸೇವಾ ಸಂಸ್ಥೆಗಳು ಈ ಪಾಠಗಳನ್ನು ರೂಪಿಸಿ ಪ್ರಸಾರ ಮಾಡಿದರೆ ಒಳ್ಳೆಯದು’ ಎಂದು ವಿನ್ನಿ ವಿನಯದಿಂದಲೇ ಹೇಳುತ್ತಾರೆ. ಈಗಾಗಲೇ ಜಗತ್ತಿನಲ್ಲಿ ೩೨ ಲಕ್ಷ ಇಂಥ ಅಗ್ಗದ ಬೆಲೆಯ ಲ್ಯಾಪ್‌ಟಾಪ್‌ಗಳ ವಿತರಣೆ ಆಗಿಬಿಟ್ಟಿದೆ. ಮುಂದಿನ ನಾಲ್ಕು ವರ್ಷಗಳಲ್ಲಿ ಇನ್ನೂ ಮೂರು ಕೋಟಿ ಲ್ಯಾಪ್‌ಟಾಪ್ ವಿತರಣೆ ಆಗಲಿದೆ. ಹಾಗಂತ ಎಲ್ಲ ಲ್ಯಾಪ್‌ಟಾಪ್‌ಗಳಿಗೂ ಇಂಟರ್‌ನೆಟ್ ಸಂಪರ್ಕ ಅತೀ ದೊಡ್ಡ ಸಮಸ್ಯೆ. ಇಂಟರ್‌ನೆಟ್ ಇಲ್ಲದ ಹಳ್ಳಿಗಳಲ್ಲಿ ಮಕ್ಕಳು ನೇರವಾಗಿ ರೇಡಿಯೋದಿಂದಲೇ ಪಾಠಗಳನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು. ದಿನದ ಹೊಸ ಹೊಸ ವಿದ್ಯಮಾನಗಳನ್ನು ಪಠ್ಯದ ಮೂಲಕ ತಿಳಿದು ತಮ್ಮ ಅರಿವನ್ನು ವಿಸ್ತರಿಸಿಕೊಳ್ಳಬಹುದು.
ಉದಾಹರಣೆಗೆ ಬಿಜಾಪುರ ಜಿಲ್ಲೆಯ ಮಕ್ಕಳಿಗೆ ಜಿಲ್ಲೆಯಲ್ಲಿ ಅಸಂಖ್ಯವಾಗಿರುವ ಕಹಿಬೇವಿನ ಮರದ ಬೀಜಗಳನ್ನು ಸಂಗ್ರಹಿಸಿ, ಬಿಜಾಪುರದ ಮಹಿಳಾ ವಿಶ್ವವಿದ್ಯಾಲಯದಲ್ಲಿರುವ ಘಟಕಕ್ಕೆ ಒಯ್ದು ಜೈವಿಕ ಇಂಧನ ತಯಾರಿಸುವುದು ಹೇಗೆ ಎಂಬ ಬಗ್ಗೆ ಒಂದು ಪಾಠವನ್ನು ಬಿತ್ತರಿಸಬಹುದು. ಕಾಫಿ ಬೆಳೆಯ ಇತಿಹಾಸದ ಮತ್ತು ೨೦೧೨ರ ಉತ್ಪಾದನೆಯ ಅಂಕಿ ಅಂಶಗಳ ಬಗ್ಗೆ ಒಂದು ತಾಜಾ ಪ್ರಬಂಧವನ್ನು ರೂಪಿಸಿ ಚಿಕ್ಕಮಗಳೂರು – ಕೊಡಗು ಜಿಲ್ಲೆಯ ಶಾಲೆಗಳಿಗೆ ಬಿತ್ತರಿಸಬಹುದು. ಈ ಮಳೆಗಾಲದಲ್ಲಿ ರೈತರು ಅನುಸರಿಸಬೇಕಾದ ಸಾವಯವ ಕೃಷಿಪದ್ಧತಿಯ ಬಗ್ಗೆ ಪಾಠ ಬರೆದರೆ ಅದನ್ನು ಎಲ್ಲ ಹಳ್ಳಿಗಳ ಮಕ್ಕಳ ಮೂಲಕ ಅವರ ರೈತಾಪಿ ಪಾಲಕರಿಗೆ ತಲುಪಿಸಬಹುದು. ಯಾವ ಜಿಲ್ಲೆಯಲ್ಲಿ ಯಾವ ಬೆಳೆಯನ್ನು ಬೆಳೆದಿದ್ದಾರೆ, ಎಲ್ಲೆಲ್ಲಿ ಟೊಮ್ಯಾಟೋಗೆ ಬೇಡಿಕೆ ಇದೆ, ಹಸಿಮೆಣಸಿನಕಾಯಿಗೆ ಕೊರತೆ ಇದೆ ಎಂಬುದನ್ನೆಲ್ಲ ಕೋಷ್ಟಕ ಸಹಿತ ಕಳಿಸಿ ರೈತರ ಮಾರುಕಟ್ಟೆಗೆ ನೆರವಾಗಬಹುದು….. ಈ `ಬಹುದು’ ಎಂಬುದು ಕೇವಲ ಕಲ್ಪನೆಯಲ್ಲ. ಕೊಂಚ ಆಡಳಿತಾತ್ಮಕ ದೃಢತೆ (ಅಡ್ಮಿನಿಸ್ಟ್ರೇಟಿವ್ ವಿಲ್) ಇದ್ದರೆ ಖಂಡಿತ ಈ ಕೂಡಲೇ ಜಾರಿಯಾಗಬಹುದಾದ ಯೋಜನೆ.
ವಿಶ್ವದ ಗಮನ ಸೆಳೆದ ತಂತ್ರಜ್ಞಾನ
ಒನ್‌ಬೀಪ್ ತಂತ್ರಾಂಶವನ್ನು ಮುಕ್ತರೂಪದಲ್ಲಿ ಪ್ರಕಟಿಸಲು ಎರಡು ಲಕ್ಷ ಡಾಲರ್‌ಗಳ ಮೊತ್ತ ಬೇಕಿದೆಯಂತೆ. ಈ ಮೊತ್ತವನ್ನು ಸಂಗ್ರಹಿಸಲು ಒನ್‌ಬೀಪ್ ತಂಡವು ಆನ್‌ಲೈನ್ ನಿಧಿ ಸಂಗ್ರಹಣಾ ಜಾತಲತಾಣವಾದ ಕಿಕ್‌ಸ್ಟಾರ್ಟರ್‌ನ ಮೊರೆ ಹೋಗಿದೆ. ಒಂದು ಮುಕ್ತ ತಂತ್ರಾಂಶವನ್ನು ಅಭಿವೃದ್ಧಿಪಡಿಸಲು ಸುಮಾರು ಒಂದು ಕೋಟಿ ರೂಪಾಯಿ ಬೇಕೆ ಎಂಬ ಬಗ್ಗೆ ನನಗೂ ಗೊಂದಲಗಳಿವೆ. ಅದೇನೇ ಇದ್ದರೂ ಮುಕ್ತ ತಂತ್ರಾಂಶವನ್ನು ರೂಪಿಸಲು ಆರ್ಥಿಕ ನೆರವು ಬೇಕಿರುವುದಂತೂ ನಿಜ. ನೋಡೋಣ.
ವಿನ್ನಿ ಲೋಹಾನ್ ಸೇರಿದಂತೆ ಒನ್‌ಬೀಪ್ ತಂಡದಲ್ಲಿರುವ ಎಲ್ಲರೂ (ಕೆಲೀನ್ ಮಲಾರ್ಡ್, ಕಾಯೋ ಲಕಾಡಿಯಾ, ಶಾನ್ಯೂಲ್ ಯೂ) ನ್ಯೂಝಿಲೆಂಡ್‌ನ ಆಕ್‌ಲ್ಯಾಂಡ್ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು. ಸ್ಪರ್ಧೆಗೋಸ್ಕರ ರೂಪಿಸಿದ ಒನ್‌ಬೀಪ್ ಪ್ರಶಸ್ತಿ ಪಡೆದಿದ್ದಷ್ಟೇ ಅಲ್ಲ, ವಿಶ್ವದ ಸಾಫ್ಟ್‌ವೇರ್ ತಜ್ಞರ ಗಮನ ಸೆಳೆದಿದೆ. ಜನರಲ್ ಎಲೆಕ್ಟ್ರಿಕ್ ಕಂಪೆನಿಯು ೩೦ರ ಹರೆಯದೊಳಗಿನವರ ಮೂರು ಅತಿಪ್ರಮುಖ ಯೋಜನೆಗಳಲ್ಲಿ ಒನ್‌ಬೀಪ್ ಕೂಡಾ ಒಂದು ಎಂದು ಶ್ಲಾಘಿಸಿದೆ.
ಮಲೇರಿಯಾ ತಡೆಗೂ ತಂತ್ರಾಂಶದ ನೆರವು
ವಿನ್ನಿ ಈಗ `ಒನ್‌ಬಜ್’ ಎಂಬ ಮಲೇರಿಯಾ ನಿಗಾ ತಂತ್ರಾಂಶವನ್ನು ರೂಪಿಸುತ್ತಿದ್ದಾರೆ. ಮಳೆಗಾಲ, ಸೊಳ್ಳೆಗಳ ದಟ್ಟಣೆ, ಈ ಹಿಂದೆ ಮಲೇರಿಯಾ ವ್ಯಾಪಿಸಿದ್ದ ಪ್ರದೇಶಗಳ ದತ್ತಾಂಶ – ಇವನ್ನೆಲ್ಲ ಒಗ್ಗೂಡಿಸಿ ಮಲೇರಿಯಾ ರೋಗದ ಬಗ್ಗೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಂತೆ ಮಾಡುವುದೇ ವಿನ್ನಿಯ ಉದ್ದೇಶ. ಅವರ ಅಮ್ಮನಿಗೆ, ಸ್ವತಃ ಅವರಿಗೆ ಮಲೇರಿಯಾ ರೋಗ ಬಂದ ಹಿನ್ನೆಲೆಯಲ್ಲಿ `ಒನ್‌ಬಜ್’ ರೂಪಿಸಿದ್ದಾರಂತೆ.
`ಕುಗ್ರಾಮ ಗುರುತಿಸಿ’ ಎಂದು ಉದಯವಾಣಿ ಪತ್ರಿಕೆಯು ಹಲವು ವರ್ಷಗಳ ಹಿಂದೆ ಒಂದು ಸ್ಪರ್ಧೆಯನ್ನು ಏರ್ಪಡಿಸಿತ್ತು. ಅಭಿವೃದ್ಧಿಯ ಚಿಕ್ಕ ಗುರುತೂ ಇಲ್ಲದಂಥ ಹಲವು ಗ್ರಾಮಗಳನ್ನು ಈ ಸಂದರ್ಭದಲ್ಲಿ ಜನ ಆಗ ಗುರುತಿಸಿದ್ದರು. ಈಗ ಕುಗ್ರಾಮಗಳ ಬಗ್ಗೆ ಅಂಥ ಚರ್ಚೆ ನಡೆಯುವುದಿಲ್ಲ. ಎಲ್ಲ ಕಡೆಯೂ ರಸ್ತೆ- ಸೇತುವೆಗಳು ಬಂದಿವೆ, ಮೊಬೈಲ್ ಬಂದಿದೆ, ಡಿವಿ-ಡಿಟಿಎಚ್ ಬಂದಿದೆ. ಇನ್ನೇನು ಬೇಕು ಎಂದೇ ಕೇಳುತ್ತಾರೆ. ರಾಜಕಾರಣಿಗಳಯ ನರೇಗಾ ಯೋಜನೆಯನ್ನೋ, ಗ್ರಾಮೀಣ ಸಡಕ್ ಯೋಜನೆಯನ್ನೋ ಉದ್ಧರಿಸಿ ಊರೆಲ್ಲ ಕ್ರಾಂತಿಯಾಗಿದೆ ಎನ್ನುತ್ತಾರೆ. ಸರ್ವಶಿಕ್ಷಾ ಅಭಿಯಾನವನ್ನು ಉಲ್ಲೇಖಿಸುತ್ತಾರೆ. ಆದರೆ ಸಮಕಾಲೀನ ಮಾಹಿತಿ ರವಾನೆಯ ಸವಾಲುಗಳಿಗೆ ಉತ್ತರವೇ ಇರುವುದಿಲ್ಲ. ಹತ್ತಾರು ವರ್ಷ ಹಳೆಯದಾದ ಪಠ್ಯಕ್ರಮಕ್ಕೇ ಅಂಟಿಕೊಂಡು, ಅವುಗಳನ್ನೇ ಲಕ್ಷಗಟ್ಟಳೆ ಪ್ರತಿಗಳಲ್ಲಿ ಮುದ್ರಿಸಿ ವಿದ್ಯಾರ್ಥಿಗಳನ್ನು ಹಳೆಯ ಮಾಹಿತಿಯಲ್ಲೇ ನರಳಿಸುತ್ತಾರೆ. ಸಿಂಪ್ಯೂಟರ್ ನಿಂದ ಹಿಡಿದು ಒನ್‌ಬೀಪ್‌ವರೆಗೂ ಎಷ್ಟೋ ತಂತ್ರಜ್ಞಾನಗಳು ಸಮುದಾಯದ ಏಳಿಗೆಯಾಗಿಯೇ ಮಾಡಿದ್ದು. ಆದರೆ ಅವುಗಳ ಉಪಯೋಗದ ಬಗ್ಗೆ ಮಾತ್ರ ನಮ್ಮದು ಅಸೀಮ ನಿರ್ಲಕ್ಷ್ಯ. ಇಂಟರ್‌ನೆಟ್‌ನಲ್ಲಿ ಜಡ ಜಾಲತಾಣಗಳು, ಕಚೇರಿಗಳಲ್ಲಿ ಪೇರಿಸಿಟ್ಟ ಕಡತಗಳ ರಾಶಿ, ಮಾಹಿತಿ ಪಡೆಯುವ ಹಕ್ಕಿನ ನಡುವೆಯೂ ಲಂಚ ತಿನ್ನುವ ಲೆಕ್ಕಾಚಾರ, ವೇತನಕ್ಕಾಗಿಯೇ ಹುಟ್ಟಿಕೊಂಡ ಶಿಕ್ಷಕರ ಸಂಘಟನೆಗಳು, ಇಂಗ್ಲಿಶ್ ಶಾಲೆಯೇ ಎಲ್ಲದಕ್ಕೂ ಎಂದು ಭಾವಿಸುವ ಸರ್ಕಾರ – ಇವೆಲ್ಲ ಸನ್ನಿವೇಶಗಳ ನಡುವೆ ತಂತ್ರಜ್ಞಾನದ ಯೋಗ್ಯ ಬಳಕೆಯನ್ನು ಮಾಡುವುದಕ್ಕೆ ಯಾರಿಗೂ ಸಮಯವೇ ಇರುವುದಿಲ್ಲ.
ವಾಣಿಜ್ಯ ಬಳಕೆಗೆ ಬಿಟ್ಟರೆ ಖಂಡಿತ ಒನ್‌ಬೀಪ್ ಮೂಲಕ ಕೋಟಿಗಟ್ಟಳೆ ಹಣ ಸಂಪಾದಿಸುವುದಕ್ಕೂ ಸಾಧ್ಯವಿದೆ. ಆದರೆ ವಿನ್ನಿ ಲೋಹಾನ್ ತಂಡಕ್ಕೆ ಸಮುದಾಯದ ಏಳಿಗೆಯ ಸದ್ವಿಚಾರವಿದೆ.
ಒನ್‌ಬೀಪ್ ಯಶಸ್ಸಿಗೆ ಏನಾಗಬೇಕು?
ಪ್ರೇಮ, ಕಾಮ, ಶಾಪಿಂಗ್, ಬ್ಯೂಟಿ, ಕನ್ಸೂಮರಿಸಂ – ಇವೆಲ್ಲ ವಿಚಾರಗಳನ್ನು ಬಿತ್ತರಿಸಿ ಬದುಕುತ್ತಿರುವ ಖಾಸಗಿ ಎಫ್ ಎಂ ಚಾನೆಲ್‌ಗಳೂ, ಸದಾ ಚಿತ್ರಗೀತೆಗಳ ಕಾರ್ಯಕ್ರಮಗಳನ್ನೇ ಹಲವು ಹೆಸರುಗಳಲ್ಲಿ ಬಿತ್ತರಿಸಿ ಸುಮ್ಮನಾಗುವ ಸರ್ಕಾರಿ ಚಾನೆಲ್‌ಗಳೂ ಒನ್‌ಬೀಪ್‌ನತ್ತ ಮುಖ ಮಾಡಲಿ ಎಂದು ಆಶಿಸೋಣ.
ಅದಿರಲಿ, ಕೇಂದ್ರ ಸರ್ಕಾರದ ಯೋಜನೆಯು ಸರಿಯಾಗಿ ಜಾರಿಯಾದಲ್ಲಿ ಸದ್ಯದಲ್ಲೇ ದೇಶದಾದ್ಯಂತ ಇನ್ನೂ ೮೦೦ಕ್ಕೂ ಹೆಚ್ಚು ಎಫ್‌ಎಂ ರೇಡಿಯೋ ಕೇಂದ್ರಗಳು ಆರಂಭವಾಗಲಿವೆ. ಇವೆಲ್ಲವೂ ಬಹುತೇಕ ಜಿಲ್ಲಾ ಕೇಂದ್ರಗಳಲ್ಲೇ ಸ್ಥಾಪನೆಯಾಗಲಿವೆ. ಒನ್‌ಬೀಪ್‌ನ್ನು ಕಾರ್ಯಗತಗೊಳಿಸಲು ಇದಕ್ಕಿಂತ ಒಳ್ಳೆಯ ಮುಹೂರ್ತ ಇನ್ನೊಂದಿಲ್ಲ.
ವಿನ್ನಿ ಲೋಹಾನ್ ತಂಡಕ್ಕೆ `ಮಿತ್ರಮಾಧ್ಯಮ’ದ ಶುಭಾಶಯಗಳು!
ಒನ್‌ಬೀಪ್ ಜಾಲತಾಣಕ್ಕೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ