ನಾನು ಓದಿದ ಶಾಲೆಯನ್ನು ನಾನು ಇತ್ತೀಚೆಗೆ ನೋಡಿದ್ದು ೨೦೦೯ರ ಮೇ ತಿಂಗಳಿನಲ್ಲಿ. ಪಶ್ಚಿಮಘಟ್ಟದ ಉದ್ದಕ್ಕೂ ಹರಡಿಕೊಂಡಿರೋ ನಾನು ಓದಿದ ಶಾಲೆಗಳೆಲ್ಲವನ್ನೂ ನೋಡಬೇಕು ಎಂದು ನಾನು ಎಂದೋ ಕಂಡ ಕನಸು ಆಗ ಬಹುತೇಕ ಕೈಗೂಡಿತು. ಕೆಲವು ಊರುಗಳಲ್ಲಿ ನನ್ನ ಶಾಲೆಯನ್ನು ಹುಡುಕುವುದೇ ದೊಡ್ಡ ಕೆಲಸವಾಯಿತು!
ಇಲ್ಲಿ ನೀವು ನೋಡುತ್ತಿರುವ ಶಾಲೆ ನಾನು ಒಂದನೇ ಕ್ಲಾಸು ಓದಿದ ಹೊರಬೈಲಿನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ. ಸೊರಬ ತಾಲೂಕಿನ ಉಳವಿಯಿಂದ ದೊಡ್ಡೇರಿ ಮಾರ್ಗವಾಗಿ ಬನವಾಸಿಗೆ ಹೋಗುವ ಹಾದಿಯಲ್ಲಿ ಮೊದಲು ಸಿಗುವ ಶಾಲೆಯೇ ಇದು. ಎಡಕ್ಕೆ ಹೋದರೆ ಹೊರಬೈಲು. ಬಲಕ್ಕೆ ತಿರುಗಿದರೆ ಹೊಡಬಟ್ಟೆ. ಇದನ್ನು ಹೊರಬಟ್ಟೆ ಎಂದೂ ಕರೆಯುತ್ತಿದ್ದರು. ಈ ಸರ್ಕಲ್ಲಿಗೆ ನಾಕೂ ರಸ್ತೆ ಎಂದೇ ಹೆಸರಿದೆ. ಇತ್ತೀಚೆಗೆ ಹೊಡಬಟ್ಟೆಯ ಕೃಷಿಕ ರಾಮಚಂದ್ರರಿಗೆ ಪ್ರಶಸ್ತಿ ಸಿಕ್ಕಿರೋದನ್ನು ನೀವು ಪತ್ರಿಕೆಗಳಲ್ಲಿ ಓದಿರಬಹುದು. ಬಹುಶಃ ಅವನು ನನ್ನ ಕ್ಲಾಸ್‌ಮೇಟ್ ರಾಮಚಂದ್ರ ಇರಬಹುದೇ ಎಂಬುದು ನನ್ನ ಸಣ್ಣ ಅನುಮಾನ. ನೋಡುವ, ಈ ಬ್ಲಾಗ್ ಬರೆದ ಮೇಲೆ ಏನಾದರೂ ಸರಿಯಾದ ಸುದ್ದಿ ಸಿಕ್ಕೀತು! ಕುಳ್ಳ ಮಾಣಿ ರಾಮಚಂದ್ರ ಮತ್ತು ನಾನು ಸದಾ ಒಟ್ಟಿಗೇ ಶಾಲೆಗೆ ಹೋಗುತ್ತಿದ್ದೆವು.
ಈ ಶಾಲೆಗೆ ಇನ್ನೂ ಹಲವು ಕೋಣೆಗಳು ಸೇರಿಕೊಂಡಿವೆ. ನೀವು ನೋಡ್ತಾ ಇರೋ ಶಾಲೆಯು ಏಕೋಪಾಧ್ಯಾಯ ಶಾಲೆಯಾದಾಗ ನಾನು ಮೊದಲನೇ ಬೆಂಚಿನಲ್ಲಿ ಒಂದನೇ ಕ್ಲಾಸಿನ ವಿದ್ಯಾರ್ಥಿಯಾಗಿದ್ದೆ…. ಎರಡನೇ ಬೆಂಚು ಎರಡನೇ ಕ್ಲಾಸಿಗೆ… ಮೂರನೇ ಬೆಂಚು … ಗೊತ್ತಾಯ್ತಲ್ಲ….. ಅಲ್ಲಿ ಒಟ್ಟು ಐದು ಬೆಂಚುಗಳಿದ್ದ ನೆನಪು!
ನಮಗೇನೋ ಬೆಂಚಿತ್ತು. ಆದರೆ ಹೊಲೇರು ಎಂದು ನಾವು ಆಗ ಕರೆಯುತ್ತಿದ್ದ ಹರಿಜನರಿಗೆ ಬೆಂಚೂ ಇರಲಿಲ್ಲ ಎಂದು ಈಗ ನೆನಪಾಗುತ್ತಿದೆ. ನನ್ನ ಓರಗೆಯ ಆ ಮಿತ್ರರು ಏನೂ ಇಲ್ಲದೆ ಬರಿ ನೆಲದಲ್ಲೇ ಕೂತು ಅಕ್ಷರ ಕಲಿತರು ಎಂಬುದು ಎಂಥ ಸಾಧನೆ ಎಂದು ನನಗೀಗ ಅರಿವಾಗುತ್ತಿದೆ.
ಈ ಶಾಲೆಯಲ್ಲಿದ್ದಾಗ ಒಂದು ದಿನ, (ಬಹುಶಃ ಸ್ವಾತಂತ್ರ್ಯ ದಿನವೇ ಇರಬೇಕು) ಪ್ರಭಾತಫೇರಿಗೆಂದು ಹೊಡಬಟ್ಟೆಯ ಬೀದಿಯಲ್ಲಿ ತಿರುಗುತ್ತಿದ್ದಾಗ ಕೆಸರಿನಲ್ಲಿ ಕಾಲಿಡಲಾಗದೆ, ಮೇಸ್ಟ್ರು ಹೇಳಿದ್ದನ್ನು ವಿರೋಧಿಸಲಾಗದೆ ಪಟ್ಟ ಪಾಡಿನ ನೆನಪು ಈಗಲೂ ಹಸಿಯಾಗಿದೆ. ನಮ್ಮ ಶಾಲೆಯ ಆಟದ ಮೈದಾನದಲ್ಲಿ ಊರಿನ ಜನ ಯಾವಾಗಲೂ ವಾಲಿಬಾಲ್ ಆಡುತ್ತಿದ್ದರು, ಬ್ಯಾಡ್ಮಿಂಟನ್ ಕೂಡಾ ಆಡುತ್ತಿದ್ದರು ಎಂಬೆಲ್ಲ ನೆನಪುಗಳು ಮಬ್ಬಾಗಿವೆ.
ಹೊಡಬಟ್ಟೆಯ ಅಜ್ಜಿ ಮನೆಯಿಂದ ದಿನಾಲೂ ಮಣ್ಣಿನ ರಸ್ತೆಯಲ್ಲಿ ಎರಡು ಫರ್ಲಾಂಗು ನಡೆದು ಶಾಲೆಗೆ ಬರೋದೇ ದೊಡ್ಡ ವಾಕಿಂಗ್. ಮಳೆಗಾಲ ಅಂದಕೂಡಲೇ ಧೋ ಎಂದು ಸುರಿಯುತ್ತಿದ್ದ ಮಳೆ, ಕರ್ರಗೆ ಕವುಚಿಕೊಂಡಿರುತ್ತಿದ್ದ ಇನ್ನೇನು ಕೈ ಚಾಚಿದರೆ ಸಿಕ್ಕೇಬಿಡುತ್ತೆ ಅನ್ನೋಹಾಗೆ ಮೋಡಗಳೇ ತುಂಬಿದ್ದ ಆಕಾಶ ನಮ್ಮ ಜೊತೆಯಾಗಿದ್ದವು. ಬೇಸಗೆ ಆದರೆ ಕವಳಿ ಮಟ್ಟಿ, ದೀಪಾವಳಿ ಹತ್ತಿರ ಬಂದ್ರೆ ನೆಲ್ಲಿ ಮಟ್ಟಿ ಅಲೆಯೋದು ನಮ್ಮೆಲ್ಲರ ಹವ್ಯಾಸವಾಗಿತ್ತು. ಜೊತೆಗೆ ಮುಳ್ಳುಹಣ್ಣನ್ನು ಸವಿಯೋ ಕನಸು ಬೇರೆ!
ಶಾಲೆಗೆ ಬರೋ ದಾರಿಯಲ್ಲೇ ಒಂದು ಮಳೆಗಾಲದ ಕೆರೆ ಇತ್ತು. ದೀಪಾವಳಿ ಬಂದ್ರೆ ಅಲ್ಲೇ ಊರಿನ ವಿವಿಧ ಸ್ಪರ್ಧೆಗಳು ನಡೆಯೋದು… ಮರದ ಮೇಲಿರೋ ತೆಂಗಿನಕಾಯಿಗೆ ಈಡು ಹಿಡಿಯೋದು, ದನಕ್ಕೆ ಕಟ್ಟಿದ ತುರೆರೊಟ್ಟಿ ಹಿಡಿಯೋದು… ಒಂದೇ ಎರಡೇ…… ಊರವರೆಲ್ಲ ಸೇರಿ ನಡೆಸ್ತಾ ಇದ್ದ ಸ್ಪರ್ಧೆಗಳನ್ನು ನೋಡಿ ನಮಗೆಲ್ಲ ಖುಷಿಯೋ ಖುಷಿ.
ಹೊಡಬಟ್ಟೆ ಶಾಲೆಯಲ್ಲಿ ನಾನು ಕಳೆದಿದ್ದು / ಕೂಡಿದ್ದು ಒಂದೇ ವರ್ಷ. ಆದರೆ ಈ ಶಾಲೆ ನನಗೆ ತುಂಬಾ ಇಷ್ಟ. ಚಿಕ್ಕಮಗಳೂರು ಜಿಲ್ಲೆಯ ಹೊರನಾಡಿನಲ್ಲಿ ಅಕ್ಷರ ಕಲಿತ ನಾನು ಆಮೇಲೆ ಹೊರನಾಡಿನ ಪಕ್ಕದಲ್ಲೇ ಇದ್ದ ಕಳಸದಲ್ಲಿ ನರ್ಸರಿ ಶಾಲೆಗೆ ಹೋದೆ. ಇನ್ನೂ ನೆನಪಿದೆ. ಕಳಸದ ಒಂದು ಘಟನೆ ಇನ್ನೂ ನೆನಪಿದೆ: ಡ್ಯಾನ್ಸ್ ಮಾಡಲು ಸುತಾರಾಂ ಒಪ್ಪದೆಯೇ ಮೂತಿ ಊದಿಸಿಕೊಂಡು ಅತ್ತಿದ್ದು….. ಮರುದಿನ ಮಾತ್ರ ಡ್ಯಾನ್ಸ್ ಮಾಡಿದವರಿಗೆ ಕೊಟ್ಟಿದ್ದ ಬಾಚಣಿಗೆಯನ್ನು ನಾನೂ ಬಹುಮಾನವಾಗಿ ಗಿಟ್ಟಿಸಿದ್ದು….!
೧೯೭೧ರಲ್ಲಿ ನನ್ನ ಒಂದನೇ ಕ್ಲಾಸಿಗೆ ಸಾಕ್ಷಿಯಾದ ಈ ಶಾಲೆ ಈಗಲೂ ಎಷ್ಟು ವಿನಮ್ರವಾಗಿ ನಿಂತಿದೆ…… ಎಷ್ಟೋ ಜನರಿಗೆ ಈ ಶಾಲೆ ಏನೆಲ್ಲ ಕಲಿಸಿಕೊಟ್ಟಿದೆ…….. ನೆನೆಸಿಕೊಂಡರೆ ಅಬ್ಬಾ ಈ ಬದುಕೇ ಎನಿಸುತ್ತದೆ.
ಇಂಟರ್‌ನೆಟ್‌ನಲ್ಲಿ ಹೊಡಬಟ್ಟೆಯ ಬಗ್ಗೆ ಹುಡುಕಿದಾಗ ಅಚ್ಚರಿಯೆಂಬಂತೆ ಒಂದು ಸಾಕ್ಷರತಾ ಕೋಷ್ಟಕ ಸಿಕ್ಕಿತು. ಇದರಲ್ಲಿ ಓಡಿ ಮಜಾ….: ನನ್ನ ಅಪ್ಪನ ಊರಾದ, ಅರ್ಥಾತ್ ನನ್ನ ಹೆಸರಿನ ಹಿಂದೆ ಸೇರಿಕೊಂಡಿರುವ ಬೇಳೂರಿನ ಸಾಕ್ಷರತೆಗಿಂತ ಹೊಡಬಟ್ಟೆಯೇ ಮುಂದಿದೆ!
Village/ Wardwise Literacy Rate of Shimoga District As Per 2001 Census
Taluk |
Name of the Village |
Total Population |
Total Literates |
7+ Literates |
Literacy Percentage |
||||||||
Sorab | Hodabatte |
178 |
81 |
97 |
119 |
58 |
61 |
158 |
71 |
87 |
75.32 |
81.69 |
70.11 |
Sagar | Beluru |
892 |
442 |
450 |
578 |
330 |
248 |
794 |
397 |
397 |
72.80 |
83.12 |
62.47 |
ಸಹಜವೇ ಬಿಡಿ. ಒಂದು ಕಾಲದಲ್ಲಿ ಅವಿಭಜಿತ ಮೈಸೂರು ವಿಶ್ವವಿದ್ಯಾಲಯದ ಚದುರಂಗ ಪಡೆಯ ನಾಲ್ವರಲ್ಲಿ ೨೨ ಮನೆಗಳಿದ್ದ ಹೊಡಬಟ್ಟೆ ಗ್ರಾಮದಿಂದ ಮೂವರು ಆಯ್ಕೆಯಾಗಿದ್ದರು! ಕಡೆಮನೆ ಪ್ರಸನ್ನ, ಶೇಷಗಿರಿಯಣ್ಣನ ಮಗ ದಯಾನಂದ ಮತ್ತು ಕೃಷ್ಣಣ್ಣನ ಮಗ ನಾಗರಾಜ ಅಂತ ನನ್ನ ನೆನಪು…. ನಾಗರಾಜ ಒಂದು ದಿನ ಹಠಾತ್ತಾಗಿ ‘ವ್ಯಾನಿಶ್’ ಆಗಿಹೋದ ಎಂಬುದು ನಾನು ಈಗಲೂ ಒಪ್ಪಿಕೊಳ್ಳಲಾರದ ಘೋರ ವಾಸ್ತವ.
ಚದುರಂಗಕ್ಕೆ ಹೊಡಬಟ್ಟೆ ದೊಡ್ಡ ಹೆಸರು. ನಾನು ಅಲ್ಲಿದ್ದಾಗಲೇ ಹೊಡಬಟ್ಟೆ, ನಿಸರಾಣಿ, ಹೊರಬೈಲು, ದೊಡ್ಡೇರಿಗಳಲ್ಲಿ ಪ್ರಖ್ಯಾತ ಚೆಸ್ ಪಟುಗಳಿದ್ದರು. ಒಂಥರ ಕರ್ನಾಟಕದ ಚೆಸ್ ಬೆಲ್ಟ್ ಆಗಿತ್ತು. ಈಗಲೂ ಅಲ್ಲಿ ತುಂಬಾ ಜನ ಚೆಸ್ ಆಡ್ತಾ ಇರಬಹುದು ಆಂದ್ಕೋತೀನಿ… ನಾನು ಚೆಸ್ ಕಲಿತದ್ದೇ ಹೊಡಬಟ್ಟೆಯ ಮನೆಗಳ ಕಟ್ಟೆಮೇಲೆ ಜನ ಚೆಸ್ ಆಡುವುದನ್ನು ನೋಡಿ ನೋಡಿ… ನೋಡಿ ನೋಡಿ ಚೆಸ್ ಕಲಿತ ಆ ಬಾಲ್ಯ ಎಲ್ಲಿ…. ಎಷ್ಟೋ ಕೇಳಿದರೂ, ಸಂಗೀತ ಕಲಿಯಲಾಗದ ಈ ಪ್ರೌಢತೆ ಎಲ್ಲಿ!!
ಹೊಡಬಟ್ಟೆಯ ಜನ, ಆಗಿನ ಎಲ್ಲ ಹಳ್ಳಿಗಳಂತೆ ಸಂಸ್ಕೃತಿ ಪ್ರಿಯರು. ಭಾಗವತದ ಖಯಾಲಿಯನ್ನೇ ವೃತ್ತಿಯಾಗಿ ಮಾಡಿಕೊಂಡವರೂ ಅಲ್ಲಿದ್ದಾರೆ. ಭೈರಪ್ಪನವರ ಕಾದಂಬರಿಗಳನ್ನು ಓದಿ ವಿಮರ್ಶಿಸುವ ಸಾಹಿತ್ಯಪ್ರಿಯರೂ ಅಲ್ಲಿದ್ದಾರೆ. ದುರದೃಷ್ಟವಶಾತ್ ಇಂಥ ಸಾಹಿತ್ಯಪ್ರತಿಭೆ, ಶೇಷಗಿರಿಯಣ್ಣನ ಮಗ ಆನಂದ ಅಕಾಲದಲ್ಲೇ ನಿಧನನಾದ.
ಈ ಊರಿನಲ್ಲಿ ನಡೆಯುತ್ತಿದ್ದ ಮಂಗಳಕಾರ್ಯಗಳಲ್ಲೇ ನಾನು ನಡಹಳ್ಳಿ ಅನಂತಜ್ಜನನ್ನು ನೋಡಿದ್ದು. ಅವನ ಬಗ್ಗೆ ಈಗಾಗಲೇ ಉದಯವಾಣಿಯಲ್ಲಿ ಬರೆದಿದ್ದೇನೆ, ಓದಿ.
ಹೊಡಬಟ್ಟೆಯಲ್ಲೇ ನಾನು ಕಳೆದ ಶತಮಾನದ ಪ್ರಮುಖ ಸಂಪೂರ್ಣ ಸೂರ್ಯಗ್ರಹಣವನ್ನು ನೋಡಿದ್ದು. ೧೯೮೦ರ ಫೆಬ್ರುವರಿ ೧೬ರಂದು ಘಟಿಸಿದ ಈ ಘಟನೆ ನಾನು ಮರೆಯಲಾಗದ್ದು…. ಆಗ ಹೊಡಬಟ್ಟೆಯ ಮಣ್ಣಿನ ಬೀದಿಗಳಲ್ಲಿ ಜಾಲದಂತೆ ಹರಿದ ಕತ್ತಲಿನ ವಿನ್ಯಾಸ, ಹಕ್ಕಿಗಳು ಗೂಡು ಸೇರಿದ ವೈಚಿತ್ರ್ಯ…. ನನ್ನ ಮನಸ್ಸಿನಲ್ಲಿ ಕೂತುಬಿಟ್ಟಿದೆ.
ಕೆಲವು ವರ್ಷಗಳ ಹಿಂದೆ ಹೊಡಬಟ್ಟೆಗೆ ಹೋದಾಗ ಕಂಡ ಸೈಕಲ್ ಓಡಿಸುತ್ತಿದ್ದ ಆನಂದನ ಮಗ, ಪಕ್ಕದ್ಮನೆ ಹರಿಯಪ್ಪಣ್ಣನ ಮೊಮ್ಮಗಳ ಚಿತ್ರಗಳನ್ನು ಕ್ಲಿಕ್ಕಿಸಿದ್ದು ಈಗ ಕಂಪ್ಯೂಟರಿನಲ್ಲಿ ಕಂಡಾಗ ಇವೆಲ್ಲ ನೆನಪಾಯ್ತು…. ಅವತ್ತು ರಂಗನಾಥರ ಕ್ಯಾಮೆರಾ ಒಯ್ದಿದ್ದೆ….
ಈ ನೆನಪುಗಳೆಲ್ಲ ಒಂಥರ ಕಪ್ಪು ಬಿಳುಪು ಚಿತ್ರದ ಹಾಗೆ ಬಂದು ಹೋಗುತ್ತಿವೆ…… ಹೊಡಬಟ್ಟೆಯ ಜೊತೆಗಿನ ಸಂಬಂಧಗಳೆಲ್ಲ ಕಳಚಿಬಿದ್ದಿರೋವಾಗ…. ಹೊಡಬಟ್ಟೆಗೂ ನನಗೂ ಇರುವ ಸಂಬಂಧವೇನು ಎಂದೆಲ್ಲ ಪ್ರಶ್ನಿಸಿಕೊಳ್ಳುವಾಗ….. ಇವೆಲ್ಲ ಬರೆಯಬೇಕಾಗಿತ್ತೆ ಅನ್ನಿಸುತ್ತೆ….. ಆದರೆ ಈ ನೆನಪು ಬಿಡಬೇಕಲ್ಲ…… ಮತ್ತೆ ಮತ್ತೆ ಹೊಯ್ಯುವ ಮಳೆಯ ಹಾಗೆ….
ಅಂದಿನ ಹೊಡಬಟ್ಟೆಯ ಸೋಗೆ ಮನೆಗಳ ಮೇಲೆ ಸುರಿಯುತ್ತಿದ್ಧ ವರ್ಷಧಾರೆ, ಅಂಗಳದಲ್ಲಿ ಬೆಳೆಯುತ್ತಿದ್ದ ತರಾವರಿ ಹೂವುಗಳು, ತರಕಾರಿಗಳು, ಭೂಮಿ ಹುಣ್ಣಿಮೆ ದಿನದಂದು ಪ್ರತೀ ತೋಟದಲ್ಲೂ ಸಿಗುತ್ತಿದ್ದ ಪ್ರಸಾದ ಮತ್ತು ಚಿಲ್ಲರೆ ಕಾಣಿಕೆ, ಬೇಸಗೆಯಲ್ಲಿ ಹಾರುತ್ತಿದ್ದ ಪೀಟ (ಡ್ರಾಗನ್ ಫ್ಲೈ) ಗಳನ್ನು ಕವೆಕೋಲಿನ ಬಲೆಯಲ್ಲಿ ಹಿಡಿದು ದಾರಕಟ್ಟುತ್ತಿದ್ದ ಕ್ಷಣಗಳು, ಆಟಕ್ಕೆ ಬೇಕಾದಷ್ಟೂ ಬೆಳೆಯುತ್ತಿದ್ದಂತೆ ಕಾಣುತ್ತಿದ್ದ ಜಗಲಿ, ಹೊಲೇರ ಬಯಲಾಟ ಮುಗಿದ ಮೇಲೆ ನಾನು ಮತ್ತು ನನ್ನ ಅಕ್ಕ ಮಾಡಿದ ನೂಲೊಲ್ಯಾಕ ಚೆನ್ನಿ ಡ್ಯಾನ್ಸ್, – ಎಲ್ಲ ದೃಶ್ಯಗಳೂ ಚಕಚಕನೆ ಬಂದುಹೋಗುತ್ತಿವೆ….
ನೆನಪುಗಳು ಧುಮ್ಮಿಕ್ಕಬಾರದು ಎಂದು ಕಾರಿನಿಂದ ಇಳಿಯದೇ ಮಗನಿಂದಲೇ ಹೊರಬೈಲಿನ ನನ್ನ ಶಾಲೆಯ ಫೋಟೋ ಹೊಡೆಸಿದೆ… ಅದನ್ನು ನೋಡುತ್ತಿದ್ದಂತೆ….
ಮತ್ತೆ ಮಳೆ ಹೊಯ್ಯುತಿದೆ…. ಎಲ್ಲ ನೆನಪಾಗುತಿದೆ……
1 Comment
very nice article