`ಸುದರ್ಶನ್, ನೀವು ಹೀಗೊಂದು ಲೇಖನ ಬರೆಯಬೇಕು’ ಎಂದು ನನ್ನ ಅನಾಮಿಕ ಗೆಳತಿಯೊಬ್ಬಳು ಕೆಲವು ತಿಂಗಳುಗಳ ಹಿಂದೆಯೇ ವಿನಂತಿಸಿಕೊಂಡಿದ್ದಳು. ಬೈಪೋಲಾರ್ ಡಿಸಾರ್ಡರ್ ಸಮಸ್ಯೆಯಿಂದ ಆಗಾಗ್ಗೆ ಆಸ್ಪತ್ರೆ ಸೇರುವ, ಆಗಾಗ್ಗೆ ಅತ್ಯಂತ ಕ್ರಿಯಾಶೀಲವಾಗಿ ಓಡಾಡುವ ಆ ಗೆಳತಿ ಎಷ್ಟೋ ಸಲ ಆತ್ಮಹತ್ಯೆಯ ಅಂಚನ್ನು ಮುಟ್ಟಿ ವಾಪಸಾಗಿದ್ದಾಳೆ. ಅಂಥ ಒಂದು ದುರ್ಭರ ಕ್ಷಣದಲ್ಲಿ ನಾನು ಅವಳಿದ್ದ ಆಸ್ಪತ್ರೆಗೆ ಹೋದಾಗ ಅವಳೇ ನನ್ನ ಹತ್ರ ಇದನ್ನೆಲ್ಲ ಒಂದಷ್ಟು ಹಂಚಿಕೊಂಡಿದ್ದಳು.
ಆತ್ಮಹತ್ಯೆಯ ಬಗ್ಗೆ ಹಲವು ಲೇಖನಗಳು ಬಂದಿವೆ; ಬರುತ್ತಲೇ ಇವೆ. ನಿನ್ನೆ ತಾನೇ ಈ ಕುರಿತು ಇನ್ನಾದರೂ ಒಂದಷ್ಟು ಬರೆದುಬಿಡಬೇಕು ಎಂದು ಯೋಚಿಸುತ್ತಿದ್ದೆ. ಇಂದು ಹಿಂದೂ ಪತ್ರಿಕೆಯಲ್ಲಿ ಬಂದ ವರದಿ ಓದಿದ ಮೇಲೆ ಎಷ್ಟಾದರೂ ಪರವಾಗಿಲ್ಲ, ಇವತ್ತೇ ಬರೆಯಬೇಕು ಎಂದು ನಿರ್ಧರಿಸಿದೆ. ಈ ಲೇಖನದಲ್ಲಿ ಬೇರಾವ ವರದಿಯ ಉಲ್ಲೇಖವೂ ಇರುವುದಿಲ್ಲ. ನಮ್ಮ ಸುತ್ತಮುತ್ತಲಿನ ಬದುಕಿನಲ್ಲೇ ಆತ್ಮಹತ್ಯೆಯ ಹುತ್ತ ಬೆಳೆದಿದೆ. ಅದನ್ನೇ ಒಡೆದುಹಾಕದಿದ್ದರೆ, ಪ್ರಪಂಚದಲ್ಲಿ ನಡೆಯುತ್ತಿರುವ ಸೈಕೋ ಅನಲಿಸಿಸ್‌ಗಳಿಂದ ಏನು ಪ್ರಯೋಜನ? ಆ ಗೆಳತಿ ಹೇಳಿದ ಕೂಡಲೇ ಬರೆದರೆ ಸರಿಯಲ್ಲ ಎಂಬ ಒಣ ಪ್ರತಿಷ್ಠೆಯಿಂದ ಇಷ್ಟು ದಿನ ತಳ್ಳಿದೆ. ಈ ಪುಟ್ಟ ಲೇಖನ ಅವಳಿಗೆ, ಮತ್ತು ಅವಳಂತೆಯೇ ಬದುಕಲು ಇಷ್ಟಪಟ್ಟೂ ಬದುಕಲಾರೆವು ಎಂದು ಸಂಕಟಪಡುತ್ತಿರುವ ನನ್ನ ಪ್ರಿಯ ಜೀವಗಳಿಗೆ….
ನನ್ನ ಬಾಲ್ಯದ ಕ್ಲಾಸ್‌ಮೇಟ್ ಸಾಗರದ ಬಿ ಸುರೇಶನಿಂದ ಹಿಡಿದು ಮೊನ್ನೆ ವ್ಯಂಗ್ಯಚಿತ್ರಕಾರ ಎಸ್ ವಿ ಪದ್ಮನಾಭ್‌ವರೆಗೆ ಹಲವರು ಪರಿಚಿತರೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದರೆ ಈ ಮಾನಸಿಕತೆಯು ನಮ್ಮ ಸುತ್ತಮುತ್ತಲೇ ದಶಕಗಳಿಂದ ಇದೆ ಎಂದಾಯಿತು. ಪ್ರತಿಯೊಂದೂ ಇಂಥ ಆತ್ಮಹತ್ಯೆಗೆ ಒಂದಲ್ಲ ಒಂದು ನಿರ್ದಿಷ್ಟ ಕಾರಣವಿರಬಹುದು. ಇನ್ನಷ್ಟು ಜನ ಇದೇ ಹಾದಿ ತುಳಿಯಲು ಇಂಥವರೇ ಕಾರಣ ಎಂದು ದೂಷಿಸುವುದನ್ನು ನಿಲ್ಲಿಸೋಣ. (ರೈತರ ಆತ್ಮಹತ್ಯೆ ಸರಣಿಗಳ ದುರಂತವನ್ನು ನಾನಿಲ್ಲಿ ಹೆಚ್ಚಿಗೆ ಬರೆಯುತ್ತಿಲ್ಲ). ಪ್ರತಿಯೊಂದು ಜೀವವೂ ಯಾವುದೋ ಒಂದು ಕಾರಣಕ್ಕಾಗಿ ತುಡಿಯುತ್ತದೆ; ಮಿಡಿಯುತ್ತದೆ. ಅವರೊಳಗೆ ಎಂತೆಂಥದೋ ಕಲರವಗಳು; ಒಳಚರ್ಚೆಗಳು, ಖಿನ್ನತೆಯ ಪರ್ವತಗಳು; ಇನ್ನು ಬದುಕಲಾರೆ ಎಂಬ ತೀವ್ರ ಅನಿಸಿಕೆ….. ಇಂಥ ಎಲ್ಲ ಮನಸ್ಸುಗಳಲ್ಲಿ ಇನ್ನಾದರೂ ಆತ್ಮಹತ್ಯೆಯ ಭಾವ ಆವರಿಸದಿರಲಿ ಎಂದು ಪ್ರಾರ್ಥಿಸುತ್ತೇನೆ.
ಇಂಥ ಖಿನ್ನತೆಯ ಕ್ಷಣಗಳನ್ನು ನಾನೂ ಹಾದು ಹೋಗಿದ್ದೇನೆ ಎಂದು ಹೇಳಿಕೊಳ್ಳಲು ಈಗ ಯಾವ ಹಿಂಜರಿಕೆಯೂ ಇಲ್ಲ. ಆಗ, ಹಿಂದೊಮ್ಮೆ ಇಂಥದ್ದೇ ಖಿನ್ನತೆಗೆ ಒಳಗಾಗಿದ್ದ ವ್ಯಕ್ತಿಯು ನನಗೆ ಖಿನ್ನತೆ ತಗ್ಗಿಸುವ ಮಾತ್ರೆಗಳನ್ನು ತಿಳಿಸಿದ್ದೂ ಇದೆ. ನಾನು ಎಂದೂ ಮಾತ್ರೆಗಳನ್ನು ತೆಗೆದುಕೊಳ್ಳಲಿಲ್ಲ. ಖಿನ್ನತೆಯು ನನ್ನ ಬದುಕನ್ನು ಒಳಗೆಳೆದುಕೊಳ್ಳುವುದಕ್ಕೆ ಬಿಡಲಿಲ್ಲ. ಖಿನ್ನತೆಯನ್ನು ತಗ್ಗಿಸಲು ನಾನು ಮಾಡಿದ್ದು ಒಂದೇ ಉಪಾಯ: ಕಾರಿನಲ್ಲಿ ಕುಳಿತು ಅಜೊಯ್ ಚಕ್ರವರ್ತಿಯವರ ಮಾಲ್‌ಕೌನ್ಸ್ ರಾಗದ ಒಂದು ತಾಸಿನ ಕ್ಯಾಸೆಟ್ಟನ್ನು (ಆಗಿನ್ನೂ ಕ್ಯಾಸೆಟ್ಟಿನ ಕಾಲ!) ಹಾಕಿ ಕೇಳಿದೆ. ಮತ್ತೆ ಮತ್ತೆ….. ಲೆಕ್ಕವಿಲ್ಲದಷ್ಟು ಕೇಳಿದೆ. ಅಜೊಯ್ ಚಕ್ರವರ್ತಿಯವರ ಆಲಾಪ, ಮಧ್ಯಲಯ, ತಾನ್‌ಗಳೆಲ್ಲವೂ ಇಲ್ಲಿಲ್ಲೇ ಇವೆ ಎಂದು ಊಹಿಸಿ ಕಾಯುವಷ್ಟು ಕೇಳಿದೆ. ಕ್ರಮೇಣ ನನ್ನ ಖಿನ್ನತೆ ಮರೆಯಾಯಿತು. ಅದಾದ ಮೇಲೆ ಎಂದೂ ಖಿನ್ನನಾಗಬಾರದು ಎಂದು ನಿರ್ಧರಿಸಿಕೊಂಡೆ. ಆದರೂ ಕೆಲವೊಮ್ಮೆ ದುಃಖ ಉಮ್ಮಳಿಸುತ್ತಿತ್ತು; ಅದನ್ನೆಲ್ಲ ಆದಷ್ಟೂ ಸಂಗೀತ ಕೇಳುವ ಮೂಲಕ ಪರಿಹರಿಸಿಕೊಳ್ಳಲು ಯತ್ನಿಸಿದೆ. ಈಗ ನಾನು ಸಮಸ್ಯೆಗಳಿಂದ, ಬದುಕಿನ ವಿಚಿತ್ರ ಬೆಳವಣಿಗೆಗಳಿಂದ ಪರಿಣಾಮಕ್ಕೇ ಒಳಗಾಗಿಲ್ಲ ಎಂದು ಹೇಳಲಾರೆ. ಆದರೆ ಬದುಕಿನಲ್ಲಿ ಖಿನ್ನತೆಯೆಂಬುದು ಒಂದು ಕ್ಷುದ್ರ ಭಾವ ಎಂದೂ ಗೊತ್ತಾಗಿದೆ. ಈ ಭಾವವು ನನ್ನನ್ನು ಆವರಿಸಿಕೊಳ್ಳುವುದಕ್ಕೆ ಬಿಡುವುದಿಲ್ಲ.
ದುಃಖಿತನಾಗುವುದು, ಖಿನ್ನನಾಗುವುದು ಎರಡೂ ಬೇರೆಯೇ. ನಿಮಗೆ ಯಾವುದೋ ವಿಷಯಕ್ಕೆ ಬೇಜಾರಾಗಬಹುದು; ತಪ್ಪಲ್ಲ; ಅಸಹಜವೂ ಅಲ್ಲ. ಅದೇ ದುಃಖವು ನಿಮ್ಮನ್ನು ದಿನದ ಯಾವ ಕೆಲಸಗಳನ್ನೂ ಆಡಲು ಬಿಡದೆ ಸಾವಿನ ಬಗ್ಗೆಯೇ ಚಿಂತಿಸುವಂತೆ ಮಾಡಿದರೆ ಅದು ಅಪಾಯಕಾರಿ. ಹಿಂದೊಮ್ಮೆ `ಉದಯವಾಣಿ’ಯ ನನ್ನ ಕಾಲಂ ಲೇಖನ ಓದಿದ ಒಬ್ಬಾತ `ಸರ್ ನಿಮ್ಮ ಲೇಖನ ಓದಿದ ಮೇಲೆ ನನ್ನ ಆತ್ಮಹತ್ಯೆಯ ಯೋಚನೆ ಕೈಬಿಟ್ಟೆ’ ಎಂದು ಬರೆದಿದ್ದನ್ನು ಕೆಲವು ಸಲ ಉಲ್ಲೇಖಿಸಿದ್ದೇನೆ. ಆತನ ಮದುವೆ ನಿಶ್ಚಯವಾದ ಮೇಲೆ ಕೆಲಸ ಹೋಗಿತ್ತು! `ಕೆಲ್ಸ ಬಿಟ್ರಾ ವರಿ ಮಾಡ್ಕೋಬೇಡಿ’ ಎಂಬ ನನ್ನ ಲೇಖನವನ್ನು ಓದಿದ ಆತ ಆತ್ಮವಿಶ್ವಾಸಕ್ಕೆ ಮರಳಿದ್ದ. ಖಿನ್ನತೆ ತಗ್ಗಿಸಲು ಕೊಡಬೇಕಾದ್ದು ನುಂಗುವ ಮಾತ್ರೆಯಲ್ಲ; ಅರಿಯುವ ಮಾತು.
ಹಾಗಾದರೆ ಸಾವಿನ ಚಿಂತೆಯನ್ನು ದೂರ ಮಾಡುವುದಾದರೂ ಹೇಗೆ? ಹಲವು ತಜ್ಞರು ಇದರ ಬಗ್ಗೆ ಈಗಾಗಲೇ ಆಳವಾದ ಲೇಖನಗಳನ್ನು ಬರೆದಿದ್ದಾರೆ. ನನ್ನ ಮಿತಿಯಲ್ಲಿ ಹೇಳುವುದಾದರೆ,
- ಸಮಸ್ಯೆಗಳನ್ನು ಮೀರುವುದೇ ಎಲ್ಲರ ಬದುಕೂ ಆಗಿದೆ. ಅದಕ್ಕೆ ಯಾರೂ ಹೊರತಲ್ಲ. ಸಮಸ್ಯೆಯನ್ನು ಆಪ್ತರೊಂದಿಗೆ ಹಂಚಿಕೊಳ್ಳುವುದು ತುಂಬಾ ಉತ್ತಮ ಪರಿಹಾರ.
- ಆರ್ಥಿಕ ಸಮಸ್ಯೆಗಳಿದ್ದರೆ ನೇರವಾಗಿ ಸಾಲ ಕೊಟ್ಟವರ ಬಳಿ ಮಾತನಾಡಿ; ಅಂಥ ಸಂದರ್ಭದಲ್ಲಿ ಸಾಲದಾತನಿಗೂ ಪರಿಚಯ ಇರುವ ಇನ್ನೊಬ್ಬ ಹಿರಿಯರನ್ನು ಕರೆದುಕೊಂಡು ಹೋಗಿ. ಕೆಲಸ, ಸಂಬಳ, ವರಮಾನ, ಸಾಲ, – ಇವುಗಳಿಂದ ಆತ್ಮಹತ್ಯೆ ಮಾಡಿಕೊಳ್ಳುವ ಯೋಚನೆ ಬಂದಿದ್ದರೆ ನೀವು ಸೋತಿರುವುದು ವ್ಯಾವಹಾರಿಕ ವಿಷಯಗಳಲ್ಲಿ ಮಾತ್ರ. ಇಂಥ ಎಲ್ಲ ವ್ಯಾವಹಾರಿಕ ಸಂಗತಿಗಳು ಯಾವಾಗಲೂ ಪರಿಹರಿಸಲೇಬಹುದಾದವು.
- ಪ್ರೇಮಭಗ್ನವಾದ ಸಂಗತಿಗಳಿದ್ದರೆ ಖಂಡಿತ ಕೂಡಲೇ ನಿಮ್ಮ ಆಪ್ತರೊಂದಿಗೆ ಚರ್ಚಿಸಿ; ನಿಮ್ಮ ನೋವನ್ನು ಹಂಚಿಕೊಳ್ಳಿ. ಆಪ್ತ ಸಲಹೆ ಕೊಡುವ ವ್ಯಕ್ತಿ ಸಂಸ್ಥೆಗಳನ್ನು ಸಂಪರ್ಕಿಸಿ (ನನ್ನ ಮಿತ್ರರೊಬ್ಬರು ಆಪ್ತ ಸಲಹೆ ನೀಡುತ್ತಾರೆ; ಹಾಗೆಯೇ ಆಪ್ತ ಸಲಹೆಗಾರರಾಗಲು ತರಬೇತಿಯನ್ನೂ ಉಚಿತವಾಗಿ ಕೊಡುತ್ತಾರೆ. ಆಸಕ್ತಿ ಇದ್ದರೆ ಅವರನ್ನು ಸಂಪರ್ಕಿಸಿ).
- ಬದುಕಿನಲ್ಲಿ ಇನ್ನೇನೂ ಉಳಿದಿಲ್ಲ ಎಂಬ ಖಿನ್ನತೆಯು ನಿಮ್ಮನ್ನು ಆವರಿಸಿದ್ದರೆ ನಿಲ್ಲಿ: ಯಾರ ಬದುಕೂ ಖಾಲಿಯಲ್ಲ. ಫುಟ್‌ಪಾತಿನಲ್ಲಿ ಮಲಗುವ ನಿರ್ಗತಿಕರೂ ಬದುಕಿಗಾಗಿ ಹಂಬಲಿಸುತ್ತಾರೆ. ನಾಳೆಯ ತುತ್ತೇನು ಎಂಬುದೇ ಗೊತ್ತಿಲ್ಲದವರೂ ಆತ್ಮವಿಶ್ವಾಸದಿಂದ ಬದುಕನ್ನು ಎದುರಿಸುತ್ತಾರೆ. ಅವರನ್ನು ನೋಡಿ. ಈ ಬದುಕನ್ನು ನಿಸರ್ಗವು ನಮಗೆ ಕೊಟ್ಟಿದೆ. ಅದೇ ಸಹಜವಾಗಿ ನಮ್ಮನ್ನು ತನ್ನೊಳಗೆ ಸೆಳೆದುಕೊಳ್ಳುವವರೆಗೆ ಇರುವದನ್ನೇ ಸಿಂಗರಿಸಿ ಬದುಕುವುದು ನಮ್ಮ ಸಹಜ ವರ್ತನೆಯಾಗಬೇಕು.
- ಆತ್ಮಹತ್ಯೆಯ ಹೊಸ ಸೂಚನೆಗಳು: ಫೇಸ್‌ಬುಕ್‌ನಲ್ಲಿ ಸಹಜವಾಗಿ ಇರುವವರು ಹಠಾತ್ತಾಗಿ ಖಿನ್ನತೆಯ ಸಂದೇಶಗಳನ್ನು ಬರೆಯತೊಡಗುತ್ತಾರೆ; ಇದನ್ನು ಅವರ ಮಿತ್ರರು/ ಕುಟುಂಬದ ಸದಸ್ಯರು ಕೂಡಲೇ ಗಮನಿಸಿ ಅವರನ್ನು ಸಂಪರ್ಕಿಸಬೇಕು. ಇಂಥ ಖಿನ್ನತೆಯ ಸಂದೇಶಗಳಿಗೆ ಸ್ಯಾಡ್ ಗುಂಡಿಯನ್ನು ಒತ್ತುವುದರಿಂದ ಏನೂ ಪ್ರಯೋಜನವಿಲ್ಲ; ಬದಲಿಗೆ ಅಪಾಯಕಾರಿಯಾಗಿ ಪರಿಣಿಸುತ್ತದೆ. ಅಂಥ ಪೋಸ್ಟ್‌ಗಳಿಗೆ ಕಾಮೆಂಟ್ ಹಾಕುವ ಬದಲು ನೇರವಾಗಿ ಅವರನ್ನು ಸಂಪರ್ಕಿಸಿ. ನನ್ನ ಈ ಸೂಚನೆಯನ್ನು ಎಲ್ಲರೂ ಗಮನಿಸಿ ಎಂದು ಒತ್ತಿ ಹೇಳುತ್ತಿದ್ದೇನೆ.ಆತ್ಮಹತ್ಯೆಯ ಬಗ್ಗೆ ಚರ್ಚೆ ಮಾಡುವವರು ಪ್ರಚಾರ ಮತ್ತು ಗಮನ ಬಯಸುತ್ತಾರೆ; ನಿಜಕ್ಕೂ ಆತ್ಮಹತ್ಯೆ ಮಾಡಿಕೊಳ್ಳುವವರು ಮೌನವಾಗಿದ್ದುಕೊಂಡೇ ತಮ್ಮ ನಿರ್ಧಾರ ಜಾರಿಗೊಳಿಸುತ್ತಾರೆ ಎಂಬ ಮಾತಿದೆ. ಇದೇನು ನಂಬುವಂಥದ್ದಲ್ಲ; ಆದರೆ ಖಿನ್ನತೆಯನ್ನು ಇನ್ನೊಬ್ಬರಿಗೆ ಹೇಳಿಕೊಳ್ಳದೇ ಇರುವುದನ್ನು ನಾನು ಕಂಡಿದ್ದೇನೆ. ಇದರ ಸುಳಿವು ಸಿಕ್ಕಿದರೂ ಸಾಕು, ಅಂಥವರ ಮಿತ್ರರು ಕೂಡಲೇ ಅವರನ್ನು ಮಾತಿಗೆಳೆಯಬೇಕು; ಗಮನಿಸಬೇಕು ಮತ್ತು ನಿಗಾ ವಹಿಸಬೇಕು.
- ಆತ್ಮಹತ್ಯೆ / ಖಿನ್ನತೆಯ ಯೋಚನೆ ಬಂದವರು ಈ ಲೇಖನ ಓದುತ್ತಿದ್ದರೆ, (ಅಂಥವರು ಇರದಿರಲಿ ಎಂದೇ ಪ್ರಾರ್ಥಿಸುತ್ತೇನೆ; ಆದರೂ) ದಯವಿಟ್ಟು ಒಂದು ಕ್ಷಣ ಯೋಚಿಸಿ: ನಿಮ್ಮ ಬದುಕನ್ನು ಕೊನೆಗಾಣಿಸಿದರೆ ಸಮಸ್ಯೆ ಕೊನೆಯಾಗುವುದಿಲ್ಲ; ಉಲ್ಬಣಿಸುತ್ತದೆ. ನೀವೇನೋ ಪಾರಾಗುತ್ತೀರಿ; ಆದರೆ ನಿಮ್ಮನ್ನು ಪ್ರೀತಿಸುವ ವ್ಯಕ್ತಿಗಳು ಜೀವನಪೂರ್ತಿ ದುಃಖಿತರಾಗುತ್ತಾರೆ. ಆದ್ದರಿಂದ ಈ ಕ್ಷಣವೇ ಅಂಥ ಯೋಚನೆಯನ್ನು ತೆಗೆದುಹಾಕಿ. ಈ ಲೇಖನವನ್ನು ನಾನು ಬರೆದಿರುವುದೇ ನಿಮಗಾಗಿ. ಖಂಡಿತ ನಿಮ್ಮ ಬದುಕನ್ನು ಮತ್ತೆ ಕಟ್ಟಿಕೊಳ್ಳಬಹುದು.
- `ಎಲ್ಲರಿಗೂ ಸಮಸ್ಯೆಯಾಗಿ ನಾನ್ಯಾಕೆ ಬದುಕಲಿ’ ಎಂದು ಪ್ರಶ್ನಿಸುವವರೂ ಇದ್ದಾರೆ. ಬದುಕಿನಲ್ಲಿ ನನ್ನಿಂದ ಹಿಡಿದು ಎಲ್ಲರೂ, ಒಂದಲ್ಲ ಒಂದು ಕಾಲಘಟ್ಟದಲ್ಲಿ ಒಬ್ಬರಲ್ಲ ಇನ್ನೊಬ್ಬರಿಗೆ ಸಮಸ್ಯೆಯಾಗಿಯೇ ಇದ್ದೇವೆ. ಅದು ಬದುಕಿನ ಸಹಜ ಹರಿವು. ಇನ್ನೊಬ್ಬರಿಗೆ ಸಮಸ್ಯೆ ಆಗುವುದನ್ನು ಕಡಿಮೆ ಮಾಡುವುದರಲ್ಲೇ ಸವಾಲಿದೆ; ಅದೇ ಬದುಕು ಕೂಡಾ.
- `ನನಗೆ ಖಿನ್ನತೆ ಆವರಿಸಿದೆ’ ಎಂದು ನೀವೇನೋ ಭಾವಿಸುತ್ತೀರಿ. ಆದರೆ ಅದನ್ನು ಸ್ಪಷ್ಟವಾಗಿ ವಿವರಿಸಿದ್ದೀರಾ? ಇನ್ನೊಬ್ಬರಿಗೆ ತಿಳಿಸಿ ಈ ಖಿನ್ನತೆಯು ಗಂಭೀರ ಸಮಸ್ಯೆಗಳಿಂದಲೇ ಉಂಟಾಗಿದೆ ಎಂಬುದನ್ನು ಖಚಿತಪಡಿಸಿಕೊಂಡಿದ್ದೀರಾ? ಅಥವಾ ನಿಮ್ಮೊಳಗೇ ವಿಚಾರಣೆ ನಡೆಸಿ ನೀವೇ ತೀರ್ಪುಕೊಟ್ಟುಬಿಟ್ಟಿದ್ದೀರಾ? ನಮ್ಮ ಖಿನ್ನತೆಯ ಅಸಲಿಯತ್ತನ್ನು ತೀರ್ಮಾನಿಸುವವರು ನಾವಲ್ಲ, ಗಮನಿಸಿ.
ಆ ನನ್ನ ಗೆಳತಿಯೂ ಈ ಲೇಖನ ಓದುತ್ತಿದ್ದಾಳೆ ಎಂಬ ಭರವಸೆ ನನಗಿದೆ. ಅವಳ ಜೀವನಪ್ರೀತಿ ಸಂಶಯಾತೀತ. ಅವಳೊಳಗೇ ಹಬ್ಬಿದ ಮನೋದೈಹಿಕ ರೋಗವೂ ಅವಳನ್ನು ಹೀಗೆ ಕಾಡುತ್ತಿದೆ. ನನ್ನ ಬಗ್ಗೆ ಅವಳಿಟ್ಟ ಅತೀವ ವಿಶ್ವಾಸಕ್ಕೆ ನಾನು ಋಣಿ. ಅವಳನ್ನು ನಾನು ಎಂದೂ ಮತ್ತೆ ಆಸ್ಪತ್ರೆಯಲ್ಲಿ ನೋಡದೆ, ಮನೆಯಲ್ಲೇ ನಗುನಗುತ್ತ ನೋಡುವಂತಾಗಬೇಕು. ಅದೇ ನನ್ನ ಪುಟ್ಟ ಕನಸು.
ಬನ್ನಿ, ಬದುಕೋಣ!