(ಬಿಟಿ ಬದನೆ ಬಗ್ಗೆ ಡಾ. ಎಸ್. ಶಾಂತಾರಾಂ ವಿಜಯಕರ್ನಾಟಕದಲ್ಲಿ ಕೊಟ್ಟ ಸಂದರ್ಶನ ಮತ್ತು ಅದಕ್ಕೆ ನಾನು ನೀಡಿದ ಪ್ರತಿಕ್ರಿಯೆಯನ್ನು ಮಿತ್ರಮಾಧ್ಯಮದಲ್ಲಿ ಓದಿದ್ದೀರಷ್ಟೆ? ಸದರಿ ಸಂದರ್ಶನಕ್ಕೆ ಪ್ರತಿಕ್ರಿಯೆಯಾಗಿ ಕಳಿಸಿದ್ದ, ಆದರೆ ಪ್ರಕಟವಾಗದೇ ಹೋದ ಇನ್ನೆರಡು ಪ್ರತಿಕ್ರಿಯೆಗಳನ್ನು ಆಯಾ ಲೇಖಕರು ನನಗೆ ಕಳಿಸಿಕೊಟ್ಟಿದ್ದಾರೆ. ಅವನ್ನು ಇಲ್ಲಿ ಪ್ರಕಟಿಸಲಾಗಿದೆ. ಪ್ರಸ್ತುತ ಲೇಖನ ಶ್ರೀ ಆನೆಕಟ್ಟೆ ವಿಶ್ವನಾಥರದು. ಇನ್ನೊಂದು ಲೇಖನ ಶ್ರೀ ಸಂತೋಷ ಕೌಲಗಿಯವರದು. ಓದಿ ಪ್ರತಿಕ್ರಿಯಿಸಿ. )
ನೀವು ಬಿಟಿ ತಳಿಗಳ ಬಗ್ಗೆ ಅದೆಷ್ಟು ಪ್ರೀತಿಯನ್ನು ಹೊಂದಿದ್ದೀರಿ, ನಿಜವಾಗಿಯೂ ಬಿಟಿ ತಳಿಗಳಿಗೆ ನಿಮ್ಮಂತಹ ಅಪಾರ ಪ್ರೀತಿಯ ಮನುಷ್ಯರು ಬೇಕು. ನೀವು ಆಗಾಗ ಬೆಂಗಳೂರಿಗೆ ಬಂದಾಗ ಹೀಗೆ ಬಿಟಿ ತಳಿಗಳ ಪರ ಮಾತನಾಡುತ್ತೀರಲ್ಲಾ, ಹಾಗಾಗಿ ಬಿಟಿ ತಳಿಗಳೆಂದರೆ ಶಾಂತಾರಾಮ್ ನಮಗೆ ನೆನಪಾಗುತ್ತಾರೆ. ನಿಮ್ಮನ್ನು ಬಿಟಿ ಶಾಂತಾರಾಮ್ ಎನ್ನಲು ಹರ್ಷವೆನಿಸುತ್ತದೆ. ಅಥವಾ ಕುಲಾಂತರಿ ಶಾಂತಾರಾಮ್ ಎಂದು ಹೇಳುವ ಮೂಲಕ ನಿಮ್ಮ ಬಿಟಿ ಪ್ರೀತಿಗೆ ಕೃತಘ್ನತೆಗಳನ್ನು ಸಲ್ಲಿಸುತ್ತೇವೆ.
ಕುಲಾಂತರಿ ತಳಿಗಳನ್ನು ನಾವು ನಿಮ್ಮನ್ನು ಒಪ್ಪಿಕೊಂಡಷ್ಟೆ ಒಪ್ಪಿಕೊಳ್ಳುತ್ತೇವೆ. ನೀವೆ ಬಿಟಿ; ಬಿಟಿ ಎಂದರೆ ನೀವೆ. ನನಗೆ ಗೊತ್ತಿರುವ ಪ್ರಕಾರ ಕುಲಾಂತರಿ ಎಂದರೆ ಹೀಗೆನಿಸುತ್ತದೆ. ನನ್ನ ಅಪ್ಪ ಅಮ್ಮ ಇಬ್ಬರೂ ಲೈಂಗಿಕ ಸುಖಪಟಿದ್ದರಿಂದ ನಾನು ಹುಟ್ಟಿದ್ದೇನೆ. ನನ್ನ ಅಪ್ಪ ಅಮ್ಮ ಯಾರೆಂದರೆ ಅವರ ಹೆಸರು ಹೇಳುತ್ತೇನೆ. ಇದು ಪ್ರಕೃತಿಯ ಸಹಜ ಕ್ರಿಯೆ. ನನ್ನ ಅಪ್ಪ ದಡ್ಡ ಅದಕ್ಕಾಗಿ ನಾನೂ ದಡ್ಡ ತೋಟ ಮಾಡುತ್ತಿದ್ದೇನೆ. ನಾನು ನಿಮ್ಮ ಹಾಗೆ ಅಮೇರಿಕಾಕ್ಕೆ ಹೋಗಿ ದೊಡ್ಡ ದೊಡ್ಡ ಕೆಲಸ ಮಾಡಲು ಸಾಧ್ಯವಾಗಲಿಲ್ಲ. ನನ್ನ ಅಮ್ಮನಿಗೆ ತುಂಬಾ ತಾಳ್ಮೆ, ನನಗೂ ಒಂದೀಟು ಅದು ಬಂದಿದೆ.
ಈಗ ಕುಲಾಂತರಿ ವಿಜ್ಞಾನಕ್ಕೆ ಬಂದರೆ; ನನ್ನ ಅಪ್ಪನ ದಡ್ಡತನಕ್ಕೆ ಕಾರಣವಾದ ಜೀನ್‌ಅನ್ನು ತೆಗೆದು ಅಪಾರ ಬುದ್ಧಿವಂತಿಕೆಯ ಮತ್ಯಾರದೊ ಬುದ್ದಿವಂತಿಕೆಗೆ ಕಾರಣವಾಗುವ ಜೀನ್ ಸೇರಿಸಿ ನನ್ನನ್ನು ಬುದ್ದಿವಂತನನ್ನಾಗಿಸಿ ಸೃಷ್ಟಿಸುವುದು ಕುಲಾಂತರಿ ತಂತ್ರಜ್ಞಾನ. ಇಂತಹ ಬುದ್ಧಿವಂತನಿಗೆ ಇಬ್ಬರು ಅಪ್ಪಂದಿರು ಒಬ್ಬಳೇ ಅಮ್ಮ! ನೀವು ಬುದ್ಧಿವಂತರು ಸ್ವಾಮಿ, ಕುಲಾಂತರಿ ಶಾಂತರಾಮ್‌ಅವರೆ, ನಿಮ್ಮ ಅಪ್ಪ ಒಬ್ಬರೇ ಅಥವಾ ?……
ಕ್ಷಮಿಸಿ, ನಿಮಗೆ ಅದೆಷ್ಟು ಸಿಟ್ಟು ಬಂದಿದೆ ಎಂದು ನನಗೆ ಗೊತ್ತು. ಇಂತಹ ಪ್ರಶ್ನೆಯಿಂದ ನಿಮ್ಮನ್ನು ಕುಪಿತಗೊಳಿಸುವುದು ನನ್ನ ಉದ್ದೇಶವಲ್ಲ. ಬದಲಾಗಿ ನಿಮ್ಮ ಮಾತುಗಳನ್ನು ಈಗ ಬಿಡಿಸಿ ನೋಡೋಣ. ನೋಡಿ, ನಮ್ಮ ಅಪ್ಪ ಅಮ್ಮನ ಬಗ್ಗೆ ಯಾರಾದರೂ ಏನಾದರೂ ಹೇಳಿದರೆ ಅದೆಷ್ಟು ಸಿಟ್ಟು ಬರುತ್ತೆ ಗೊತ್ತಾ? ಅಂತದ್ದೇ ಭಾವನಾತ್ಮಕ ಸಂಬಂಧವನ್ನು ನಾವು ನಮ್ಮ ಮನೆ, ತೋಟ, ಹೊಲ,ಗದ್ದೆ ಊರು ಕೇರಿ ಮತ್ತು ಬೀಜದ ಬಗ್ಗೆ ಹೊಂದಿದ್ಧೇವೆ. ಹಾಗಾಗಿ ನಿಮ್ಮಂತಹ ಸೋಕಾಲ್ದ್ ವಿಜ್ಞಾನಿಗಳ ಮಾತುಕೇಳಿ ಆತ್ಮಹತ್ಯೆಯ ಹಂತ ತಲುಪಿದರೂ ಭೂಮಿಗೆ, ಬೀಜಕ್ಕೆ ನಮಸ್ಕರಿಸಿ ಇನ್ನೂ ಕೃಷಿ ಮಾಡುತ್ತಿದ್ದೇವೆ. ಬೀಜ ಎಂದರೆ ಅದೊಂದು ಹುಟ್ಟುವ ವಸ್ತು ಮಾತ್ರವಲ್ಲ ಎಂದು ನಂಬಿದ್ದೇವೆ. ನಿಮಗೆ ಬೀಜವೆಂದರೆ ವಂಶವಾಹಿಗಳು ಮಾತ್ರ ಆದರೆ ನಮಗೆ? ಬೀಜವೆಂದರೆ ಬದುಕು, ಭವಿಷ್ಯ, ಪುರಾತನರು ಬಿಟ್ಟುಹೋದ ಉಡುಗೊರೆ, ನೆನಪು ಎಲ್ಲವೂ ಹೌದು. ನಮ್ಮ ಬದುಕು ಭವಿಷ್ಯ ಎಲ್ಲವನ್ನೂ ಬಹುರಾಷ್ಟ್ರೀಯ ಕಂಪನಿಗಳಿಗೆ ಮಾರಾಟಕ್ಕಿಟ್ಟಿಲ್ಲ. ಅವು ನಮ್ಮ ರಕ್ತದೊಳಗೂ ಇವೆ. ಪ್ರತಿ ಉಸಿರಿನಲ್ಲೂ ಇವೆ. ಇದೆಲ್ಲವನ್ನೂ ನೀವು ಮರೆತು ನಮ್ಮ ನಾಟಿ ಬೀಜಗಳ ಬಗ್ಗೆ ಅಷ್ಟೋಂದು ಕೀಳಾಗಿ ಹೇಳಿರುವುದು ತರವೇ? ಇದನ್ನೆಲ್ಲಾ ನೀವು ಒಪ್ಪುವುದಿಲ್ಲ ಬಿಡಿ. ನೀವು ಕುಲಾಂತರಿ ವಿಜ್ಞಾನಿಗಳು.
ಒಂದು ಕತೆ ಹೇಳ್ತೆನೆ ಕೇಳಿ, ನಮ್ಮೂರಲ್ಲಿ ಒಂದೇ ಒಂದು ಬೀಜದ ಹೋರಿ ಇದೆ. ಆ ಹೋರಿ ಹಿಡಿಯೋಕೆ ಆಗೋದಿಲ್ಲ. ಬುಸುಗುಡುತ್ತೆ. ಹೋರಿ ಸಾಕಿದ ಮಲ್ಲಯ್ಯ ಎರಡು ಹಗ್ಗ ಹಾಕಿ ಹೋರಿ ಹಿಡಿತಾನೆ. ಅದರ ಕೆಲಸ ಒಂದೇ ಚೆನ್ನಾಗಿ ತಿನ್ನೋದು ಪ್ರತಿದಿನ ಹಸುಗಳ ಮೇಲೆ ಹಾರೋದು. ಇದರ ಸುಖ ಮತ್ಯಾರಿಗೆ ಇದೆ. ಆದರೂ ಯಾಕೆ ಸಿಕ್ಕಿದವರನ್ನೆಲ್ಲಾ ಹಾಯುತ್ತೆ ಗೊತ್ತಾ? ಅದು ಲೈಂಗಿಕ ಕ್ರಿಯೆ ಕುರಿತ ಹಪಹಪಿ ಮಾತ್ರವಲ್ಲ. ತನಗೆ ಬೀಜ ಇರುವ ಕಾರಣಕ್ಕಾಗಿ ಪ್ರತಿಭಟಿಸುತ್ತದೆ. ನಾವು ಪ್ರಾಣಿಗಳನ್ನು ಸಾಕಿ ನಮ್ಮ ಹಿತಕ್ಕೆ ದುಡಿಸಿಕೊಳ್ಳುತ್ತೇವೆ. ಈ ರೀತಿಯ ಯಾವ ಹಕ್ಕನ್ನೂ ಪ್ರಕೃತಿ ನಮಗೆ ನೀಡಿಲ್ಲ. ಅದಕ್ಕಾಗಿ ಬೀಜದ ಹೋರಿ ಪ್ರತಿಭಟಿಸುತ್ತದೆ. ಸ್ವಾತಂತ್ರಕ್ಕಾಗಿ ಹವಣಿಸುತ್ತದೆ.
ಅದೇ ಹೋರಿಯ ಬೀಜಗಳನ್ನು ಕತ್ತರಿಸಿದರೆ? ಹೋರಿ ಸುಮ್ಮನಾಗುತ್ತದೆ. ಹೋರಿಯ ಸ್ವತಂತ್ರವಾದ ಆಲೋಚನಾ ಕ್ರಮಗಳು ಸತ್ತು ಹೋಗುತ್ತವೆ. ಗುಲಾಮಗಿರಿಗೆ ಶರಣಾಗುತ್ತದೆ. ಸಾಕುವವನೇ ಶ್ರೇಷ್ಠ ಎನ್ನುತ್ತದೆ. ನಾವು ರೈತರೂ ಹಾಗೆಯೇ, ನಮ್ಮಲ್ಲಿರುವ ದೇಸಿ ಬೀಜಗಳು ಇರುವುದರಿಂದಲೇ ಸ್ವತಂತ್ರವಾದ ಆಲೋಚನೆಗಳಿವೆ. ಪ್ರತಿಭಟಿಸುವ ಶಕ್ತಿ ಇದೆ. ನಾವು ಷಂಡರಲ್ಲ; ಶಕ್ತಿವಂತರು. ನಮ್ಮ ಈ ಬೀಜಗಳನ್ನು ಕತ್ತರಿಸಲು ಬರುವವರನ್ನು ಸುಮ್ಮನೆ ಬಿಡುವುದೂ ಇಲ್ಲ. ಇಲ್ಲಿನ ಬೀಜ ವೈವಿಧ್ಯ ನಾಶವಾದ ಬಳಿಕ ನೀವು ಸೃಷ್ಟಿಸಲಿರುವ ಅಪಾಯದ ಅರಿವಿದೆ. ನಿಮ್ಮ ಬಿಟಿ ನಾವೆನಾದರೂ ಬೆಳೆದು ತಿಂದರೆ ಮುಂದೊಂದು ದಿನ ನಾವೂ ಗಂಡಸರು ಹತವೀರ‍್ಯರಾಗಿ (ಆಸ್ಟ್ರಿಯಾದ ವಿಜ್ಞಾನಿಗಳು ಈಗಾಗಲೇ ಅದರ ಬಗ್ಗೆ ಹೇಳಿದ್ದಾರೆ) ನಿಮ್ಮಂತಹ ಬಿಟಿ ಗಂಡಸರ ವೀರ‍್ಯತಂದು ಮಕ್ಕಳನ್ನು ಪಡೆಯಬೇಕಾಗಬಹುದು.
ನಾವು ಹೀಗೆ ಮಾತನಾಡುವುದನ್ನೇ ನೀವು ದಡ್ಡವ್ಯಾಖ್ಯಾನಗಳು ಎಂದಿದ್ದೀರಿ. ನಮಗೆ ವಿಜ್ಞಾನದ ’ವಿ’ ಗೊತ್ತಿಲ್ಲ ಎಂದಿದ್ದೀರಿ. ನಮ್ಮ ಜೊತೆ ಚರ್ಚಿಸಲು ನಾವು ನಿಮಗೆ ಸಮಾನರಲ್ಲ ಎಂದಿದ್ದೀರಿ. ನೀವು ಕುಲಾಂತರಿ ವಿಜ್ಞಾನಿಗಳು ಕಂಡಿರುವುದಷ್ಟೆ ವಿಜ್ಞಾನವೆ? ಹಾಗಾದರೆ ನೀವು ಪ್ರಕೃತಿಗಿಂತ ಮಿಗಲೇ? ಎಲ್ಲಿ, ಯಾರನ್ನು, ಹೇಗೆ, ಏಕೆ ಹುಟ್ಟಿಸಬೇಕು ಎಂದು ಪ್ರಕೃತಿಗೆ ಚೆನ್ನಾಗಿ ಗೊತ್ತು; ಹಾಗೆ ಹುಟ್ಟಿಸುತ್ತದೆ. ನಿಮ್ಮ ಜೀನ್ ಕನ್ನಡಕ ತೆಗೆದಿಟ್ಟು ಬರಿಗಣ್ಣಿನಿಂದ ಮಕ್ಕಳ ಮನಸ್ಸಿನಿಂದ ಪ್ರಕೃತಿಯನ್ನು ನೋಡಿರಿ. ಎಲ್ಲವನ್ನೂ ಅದು ಹೇಳುತ್ತದೆ. ಅದು ಹೇಳುವುದನ್ನೆಲ್ಲಾ ಕೇಳುವ, ಅದು ತೋರಿಸಿದ್ದನ್ನೆಲ್ಲಾ ನೋಡುವ ತಾಕತ್ತು ನಮಗ್ಯಾರಿಗೂ ಇಲ್ಲ. ಮಣ್ಣಿನಲ್ಲಿ ಒಂದು ಪೋಷಕಾಂಶ ಕಡಿಮೆಯಾದರೆ ಒಂದು ಕಳೆ ಜಾಸ್ತಿಯಾಗುತ್ತದೆ. ಒಂದು ಕೀಟವನ್ನು ಕೊಂದರೆ ಎರೆಹುಳುಗಳ ಸಂಖ್ಯೆ ಕಡಿಮೆಯಾಗುತ್ತದೆ. ಒಂದು ಮಳೆ ಬಂದರೆ ಕಾಳು ಗಟ್ಟಿಯಾಗುತ್ತದೆ. ಮತೊಂದು ಮಳೆ ಬಂದರೆ ನಮಗೇ ರೋಗ ಬರುತ್ತದೆ. ಹೀಗೆ ಅರ್ಥವಿದ್ದೂ ನಮಗೆ ಅರ್ಥವಾಗದ ಭಾಷೆ ಪ್ರಕೃತಿಯದು. ಇಲ್ಲಿನ ಗಣಿತವು ನಮ್ಮ ಗುಣಿತಕ್ಕೆ ಅಗಣಿತವಾದದ್ದು. ಹೀಗೆ ಅಗಾಧವಾದ, ಅನಂತವಾದ ಪ್ರಕೃತಿಯಲ್ಲಿ ನಾವೊಂದು ಹುಳ. ಅಂಥದ್ದರಲ್ಲಿ ಕೇವಲ ಜೀನ್‌ಗಣ್ಣಿನಿಂದ ನೋಡಿದ್ದೇ ವಿಜ್ಞಾನ ಎನ್ನುವ ನಿಮ್ಮ ಕ್ಲುಪ್ತ ಮನೋಸ್ಥಿತಿಗೆ ದೊಡ್ಡ ಪ್ರಚಾರಗಳನ್ನು ಕೊಟ್ಟು ಕೊಂಡು ಪೋಸ್ ನೀಡುವ ನಿಮ್ಮಂತಹವರು ನಮಗೆ ಹಿತವಚನ ಹೇಳಬೇಕಾಗಿಲ್ಲ.
ಬಿಟಿ ಸೇವಿಸಲು ಸುರಕ್ಷಿತವೇ?
ನೀವು ಬಿಟಿಯನ್ನೇ ತಿಂದು ಸುಮಾರು ವರ್ಷಗಳಿಂದ ಬದುಕುತ್ತಿದ್ದೀರಂತೆ, ನೀವು ಪರಮಾತ್ಮನಂತೆ ಕಣ್ರೀ. ವಿಷಕಂಠ ಸ್ವಾಮಿ. ವಿಷ ಕುಡಿದೂ ಬದುಕುತ್ತೀರ. ಜನಸಾಮಾನ್ಯರು ನಾವು ಹಾಗೇನಾದರೂ ವಿಷ ಕುಡಿದರೆ ಟಿಕೇಟ್ ಗ್ಯಾರಂಟಿ. ಸ್ವಾಮಿ ನಮ್ಮ ಆಹಾರ ಸಂಸ್ಕೃತಿಗೆ ಸಹಸ್ರಾರು ವರ್ಷಗಳ ಇತಿಹಾಸವಿದೆ. ನಮ್ಮ ದೇಹವು ನಮ್ಮ ಆಹಾರ ಸಂಸ್ಕೃತಿಗೆ ತಕ್ಕಂತೆ ವಿಕಾಸ ಹೊಂದಿದೆ. ನಮ್ಮ ಕರುಳು ಕೂಡ ಹಾಗೆ ನಮ್ಮ ಆಹಾರ ಕ್ರಮವನ್ನು ಅನುಸರಿಸಿ ವಿಕಾಸ ಹೊಂದಿದೆ. ಈಗ ದಿಢೀರನೆ ಸರಿಯಲ್ಲದ ತಪ್ಪು ಗುಣಿತಾಕ್ಷರ ಆಹಾರವನ್ನು ತಿಂದರೆ ಪರಿಣಾಮವನ್ನು ನಾವು ಈಗ ಊಹಿಸಲೂ ಸಾಧ್ಯವಿಲ್ಲ. ’ಸುರಕ್ಷಿತವೇ’ ಎಂಬ ಪ್ರಶ್ನೆಗೆ ಪ್ರಕೃತಿಯೇ ಉತ್ತರ ಹೇಳುತ್ತದೆ ಕಾಯುತ್ತಿರಿ.
ನೋಡಿ, ಬಿಟಿ ಬದನೆಯ ಎಲೆ ತಿಂದು ಹುಳ(ಕೀಟ) ಸಾಯುತ್ತವೆ. ಆ ಸತ್ತ ಕೀಟ ತಿಂದ ಕಪ್ಪೆ, ಹಾವು, ಮಿಡತೆ, ಹಕ್ಕಿ ಎಲ್ಲವೂ ಸಾಯುವುದಿಲ್ಲವೆ? ಅಥವಾ ಇದೆಲ್ಲಾ ನೀವು ಬಲ್ಲಿರಾ? ಪ್ರಕೃತಿಯಲ್ಲಿ ನೀವು ಸೃಷ್ಟಿಸಲು ಹೊರಟಿರುವ ಅಪಾಯದ ಕಲ್ಪನೆ ನಿಮಗಿದೆಯೆ? ಮುಂದೊಂದು ದಿನ ಬಿಟಿಯ ಭೀಕರ ಅಪಾಯಗಳನ್ನು ಜನರು ಕಂಡಾಗ ನಿಮಗೆ ಶಾಪ ಹಾಕಿ ಸಾಯುತ್ತಾರೆ.
ನಿಮ್ಮ ಮುಖದ ಬಣ್ಣ ತೊಳೆದು ಕೊಂಡು ಬನ್ನಿ. ಒರಿಜಿನಲ್ ಶಾಂತರಾಮ್ ನಮಗೆ ಬೇಕು. ನಾವು ಮಾಡಬೇಕಾಗಿರುವ ಕುಲಾಂತರಿ ಬೇರೆಯೇ ಇದೆ. ಮನುಷ್ಯರ ನಡುವಿನ ಕುಲದ ಅಂತರವನ್ನು ಕಡಿಮೆ ಮಾಡೋಣ. ನಮಗೆ ದಲ್ಲಾಳಿ ಶಾಂತಾರಾಮ್ ಖಂಡಿತ ಬೇಡ. ನಮ್ಮ ರೈತರನ್ನು ಕಂಪನಿಗೆ ತಲೆಹಿಡಿದು ಕೊಡಬೇಡಿ. ಮೊದಲನೇ ದಿನ ಶಾಲೆಗೆ ಹೋಗಲು ಮಗು ಹಟ ಮಾಡುವಂತೆ ಹಟ ಮಾಡಬೇಡಿ. ಬನ್ನಿ. ಪ್ರಕೃತಿಯ ಎದುರು ಒಂದು ಹುಳವಾಗಿ ತುಂಬಾ ಸಿನ್ಸಿಯರ್ ಸ್ಟೂಡೆಂಟ್ ತರ ಮೊದಲನೆ ಬೆಂಚ್‌ನಲ್ಲೆ ಕುಳಿತು ಪ್ರಕೃತಿ ಹೇಳುವ ಹೊಸ ಪಾಠಗಳನ್ನು ಕಲಿಯೋಣ. ಫುಕವೋಕಾ ಗೆಸ್ಟ್ ಲಕ್ಚೆರ್ ಆಗಿ ಬರ‍್ತಾ ಇದಾರೆ. ಅಜ್ಜ, ಅಜ್ಜಿಯರ ಕೃಷಿ ಅನುಭವದ ಮಾತುಗಳನ್ನು ಆಲಿಸೋಣ. ನಿಜವಾದ ಭಾರತೀಯ ಕೃಷಿ ದರ್ಶನವಾಗುತ್ತದೆ. ಅದೇನೇ ಇರಲಿ ನಮ್ಮ ಬಿಟಿ ವಿರುದ್ದದ ಹೋರಾಟಕ್ಕೆ ಮತ್ತಷ್ಟು ಕಿಚ್ಚು ಹಚ್ಚಿಸಿದ್ದಕ್ಕೆ ನಿಮಗೂ ಥ್ಯಾಂಕ್ಸ್.
ಇಂತಿ ನಿಮ್ಮ….
ಆನೆಕಟ್ಟೆ ವಿಶ್ವನಾಥ