ವಿದ್ವಾನ್ ಎನ್ ರಂಗನಾಥ ಶರ್ಮಾ ನನಗೆ ರಂಗನಾಥಜ್ಜ ಆಗಬೇಕು. ಹತ್ತು ವರ್ಷಗಳ ಹಿಂದೆ ಅವರನ್ನು `ನೂತನ’ ಕಚೇರಿಯಲ್ಲಿ ಭೇಟಿಯಾಗಿದ್ದೆ. ಇವತ್ತು ಅವರ ಮನೆಗೆ ಹೋಗಿ ಅವರ ಜೊತೆ ಹತ್ತು ನಿಮಿಷ ಮಾತನಾಡಿ ಬಂದೆ. ಅವರನ್ನು ನಾನು ಭೇಟಿಯಾಗಿದ್ದೇ ಇದು ಎರಡನೇ ಸಲ! ನಾನು ಅವರ ತಂಗಿಯ ಮೊಮ್ಮಗ. ಅವರ ತಂಗಿ ಸೀತಮ್ಮ ಎಂದರೆ ನನ್ನ ತಂದೆಯ ತಾಯಿ.
ಬಾಲ್ಯದಲ್ಲೇ ತಂದೆಯನ್ನು ಕಳೆದುಕೊಂಡ ನನ್ನ ತಂದೆಯನ್ನು ಬಹಳ ವರ್ಷಗಳ ಕಾಲ ಸಾಕಿ ಸಲಹಿದವರು ರಂಗನಾಥಜ್ಜ. ಹಾಗೆಂದು ಅವರು ತುಂಬಾ ಸಲ ನೆನಪಿಸಿಕೊಳ್ಳುತ್ತಾರೆ. ಒಮ್ಮೆ ರಂಗನಾಥಜ್ಜನೊಂದಿಗೆ ಡಿವಿಜಿ ಮನೆಗೆ ಹೋಗಿ ಬಂದಿದ್ದನ್ನೂ ಅವರು ಹೇಳಿದ್ದರು. ನನ್ನದೇ ಬಿಗುಮಾನ ಮತ್ತು ಹೀಗೆ ಹೇಳಲಾಗದ ವಿಚಿತ್ರ ಹಿನ್ನೆಲೆಗಳ ಕಾರಣದಿಂದ ನಾನು ರಂಗನಾಥಜ್ಜನನ್ನು ನೋಡಲು ಹೋಗಿರಲಿಲ್ಲ. ಅವರಿಗೆ ನನ್ನ ಕುಟುಂಬದಿಂದ ಕೊಂಚ ಬೇಸರವೂ ಆಗಿದೆಯೇನೋ. ಅದನ್ನೆಲ್ಲ ಹೇಳಿಕೊಳ್ಳುವಂಥ ಕುಬ್ಜರು ಅವರಲ್ಲವೇ ಅಲ್ಲ. ಬಿಡಿ, ಅವೆಲ್ಲ ಗತಕಾಲದ ಸ್ಮರಣೆ. ಕೆಲವರಿಗೆ ವಿಸ್ಮರಣೆ!
ರಂಗನಾಥಜ್ಜ ನನ್ನ ಪರಿಚಯವನ್ನು ಮಾಡಿಕೊಂಡರು. ನಿನ್ನ ಹಾಗೇನೇ ಚೈತನ್ಯ ಹೆಗಡೇನೂ ಬೆಂಗಳೂರಲ್ಲಿ ಇದ್ದಾನೆ ಎಂದು ಉಲ್ಲೇಖಿಸಿದರು. ಸಂಬಳ ಎಷ್ಟು, ಮಗ ಏನ್ಮಾಡ್ತಾ ಇದಾನೆ ಎಂದೆಲ್ಲ ಕೇಳಿದರು. ಕಷಾಯ ತರಿಸಿ ಕೊಟ್ಟರು. ಪತ್ರಿಕೆಗಳಿಗೆ ಹೇಗೆ ವರಮಾನ ಬರುತ್ತದೆ ಎಂದು ವಿಚಾರಿಸಿ ತಿಳಿದರು. ಜಾಹೀರಾತುಗಳಿಂದ ಲಕ್ಷಗಟ್ಟಳೆ ಹಣ ಬರುವುದು ನಿಜವೇ ಎಂದು ಅವರಿಗೆ ಅನುಮಾನವೂ ಮೂಡಿತೇನೋ.
ಅವರ ಮಗ ಈಗ ಮೈಸೂರಿನಲ್ಲಿ ಮನೆ ಮಾಡಿದ್ದಾರೆ. ಎಲ್ಲರೂ ಈ ಭಾನುವಾರ ಅಲ್ಲಿಗೇ ಹೋಗುತ್ತಾರೆ.
ಭಾರತ ಕಂಡ ಮೇಧಾವಿ ಸಂಸ್ಕೃತ ವಿದ್ವಾಂಸರಲ್ಲಿ ವಿದ್ವಾನ್ ರಂಗನಾಥ ಶರ್ಮಾರದು ದೊಡ್ಡ ಹೆಸರು. ಅವರು – ಡಿವಿಜಿ ಅತ್ಯಂತ ಆಪ್ತ ಮಿತ್ರರಾಗಿದ್ದರು. ಡಿಜಿಜಿಯವರಂತೂ ತಮ್ಮ ಪುಸ್ತಕದಲ್ಲಿ ಹಲವು ಸಲ ಅಜ್ಜನನ್ನು ಉಲ್ಲೇಖಿಸಿದ್ದಾರೆ. `ರಂಗಾಭಿನಂದನ’ [೧೯೯೪]- ಇದು ಅಜ್ಜನ ಮೇಲಿನ ಗೌರವದಿಂದ ಅವರ ಆಪ್ತರು ಸೇರಿ ತಂದ ಸ್ಮರಣ ಸಂಚಿಕೆ. ಅದರಲ್ಲಿ ರಂಗನಾಥಜ್ಜನ ಪ್ರೌಢಿಮೆಯ ಆಯಾಮಗಳ ಪರಿಚಯವಾಗುತ್ತದೆ. ಈ ಪುಸ್ತಕದ ಹಿಂಪುಟದಲ್ಲಿ ಡಿವಿಜಿ ಹೇಳಿದ [ಹಿಂದೊಮ್ಮೆ ಬರೆದಿದ್ದು] ಮಾತು ಹೀಗಿದೆ:
ಶ್ರೀ ರಂಗನಾಥ ಶರ್ಮಾರವರು ಸಂಸ್ಕೃತ ವ್ಯಾಕರಣ ಶಾಸ್ತ್ರದಲ್ಲಿ ಆಳವೂ ವಿಶಾಲವೂ ಆಗಿ ಪ್ರಮಾಣವತ್ತಾಗಿರುವ ಪಾಂಡಿತ್ಯವನ್ನು ಸಂಪಾದಿಸಿರುವವರು. ಅವರ ಕನ್ನಡ ಭಾಷಾವಿದ್ವತ್ತೂ ಅಂಥಾದ್ದು. ಸಾಹಿತ್ಯದಲ್ಲಿ ಅವರು ಸಹೃದಯರಾಗಿ ಶೋಧನಶೀಲರಾಗಿ ಕಾವ್ಯಮರ್ಮವನ್ನು ಕಂಡು ತೋರಿಸಬಲ್ಲವರು. ಅವರು ಸದಾಚಾರ ನಿಷ್ಠರು, ಸರಳರು. ಒಂದು ಮಹಾಕಾವ್ಯದ ಅಂತರಂಗವನ್ನು ತಿಳಿಯಬೇಕಾದರೆ ಯಾವಮನಃ ಪ್ರಸಾದವೂ ತತ್ತ್ವನಿಷ್ಠೆಯೂ ಪ್ರಥಮ ಸಿದ್ಧತೆಗಳೋ ಅವೆರಡನ್ನೂ ಅವರಲ್ಲಿ ನಾನು ಕಂಡಿದ್ದೇನೆ. ಶ್ರೀ ರಂಗನಾಥ ಶರ್ಮಾರಲ್ಲಿ ನನಗೆ ಕಾಣುವ ಒಂದು ವಿಶೇಷ ಗುಣವೆಂದರೆ ಅವರ ಋಜ್ವರ್ಥ ಗ್ರಹಣ. ಅವರು ಒಣ ವಿದ್ವಾಂಸರಲ್ಲ. ವಿದ್ವದ್ರಸಿಕರು, ಆರ್ದ್ರಹೃದಯರು, ಅಳಬಲ್ಲವರು, ನಗಬಲ್ಲವರು, ಕನಿಕರಿಸಬಲ್ಲವರು, ಮತ್ತೊಬ್ಬರ ಹೃದ್ಭಾವವನ್ನು ಊಹಿಸಿ ಅನುಭವಿಸಬಲ್ಲವರು.
ರಂಗನಾಥಜ್ಜಂಗೆ ಈಗ ೯೬ರ ಹರೆಯ. ಅವರು ಮೈಸೂರಿನ ಹವಾಗುಣಕ್ಕೆ ಹೊಂದಿಕೊಳ್ಳುತ್ತಾರೆ; ತಮ್ಮ ಪ್ರಭೆಯ ಕಿರಣಗಳನ್ನು ಸೂಸುತ್ತಲೇ ಇರುತ್ತಾರೆ ಎಂಬುದಷ್ಟೆ – ನನ್ನ ನಿರೀಕ್ಷೆ.
ಇನ್ನು ಅವರ ಮೇರು ವ್ಯಕ್ತಿತ್ವ ಎಲ್ಲಿ, ನಾನೆಲ್ಲಿ? ಸುಮ್ಮನೇ ಕಳೆದುಹೋಗುತ್ತಿರುವ ಈ ಬದುಕಿನಲ್ಲಿ ರಂಗನಾಥಜ್ಜನ ಮಾತು, ನಗು, ಕರ್ತವ್ಯಪರತೆ, ಅಧ್ಯಯನಶೀಲತೆ – ಇವನ್ನೆಲ್ಲ ನೋಡಿ ಕಲಿಯಬೇಕಾದ್ದು ಈ ಜನ್ಮವನ್ನೂ ಮೀರೀತು.