‘ಮೊಹೆಂಜೋದಾರೋ’ ಸಿನೆಮಾ ಇನ್ನೇನು ಬಿಡುಗಡೆಯಾಗಲಿದೆ. ಹೃತಿಕ್ ರೋಶನ್, ಪೂಜಾ ಹೆಗ್ಡೆಯವರದೇ ಮುಖ್ಯಭೂಮಿಕೆಯಲ್ಲಿರುವ ಈ ಸಿನೆಮಾದಲ್ಲಿ ಇರುವುದು ಹರಪ್ಪಾ ನಾಗರಿಕತೆಯ ದೃಶ್ಯಗಳ, ಆ ಕಾಲದ ಕಲ್ಪಿತ ಬದುಕಿನ ನಡುವೆ ಹೆಣೆದ ಪ್ರೇಮಕಥೆ. ಮೊಹೆಂಜೋದಾರೋ ನಗರಕ್ಕಿಂತ ಪ್ರಾಚೀನವಾದ ನಗರವೇನಾದರೂ ಇದ್ದಿದ್ದರೆ?
ಇದೆ: ರಾಖಿಗಢಿ.
ಹರ್‍ಯಾನಾ ರಾಜ್ಯದ ಹಿಸಾರ್ ಜಿಲ್ಲೆಯಲ್ಲಿರುವ ರಾಖಿಗಢಿಯ ಅವಶೇಷಗಳಲ್ಲಿ ಸಮಾಧಿಯಲ್ಲಿ ಇಬ್ಬರು ಪ್ರೌಢ ವಯಸ್ಕ ಪುರುಷರ, ಒಬ್ಬ ಮಹಿಳೆಯ ಮತ್ತು ಒಂದು ಮಗುವಿನ ಅಸ್ಥಿಪಂಜರಗಳು ಸಿಕ್ಕಿವೆ. ಅದೇನು ಪ್ರೇಮಕಥೆಯೋ, ದುರಂತವೋ ನಮಗೆ ಗೊತ್ತಿಲ್ಲ. ಆದರೆ ಹರಪ್ಪಾದ ಮನುಷ್ಯರ ಮೂಳೆಗಳು ಸುಸ್ಥಿತಿಯಲ್ಲಿ ಸಿಕ್ಕಿವೆ. ಕಥೆ ಹೆಣೆಯಬೇಕಿಲ್ಲ; ಈ ದೇಹಗಳ ಸುತ್ತಮುತ್ತ ಅನಾವರಣಗೊಂಡ ದೈತ್ಯ ನಗರವೇ ನೂರಾರು ದೃಶ್ಯಗಳನ್ನು ಕಟ್ಟಿಕೊಡುತ್ತದೆ. ೨೫ ಲಕ್ಷ ಚದರ ಕಿಲೋಮೀಟರ್‌ಗಳ ವಿಶಾಲ ಪ್ರದೇಶದಲ್ಲಿ ಹಬ್ಬಿದ್ದ ಹರಪ್ಪಾ ನಾಗರಿಕತೆಯ ಮೊದಲ ಅಧ್ಯಾಯ ಇಲ್ಲೇ ಆರಂಭವಾಗಿತ್ತು ಎಂದು ಇತಿಹಾಸಕಾರರು ಹೇಳುತ್ತಿದ್ದಾರೆ. ಮೆಸೊಪೊಟಾಮಿಯ ಮತ್ತು ಈಜಿಪ್ಟ್ ನಾಗರಿಕತೆಗಳಿಗಿಂತ ನಾಲ್ಕು ಪಟ್ಟು ವಿಶಾಲ!
ರಾಖಿಗಢಿಯು ತನ್ನ ವ್ಯಾಪ್ತಿಯಲ್ಲಿ ಹರಪ್ಪಾ – ಮೊಹೆಂಜೊದಾರೋ (ಹ-ಮೊ) ನಗರಗಳನ್ನು ಮೀರಿಸಿದ ವಿಶಾಲ ನಗರಿ; ದೃಶದ್ವತೀ ನದಿಬದಿಯ ಫಲವತ್ತಾದ ನೆಲೆ; ಅಚ್ಚುಕಟ್ಟಾದ ರಸ್ತೆಗಳು-ಚರಂಡಿಗಳು, ಸಮುದಾಯ ಬಳಕೆಯ ಧಾನ್ಯದ ಕಣಜಗಳು, ಶಿಲಾಸಾಧನಗಳು, ಯಜ್ಞಕುಂಡಗಳು, ತಾಮ್ರದ ವಸ್ತುಗಳು, ಗೌರವಯುತ ಸಮಾಧಿಗಳು, ಮಣಿ ತಯಾರಿಕಾ ಘಟಕಗಳು, ಸುಟ್ಟ ಇಟ್ಟಿಗೆಯ ಗಟ್ಟಿ ಗೋಡೆಗಳು, ಸಿಂಧೂ ಮುದ್ರಿಕೆಗಳಲ್ಲಿ ಕಂಡುಬರುವ ಚಿತ್ರಗಳು-ಸಂಕೇತಾಕ್ಷರಗಳು, ಟೆರ್ರಾಕೋಟಾದಿಂದ ಮಾಡಿದ ನೂರಾರು ಆಟಿಕೆಗಳು, ಗೊಂಬೆಗಳು, ಬಗೆಬಗೆಯ ವಸ್ತುಗಳು- ಸಿಂಧೂ ನಾಗರಿಕತೆಯ ಎಲ್ಲ ಹೆಜ್ಜೆಗುರುತುಗಳನ್ನೂ ಬಿಚ್ಚಿಡುವ ಬೀಡು. ಇದು ಎಂಟು ಸಾವಿರ ವರ್ಷಗಳ ಹಿಂದಿನ ದೃಶ್ಯ. ಭಾರತದ ಗಡಿಯೊಳಗೇ ಇರುವ ಧೋಲಾವೀರ, ಕಲಿಬಂಗನ್ ಮತ್ತು ಲೋಥಲ್ ತಾಣಗಳ ಮಾಲೆಯಲ್ಲಿ ರಾಖಿಗಢಿ ದೊಡ್ಡ ಪದಕಹಾರ!
ಈಗ? ಕಣ್ಣು ಹಾಯಿಸಿದಷ್ಟೂ ಬೆರಣಿ ಗುಡ್ಡೆಗಳು, ಗೋಧಿಯ ಹೊಲಗಳು, ಕಚ್ಚಾ ರಸ್ತೆಯೂ ಇಲ್ಲದ ಹಳ್ಳಿಗಳು; ಎಲ್ಲೆಂದರಲ್ಲಿ ಜನರಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಅಡ್ಡಾಡುವ ಎಮ್ಮೆಗಳು; ಪುರಾತತ್ವ ಇಲಾಖೆಯ ಬೋರ್ಡನ್ನೇ ಜೋಕಾಲಿ ಮಾಡಿ ಜೀಕುವ ಮಕ್ಕಳು. ತಾಣದ ಸುತ್ತಮುತ್ತ ಕಬ್ಬಿಣದ ಬೇಲಿಯೇನೋ ಕಾಣಿಸುತ್ತದೆ; ಅದೂ ಒಂದು ಕುರುಹಾಗುವ ಹಂತದಲ್ಲಿದೆ.
`ಸಿಂಧೂ ಕಣಿವೆಯ ಇತಿಹಾಸ ೫೫೦೦ ವರ್ಷಗಳದ್ದಲ್ಲ, ೮೦೦೦ ವರ್ಷಗಳದ್ದು’ ಎಂಬ ಸುದ್ದಿ ಕೆಲವು ದಿನಗಳ ಹಿಂದೆ (೨೫ ಮೇ ೨೦೧೬) ಮಾಧ್ಯಮಗಳಲ್ಲಿ ಬಿತ್ತರವಾದಾಗ ರಾಖಿಗಢಿಗೆ ಮತ್ತೊಮ್ಮೆ ಪ್ರಸಿದ್ಧಿ ಬಂದಿದ್ದೇನೋ ನಿಜ. ೫೦ ವರ್ಷಗಳ ಹಿಂದೆಯೇ ಪತ್ತೆಯಾಗಿದ್ದರೂ ಬೆಳಕು ಕಾಣದ ಭವ್ಯ ಇತಿಹಾಸಕ್ಕೆ `ನೇಚರ್’ ಪತ್ರಿಕೆಯಲ್ಲಿ ಜಾಗ ದೊರೆತಾಗಲೇ ಗೌರವ! ನಮ್ಮ ಪಠ್ಯಪುಸ್ತಕಗಳಲ್ಲಿ `ರಾಖಿಗಢಿ’ ಉಲ್ಲೇಖವಾಗಲು ಇನ್ನೆಷ್ಟು ದಿನ ಕಾಯಬೇಕೋ? ಇತಿಹಾಸ ತಿರುಚಬಾರದು; ಆದರೆ ನಿಜ ಇತಿಹಾಸ ಬರೆಯಬಾರದೆ? `ಹರಪ್ಪಾ ನಾಗರಿಕತೆ’ ಶೀರ್ಷಿಕೆ ಬದಲಿಸಿ `ಸಿಂಧೂ- ಸರಸ್ವತೀ-ಘಗ್ಗರ್-ಹಕ್ರಾ-ದೃಶದ್ವತೀ ನಾಗರಿಕತೆ’ ಎಂಬ ಸತ್ಯವನ್ನು ನಮ್ಮ ಮಕ್ಕಳಿಗೆ ತಿಳಿಸಬಾರದೆ? ಕೊನೇಪಕ್ಷ `ಸಿಂಧೂ-ಸರಸ್ವತೀ ನಾಗರಿಕತೆ’ ಎಂದು ಘೋಷಿಸಬಾರದೆ?
ಹರಪ್ಪಾ ನಗರದ ವ್ಯಾಪ್ತಿ ೩೭೦ ಎಕರೆಗಳು. ಮೊಹೆಂಜೋದಾರೋ ನಗರದ ವ್ಯಾಪ್ತಿ ೬೨೦ ಎಕರೆಗಳು. ಏಳು ಬೃಹತ್ ದಿಬ್ಬಗಳಲ್ಲಿ ಹಬ್ಬಿರುವ ರಾಖಿಗಢಿಯ ವ್ಯಾಪ್ತಿ ೧೨೦೦ ಎಕರೆಗಳು! ಆದಿ ಹರಪ್ಪಾ, ಪ್ರೌಢ ಹರಪ್ಪಾ ನಾಗರಿಕತೆಯ ಒಟ್ಟು ಆರು ಹಂತದ ನಾಗರಿಕತೆಗಳ ಎಲ್ಲ ಕುರುಹುಗಳನ್ನೂ ರಾಖಿಗಢಿಯಲ್ಲಿ ಈಗಲೂ ಖಚಿತವಾಗಿ ನೋಡಬಹುದು. ಈಗಿರುವ ಹಳ್ಳಿಯ ನಡುವೆಯೇ ಈ ದಿಬ್ಬವಿದೆ. ಜಗತ್ತಿನ ಅತಿ ಪ್ರಾಚೀನ ಇತಿಹಾಸದ ಪದರಗಳು ಇಲ್ಲಿ ಬೀದಿ ಬದಿಯ ಗುಡ್ಡವಾಗಿವೆ.
`ಪ್ರಪಂಚದಲ್ಲೇ ಅತಿಪ್ರಾಚೀನ ನಗರವಾದ ರಾಖಿಗಢಿಯನ್ನು ಸಂಪೂರ್ಣವಾಗಿ ರಕ್ಷಿಸಬೇಕು. ಈ ಊರನ್ನೇ ಸ್ಥಳಾಂತರ ಮಾಡಿದರೂ ಪರವಾಗಿಲ್ಲ ಎಂದು ರಾಖಿಗಢಿಯಲ್ಲೇ ಹುಟ್ಟಿ ಬೆಳೆದ ವಜೀರ್ ಚಂದ್ ಸರೋಯೀ ಖಚಿತವಾಗಿ ಬೇಡಿಕೆ ಇಡುತ್ತಾರೆ. ಅವರೊಂದಿಗೆ ರಾಖಿಗಢಿಯ ಐತಿಹಾಸಿಕ ನಗರದ ಮೇಲಿನ ನಡಿಗೆಗೆ ಅವರ ಮಗ ಖ್ಯಾಲ್ ರಾಮ್ ಸರೋಯೀ ದನಿಗೂಡಿಸುತ್ತಾರೆ. ಇಬ್ಬರೂ ರಾಖಿಗಢಿಯ ಅಭಿವೃದ್ಧಿಗಾಗಿ ಸಾಕಷ್ಟು ಯತ್ನಿಸಿದ್ದಾರೆ; ಊರಿಗೆ ಬರುವ ಎಲ್ಲ ಪತ್ರಕರ್ತರು, ಸಂಶೋಧಕರಿಗೆ ನೆರವಾಗಿದ್ದಾರೆ; ಅವಶೇಷಗಳ ಛಾಯಾಚಿತ್ರಗಳನ್ನು ಒದಗಿಸುತ್ತಾರೆ. ರಾಖಿಗಢಿಯ ಅನಿಭಿಷಿಕ್ತ ಮಾರ್ಗದರ್ಶಿಗಳು!
ಹರ್‍ಯಾನಾ ರಾಜ್ಯದ ಜಿಂದ್ ಜಿಲ್ಲೆಯಲ್ಲಿರುವ ರಾಖಿಗಢಿಯ ಉತ್ಖನನ ಆರಂಭವಾಗಿದ್ದು ೧೯೬೩-೬೪ರಲ್ಲಿ. ೧೯೬೯ರಲ್ಲಿ ಸೂರಜ್ ಭಾನು ಎಂಬ ಸಂಶೋಧಕರು ಈ ಪ್ರದೇಶವು ಅತಿಮುಖ್ಯ ಪ್ರೌಢ ಹರಪ್ಪಾ ಕ್ಷೇತ್ರ ಎಂದು ದಾಖಲಿಸಿದ್ದರು. ೧೯೯೭-೨೦೦೧ರ ಅವಧಿಯಲ್ಲಿ ನಡೆದ ಉತ್ಖನನದಲ್ಲಿ ಇದೊಂದು ಬೃಹತ್ ತಾಣ ಎಂಬ ಅರಿವು ಮೂಡಿತು. ಈಗ ರಾಖಿಗಢಿ ಸಂಶೋಧನೆಯನ್ನು ರೋಚಕ ಹಂತಕ್ಕೆ ತಂದಿರುವವರು ಪುಣೆಯ ಡೆಕ್ಕನ್ ಕಾಲೇಜಿನ ಇತಿಹಾಸ ಪ್ರಾಧ್ಯಾಪಕ ವಸಂತ್ ಶಿವರಾಮ್ ಶಿಂಧೆ. ಇವರೊಂದಿಗೆ ಹರ್‍ಯಾನಾ ಪ್ರಾಚ್ಯವಸ್ತು ಇಲಾಖೆಯೂ ಕೈಜೋಡಿಸಿದೆ. ವಾಸ್ತವದಲ್ಲಿ ರಾಖಿಗಢಿ ತಾಣದಲ್ಲಿ ರಾಖಿ ಶಾಪುರ್ ಮತ್ತು ರಾಖಿ ಖಾಸ್ ಎಂಬ ಎರಡು ಹಳ್ಳಿಗಳಿವೆ. ಗುರುತಿಸಲು ಅನುಕೂಲವಾಗುವಂತೆ ಎರಡೂ ಹಳ್ಳಿಗಳನ್ನು ಜೋಡಿಸಿ ರಾಖಿಗಢಿ ಎಂದೇ ಕರೆಯಲಾಗಿದೆ.
ಕಂಚಿನ ಯುಗದ ಹರಪ್ಪಾ ನಾಗರಿಕತೆಯ ಪತನವನ್ನು ಆಮ್ಲಜನಕದ ಕಣಗಳ ಕಾಲನಿರ್ಣಯದ ಮೂಲಕ ವಿಶ್ಲೇಷಿಸಿದ್ದೇ `ನೇಚರ್ ಪತ್ರಿಕೆಯ ಸಂಶೋಧನಾ ಲೇಖನದ ಮುಖ್ಯ ಅಂಶ. ಖರಗ್‌ಪುರದ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಭೂಶಾಸ್ತ್ರ ಮತ್ತು ಭೌತಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ|| ಅನಿಂದ್ಯ ಸರ್ಕಾರ್, ಆರತಿ ದೇಶಪಾಂಡೆ ಮುಖರ್ಜಿ, ಎಂ ಕೆ ಬೇರಾ, ಬಿ ದಾಸ್, ನವೀನ್ ಜುಯಲ್, ಪಿ ಮೋರ್ತೆಕಾ, ಆರ್ ಡಿ ದೇಶಪಾಂಡೆ, ವಿ ಎಸ್ ಶಿಂಧೆ ಮತ್ತು ಎಲ್ ಎಸ್ ರಾವ್ – ಇವರೆಲ್ಲ ಸೇರಿ ಬರೆದ ಈ ಪ್ರೌಢ ಪ್ರಬಂಧದಲ್ಲಿ ಹರಪ್ಪಾ ನಾಗರಿಕತೆಯ ಪತನಕ್ಕೆ ಬೆಳೆಪದ್ಧತಿಯನ್ನು ಬದಲಿಸಿದ್ದೇ ಕಾರಣವೇ ಹೊರತು, ಹವಾಗುಣ ವೈಪರೀತ್ಯವಲ್ಲ ಎಂದು ಪ್ರತಿಪಾದಿಸಲಾಗಿದೆ. ಭಿರ್ರಾನಾದಲ್ಲಿ ದೊರೆತ ಹಲ್ಲು ಮತ್ತು ಮೂಳೆಗಳಲ್ಲಿ ಇರುವ ಆಮ್ಲಜನಕದ ಕಣಗಳನ್ನು ಸಂಶೋಧನೆಗೆ ಒಳಪಡಿಸಿದಾಗ, ಈ ಜನರ ಕಾಲಘಟ್ಟವು ಇಂದಿಗಿಂತ ೮೦೦೦ ವರ್ಷ ಹಳತು ಎಂಬ ಮಾಹಿತಿ ಸಿಕ್ಕಿತು!
`ಇಂದಿಗಿಂತ ೯೦೦೦-೭೦೦೦ ವರ್ಷಗಳ ಹಿಂದೆ ಮುಂಗಾರು ತುಂಬಾ ಬಲವಾಗಿತ್ತು. ಘಗ್ಗರ್-ಹಕ್ರಾ ನದಿ ಸದಾ ತುಂಬಿ ಹರಿಯುತ್ತಿದ್ದವು. ಆದ್ದರಿಂದಲೇ ಹರಪ್ಪಾ ಪೂರ್ವದ ಜನರು ಈ ಪ್ರದೇಶದಲ್ಲಿ ವಾಸಿಸತೊಡಗಿದರು. ಈ ಎಲ್ಲಾ ಪ್ರದೇಶಗಳೂ ಈಗ ಕಣ್ಮರೆಯಾಗಿರುವ `ಸರಸ್ವತೀ’ ನದೀ ತೀರದಲ್ಲೇ ಇದ್ದವು ಎಂಬುದು ಗಮನಾರ್ಹ (ಘಗ್ಗರ್ – ಹಕ್ರಾ ನದಿಯೇ ಸರಸ್ವತೀ ಎಂಬ ಪುರಾವೆಗಳು ಸಿಗತೊಡಗಿವೆ). ನಮಗಂತೂ ೯೦೦೦ ಸಾವಿರ ವರ್ಷಗಳ ಹರಪ್ಪಾ ಪೂರ್ವ ಕಾಲಘಟ್ಟದಿಂದ ಹಿಡಿದು ೮೦೦೦ ವರ್ಷಗಳವರೆಗಿನ ಪ್ರೌಢ ಹರಪ್ಪಾವರೆಗೆ ಬಗೆಬಗೆಯ ಕುರುಹುಗಳು ದೊರೆತಿವೆ’ ಎಂದು ಅನಿಂದ್ಯ ಸರ್ಕಾರ್ ಹೇಳುತ್ತಾರೆ. ಮೊದಲು ಬಾರ್ಲಿ, ಗೋಧಿ ಬೆಳೆಯುತ್ತಿದ್ದ ಇವರೆಲ್ಲ ಆಮೇಲೆ ಭತ್ತ ಬೆಳೆಯತೊಡಗಿದರು. ಪ್ರೌಢ ಹರಪ್ಪಾ ಕಾಲದಲ್ಲಿ ಸಮುದಾಯ ಧಾನ್ಯದ ಕಣಜಗಳಿದ್ದವು; ಆದರೆ ಹವಾಗುಣ ಕುಸಿದಂತೆ, ಮುಂಗಾರು ದುರ್ಬಲವಾದಂತೆ ಈ ವಸತಿಗಳಲ್ಲಿ ಮನೆ ಆಧಾರಿತ ಧಾನ್ಯದ ಕಣಜಗಳ ಬಳಕೆ ಆರಂಭವಾಯಿತು’ ಎಂದು ಈ ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ.
ರಾಖಿಗಡಿಯಲ್ಲಿ ಸಿಕ್ಕಿದ ವಸ್ತುಗಳನ್ನೇ ನೋಡಿದರೆ ಆಗಿನ ಬದುಕು ಎಷ್ಟು ವೈವಿಧ್ಯಮಯವಾಗಿತ್ತು ಎಂಬ ಅರಿವಾಗುತ್ತದೆ (ಛಾಯಾಚಿತ್ರಗಳ ಸಂಪುಟ ನೋಡಿ). ದನ, ಎತ್ತುಗಳ ಗೊಂಬೆಗಳು, ಆಭರಣಗಳು, ಮಣಿ ಸರಗಳು, ಮಣ್ಣಿನ ಆಟಿಕೆಗಳು, ಮುದ್ರಿಕೆಗಳು, – ಪಟ್ಟಿ ಬೆಳೆಯುತ್ತದೆ. ವಜೀರ್ ಚಂದ್ ಸರೋಯೀ ಜೊತೆಗೆ ರಾಖಿಗಢಿಯ ದಿಬ್ಬಗಳಲ್ಲಿ ಓಡಾಡಿದ ಈ ಲೇಖಕನಿಗೆ ಅಲ್ಲಿದ್ದ ಚಿಣ್ಣನೊಬ್ಬ ಎಲ್ಲಿಂದಲೋ ಒಂದಷ್ಟು ಮಣಿಗಳನ್ನು ತಂದು ತೋರಿಸಿದ. `ಇಲ್ಲಿನ ಹುಡುಗರು, ಹಳ್ಳಿಯವರು ಕೈಗೆ ಸಿಕ್ಕಿದ ಎಲ್ಲಾ ವಸ್ತುಗಳನ್ನೂ ಯಾರ್‍ಯಾರಿಗೋ ಮಾರಿಬಿಡುತ್ತಾರೆ. ಇದನ್ನಾದರೂ ನಾವು ತಡೆಯಬೇಕು’ ಎಂದು ವಜೀರ್ ಚಂದ್ ವಿಷಾದಿಸಿದರು. ವಾಸ್ತವವಾಗಿ ವಜೀರ್ ಚಂದ್ ಬಳಿ ಈ ಪ್ರದೇಶದ ನೂರಾರು ವಸ್ತುಗಳ ಸಂಗ್ರಹವಿತ್ತು. ಅದನ್ನೆಲ್ಲ ಅವರು ದಿಲ್ಲಿಯಲ್ಲಿರುವ ನ್ಯಾಶನಲ್ ಮ್ಯೂಸಿಯಂಗೆ ಕೊಟ್ಟಿದ್ದಾರೆ. ರಾಖಿಗಢಿಯ ಸಾಕ್ಷ್ಯಗಳನ್ನು ಸಂಗ್ರಹಿಸಿ ಮಾರುತ್ತಾರೆ ಎಂಬ ಆರೋಪವು ಅವರ ಮೇಲೂ ಬಂದಿತ್ತು; ಆದರೆ ನನಗಂತೂ ಅವರು ಅಂಥವರಲ್ಲ ಅನ್ನಿಸಿತು. ತಮ್ಮ ಮನೆಗೇ ಕರೆದುಕೊಂಡು ಹೋಗಿ ಎಲ್ಲ ಪತ್ರಿಕಾತುಣುಕುಗಳನ್ನು ತೋರಿಸಿ, ನೂರಾರು ಛಾಯಾಚಿತ್ರಗಳನ್ನು ಕೊಟ್ಟು ಕಳಿಸಿದ ವಜೀರ್ ಚಂದ್ ನಿಜಕ್ಕೂ ಇತಿಹಾಸದ ಕಾರ್ಯಕರ್ತರೇ ಸರಿ. ಅವರನ್ನು ಹರ್‍ಯಾನಾ ಸರ್ಕಾರವು ಚೆನ್ನಾಗಿ ಬಳಸಿಕೊಳ್ಳಬೇಕಿದೆ.
ರಾಖಿಗಢಿಯ ಶೇಕಡಾ ೭೫ರಷ್ಟು ತಾಣವು ಹಳ್ಳಿಯ ಮತ್ತು ಹೊಲದ ಕೆಳಗೇ ಇದೆ. ವಸಂತ್ ಶಿಂಧೆಯವರು ಹಳ್ಳಿಯ ಸರಪಂಚರನ್ನು ಭೇಟಿಯಾಗಿ ಅವರೆಲ್ಲರ ಸಹಕಾರದಿಂದಲೇ ಉತ್ಖನನ ಮತ್ತು ಸಂಶೋಧನೆಯನ್ನು ನಡೆಸಿದ್ದಾರೆ. ಆದರೆ ಸಂಶೋಧನೆ ಮುಂದುವರಿಯಲು ಹಳ್ಳಿಯನ್ನು ಸ್ಥಳಾಂತರಿಸಲೇಬೇಕು. `ಸ್ಥಳಾಂತರಕ್ಕೆ ನಾವು ಸಿದ್ಧ’ ಎಂದು ವಜೀರ್ ಚಂದ್ ಈ ಲೇಖಕನಿಗೆ ತಿಳಿಸಿದರು. ರಾಖಿಗಢಿ ಮತ್ತು ಪಂಚಕುಲಾದಲ್ಲಿ ಎರಡು ವಸ್ತು ಸಂಗ್ರಹಾಲಯಗಳನ್ನು ಸ್ಥಾಪಿಸುವ ಉದ್ದೇಶ ಹರ್‍ಯಾನಾ ಸರ್ಕಾರಕ್ಕೆ ಇದೆ.
ವಸಂತ್ ಶಿಂಧೆ ಹೇಳುವಂತೆ `ಹರಪ್ಪಾ ನಾಗರಿಕತೆಯ ಜನರು ಇಡೀ ಜಗತ್ತೇ ನಿಬ್ಬೆರಗಾಗುವಂಥ, ಪ್ರವಾಸಿಗರ ಆಕರ್ಷಣೆಗೆ ಒದಗುವಂಥ ಬೃಹತ್ ಕಟ್ಟಡಗಳನ್ನೇನೂ ಕಟ್ಟಲಿಲ್ಲ. ಆದರೆ ಸಾಮಾನ್ಯ ಬದುಕಿನ ವೃತ್ತಿಪರತೆಯನ್ನು ಅವರು ತೋರಿದ ರೀತಿಯೇ ಅನನ್ಯ. ಆಧುನಿಕ ಮತ್ತು ಸ್ವಚ್ಛ ನಗರಗಳನ್ನು ಕಟ್ಟುವ ಬಗೆಯನ್ನು ಅವರು ತಿಳಿಸಿಕೊಟ್ಟಿದ್ದಾರೆ; ಆಡಳಿತಕ್ಕಾಗಿ ಅವರು ಪಂಚಾಯತ್ ಮಾದರಿಯನ್ನು ಅನುಸರಿಸಿದ್ದರು; ಸಾವಿರಾರು ವರ್ಷಗಳ ಹಿಂದೆಯೇ ಪ್ರಜಾತಂತ್ರವನ್ನು ಕಾರ್ಯರೂಪಕ್ಕೆ ತಂದವರೇ ಹರಪ್ಪಾ ನಾಗರಿಕತೆಯ ಜನತೆ; ವೈಜ್ಞಾನಿಕ ಕಟ್ಟಡ ನಿರ್ಮಾಣವನ್ನು, ಇಂಗ್ಲಿಶ್ ಬಾಂಡ್ ನಿರ್ಮಾಣ ವಿಧಾನ’ವನ್ನು ಅವರೇ ಜಗತ್ತಿಗೆ ಮೊದಲ ಬಾರಿ ತೋರಿಸಿಕೊಟ್ಟವರು; ಇದು ನಿಜವಾಗಿ ಹರಪ್ಪನ್ ಬಾಂಡ್ ಆಗಬೇಕಿತ್ತು! ಅವರು ಅತ್ಯುತ್ತಮವಾದ ಜಲನಿರ್ವಹಣೆಯನ್ನು ಹೊಂದಿದ್ದರು; ನೀರಿನ ಸಂರಕ್ಷಣೆಯನ್ನು ಬಲ್ಲವರಾಗಿದ್ದರು; ಲೋಥಲ್‌ನಲ್ಲಿರುವ ಬಂದರು ಇಡೀ ವಿಶ್ವದ ಅತಿ ಪ್ರಾಚೀನ `ನೌಕಾಂಗಣ’ (ಡಾಕ್ ಯಾರ್ಡ್) ಹೊಂದಿತ್ತು; ಕಲಿಬಂಗನ್, ಫರ್ಮಾನಾ ಮತ್ತು ರಾಖಿಗಢಿ ಪ್ರದೇಶಗಳು ಬೃಹತ್ ಪ್ರಮಾಣದ ಕುಶಲ ವಸ್ತುಗಳ ತಯಾರಿಕಾ ಘಟಕಗಳನ್ನು ಹೊಂದಿದ್ದವು’.
ಐಐಟಿ ಖರಗ್‌ಪುರ, ಪುಣೆಯ ಡೆಕ್ಕನ್ ಕಾಲೇಜು, ಅಹಮದಾಬಾದಿನ ಫಿಸಿಕಲ್ ರಿಸರ್ಚ್ ಲ್ಯಾಬೋರೇಟರಿ, ಲಖ್ನೋದ ಬೀರಬಲ್ ಸಾಹ್ನಿ ಪ್ರಾಚ್ಯಸಸ್ಯ ಸಂಸ್ಥೆ, ಕೇಂದ್ರ ಸರ್ಕಾರದ ಪ್ರಾಚ್ಯ ವಸ್ತು ನಿರ್ದೇಶನಾಲಯ – ಹೀಗೆ ಹಲವು ಸಂಸ್ಥೆಗಳು ಮಾಡಿದ ಎಲ್ಲ ಶೋಧಗಳೂ ರಾಖಿಗಢಿ, ಭಿರ್ರಾನಾದ ಪ್ರಾಚೀನತೆಯನ್ನು ಮತ್ತೆ ಮತ್ತೆ ಸಾಬೀತುಪಡಿಸಿವೆ. ಕಾರ್ಬನ್ ೧೪ ಪರೀಕ್ಷೆಯನ್ನು ಎರಡೆರಡು ಸಲ ಬೇರೆ ಬೇರೆ ಸಂಸ್ಥೆಗಳಲ್ಲಿ ಮಾಡಿ ದೃಢೀಕರಿಸಿಕೊಳ್ಳಲಾಗಿದೆ. ಅಂದಮೇಲೆ ನಮ್ಮ ಪ್ರಾಚೀನತೆಯನ್ನು ಸಾರುವ ಹೊಸ ಇತಿಹಾಸವನ್ನು ಬರೆಯಲು ಕಾಯಬೇಕೆ?
ರಾಖಿಗಢಿಯ ಟೆರ್ರಕೋಟಾ ವಸ್ತುಗಳನ್ನು ನೀವು ಒಮ್ಮೆ ಮುಟ್ಟಿ ನೋಡಬೇಕು, ಅಷ್ಟು ನಯ, ಅಷ್ಟು ನಿಖರ! ಚುಕ್ಕಿ, ತ್ರಿಕೋನ, ಚೌಕ, ರಂಧ್ರಗಳು, – ಹೀಗೆ ಹಲವು ಜ್ಯಾಮಿತಿ ಆಕಾರಗಳನ್ನು ಕರಾರುವಾಕ್ಕಾಗಿ ಬಳಸಿ ಮಾಡಿದ ಈ ವಸ್ತುಗಳು ನಮ್ಮ ನಾಗರಿಕತೆಯ ಅತ್ಯುಚ್ಚ ಗುಣಮಟ್ಟಕ್ಕೆ ಸಾಕ್ಷಿಯಾಗಿವೆ. ಅದರಲ್ಲೂ ರಾಖಿಗಢಿಯಲ್ಲಿ ಅತಿಹೆಚ್ಚಿನ ಸಂಖ್ಯೆಯಲ್ಲಿ ಪ್ರಾಣಿಗಳ ಗೊಂಬೆಗಳು ಸಿಕ್ಕಿವೆ. ನಾಯಿ, ಸಿಂಹ, ಚಿರತೆ, ಮೊಲ, ಕುದುರೆಗಳ ಗೊಂಬೆಗಳು ಇಲ್ಲಿ ಸಿಕ್ಕಿವೆ. ಹರಪ್ಪನ್ನರು ದ್ರಾವಿಡರೆಂದೂ ಆರ್ಯರು ಬಂದಾಗಲೇ ಕುದುರೆಗಳ ಪ್ರವೇಶ ಆಯಿತೆಂಬುದೂ ಇತಿಹಾಸವನ್ನು ತಿರುಚಿದವರ ವಾದ. ಈ ಕಟ್ಟುಕಥೆಯ ಪ್ರಕಾರ ಆರ್ಯರು ಕುದುರೆ ಏರಿ ದಂಡೆತ್ತಿ ಬಂದರಷ್ಟೆ! ಆದರೆ ಕೇವಲ ರಾಖಿಗಢಿಯಷ್ಟೇ ಅಲ್ಲ, ಸುರ್ಕೋಟಾದಾ, ರಾಣಾ ಗುಂಢಾಯಿ, ಲೋಥಲ್, ಶಿಕಾರ್‌ಪುರ್, ಕುಂತಾಸಿ, ಕಾನ್‌ಮೇರ್, ಮಲ್ವನ್, ಮೊಹೆಂಜೋದಾರೋಗಳಲ್ಲೂ ಕುದುರೆಯ ಕುರುಹುಗಳಿವೆ.
ರಾಖಿಗಢಿಯಲ್ಲಿ ಮಣ್ಣಿನ ಬಂಡಿಗಳು, ಚೌಕಾಕಾರದ ತೂಕದ ಕಲ್ಲುಗಳೂ ಸಿಕ್ಕಿವೆ. ಅವುಗಳ ಅಳತೆಯೂ ೧,೨,೩,೧೦,೨೦,೪೦,೧೦೦,೨೦೦,೪೦೦,೫೦೦,೮೦೦ – ಹೀಗೆ ಖಚಿತವಾಗಿದೆ. ಎಮ್ಮೆಗಳ ಮೂಳೆಗಳು ಹೇರಳವಾಗಿವೆ. ಈಗ ನೀವು ರಾಖಿಗಢಿಗೆ ಭೇಟಿ ಕೊಟ್ಟರೂ ಎಮ್ಮೆಗಳೇ ಮೊದಲು ಕಾಣಿಸುತ್ತವೆ! ಮಣ್ಣಿನ ಫಲಕಗಳು, ಸಿಂಧೂ ನಾಗರಿಕತೆಯ ಮುಖ್ಯ ಸಂಕೇತವಾಗಿ ಚಿಹ್ನೆಗಳನ್ನು ಹೊಂದಿದ ಮುದ್ರಿಕೆಗಳು ಇಲ್ಲಿಯೂ ಸಿಕ್ಕಿವೆ. ಮಹಿಳೆಯರು ಧರಿಸುತ್ತಿದ್ದ ಸರ, ಬಳೆ ಮತ್ತು ಇತರೆ ಅಲಂಕಾರಿಕ ವಸ್ತುಗಳಿಗೆ ಲೆಕ್ಕವಿಲ್ಲ. ರಾಖಿಗಢಿಯಲ್ಲಿ ಹಲವು ಆಕಾರಗಳ, ಗಾತ್ರಗಳ ಯಜ್ಞಕುಂಡಗಳು ಕಂಡುಬಂದಿವೆ. ರಾಖೀಗಡಿಯ ಇಟ್ಟಿಗೆಗಳ ಗಾತ್ರ ಹೆಚ್ಚಾಗಿ ೭ಘಿ೧೫ಘಿ೩೧ ಸೆಂಟಿಮೀಟರ್. ಅಂದರೆ ೧:೨:೪ರ ಅನುಪಾತದಲ್ಲಿವೆ.
ಹೊಸ ಸಂಶೋಧನೆಗಳು
ರಾಜಸ್ಥಾನದ ಗಂಗಾನಗರ್ ಜಿಲ್ಲೆಯ ಅನೂಪ್‌ಗಢ ಎಂಬ ಪುಟ್ಟ ನಗರಕ್ಕೆ ೭ ಕಿಮೀ ದೂರದಲ್ಲಿ ೪ಎಂಎಸ್‌ಆರ್ ಎಂಬ ಊರಿದೆ. ಇದೀಗ ಹರಪ್ಪಾ ನಾಗರಿಕತೆಯ ಹೊಸ ಕುರುಹಾಗಿ ಪ್ರಸಿದ್ಧವಾಗುತ್ತಿದೆ. ಇಲ್ಲಿ ನೂರಾರು ವಸ್ತುಗಳ ಜೊತೆಗೇ ಸಿಂಧೂ ಮುದ್ರಿಕೆಗಳು, ರಂಧ್ರಭರಿತ ಮಡಿಕೆ, ಬೋಗುಣಿಗಳು, ಘನಾಕೃತಿಯ ತೂಕದ ಘಟ್ಟಿಗಳು ಸಿಕ್ಕಿವೆ; ಅಗ್ನಿಕುಂಡವೂ ಕಂಡಿದೆ. ಇದೂ ಘಗ್ಗರ್ ನದಿತಟದ ಪ್ರದೇಶ. ಇವೆಲ್ಲವೂ ಆದಿ ಹರಪ್ಪಾ ನಾಗರಿಕತೆಯ ಕುರುಹುಗಳು.
ರಾಖಿಗಢಿಯಲ್ಲಿ ಒಂದು ಮ್ಯೂಸಿಯಂ ಮಾತ್ರವಲ್ಲ, ಇನ್ನೂ ಹಲವು ಕೆಲಸಗಳು ಆಗಬೇಕಿವೆ:
- ರಾಖಿಗಢಿಯ ಅವಶೇಷಗಳಲ್ಲಿ ಒಂದು ಪ್ರಮುಖ ಪ್ರದೇಶವನ್ನು ಸಂಪೂರ್ಣವಾಗಿ ಅಗೆದು, ಸಿಂಧೂ-ಸರಸ್ವತೀ ನಾಗರಿಕತೆಯನ್ನು ಬಿಂಬಿಸುವ ವಾಸ್ತವಿಕ ಥೀಮ್ ಪಾರ್ಕ್ ಮಾಡಬೇಕು. ಈ ಪ್ರದೇಶವನ್ನು ಗರಿಷ್ಠ ಪ್ರಮಾಣದ ಸುರಕ್ಷತೆಯಲ್ಲಿಟ್ಟೂ ಸಾರ್ವಜನಿಕರಿಗೆ, ವಿಶೇಷವಾಗಿ ವಿದ್ಯಾರ್ಥಿಗಳಿಗೆ ವೀಕ್ಷಣೆಗೆ ಅನುಕೂಲವಾಗುವಂತೆ ಅತ್ಯಾಧುನಿಕ, ಫೈಬರ್ ಗಾಜಿನ ಮೇಲುಸೇತುವೆ ನಿರ್ಮಿಸಬಹುದು.
- ಸಿಂಧೂ-ಸರಸ್ವತೀ ನಾಗರಿಕತೆಯ ಅಧ್ಯಯನಕ್ಕೆ ವಿಶೇಷ ಪ್ರಾಚ್ಯ ಸಂಶೋಧನಾ ಸಂಸ್ಥೆಯನ್ನು ಸ್ಥಾಪಿಸಿ ಅದನ್ನು ಸರ್ಕಾರವು ವೃತ್ತಿಪರ ಮತ್ತು ಕ್ರಿಯಾಶೀಲ ತಂಡದ ನಿರ್ವಹಣೆಗೆ ಒಪ್ಪಿಸಬೇಕು (ಇಲ್ಲವಾದರೆ ಅದೂ ಒಂದು ನಿರಾಶ್ರಿತರ ತಾಣವಾಗುತ್ತದೆ). ಇಲ್ಲಿ ಖಾಸಗಿ ಸಂಸ್ಥೆಗಳ ಸಹಭಾಗಿತ್ವ, ನಿಧಿ ಹೂಡಿಕೆಯನ್ನೂ ಸ್ವಾಗತಿಸಿದರೆ ವೃತ್ತಿಪರತೆ ಹೆಚ್ಚಬಹುದು.
- ಸಿಂಧೂ-ಸರಸ್ವತೀ ನಗರಗಳಾದ ರಾಖಿಗಢಿ, ಭಿರ್ರಾನಾ, ಕಲಿಬಂಗನ್, ಧೋಲಾವೀರ, ಲೋಥಲ್ – ಹೀಗೆ ಹಲವು ಸ್ಥಳಗಳಿಗೆ ಪ್ರವಾಸದ ಪ್ಯಾಕೇಜ್ ರೂಪಿಸಬಹುದು.
- ಸಿಂಧೂ-ಸರಸ್ವತೀ ನಾಗರಿಕತೆಯ ಕುರಿತಾಗಿದ್ದ ಆರ್ಯರ ಆಕ್ರಮಣವನ್ನು ಎಡಪಂಥೀಯ ರೊಮಿಲಾ ಥಾಪರ್‌ರಂಥ ಇತಿಹಾಸಕಾರರೇ ಅಲ್ಲಗಳೆದು ಬಹುಶಃ ಆರ್ಯರು – ಹರಪ್ಪನ್ನರು ತುಂಬಾ ಸೌಹಾರ್ದಯುತವಾಗಿದ್ದರು ಎನ್ನತೊಡಗಿದ್ದಾರೆ! ಇದು ಒಳ್ಳೆಯ ಬೆಳವಣಿಗೆ. ಭಾರತ ಸರ್ಕಾರವು ಕೂಡಲೇ ಹೊಸ ಇತಿಹಾಸದ ಬಗ್ಗೆ ಅಂತಾರಾಷ್ಟ್ರೀಯ ಸಂಕಿರಣ ಮತ್ತು ಕಾರ್ಯಾಗಾರಗಳನ್ನು ನಡೆಸಬೇಕು. ಅಲ್ಲಿ ಇತಿಹಾಸದ ವೈಜ್ಞಾನಿಕ ದಾಖಲೆಗಳನ್ನು ಮುಂದಿಟ್ಟುಕೊಂಡು ಸೂಕ್ತ ನಿರ್ಣಯಗಳನ್ನು ತಳೆಯಬೇಕು.
- ರಾಖಿಗಢಿ ಮತ್ತು ಇತರೆ ತಾಣಗಳ ಬಗ್ಗೆ ಕೂಡಲೇ ನಮ್ಮ ಎಲ್ಲ ಕೇಂದ್ರ – ರಾಜ್ಯಗಳ ಪಠ್ಯಪುಸ್ತಕಗಳಲ್ಲಿ ಛಾಯಾಚಿತ್ರ ಸಹಿತ ಪಾಠಗಳನ್ನು ಬರೆಯಬೇಕು. ಇದು ಇತಿಹಾಸ ತಿರುಚುವುದಲ್ಲ, ನೈಜ ಇತಿಹಾಸವನ್ನು ಬರೆಯುವುದು.
ಹರಪ್ಪಾ- ಮೊಹೆಂಜೋದಾರೋಗಳನ್ನು ನಾವು ಕಡೆಗಣಿಸಬೇಕು ಎಂಬುದು ನನ್ನ ವಾದವಲ್ಲ; ಆದರೆ ಭಾರತದ ಗಡಿಯೊಳಗೇ ಇರುವ, `ಹ-ಮೊ’ಗಿಂತಲೂ ಪ್ರಾಚೀನವಾದ ಸ್ಥಳಗಳನ್ನು ಕಡೆಗಣಿಸಬೇಕೇ ಎಂಬುದೇ ನನ್ನ ಪ್ರಶ್ನೆ.
ರಾಖಿಗಢಿಯ ಮೂಲಕ ನಮ್ಮ ಪೂರ್ವಜರ ಕಾಲದ ಗಡಿಯನ್ನು ವಿಸ್ತರಿಸಿಕೊಳ್ಳುವ ಸುವರ್ಣ ಕ್ಷಣ ಒದಗಿದೆ.
ಸಿಂಧೂ ಕಣಿವೆ ನಾಗರಿಕತೆಯ ಕುರಿತು ಆನ್‌ಲೈನ್‌ನಲ್ಲಿ ಇರುವ ಈ ಸಚಿತ್ರ ಪಾಠವನ್ನು ವಿದ್ಯಾರ್ಥಿಗಳಿಗೆ ತೋರಿಸಿ: http://www.dkfindout.com/us/history/indus-valley-civilization/