ಪುಟಾಣಿ ಮಕ್ಕಳಿಗೆ ಆಡಲು ನೂರಾರು ಗೇಮ್ಗಳು, ಹದಿಹರೆಯದವರಿಗೆ ಹರಟಲು ಹತ್ತಾರು ಸಾಮಾಜಿಕ ಜಾಲಗಳು, ಪತ್ರಕರ್ತರಿಗೆ ಓದಲು ನೂರಾರು ಪತ್ರಿಕೆಗಳು, ಹೆಣ್ಣುಮಕ್ಕಳಿಗೆ ನೂರಾರು ಪಾಕ ವಿಧಾನಗಳು, ಸೌಂದರ್ಯ ವರ್ಧನೆಯ ಕಿವಿಮಾತುಗಳು, ಕಾಲೇಜು ವಿದ್ಯಾಗಳಿಗೆ ಸೈಂಟಿಫಿಕ್ ಕ್ಯಾಲ್ಕುಲೇಟರ್, ಹಬ್ಬ ಹರಿದಿನ ತಿಳಿಯಲು ಪಂಚಾಂಗ, ಮನೆಯಿಂದ ಹೊರಬೀಳುವ ಮುನ್ನ ಹವಾಮಾನ ವಾರ್ತೆ, ಓದಲು ಸ್ತಕಗಳು, ಕೇಳಲು ಬಗೆಬಗೆಯ ಹಾಡುಗಳು, ಬಂದಂತೆ ಬೀಳುವ ಮೈಲುಗಳು, ವೃತ್ತಿಪರರಿಗೆ ಆರೋಗ್ಯವಾಗಿರಲು ವ್ಯಾಯಾಮಗಳು…. ಕಲಿಯಲು ಹಾರ್ಮೋನಿಕಾ, ಗಿಟಾರ್, ಕ್ಲಿಕ್ಕಿಸಲು ಕ್ಯಾಮೆರಾ, ದಾಖಲಿಸಲು ಆಡಿಯೋ ರೆಕಾರ್ಡರ್, ಎದೆಬಡಿತದ ತಪಾಸಣೆಗೆ ಮೀಟರ್, ಸಂಗೀತದ ಶ್ರುತಿ ಹಿಡಿಯಲು ಮತ್ತೊಂದು ಮೀಟರ್, ಕರೆ ಮಾಡಲು ಒಂದು ಮೊಬೈಲ್, ಸಭೆಯ ಅಂಶಗಳನ್ನು ನೆನಪಿಡಲು ನೋಟ್ ಸ್ತಕ, ವಿಳಾಸಗಳ ಮುಗಿಯದ ಪಟ್ಟಿ, ಮಾಹಿತಿ ಲೋಕದಲ್ಲಿ ಸಂಚರಿಸಲು ಇಂಟರ್ನೆಟ್…. ಕೊನೆಗೆ ಕರೆಂಟು ಹೋದರೆ ರಾತ್ರಿ ಸಂಚರಿಸಲು ಒಂದು ಟಾರ್ಚ್, ಏಳಲು ಅಲಾರಾಂ ಗಡಿಯಾರ….
ಹೀಗೆ ಏನು ಬೇಕಾದರೂ ಊಹಿಸಿಕೊಳ್ಳಿ.. ಸುಮಾರಾಗಿ ನೀವು ಊಹಿಸಿಕೊಂಡಿದ್ದೆಲ್ಲವನ್ನೂ ಇಪ್ಪತ್ತರಿಂದ ನಲವತ್ತು ಸಾವಿರ ರೂಪಾಯಿ ಬೆಲೆಗೆ ಒಂದೇ ಸ್ಲೇಟಿನ ಮೂಲಕ ಪಡೆಯಲು ಈಗ ಸಾಧ್ಯ. ಬರಿಯ ಕೈ ಬೆರಳುಗಳ ಮೂಲಕವೇ ಇವನ್ನೆಲ್ಲ ಬಳಸಬಹುದಾದ, ಕೆಲವೊಮ್ಮೆ ಆಧುನಿಕ ಬಳಪವನ್ನೂ ಬಳಸಬೇಕಾದ ಈ ಸ್ಲೇಟುಗಳೀಗ ವಿಶ್ವದ ಮಾರುಕಟ್ಟೆಯಲ್ಲಿ ಭರಾಟೆಯಿಂದ ಬಿಕರಿಯಾಗುತ್ತಿವೆ. ಹೊಸ ಹೊಸ ಮಾದರಿಗಳು ಮಾರುಕಟ್ಟೆಗೆ ನುಗ್ಗುತ್ತಿವೆ.
ಏನಿವು ಸ್ಲೇಟ್ ಗಣಕಗಳು?
ನಿಮಗೆ ಮೊಬೈಲ್ ಗೊತ್ತಿದೆ ತಾನೆ? ಲ್ಯಾಪ್ ಟಾಪ್ ಗೊತ್ತಿದೆ ತಾನೆ? ಕಂ್ಯಟರ್? ಗೊತ್ತಿರಲೇ ಬೇಕು…. ಸ್ಲೇಟ್ ಗಾತ್ರದಲ್ಲಿ ಅಥವಾ ಒಂದು ಚಿಕ್ಕ ಮಣೆಯ ರೂಪದಲ್ಲಿ ಈ ಮೂರೂ ಸಾಧನಗಳನ್ನು ಮೇಳಯಿಸಿದರೆ, ಅದುವೇ ಸ್ಲೇಟ್ ಗಣಕ.
2001ರಲ್ಲೇ ಮೈಕ್ರೋಸಾಫ್ಟ್ ಸಂಸ್ಥೆಯು ಈ ಥರದ ಸ್ಲೇಟನ್ನು ಮಾರುಕಟ್ಟೆಗೆ ತಂದಿತ್ತು. 1997ರಿಂದ ಸಂಶೋಧನೆ ನಡೆಸಿದ ಆಪಲ್ ಸಂಸ್ಥೆಯು ಪ್ಯಾಡ್ ಎಂಬ ಸ್ಲೇಟನ್ನು ಕಳೆದ ವರ್ಷ ಪರಿಚಯಿಸಿ ಸ್ಲೇಟ್ ಗಣಕದ ಕ್ರಾಂತಿಗೆ ಮುನ್ನುಡಿ ಬರೆಯಿತು. ಈ ಹಿಂದೆಲ್ಲ ಆಪಲ್ ಸಂಸ್ಥೆಯೇ ಮಾರುಕಟ್ಟೆಯನ್ನು ಕಬಳಿಸುವ ಸಾಮಥ್ರ್ಯ ಹೊಂದಿದ್ದರೆ ಇಂದು ಸ್ಯಾಮ್ ಸಂಗ್, ಏಸರ್, ಎಚ್ ಪಿ, ಬ್ಲಾಕ್ ಬೆರಿ, ಮಿತ್ಸುಬಿಷಿ – ಹೀಗೆ ಹಲವಾರು ಕಂಪೆನಿಗಳು ಬಗೆಬಗೆಯ ಸ್ಲೇಟ್ ಗಣಕಗಳನ್ನು ಮಾರುಕಟ್ಟೆಗೆ ಎಸೆಯುತ್ತಿವೆ. ಬೇಕಾದ ಬೆಲೆ, ಬೇಕಾದ ಆಯ್ಕೆ! 2011ರ ವರ್ಷ ಹೊಸ ಹೊಸ ಸ್ಲೇಟ್ ಗಣಕಗಳ ಪರಿಚಯದ ವರ್ಷವಾಗಿ ಪರಿಣಮಿಸಿದೆ. ಬಹುಶಃ 2012ರಲ್ಲಿ ಬೆಲೆಸಮರವಾಗಿ ಎಲ್ಲವೂ ಒಂದು ಒಳ್ಳೆಯ ಗಣಕದಷ್ಟೇ ಬೆಲೆಗೆ (ಸುಮಾರು 20-25 ಸಾವಿರ ರೂ.) ಸಿಗುವ ಅಂದಾಜಿದೆ. ದುಡ್ಡಿದ್ದವರಿಗೆ ಉನ್ನತ ಮಾದರಿಗಳು ಯಾವಾಗಲೂ ಇವೆ ತಾನೆ?
ಸಾಮಾನ್ಯ ಗಣಕದ ಅತಿ ಬಳಕೆದಾರರು ಗಣಕದ ಮುಂದೆಯೇ ಕುಳಿತುಕೊಳ್ಳುವ ಬದಲು ಈ ಸ್ಲೇಟುಗಳನ್ನು ಖರೀದಿಸಿ ಕೊಂಚ ಸಂಚಾರಿ ಭಾವವನ್ನು ಬೆಳೆಸಿಕೊಳ್ಳಬಹುದು. ಇದನ್ನು ಐಷಾರಾಮೀ ಉತ್ಪನ್ನ ಎಂದು ಈಗ ಕರೆಯುವುದು ಸಹಜ; ಆದರೆ ಮೊಬೈಲುಗಳ ರೀತಿಯಲ್ಲೇ ಇವೂ ಮಧ್ಯಮ ವರ್ಗ, ಕೆಳ ಮಧ್ಯಮ ವರ್ಗದವರಿಗೂ ಎಟಕುವ ಹಾಗೆ ಅಗ್ಗವಾಗುತ್ತದೆ ಎಂದು ಖಂಡಿತ ನಿರೀಕ್ಷಿಸಬಹುದು. ಹೇಗೆ?
ಹೇಗೆ ಎಂದರೆ ಈ ಸ್ಲೇಟು ಗಣಕಗಳಲ್ಲಿ ಅವಕ್ಕಾಗೇ ರೂಪಿಸಿದ ವಿಶೇಷ ತಂತ್ರಜ್ಞಾನ ಇಲ್ಲವೇ ಇಲ್ಲ! ಸ್ಪರ್ಶ ಪರದೆ ಮೊದಲೂ ಇತ್ತಲ್ಲ? ಗಣಕದ ಬಿಡಿಭಾಗಗಳು ಕೂಡಾ ಕುಬ್ಜವಾಗುತ್ತ, ಮೊಬೈಲಿನೊಳಗೇ ಬಂದಿದ್ದವು. ಬ್ರಾಡ್ ಬ್ಯಾಂಡ್ ಇಂಟರ್ನೆಟ್ ಸಂಪರ್ಕ ಬಂದು ಎಂಟು ವರ್ಷವಾಯಿತು. ಇವೆಲ್ಲದರ ಜಾಣ ಸಂಯೋಜನೆಯೇ ಸ್ಲೇಟ್ ಬಳಪ. ಆದ್ದರಿಂದ ಆ್ಯಪಲ್, ಮೈಕ್ರೋಸಾಫ್ಟ್, ಎಚ್ ಪಿ ಯಂಥ ಸಂಸ್ಥೆಗಳ ಏಕಸ್ವಾಮ್ಯದ ಪ್ರಶ್ನೆಯೇ ಇಲ್ಲ. ವಿಪರೀತ ಸ್ಪರ್ಧೆ, ಕಟು ದರ ಸಮರ ಅತ್ಯಂತ ನಿರೀಕ್ಷಿತ.
ಇನ್ಯಾಕೆ ತಡ? ಬಜೆಟ್ ಹಾಕಿಕೊಂಡು ಸ್ಲೇಟ್ ಬಳಪ ಹಿಡಿದು ಶಾಲೆಗೆ… ಅಲ್ಲ….. ತಾರಸಿಗೆ ಹೋಗಿ ಕೂತುಕೊಳ್ಳಿ. ಗೂಗಲ್ ಸ್ಕೈ ಮ್ಯಾಪ್ ತೆರೆದು ಆಕಾಶಕ್ಕೆ ಸ್ಲೇಟ್ ಹಿಡಿಯಿರಿ. ನೀವು ಹಿಡಿದ ದಿಕ್ಕಿನಲ್ಲಿ ಇರೋ ನಕ್ಷತ್ರಪುಂಜದ ನಕಾಶೆಯನ್ನು ಸ್ಲೇಟಿನಲ್ಲಿ ನಿಚ್ಚಳವಾಗಿ ನೋಡಿ. ನಿಮ್ಮ ಮಕ್ಕಳಿಗೆ ಪಾಠ ಹೇಳಿ. ನಾಗರಿಕತೆಯ ಪ್ರಖರ ದೀಪಗಳಲ್ಲಿ ಕಂದಿಹೋದ ಆಕಾಶದ ಚಿತ್ರವನ್ನು ಸ್ಲೇಟಿನಲ್ಲಿ ಕಾಣುವುದೇ ಸೌಭಾಗ್ಯವಲ್ಲವೆ?
ಸ್ಲೇಟ್ ಗಣಕ ಮಾಹಿತಿಯ ದೊಡ್ಡ ಆಗಸವಾಗಿದ್ದೂ ನಿಮ್ಮ ಕೈಯಲ್ಲಿದೆ. ಈ ಹೊತ್ತಿನಲ್ಲಿ ಇದಕ್ಕಿಂತ ಒಳ್ಳೆಯ ಗ್ರಾಹಕ ಸಾಧನ ಇನ್ನೊಂದಿಲ್ಲ.
ಸ್ಲೇಟ್ ಗಣಕ: ಮತ್ತೊಂದು ಮಾಹಿತಿ ಕ್ರಾಂತಿಗೆ ನಾಂದಿಯೆ?
ಈಗ ಮನೆಯಲ್ಲಿ ಗಣಕ ಬಳಸುವವರು, ಊರು ಸುತ್ತುವಾಗಲೇ ಇಂಟರ್ನೆಟ್ ಬಳಸಿ ಮೈಲುಗಳನ್ನು ಕಳಿಸುತ್ತ ಕೆಲಸ ಮಾಡುವ ಎಕ್ಸಿಕ್ಯೂಟಿವ್ಗಳು, ಮೊಬೈಲಿನಲ್ಲೇ ಗಣಕದ ಹಲವು ಪುಟ್ಟ ಸಾಧ್ಯತೆಗಳನ್ನು ಕಂಡು ಖುಷಿಪಟ್ಟವರು ಮಾತ್ರ ಸ್ಲೇಟ್ ಗಣಕದತ್ತ ಮುಖ ಮಾಡಿದ್ದಾರೆ ಎನ್ನುವುದೇನೋ ನಿಜ. ಆದರೆ ಸ್ಲೇಟ್ ಗಣಕದ ಸಾಧ್ಯತೆ ಇಷ್ಟೇ ಅಲ್ಲ. ಮುಂದಿನ ದಿನಗಳಲ್ಲಿ ಸ್ಲೇಟುಗಳು ಡೆಸ್ಕ್ಟಾಪ್ ಗಣಕಗಳ ಬದಲಿಗೆ ಬಳಕೆಯಾಗಬಹುದು ಅನ್ನೋ ಸಂಶಯ ಮಾಹಿತಿ ತಂತ್ರಜ್ಞಾನ ಸಮೀಕ್ಷಕರದು.
1. ಗೂಗಲ್ ಮಾದರಿಯ ಮಾಹಿತಿ ಕ್ರಾಂತಿಗೆ ಮುನ್ನಡೆ
ಆಪಲ್ನಲ್ಲಿ ಅದರದ್ದೇ ಐಓಎಸ್, ಗೆಲಾಕ್ಸಿಯಲ್ಲಿ ಗೂಗಲ್ನ ಆಂಡ್ರಾಯ್ಡ್ ಇರೋದ್ರಿಂದ ಮೈಕ್ರೋಸಾಫ್ಟ್ಗೆ ವಿಂಡೋಸ್ ಕುಸಿತದ ಬಿಸಿ ತಟ್ಟುತ್ತಿದೆ. ಆಪಲ್ ಐಪ್ಯಾಡ್, ಸ್ಯಾಮ್ಸಂಗ್ ಗೆಲಾಕ್ಸಿ ಟ್ಯಾಬ್ಗಳ ರಭಸದ ಮಾರಾಟ ನೋಡಿ ಮೈಕ್ರೋಸಾಫ್ಟ್ ಸಂಸ್ಥೆಯೇ ದಿಗಿಲುಗೊಂಡಿದೆ. ನಮಗೆ ಗೊತ್ತಿರುವ ಹಾಗೆ ಪರ್ಸನಲ್ ಗಣಕಗಳಲ್ಲಿ (ಪಿಸಿ) ವಿಂಡೋಸ್ ಆಪರೇಟಿಂಗ್ ತಂತ್ರಾಂಶವೇ ಹೆಚ್ಚು ಬಳಕೆಯಲ್ಲಿದೆ. ಸ್ಲೇಟ್ಗಳ ಬಳಕೆಯಿಂದ ಮೈಕ್ರೋಸಾಫ್ಟ್ ಪಾರಮ್ಯಕ್ಕೆ ಧಕ್ಕೆ ಒದಗಲಿದೆ. ಈಗಿನ ಸ್ಲೇಟ್ ಕ್ರಾಂತಿಗೆ ಮುನ್ನುಡಿ ಬರೆದ ಮೈಕ್ರೋಸಾಫ್ಟ್ ಈಗ ಮಾರುಕಟ್ಟೆಯಲ್ಲಿ ಹಿಂದೆ ಬಿದ್ದಿದೆ. ಸರಸರನೆ ವಿಂಡೋಸ್ ಆಧಾರಿತ ಹೊಸ ಸ್ಲೇಟ್ಗಳನ್ನು ತರುವ ಬಗ್ಗೆ ಗಂಭೀರ ಪ್ರಯತ್ನ ನಡೆಸಿದೆ. ಆಂಡ್ರಾಯ್ಡ್ ಓ ಎಸ್ (ಆಪರೇಟಿಂಗ್ ತಂತ್ರಾಂಶ) ಮುಕ್ತ ತಂತ್ರಾಂಶವಾಗಿರುವುದು ಗಮನಾರ್ಹ. ಅತ್ತ ಫೇಸ್ಬುಕ್ ಸ್ಪರ್ಧೆಯನ್ನು ಎದುರಿಸಲು ಗೂಗಲ್ ಪ್ಲಸ್ ಎಂಬ ಸೋಶಿಯಲ್ ನೆಟ್ವರ್ಕ್ ಸೇವೆಯನ್ನು ಒದಗಿಸುತ್ತ, ಇತ್ತ ಸ್ಲೇಟುಗಳಲ್ಲಿ ಆಂಡ್ರಾಯ್ಡ್, ಗೂಗಲ್ ಸರ್ಚ್ ಎಂಜಿನ್ ಮೂಲಕ ಮೈಕ್ರೋಸಾಫ್ಟ್ಗೆ ಸೆಡ್ಡು ಹೊಡೆಯುತ್ತ ಗೂಗಲ್ ಸಂಸ್ಥೆಯು ಮುಂಚೂಣಿಗೆ ಬರುವ ಲಕ್ಷಣವಿದೆ. ಕೋಟಿಗಟ್ಟಳೆ ಜನರು ಉಚಿತ ಈ ಮೈಲ್, ಆನ್ಲೈನ್ ಕಡತಗಳು, ಹರಟೆ, ದೂರದೂರದ ಟೆಲಿಫೋನ್ ಸಂಭಾಷಣೆ ಎಲ್ಲದಕ್ಕೂ ಗೂಗಲ್ನ್ನೇ ಆಧರಿಸಿರುವುದು ಆ ಸಂಸ್ಥೆಗೆ ಇರುವ ಹೆಚ್ಚುಗಾರಿಕೆ. ಮಾಹಿತಿಯನ್ನು ಮುಕ್ತವಾಗಿ ಮತ್ತು ಖಾಸಗಿತನಕ್ಕೆ ಎರವಾಗದೆ ಕೊಟ್ಟರೆ ಖಾಸಗಿ ಸಂಸ್ಥೆಯೂ ಯಜಮಾನಿಕೆ ನಡೆಸಬಹುದು ಎಂಬುದನ್ನು ಗೂಗಲ್ ತೋರಿಸಿಕೊಟ್ಟಿದೆ. ಗೂಗಲ್ ತೋರಿದ ಈ ಹಾದಿ ಜನಸ್ನೇಹಿ ಮಾಹಿತಿ ಕ್ರಾಂತಿಯಲ್ಲಿ ಅತಿಮುಖ್ಯ ಬೆಳವಣಿಗೆಯೇ ಹೌದು.
2. ವರ್ಚುಯಲ್ ಡೆಸ್ಕ್ಟಾಪ್
ಇನ್ನು ಸ್ಲೇಟ್ಗಳನ್ನು ವರ್ಚುಯಲ್ ಡೆಸ್ಕ್ಟಾಪ್ ರೀತಿಯಲ್ಲಿ ಬಳಸುವ ವಿಧಾನವು ನಿಧಾನವಾಗಿ ಹಬ್ಬಲಿದೆ. ಅಂದರೆ, ಆಧುನಿಕ ಕಚೇರಿಗಳಲ್ಲಿ ಕೆಲಸ ಮಾಡಬೇಕಾದವರೆಲ್ಲ ಸ್ಲೇಟ್ ಹಿಡಿದು ಮನೆಯಲ್ಲಿ, ವಾಹನದಲ್ಲಿ, ಗುಡ್ಡದ ತುದಿಯಲ್ಲಿ, ಬೀಚಿನಲ್ಲಿ ಕೂತಿರುತ್ತಾರೆ. ಅವರ ಕೆಲಸಗಳ ಪಟ್ಟಿ, ಅದಕ್ಕೆ ಬೇಕಾದ ತಂತ್ರಾಂಶಗಳನ್ನು ಹೊಂದಿದ ಆಪ್ಸ್ಗಳು ಸ್ಲೇಟುಗಳಲ್ಲಿ ಸ್ಥಾಪನೆಯಾಗಿರುತ್ತವೆ. ಒರೇಕಲ್ ಸಂಸ್ಥೆಯು ಅದಾಗಲೇ ಐಪ್ಯಾಡಿನಲ್ಲಿ ಅಳವಡಿಸಬಹುದಾದ ವರ್ಚುಯಲ್ ಡೆಸ್ಕ್ಟಾಪ್ ತಂತ್ರಾಂಶವನ್ನು ರೂಪಿಸಿದೆ. ಒರೇಕಲ್ನ ಸನ್ರೇ ತಂತ್ರಾಂಶವನ್ನು ಬಳಸುವವರು ಎಲ್ಲೇ ಇದ್ದರೂ ಸ್ಲೇಟಿನ ಮೂಲಕವೇ ಕೆಲಸ ಮುಂದುವರಿಸಬಹುದು. ಹೀಗೆ ಕಚೇರಿ ಗಣಕಗಳನ್ನು ಸ್ಲೇಟಿನಲ್ಲೇ ಕಂಡು ಬಳಸುವ ಪ್ರವೃತ್ತಿ ಹೆಚ್ಚಲಿದೆ.
3. ಹದಿಹರೆಯದವರ ಹಾರ್ಟ್ ಥ್ರಾಬ್
ಇನ್ನು ಯುವಕರಂತೂ ಈಗಾಗಲೇ ಮೊಬೈಲ್ನಲ್ಲೇ ಎಲ್ಲವನ್ನೂ ಅನುಭವಿಸುತ್ತಿದ್ದವರು… ಈಗ ದೊಡ್ಡ ಪರದೆಯಲ್ಲಿ ಗೇಮ್ಗಳನ್ನು ಹಾಕಿಕೊಳ್ಳುವುದು ಖಚಿತ. ಈಗ ಆನ್ಲೈನ್ ಗೇಮ್ಗಳೂ ಜನಪ್ರಿಯ. ಡೆಸ್ಕ್ಟಾಪ್ಗಳಲ್ಲಿ ಒಂದೇ ಕಡೆ ಅಂಟಿಕೊಂಡು ದೂರದ ಗೆಳೆಯರೊಂದಿಗೆ ಆಡುವವರು ಸ್ಲೇಟ್ ಹಿಡಿದು ದೇಹಚಲನೆಯ ಸ್ವಾತಂತ್ರ್ಯಕ್ಕೆ ಮೊರೆ ಹೋಗುತ್ತಾರೆ. ಮಕ್ಕಳಿಗಂತೂ ಸ್ಲೇಟುಗಳು ವಸ್ತುಶಃ ಕಲಿಕೆಯ ಹೊಸ ಮಾಧ್ಯಮಗಳು. ಮುಖ ನೋಡಿ ಮಾತನಾಡುವ ವಿಡಿಯೋಚಾಟ್ನಿಂದ ಇಂಟರ್ನೆಟ್ ಚಾಟ್ನ ಚಹರೆ ಬದಲಾದರೆ, ಅತಿ ಅಗ್ಗದ ಇಂಟರ್ನೆಟ್ ದೂರವಾಣಿ ಕರೆಗಳಿಂದ ಟೆಲಿಫೋನಿ ರಂಗವೇ ರೂಪಾಂತರಗೊಳ್ಳಲಿದೆ.
ಹಾಗಾದರೆ ಸೋಶಿಯಲ್ ನೆಟ್ವರ್ಕಿಂಗ್? ಫೇಸ್ಬುಕ್, ಟ್ವಿಟರ್, ಗೂಗಲ್+ – ಎಲ್ಲವೂ ಈಗಾಗಲೇ ಸ್ಲೇಟ್ನಲ್ಲಿ ಕೂತಿವೆ. ಗೊತ್ತಿರುವ ಜನರ ಸಂಪರ್ಕಕ್ಕೆ ಗೂಗಲ್+ ಸಾ ನೀಡಿದರೆ, ಕಂಡಕಂಡವರ ಜೊತೆ ಸ್ನೇಹ ಬೆಳೆಸಲು, ಹಿಂಬಾಲಕರನ್ನು ಗಿಟ್ಟಿಸಲು ಫೇಸ್ಬುಕ್, ಟ್ವಿಟರ್ಗಳಿವೆ. ಇವುಗಳಿಂದ ಅಪಾಯವೂ ಇದೆ; ಅನುಕೂಲವೂ ಇದೆ. ವಾಸ್ತವ ಜಗತ್ತಿನಲ್ಲಿ ಇರುವ ಧರ್ಮ – ಅಧರ್ಮಗಳು ಇಂಟರ್ನೆಟ್ ಜಗತ್ತಿನಲ್ಲೂ ಇವೆ ಬಿಡಿ!
4. ಸರಿಯಾದ ಬಳಕೆಯಿಂದ ಭಾರತಕ್ಕೂ ಲಾಭ
ಗಣಕ ಉಳ್ಳವರ, ಮಾಹಿತಿ ತಂತ್ರಜ್ಞಾನದ ಹಾಸಿನಲ್ಲೇ ಬದುಕುವವರ ಜಗತ್ತಿನಲ್ಲಿ ಸ್ಲೇಟ್ ಗಣಕ ಹೊಸ ಕ್ರಾಂತಿಯ ಹರಿಕಾರ. ಬಡವರ ಪಾಲಿಗೆ ಸಾಕ್ಷಾತ್ನಂಥ ದೇಸಿ ಸ್ಲೇಟ್ಗಳೇ ಆಧಾರ (ಬಾಕ್ಸ್ ನೋಡಿ). ಸ್ಲೇಟ್ ಗಣಕದ ಕ್ರಾಂತಿಯನ್ನು ಸಾಮಾಜಿಕ ಉನ್ನತಿಗೆ, ಅಭಿವೃದ್ಧಿಯ ಕ್ರಾಂತಿಗೆ ಬಳಸಬೇಕೆಂದರೆ ಇಷ್ಟಂತೂ ಆಗಲೇಬೇಕು: 1) ಮುಕ್ತ ತಂತ್ರಾಂಶದ, ಅಗ್ಗದ ಸ್ಲೇಟ್ ಗಣಕಗಳ ಭಾರೀ ಉತ್ಪಾದನೆ; ವಿತರಣೆ. 2) ಶಾಲೆ ಕಾಲೇಜುಗಳಲ್ಲಿ ಕಲಿಕೆ-ಅಧ್ಯಯನ-ಸಂಶೋಧನೆಗಳಿಗೆ, ಓದಿಗೆ, ಮಾಹಿತಿಯುಕ್ತ ರಂಜನೆ (ಇನ್ಫೋಟೈನ್ಮೆಂಟ್)ಗೆ, ಸೃಜನಶೀಲ ಬದುಕಿನ ಬೆಳವಣಿಗೆಗೆ ಉಪಯುಕ್ತವಾದ ಸಾವಿರಾರು ಜಾಲತಾಣಗಳನ್ನು ಉಚಿತವಾಗಿ, ಎಣೆಯಿಲ್ಲದೆ ಉಣಬಡಿಸುವ ಉಚಿತ, ಬ್ರಾಡ್ ಬ್ಯಾಂಡ್ ಸಂಪರ್ಕ. 3) ಪಠ್ಯರೂಪದ ಕಲಿಕೆಯ ಜೊತೆಗೇ ಆಡಿಯೋ ವಿಡಿಯೋ ಪಾಠಗಳ ಭರಪೂರ ಸೌಲಭ್ಯ. ಇದಾದರೆ ಭಾರತದಂಥ ದೇಶಗಳಲ್ಲೂ ಸ್ಲೇಟ್ ಗಣಕಗಳು ಸಮಾಜದ ಏಳಿಗೆಗಾಗಿ ಉಪಯೋಗವಾಗುತ್ತವೆ. ‘ಡಿಜಿಟಲ್ ಕಂದರ’ ಕಡಿಮೆಯಾಗುತ್ತದೆ.
ಸ್ಲೇಟ್ ಗಣಕದ ಬಳಕೆ ಹೇಗೆ?
- ಹೆಚ್ಚೆಂದರೆ ಅರ್ಧ ಅಂಗುಲ ದಪ್ಪ, ಬೆಲೆಗೆ ತಕ್ಕಂತೆ ಒಂಬತ್ತರಿಂದ ಹತ್ತೂವರೆ ಅಂಗುಲದವರೆಗಿನ ಸ್ಪರ್ಶ ಸಂವೇದನೆಯ ಪರದೆ ಹೊಂದಿರುವ ಇಂಥ ಸ್ಲೇಟ್ ಗಳ ಅಂಚುಗಳಲ್ಲಿ ಗಣಕಗಳಿಗೆ ಇರುವಂತೆಯೇ ಸ್ವಿಚ್ಚುಗಳು ಇರುತ್ತವೆ. ಮೊದಲು ಈ ಸ್ಲೇಟನ್ನು ಆನ್ ಮಾಡಿ. ಆಮೇಲೆ ಪರದೆಯ ಮೇಲೆ ನವಿರಾಗಿ, ಪ್ರೀತಿಯಿಂದ ಕೈಯಾಡಿಸಿ, ನಿಮಗೆ ಬೇಕಾದ ಅಪ್ಲಿಕೇಶನ್ ತಂತ್ರಾಂಶ ಆರಂಭಿಸಿ, ಬಳಸಿ. ಗಣಕವನ್ನು ಬಳಸಿ ಅನುಭವ ಇರುವವರಿಗೆ ಬಹುಬೇಗ ಹೊಂದಿಕೆಯಾಗುತ್ತದೆ. ಹೊಸಬರಿಗೆ ಒಂದೆರಡು ದಿನ ಸಾಕು!
- ಈ ಸ್ಲೇಟ್ ಗಣಕಗಳಲ್ಲಿ ಸಾಮಾನ್ಯವಾಗಿ ಸಿಮ್ ಕಾರ್ಡ್ ಹಾಕುವ ಅವಕಾಶ ಇರುತ್ತದೆ. ಹಾಗೆ ಮಾಡಿದಾಗ ಈ ಸ್ಲೇಟು ಒಂದು ಮೊಬೈಲ್ ಸಾಧನವಾಗುತ್ತದೆ. ಕರೆ ಮಾಡಿ, ಎಸ್ ಎಂ ಎಸ್ ಕಳಿಸಿ.. ಜಿ ಪಿ ಆರ್ ಎಸ್ ತಂತ್ರಜ್ಞಾನದ ಇಂಟರ್ ನೆಟ್ ಸಂಪರ್ಕ ಇದ್ದರೆ ಈ ಮೈಲ್ ನೋಡಿಕೊಳ್ಳಿ.
- ಅಥವಾ ನಿಮ್ಮ ಮನೆಯಲ್ಲಿ ಬ್ರಾಡ್ ಬ್ಯಾಂಡ್ ಇಂಟರ್ ನೆಟ್ ಸಂಪರ್ಕ ಇದೆ ಎನ್ನಿ. ಈಗಂತೂ ಇಂಥ ಸಂಪರ್ಕಗಳಿಗೆ ವೈರ್ ಲೆಸ್ ಆಂಟೆನಾ ಇರುವ ಮೋಡೆಮ್ ಗಳನ್ನೇ ಕೊಟ್ಟಿರುತ್ತಾರೆ. ನಿಮ್ಮ ಮನೆಯಲ್ಲಿ ಇಂಥ ಮೋಡೆಮ್ ಇಲ್ಲದಿದ್ದರೆ ಬ್ರಾಡ್ ಬ್ಯಾಂಡ್ ಸೇವಾ ಕಂಪೆನಿಗೆ ಹೇಳಿ ಬದಲಿಸಿಕೊಳ್ಳಿ. ವೈರ್ ಲೆಸ್ ಇಂಟರ್ ನೆಟ್ ಎಂದಮೇಲೆ ಸ್ಲೇಟಿಗೆ ಬಹು ಅನುಕೂಲ. ಯಾವ ಅಡೆತಡೆಯೂ ಇಲ್ಲದೆ ಸಂಪರ್ಕ ಸಾಧಿಸುತ್ತದೆ. ನಿಮ್ಮ ವೈರ್ ಲೆಸ್ ಸಂಪರ್ಕದ ರಹಸ್ಯ ಕೀಲಿ ಪದವನ್ನು ಒಮ್ಮೆ ತುಂಬಿಸಿದರೆ ಸಾಕು…
(ನೆನಪಿಡಿ: ನಿಮ್ಮ ಬ್ರಾಡ್ ಬ್ಯಾಂಡ್ ಸೇವೆಗೆ, ಅಥವಾ ಜಿ ಪಿ ಆರ್ ಎಸ್ ಸಂಪರ್ಕಕ್ಕೆ ನೀವು ಈಗಾಗಲೇ ಹೊಂದಿರುವ ಖಾತೆಗೇ ಈ ಸ್ಲೇಟಿನ ಇಂಟರ್ ನೆಟ್ ಖರ್ಚೂ ಸೇರಿಕೊಳ್ಳುತ್ತದೆ)
- ಹೀಗೆ ಇಂಟರ್ ನೆಟ್ ಸಂಪರ್ಕ ಸಾಧಿಸಿದ ಮೇಲೆ ಗೊತ್ತಲ್ಲ? ಇಂಟರ್ ನೆಟ್ ಬ್ರೌಸರ್ (ವಿಹಾರಿಕೆ) ಮೂಲಕ ವಿಶ್ವವ್ಯಾಪಿ ಜಾಲಗಳಲ್ಲಿ ವಿಹರಿಸಬಹುದು.
- ಆದರೆ ಸ್ಲೇಟಿನಲ್ಲಿ ಬರೆಯಲು, ಮಾಹಿತಿಗಳನ್ನು ಊಡಿಸಲು ಕೀಲಿಮಣೆ ಬೇಕು ತಾನೆ? ಅದು ಮಾತ್ರ ಪರದೆಯ ಮೇಲೇ ಕಾಣಿಸಿಕೊಳ್ಳುತ್ತದೆ. ನಿಮ್ಮಲ್ಲಿ ಹೆಚ್ಚು ಕಾಸಿದ್ದರೆ, (ಕಾಸಿದ್ರೆ ಕೈ-ಲಾಸ್!) ಕೆಲವು ಸ್ಲೇಟ್ ಗಣಕಗಳ ಮಾದರಿಗಳಿಗೆ ವೈರ್ ಲೆಸ್ ಕೀಲಿಮಣೆಯನ್ನು ಖರೀದಿಸಬಹುದು.
- ಮತ್ತೆ ಈ ಲೇಖನದ ಮೊದಲು ಹೇಳಿದ ಸಾಧನಗಳು ಎಲ್ಲಿ? ಈ ಸಾಧನಗಳನ್ನು ‘ಆಪ್ಸ್’ ಎಂದು ಕರೆಯುತ್ತಾರೆ. (ಗಣಕಗಳಲ್ಲಿ ಇವನ್ನೆಲ್ಲ ಅಪ್ಲಿಕೇಶನ್ ಎನ್ನುತ್ತಿದ್ದರು. ಅದನ್ನೇ ಸರಳಗೊಳಿಸಿ ಆಪ್ಸ್ ಎಂದು ಕರೆದಿದ್ದಾರೆ ಬಿಡಿ). ಕೆಲವು ಮೊದಲೇ ಸ್ಲೇಟ್ ಗಣಕದಲ್ಲಿ ಬಳಕೆಗೆ ಸಿದ್ಧ. ಇನ್ನು ಕೆಲವನ್ನು ನೀವು ಆಪ್ಸ್ ಮಾರುಕಟ್ಟೆಯಲ್ಲಿ ಕೊಳ್ಳಬೇಕು. ಅವುಗಳಲ್ಲಿ ಕೆಲವು ಉಚಿತ; ವಸ್ತುಶಃ ಬಿಟ್ಟಿ. ಇನ್ನು ಕೆಲವು ಖರೀದಿಸಬೇಕಾದವು. ಆದರೆ ಮೇಲೆ ಪಟ್ಟಿಯಾದವೆಲ್ಲ ಬಹುತೇಕ ಉಚಿತ. (ಇದಕ್ಕೆ ಆಪಲ್ ಐಪ್ಯಾಡ್ ಅಪವಾದ).
- ನೀವು ಗಣಕದಲ್ಲಿ ಹಲವು ಬಗೆಯ ಅಪ್ಲಿಕೇಶನ್ (ಟೋಶಾಪ್, ವರ್ಡ್, ಎಕ್ಸೆಲ್, ಓಪನ್ ಆಫೀಸ್, ವಿನ್ ಆಂಪ್ ಇತ್ಯಾದಿ)ಗಳನ್ನು ಒಂದೇ ಕಾಲದಲ್ಲಿ ಬಳಸುವ ಹಾಗೆಯೇ ಇಲ್ಲಿಯೂ ಹಲವು ಆಪ್ಸ್ ಗಳನ್ನು ಬಳಸಬಹುದು. ಉದಾಹರಣೆಗೆ ಹಾಡು ಕೇಳುತ್ತ ಸ್ತಕ ಓದಬಹುದು. ಎರಡು ಮೂರು ಪರದೆಗಳಲ್ಲಿ ಸುದ್ದಿ ಓದಬಹುದು…. ನಡುವೆ ನ್ ಕರೆ ಬಂದರೆ ಸ್ವೀಕರಿಸಬಹುದು.
ತಂತ್ರಾಂಶಗಳ ಬಗ್ಗೆ ತಿಳಿದಿರಲಿ
ಈ ಸ್ಲೇಟ್ ಗಣಕಗಳೂ ಮೂಲತಃ ಗಣಕಗಳಂತೆಯೇ ಆಪರೇಟಿಂಗ್ ತಂತ್ರಾಂಶವನ್ನು ಬಳಸುತ್ತವೆ. ಐಪ್ಯಾಡಿನಲ್ಲಿ ಐ ಓ ಎಸ್ ಇದ್ದರೆ, ಗೆಲಾಕ್ಸಿ ಟ್ಯಾಬಿನಲ್ಲಿ ಆಂಡ್ರಾಯ್ಡ್ ಇದೆ. ಕೆಲವದರಲ್ಲಿ ವಿಂಡೋಸ್ ಮನೆ ಮಾಡಿವೆ. ಇವುಗಳಲ್ಲಿ ಆಂಡ್ರಾಯ್ಡ್ ಆಧಾರಿತ ಸ್ಲೇಟುಗಳಾದರೆ ಒಳ್ಳೆಯದು; ಏಕೆಂದರೆ ಅದು ಮುಕ್ತ ತಂತ್ರಾಂಶ. ಅದನ್ನು ಆಧರಿಸಿ ತಯಾರಾಗುವ ಆಪ್ಸ್ ಗಳೂ ಬಹುತೇಕ ಮುಕ್ತವೇ. ಮುಕ್ತ ತಂತ್ರಾಂಶ ಎಂದಮೇಲೆ ಹಲವು ಆಪ್ಸ್ ಗಳು ಉಚಿತವಾಗಿಯೂ ಸಿಗುತ್ತವೆ. (ಮುಕ್ತ ತಂತ್ರಾಂಶ ಎಂದರೆ ಬಿಟ್ಟಿಯಲ್ಲ; ಉಚಿತ ಎಂದರೆ ಮುಕ್ತವಲ್ಲ – ಈ ವಿಷಯ ಇಷ್ಟು ತಿಳಿದಿದ್ದರೆ ಸಾಕು!)
ಈ ಸ್ಲೇಟ್ ಗಣಕಗಳನ್ನು ಖರೀದಿಸುವ ಬಯಕೆ ನಿಮಗಿದ್ದರೆ ನೀವು ಕೆಲವು ಸಂಗತಿಗಳನ್ನು ಎಚ್ಚರಿಕೆಯಿಂದ ಗಮನಿಸಬೇಕು:
- ಆಪರೇಟಿಂಗ್ ತಂತ್ರಾಂಶ: ಸದ್ಯಕ್ಕಂತೂ ಆಂಡ್ರಾಯ್ಡ್ ತಂತ್ರಾಂಶವಾದರೆ ಒಳ್ಳೆಯದು. ಇದು ಮುಕ್ತ ತಂತ್ರಾಂಶವಾದ್ದರಿಂದ ಇದರಲ್ಲಿ ಹೆಚ್ಚು ಆಪ್ಸ್ ಗಳನ್ನು ಸಮುದಾಯವೇ ಮುಕ್ತವಾಗಿ ರೂಪಿಸುವ ಸಾಧ್ಯತೆಗಳಿವೆ. ಆಪಲ್ ಈ ಪ್ಯಾಡಿನಲ್ಲಿ ಇರುವುದು ಅದರದ್ದೇ ಐ ಓ ಎಸ್ ಎಂಬ ತಂತ್ರಾಂಶ. ಅಲ್ಲದೆ ಇಲ್ಲಿ ಆಪಲ್ ಸಂಸ್ಥೆಯು ಯಾವ ಆಪ್ಸ್ ಬೇಕು ಬೇಡ ಎಂದು ನಿರ್ಧರಿಸುತ್ತದೆ. ಆಯ್ಕೆ ಆಪಲ್ ಸಂಸ್ಥೆಗೆ ಸೇರಿದ್ದು, ನಿಮಗಲ್ಲ! ಉಳಿದಂತೆ ವಿಂಡೋಸ್ ಆಪರೇಟಿಂಗ್ ತಂತ್ರಾಂಶವೂ ಮುಕ್ತವೇನಲ್ಲ; ಆದರೆ ಬಳಸಿ ಅಭ್ಯಾಸ ಇರುವುದರಿಂದ ಗಣನೆಗೆ ತೆಗೆದುಕೊಳ್ಳಬಹುದು. ಕ್ರೋಮ್ ತಂತ್ರಾಂಶವನ್ನೂ ಬಳಸಿರೋ ಸ್ಲೇಟುಗಳು ಬರಲಿವೆ.
- ಸ್ಲೇಟ್ ಗಣಕದ ಪರದೆಯ ತಂತ್ರಜ್ಞಾನ: ಸ್ಲೇಟಿನ ಎಲ್ಲ ಕೆಲಸಗಳೂ ಪರದೆಯನ್ನು ಬೆರಳಿನಿಂದ ಮುಟ್ಟಿಯೇ ಆಗಬೇಕು. ಆದ್ದರಿಂದ ಈ ಪರದೆಯ ಗುಣಮಟ್ಟ, ತಂತ್ರಜ್ಞಾನ ನಿಮಗೆ ಅನುಕೂಲವಾಗಿಯೇ ಇರಬೇಕಲ್ವೆ? ಇಲ್ಲಿ ಎರಡು ಬಗೆಯ ಪರದೆಗಳಿವೆ. ಒಂದು ಕೆಪಾಸಿಟಿವ್ ಪರದೆ. ಇನ್ನೊಂದು ರೆಸಿಸ್ಟಿವ್ ಪರದೆ. ಕೆಪಾಸಿಟಿವ್ ಪರದೆಯ ಮೇಲೆ ಅತಿ ಸೂಕ್ಷ್ಮವಾಗಿ ವಿದ್ಯುತ್ ಪ್ರವಾಹ ಹರಿದಿರುತ್ತದೆ. ನಿಮ್ಮ ಬೆರಳೂ ವಿದ್ಯುತ್ ವಾಹಕ ತಾನೆ? ಆದ್ದರಿಂದ ಬೆರಳಿನ ಸಣ್ಣ ಸ್ಪರ್ಶಕ್ಕೂ ಪರದೆಯ ಮೇಲಿನ ಮಾಹಿತಿಗಳು ಸ್ಪಂದಿಸುತ್ತವೆ. ಈ ಪರದೆಯನ್ನು ಬಳಪ (ಸ್ಟೈಲಸ್ : ವಿಶಿಷ್ಟವಾದ ಎಲೆಕ್ಟ್ರಾನಿಕ್ ಮೊನೆಯ ಪೆನ್ನು )ದ ಮೂಲಕ ಮಾತಾಡಿಸಲು ಬರುವುದಿಲ್ಲ! ಅಥವಾ ಉಗುರಿನಿಂದ ಯತ್ನಿಸಿ… ಉಹು… ಬರುವುದಿಲ್ಲ. ಬಹುತೇಕ ಸ್ಲೇಟ್ ಗಣಕಗಳು ಇಂಥ ಕೆಪಾಸಿಟಿವ್ ಪರದೆಗಳನ್ನೇ ಹೊಂದಿವೆ.
ಇದಲ್ಲದೆ ರೆಸಿಸ್ಟಿವ್ ಪರದೆಗಳನ್ನು ಹೊಂದಿದ ಸ್ಲೇಟುಗಳೂ ಇವೆ. ಇಲ್ಲಿ ನೀವು ಸ್ಟೈಲಸ್ ಬಳಸಬಹುದು; ನಾಚಿಕೆಯಿಲ್ಲದೆ ಉಗುರಿನಿಂದ ಗೀರಬಹುದು!
ಇನ್ನೂ ಬಗೆಬಗೆಯ ಪರದೆಯ ತಂತ್ರಜ್ಞಾನಗಳು ಇವೆಯೇನೋ ನಿಜ. ಆದರೆ ಸದ್ಯಕ್ಕೆ ಇಷ್ಟು ಮಾಹಿತಿ ಸಾಕು.
- ಗಾತ್ರ: ಸಾಮಾನ್ಯವಾಗಿ ಇದನ್ನು ಸುರಕ್ಷಾ ಚೌಕಟ್ಟು ಬಿಟ್ಟಂತೆ, ಕೇವಲ ಬಳಕೆಯ ಪರದೆಯ ಕರ್ಣರೇಖೆ (ಒಂದು ಮೂಲೆಯಿಂದ ಇನ್ನೊಂದು ಮೂಲೆಯವರೆಗಿನ ಉದ್ದದಿಂದ ಅಳೆಯುತ್ತಾರೆ. ಈ ವಿಷಯದಲ್ಲಿ ಐ ಪ್ಯಾಡು 25 ಸೆಂ.ಮೀ ಉದ್ದದ ಪರದೆಯನ್ನು ಹೊಂದಿ ಸ್ಯಾಮ್ ಸಂಗ್ ಗೆಲಾಕ್ಸಿಗಿಂತ ಮುಂದಿದೆ. ಗೆಲಾಕ್ಸಿಯದು ಕೇವಲ 23 ಸೆಂ. ಮೀ. ಆದರೆ ಇದೆಲ್ಲ ನೀವು ನೋಡಿ, ಅನುಭವಿಸಿಯೇ ನಿರ್ಧರಿಸಬೇಕಾದ ವಿಚಾರ. ಕೇವಲ ಕರ್ಣರೇಖೆಯಿಂದಲೇ ಗಾತ್ರವನ್ನು ಅಳೆಯಲಾಗದು. ಪರದೆಯ ರೆಸೊಲುಶನ್ ಹೇಗಿದೆ ಎಂಬುದನ್ನೂ ಗಮನಿಸಬೇಕು.
- ತೂಕ: ಇದೇನು ಪರವಾಗಿಲ್ಲ. ಎಲ್ಲವೂ ಸಾಮಾನ್ಯವಾಗಿ ಅರ್ಧ ಕಿಲೋಗ್ರಾಂ ನಿಂದ ಒಂದೂಕಾಲು ಕಿಲೋಗ್ರಾಂವರೆಗೆ ತೂಗುತ್ತವೆ. ಇರುವ ಸಾಧನಗಳಿಗೆ ಹೋಲಿಸಿದರೆ, ಬಳಕೆಯ ಸುರಳೀತವನ್ನು ಗಮನಿಸಿದರೆ, ಇದು ನಗಣ್ಯವೇ. ಆದರೆ ಇದರಲ್ಲಿ ತುಂಬಿಸಿಕೊಂಡ ಪ್ರತಿಯೊಂದೂ ಸ್ತಕವೂ, ಅದು ಎಷ್ಟೇ ಟಗಳನ್ನು ಹೊಂದಿರಲಿ, ಈ ತೂಕವನ್ನು ಮೀರುವುದಿಲ್ಲ ಅನ್ನೋದೇ ಸಂತಸದ ಸಂಗತಿ! ಅಷ್ಟೇ ಏಕೆ, ಸಾವಿರಾರು ಸ್ತಕಗಳನ್ನು ಈ ಮುಕ್ಕಾಲು ಕಿಲೋ ತೂಕದ ಸ್ಲೇಟಿನಲ್ಲಿ ತುಂಬಿಸಿಕೊಂಡು, ಇಂಟರ್ ನೆಟ್ ಇರದೇ ಇದ್ದರೂ ಎಲ್ಲಿ ಬೇಕಾದರೂ ಓದಬಹುದು.
- ಬೆಲೆ: ಈ ಬಗ್ಗೆ ಏನು ಹೇಳಿದರೂ ಕಡಿಮೆಯೇ! ಐಪ್ಯಾಡಿನ ಬೆಲೆ 30ರಿಂದ 50 ಸಾವಿರ ಇದ್ದರೆ, ಗೆಲಾಕ್ಸಿ ಟ್ಯಾಬ್ ಬೆಲೆ ಸುಮಾರು 35 ಸಾವಿರ. ಈ ಬೆಲೆಗಳೆಲ್ಲ ವಿವಿಧ ಮಾದರಿಗಳನ್ನು ಅವಲಂಬಿಸಿವೆ. ಆದ್ದರಿಂದ ನೀವು ಅಂಗಡಿಗೆ ಹೋಗಿ ಕೇಳಿದಾಗ ಇರುವ ಬೆಲೆಯೇ ಸರಿಯಾದ ಬೆಲೆ.
ಸ್ಲೇಟ್ ಗಣಕದ ಅಗಣಿತ ಗುಣಗಳು
- ಅಕ್ಸೆಲೆರೋಮೀಟರ್: ಸ್ಲೇಟ್ ಗಣಕವನ್ನು ಚಲಿಸಿದ ವೇಗ ಮತ್ತು ಇಟ್ಟುಕೊಂಡ ದಿಕ್ಕನ್ನು ಅನುಸರಿಸಿ, ಓದುವ, ಗೇಮ್ ಗಳಲ್ಲಿ ಬಳಸುವ ಹೊಸ ಪರಿ ಇದರಲ್ಲಿದೆ. ಕಾರಿನ ರೇಸ್ ಆಟದಲ್ಲಿ ನೀವು ಸ್ಲೇಟನ್ನೇ ಸ್ಟಿಯರಿಂಗ್ ಚಕ್ರ ಎಂದು ಪರಿಗಣಿಸಬಹುದು. ಚಿತ್ರವೊಂದು ಅಡ್ಡವಾಗೇ ಚೆನ್ನಾಗಿ, ರ್ತಿಯಾಗಿ ಕಾಣುಸುವುದಿದ್ದರೆ, ಸ್ಲೇಟನ್ನೇ ಅಡ್ಡ ಹಿಡಿದರಾಯಿತು. ಅಥವಾ ಸಿನೆಮಾ ನೋಡಲಂತೂ ಅಡ್ಡಡ್ಡ ಅಗಲವಾದ ಪರದೆಯೇ ಬೇಕು ತಾನೆ?
- ಸಂಗ್ರಹ ಸಾಮಥ್ರ್ಯ: ಈ ಸ್ಲೇಟುಗಳು ವಿವಿಧ ಮೆಮೊರಿ ಸಾಮಥ್ರ್ಯಗಳನ್ನು ಹೊಂದಿವೆ. 32 ಗಿಗಾಬೈಟ್ ವರೆಗೂ ಸಾಮಥ್ರ್ಯ ಇರುವ ಸ್ಲೇಟುಗಳಿವೆ.
- ವೈರ್ ಲೆಸ್, ಬ್ಲೂ ಟೂತ್: ಇವೆರಡೂ ಸೌಲಭ್ಯ ಇರುವುದರಿಂದ ವೈರುಗಳಿಲ್ಲದೆ (ವೈರಿಗಳಲ್ಲ!) ಇಂಟರ್ ನೆಟ್ ಸಂಪರ್ಕ ಹೊಂದುವುದು ಸುಲಲಿತ. ಹಾಗೆಯೇ ಬ್ಲೂ ಟೂತ್ ನಿಂದ ಹತ್ತಿರದ ಎಲೆಕ್ಟ್ರಾನಿಕ್ ಸಾಧನಗಳ ಜೊತೆ ಸಂಪರ್ಕ ಸಾಧಿಸಬಹುದು. ಮೊಬೈಲಿನಿಂದ ಸ್ಲೇಟಿಗೆ ಯಾವುದೇ ಕಡತವನ್ನು ಕಳಿಸಬಹುದು.
- ಕೀಲಿಮಣೆ, ಮೌಸ್ ಇಲ್ಲದೆ, ಬೇಕೆಂದಲ್ಲಿ (ಮಂಚದಲ್ಲಿ ಮಲಗಿ,ಶೌಚಾಲಯದಲ್ಲಿ ಕೂತು, ಕಾರಿನಲ್ಲಿ ಆರಾಮಾಗಿ ಒರಗಿ, ಬಸ್ ನಿಲ್ದಾಣದಲ್ಲಿ ಬಸ್ಸಿಗಾಗಿ ಕಾಯುತ್ತ ನಿಂತು, ಗೋಡೆಗೆ ಒರಗಿ ತೊಡೆಯ ಮೇಲಿಟ್ಟುಕೊಂಡು… ಊಹೆ ನಿಮ್ಮದು) ಬಳಸಬಹುದಾದ ಸಾಧನ.
- ಬಹು ಬಿಂದು ಸ್ಪರ್ಶಸಂವಹನದಿಂದ ಹಲವು ಹೊಸ ಸಾಧ್ಯತೆಗಳ ಬಳಕೆ. ಮೌಸಿನಲ್ಲಿ ನೀವು ಒಂದೇ ಬಿಂದುವಿನಲ್ಲಿ ಕಾರ್ಯಾಚರಿಸಿದರೆ, ಇಲ್ಲಿ ನೀವು ಎರಡು ಅಥವಾ ಹೆಚ್ಚು ಬಿಂದುಗಳ ಮೂಲಕ ಸ್ಲೇಟನ್ನು ಬಳಸಬಹುದು. ಚಿತ್ರವೊಂದನ್ನು ಹಿಗ್ಗಿಸಲು ನೀವು ಎರಡೂ ಮೂಲೆಗಳಲ್ಲಿ ಬೆರಳು ತಾಗಿಸಿ ಎಳೆದರಾಯಿತು…
- ಧ್ವನಿ ಸಂದೇಶ: ಗೂಗಲ್ ಸಂಸ್ಥೆಯ ತಂತ್ರಾಂಶ ಬಳಸಿದ ಗೆಲಾಕ್ಸಿ ಟ್ಯಾಬ್ ನಲ್ಲಿ ನೀವು ಮಾತಿನ ಮೂಲಕವೇ ಗೂಗಲ್ ಹುಡುಕಾಟ ನಡೆಸಬಹುದು ಅನ್ನಿ. ಹೀಗೆ ಧ್ವನಿಯನ್ನೂ ಗಣಕದ ಬಳಕೆಗೆ ವ್ಯಾಪಕವಾಗಿ ಬಳಸಿರೋದು ಈ ಸ್ಲೇಟುಗಳೇ.
ಸ್ಲೇಟ್ ಗಣಕದ ಅನನುಕೂಲಕಾರಿ ಗುಣಗಳು
- ದುಬಾರಿ ಬೆಲೆ: ಒಂದು ಗಣಕವನ್ನೇ ಕೊಂಡಷ್ಟು ಬೆಲೆ ಈ ಸ್ಲೇಟ್ ಗಣಕಗಳಿಗಿದೆ. ಇದು ಭಾರತಕ್ಕೆ ಎಟುಕುವುದೇ ಎಂಬ ಪ್ರಶ್ನೆ ಎಲ್ಲರ ಮುಂದಿದೆ.
- ಕೀಲಿಮಣೆ ಮಾಹಿತಿ ಊಡಿಸುವಿಕೆ ನಿಧಾನ: ಪರದೆಯ ಮೇಲಿನ ಕೀಲಿಮಣೆಯನ್ನು ಬಳಸಿ ನಿಧಾನವಾಗಿ ಗುಂಡಿಗಳನ್ನು ಒತ್ತುವುದು ಸಾಮಾನ್ಯ ಕೀಲಿಮಣೆ ವೇಗಕ್ಕಿಂತ ತುಂಬಾ ಕಡಿಮೆ. ಆದ್ದರಿಂದ ದೊಡ್ಡ ದೊಡ್ಡ ಕಡತಗಳನ್ನು ಬರೆಯುವುದಕ್ಕೆ ಹೋಗಬೇಡಿ. ಒಂದು ಸಣ್ಣಕಥೆಯನ್ನು ಬರೆಯುವುದೂ ಇಲ್ಲಿ ಕಷ್ಟದ ಕೆಲಸ. ಇದ್ದದ್ದನ್ನು ಬಳಸಿ; ಕನಿಷ್ಟ ಪದಗಳ ಸಂದೇಶ ರಚಿಸಿ ? ಅಷ್ಟೆ.
- ಕನ್ನಡ ಕೀಲಿಮಣೆಯಂತೂ ಈ ಸ್ಲೇಟುಗಳಲ್ಲಿ ಇಲ್ಲ. ಈಗ ವಿಶ್ವದೆಲ್ಲೆಡೆ ಮಾನ್ಯವಾಗಿರುವ ಯೂನಿಕೋಡ್ ಅಕ್ಷರಗಳನ್ನೂ ಇಲ್ಲಿ ಟಂಕಿಸಲು ಬರುವುದಿಲ್ಲ. ಇನ್ನು ನುಡಿ, ಬರಹ ತಂತ್ರಾಂಶಗಳ ಬಳಕೆಯಂತೂ ದೂರದ ಮಾತು. ಆದರೆ ನೀವು ಐ ಪ್ಯಾಡಿನಲ್ಲಿ ಕನ್ನಡದ (ಯೂನಿಕೋಡ್) ಜಾಲತಾಣಗಳನ್ನು ಸುಲಭವಾಗಿ ನೋಡಬಹುದು; ಗೆಲಾಕ್ಸಿ ಟ್ಯಾಬ್ ಸ್ಲೇಟಿನಲ್ಲಿ ನೀವು ಒಪೆರಾ ಮಿನಿ ಬ್ರೌಸರನ್ನೇ ಅವಲಂಬಿಸಬೇಕು. ಇವೆಲ್ಲ ಕನ್ನಡಕ್ಕೆ ಸಂಬಂಧಿಸಿದ ಸಂಗತಿಗಳು.
- ಪರದೆಯ ಅತಿಬಳಕೆ: ಇಡೀ ಸ್ಲೇಟ್ ಗಣಕವು ಪರದೆಯ ಮೇಲಿನ ಚಟುವಟಿಕೆಗಳಿಂದಲೇ ನಡೆಯುವುದರಿಂದ ಪರದೆಗಳು ಹಾಳಾಗುವ ಸಾಧ್ಯತೆ ಹೆಚ್ಚು.
ಸ್ಲೇಟ್ ಗಣಕ ಮತ್ತು ಆರೋಗ್ಯ
ಸ್ಲೇಟ್ ಗಣಕಗಳು ಬ್ಯಾಟರಿಯನ್ನೇ ಅವಲಂಬಿಸಿ ಬಾಳುವ ಯಂತ್ರಗಳು. ಆದ್ದರಿಂದ ಇವುಗಳಲ್ಲಿ ಮೊಬೈಲ್ ಗಳಲ್ಲಿ ಇರುವಂತೆಯೇ ಬ್ಯಾಟರಿಗಳು ಇವೆ. ಇವು ಎಲ್ಲ ಬ್ಯಾಟರಿಗಳಂತೆಯೇ ಆರೋಗ್ಯದ ಮೇಲೆ ಪರಿಣಾಮ ಬೀರುತ್ತವೆ. ಉಳಿದಂತೆ ಅಂಥ ದುಷ್ಪರಿಣಾಮಗಳಿಲ್ಲ. ಸ್ಲೇಟ್ ಗಣಕವನ್ನು ಒಮ್ಮೆ ಬಳಸಿದ ಮೇಲೆ ಅದನ್ನು ಎಲ್ಲೆಲ್ಲೂ ಬಿಡದೆ ಸಂಚರಿಸಲಾಗದ ರೋಗ ಕೆಲವರನ್ನು ಬಾಧಿಸೀತು; ಇದಕ್ಕೆ ಮದ್ದಿಲ್ಲ!
ಸ್ಲೇಟು ಗಣಕಗಳಿಗೆ ಭಾರತದಲ್ಲಿ ಮಾರುಕಟ್ಟೆ ಇದೆಯೆ?
ಈ ಹಿಂದೆ ಮೊಬೈಲ್ ಕ್ರಾಂತಿಯಾದಾಗ ಭಾರತದ ಮಾರುಕಟ್ಟೆಯ ಬಗ್ಗೆ ಇದ್ದ ಒಂದು ಮೂಢನಂಬಿಕೆಯನ್ನು ನೆನಪಿಸಿಕೊಳ್ಳಿ: ಭಾರತದಲ್ಲಿ ಖರೀದಿ ಸಾಮಥ್ರ್ಯ ಕಡಿಮೆ; ಕೊಳ್ಳುವವರಿಲ್ಲ ಎಂದೇ ಎಲ್ಲರೂ ನಂಬಿದ್ದರು. ಆದರೆ ಹನ್ನೆರಡು ವರ್ಷಗಳ ನಂತರ ಏನಾಗಿದೆ? ಭಾರತದ ಮೂಲೆ ಮೂಲೆಯಲ್ಲೂ ಮೊಬೈಲ್ ಅಂಗಡಿಗಳಿವೆ. ಭಿಕ್ಷುಕನಿಂದ ಹಿಡಿದು ಭವ್ಯ ಬಂಗ್ಲೆವರೆಗೆ, ವೇಶ್ಯೆಯರಿಂದ ಹಿಡಿದು ಭೂಗತ ದೊರೆಗಳವರೆಗೆ, ರೈತರಿಂದ ಹಿಡಿದು ರಾಜಕಾರಣಿಗಳವರೆಗೆ – ಮೊಬೈಲ್ಗಳು ಸರ್ವಸ್ಪರ್ಶಿಯಾಗಿ ಆವರಿಸಿವೆ.
ಕೊಳ್ಳುಬಾಕ ಸಂಸ್ಕೃತಿಯು ಈಗ ವಿಪರೀತವಾಗಿ, ಸಾಂಕ್ರಾಮಿಕವಾಗಿ ಹಬ್ಬಿರುವಾಗ ಸ್ಲೇಟು ಗಣಕಗಳೂ ಅಪಾರ ಸಂಖ್ಯೆಯಲ್ಲಿ ಮಾರಾಟವಾಗುವುದರಲ್ಲಿ ಸಂಶಯವಿಲ್ಲ.
ಯಾರಿಗೆ ಸ್ಲೇಟ್ ಗಣಕ ಅಗತ್ಯ?
- ನೀವು ತುಂಬಾ ಕ್ರಿಯಾಶೀಲರಾಗಿದ್ದರೆ; ಅಥವಾ ಗಣಕದ ಮೇಜಿನ ಮುಂದೆ ಕೂರಲಾಗದ ಸೋಮಾರಿಯಾಗಿದ್ದರೆ
- ನೀವು ಹಾಡು, ಸಿನೆಮಾ, ವಿಡಿಯೋಗಳನ್ನು ನೋಡುವ ಆರಾಮು ಜೀವಿಯಾಗಿದ್ದರೆ
- ಕಂಡಕಂಡಲ್ಲೆಲ್ಲ ಸ್ತಕಗಳನ್ನು ಓದುವ ಕುಡುಮಿಯಾಗಿದ್ದರೆ, ಅಥವಾ ಹೊಸ ಸ್ತಕಗಳ ಹುಚ್ಚು ವಿಪರೀತವಾಗಿದ್ದರೆ
- ಮೊಬೈಲನ್ನು ಸ್ತಕವಾಗಿಯೂ, ಸ್ತಕವನ್ನು ಆಟದ ಮಣೆಯಾಗಿಯೂ, ಮಣೆಯನ್ನು ಸಿನೆಮಾ ಪರದೆಯಾಗಿಯೂ, ಪರದೆಯನ್ನು ಎಸ್ ಎಂ ಎಸ್ ಸಂದೇಶದ ಹಾಳೆಯಾಗಿಯೂ, ಹಾಳೆಯನ್ನು ಚಿತ್ರ ಬರೆಯುವ ಕ್ಯಾನ್ವಾಸ್ ಆಗಿಯೂ ? ಹೀಗೆ ವಿಧವಿಧವಾಗಿ ಬಳಸಬೇಕೆಂಬ ಹುಮ್ಮಸ್ಸು ಮತ್ತು ತರಲೆಯ ಗುಣ ಇದ್ದರೆ
- ಮನೆಯಲ್ಲಿ ಮಿತಿಯಿಲ್ಲದ ಸ್ಕೀಮಿನ ಬ್ರಾಡ್ ಬ್ಯಾಂಡ್, ಹಾದಿಯಲ್ಲಿ 3ಜಿ ಸಿಮ್, ಕಚೇರಿಯಲ್ಲಿ ಬಿಟ್ಟಿ ವೈ ಇದ್ದರೆ,
- ಮುಖ್ಯವಾಗಿ ಕೈಯಲ್ಲಿ ಕಾಸಿದ್ದರೆ, ದೇಹಕ್ಕೆ, ಮನಸ್ಸಿಗೆ ಸಮಯವಿದ್ದರೆ… !
1. ಸ್ಲೇಟ್ ಇತಿಹಾಸಕ್ಕೆ 130 ವರ್ಷ!
ಸ್ಲೇಟುಗಳ ಇತಿಹಾಸ 1888ರಲ್ಲೇ ಆರಂಭವಾಯಿತು ಗೊತ್ತೆ? ಎಲಿಶಾ ಗ್ರೇ ಎಂಬಾತ ಒಂದು ಕಡೆ ಬರೆದಿಟ್ಟ ಕೈಬರಹದ ಸಾಲುಗಳನ್ನು ಟೆಲಿಗ್ರಾಫ್ ಸಂಕೇತಗಳ ಮೂಲಕ ಇನ್ನೊಂದೆಡೆ ಸಾಗಿಸಲು ಒಂದು ಸಾಧನವನ್ನೇ ರೂಪಿಸಿದ್ದ. ಇಲ್ಲಿ ಬೆಳಕಿನ ವೇಗದಲ್ಲೇ ಹಸ್ತಾಕ್ಷರಗಳೂ ರವಾನೆಯಾಗುತ್ತಿದ್ದವು! ಈ ಮೈಲ್ ಗೂ ಇದಕ್ಕೂ ವ್ಯತ್ಯಾಸವೇ ಇಲ್ಲ ಎನ್ನಬಹುದು. ಪೆನ್ನಿನಂತೆ ಕಾಣುವ ಲೋಹದ ಸ್ಟೈಲಸ್ (ಬಳಪ) ಬಳಸಿ ಬರೆದರೆ, ಅದರ ಚಲನವಲನಗಳೆಲ್ಲವೂ ಇನ್ನೊಂದೆಡೆ ಯಥಾವತ್ತಾಗಿ ಮೂಡುತ್ತಿದ್ದವು.
ಅದಾಗಿ 1993ರಲ್ಲಿ (105 ವರ್ಷಗಳ ನಂತರ) ಆಪಲ್ ಸಂಸ್ಥೆಯು ನ್ಯೂಟನ್ ಮೆಸೇಜ್ ಪ್ಯಾಡ್ ಎಂಬ ಎಲ್ ಸಿ ಡಿ (ಲಿಕ್ವಿಡ್ ಕ್ರಿಸ್ಟಲ್ ಪರದೆ) ಆಧಾರಿತ ಕೈಗಣಕವನ್ನು ಮಾರುಕಟ್ಟೆಗೆ ತಂದಿತ್ತು. ಆಮೇಲೆ ಬಂದ ಐನ್ ಮಾದರಿಗಳೂ ಒಂದು ಬಗೆಯಲ್ಲಿ ಇಂಥ ಸ್ಲೇಟುಗಳೇ.
ಇವಲ್ಲದೆ, ಕಲಾವಿದರಿಗೆ ಅನುಕೂಲವಾಗಲೆಂದು ಬಳಪ ಮತ್ತು ಸ್ಲೇಟ್ ಗಾತ್ರದ ಮೌಸ್ ಪ್ಯಾಡ್ ನ ಹೊಸ ಜೋಡಿಯೂ ಮಾರುಕಟ್ಟೆಗೆ ಬಂದಿದೆ. ಇಲ್ಲಿ. ಬಳಪದ ಮೇಲೆ ಬರೆದಿದ್ದೆಲ್ಲ ಗಣಕದ ಪರದೆಯ ಮೇಲೆ ಮೂಡುತ್ತದೆ. ಈಗಂತೂ ಗ್ರಾಫಿಕ್ ಕಲಾವಿದರು ಇಂಥ ಸಾಧನಗಳನ್ನು ಹೆಚ್ಚೆಚ್ಚು ಬಳಸುತ್ತಿದ್ದಾರೆ. ಸಾಮಾನ್ಯವಾಗಿ ಬಳಸುವ ಇಲಿಗಿಂತ (ಮೌಸ್) ಈ ಟ್ಯಾಬ್ಲೆಟ್ಗಳು ಹೆಚ್ಚು ನಿಯಂತ್ರಣ ನೀಡುತ್ತವೆ. ಸೃಜನಶೀಲತೆಗೆ ಎಣೆಯಿಲ್ಲದಂತೆ ಇಲ್ಲಿ ಹಲವು ಸಾಧ್ಯತೆಗಳಿವೆ.
2. ಭಾರತದಲ್ಲಿ 1000 ರೂಪಾಯಿಗೆ ಒಂದು ಸ್ಲೇಟ್ ಗಣಕ?
ಕಳೆದ ವರ್ಷದ ಜುಲೈನಲ್ಲಿ ಕೇಂದ್ರ ಮಾನವ ಸಂಪನ್ಮೂಲ ಸಚಿವ ಕಪಿಲ್ ಸಿಬಲ್ ಮುಖದಲ್ಲೆ ನಗೆಯೋ ನಗೆ. ಅವರು `ಸಾಕ್ಷಾತ್’ ಎಂಬ ಬ್ರಾಂಡಿನ ಸ್ಲೇಟ್ ಗಣಕವೊಂದನ್ನು ಕೈಯಲ್ಲಿ ಹಿಡಿದಿದ್ದರು. ಸುಮಾರು 1600 ರೂ. ಬೆಲೆಯ ಈ ಸಾಧನವನ್ನು ಭಾರತದ ವಿದ್ಯಾಗಳಿಗೆ ಇದನ್ನು ಶೇ. 50ರ ಸಬ್ಸಿಡಿ ದರದಲ್ಲಿ 1000 ರೂ.ಗಳಿಗೆ ನೀಡಲಾಗುವುದು ಎಂದು ಅವರು ೋಷಿಸಿದ್ದರು.
ಎಚ್ ಸಿ ಎಲ್ ಇನ್ಫೋ ಸಿಸ್ಟಮ್ಸ್ ಸಂಸ್ಥೆಯು ರೂಪಿಸಿದ ಈ ಸಾಕ್ಷಾತ್ ಸ್ಲೇಟ್ ಗಣಕವನ್ನು ದೇಶದ 390 ವಿಶ್ವವಿದ್ಯಾಲಯಗಳಲ್ಲಿ ವಿತರಿಸಲಾಗಿದೆ, ಪ್ರತಿಯೊಂದೂ ರಾಜ್ಯಕ್ಕೆ ಇಂಥ 3000 ಗಣಕಗಳನ್ನು ರೈಸಲಾಗುವುದು ಎಂದು ಸಚಿವಾಲಯದ ಇತ್ತೀಚೆಗಿನ ಪ್ರಕಟಣೆ ತಿಳಿಸಿದೆ. ಈಗ ಇದು ಪರೀಕ್ಷಾ ಹಂತದಲ್ಲಿದೆಯಂತೆ.
ಅದಿರಲಿ, ಇದೇ ಬೆಲೆಗೆ ತಾನೂ ಒಂದು ಸ್ಲೇಟ್ ಗಣಕವನ್ನು ಭಾರತಕ್ಕಾಗಿಯೇ ತಯಾರಿಸುವುದಾಗಿ ವಿಪ್ರೋ ಸಂಸ್ಥೆಯ ಅಜೀಂ ಪ್ರೇಮ್ಜಿ ೋಷಿಸಿದ್ದಾರೆ. ಈ ಕುರಿತ ಕೆಲಸ ಈಗಾಗಲೇ ಮುನ್ನಡೆದಿದೆಯಂತೆ; ಮುಂದಿನ ವರ್ಷದ ಹೊತ್ತಿಗೆ ಈ ಗಣಕವು ಅನಾವರಣಗೊಳ್ಳಲಿದೆ ಎಂದು ಸಂಸ್ಥೆಯು ತಿಳಿಸಿದೆ. ಕಾಯೋಣ. ಹಲವು ಬಗೆಯ ಗಣಕಗಳನ್ನು ತಯಾರಿಸಿದ ಅನುಭವ ಇರೋ ವಿಪ್ರೋದಿಂದ ಇದನ್ನು ನಿರೀಕ್ಷಿಸುವುದರಲ್ಲಿ ತಪ್ಪಿಲ್ಲ.
3. ಮಕ್ಕಳಿಗಾಗಿ ಲೀಪ್ ಫ್ರಾಗ್
4ರಿಂದ 9 ವರ್ಷದ ಮಕ್ಕಳಿಗಾಗಿ ಲೀಪ್ ಫ್ರಾಗ್ ಸಂಸ್ಥೆಯು 100 ಡಾಲರ್ ಬೆಲೆಯ ಸ್ಲೇಟ್ ಗಣಕವನ್ನು ಜೂನ್ ತಿಂಗಳಿನಲ್ಲಷ್ಟೆ ಮಾರುಕಟ್ಟೆಗೆ ತಂದಿದೆ. ಇದರಲ್ಲಿ ಲೀಪ್ ಪ್ಯಾಡ್ ಎಂಬ ಶಿಕ್ಷಣ ತಂತ್ರಾಂಶವೂ ಸೇರಿದಂತೆ ಮಕ್ಕಳಿಗಾಗಿಯೇ ಎಲ್ಲ ಬಗೆಯ ಅನುಕೂಲಗಳು ಇವೆಯಂತೆ. ಐದು ಅಂಗುಲದ ಪರದೆಯ ಈ ಲೀಪ್ ಪ್ಯಾಡ್ನಲ್ಲಿ ಮಾತನಾಡುವ ಪುಸ್ತಕಗಳು, ಆಟಗಳು, ಮಕ್ಕಳು ತಮ್ಮದೇ ಕಥೆ ಬರೆಯುವ ಸಾಧನಗಳು – ಹೀಗೆ ಹಲವು ತಂತ್ರಾಂಶಗಳು ಇದರಲ್ಲಿ ಅಡಕವಾಗಿವೆ.
4. ಬಳಕೆದಾರರು ಏನು ಹೇಳುತ್ತಾರೆ?
ಮೈಸೂರಿನ ಸಾಫ್ಟ್ವೇರ್ ಕಂಪೆನಿಯೊಂದರ ಮುಖ್ಯಸ್ಥರು ಐ ಪ್ಯಾಡ್ ಬಳಸುತ್ತಿದ್ದಾರೆ. ಅವರಿಗೆ ಐಪ್ಯಾಡ್ ತುಂಬಾ `ನಿಧಾನಿ’ ಅನ್ನಿಸಿದೆ. ಆದರೆ ಬೆಂಗಳೂರಿನ ಸಾಫ್ಟ್ವೇರ್ ಇಂಜಿನಿಯರ್ ಮಲ್ಲಿಕಾಗೆ ಐಪ್ಯಾಡ್ ಖುಷಿ ತಂದಿದೆ. ಶಿಸ್ತಾಗಿ ಕಾಣುವ ಈ ಮೈಲ್, ಹೆಚ್ಚುವರಿಯಾಗಿ ಜೋಡಿಸಬಹುದಾದ ಕೀಲಿಮಣೆ, ದೊಡ್ಡ ಪರದೆ, ತುಂಬಾ ಹೊತ್ತು ಬಳಕೆಗೆ ಬರುವ ಬ್ಯಾಟರಿ – ಎಲ್ಲವೂ ಐಪ್ಯಾಡ್ನ ಹಿರಿಮೆ ಎನ್ನುತ್ತಾರೆ ಮಲ್ಲಿಕಾ.
5. ಯಾವ ಬ್ರಾಂಡ್ ಉತ್ತಮ?
ಈ ಪ್ರಶ್ನೆಗೆ ಈಗಲೇ ಉತ್ತರ ನೀಡುವುದು ಕಷ್ಟ. ನಿಮಗೆ ದೊಡ್ಡ ಪರದೆ ಬೇಕೆನಿಸಿದರೆ, ಬ್ರಾಂಡ್ ವಾಲ್ಯೂ ಮುಖ್ಯ ಎನ್ನಿಸಿದರೆ ಐಪ್ಯಾಡ್ ಖರೀದಿಸಿ. ಹೆಚ್ಚು ಆಪ್ಸ್ಗಳು ಬೇಕೆಂದರೆ, ಅವೆಲ್ಲವೂ ಪುಕ್ಕಟೆ ಸಿಗಬೇಕೆಂದರೆ, ಸ್ಯಾಮ್ಸಂಗ್ ಗೆಲಾಕ್ಸಿ ಟ್ಯಾಬ್ ಖರೀದಿಸಿ. ವಿಂಡೋಸ್ ಆಪರೇಟಿಂಗ್ ವ್ಯವಸ್ಥೆಯೇ ಬೇಕೆಂದರೆ ಎಚ್ಪಿ ಸಂಸ್ಥೆಯ ಉತ್ಪನ್ನವಿದೆ. ಈ ಎಲ್ಲಾ ಮಾದರಿಗಳೂ ಹಲವು ‘ಇಲ್ಲ- ಇದೆ’ಗಳನ್ನು ಹೊಂದಿ ಬೇರೆ ಬೇರೆ ಬೆಲೆಯಲ್ಲಿ ಮಾರುಕಟ್ಟೆಗೆ ಬಂದಿವೆ. ವೈರ್ಲೆಸ್ ಸಂಪರ್ಕ, ಕ್ಯಾಮೆರಾ, ಸಿಮ್ ಕಾರ್ಡ್ ಸೌಲಭ್ಯ, ಬ್ಯಾಟರಿ ತಾಳಿಕೆ, ಮೆಮೊರಿ ಸಾಮಥ್ರ್ಯ – ಹೀಗೆ ನಿಮಗೆ ಅಗತ್ಯವಿರುವ ಅನುಕೂಲಗನ್ನು ಆಧರಿಸಿ ಆಯ್ಕೆ ಮಾಡಿಕೊಳ್ಳಿ. ಬಹು ಬ್ರಾಂಡ್ ಉತ್ಪನ್ನಗಳಿರುವ ಗಣಕದ ಅಂಗಡಿಗಳಿಗೆ ಹೋದರೆ ಒಂದನ್ನೊಂದು ಹೋಲಿಸಿ ಆಯ್ಕೆ ಮಾಡಿಕೊಳ್ಳಬಹುದು. ಇದರಿಂದ ನಿಮ್ಮ ತಿಳಿವಳಿಕೆ ಹೆಚ್ಚುತ್ತದೆ. ಇಂಥದ್ದೇ ಕಂಪೆನಿ ಎಂಬುದು ಪಕ್ಕಾ ಆಗಿದ್ದರೆ ಆ ಕಂಪೆನಿಯ ಶೋರೂಮ್ಗೆ ಹೋಗಿ.
ಸ್ಯಾಮ್ಸಂಗ್ ಗೆಲಾಕ್ಸಿ ಟ್ಯಾಬ್ನಲ್ಲಿ ದೊರಕುವ ಕೆಲವು ಉಚಿತ ಆಪ್ಸ್ಗಳ ಚಿತ್ರ ಇಲ್ಲಿದೆ. ಐದು ಸಾಲುಗಳಲ್ಲಿ ತಲಾ ಐದು ಆಪ್ಸ್ಗಳಿವೆ. ಅಂದರೆ ಒಂದು ಪರದೆಯಲ್ಲಿ ಇಪ್ಪತ್ತೈದು ಸೇವೆಗಳು!
1) ಕ್ಯಾಲ್ಕುಲೇಟರ್ : ಕಾಲೇಜು ವಿದ್ಯಾಗಳಿಗೆ ಸೈಂಟಿಫಿಕ್ ಕ್ಯಾಲ್ಕುಲೇಟರ್
2) ಸ್ವೀಟ್ ಎನ್ ಸ್ಪೈಸಿ : ಭಾರತೀಯ ಸಸ್ಯಾಹಾರಿ, ಶಾಕಾಹಾರಿ ಅಡುಗೆ ಪಾಕವೈಭವ (ಇಂಟರ್ನೆಟ್ ಅಗತ್ಯ)
3) ತಾನ್ಪುರ ದ್ರೋನ್: ಸಂಗೀತ ಕಲಿಯಲು ಶಾಸ್ತ್ರೀಯ ತಂಬೂರಿ.
4) ಇಂಡಿಯನ್ ನ್ಯೂಸ್ಪೇಪರ್ಸ್: ಗೊತ್ತಾಯ್ತಲ್ಲ, ದಿನಪತ್ರಿಕೆಗಳ ಸಂಗ್ರಹ
5) ಮಾರ್ಕೆಟ್: ಇಲ್ಲೇ ನೀವು ವಿವಿಧ ಆಪ್ಸ್ಗಳನ್ನು ಹುಡುಕೋದು. ಕ್ರೆಡಿಟ್ ಕಾರ್ಡ್ ಇದ್ದರೆ ಆನ್ಲೈನ್ನಲ್ಲೇ ಖರೀದಿಸಿ. ಅಥವಾ ಉಚಿತ ಸೇವೆಗಳನ್ನೂ ಹುಡುಕಿ.
6) ವಿನ್ ಆಂಪ್: ಗಣಕದಲ್ಲೂ ಇದ್ದೆ ಇರುವ ಮ್ಯೂಸಿಕ್ ಪ್ಲೇಯರ್
7) ಫ್ಲಾಶ್ಲೈಟ್: ರಾತ್ರಿ ಸ್ಲೇಟನ್ನು ಬ್ಯಾಟರಿಯ ಹಾಗೆ, ಸಂಕೇತ ದೀಪದ ಹಾಗೆ, ಬೆಡ್ ಲ್ಯಾಂಪ್ ಥರ ಬಳಸಿ.
8) ಇಂಡಿಯಾ ಗೈಡ್: ರಜೆಯಲ್ಲಿ ಪ್ರವಾಸ ಹೋಗಬೇಕೆಂದರೆ ಇಲ್ಲಿ ವಿವರ ಪಡೆಯಿರಿ (ಇಂಟರ್ನೆಟ್ ಅಗತ್ಯ)
9) ಮೊಬೈಲ್ ಟಿವಿ: ಇಂಟರ್ನೆಟ್ನಲ್ಲಿ ಸಿಗೋ ಟೀವಿ ಚಾನೆಲ್ಗಳು. (ಇಂಟರ್ನೆಟ್ ಅಗತ್ಯ)
10) ಕ್ಯೂಬ್: ರೂಬಿಕ್ ಕ್ಯೂಬ್ ಆಟ: ಬುದ್ಧಿಗೆ ಕಸರತ್ತು
11) ಅಲಾರಾಂ ಕ್ಲಾಕ್: ಬೆಳಗ್ಗೆ, ಮಧ್ಯಾಹ್ನ, ಯಾವಾಗಲಾದರೂ ಎಚ್ಚರಿಕೆಯ ಗಂಟೆ
12) ಒಪೆರಾ ಮಿನಿ: ಇಂಟರ್ನೆಟ್ ಬ್ರೌಸರ್. ಇದರಲ್ಲೇ ನೀವು ಕನ್ನಡದ ಯೂನಿಕೋಡ್ ಜಾಲತಾಣಗಳನ್ನು ಸರಿಯಾಗಿ ಓದಬಹುದು. (ಇಂಟರ್ನೆಟ್ ಅಗತ್ಯ)
13) ಮೆಮೋ: ಮರೆತುಹೋಗಬಾರದ್ದನ್ನೆಲ್ಲ ಇಲ್ಲಿ ಬರೆದಿಟ್ಟುಕೊಳ್ಳಿ
14) ವೇವ್ ರೆಕಾರ್ಡರ್: ಭಾಷಣ, ಸಂಗೀತ, ಸಂದರ್ಶನ – ಏನನ್ನಾದರೂ ದಾಖಲಿಸಿ, ಗಂಟೆಗಟ್ಟಳೆ!
15) ಪೇಂಟ್ ಜಾಯ್: ಮಕ್ಕಳು ಬಣ್ಣ ಹಚ್ಚಿ ಖುಷಿಪಡಲು ಬಇಡಿ.
16) ಕಾರ್ಡಿಯೋಗ್ರಾಫ್: ನಿಮ್ಮ ನಾಡಿಬಡಿತದ ಪರೀಕ್ಷೆ ಮಾಡಿಕೊಳ್ಳಿ.
17) ಜಿ ಸ್ಟ್ರಿಂಗ್ಸ್: ಸಂಗೀತ ವಾದ್ಯಗಳ ಶ್ರುತಿ ಹಿಡಿಯಲು ಪಕ್ಕಾ ಸಾಧನ.
18) ಕಂಪಾಸ್: ಟ್ರೆಕಿಂಗ್ ಹೋಗಿ ದಾರಿ ತಪ್ಪಿದರೆ ಇಲ್ಲಿದೆ ಸಹಾಯ.
19) ಕ್ಯಾಲೆಂಡರ್: ದಿನಗಳನ್ನು ಮರೆಯದಿರಲು! ಹಾಗೇ ನಿಮ್ಮ ಕೆಲಸಗಳನ್ನು ನೆನಪಿಟ್ಟುಕೊಳ್ಳಲು
20) ಗೂಗಲ್ ಸ್ಕೈ: ಆಕಾಶದತ್ತ ಸ್ಲೇಟ್ ಹಿಡಿದರೆ ಆ ದಿಕ್ಕಿನಲ್ಲಿರೋ ನಕ್ಷತ್ರ, ಗ್ರಹಗಳೆಲ್ಲ ಪ್ರತ್ಯಕ್ಷ! (ಇಂಟರ್ನೆಟ್ ಅಗತ್ಯ)
21) ಟ್ರಾವೆಲ್ ಬ್ಯಾಂಗಲೋರ್: ಬೆಂಗಳೂರಿಗೆ ಬರುವವರಿಗೆ ಸ್ವಾಗತ: ಊರನ್ನೆಲ್ಲ ಜಾಲಾಡಿ (ಇಂಟರ್ನೆಟ್ ಅಗತ್ಯ)
22) ಕಿಂಡಲ್: ಪುಸ್ತಕಗಳನ್ನು ಓದುವ ಅಮೆಝಾನ್ ಸಾಧನವೀಗ ಇಲ್ಲಿ ಒಂದು ಪುಟ್ಟ ಆಪ್ಸ್ ಆಗಿದೆ ಎಂದರೆ ಸ್ಲೇಟ್ನ ಮಹತ್ವ ಗೊತ್ತಾಯ್ತಲ್ಲ! (ಇಂಟರ್ನೆಟ್ ಅಗತ್ಯ)
23) ಸ್ಕೈಪ್: ಇಂಟರ್ನೆಟ್ ಆಧಾರಿತ ಉಚಿತ ಟೆಲಿಫೋನ್ ಸೇವೆ. (ಇಂಟರ್ನೆಟ್ ಅಗತ್ಯ)
24) ಎನ್ ಎಫ್ ಎಸ್ : ಆಡೂ ಆಟ ಆಡೂ……
25) ಎಂ ಪಿ 3 ಮ್ಯೂಸಿಕ್ ಡೌನ್ಲೋಡ್: ಕಾಡುವ ಹಳೆ ಹಾಡನ್ನು ಇಂಟರ್ನೆಟ್ನಲ್ಲಿ ಹುಡುಕಿ; ಸಿಕ್ಕಿದರೆ ಕೂಡಲೇ ನಿಮ್ಮದಾಗಿಸಿಕೊಳ್ಳಿ!
ಇವೆಲ್ಲವೂ ಕೇವಲ ಕೆಲವೇ ಉದಾಹರಣೆಗಳು. ಮೊದಲೇ ಹೇಳಿದ ಹಾಗೆ, ಊಹಿಸಿದ್ದೆಲ್ಲ ಸುಮಾರಾಗಿ ಇದರಲ್ಲಿದೆ….
(ಕರ್ಮವೀರ ವಾರಪತ್ರಿಕೆಗಾಗಿ ಇತ್ತೀಚೆಗೆ ಬರೆದ ಲೇಖನ, ಪ್ರಕಟಿತ)