`ಕೊಂಚ ಕವಿಯೂ ಆಗಿರದ ಗಣಿತಜ್ಞನು ಒಬ್ಬ ಪರಿಪೂರ್ಣ ಗಣಿತಜ್ಞನಾಗಲಾರ’
೧೯ನೇ ಶತಮಾನದ ಜರ್ಮನ್ ಗಣಿತಜ್ಞ ಕಾಲ್ ಥಿಯೋಡೋರ್ ವಿಲ್‌ಹೆಲ್ಮ್ ವೀರ್‌ಸ್ಟ್ರಾಸ್ ಹೇಳಿದ ಮಾತಿದು. ಅಂತರಜಾಲದಲ್ಲಿ ಹುಡುಕಿದಾಗ ಸಿಕ್ಕಿದ್ದು. ಹೀಗೆ ಹುಡುಕಲು ಕಾರಣವೂ ಇತ್ತು. ಕಳೆದ ಕೆಲವು ವಾರಗಳಿಂದ ನಾನು ಪರಸ್ಪರ ಸಂಬಂಧವೇ ಇಲ್ಲದ ಶಾಸ್ತ್ರ, ಜ್ಞಾನವಾಹಿನಿಗಳನ್ನು ಮೇಳೈಸಿಕೊಂಡ ವ್ಯಕ್ತಿತ್ವಗಳ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದೆ. ನಾನು ಓದಿದ, ಮೆಚ್ಚಿದ ವ್ಯಕ್ತಿತ್ವಗಳಲ್ಲದೆ ಗೊತ್ತಿರದ ಇಂಥ ವ್ಯಕ್ತಿಗಳೂ ಇದ್ದಾರೆಯೇ ಎಂದು `ಗಣಿತಜ್ಞ, ಕವಿ’ ಎಂದು ಗೂಗಲ್ ಮಾಡಿದಾಗ ವೀರ್‌ಸ್ಟ್ರಾಸ್ ಹೇಳಿದ್ದು ಸಿಕ್ಕಿತು.
ಮನುಷ್ಯನ ಇತಿಹಾಸದಲ್ಲಿ ಇಂಥ ಪ್ರತಿಭೆಗಳು ನೂರಾರು ಬಂದುಹೋಗಿವೆ. ಖ್ಯಾತ ಭೌತಶಾಸ್ತ್ರಜ್ಞ ಸರ್ ಐಸಾಕ್ ನ್ಯೂಟನ್ ಹಲವು ದಶಕಗಳ ಕಾಲ ರಸಶಾಸ್ತ್ರದಲ್ಲಿ (ಆಲ್‌ಕೆಮಿ) ತನ್ನನ್ನೇ ಮುಳುಗಿಸಿಕೊಂಡು ಪಾದರಸವನ್ನು ಚಿನ್ನವನ್ನಾಗಿ ಮಾಡಲು ಯತ್ನಿಸಿದ ಸುದ್ದಿ ಇದೇ ವಾರ ‘ದಿ ಹಿಂದೂ’ ಪತ್ರಿಕೆಯಲ್ಲಿ ಬಂದಿದೆ. ಈ ಸುದ್ದಿ ನನ್ನ ಲೇಖನ ಸರಣಿಗೆ ಮತ್ತಷ್ಟು ಉತ್ತೇಜನ ನೀಡಿದೆ.
ನನ್ನ ಓದಿನ ಹೊತ್ತಿನಲ್ಲಿ, ಸಿನೆಮಾ ನೋಡುವಾಗ, ವಿಜ್ಞಾನಪ್ರಿಯ ಗೆಳೆಯರೊಂದಿಗೆ ಚರ್ಚಿಸುತ್ತಿದ್ದಾಗ, ಅಥವಾ ಅಕಸ್ಮಾತ್ತಾಗಿ ಗೂಗಲ್ ಮಾಡಿದಾಗ ಸಿಕ್ಕಿ ಮರೆಯಲಾಗದಂಥ ಛಾಪು ಮೂಡಿಸಿದ ವ್ಯಕ್ತಿತ್ವಗಳನ್ನು ನಿಯಮಿತವಾಗಿ ನಿರೂಪಿಸಲು ಈ ತಿಂಗಳು ಮೀಸಲು. ಅವರಲ್ಲಿ ನಾನು ಸ್ವತಃ ಭೇಟಿ ಮಾಡಿದ್ದ, ಒಂದಷ್ಟು ದಿನಗಳ ಕಾಲ ಒಟ್ಟಿಗಿದ್ದ ಹಿರಿಯ ಗಾಂಧಿವಾದಿಯೂ ಇದ್ದಾರೆ. ಅವರು ಗಾಂಧಿವಾದಿಯಷ್ಟೇ ಅಲ್ಲ, ಭಾರತಕ್ಕೇ ಹೆಮ್ಮೆ ತಂದುಕೊಟ್ಟ ಇತಿಹಾಸ ಸಂಶೋಧಕರು. ಇವರಲ್ಲದೆ ಕವಿಯಾಗಿರುವ ಗಣಿತಜ್ಞ, ತತ್ವಶಾಸ್ತ್ರಜ್ಞನಾಗಿರುವ ಕಾದಂಬರಿಕಾರ, ಗಣಿತಜ್ಞ – ಭೌತವಿಜ್ಞಾನಿ, – ಹೀಗೆ ಹಲವರನ್ನು ಪರಿಚಯಿಸುವ ಉತ್ಸಾಹ ನನ್ನದು.
ಹೀಗೆ, ಇಂಥ ವ್ಯಕ್ತಿಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಪಡೆಯಲು ಹುಡುಕಾಟ ನಡೆಸಿದಾಗ ಉಮರ್ ಖಯ್ಯಾಮ್ ಎಂಬ ದೈತ್ಯ ಪ್ರತಿಭೆಯ ಬಗ್ಗೆ ತಿಳಿದುಕೊಂಡೆ. ಕವಿಯಾಗಿ ಖ್ಯಾತನಾದ ಉಮರನು ಗಣಿತದಲ್ಲಿ ಅಗಣಿತ ಸಾಧನೆಗಳನ್ನು ಮಾಡಿದವ; ತತ್ವಶಾಸ್ತ್ರಜ್ಞ, ಸಂಗೀತಶಾಸ್ತ್ರಜ್ಞ, ಖಗೋಳವಿಜ್ಞಾನಿ ಕೂಡಾ! ಈ ಸರಣಿಯನ್ನು ಆರಂಭಿಸಲು ಅವನಿಗಿಂತ ಬೇರೆ ವ್ಯಕ್ತಿತ್ವ ಇರಲು ಸಾಧ್ಯವೇ ಇಲ್ಲ ಅನ್ನಿಸಿ ಉಮರ್ ಖಯ್ಯಾಮನಿಂದ ಈ ಲೇಖನಗಳ ಬರವಣಿಗೆ ಆರಂಭಿಸಿದ್ದೇನೆ.
ನಿಮ್ಮ ಓದಿಗೆ, ಪ್ರತಿಕ್ರಿಯೆಗೆ ಕಾಯಲೆ?