ಕೇಂದ್ರ ಸರ್ಕಾರದ ಹೊಸ ಜೈವಿಕ ಇಂಧನ ಕಾರ್ಯತಂಡದ ಅಧ್ಯಕ್ಷರಾಗಿ ವೈ ಬಿ ರಾಮಕೃಷ್ಣ ನೇಮಕ

ಕೇಂದ್ರ ಸರ್ಕಾರವು ಜೂನ್‌ ೯ರಂದು ಜೈವಿಕ ಇಂಧನ ಕಾರ್ಯಕ್ರಮ ಜಾರಿಗಾಗಿ ಕಾರ್ಯತಂಡವನ್ನು ರಚಿಸಿದ್ದು ಈ ಹಿಂದೆ ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರಾಗಿದ್ದ ಶ್ರೀ ವೈ ಬಿ ರಾಮಕೃಷ್ಣ ಅವರನ್ನು ಕಾರ್ಯತಂಡದ ಅಧ್ಯಕ್ಷರನ್ನಾಗಿ ನೇಮಿಸಿದೆ. ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಇಂಧನ ಇಲಾಖೆಯು ಈ ಕುರಿತು ಆದೇಶವನ್ನು ಹೊರಡಿಸಿದ್ದು ದೇಶದಾದ್ಯಂತ ಜೈವಿಕ ಇಂಧನ ಕಾರ್ಯಕ್ರಮವನ್ನು ಬಲಪಡಿಸುವ ಹಿನ್ನೆಲೆಯಲ್ಲಿ ಈ ನೇಮಕಾತಿ ಮಾಡಿದೆ ಎಂದು ತಿಳಿಸಿದೆ. ಭಾರತ್‌ ಪೆಟ್ರೋಲಿಯಂ ಕಂಪೆನಿಯ ಕಾರ್ಯಪಾಲಕ ನಿರ್ದೇಶಕರು (ಜೈವಿಕ ಇಂಧನ) ಈ ಸಮಿತಿಯ ಕಾರ್ಯದರ್ಶಿಯಾಗಿದ್ದು ಭಾರತದ ಎಲ್ಲ ಸಾರ್ವಜನಿಕ ರಂಗದ ಪೆಟ್ರೋಲಿಯಂ ಸಂಸ್ಥೆಗಳ ಮುಖ್ಯಸ್ಥರು ಈ ಸಮಿತಿಯ ಸದಸ್ಯರಾಗಿದ್ದಾರೆ.

YBR

ಬಯೋ ಎಥನಾಲ್‌, ಬಯೋ ಡೀಸೆಲ್‌, ತ್ಯಾಜ್ಯದಿಂದ ಬಯೋಫ್ಯುಯೆಲ್‌ ಸೇರಿದಂತೆ ಜೈವಿಕ ಇಂಧನ ಕಾರ್ಯಕ್ರಮವನ್ನು ಇನ್ನಷ್ಟು ಮುಂದಕ್ಕೆ ತೆಗೆದುಕೊಂಡು ಹೋಗುವುದು, ತೈಲ ಕಂಪೆನಿಗಳು ಜೈವಿಕ ಇಂಧನ ಬಳಕೆ ಉತ್ತೇಜನಕ್ಕೆ ಕೈಗೊಳ್ಳಬೇಕಾದ ಕ್ರಮಗಳನ್ನು ಸೂಚಿಸುವುದು, ದೇಶದ ಇಂದಿನ ಜೈವಿಕ ಇಂಧನ ಮಿಶ್ರಣ ಕಾರ್ಯಕ್ರಮವನ್ನು ಅಧ್ಯಯನ ಮಾಡಿ ತೊಡಕುಗಳ ನಿವಾರಣೆಗೆ ಸಲಹೆಗಳನ್ನು ಸೂಚಿಸಿ, ಅವುಗಳ ದಕ್ಷ ಜಾರಿಗೆ ನೆರವಾಗುವುದು, ಪೆಟ್ರೋಲಿನಲ್ಲಿ ಎಥನಾಲ್‌ ಮತ್ತು ಡೀಸೆಲ್‌ನಲ್ಲಿ ಬಯೋ ಡೀಸೆಲ್‌ನ ಮಿಶ್ರಣ ಪ್ರಮಾಣವನ್ನು ಹೆಚ್ಚಿಸಲು ಕ್ಷೇತ್ರ ಅಧ್ಯಯನ ಕೈಗೊಳ್ಳುವುದು, ಪ್ರಮುಖ ದೇಶಗಳು ಅಳವಡಿಸಿಕೊಂಡಿರುವ ಜೈವಿಕ ಇಂಧನ ಕಾರ್ಯಕ್ರಮಗಳ ಅತ್ಯುತ್ತಮ ಕ್ರಮಗಳನ್ನು ಸುಸ್ಥಿರ ಜೈವಿಕ ಇಂಧನ ಕಾರ್ಯಕ್ರಮಕ್ಕಾಗಿ ಅಳವಡಿಸಿಕೊಳ್ಳುವುದು, ರೈಲ್ವೆ, ವಿಮಾನ, ಸೇನಾಪಡೆ, ಹಡಗು ಉದ್ಯಮ ಮುಂತಾದ ಸಗಟು ಬಳಕೆದಾರರು ಜೈವಿಕ ಇಂಧನದ ಬಳಕೆ ಪ್ರಮಾಣವನ್ನು ಹೆಚ್ಚಿಸುವಂತೆ ಶಿಫಾರಸು ಮಾಡುವುದು , ಈ ಕುರಿತ ಎಲ್ಲ ಕೆಲಸಗಳಿಗಾಗಿ ವಿವಿಧ ಇಲಾಖೆಗಳ ನಡುವೆ ಸಮನ್ವಯ ಸಾಧಿಸುವುದು, ಜನಜಾಗೃತಿಯನ್ನು ಹಮ್ಮಿಕೊಳ್ಳುವುದು, ಭಾರತದಲ್ಲಿ ಜೈವಿಕ ಇಂಧನ ನೀತಿಯು ದಕ್ಷವಾಗಿ ಜಾರಿಗೊಳ್ಳುವಂತೆ ನೋಡಿಕೊಳ್ಳುವುದು, – ಇವು ಈ ಕಾರ್ಯತಂಡದ ಪ್ರಮುಖ ಹೊಣೆಗಾರಿಕೆಗಳಾಗಿವೆ.

ಚಾಲನಾ ಸಮಿತಿಗೂ ವೈ ಬಿ ರಾಮಕೃಷ್ಣ ಅಧ್ಯಕ್ಷತೆ

ಕಾರ್ಯತಂಡದ ಅಧ್ಯಕ್ಷರಾಗುವುದರ ಜೊತೆಗೇ ವೈ ಬಿ ರಾಮಕೃಷ್ಣರವರು ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಟೆಕ್ನಾಲಜಿ ಇನ್‌ಫಾರ್ಮೇಶನ್‌, ಫೋರ್‌ಕಾಸ್ಟಿಂಗ್‌ ಎಂಡ್‌ ಅಸೆಸ್‌ಮೆಂಟ್‌ ಕೌನ್ಸಿಲ್‌ (ಟಿಫ್ಯಾಕ್‌) ರಚಿಸಿರುವ `ಜೈವಿಕ ಇಂಧನ – ಪ್ರಸ್ತುತ ಸ್ಥಿತಿ ಮತ್ತು ಸಂಶೋಧನೆ-ಅಭಿವೃದ್ಧಿ ನಕಾಶೆ’ ವಿಷಯದ ಮೇಲಿನ ಅಧ್ಯಯನ ಚಾಲನಾ ಸಮಿತಿಯ ಅಧ್ಯಕ್ಷರಾಗಿಯೂ ನೇಮಕವಾಗಿದ್ದಾರೆ.

ದೇಶದಲ್ಲಿ ಲಭ್ಯವಿರುವ ವಿವಿಧ ಬಯೋಮಾಸ್‌ ಮಾಹಿತಿ ಮತ್ತು ಅದರ ಸಂಗ್ರಹದ ವೆಚ್ಚ ಮಾಹಿತಿ ಸಂಗ್ರಹ ಮಾಡುವುದು, ಸ್ಥಳೀಯವಾಗಿಯೇ ಬಯೋಮಾಸ್‌ ಸಂಪನ್ಮೂಲಗಳನ್ನು ಬಳಸುವ ಕುರಿತು ಮಾಹಿತಿ ಕಲೆಹಾಕುವುದು, ಬಯೋಮಾಸ್‌ ದಾಸ್ತಾನು ಮತ್ತು ಸಾಗಣೆ ಕುರಿತ ಖರ್ಚುಗಳ ಲೆಕ್ಕಾಚಾರ, ಬಯೋಮಾಸ್‌ಗಳ ಭೌತಿಕ-ರಾಸಾಯನಿಕ ಗುಣಗಳ ಪಟ್ಟೀಕರಣ, ಕಡಿಮೆ ಮತ್ತು ಹೆಚ್ಚು ಮೌಲ್ಯದ ತಂತ್ರಜ್ಞಾನಗಳನ್ನು ಗುರುತಿಸುವುದು, ಬಯೋಮಾಸನ್ನು ಜೈವಿಕ ಇಂಧನವನ್ನಾಗಿ ಪರಿವರ್ತಿಸಲು ಸೂಕ್ತ ತಾಂತ್ರಿಕ ಮಾರ್ಗಗಳನ್ನು ಗುರುತಿಸುವುದು ಮತ್ತು ಇದಕ್ಕಾಗಿ ಒಂದು ಸಮಗ್ರ ಕಾರ್ಯತಂತ್ರವನ್ನು ರೂಪಿಸುವುದು – ಇವು ಈ ಸಮಿತಿಯ ಉದ್ದೇಶಗಳಾಗಿವೆ.

ಈ ಸಮಿತಿಯ ಉಪಾಧ್ಯಕ್ಷರಾಗಿ ಸಿಐಐನ ಕೆ ಕೃಷ್ಣನ್‌ ನೇಮಕವಾಗಿದ್ದು ಟಿಫಾಕ್‌ನ ಸಲಹೆಗಾರ ಸಂಜಯ್‌ ಸಿಂಗ್‌, ಐಐಪಿ-ಡೆಹ್ರಾಡೂನ್‌ನ ಡಾ|| ಟಿ ಭಾಸ್ಕರ್‌, ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯದ ಎಸ್‌ ಕೆ ಜಗ್ವಾನಿ, ತಿರುವನಂತಪುರಂನ ಎನ್‌ಐಐಎಸ್‌ಟಿಯ ಪ್ರೊ|| ಅಶೋಕ್‌ ಪಾಂಡೆ, ಐಐಟಿ ದಿಲ್ಲಿಯ ಡಾ|| ಎಸ್‌ ಕೆ ಖರೆ, ಮತ್ತು ಟೇರಿಯ ಪ್ರತಿನಿಧಿ – ಇವರು ಸದಸ್ಯರಾಗಿರುತ್ತಾರೆ. ಬೆಂಗಳೂರಿನ ಐಐಎಸ್‌ಸಿಯ ವಿಜ್ಞಾನಿ ಟಿ ವಿ ರಾಮಚಂದ್ರರನ್ನೂ ಈ ಸಮಿತಿಯ ಸದಸ್ಯರಾಗಿ ಆಯ್ಕೆ ಮಾಡಲಾಗಿದೆ.

ಕರ್ನಾಟಕದಲ್ಲಿ ಜೈವಿಕ ಇಂಧನ ಅಭಿವೃದ್ಧಿಗಾಗಿ ಸಾಕಷ್ಟು ಶ್ರಮಿಸಿ, ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಪ್ರಾತ್ಯಕ್ಷಿಕೆ ಕೇಂದ್ರಗಳನ್ನು ಸ್ಥಾಪಿಸಿ, ಆಹಾರ ಬೆಳೆಗಳಿಗೆ ಧಕ್ಕೆ ಒದಗದಂತೆ  ಜೈವಿಕ ಇಂಧನ ಸಸ್ಯಗಳ ಬೆಳೆ ನೀತಿ ರೂಪಿಸಿ ಸಾಕಷ್ಟು ಕೆಲಸ ಮಾಡಿದ ನನ್ನ ಪ್ರಿಯ ಮಿತ್ರರು ಇಂದು ರಾಷ್ಟ್ರಮಟ್ಟದ ಜೈವಿಕ ಇಂಧನ ಕಾರ್ಯತಂಡದ ಅಧ್ಯಕ್ಷರಾಗಿರುವುದು ಸಂತೋಷದ ಸಂಗತಿ. ಅವರಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು.

Leave a Reply

Your email address will not be published. Required fields are marked *