ಒಂದು ಕಥೆಯನ್ನು ಹುಡುಕುತ್ತ ಇನ್ನೊಂದು ಅಂತಃಕರಣ ಕಲಕುವ ಇನ್ನೊಂದು ಕಥೆ ಸಿಕ್ಕಿದ ಬ್ಲಾಗ್ ಇದು.
ಇತ್ತೀಚೆಗೆ ಯಾವುದೋ ಪುಸ್ತಕ ವಿನ್ಯಾಸದಲ್ಲಿ ತೊಡಗಿದ್ದಾಗ ಮೆಟಾ ಎಂಬ ಹೆಸರಿನ ಫಾಂಟ್ ಹುಡುಕಲು ಹೋಗಿ ಮೆಟಾಫಾಂಟ್ ಎಂಬ ಸಿದ್ಧಾಂತ ಮತ್ತು ಸಾಫ್ಟ್ವೇರನ್ನೇ ಎಡವಿ ಬಿದ್ದೆ! ಮೆಟಾಫಾಂಟ್ ಎಂಬ ಪರಿಕಲ್ಪನೆಯನ್ನು ರೂಪಿಸಿ ಅದಕ್ಕೆ ಶಾಸ್ತ್ರೀಯವಾದ ವಿವರಣೆ, ಸಾಧನಗಳನ್ನು ನೀಡಿದ ಡೊನಾಲ್ಡ್ ಕನೂಥ್ ಎಂಬ ವಿಚಿತ್ರ ವ್ಯಕ್ತಿತ್ವ ನನ್ನನ್ನು ಸೆಳೆಯಿತು. ಈತ ಮಹಾನ್ ವಿಜ್ಞಾನಿಯಾದರೂ, ಅಷ್ಟೇ ಹಾಸ್ಯಪ್ರಜ್ಞೆ ಉಳ್ಳವ. ಇವನ ಮೆಟಾಫಾಂಟ್ ಪುಸ್ತಕಗಳ ಪ್ರತೀ ಪುಟದಲ್ಲೂ ಒಂದೊಂದು ತಮಾಶೆಯ ವಾಕ್ಯವನ್ನು ನೀವು ಹುಡುಕಬಹುದು! ಅವನ ವೆಬ್ಸೈಟಿನಲ್ಲೂ ತಮಾಶೆ ಉಕ್ಕಿ ಹರಿದಿದೆ. ಪ್ರಪಂಚದಲ್ಲಿ ಇಂಥವರೂ ಇದ್ದಾರಾ ಎಂದು ಅಚ್ಚರಿಯಾಗುವಂಥ ಸ್ವಭಾವದ ಡೊನಾಲ್ಡ್ ನುಥ್ ನನ್ನ ಕಣ್ಣಿಗೆ ಬಿದ್ದ ಮೇಲೆ ಕೇಳಬೇಕೆ? ಅವರು ಬರೆದ ಪುಸ್ತಕಗಳನ್ನೆಲ್ಲ ಇಂಟರ್ನೆಟ್ನಿಂದಲೇ ಕದ್ದು ಹಾಳೆ ತಿರುಗಿಸಿದೆ. ಇಂಥ ವ್ಯಕ್ತಿಯ ಬಗ್ಗೆ ಬರೆಯುವುದೇ ಒಂದು ಹೆಮ್ಮೆ ಅನ್ನಿಸಿಬಿಟ್ಟಿತು. ಹಾಗೇ ಹುಡುಕುತ್ತ ಹೋದಾಗ ಡೊನಾಲ್ಡ್ ಕನೂಥ್ನ ಸಂಶೋಧನೆಯಿಂದ ತನ್ನ ಜೀವನವನ್ನೇ ಬದಲಿಸಿಕೊಂಡು, ಸಾವನ್ನು ದೂರದೂರಕ್ಕೆ ಅಟ್ಟಿ, ಇನ್ನೂ ನೂರಾರು ಜನರ ಬಾಳಿಗೆ ಬೆಳಕಾದ ರಾಧಾಕೃಷ್ಣನ್ ಕಥೆಯೂ ಸಿಕ್ಕಿತು. ಇಬ್ಬರ ಕಥೆಯೂ ಹೇಗೆ ಪರಸ್ಪರ ಹೆಣೆದುಕೊಂಡಿದೆ ಎಂದು ನೋಡುತ್ತ ಅಚ್ಚರಿಗೆ ಬಿದ್ದೆ. ಬದುಕಿನಲ್ಲಿ ಎಡಬಿಡದೆ ಕೆಲಸ ಮಾಡಿ ಸಾಧಿಸುವುದು ಇಬ್ಬರ ಪ್ರಿಯ ಹವ್ಯಾಸ. ಹಾಗೇ ಬದುಕನ್ನು ತಮಗೆ ಬೇಕಾದ ಹಾಗೆ ಕಟ್ಟಿಕೊಳ್ಳುವುದು ಇಬ್ಬರಿಗೂ ಇಷ್ಟದ ವಿಚಾರ. ಮೊದಲು ಡೊನಾಲ್ಡ್ ಕನೂಥ್ ಕಥೆ. ಆಮೇಲೆ ರಾಧಾಕೃಷ್ಣನ್.
ಡೋನಾಲ್ಡ್ ಕನೂಥ್ಗೆ ಬಹುಶಃ ನೋಬೆಲ್ ಪ್ರಶಸ್ತಿಯೊಂದು ಸಿಕ್ಕಿಲ್ಲ. ಸಮಕಾಲೀನ ಶೈಕ್ಷಣಿಕ – ಸಂಶೋಧನಾ ರಂಗದಲ್ಲಿ ಅವನಂಥ ಗಣಿತಜ್ಞ, ಕಂಪ್ಯೂಟರ್ ಪ್ರೋಗ್ರಾಮಿಂಗ್ ನಿಪುಣರು ತುಂಬಾ ಅಪರೂಪ ಎಂಬ ಮಾತಿದೆ. ಕಾಲೇಜು ಹುಡುಗನಾಗಿದ್ದಾಗಲೂ ಗಣಿತವೇ ಕನೂಥ್ನ ಉಸಿರು.
೧೯೫೯ರಲ್ಲಿ ತಾನು ಓದುತ್ತಿದ್ದ ಕಾಲೇಜಿನ ಬ್ಯಾಸ್ಕೆಟ್ಬಾಲ್ ತಂಡದ ದಕ್ಷತೆಯನ್ನು ಅಳೆಯಲು ಕನೂಥ್ ಆಗಿನ ಕಾಲದಲ್ಲಿ `ನಿಮಿಷಕ್ಕೆ ೫೦ ಸಾವಿರ ಲೆಕ್ಕಾಚಾರಗಳನ್ನು ಮಾಡುತ್ತಿದ್ದ’ ಐ ಬಿ ಎಂ ಕಂಪ್ಯೂಟರನ್ನು ಬಳಸಿದ. ಎಲ್ಲ ಆಟಗಾರರ ಆಟದ ಚಲನವಲನಗಳನ್ನು ಬರೆದುಕೊಂಡು, ಅದನ್ನು ಪಂಚ್ ಮಾಡಿ, ಗಣಕಕ್ಕೆ ತುಂಬಿ ಅದರಿಂದ ನಕಾಶೆಗಳನ್ನು ತೆಗೆದ. ಪ್ರತಿ ಆಟಗಾರನ ದಕ್ಷತೆಯನ್ನು ಪ್ರತ್ಯೇಕವಾದ ಸಮೀಕರಣದಿಂದ ಅಳೆದು ತೂಗಿದ ಡೊನಾಲ್ಡ್ ಕನೂಥ್, ಅದನ್ನೇ ಮುಂದೆ ನಡೆದ ಪಂದ್ಯಾವಳಿಯಲ್ಲಿ ತಂಡದ ಕೋಚ್ಗೆ ನೀಡಿದ. ಪರಿಣಾಮ: ಅವನ ಕಾಲೇಜಿನ ತಂಡ ೧೬ ಪಂದ್ಯಗಳನ್ನು ಗೆದ್ದು, ಒಂದೇ ಪಂದ್ಯವನ್ನು ಸೋತಿತ್ತು!
[youtube=http://www.youtube.com/watch?v=dhh8Ao4yweQ&w=368&h=272]
೧೯೬೦ರಲ್ಲಿ ಕನೂಥ್ ವಿಜ್ಞಾನದಲ್ಲಿ ಪದವಿ ಮತ್ತಿ ಸ್ನಾತಕೋತ್ತರ ಪದವಿ – ಎರಡನ್ನೂ ಒಟ್ಟಿಗೆ ಪಡೆದ ಜಾಣ. ಹೀಗೆ ಅಂದಿನಿಂದಲೂ ಗಣಿತವನ್ನು ಅರೆದು ಕುಡಿದ ಕನೂಥ್ ಈಗ ನಮ್ಮ ನಡುವೆ ಇರುವ ವಿಶ್ವದ ಅಗ್ರಮಾನ್ಯ ಕಂಪ್ಯೂಟರ್ ಪ್ರೋಗ್ರಾಮರ್.
ಅದಿರಲಿ, ಆತ ಹೈಸ್ಕೂಲಿನಲ್ಲಿದ್ದಾಗ ಒಂದು ಸ್ಪರ್ಧೆಯಲ್ಲಿ ` Ziegler’s Giant Bar ‘ ವಾಕ್ಯದ ಅಕ್ಷರಗಳನ್ನು ಬಳಸಿ ಎಷ್ಟೆಲ್ಲ ಪದಗಳನ್ನು ರಚಿಸಬಹುದೆಂಬ ಸ್ಪರ್ಧೆ ಏರ್ಪಡಿಸಿದ್ದರಂತೆ. ಅದರಲ್ಲಿ ಕನೂಥ್ ೪೫೦೦ಕ್ಕೂ ಹೆಚ್ಚು ಪದಗಳನ್ನು ಹುಡುಕಿ ತೆಗೆದ. ಮಜಾ ಎಂದರೆ ತೀರ್ಪುಗಾರರ ಉತ್ತರದಲ್ಲಿ ಬರೀ ೨೫೦೦ ಪದಗಳಿದ್ದವು! ಬಹುಮಾನವಾಗಿ ಒಂದು ಟೆಲಿವಿಜನ್ ಸೆಟ್ ಮತ್ತು ಕ್ಯಾಂಡಿ ಬಾರ್ ಪಡೆದ ಕನೂಥ್.
ಡೊನಾಲ್ಟ್ ಕನೂಥ್ ಬರೆದ `ದಿ ಆರ್ಟ್ ಆಫ್ ಕಂಪ್ಯೂಟರ್ ಪ್ರೋಗ್ರಾಮಿಂಗ್’ ಎಂಬ ಪುಸ್ತಕ ಸರಣಿಯು ಬಹುಶಃ ಜಗತ್ತಿನಲ್ಲಿ ಈವರೆಗೂ ಕಂಪ್ಯೂಟರ್ ಪ್ರೋಗ್ರಾಮಿಂಗ್ ಪ್ರೇಮಿಗಳು ಆರಾಧಿಸುವ ಪುಸ್ತಕ ಎಂದು ಬಲ್ಲವರು ಹೇಳುತ್ತಾರೆ. ಕಂಪ್ಯೂಟರ್ ಜಗತ್ತಿನ ಅಲ್ಗಾರಿದಮ್ಗಳ ಪಿತಾಮಹ ಎಂದೇ ಕನೂಥ್ಗೆ ಹೆಸರಿದೆ. ಈಗ ಕನೂಥ್ ಅದೇ ಪುಸ್ತಕದ ಹೆಸರಿನಲ್ಲಿರುವ ವಿಶೇಷ ಗೌರವ ಪ್ರಾಧ್ಯಾಪಕರಾಗಿದ್ದಾರೆ.
ಕನೂಥ್ನ ಅಪ್ಪ ಒಬ್ಬ ಮುದ್ರಕನಾಗಿದ್ದ. ಹಾಗಾಗಿ ಪುಸ್ತಕಗಳು, ಫಾಂಟ್ ಬಗ್ಗೆ ಕನೂಥ್ಗೆ ಬಾಲ್ಯದಿಂದಲೇ ಪ್ರೀತಿ ಬೆಳೆದಿದ್ದು ಸಹಜವೇ. ಹೀಗೇ ಒಮ್ಮೆ ಕನೂಥ್ ತನ್ನ ಗಣಿತದ ಪ್ರಬಂಧವನ್ನು ಮುದ್ರಿಸುವ ಸಂದರ್ಭದಲ್ಲಿ ಗಣಿತದ ಚಿಹ್ನೆಗಳು ಎರ್ರಾಬಿರ್ರಿಯಾಗಿ ಕಾಣುತ್ತಿರುವುದನ್ನು ಕಂಡು ಸಿಡಿಮಿಡಿಗೊಂಡ. ಛೆ, ಪುಸ್ತಕ ಇಷ್ಟೆಲ್ಲ ಕೆಟ್ಟದಾಗಿ ಕಾಣಿಸ್ತಾ ಇದೆಯಲ್ಲ ಎಂದು ಬೇಜಾರಾಗಿ ಸುಮ್ಮನೆ ಕೂರುವ ಬದಲು, ಒಳ್ಳೆಯ ಪುಟವಿನ್ಯಾಸ ಮಾಡುವ ಒಂದು ಕಂಪ್ಯೂಟರ್ ಪ್ರೋಗ್ರಾಮನ್ನೇ ಬರೆದ! ಈ ಪ್ರೋಗ್ರಾಮಿಂಗ್ನ್ನು ಕನೂಥ್ ರೂಪಿಸಿದ್ದು ೧೯೭೮ರಲ್ಲಿ. ಇವತ್ತಿಗೂ ಅದು ಚೆನ್ನಾಗಿಯೇ ಕೆಲಸ ಮಾಡುತ್ತಿದೆ. ಈಗ, `ಭೂಮಿಯನ್ನೇ ನಡುಗಿಸುವ ಸುದ್ದಿಯಾಗಿ’ (ಇದೆಲ್ಲ ಕನೂಥ್ನ ತಮಾಶೆಯ ಪದಗುಚ್ಛಗಳು ಎಂಬುದನ್ನು ಗಮನಿಸಿ) ಐಟೆಕ್ಸ್ ಎಂಬ ಸುಧಾರಿತ, ಸಮಕಾಲೀನ ಪ್ರೋಗ್ರಾಮಿಂಗ್ನ್ನು ರೂಪಿಸುತ್ತಿರುವುದಾಗಿ ಕನೂಥ್ ಪ್ರಕಟಿಸಿದ್ದಾನೆ.
ಈ ಟೆಕ್ಸ್ ಮಾಡೋದಾದ್ರೂ ಏನು?
ಕಂಪ್ಯೂರಿನಲ್ಲಿ ಮಾರ್ಕಪ್ ಭಾಷೆ ಎಂದು ಕರೆಯುವ ವರ್ಗಕ್ಕೆ ಟೆಕ್ಸ್ ಕೂಡಾ ಸೇರುತ್ತದೆ. ಇಲ್ಲಿ ನೀವು ನಿಮ್ಮ ಗಣಿತದ ಅಥವಾ ಯಾವುದೇ ವೈಜ್ಞಾನಿಕ ಪ್ರಬಂಧದ ಪುಸ್ತಕವು ಯಾವ ರೀತಿ ಕಾಣಿಸಬೇಕು (ಫಾಂಟ್ ಶೈಲಿ, ಪ್ಯಾರಾಗ್ರಾಫ್ ಶೈಲಿ, ಮಾರ್ಜಿನ್ಗಳು, ಸಂಕೇತಗಳು, ಪುಟ ಸಂಖ್ಯೆ, ಕಾಲಂಗಳು, ಬುಲೆಟ್ ಪಾಯಿಂಟ್ಗಳು ಹೀಗೆ ಪುಸ್ತಕ ವಿನ್ಯಾಸದ ಎಲ್ಲ ರೂಪುರೇಷೆಗಳು) ಎಂದು ಆದೇಶಗಳನ್ನು ಊಡಿಸಿದರೆ ಸಾಕು; ಇಡೀ ಪುಸ್ತಕವು ನಿಮ್ಮ ಕನಸಿಗೆ ತಕ್ಕಂತೆ ರೂಪುಗೊಳ್ಳುತ್ತದೆ.
ಟೆಕ್ಸ್ನ ಸಂಗಾತಿ ಮೆಟಾಫಾಂಟ್
ಟೆಕ್ಸ್ ಜೊತೆಗೇ ಕನೂಥ್ ರೂಪಿಸಿದ ಇನ್ನೊಂದು ತಂತ್ರಜ್ಞಾನ ಎಂದರೆ ಫಾಂಟ್ ತಯಾರಿಸುವ ಗಣಕ ತಂತ್ರಾಂಶ ಮೆಟಾಫಾಂಟ್. ಇದನ್ನು ಬಳಸಿ ನೀವು ಎಂಥ ಬಗೆಯ ಫಾಂಟನ್ನಾದರೂ ರೂಪಿಸಬಹುದು. ಜ್ಯಾಮಿತಿಯ ಸೂತ್ರಗಳನ್ನು ಸೂಕ್ತವಾಗಿ ಈ ತಂತ್ರಾಂಶಕ್ಕೆ ಉಣಿಸಿದರೆ, ನಿಮಗೆ ಬೇಕಾದ ವಿನ್ಯಾಸದ ಫಾಂಟ್ ತಯಾರಾಗುತ್ತದೆ. ಬಿಟ್ಮ್ಯಾಪ್ ರೂಪದಲ್ಲಿ ತಯಾರಾದ ಇದನ್ನು ಪೋಸ್ಟ್ಸ್ಕ್ರಿಪ್ಟ್ನಲ್ಲೂ ಅಡಕ ಮಾಡಬಹುದು.
ಒಂದು ಫಾಂಟ್ನ್ನು ೬೦ ಮಾನದಂಡಗಳ ಬಳಕೆಯ ಮೂಲಕ ಹೇಗೆ ಬರೆಯಬಹುದು ಎಂಬ ಗಣಿತದ ತಿಳಿವಳಿಕೆಯನ್ನು ಕಲಾವಿದನೊಬ್ಬ ಹೊಂದಬೇಕೆಂದು ಬಯಸುವುದು ತೀರಾ ಅತಿಯಾದ ನಿರೀಕ್ಷೆ’ ಎಂದು ಕನೂಥ್ ಒಂದೆಡೆ ಹೇಳಿಕೊಂಡಿದ್ದಾರೆ. ಆದರೆ ಹೆರ್ಮನ್ ಝಾಫ್ (ಝಾಫ್ ಡಿಂಗ್ಬ್ಯಾಟ್ಗಳನ್ನು ಯಾರು ಕೇಳಿಲ್ಲ?) ಮತ್ತು ಕನೂಥ್ ಜೊತೆ ಸೇರಿ ಹಲವು ಫಾಂಟ್ಗಳನ್ನು ಮೆಟಾಫಾಂಟ್ ಬಳಸಿಯೇ ತಯಾರಿಸಿದ್ದಾರೆ.
ಈ ಪುಸ್ತಕದಲ್ಲಿ ಕನೂಥ್ ನೀಡಿರುವ ಒಂದು ಎಚ್ಚರಿಕೆ ಹೀಗಿದೆ:
ಡೊನಾಲ್ಡ್ ಕನೂಥ್ ೧೯೯೬ರಲ್ಲಿ ನೀಡಿದ ಒಂದು ಸಂದರ್ಶನದಲ್ಲಿ ಹೇಳಿರುವ ಅಂಶಗಳು ಸ್ವಾರಸ್ಯವಾಗಿವೆ:
- When can we buy volume four of The Art of Computer Programming?
I’m going to be putting it out 128 pages at a time, about twice a year over the next eight years. I’m estimating it now at a little more than 2000 pages. There will be volume 4-a, volume 4-b, and volume 4-c. Volume 4 in general is combinatorial algorithms. Volume 4-a is about finding all possibilities: There’s a lot to be said about generating them in good ways—problems where finding all reasonable solutions is not a trivial task. 4-b is going to be about graph and network algorithms, and 4-c is about combinatorial optimization. So 4-a is ‘find all arrangements,’ 4-b is ‘find arrangements that have to do with graphs and networks,’ and 4-c is ‘find the best arrangement.’ Into those 2000 pages, I have to compress about 200,000 pages of literature. I’ve been working on it a long time.
I had started volume 4 (The Art of Computer Programming)and then realized I had to work on typography. There was a revolution in the printing industry. The printing industry became computer science. It changed from metallurgy to bits, to 0s and 1s. There was no way to print my books with the quality they had before. I was going to take a year and give a computer scientist’s answer to how to print books, and that took ten years.
If you could climb in the pulpit and scold, exhort, and encourage every working programmer in the United States, what would you tell them? Secondly, ideas that are mathematical in nature should be the property of the world and not of the individual who thinks of the theorem. I’d prefer that all but the most sophisticated algorithms be made public and that everybody use them, and not that every time you use such-and-such a method you should pay a nano-penny to some fund.
The first thing I would say is that when you write a program, think of it primarily as a work of literature. You’re trying to write something that human beings are going to read. Don’t think of it primarily as something a computer is going to follow. The more effective you are at making your program readable, the more effective it’s going to be: You’ll understand it today, you’ll understand it next week, and your successors who are going to maintain and modify it will understand it.
(ಸಂಪೂರ್ಣ ಸಂದರ್ಶನವನ್ನು ಇಲ್ಲಿ ಡೌನ್ಲೋಡ್ ಮಾಡಿಕೊಳ್ಳಿ)
ಡೊನಾಲ್ಡ್ ಕನೂಥ್ ಮಹಾ ಹಾಸ್ಯಚತುರ. ಮೊನಚು ಮಾತುಗಳಿಗೆ ಸುಪ್ರಸಿದ್ಧ. ಮಾತನಾಡುವಾಗ ಗಂಭೀರವಾಗಿದ್ದರೂ, ಮಾತಿನಲ್ಲಿ ಮಾತ್ರ ಹರಿತ ವ್ಯಂಗ್ಯವೋ, ತಮಾಶೆಯೋ ಇದ್ದೇ ಇರುತ್ತದೆ. ಈತ ಕಂಡುಹಿಡಿದ ಒಂದು ಹಣದ ಮಒತ್ತವೆಂದರೆ ಹೆಕ್ಸಾಡೆಸಿಮಲ್ ಡಾಲರ್ ಅರ್ಥಾತ್ ೨.೫೬ ಡಾಲರ್. ತನ್ನ ಪುಸ್ತಕಗಳಲ್ಲಿ ಇರುವ ತಪ್ಪುಗಳನ್ನು ಹುಡುಕಿಕೊಟ್ಟವರಿಗೆ ಒಂದು ತಪ್ಪಿಗೆ ೨.೫೬ ಡಾಲರ್ ಮೊತ್ತದ ಒಂದು ಹೆಕ್ಸಾಡೆಸಿಮಲ್ ಡಾಲರ್ ಚೆಕ್ಕನ್ನು ಕನೂಥ್ ತಪ್ಪಿಲ್ಲದೆ ಅಂಚೆಗೆ ಹಾಕುತ್ತಾನೆ. ಹೀಗೆ ಅವನಿಂದ ೧೦.೨೪ ಡಾಲರ್ ಚೆಕ್ ಪಡೆದ ಭಾರತೀಯನ ಚೆಕ್ ಒಂದು ಇಲ್ಲಿದೆ:
ಕನೂಥ್ನ ಟೆಕ್ಸ್ ತಂತ್ರಾಂಶದ ವರ್ಶನ್ಗಳ ಸಂಖ್ಯೆ ವಿಭಿನ್ನ. ಇದು ೩ರಿಂದ ಆರಂಭವಾಗಿ `ಪೈ’ ()ನ ದಶಮಾಂಶ ಸ್ಥಾನಗಳಂತೆಯೇ ಬೆಳೆಯುತ್ತದೆ. ತನ್ನ ತಂತ್ರಾಂಶದ ವರ್ಶನ್ಗಳಿಗೆ ಕೊನೆಯೇ ಇಲ್ಲ ಎಂಬುದು ಕನೂಥ್ನ ರಹಸ್ಯ ಸಂದೇಶ ಇರಬಹುದೇನೋ!
` Beware of bugs in the above code; I have only proved it correct, not tried it ‘ (ನನ್ನ ತಂತ್ರಾಂಶಗಳಲ್ಲಿ ಲೋಪಗಳಿರಬಹುದು ಎಚ್ಚರ! ನಾನು ಇವನ್ನೆಲ್ಲ ಸರಿ ಅಂತ ಸಿದ್ಧಮಾಡಿ ತೋರಿಸಿದ್ದೇನೆಯೇ ಹೊರತು ಅವುಗಳನ್ನು ಬಳಸಿಲ್ಲ) ಎಂಬ ಸುಪ್ರಸಿದ್ಧ ವಾಕ್ಯವು ಕನೂಥ್ನ ಬಾಯಿಯಿಂದಲೇ ಬಂದಿದ್ದು.
ಸಂಗೀತದಲ್ಲೂ ಪಳಗಿರುವ ಕನೂಥ್ ಮನೆಯಲ್ಲಿ ಒಂದು ಪೈಪ್ ಆರ್ಗನ್ ಸ್ಥಾಪಿಸಿಕೊಂಡಿದ್ದಾನೆ. ಅವನ ಗಣಿತದ ನಿಪುಣತೆಯೂ ಇದಕ್ಕೆ ಸಹಾಯ ಮಾಡಿರಬಹುದು. ಇದರಲ್ಲಿ ಒಟ್ಟು ೮೧೨ ಧ್ವನಿ ಹೊರಡಿಸುವ ಕೊಳವೆಗಳಿವೆ.
೧೯೭೫ರಿಂದಲೇ ಈ ಮೈಲ್ ಬಳಸುತ್ತಿದ್ದ ಕನೂಥ್ ೧೯೯೦ರ ಜನವರಿ ೧ರಿಂದ ಈಮೈಲ್ ಬಳಕೆಯನ್ನು ನಿಲ್ಲಿಸಿದ್ದಾನೆ. ೧೫ ವರ್ಷ ಈ ಮೈಲ್ ಬಳಸುವುದೆಂದರೆ ಬದುಕಿಗೆ ಬೇಕಾದಷ್ಟಾಯಿತು ಎನ್ನುವುದು ಕನೂಥ್ನ ವಾದ. ಜೀವನದಲ್ಲಿ ಯಾವಾಗಲೂ ಮೇಲೇ ಇರಬೇಕೆನ್ನುವವರಿಗೆ ಈ ಮೈಲ್ ಬೇಕು. ಆದರೆ ನಾನು ಯಾವಾಗಲೂ ತಳದಲ್ಲೇ ಪಾತ್ರ ನಿರ್ವಹಿಸಬಯಸುವ ವ್ಯಕ್ತಿ ಎಂದು ಕನೂಥ್ ಹೇಳುತ್ತಾರೆ. ಅವರ ಮಾತುಗಳಲ್ಲೇ ಹೇಳುವುದಾದರೆ…
ನನಗೆ ಬೇಕಾದದ್ದು ಅಧ್ಯಯನಕ್ಕೆ ಸೂಕ್ತವಾದ ಸುದೀರ್ಘ ಸಮಯಾವಕಾಶ; ಅಲ್ಲಿ ನನ್ನ ಗಮನವನ್ನು ಅತ್ತಿತ್ತ ಸೆಳೆಯುವ ಯಾವುದೇ ಅಡ್ಡಿಯೂ ಇರಕೂಡದು. ನಾನು ಗಣಕ ವಿಜ್ಞಾನದ ಹಲವು ಕ್ಷೇತ್ರಗಳಲ್ಲಿ ಅತಿ ಆಳವಾಗಿ ಅಭ್ಯಾಸ ಮಾಡುತ್ತೇನೆ. ಹೀಗೆ ಅಭ್ಯಾಸ ಮಾಡದವರಿಗೆ ಅರ್ಥವಾಗುವ ಹಾಗೆ ತಿಳಿವಳಿಕೆಯನ್ನು ಹೊಂದಲು ನಾನು ಬಯಸುತ್ತೇನೆ. ಆದರೆ ಹಲವು ಪುಸ್ತಕಗಳನ್ನು ಬರೆಯುವ ನನಗೆ ಸಾವಿರಾರು ಜನರ ಜೊತೆಗೆ ಸಂಪರ್ಕ ಸಾಧಿಸುವ ಅಗತ್ಯವಿದೆ. ಜನರ ಪ್ರಶ್ನೆಗಳಿಗೂ ನಾನು ಉತ್ತರಿಸಬೇಕಿದೆ. ಆದ್ದರಿಂದ ಪ್ರತೀ ಮೂರು ತಿಂಗಳಿಗೊಮ್ಮೆ ಒಂದು ದಿನವಿಡೀ ಈ ಪ್ರತಿಕ್ರಿಯೆ ನೀಡುವುದಕ್ಕೇ ಸಮಯ ಮೀಸಲಿಟ್ಟಿದ್ದೇನೆ. ನಿಮಗೇನಾದರೂ ಹೇಳಬೇಕೆಂದಿದ್ದರೆ ದಯಮಾಡಿ ಈ ಕೆಳಗಿನ ವಿಳಾಸಕ್ಕೆ ಕಾಗದದ ಪತ್ರ ಹಾಕಿ: (ಪ್ರೊ. ಡೊನಾಲ್ಡ್ ಕನೂಥ್, ಕಂಪ್ಯೂಟರ್ ಸೈನ್ಸ್ ಡಿಪಾರ್ಟ್ಮೆಂಟ್, ಗೇಟ್ಸ್ ಬಿಲ್ಟಿಂಗ್ ೪ಬಿ, ಸ್ಟಾನ್ಫರ್ಡ್ ಯೂನಿವರ್ಸಿಟಿ, ಸ್ಟಾನ್ಫರ್ಡ್, ಅಮೆರಿಕಾ).
ನನಗೆ ಬಂದ ಪತ್ರಗಳನ್ನು ನನ್ನ ಅದ್ಭುತ ಕಾರ್ಯದರ್ಶಿಯು ಜೋಡಿಸಿಡುತ್ತಾಳೆ. ನಾನು ಅವುಗಳನ್ನು ನಿಯಮಿತವಾಗಿ ನೋಡುತ್ತೇನೆ. ಹಾಗೇ ನನ್ನ ಈ ಮೈಲ್ಗೂ ನೀವು ಪತ್ರ ಕಳಿಸಬಹುದು. ಅಕಸ್ಮಾತ್ ನೀವೇನಾದ್ರೂ ಫ್ಯಾಕ್ಸ್ ಕಳಿಸಿದರೆ ಅದನ್ನು ನಾನು ಮೂರು ತಿಂಗಳಲ್ಲ, ಆರು ತಿಂಗಳಿಗೆ ಒಮ್ಮೆ ನೋಡ್ತೇನೆ ಅಷ್ಟೆ!
`ನಾನು ಈ ಮೈಲ್ ವಿಳಾಸವನ್ನೂ ಇಟ್ಟುಕೊಂಡಿಲ್ಲ. ನನ್ನ ಪರಮ ಉದ್ದೇಶವು ಸಂದೇಶಗಳನ್ನು ಸ್ವೀಕರಿಸುವ ಕಾಲ ಇದಲ್ಲ; ಈ ಕಾಲವನ್ನು ನನ್ನ ವಯಸ್ಸು ಮೀರಿದೆ’ ಎಂದು ಉಂಬರ್ಟೋ ಇಕೋ ಹೇಳಿದ್ದು ಕೇಳಿಲ್ಲವೆ?
ನೋಡಿ, ನನ್ನ ಪುಸ್ತಕ `ದಿ ಆರ್ಟ್ ಆಫ್ ಕಂಪ್ಯೂಟರ್ ಪ್ರೋಗ್ರಾಮಿಂಗ್ ಇದೆಯಲ್ಲ, ಅದನ್ನು ೧೯೬೨ರಿಂದ ಬರೆಯೋದಕ್ಕೆ ಶುರು ಮಾಡಿದ್ದೇನೆ. ಅದನ್ನು ಮುಗಿಸೋದಕ್ಕೆ ನನಗೆ ಇನ್ನೂ ಹಲವು ವರ್ಷಗಳು ಬೇಕು. ಅದಕ್ಕಾಗಿ ಕೆಲವರಿಗೆ ಅನಿವಾರ್ಯವಾಗಿ ಈ ಮೈಲ್ ಹಾಕುತ್ತೇನೆ.
ಹೀಗೆ ಈ ಮೈಲ್ ಬಳಕೆಯ ಕುರಿತು ಬರೆಯೋದ್ರಲ್ಲೇ ತನ್ನ ಜೀವನದೃಷ್ಟಿಯನ್ನೂ ದಾಖಲಿಸಿದ ಕನೂಥ್ ಟ್ಯೂರಿಂಗ್ ಪ್ರಶಸ್ತಿ, ನ್ಯಾಶನಲ್ ಮೆಡಲ್ ಫಾರ್ ಸೈನ್ಸ್, ಜಾನ್ ವಾನ್ ನ್ಯೂಮನ್ ಮೆಡಲ್, ಕ್ಯೋಟೊ ಪ್ರೈಜ್, ಮತ್ತು ಇತ್ತೀಚೆಗಷ್ಟೆ (೨೦೧೦) ಪ್ರತಿಷ್ಠಿತ ಕತಯಾನಗಿ ಬಹುಮಾನವನ್ನು ಪಡೆದಿದ್ದಾರೆ. ೨೦೦೬ರಲ್ಲಿ ಅವರಿಗೆ ಕ್ಯಾನ್ಸರ್ ಇದೆ ಎಂಬುದು ಗೊತ್ತಾಗಿದೆ. ಅದನ್ನೂ ಕ್ರೀಡಾಮನೋಭಾವದಿಂದಲೇ ಸ್ವೀಕರಿಸಿದ್ದಾರೆ ಕನೂಥ್.
ತನ್ನ ವೆಬ್ಸೈಟಿನಲ್ಲಿ ಅತ್ಯಂತ ಮುಕ್ತವಾಗಿ ತನ್ನೆಲ್ಲ ವಿಚಾರಗಳನ್ನೂ ತೆರೆದಿಟ್ಟಿರುವ ಕನೂಥ್ ನಮ್ಮ ನಡುವೆ ಇರುವ ಒಬ್ಬ ಹೃದಯವಂತ ಗಣಿತಜ್ಞ.
1 Comment
Pingback: ಟೆಕ್ಸ್ ಗುರು ರಾಧಾಕೃಷ್ಣನ್ : ನದೀಕಣಿವೆಯ ಫ್ರೀ ಸಾಫ್ಟ್ವೇರ್ ಸಂತ « ಬೇಳೂರು ಸುದರ್ಶನ