`ಡಿಸೆಂಟಿಂಗ್ ಡಯಾಗ್ನೊಸಿಸ್’ ಎಂಬ ಪುಸ್ತಕದ ಬಗ್ಗೆ ನಾನು ಈ ಹಿಂದೆ ಬರೆದ ವಿಮರ್ಶೆಯನ್ನು ನೀವು ಓದಿದ್ದೀರೋ ಇಲ್ಲವೋ ಗೊತ್ತಿಲ್ಲ. ಅದರಲ್ಲಿ ಬರೋ ಹಾಸ್ಕಿಟಲ್ ಗೈಡ್ ಫೌಂಡೇಶನ್ ಎಂಬ ಸಂಸ್ಥೆಯ ಬಗ್ಗೆ ಕೊಂಚ ವಿವರವಾಗಿ ಮಾಹಿತಿ ಕೊಡಲು ಈ ಬ್ಲಾಗ್ ಬರೆಯುತ್ತಿದ್ದೇನೆ. ನಿಮಗೆ, ಅಥವಾ ನಿಮ್ಮ ಬಂಧು-ಬಳಗ, ಸ್ನೇಹಿತವರ್ಗದಲ್ಲಿ ಯಾರಿಗಾದರೂ ದೊಡ್ಡ ಕಾಯಿಲೆ ಇದ್ದರೆ, ನಿಮಗೆ ನೈತಿಕ ಪ್ರಜ್ಞೆ ಇರುವ ನೀತಿವಂತ ವೈದ್ಯರನ್ನು ಹುಡುಕಿಕೊಡಲು ಈ ಸಂಸ್ಥೆಯು ಯತ್ನಿಸುತ್ತದೆ.
ಆ ಪುಸ್ತಕದ ಬಗ್ಗೆ ವಿಮರ್ಶೆ ಬರೆಯುತ್ತಿದ್ದ ಸಮಯದಲ್ಲೇ ಕುತೂಹಲಕ್ಕಾಗಿ ನಾನು ಈ ಸಂಸ್ಥೆಯ ಜಾಲತಾಣಕ್ಕೆ ಹೋಗಿ ನನ್ನದೊಂದು ಬಹುಕಾಲದ ಆರೋಗ್ಯ ಸಮಸ್ಯೆಯನ್ನು ಸಂಕ್ಷಿಪ್ತವಾಗಿ ವಿವರಿಸಿ, ಸಲಹೆ ಕೊಡಿ ಎಂದು ವಿನಂತಿಸಿದೆ. ಜಾಲತಾಣದಲ್ಲಿ ಹೇಳಿದಂತೆಯೇ ೭೨ ಗಂಟೆಗಳಲ್ಲಿ ಕರೆ ಬರಬಹುದು ಎಂದು ನಿರೀಕ್ಷಿಸಿದ್ದೆ. ಆದರೆ ಎರಡೇ ದಿನಗಳಲ್ಲಿ, ಅಂದರೆ ೪೮ ಗಂಟೆಗಳ ಒಳಗೆ ನನಗೆ ಕರೆ ಬಂತು. ನನ್ನನ್ನು ವಿಚಾರಿಸಿಕೊಂಡ ಮಹಿಳೆಯೊಬ್ಬರು, ಇನ್ನೆರಡು ದಿನಗಳಲ್ಲಿ ಈ ಕುರಿತು ಹೆಚ್ಚಿನ ನೆರವು ಒದಗಿಸಲು ಯತ್ನಿಸುವುದಾಗಿ ತಿಳಿಸಿದರು. ಅದಾಗಿ ಒಂದೇ ದಿನದಲ್ಲಿ ಮತ್ತೆ ನನಗೆ ಕರೆ ಮಾಡಿ ಮೈಸೂರಿನಲ್ಲೇ ಈ ಕುರಿತು ಮಾಹಿತಿ ನೀಡಬಹುದಾದ ಎಥಿಕಲ್ ವೈದ್ಯರು ಒಬ್ಬರಿದ್ದಾರೆಂದು ತಿಳಿಸಿ ಅವರ ಮೊಬೈಲ್ ಸಂಖ್ಯೆ ಮತ್ತು ಅವರಿಗೆ ಕರೆ ಮಾಡಬಹುದಾದ ಸಮಯದ ಬಗ್ಗೆ ತಿಳಿಸಿದರು. ಅದರಂತೆ ನಾನು ಕರೆ ಮಾಡಲು ಮರೆತೆ. ಒಂದೇ ವಾರದಲ್ಲಿ ಮತ್ತೆ ಆ ಮಹಿಳೆಯಿಂದಲೇ ಕರೆ ಬಂತು: ”ಏನು ನೀವು ಇನ್ನೂ ವೈದ್ಯರಿಗೆ ಕರೆ ಮಾಡಲಿಲ್ಲವೆ? ನಿಮ್ಮ ಆರೋಗ್ಯದ ಬಗ್ಗೆ ನಿಮಗೇ ಕಾಳಜಿ ಇಲ್ಲವೆ?” ಎಂದು ಅವರು ಪ್ರಶ್ನಿಸಿದರು! ಆ ಮಹಿಳೆ ಬೇರಾರು ಅಲ್ಲ, ಹಾಸ್ಇಟಲ್ ಗೈಡ್ ಫೌಂಡೇಶನ್ನ ಸ್ಥಾಪಕಿ ಮತ್ತು ನಿರ್ದೇಶಕಿ ಇಂದ್ರಿತಾ ಸಿಂಗ್ ಡಿಮೆಲ್ಲೋ ಎಂದು ಗೊತ್ತಾಯಿತು. ಯಖಕಶ್ಚಿತ್ ಒಬ್ಬ ರೋಗಿಯ ಬಗ್ಗೆ ವಿಚಾರಿಸಲು ಸಂಸ್ಥೆಯ ಅಧ್ಯಕ್ಷೆಯೇ ಕಾಳಜಿ ತೆಗೆದುಕೊಂಡಿದ್ದರು!
ನಾನು ಕಕ್ಕಾಬಿಕ್ಕಿಯಾಗಿ ಮರುದಿನವೇ ಆ ಮೈಸೂರಿನ ವೈದ್ಯರಿಗೆ ಕರೆ ಮಾಡಿದೆ. ಅವರು ನಿಧಾನವಾಗಿ ಸುಮಾರು ೨೫ ನಿಮಿಷಗಳ ಕಾಲ ನನ್ನ ರೋಗದ ಬಗ್ಗೆ ಮಾಹಿತಿಯನ್ನು ಪಡೆದರು. ಮುಖ್ಯವಾಗಿ ಅವರು ನಾನು ಹೇಳಿದ್ದನ್ನೆಲ್ಲವನ್ನೂ ಅಡ್ಡಬಾಯಿ ಹಾಕದೆಯೇ ಕೇಳಿದರು. ನನ್ನ ಜೀವಮಾನದಲ್ಲೇ ನಾನು ಹೀಗೆ ನನ್ನ ರೋಗದ ಬಗ್ಗೆ ನಾನು ಒದರುವುದನ್ನು ೨೦ ನಿಮಿಷ ಕೇಳಿದ ವೈದ್ಯರನ್ನು ಕಂಡಿರಲಿಲ್ಲ! ಅದಾಗಿ ಅವರು ನನ್ನ ರೋಗಲಕ್ಷಣಕ್ಕೆ ತಕ್ಷಣವೇ ಪರಿಹಾರ ಹುಡುಕಲು ಅಸಾಧ್ಯವೆಂದೂ, ಅವರು ತಮ್ಮ ಅನುಭವದಲ್ಲಿ ಇಂಥ ರೋಗಿಯನ್ನು ಕಂಡಿಲ್ಲವೆಂದೂ ತಿಳಿಸಿದರು. ಅಂದರೆ: ನನ್ನ ರೋಗದ ಬಗ್ಗೆ ಮಾಹಿತಿ ಪಡೆದೂ ಅವರು ಬನ್ನಿ ಕ್ಲಿನಿಕ್ಗೆ ಎನ್ನಲಿಲ್ಲ; ವಿಶೇಷ ಪರೀಕ್ಷೆಗಳನ್ನು ಮಾಡಿಸಿ ಎಂದು ಸಲಹೆ ನೀಡಲಿಲ್ಲ; ತನಗೆ ಎಲ್ಲವೂ ಗೊತ್ತಿದೆ, ರೋಗವು ಹೀಗಿರಬಹುದು, ಹಾಗಿರಬಹುದು ಎಂದು ತರ್ಕ ಮಾಡಲಿಲ್ಲ; ದೂರವಾಣಿಯಲ್ಲಿ ಸಲಹೆಗಳನ್ನು ನೀಡಿದ್ದಕ್ಕೆ ಯಾವುದೇ ಶುಲ್ಕವನ್ನೂ ಅಪೇಕ್ಷಿಸಲಿಲ್ಲ.
ನನ್ನದೇ ಉದಾಹರಣೆಯನ್ನು ಕೊಡುವುದರ ಮೂಲಕವೇ ನಾನು ಈ ಸಂಸ್ಥೆಯು ಖಂಡಿತವಾಗಿಯೂ ರೋಗಿಗಳಿಗೆ ಒಳ್ಳೆಯ ಸೇವೆಯನ್ನೇ ನೀಡುತ್ತಿದೆ ಎಂದು ಭಾವಿಸಿದೆ. ಅದರಂತೆ ಆ ಮಹಿಳೆಯ ಜೊತೆಗೆ ಮತ್ತೊಮ್ಮೆ ಮಾತನಾಡಿ, ಈ ಫೌಂಡೇಶನ್ ಬಗ್ಗೆ ಹೆಚ್ಚಿನ ಮಾಹಿತಿಗಳನ್ನು ಕಲೆಹಾಕಿ ಈ ಬ್ಲಾಗ್ ಬರೆಯುತ್ತಿದ್ದೇನೆ.
“ನಾವು ವೈದ್ಯರ ಅನಾಚಾರಗಳನ್ನು ವಿರೋಧಿಸಲೆಂದು ಈ ಸಂಸ್ಥೆ ಹುಟ್ಟು ಹಾಕಿಲ್ಲ. ನಾವು ಒಳ್ಳೆಯ ವೈದ್ಯರನ್ನು ಹುಡುಕಿಕೊಡುವ ಒಂದು ಸಂಪರ್ಕ ಜಾಲವಾಗಿ ರೋಗಿಗಳಿಗೆ ನೆರವು ನೀಡುತ್ತಿದ್ದೇವೆ. ನಮ್ಮದು ಸಂಘರ್ಷದ ಹಾದಿಯಲ್ಲ; ಸೌಹಾರ್ದದ ಹಾದಿ” ಎಂದು ಇಂದ್ರಿತಾ ಮೊದಲೇ ಸ್ಪಷ್ಟಪಡಿಸಿದರು. “ಇಲ್ಲಿ ನಾವು ರೋಗಿಗಳಿಗೆ ಯಾವ ನಿರ್ಬಂಧವನ್ನೂ ಹಾಕುವುದಿಲ್ಲ. ನಮ್ಮಲ್ಲಿ ನೋಂದಣಿಯಾದ ಎಥಿಕಲ್ ಎಂದು ಗುರುತಾಗಿರುವ ವೈದ್ಯರನ್ನು ರೋಗಕ್ಕೆ ತಕ್ಕಂತೆ ಶಿಫಾರಸು ಮಾಡುತ್ತೇವೆ. ಇದರಲ್ಲಿ ನಾವು ಕಮಿಶನ್ ತೆಗೆದುಕೊಳ್ಳುವುದೂ ಇಲ್ಲ; ಯಾವುದೇ ವ್ಯವಹಾರವನ್ನೂ ಮಾಡುವುದಿಲ್ಲ” ಎಂದು ಇಂದ್ರಿತಾ ಖಚಿತಪಡಿಸಿದರು. A NGO licensed by the Government of India. It is a completely free service with no commercial transaction with suggested healthcare providers/ Doctors hence ensuring unbiased suggestions – ಇದುವೇ ಅವರ ವೆಬ್ಸೈಟ್ ತೆರೆದಾಕ್ಷಣ ಕಾಣುವ ವಾಕ್ಯ.
ನೈತಿಕತೆ, ದಕ್ಷತೆ ಮತ್ತು ಅನುಕಂಪ – ಇದೇ ಹಾಸ್ಪಿಟಲ್ ಗೈಡ್ ಫೌಂಡೇಶನ್ನ (ಎಚ್ಜಿಎಫ್) ಧ್ಯೇಯವಾಕ್ಯ. ತನ್ನಲ್ಲಿ ನೋಂದಣಿಯಾದ ಪ್ರತಿಯೊಬ್ಬ ವೈದ್ಯರನ್ನೂ ಅದು ಸೂಕ್ತವಾಗಿ ಪರೀಕ್ಷೆಗೆ ಒಳಪಡಿಸಿಯೇ ದೃಢೀಕರಿಸಿಕೊಳ್ಳುತ್ತದೆ.
- ನಿಮ್ಮ ರೋಗಕ್ಕೆ ಎಲ್ಲಿಂದ ಚಿಕಿತ್ಸೆ ಆರಂಭಿಸಬೇಕು ಎಂಬುದು ನಿಮಗೆ ತಿಳಿದಿಲ್ಲವೆ?
- ನಿಮಗೆ ಹೃದಯತಜ್ಞರ ಬಳಿಗೆ ಹೋಗಬೇಕೋ, ಹೃದಯ ಶಸ್ತ್ರಚಿಕಿತ್ಸಕರಲ್ಲಿಗೆ ಹೋಗಬೇಕೋ ಎಂಬ ಗೊಂದಲವಿದೆಯೆ?
- ನಿಮಗೆ ವೈದ್ಯರ ಆಯ್ಕೆಯಲ್ಲಿ ಸ್ವಾತಂತ್ರ್ಯ ಇಲ್ಲವೆ?
- ನೀವು ಹಲವು ವೈದ್ಯರ ಬಳಿಗೆ ಹೋಗಿಯೂ ನಿಮ್ಮ ರೋಗಕ್ಕೆ ಚಿಕಿತ್ಸೆ ಸಿಕ್ಕಿಲ್ಲವೆ?
ಈ ಮೇಲಿನ ಎಲ್ಲ ಸಂದರ್ಭಗಳಲ್ಲೂ ನೀವು ಎಚ್ಜಿಎಫ್ನ್ನು ಸಂಪರ್ಕಿಸಬಹುದು. ಸಂಪರ್ಕಿಸಲು ನೀವು ಮಾಡಬೇಕಾದ್ದು ಇಷ್ಟೆ: ಎಚ್ಜಿಎಫ್ ಜಾಲತಾಣಕ್ಕೆ ಹೋಗಿ ಅಲ್ಲಿರುವ ಅರ್ಜಿಯನ್ನು ಸೂಕ್ತವಾಗಿ ತುಂಬಿರಿ. ನಿಮಗೆ ೭೨ ಗಂಟೆಗಳ ಒಳಗೆ ಕರೆ ಬರುತ್ತದೆ.
ಈ ವ್ಯವಸ್ಥೆಯು ಹೇಗೆ ಕೆಲಸ ಮಾಡುತ್ತದೆ?
- ಮೊದಲು ನೀವು ನಿಮ್ಮ ರೋಗದ ಬಗ್ಗೆ ತಿಳಿಸಿ ವೆಬ್ಸೈಟ್ನಲ್ಲಿ ಅರ್ಜಿ ತುಂಬಿಸಿ ಸಲ್ಲಿಸುತ್ತೀರಿ.
- ಈ ಅರ್ಜಿಯನ್ನು ಸ್ವೀಕರಿಸಿದ ಪ್ರತಿಷ್ಠಾನವು ರೋಗಿಯನ್ನು ಸಂಪರ್ಕಿಸಿ ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳುತ್ತದೆ.
- ಈ ಕೋರಿಕೆಯನ್ನು ಪ್ರತಿಷ್ಠಾನವು ಅಧ್ಯಯನ ಮಾಡಿ ಮೌಲ್ಯಮಾಪನ ಮಾಡುತ್ತದೆ.
- ಅದಾಗಿ ೭೨ ಗಂಟೆಗಳ ಒಳಗೆ ಪ್ರತಿಷ್ಠಾನವು ರೋಗದ ಚಿಕಿತ್ಸೆಗೆ ಸೂಕ್ತ ಎಂದು ಕಂಡು ಬಂದ ವೈದ್ಯರನ್ನು ಅಥವಾ ಆಸ್ಪತ್ರೆಯನ್ನು ಸೂಚಿಸುತ್ತದೆ.
ಭಾರತದ ಸುಪ್ರೀಂ ಕೋರ್ಟ್ನ ಮಾಜಿ ಮುಖ್ಯ ನ್ಯಾಯಾಧೀಶ ಜಸ್ಟಿಸ್ ಎ ಎಂ ಅಹ್ಮದಿ, ಬಿಕಾನೇರ್ನ ರಾಜಕುವರಿ ರಾಜ್ಯಶ್ರೀ ಕುಮಾರಿಯವರಿಂದ ಹಿಡಿದು ಹಲವು ಬಗೆಯ ರೋಗಿಗಳು ಪ್ರತಿಷ್ಠಾನದ ಈ ಸೇವೆಯನ್ನು ಪಡೆದು ಪರಿಹಾರ ಕಂಡುಕೊಂಡಿದ್ದಾರೆ ಎಂಬುದನ್ನು ಈ ವೆಬ್ಸೈಟ್ನಲ್ಲೇ ನೋಡಿ ತಿಳಿಯಬಹುದು.
ಇಂದ್ರಿತಾ ಸಿಂಗ್ ಡಿಮೆಲ್ಲೋ ಪರಿಚಯವೇ ಅವರ ಅಪಾರ ಸಾಮಾಜಿಕ ಕಾಳಜಿಯನ್ನು ಸೂಚಿಸುತ್ತದೆ. ಇಂಗ್ಲೆಂಡಿನಲ್ಲಿ ಎಕನಾಮಿಕ್ಸ್, ಫಿಲಾಸಫಿ ಮತ್ತು ರಾಜಕೀಯ ವಿಷಯಗಳಲ್ಲಿ ಪದವಿಪಡೆದ ಅವರು ಬೆಂಗಳೂರಿನ ನ್ಯಾಶನಲ್ ಲಾ ಸ್ಕೂಲ್ನಿಂದ ವೈದ್ಯಕೀಯ ಕಾನೂನು ಮತ್ತು ನೈತಿಕತೆ ವಿಷಯದಲ್ಲಿ ಸ್ನಾತಕೋತ್ತರ ಡಿಪ್ಲೋಮಾ ಪಡೆದಿದ್ದಾರೆ. ಸಾಮಾಜಿಕ ಅಭಿವೃದ್ಧಿ, ಅದರಲ್ಲೂ ಬಡವರ ಪರವಾದ ಸಮಗ್ರ ಕಾರ್ಯಕ್ರಮಗಳನ್ನು ರೂಪಿಸುವುದು ಅವರ ಕಾಳಜಿ. ಹಾಗೆ ನೋಡಿದರೆ ಅವರು ಸಂತೆ ಮೀರಾಬಾಯಿಯವರ ಮನೆತನದ ಕುಡಿಯೂ ಹೌದು! ಅವರ ತಂದೆ ರುಡಾಲ್ಫ್ ಡಿಮೆಲ್ಲೋ ಅವರು ಗೋವಾ ಸ್ವಾತಂತ್ರ್ಯ ಚಳವಳಿಯಲ್ಲಿ ಹೋರಾಡಿದವರು. ಹಲವು ಪ್ರಮುಖ ಆಸ್ಪತ್ರೆಗಳಲ್ಲಿ ಕೆಲಸ ಮಾಡಿದ ಮೇಲೆ ಅವರಿಗೆ ಇಂಥದ್ದೊಂದು ಪ್ರತಿಷ್ಠಾನದ ಅಗತ್ಯ ತುಂಬಾ ಇದೆ ಎಂದು ಅನ್ನಿಸಿತು. ಅದರ ಫಲವಾಗಿಯೇ ೨೦೧೦ರ ಏಪ್ರಿಲ್ನಲ್ಲಿ ಈ ಪ್ರತಿಷ್ಠಾನವನ್ನು ಅವರು ಆರಂಭಿಸಿದರು.
ಅವರ ಜೊತೆಗೇ ಇನ್ನೊಬ್ಬ ಸಂಸ್ಥಾಪಕರಾಗಿರುವ ಮನು ತ್ರಿಪಾಠಿಯವರು ಐಟಿ, ಮಾಧ್ಯಮ ಕ್ಷೇತ್ರಗಳಲ್ಲಿ ಅನುಭವ ಹೊಂದಿದವರು. ರೇಡಿಯೋ ಮಿರ್ಚಿ, ಬಿಗ್ ಎಫ್ಎಂಗಳಲ್ಲೂ ಕೆಲಸ ಮಾಡಿದ ಅವರು ಟೈಮ್ಸ್ ಗ್ರೂಪ್ಗೆ ಹಲವು ಬಗೆಯ ಕಾರ್ಯಕ್ರಮಗಳನ್ನು ಮಾಡಿಕೊಟ್ಟಿದ್ದಾರೆ. ಕರ್ನಾಟಕ ಪಿಟೀಲು ವಾದನವನ್ನೂ ಕಲಿತಿರುವ ಅವರು ಹಲವು ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದಾರೆ.
ಎಚ್ಜಿಎಫ್ ಒಂದು ತಜ್ಞರ ಸಮಿತಿಯನ್ನೂ ಹೊಂದಿದೆ. ವಿಶ್ವದಲ್ಲೇ ಪ್ರಮುಖ ರೋಬೋಟಿಕ್ ಮತ್ತು ಗಂಟಲು ಶಸ್ತ್ರಚಿಕಿತ್ಸಕರಾದ ಡಾ|| ಅರವಿಂದ ಕುಮಾರ್, ಮೂಳೆ ಶಸ್ತ್ರಚಿಕಿತ್ಸಕರಾದ ಡಾ|| ಜಿತೇಂದ್ರ ಮಹೇಶ್ವರಿ, ನಿರ್ನಾಳ ಗ್ರಂಥಿ ತಜ್ಞರಾದ ಡಾ|| ಅಂಬರೀಶ್ ಮಿಥಾಲ್, ಹೊಸದಿಲ್ಲಿಯ ಅಪೋಲೋ ಹಾಸ್ಪಿಟಲ್ನ ಡಾ|| ಅರುಣ್ ಪ್ರಸಾದ್, ದಿಲ್ಲಿಯ ಎಐಐಎಂಎಸ್ನ ನರಶಸ್ತ್ರಚಿಕಿತ್ಸಕ ಡಾ|| ಸಂದೀಪ್ ವೈಶ್ಯ – ಇವರು ಈ ಸಮಿತಿಯ ಸದಸ್ಯರು.
ಏಐಐಎಂಎಸ್ ಆಸ್ಪತ್ರೆಯ ನಿರ್ದೇಶಕ ಡಾ|| ಮಹೇಶಚಂದ್ರ ಮಿಶ್ರಾ, ಸ್ವತಂತ್ರ ಸಿನೆಮಾ ನಿರ್ಮಾಪಕ ರಾಜೀವ್ ಮೆಹ್ರೋತ್ರ, ಬೆಂಗಳೂರಿನ ಸೇಂಟ್ ಮಾರ್ಥಾಸ್ ಆಸ್ಪತ್ರೆಯ ಡಾ|| ಕ್ಲೆಮೆಂಟ್ ಶಿರೋಡ್ಕರ್ ರಾಜನ್, ಡಾ|| ಸುನಿತಾ ಮಹೇಶ್ವರಿ, ಇವರು ಈ ಪ್ರತಿಷ್ಠಾನದ ಸಲಹಾ ಸಮಿತಿಯ ಸದಸ್ಯರಾಗಿದ್ದಾರೆ.
ಆದ್ದರಿಂದ ನೀವು ಬಗೆಬಗೆಯ ಡಿಸ್ಕೌಂಟ್ ಆಫರ್ ಇರುವ್ ಆಸ್ಪತ್ರೆಗಳಿಗೆ ಹೋಗುವುದಾಗಲೀ, ಗುರುತು ಪರಿಚಯ ಇಲ್ಲದ ಸ್ಪೆಶಿಯಾಲಿಟಿ ಆಸ್ಪತ್ರೆಗಳಿಗೆ ಹೋಗುವುದಾಗಲೀ ಅಗತ್ಯವಿಲ್ಲ. ಹಿಂದು ಮುಂದಿಲ್ಲದೆ ಲಕ್ಷಗಟ್ಟಳೆ ರೂಪಾಯಿ ಖರ್ಚು ಮಾಡುವುದಕ್ಕಿಂತ ಮೂರು ದಿನ ಕಾದು ಈ ಪ್ರತಿಷ್ಠಾನದ ಸಲಹೆ ಪಡೆದು ಮುಂದುವರಿಯುವುದು ಒಳ್ಳೆಯದು.
ವೈದ್ಯರಂಗವು ಇಂದು ಅತ್ಯಂತ ತೀವ್ರವಾದ ಕಳಂಕಕ್ಕೆ ಒಳಗಾಗಿದೆ. ವೈದ್ಯರು ಗ್ರಾಹಕ ಕಾಯ್ದೆಯಡಿ ಶಿಕ್ಷೆಗೆ ಒಳಗಾಗುವ ಸಂದರ್ಭವೇ ಅಪರೂಪ. ವೈದ್ಯರು ನಿಮಗೆ ರೋಗದ ಬಗ್ಗೆ ಮಾಹಿತಿ ತಿಳಿಸದೆಯೇ ಸಾವಿರಾರು ರೂಪಾಯಿಗಳ ತಪಾಸಣೆ ಮಾಡಿಸುತ್ತಾರೆ. ಇವೆಲ್ಲವನ್ನೂ ತೀರಾ ಸಾರ್ವತ್ರೀಕರಣಗೊಳಿಸಬಾರದು.
ಆದರೆ ಚಿಕೂನ್ ಗುನ್ಯಾ ರೋಗಕ್ಕೆ ಎದೆಯ ಎಕ್ಸ್ರೇ ತೆಗೆಯಬೇಕು ಎಂದು ಆಸ್ಪತ್ರೆಯ ವೈದ್ಯರೊಬ್ಬರು ಸಲಹೆ ಮಾಡಿದ್ದನ್ನು ನೋಡಿದ ಮೇಲೆ ನನಗೆ ಈ ಸ್ಪೆಶಿಯಾಲಿಟಿ ಆಸ್ಪತ್ರೆಗಳ ಬಗ್ಗೆ ಜಿಗುಪ್ಸೆಯೇ ಹುಟ್ಟಿದೆ!
ಡಿಸೆಂಟಿಂಗ್ ಡಯಾಗ್ನೊಸಿಸ್ ಪುಸ್ತಕದ ಬಗ್ಗೆ ಮಾಹಿತಿ ಪಡೆಯಲು ಇಲ್ಲಿ ಕ್ಲಿಕ್ ಮಾಡಿರಿ: https://beluru.com/?p=3925