ವಿಶ್ವ ಪರಿಸರ ದಿನ ೨೦೧೫: ಲಾಂಛನ ರೂಪಿಸಿದವರು ಕೇರಳದ ಶಿಬಿನ್‌; ಇಲ್ಲಿದೆ ಅವರ ವಿಶೇಷ ಸಂದರ್ಶನ!

೨೦೧೫ರ ವರ್ಷದ ವಿಶ್ವ ಪರಿಸರ ದಿನದ ಲಾಂಛನವನ್ನು ರೂಪಿಸಿದವರು ಭಾರತೀಯ, ಕೇರಳದ ಶಿಬಿನ್‌! ವೃತ್ತಿಯಲ್ಲಿ ಕೇರಳ ಸರ್ಕಾರದಲ್ಲಿ ಕಂಪ್ಯೂಟರ್‌ ವಿಜ್ಞಾನದ ಶಿಕ್ಷಕರಾಗಿರುವ ಶಿಬಿನ್‌ ವಿಶೇಷ ಸಂದರ್ಶನದಲ್ಲಿ ಲಾಂಛನದ ಬಗ್ಗೆ, ತಮ್ಮ ಬಗ್ಗೆ ಹಲವು ಅಪರೂಪದ ಸಂಗತಿಗಳನ್ನು ಹಂಚಿಕೊಂಡಿದ್ದಾರೆ.

ವಿಶ್ವ ಸಂಸ್ಥೆಯ ಪರಿಸರ ಕಾರ್ಯಕ್ರಮ ವಿಭಾಗವು ಸಾಮಾನ್ಯವಾಗಿ ಮೊದಲು ವರ್ಷದ ಘೋಷಣಾವಾಕ್ಯದ ಬಗ್ಗೆ ಸ್ಪರ್ಧೆ ಏರ್ಪಡಿಸಿ ಅದರ ನಂತದ ಲಾಂಛನ ಸ್ಪರ್ಧೆ ನಡೆಸುತ್ತದೆ. ಈ ಸಲ ಆಯ್ಕೆಯಾದ ಘೋಷಣೆ : ಏಳು ಬಿಲಿಯ ಕನಸುಗಳು; ಒಂದು ಗ್ರಹ- ಜಾಗೃತೆಯಿಂದ ಬಳಸಿ. ಈ ಘೋಷಣಾವಾಕ್ಯದ ಹಿನ್ನೆಲೆಯಲ್ಲಿ ಲಾಂಛನ ಸ್ಪರ್ಧೆ ಪ್ರಕಟವಾಗಿದ್ದು ಇದೇ ಏಪ್ರಿಲ್‌ ಮೊದಲ ವಾರದಲ್ಲಿ. ಸ್ಪರ್ಧೆಗೆ ಕಲಾಕೃತಿಗಳನ್ನು ಸಲ್ಲಿಸಲು ಕೊನೆಯ ದಿನ ಏಪ್ರಿಲ್‌ ೧೯. ಸರಿ, ಶಿಬಿನ್‌ ತಡಮಾಡದೆ ತಮ್ಮ ಚಿಂತನೆಯನ್ನು ಹರಿಬಿಟ್ಟು ಲಾಂಛನ ರಚಿಸಿದರು. ಬಹುಮಾನವನ್ನು ಗೆದ್ದರು!

English

`ಈ ಘೋಷಣೆಯನ್ನು ನೋಡಿದಾಗ ನಾನು ಆದಷ್ಟೂ ಸರಳವಾಗಿ ಈ ವಿಷಯವನ್ನು ಬಿಂಬಿಸಬೇಕು ಎಂದುಕೊಂಡೆ. ಘೋಷಣಾವಾಕ್ಯದ ಎಲ್ಲಾ ಅಂಶಗಳನ್ನೂ ಸೇರಿಸಬೇಕು ಎಂಬ ಗುರಿಯನ್ನೂ ಹಾಕಿಕೊಂಡೆ. ಕೊನೆಗೂ ಏಪ್ರಿಲ್‌ ೧೯ರ ಕೊನೆಯ ದಿನ ನಾನು ನನ್ನ ಕೃತಿಯನ್ನು ಸಲ್ಲಿಸಿದೆ’ ಎಂದು ಶಿಬಿನ್‌ ಉತ್ಸಾಹದಿಂದ ಹೇಳುತ್ತಾರೆ.

1524715_455678051220724_2127548980_n

ಈ ಲಾಂಛನವನ್ನು ನೋಡಿದಾಗ ಕಂಪ್ಯೂಟರ್‌ನ ಆರಂಭದ ದಿನಗಳಲ್ಲಿ ಆಡುತ್ತಿದ್ದ ಪ್ಯಾಕ್‌ಮನ್‌ ಕಾಣುತ್ತಾನೆ. ಏಳು ಬಿಲಿಯ ಜನರು ಭೂಮಿಯನ್ನು ಕಬಳಿಸುತ್ತಿರುವುದರ ಸಂಕೇತ ಇದು. ಈ ಅಂಶವೇ ಲಾಂಛನದ ಹೆಚ್ಚುಗಾರಿಕೆ ಎಂಬುದು ಶಿಬಿನ್‌ ಅಭಿಮತ.

ಬೆಂಗಳೂರಿನಲ್ಲಿ ಎರಡು ವಿನ್ಯಾಸದ ಸಂಸ್ಥೆಗಳಲ್ಲಿ ೨೦೦೬-೦೭ರಲ್ಲಿ ಕೆಲಸ ಮಾಡಿದ್ದ ಶಿಬಿನ್‌ಗೆ ಲಾಂಛನ ವಿನ್ಯಾಸ ಮಾಡುವುದು ಒಂದು ಹವ್ಯಾಸವೇ ಆಗಿತ್ತು. ೧೯೭೯ರಲ್ಲಿ ತಲಚೇರಿಯಲ್ಲಿ ಜನಿಸಿದ ಶಿಬಿನ್‌ ಬಿಎಸ್‌ಸಿ ನಂತರ ಕಂಪ್ಯೂಟರ್‌ ವಿಜ್ಞಾನದಲ್ಲಿ ಎಂಎಸ್‌ಸಿ ಮಾಡಿದ್ದಾರೆ. ಛಾಯಾಗ್ರಹಣ, ಚಲನಚಿತ್ರ ವೀಕ್ಷಣೆ, ಸಂಗೀತ – ಇವು ಅವರ ಹವ್ಯಾಸಗಳು.

ಭಾರತೀಯ ಕರೆನ್ಸಿ ರುಪಾಯಿ ಚಿಹ್ನೆ ಸ್ಪರ್ಧೆಯಲ್ಲಿ ಕೊನೆಯ ಐವರಲ್ಲಿ ಒಬ್ಬರಾಗಿ ಆಯ್ಕೆಯಾಗಿದ್ದ ಶಿಬಿನ್‌ ಮಲಯಾಳ ಮನೋರಮಾ ಏರ್ಪಡಿಸಿದ್ದ ಶಿಕ್ಷಕರಿಗಾಗಿ ಲಾಂಛನ ರೂಪಿಸುವ ಸ್ಪರ್ಧೆಯಲ್ಲಿ ಬಹುಮಾನ ಗೆದ್ದಿದ್ದರು. ಇದಲ್ಲದೆ ಹಲವು ಬಹುಮಾನಗಳನ್ನು ಅವರು ಗೆದ್ದಿದ್ದಾರೆ.

`ನಾವು ಪ್ರಕೃತಿಯ ಬಗ್ಗೆ ಕಾಳಜಿ ವಹಿಸುವುದು ತುಂಬಾ ಮುಖ್ಯ. ಈಗಂತೂ ಜನ ತುಂಬಾ ಸ್ವಾರ್ಥಿಗಳಾಗಿದ್ದಾರೆ. ಭವಿಷ್ಯದ ಅಥವಾ ಸಹ ಜೀವಿಗಳ ಬಗ್ಗೆ ನಿರ್ಲಕ್ಷ್ಯ ಕಾಣುತ್ತಿದೆ. ನಮಗೆ ಇಲ್ಲಿರುವ ಸಂಪನ್ಮೂಲ ಬಿಟ್ಟರೆ ಬೇರೇನೂ ಇಲ್ಲ. ಆದ್ದರಿಂದಲೇ ಈ ವರ್ಷದ ಲಾಂಛನ ಮತ್ತು ಘೋಷಣೆ ತುಂಬಾ ಮಹತ್ವದ್ದು’ ಎಂದು ಶಿಬಿನ್‌ ತಮ್ಮ ಪರಿಸರ ಕಾಳಜಿಯನ್ನು ವ್ಯಕ್ತಪಡಿಸುತ್ತಾರೆ.

ತಮ್ಮ ಬಿಡುವಿನ ವೇಳೆಯಲ್ಲಿ ಪರಿಸರ ಕುರಿತ ಪೋಸ್ಟರ್‌ಗಳನ್ನು ರಚಿಸುವ ಶಿಬಿನ್‌ ಈ ಲೇಖನಕ್ಕಾಗಿ ಕೆಲವು ಚಿತ್ರಗಳನ್ನು ಕಳಿಸಿಕೊಟ್ಟಿದ್ದಾರೆ. ನೋಡಿ.

ವಿಶ್ವಸಂಸ್ಥೆಯ ಲಾಂಛನ ಸ್ಪರ್ಧೆಯಲ್ಲಿ ಗೆದ್ದ ಶಿಬಿನ್‌ಗೆ ಅಭಿನಂದನೆಗಳು.

ವಿಶ್ವ ಪರಿಸರ ದಿನದ ವಿಶ್ವಸಂಸ್ಥೆ ಪುಟಕ್ಕಾಗಿ ಇಲ್ಲಿ ಕ್ಲಿಕ್‌ ಮಾಡಿ

 

Leave a Reply

Your email address will not be published. Required fields are marked *