ಅಂತರಜಾಲ ಅಥವಾ ಇಂಟರ್‌ನೆಟ್ ಬಗ್ಗೆ ಎಷ್ಟು ಬಗೆಯ ಕಿವಿಮಾತುಗಳನ್ನು ಹೇಳಿದರೂ ಸಾಕಾಗುವುದಿಲ್ಲ. ಯಾಕೆಂದರೆ ಹೊಸ ಬಳಕೆದಾರರು ಬರುತ್ತಲೇ ಇದ್ದಾರೆ. ಕಂಪ್ಯೂಟರ್ ನಿರಕ್ಷರತೆಯೂ ಒಂದು ಸಮಸ್ಯೆಯೇ. ಆದ್ದರಿಂದ ಮತ್ತೆ ಮತ್ತೆ ಈ ಅಂಕಣದಲ್ಲಿ ಅಂತರಜಾಲದ ಬಗ್ಗೆ ಬರೆಯುವ ಅಗತ್ಯವಿದೆ. ನಾವೀಗ ಕಂಪ್ಯೂಟರನ್ನಷ್ಟೇ ಕಲಿತರೆ ಸಾಕಾಗದು. ಕಂಪ್ಯೂಟರ್ ಸಂಸ್ಕೃತಿಯನ್ನು ಬೆಳೆಸಬೇಕು. ಅಂದರೆ ಮತ್ತಷ್ಟು ಹೊತ್ತು ಗಣಕದ ಮುಂದೆ ಕುಳಿತುಕೊಳ್ಳುವುದಲ್ಲ. ನಮ್ಮ ಸಮಾಜದ ಪರಂಪರೆ, ಭಾಷೆ, ಸಂಸ್ಕೃತಿಗಳನ್ನು ಉಳಿಸಿ ಬೆಳೆಸಲು ಮತ್ತು ನಮ್ಮೆಲ್ಲ ವಾಸ್ತವ ಬದುಕಿನ ಸತ್ಯಗಳನ್ನು ಮರೆಯದಿರಲು, ನಮ್ಮಲ್ಲೇ ಬದುಕಿನ ಶಿಸ್ತನ್ನು ರೂಪಿಸಿಕೊಳ್ಳಲು ಈ ಕಿವಿಮಾತುಗಳು ಅಗತ್ಯ.
೧) ಅಂತರಜಾಲ ಸಂಪರ್ಕ (ಇಂಟರ್‌ನೆಟ್) ಪಡೆದ ಸಮಯ ಹಾಗೂ ಈ ವಿಹಾರದಲ್ಲಿ ಪ್ರತಿದಿನ ಕಳೆಯುವ ಸಮಯವನ್ನು ಲೆಕ್ಕ ಹಾಕಿ. ಅತಿಯಾಗಿ ಅಂತರಜಾಲದಲ್ಲಿ ವಿಹರಿಸುವುದು ಹಲವು ಬಗೆಯ ಸಾಮಾಜಿಕ ಹಾಗೂ ಸಾಂಸ್ಕೃತಿಕ ಸಮಸ್ಯೆಗಳಿಗೆ ಕಾರಣವಾಗುತ್ತದೆ.
೨) ಅಂತರಜಾಲದಲ್ಲಿ ಇರುವಾಗ ಬಗೆಬಗೆಯ ವೆಬ್‌ಸೈಟ್‌ಗಳನ್ನು ನೋಡುತ್ತ, ಅವುಗಳ ಪುಟಗಳನ್ನು ತಿರುಗಿಸುತ್ತ ಕಾಲ ಕಳೆಯಬೇಡಿ. ಇದರಿಂದಾಗಿ ಯಾವುದೇ ಲಾಭವಿಲ್ಲ.
೩) ಅಂತರಜಾಲಕ್ಕೆ ಹೋದ ಪ್ರತಿಯೊಂದು ಬಾರಿಯೂ ಒಂದಾದರೂ ಹೊಸ ಮಾಹಿತಿ ಪಡೆಯುವ ಅಥವಾ ಒಂದು ಹೊಸ, ಉಪಯುಕ್ತ ಜಾಲತಾಣವನ್ನು ಹುಡುಕಿ. ಇದರಿಂದ ಪ್ರತಿ ಬಳಕೆಯಲ್ಲೂ ಒಂದು ಹೊಸ ಸಂಗತಿ ಸಿಕ್ಕಿದ ಸಮಾಧಾನ ಇರುತ್ತದೆ.
೪) ಇಂಟರ್‌ನೆಟ್ ಕಲಿತು, ಮಾತುಕತೆಯನ್ನೂ (ಇಂಟರ್‌ನೆಟ್ ಚಾಟ್) ಕಲಿತ ಮೇಲೆ ಅದರಲ್ಲೇ ಹೆಚ್ಚು ಕಾಲ ಕಳೆಯೋಣ ಎಂದು ಅನ್ನಿಸುವುದು ಸಹಜ. ಆದರೆ ಈ ಮಾತುಕತೆಯಲ್ಲಿ ಯಾವುದೇ ಉಪಯುಕ್ತ ಸಂಗತಿಗಳ ಚರ್ಚೆಯಾಗದಿದ್ದರೆ ಇಡೀ ಸಂಭಾಷಣೆಯೇ ವ್ಯರ್ಥ. `ಹೆಲೋ, ನೀವು ಹೇಗಿದ್ದೀರಿ, ಎಲ್ಲಿದ್ದೀರಿ?’ ಇತ್ಯಾದಿ ಮಾತನಾಡುವುದೇ ಹೆಚ್ಚಾದರೆ ಯಾವುದೇ ಲಾಭವಿಲ್ಲ.
೫) ಈ ಮೈಲ್‌ಗಳನ್ನು ನೋಡುವ ಮುನ್ನ ಯಾವುದೇ ಪತ್ರಗಳನ್ನು ಕಳಿಸಬೇಕೆಂದಿದ್ದರೆ, ಅವುಗಳನ್ನು ಮೊದಲೇ ವರ್ಡ್‌ಪ್ಯಾಡ್‌ನಲ್ಲಿ ಬರೆದಿಟ್ಟುಕೊಂಡು ಸೇವ್ ಮಾಡಿಟ್ಟುಕೊಳ್ಳಿ. ಇಂಟರ್‌ನೆಟ್ ಸಂಪರ್ಕ ಸಿಕ್ಕಿದಕೂಡಲೇ ಈ ಮೈಲ್ ವೆಬ್‌ಸೈಟಿಗೆ ಹೋಗಿ ಈ ಕಾಗದವನ್ನು ಕಾಪಿ ಮಾಡಿ ಕಂಪೋಸ್ ಅಂಕಣದಲ್ಲಿ ಸೀದಾ ಪೇಸ್ಟ್ ಮಾಡಿ ಕೂಡಲೇ ಕಳಿಸಿ.
೬) ಅಂತರಜಾಲದಲ್ಲಿ ಅಪರಿಚಿತ ವ್ಯಕ್ತಿಗಳೊಂದಿಗೆ ವ್ಯವಹಾರ ಮಾಡುವುದು ನಿಷಿದ್ಧ. ಅಕಸ್ಮಾತ್ ಯಾವುದೋ ಮಾಹಿತಿಗೆ ಯಾರನ್ನಾದರೂ ಸಂಪರ್ಕಮಾಡಬೇಕೆಂದಿದ್ದರೆ, ಅಂಥ ವ್ಯಕ್ತಿಯ ಬಗ್ಗೆ, ವ್ಯಕ್ತಿಯು ಕೆಲಸ ಮಾಡುತ್ತಿರುವ ಸಂಘಟನೆಯ ಬಗ್ಗೆ ಸೂಕ್ತ ಮಾಹಿತಿ ಪಡೆದುಕೊಳ್ಳಿ.
೭) ಭೌತಿಕ ಜಗತ್ತಿನಲ್ಲಿ ಇರುವ ಹಾಗೆಯೇ ವೆಬ್‌ಸೈಟ್‌ಗಳಲ್ಲೂ ಕೆಟ್ಟ ಹಾಗೂ ಒಳ್ಳೆಯ ವೆಬ್‌ಸೈಟ್‌ಗಳೆಂದು ವಿಂಗಡಿಸಬಹುದು. ಮನುಷ್ಯನ ದೌರ್ಬಲ್ಯಗಳನ್ನೇ ಸರಕು ಮಾಡಿಕೊಂಡ ಸಾವಿರಾರು ವೆಬ್‌ಸೈಟ್‌ಗಳು ಇಂದು ಸಿಗುತ್ತವೆ ; ಅದು ಜೂಜು, ಲೈಂಗಿಕ ಸಂಬಂಧಗಳು, ಬಹುಬೇಗ ಹಣ ಮಾಡುವುದು, ಇನ್ನೊಬ್ಬರಿಗೆ ಕೇಡನ್ನು ಬಯಸುವುದು, – ಹೀಗೆ ಇವುಗಳನ್ನು ಸ್ಥೂಲವಾಗಿ ವಿಂಗಡಿಸಬಹುದು.
೮) ಒಂದು ವೆಬ್‌ಸೈಟಿಗೆ ಹೋದಮೇಲೆ ಅದರ ಒಳ್ಳೆಯ ಹಾಗೂ ಕೆಟ್ಟ ಅಂಶಗಳನ್ನು ಆದಷ್ಟು ಬೇಗ ಅರಿತುಕೊಳ್ಳಿ. ಒಂದು ವೆಬ್‌ಸೈಟಿಗೆ ಹೋದರೆ ಅದರ ಸರ್ಚ್ ಜಾಗ ಎಲ್ಲಿದೆ? ಅಲ್ಲಿ ಯಾವ ಪುಟಗಳಲ್ಲಿ ಯಾವ ಮಾಹಿತಿ ಸಿಗುತ್ತದೆ ಎಂದು ನೆನಪಿಡಬೇಕು. ಆಗ ಜಾಲತಾಣವಿಹಾರವು ಉಪಯುಕ್ತವಾಗುತ್ತದೆ; ಇನ್ನಷ್ಟು ಹೊಸ ಮಾಹಿತಿ ಹುಡುಕಲೂ ಸಮಯ ಸಿಗುತ್ತದೆ.
೯) ಪ್ರತಿ ಸಲ ಇಂಟರ್‌ನೆಟ್‌ಗೆ ಹೋಗುವಾಗ ಯಾವ ಜಾಲತಾಣಗಳಿಗೆ ಹೋಗಬೇಕಿದೆ, ಯಾವ ಪತ್ರಗಳನ್ನು ನಿರೀಕ್ಷಿಸಿ ಯಾವ ಉತ್ತರಗಳನ್ನು ಕಳಿಸಬೇಕಿದೆ ಎಂದು ಪೂರ್ವಯೋಜನೆ ಟಿಪ್ಪಣಿ ಮಾಡಿಕೊಳ್ಳುವುದು ಸೂಕ್ತ.
೧೦) ಮನೆಯಲ್ಲಿ ಇಂಟರ್‌ನೆಟ್ ವಿಹಾರ ಮಾಡುವಾಗ (ಡಯಲ್ ಅಪ್ ಸಂಪರ್ಕ) ದೂರವಾಣಿ ವೆಚ್ಚವು ಹೆಚ್ಚುತ್ತದೆ ಎಂಬುದು ಗಮನದಲ್ಲಿ ಇರಲಿ. ಮನೆಗೆ ಬರಬಹುದಾದ ಮುಖ್ಯವಾದ ದೂರವಾಣಿ ಕರೆಗಳು ಬಾರದೇ ಹೋಗಬಹುದು. ಆದ್ದರಿಂದ ಮನೆಗಳಲ್ಲಿ ಇಂಟರ್‌ನೆಟ್ ಬಳಸುವಾಗ ಸಮಯ – ಸಂದರ್ಭ ನೋಡಬೇಕು.
೧೧) ಮನೆ – ಕಚೇರಿಗಳಲ್ಲಿ ವಿಹಾರ ಮಾಡುವಾಗ ಪ್ರತಿ ಅರ್ಧ ಗಂಟೆಗೊಮ್ಮೆ ಎಷ್ಟು ಡಾಟಾ ಹೊರಗೆ ಹೊಗಿದೆ ಮತ್ತು ಒಳಬಂದಿದೆ ಎಂಬ ಲೆಕ್ಕಾಚಾರವನ್ನು ಗಮನಿಸಬೇಕು. ನಿಮ್ಮ ಲೆಕ್ಕಾಚಾರಕ್ಕಿಂತ ಹೆಚ್ಚು ಡಾಟಾ ಹೊರಗೆ – ಒಳಗೆ ಹರಿದಿದ್ದರೆ ನಿಮ್ಮ ಕಂಪ್ಯೂಟರಿನಲ್ಲಿ ಯಾವುದೋ ವೈರಸ್ ತನ್ನ ಕೆಲಸ ಆರಂಭಿಸಿದೆ ಎಂದರ್ಥ. ನೀವು ಜಾಲತಾಣಗಳನ್ನು ಬದಲಾಯಿಸದಿದ್ದರೂ ಮಾಹತಿ ಹರಿವು ವಿಪರೀತವಾಗಿದ್ದರೆ ಮೊದಲು ಅಂತರಜಾಲ ಸಂಪರ್ಕವನ್ನು ಕಡಿದು ಹಾಕಿ ವೈರಸ್ ನಾಶಕ ತಂತ್ರಾಂಶವನ್ನು ಬಳಸಿ.
೧೧) ತಡರಾತ್ರಿಯವರೆಗೂ ಜಾಲವಿಹಾರ ಮಾಡುವುದು ಸರಿಯಲ್ಲ. ಉಚಿತ ಇಂಟರ್‌ನೆಟ್ ಸೇವೆಯ ಪ್ರಯೋಜನ ಪಡೆಯಲು ರಾತ್ರಿಯಿಡೀ ವಿಹಾರ ಮಾಡಿದರೆ ಮರುದಿನ ಬೆಲೆಬಾಳುವ ಹಗಲನ್ನೇ ಬಲಿ ಕೊಡಬೇಕಾಗುತ್ತದೆ!
೧೨) ಕಚೇರಿಗಳಲ್ಲಿ ಯಾವ ಗಣಕದಿಂದ ಯಾವ ಜಾಲತಾಣಕ್ಕೆ ಭೇಟಿ ನೀಡಲಾಗಿದೆ, ಇತ್ಯಾದಿ ಎಲ್ಲ ವಿವರಗಳನ್ನೂ ನಿಗಾ ವಹಿಸಿ ದಾಖಲಿಸುವ ವ್ಯವಸ್ಥೆ ಇರುತ್ತದೆ. ನಿಮ್ಮ ಈ ಮೈಲ್‌ಗಳನ್ನೂ ಮೇಲ್ವಿಚಾರಕರು ನೋಡಬಹುದು.
೧೩) ವಿಹಾರಕೆಫೆಗಳಲ್ಲಿ (ಸೈಬರ್‌ಕೆಫೆ) ಇಂಟರ್‌ನೆಟ್ ಬಳಸುವಾಗ ಈ ಅಂಶಗಳನ್ನು ಕಡ್ಡಾಯವಾಗಿ ಗಮನಿಸಬೇಕು:
೧) ಇಂಟರ್‌ನೆಟ್ ಸಂಪರ್ಕಕ್ಕೆ ಕುಳಿತ ಸಮಯ, ಮುಗಿಸಿದ ಸಮಯವನ್ನು ನಾವೂ ದಾಖಲಿಸಬೇಕು.
೨) ಈ ಮೈಲ್ ಗಳನ್ನು ನೋಡಿದರೆ ಕೂಡಲೇ ಅತಿ ಚುಟುಕಾಗಿ ಉತ್ತರಿಸಬೇಕು. ಕರಡು ಪತ್ರಗಳನ್ನು ಫ್ಲಾಪಿ ಡಿಸ್ಕ್‌ನಲ್ಲಿ ಒಯ್ದಿದ್ದರೆ ಅದರಿಂದ ಕಾಪಿ ಮಾಡಿ ತಿದ್ದಿ ಕಳಿಸಬೇಕು.
೩) ಈ ಮೈಲ್ ತಾಣಗಳಲ್ಲಿ ರಹಸ್ಯಪದ ತುಂಬುವ ಜಾಗದ ಕೆಳಗೆ `ಸೇವ್ ಮೈ ಪಾಸ್‌ವರ್ಡ್’ ಎಂಬ ಚೌಕದಲ್ಲಿ ಟಿಕ್ ಆಗಿದೆಯೇ ಎಂದು ನೋಡಬೇಕು. ಹೀಗೆ ಟಿಕ್ ಆಗಿದ್ದರೆ ಅದನ್ನು ತೆಗೆಯಬೇಕು. ಇಲ್ಲವಾದರೆ ನಿಮ್ಮ ನಂತರ ಬರುವ ಇನ್ನೊಬ್ಬ ವ್ಯಕ್ತಿಗೆ ನಿಮ್ಮ ಈ ಮೈಲ್‌ನ ರಹಸ್ಯಪದ ಗೊತ್ತಾಗುತ್ತದೆ.
ಈ ಮೈಲ್ ಬರೆಯುವಾಗ ಎಚ್ಚರಿಕಗಳು
೧) ವಿ-ಅಂಚೆಯನ್ನು ಬಳಸುವಾಗ ಭಾಷೆಯ ಬಗ್ಗೆ ಗಮನ ಇರಲಿ. ಸಂಬೋಧನೆ, ಒಕ್ಕಣಿಕೆ, ಬೇಡಿಕೆ, ಎಲ್ಲವೂ ಸೌಜನ್ಯಭರಿತವಾಗಿರಲಿ. ಎಷ್ಟೆಂದರೂ ಅವಸರದಲ್ಲಿ ಕಳಿಸಬೇಕಾದ ಕಾಗದ ಎಂದು ಗೀಚುವುದು ಸರಿಯಲ್ಲ.
೨) ಕಸಪತ್ರಗಳಲ್ಲಿ ವೈರಸ್‌ಗಳು, ಟ್ರೋಜನ್ ಹಾರ್ಸ್‌ಗಳು, ವಯಸ್ಕರಿಗೇ ಮೀಸಲಾದ ಸಂಗತಿಗಳ ಅಶ್ಲೀಲ ಚಿತ್ರಗಳಿರುವಪತ್ರಗಳು ಬರುತ್ತವೆ. ಅವುಗಳನ್ನು ಓದದೆಯೇ ಕೇವಲ ವಿಷಯ ಸಾಲು ನೋಡಿಯೇ ಎಸೆಯಬೇಕು.
೪) ಹಲವು ಜಾಲತಾಣಗಳು `ನಿಮ್ಮ ವಿ-ಅಂಚೆ ವಿಳಾಸ ಕೊಡಿ ಎಂದು ಪುಸಲಾಯಿಸುತ್ತವೆ. ಅವುಗಳಿಗೆ ಮಾರುಹೋಗಿ ವಿ-ಅಂಚೆ ವಿಳಾಸವನ್ನು ಕೊಟ್ಟರೆ ಅವು ಅನಗತ್ಯ ಶಕ್ತಿಗಳ ಕೈಪಾಲಾಗುತ್ತದೆ. ಕಸಪತ್ರಗಳು ಬರುವುದಕ್ಕೆ ಇದೂ ಮುಖ್ಯ ಕಾರಣ.
ನಿಮ್ಮ ಇಂಟರ್‌ನೆಟ್ ಬಳಕೆ ಇನ್ನಷ್ಟು ಉಪಯುಕ್ತವಾದರೆ ಸಂತೋಷ!
—————