ಎಂಟು ವರ್ಷಗಳ ಹಿಂದಿನ ಮಾತು. ಸ್ಯಾನ್‌ಫ್ರಾನ್ಸಿಸ್ಕೋ ನಗರದ ವೈದ್ಯೆ ಡಾ. ಜೇನ್ ಹೈಟವರ್ ಎಂಬ ವೈದ್ಯೆಯ ಬಳಿ ಒಬ್ಬ ರೋಗಿ ಬಂದಳು. ತುಂಬಾ ಹೊಟ್ಟೆನೋವು ಎಂದಳು. ಜೊತೆಗೆ ವಾಂತಿ, ವಿಪರೀತ ಸುಸ್ತು, ಏಕಾಗ್ರತೆಯೇ ಇಲ್ಲ. ಆಕೆಗೆ ಏನು ಮಾಡಿದರೂ ನೋವಿನ ಮೂಲ ತಿಳಿಯಲಾಗಲಿಲ್ಲ. ಆದೇ ವಾರ ಇನ್ನೂ ಹಲವು ರೋಗಿಗಳು ಇಂಥದ್ದೇ ಸಮಸ್ಯೆ ಹೊತ್ತು ಬಂದರು. ಎಲ್ಲರನ್ನೂ ವಿಚಾರಿಸೋ ಹೊತ್ತಿಗೆ ಡಾ. ಜೇನ್‌ಗೆ ಒಂದು ಅಂಶ ಸ್ಪಷ್ಟವಾಯಿತು: ಎಲ್ಲರೂ ಒಂದು ನಿರ್ದಿಷ್ಟ ಮೀನಿನ ರುಚಿಗೆ ಮನಸೋತವರು. ಆ ಮೀನನ್ನು ಸದಾ ಚಪ್ಪರಿಸಿಕೊಂಡು ತಿನ್ನುತ್ತಿದ್ದವರು. ಸರಿ, ಈ ಮೀನು ತಿನ್ನೋದನ್ನು ಬಿಡಿ ಎಂದಾಕೆ ರೋಗಿಗಳಿಗೆ ಸಲಹೆ ಮಾಡಿದಳು. ಅದನ್ನು ಪಾಲಿಸಿದ್ದೇ ತಡ, ಎಲ್ಲ ಸಮಸ್ಯೆಗಳೂ ಹಠಾತ್ತನೆ ಮಾಯವಾದವು.
ಮೀನಿನಲ್ಲಿ ಪಾದರಸ ಅಂಶ ಇರುತ್ತದೆ. ಅದೇ ಈ ಗುರುತಿಸಲಾಗದ ರೋಗಕ್ಕೆ ಕಾರಣ ಎಂದು ಡಾ. ಜೇನ್ ಪತ್ತೆ ಹಚ್ಚಿದಳು. ಮೀನಿನ ಹೆಜ್ಜೆ ಹುಡುಕುತ್ತ ಹೋದಂತೆಲ್ಲ ಡಾ. ಜೇನ್‌ಗೆ ಹಲವು ವಿಚಿತ್ರ ಸುದ್ದಿಗಳು, ವರದಿಗಳು ಸಿಕ್ಕದವು. ಅವನ್ನೆಲ್ಲ ಆಕೆ ಮತ್ತೆ ಮತ್ತೆ ಶೋಧಿಸಿ ತನ್ನದೇ ವಾದವೊಂದನ್ನು ರೂಪಿಸಿದಳು. ಅದೇ ಈಗ ಡಯಾಗ್ನೋಸಿಸ್: ಮರ್ಕ್ಯುರಿ – ಮನಿ, ಪಾಲಿಟಿಕ್ಸ್ ಎಂಡ್ ಪಾಯ್ಸನ್” ಎಂಬ ಪುಸ್ತಕವಾಗಿ ಪ್ರಕಟವಾಗಿದೆ. ಜಗತ್ತಿನೆಲ್ಲಡೆ ಮೀನು ತಿನ್ನುವವರ, ತಿನ್ನದವರ, ಪಾದರಸವನ್ನು ಪ್ರೀತಿಸುವವರ, ಪ್ರೀತಿಸದವರ ದೊಡ್ಡ ಜಗಳಕ್ಕೆ ಕಾರಣವಾಗಿದೆ. ಅದಕ್ಕಿಂತ ಹೆಚ್ಚಾಗಿ ಮೀನು ಉದ್ಯಮದ ಕೆಂಗಣ್ಣಿಗೆ ಗುರಿಯಾಗಿದ್ದಾರೆ, ಡಾ. ಜೇನ್ ಮತ್ತು ಅವರನ್ನು ಬೆಂಬಲಿಸುವ ಇತರೆ ವೈದ್ಯರು ಮತ್ತು ಪರಿಣತರು.
ಕಳೆದ ಅಕ್ಟೋಬರಿನ ಮೊದಲ ವಾರ ಪ್ರಕಟವಾದ ನ್ಯೂ ಸೈಂಟಿಸ್ಟ್ ಮ್ಯಾಗಜಿನ್‌ನಲ್ಲಿ ಈ ಪುಸ್ತಕದ ಪರಿಚಯ ಇದೆ. ಪುಸ್ತಕದಲ್ಲಿ ತುಂಬಾ ಚೆನ್ನಾಗಿ ಮೀನಿನ ಪಾದರಸದ ಭೀಕರತೆಯನ್ನು ವಿವರಿಸಲಾಗಿದೆ ಎಂಬ ಶ್ಲಾಘನೆ ಇದೆ. ಆದರೆ ನೀವು ಮರ್ಕ್ಯುರಿ ಫ್ಯಾಕ್ಟ್ಸ್ ಎಂಬ ಜಾಲತಾಣಕ್ಕೆ ಹೋದರೆ ಡಾ. ಜೇನ್ ಮಾತ್ರವಲ್ಲ, ಡಾ. ಫಿಲಿಪ್ಸ್ ಗ್ರಾಂಜೀನ್, ಡಾ. ಕ್ಯಾಥರೀನ್ ಮಹಾಫ್, ಡಾ. ಊರ್ವಶಿ ರಂಗನ್, ಡಾ. ದೊಬೋರಾ ರೈಸ್ – ಎಲ್ಲರನ್ನು ಹಿಗ್ಗಾಮುಗ್ಗಾ ಬೈದಾಡಲಾಗಿದೆ. ಈ ಜಾಲತಾಣವನ್ನು ಮೀನು ಉದ್ಯಮದವರೇ ನಡೆಸುತ್ತಿದ್ದಾರೆ ಎನ್ನುವುದು ಎಂಥ ಪೆದ್ದು ಓದುಗನಿಗಾದರೂ ಗೊತ್ತಾಗುತ್ತದೆ ಎನ್ನಿ. ಪಾದರಸದ ಪ್ರಮಾಣ ಮೀನಿನಲ್ಲಿ ಕಳೆದ ನೂರು ವರ್ಷಗಳಲ್ಲಿ ಇದ್ದದ್ದು ಹೆಚ್ಚಾಗಿಲ್ಲ ಮಾರಾಯ್ರೆ ಎಂಬ ವಾದಗಳನ್ನು ಈ ಜಾಲತಾಣದ ಇನ್ನತರೆ ಪುಟಗಳಲ್ಲಿ ಕಾಣಬಹುದು.
ನ್ಯಾಚುರಲ್ ರಿಸೋರ್ಸಸ್ ಡಿಫೆನ್ಸ್ ಕೌನ್ಸಿಲ್ (ಎನ್ ಆರ್ ಡಿ ಸಿ) ಎಂಬ ಜಾಲತಾಣದಲ್ಲಿ ಡಾ. ಜೇನ್ ಸಂದರ್ಶನವಿದೆ. ಹೇಗೆ ಪಾದರಸವು ನಮ್ಮ ಮೇಲೆ ಪರಿಣಾಮ ಉಂಟು ಮಾಡುತ್ತೆ, ಅದರಿಂದ ತಪ್ಪಿಸಿಕೊಳ್ಳುವುದು ಹೇಗೆ ಎಂಬೆಲ್ಲ ವಿವರಗಳು ಈ ಪುಟದಲ್ಲಿವೆ. ಮಕ್ಕಳು ಮತ್ತು ಗರ್ಭಿಣಿಯರು ಮೀನನ್ನು ತಿನ್ನದಿದ್ದರೆ ಒಳ್ಳೆಯದು ಎಂಬ ಮಾತು ಇಲ್ಲಿದೆ. ಈ ಜಾಲತಾಣ ಒಂದು ದೊಡ್ಡ ಸಂಸ್ಥೆ. ೧೨ ಲಕ್ಷ ಸದಸ್ಯರನ್ನು ಹೊಂದಿರುವ ಈ ಸಂಸ್ಥೆ ೩೫೦ಕ್ಕೂ ಹೆಚ್ಚು ನ್ಯಾಯವಾದಿಗಳ, ವಿಜ್ಞಾನಿಗಳ ಮತ್ತು ವೃತ್ತಿಪರರ ದೊಡ್ಡ ಸ್ವಯಂಸೇವಾ ಪಡೆಯನ್ನೇ ಹೊಂದಿದೆ ಎನ್ನಿ. ವಿಶ್ವದ ಜನರನ್ನು, ಪ್ರಾಣಿಗಳನ್ನು ಮತ್ತು ನಿಸರ್ಗ ವ್ಯವಸ್ಥೆಯನ್ನು ಸಂರಕ್ಷಿಸುವುದೇ ಈ ಲಾಭವೇತರ ಸಂಸ್ಥೆಯ ಕಾಯಕ.
ಆದರೆ ಎಬೌಟ್‌ಸೀಫುಡ್ ಎಂಬ ಜಾಲತಾಣದಲ್ಲಿ ಡಾ. ಜೇನ್ ವಾದಗಳನ್ನು ಚಿಂದಿ” ಮಾಡಲಾಗಿದೆ. ಆಕೆ ಹೇಳಿದ್ದೆಲ್ಲ ಸುಳ್ಳು, ತಪ್ಪು ಕಲ್ಪನೆಗಳು ಎಂಬಿತ್ಯಾದಿ ದೊಡ್ಡ ವಾದಸರಣಿಯನ್ನು ಇಲ್ಲಿ ಕಾಣಬಹುದು. ಆಕೆ ಎನ್ ಆರ್ ಡಿ ಸಿ ಜಾಲತಾಣದಲ್ಲಿ ಪರಿಸರವಾದಿ ಎಂದೇ ಪರಿಚಿತರಾಗಿದ್ದಾರಲ್ಲ ಎಂಬುದೂ ಈ ಜಾಲತಾಣದ ಪ್ರಶ್ನೆ. ಹೆಸರೇ ಹೇಳುವಂತೆ ಇದೂ ಮೀನು ಉದ್ಯಮದ ಪರವಾಗಿರುವವರ ವೇದಿಕೆ.
ಮರ್ಕ್ಯುರಿ ಪಾಲಿಸಿ ಪ್ರಾಜೆಕ್ಟ್ ಎಂಬ ಯೋಜನೆಯ ಜಾಲತಾಣಕ್ಕೆ ಬಂದರೆ ಬೇರೆಯದೇ ಚಿತ್ರಣ ಸಿಗುತ್ತೆ. ಪಾದರಸದ ಬಳಕೆಯನ್ನೇ ನಿಲ್ಲಿಸುವುದು, ಪಾದರಸದ ರಫ್ತು ಮತ್ತು ಕಳ್ಳಸಾಗಣೆಯನ್ನು ತಡೆಯುವುದು, ಪಾದರಸದ ಸೇವನೆ ತಪ್ಪಿಸುವುದು ಈ ಯೋಜನೆಯ ಕಾರ್ಯೋದ್ದೇಶ. ಪಾದರಸದ ರಫ್ತಿನ ಮೇಲೆ ಐರೋಪ್ಯ ಸಮುದಾಯವು ಹೇರಲಿರುವ ನಿಷೇಧಕ್ಕೆ ಅಮೆರಿಕಾವೂ ಬೆಂಬಲಿಸಿರುವುದನ್ನು ಈ ಯೋಜನೆ ಸ್ವಾಗತಿಸಿದೆ. ಈ ನಿಷೇಧ ೨೦೧೧ರಿಂದ ಜಾರಿಗೆ ಬರಲಿದೆ. ಬಹುಶಃ ಅಧಿಕಾರದ ಕೊನೆಯ ಕ್ಷಣಗಳಲ್ಲಿ ಜಾರ್ಜ್ ಬುಶ್ ತೆಗೆದುಕೊಂಡ ಒಂದು ಪಾದರಸ ವೇಗದ ತೀರ್ಮಾನವಿದು! ಜಗತ್ತಿಗೆ ಅರ್ಧಕ್ಕರ್ಧ ಪಾದರಸ ರಫ್ತಿಗೆ ಅಮೆರಿಕಾ – ಐರೋಪ್ಯ ಸಮುದಾಯವೇ ಕಾರಣವಂತೆ.
ಹಾಗಾದರೆ ಎಂಥ ಮೀನನ್ನು ತಿನ್ನಬಹುದು? ಈ ವಿಷಯವನ್ನು ಚರ್ಚಿಸಲು, ಅರಿವು ಮೂಡಿಸಲು ಅಮೆರಿಕಾದ ಎನ್‌ವಿರಾನ್‌ಮೆಂಟಲ್ ಪ್ರೊಟೆಕ್ಷನ್ ಏಜೆನ್ಸಿ (ಇಪಿಎ) ಒಂದು ಜಾಲತಾಣವನ್ನು ರೂಪಿಸಿದೆ. ಅಂದರೆ ಪಾದರಸದ ಪ್ರಮಾಣದ ಬಗ್ಗೆ ಅಮೆರಿಕಾ ಸರ್ಕಾರವೇ ಆತಂಕದಲ್ಲಿದೆ ಎಂದಾಯಿತು.
ಅದಿರಲಿ, ಡಾ. ಜೇನ್ ಪುಸ್ತಕದಲ್ಲಿ ಏನಿದೆ? ಅಮೆರಿಕಾದ ಆಹಾರ ಮತ್ತು ಔಷಧ ಆಡಳಿತ ಸಂಸ್ಥೆಯು (ಎಫ್ ಡಿ ಎ) ಮೀನಿನ ಪಾದರಸದ ಸುರಕ್ಷಿತ ಪ್ರಮಾಣ”ದ ಬಗ್ಗೆ ಸಲಹೆಗಳನ್ನು ಪಡೆದಿದ್ದು ಇರಾಖಿನ ಸದ್ದಾಂ ಹುಸೇನ್‌ನ ಬಾಥ್ ಉಗ್ರವಾದಿಗಳಿಂದ ಎಂಬ ವಿಚಿತ್ರ ಸತ್ಯಗಳು ಈ ಪುಸ್ತಕದಲ್ಲಿವೆ. ಮೀನಿನ ಉದ್ಯಮಗಳು ಹೇಗೆ ಜನರನ್ನು ತಪ್ಪು ದಾರಿಗೆಳೆಯುತ್ತಿವೆ, ಹೇಗೆ ಕಲ್ಲಿದ್ದಲು ಆಧಾರಿತ ವಿದ್ಯುತ್ ಸ್ಥಾವರಗಳು ನದಿ, ಸಮುದ್ರಗಳಲ್ಲಿ ಪಾದರಸವನ್ನು ಚೆಲ್ಲಿ ಮೀನುಗಳ
ನ್ನು ಪಾದರಸಯುಕ್ತಗೊಳಿಸುತ್ತವೆ (ತದಡಿ ಅಲ್ಟ್ರಾ ಮೆಗಾ ಪವರ್ ಪ್ರಾಜೆಕ್ಟ್ ನೆನಪಾಯಿತೆ?) – ಇವೆಲ್ಲ ಮಾಹಿತಿಗಳನ್ನೂ ಈ ಪುಸ್ತಕದಲ್ಲಿ ಓದಬಹುದಂತೆ.
ಮೀನಿನ ರುಚಿಗೆ ಮನಸೋತು ಕೊನೆಗೆ ದೇಹವೂ ಸೋತು, ವಿಚಿತ್ರ ಜ್ವರ, ತಲೆನೋವಿಗೆ ತುತ್ತಾಗಿ ಕಳೆದ ವಾರದ ಅಂಕಣವನ್ನೂ ಬರೆಯಲಾಗದೆ ಇದ್ದ ತಪ್ಪಿಗೆ ಈ ಲೇಖನವನ್ನು ಬರೆದಿರುವೆ!!
ಕರಾವಳಿಯಲ್ಲಿ ಮೀನು ಮುಖ್ಯ ಆಹಾರ. ಆದೇ ಬದುಕು. ಮೀನಿನಲ್ಲಿ ಪಾದರಸವನ್ನು ತುಂಬಿದ್ದು ದೇವರಲ್ಲ; ನಾವು, ನರಮನುಷ್ಯರು. ಆದ್ದರಿಂದ ಮೀನಿನ ಈ ಕಥೆಗೆ ದಾರುಣ ಹಿನ್ನೆಲೆ ಇದೆ. ಹಲವು ಸಮುದಾಯಗಳ ಬದುಕಿನ ಅನಿವಾರ್ಯತೆಯ ಮುಖವಿದೆ. ಒಪ್ಪಿಕೊಳ್ಳಲಾಗದ ಅಪಾಯದ ಆಯಾಮವಿದೆ.
ನಿಮಗೆ ಆಸಕ್ತಿ ಇದ್ದರೆ ಈ ಜಾಲತಾಣಗಳನ್ನು ಶೋಧಿಸಿ:
http://www.mercuryfacts.org/activists.cfm#Rangan
http://www.epa.gov/fishadvisories/kids/
http://www.nrdc.org/health/effects/mercury/hightower.asp
U.S. Joins EU in Banning Mercury Exports; Environmentalists Applaud Bi-Partisan Effort