ನಾರುಟೋ ಉಝಿಮಾಕಿ, ದತ್ತೆಬಯೋ!

“Art is something that endures the test of time beautifully a

nd gracefully. True art is eternal beauty”

“Eternal beauty? Master I respect you as a fellow artist, but art is something blossoms for an instant before withering away. “

“Deidara, apparently you don’t understand what true art is.”

“That would be you master”

“Eternal beauty is the only true art”

“That’s absurd! Art is beauty that lasts for just a moment. To me the essence of art is explosions !!”

ದಿ ಆರ್ಟ್ ಆಫ್ ವಾರ್  –  ಇದು ಜಪಾನಿನ ಒಂದು ವಿಶ್ವಪ್ರಸಿದ್ಧ ಪುಸ್ತಕ. ಸಮರಕಲೆಯ ಮೂಲತತ್ವಗಳನ್ನು ಈ ಪುಸ್ತಕ ವಿವರಿಸುತ್ತದೆ. ಆದರೆ ಮೇಲಿನ ಸಂಭಾಷಣೆಯನ್ನು ಈ ಪುಸ್ತಕದಿಂದ ಉಲ್ಲೇಖಿಸಿಲ್ಲ. ಕಲೆ ಎಂದರೆ ಚಿರಂತನ, ಕಾಲಾತೀತ ಅಭಿವ್ಯಕ್ತಿಯೋ, ಒಂದು ಕ್ಷಣದಲ್ಲಿ ಮಿಂಚಿ ಮಾಯವಾಗುವ ಸಂಗತಿಯೋ ಎಂದು ಇಬ್ಬರ ನಡುವೆ ನಡೆಯುವ ಈ ಸಂಭಾಷಣೆಯನ್ನು ಮಾತ್ರವೇ ನೀವು ಓದಿದರೆ ತಪ್ಪಾಗುತ್ತದೆ. ಯಾಕೆಂದರೆ ಈ ಸಂಭಾಷಣೆ ನಡೆದ ಮೇಲೆ ಈ ಇಬ್ಬರೂ ಮಾತುಗಾರರು ಭಾರೀ ಯುದ್ಧ ನಡೆಸಿ ನಾಶವಾಗುತ್ತಾರೆ. ಅವರ ಸಾವಿಗೆ ಕಾರಣವಾಗುವವರು ಕೊನೊಹಗಕುರೆ ಹಳ್ಳಿಯ ನಿನ್‌ಜಾಗಳು.

ಒಂದು ಅನಿಮೇಟೆಡ್ ಕಾಮಿಕ್ ಸರಣಿಯು ಪ್ರಬುದ್ಧ ನಿರೂಪಣೆ, ಪಾತ್ರಸೃಷ್ಟಿ, ಜುಳುಜುಳು ಹರಿಯುವ ಸಂಗೀತ, ತತ್ವಶಾಸ್ತ್ರ, ಸಮರಕಲೆಯ ತತ್ವಗಳು, ಮಿತಿ ಮೀರದ ತಮಾಷೆ, ಪ್ರೀತಿ, ಮಾನದ ಸಹಜ ದ್ವೇಷ, ಮೌನ, ಅಂತಃಕರಣ ಇತ್ಯಾದಿ ಎಲ್ಲಾ ಭಾವುಕ ಕ್ಷಣಗಳು, ಅದ್ಭುತ ದೃಶ್ಯಸರಣಿ, ಎಲ್ಲವನ್ನೂ ಹೊಂದಿ ಹೇಗೆ ವಿಶ್ವದ ಎಲ್ಲ ಭಾಷೆಯ ಜನರನ್ನೂ ಸೆಳೆಯಬಹುದು ಎಂಬುದಕ್ಕೆ ಈಗ ಎಲ್ಲ ಮಕ್ಕಳೂ, ಸಾಕಷ್ಟು ಯುವಜನತೆಯೂ, ಗಮನಾರ್ಹ ಸಂಖ್ಯೆಯಲ್ಲಿ ತಂದೆ ತಾಯಂದಿರೂ ನೋಡುತ್ತಿರುವ “ನಾರುಟೋ’ ಎಂಬ ತುಂಟ, ಆತುರಬುದ್ಧಿಯ ಭಾವುಕ ಹುಡುಗನ ಕುರಿತ ಕಾಮಿಕ್ ಸರಣಿಯೇ ನಿದರ್ಶನ.  ಈ ಕಾಮಿಕ್ ಸರಣಿಯನ್ನು ಹತ್ತರ ಜೊತೆಗೆ ಹನ್ನೊಂದು ಎಂದು ಹಲವರಂತೆ ನಾನೂ ತಿಳಿದಿದ್ದೆ. ಆದರೆ ಈ ಸರಣಿಯ ಹಲವಾರು ಕಂತುಗಳನ್ನು ಒಂದೇ ಉಸಿರಿಗೆ ನೋಡಿದ ಮೇಲೆ ಅನ್ನಿಸಿದ್ದಿಷ್ಟು: ಈ ಕಾಮಿಕ್ ಸರಣಿಯನ್ನು ಕನ್ನಡದಲ್ಲಿ ತರಲಾಗದಿದ್ದರೂ, ಕನ್ನಡ ಸಬ್‌ಟೈಟಲ್‌ನಲ್ಲಾದರೂ ತಂದು ನಮ್ಮ ಹೈಸ್ಕೂಲು ಹುಡುಗರಿಗೆ ತೋರಿಸಬೇಕು. ಧೈರ್ಯ, ಸ್ನೇಹ, ತರ್ಕ, ಬುದ್ಧಿವಂತಿಕೆ, ಸಾಹಸಪ್ರವೃತ್ತಿಯ ಸ್ಫೂರ್ತಿವಾಕ್ಯಗಳು, ಕಲಿಕೆಯ ಹಾದಿಯಲ್ಲಿನ ಕಲ್ಲುಮುಳ್ಳುಗಳು, ಗುರುಕುಲ ಪದ್ಧತಿ, ಹಿರಿಯರ ಅನುಭವದ ಮೂಸೆ, ಶಾಂತಿಪ್ರಿಯರನ್ನು ಕಂಗೆಡಿಸುವ ಕುತಂತ್ರಿಗಳ ವಾದಸರಣಿ, ಬದುಕುವ ಬಗೆಯ ಹತ್ತಾರು ನೋಟಗಳು ಹೀಗೆ ನಾರುಟೋ ಕಾಮಿಕ್ ಸರಣಿಯಲ್ಲಿ ಏನಿದೆ, ಏನಿಲ್ಲ! 

ಕೊನೊಹಗಕುರೆ ಎಂಬುದೊಂದು ಹಳ್ಳಿ. ಈ ಹಳ್ಳಿಯ ಮೇಲೆ ಒಂಬತ್ತು ಬಾಲಗಳ ರಾಕ್ಷಸ ನರಿಯು ಆಕ್ರಮಣ ಮಾಡಿ ಹಲವರನ್ನು ಸಾಯಿಸುತ್ತದೆ. ಆಗ ಹಳ್ಳಿಯ ನಾಯಕ, ನಾಲ್ಕನೇ ಹೊಕಾಗೆ (ಗುರು / ಯಜಮಾನ) ತನ್ನದೇ ಬದುಕನ್ನು ಬಲಿ ಕೊಟ್ಟು ಈ ದೆವ್ವವನ್ನು ಆಗಷ್ಟೇ ಹುಟ್ಟಿದ ನಾರುಟೋನ ಒಳಗೆ ಬಚ್ಚಿಡುತ್ತಾನೆ ಎಂಬುದೊಂದು ಹನ್ನೆರಡು ವರ್ಷಗಳ ಹಿಂದಿನ ಫ್ಲಾಶ್ ಬ್ಯಾಕ್. ಅನಾಥನಾಗಿ ಬೆಳೆದ ನಾರುಟೋ ವಿಚಿತ್ರ ಗುಣಸ್ವಭಾವಗಳಿಗೆ ಪ್ರಸಿದ್ಧನಾಗುತ್ತಾನೆ. ಅವನೊಳಗೆ ದೆವ್ವವಿದೆ ಎಂಬ ಕಾರಣದಿಂದಲೇ ಯಾರೂ ಅವನನ್ನು ಹತ್ತಿರ ಸೇರಿಸಿಕೊಳ್ಳುವುದಿಲ್ಲ.  ಊಟಕ್ಕೆ ಕೂತರೆ ಮುಗಿಯಿತು, ತಿನ್ನುವುದಕ್ಕೆ ಕೊನೆ ಇಲ್ಲ; ಸಮರ ಕಲೆ ಕಲಿಸುವ ನಿನ್‌ಜಾ ಶಾಲೆಯಲ್ಲಂತೂ ಅವನ ವಿಪರೀತ ವರ್ತನೆಗಳಿಗೆ ಮಿತಿಯೇ ಇಲ್ಲ. ಆತುರಾತುರವಾಗಿ ನಿರ್ಧಾರ ಕೈಗೊಂಡು ಪೇಚಿಗೆ ಸಿಕ್ಕಿಹಾಕಿಕೊಳ್ಳುವುದು, ಸುಮ್ಮನೇ ಇಲ್ಲದ ಉಸಾಬರಿಯನ್ನೆಲ್ಲ ತಲೆ ಮೇಲೆ ಹಾಕಿಕೊಂಡು ಸಮಸ್ಯೆ ಅನುಭವಿಸುವುದು, ಹೀಗೇ. ಅವನ ಗೆಳೆಯರು, ಗೆಳತಿಯರು ಎಲ್ಲರೂ ಅವನನ್ನು ತುಂಬಾ ಹಚ್ಚಿಕೊಂಡಿರುತ್ತಾರೆ. ಅವನ ತಂಡದಲ್ಲಿ ಇರುವವರು ನಾಯಕ – ಯುವಕ ಕಕಾಶಿ ಹತಾಕೆ, ಹದಿಹರೆಯದ ಬಾಲಕ ಸಾಸುಕೆ ಉಚಿಹಾ ಮತ್ತು ವೈದ್ಯಕೀಯ ಪರಿಣತೆ ನಿನ್‌ಜಾ ಸಕುರಾ ಹರುನೋ.

ಕಾಮಿಕ್ ಸರಣಿಯ ಕಥೆ ಈ ಅಂಕಣದಲ್ಲಿ ವಿವರಿಸಬಹುದಾದಷ್ಟು ಸರಳವಾಗಿಲ್ಲ; ಮಹಾಭಾರತದ ಪಾತ್ರಗಳಂತೆ ಇಲ್ಲೂ ಹತ್ತು ಹಲವು ಕುಟುಂಬಗಳು, ಹಳ್ಳಿಗಳು, ಖಳನಾಯಕರು, ತಲೆಮಾರುಗಳು –  ಎಲ್ಲವೂ  ಸಂಕೀರ್ಣವಾಗಿ ಬೆರೆತುಹೋಗಿವೆ.  ತನ್ನೊಳಗಿನ ದೆವ್ವದ ಕಾರಣದಿಂದಲೇ ನಾರುಟೋ ದೇಹದಲ್ಲಿ ಇತರರಿಗಿಂತ ಹೆಚ್ಚು ಶಕ್ತಿಯುತವಾದ ಚಕ್ರಗಳಿರುತ್ತವೆ. ಇಡೀ ಕಾಮಿಕ್ ಸರಣಿಯಲ್ಲಿ ಈ ಪಾತ್ರಗಳು ಹೊಂದಿರುವ ವಿವಿಧ ಚಕ್ರಗಳ ಕುತೂಹಲಕರ ವಿವರಣೆ ಮತ್ತು ಅವುಗಳ ಪ್ರದರ್ಶನವನ್ನು ಸರೌಂಡ್ ಧ್ವನಿವ್ಯವಸ್ಥೆಯ ನಡುವೆಯೇ ದೊಡ್ಡ ಪರದೆಯ ಮೇಲೆ ನೋಡಬೇಕು. ನಿಮ್ಮನ್ನು ವರ್ತಮಾನದೊಳಗಿನ ಯಾವುದೋ ಭ್ರಮಾಜಗತ್ತಿಗೆ ಒಯ್ಯುವ ಮಸಾಶಿ ಕಿಶಿಮೋಟೋನ ಕಲಾತಮಕತೆಯನ್ನು ನೀವೇ ಖುದ್ದು ಅನುಭವಿಸಬೇಕು. ೩೫ರ ಹರೆಯದ ಈ ಕಲಾವಿದ ರೂಪಿಸಿದ ನಾರುಟೋ ಇಂದು ವಿಶ್ವದಾದ್ಯಂತ ಪ್ರಸಿದ್ಧ.

೨೨೦ ಕಂತುಗಳಲ್ಲಿ ಹರಿಯುವ ಈ ಸರಣಿಯ ಜಪಾನೀ ಭಾಷೆಯ, ಇಂಗ್ಲಿಶ್ ಉಪಶೀರ್ಷಿಕೆಗಳ ವಿಡಿಯೋ ಇಂಟರ್‌ನೆಟ್‌ನಲ್ಲಿ ಅತ್ಯಂತ ಬೇಡಿಕೆಯಲ್ಲಿದೆ. ಈ ಸರಣಿಯ ಹಲವು ಕಂತುಗಳಲ್ಲಿ ಬರುವ ಪಾತ್ರಗಳ ಸಂಭಾಷಣೆಗಳು ಗಂಭೀರ ಕಾಮಿಕ್ ಸಾಹಿತ್ಯದ ಉದಾಹರಣೆಗಳಾಗಿವೆ. ನಿಮ್ಮ ಬದುಕಿನಲ್ಲಿ ಹುಟ್ಟಿಕೊಂಡ ಯಾವುದೋ ಪ್ರಶ್ನೆಗೆ ನಾರುಟೋ ಸರಣಿಯ ಯಾವುದೋ ಕಂತಿನಲ್ಲಿ ಒಂದು ಸಮರ್ಥ ಉತ್ತರವೂ ಇರಬಹುದೇನೋ; ಅಷ್ಟರ ಮಟ್ಟಿಗೆ ನೀವು ಎಲ್ಲ ಸಂಭಾಷಣೆಗಳನ್ನೂ ಆಲಿಸಲೇಬೇಕು ಎನ್ನುವಷ್ಟು ಅವು ಕುತೂಹಲ ಕೆರಳಿಸುತ್ತವೆ.

ನನಗಂತೂ ನಾರುಟೋ ಕಾಮಿಕ್ ಆಧುನಿಕ ನಾಗರಿಕತೆಗೆ ಪರಂಪರೆಯ ಪಾಠ ಕಲಿಸುವ ಒಂದು ಪ್ರಬುದ್ಧ ಆಡಿಯೋ ವಿಜುಯಲ್ ಕಲಿಕಾಸಾಧನ ಎನ್ನಿಸಿದೆ. ಕೆಲವು ಕಂತುಗಳಲ್ಲಿ ಹದಿಹರೆಯದವರು ಖುಷಿಪಡುವ ಡೈಲಾಗ್‌ಗಳೂ ಇವೆಯೆನ್ನಿ; ಹಿಂಸೆಯೂ ಕೊಂಚ ಮಟ್ಟಿಗೆ ಇದೆ ಎಂಬುದೂ ನಿಜ. ಆದರೆ ಎಲ್ಲೂ ಅತಿರೇಕವಿಲ್ಲ. ಅಸಹ್ಯಪಡುವ ನಿರೂಪಣೆ ಇಲ್ಲ; ಅವಸರವಿಲ್ಲ.  ನಾರುಟೋ , ನನ್ನ ಏಕೈಕ ಫೇವರೆಟ್ ಕಾಮಿಕ್ ಸರಣಿ. 

ಗಮನಿಸಿ:

೧) ನಾರುಟೋ ಈಗ ಕಾರ್ಟೂನ್ ನೆಟ್‌ವಕ್‌ನಲ್ಲಿ ರಾತ್ರಿ ಹತ್ತು ಗಂಟೆಗೆ ಪ್ರಸಾರವಾಗುತ್ತಿದೆ. 

೨) ದತ್ತೆಬಯೋ ಎಂದರೆ “ನಿನಗೆ ಗೊತ್ತಲ್ವ..?’ ಎಂಬ ಸಂಭಾಷಣಾ ಶೈಲಿಯ ಪದಗುಚ್ಛ.

Leave a Reply

Your email address will not be published. Required fields are marked *