ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಸೋತವರ ಪೈಕಿ ಕಾಂಗ್ರೆಸ್ ಪಕ್ಷದ ಧುರೀಣ, ಮಾಜಿ ಸಚಿವ ಎಚ್. ಕೆ. ಪಾಟೀಲರೂ (ಎಚ್‌ಕೆಪಿ)ಒಬ್ಬರು. ಆನಂತರ ನಡೆದ ವಿಧಾನಪರಿಷತ್ ಚುನಾವಣೆಯಲ್ಲೂ ಅವರು ಸೋತರು. ಹಲವು ಪತ್ರಿಕೆಗಳಲ್ಲಿ ಅವರ ಈ ಜೋಡಿ ಸೋಲಿನ ಬಗ್ಗೆ ವಿಮರ್ಶೆಗಳು ಪ್ರಕಟವಾದವು.
ಎರಡೂ ಸೋಲಿನಿಂದ ಎಚ್‌ಕೆಪಿ ಕಂಗೆಟ್ಟುಹೋದರು ಎಂದು ಭಾವಿಸುವುದರಲ್ಲಿ ತಪ್ಪೇನಿಲ್ಲ. ಆದರೆ ಎಚ್‌ಕೆಪಿ ಸುಮ್ಮನೆ ಕೂಡಲಿಲ್ಲ. ಚುನಾವಣೆ ಮುಗಿದಂತೆಯೇ ಮುಂಗಾರು ಮಳೆಯೂ ಕೈಕೊಟ್ಟ ಸುದ್ದಿ ಬಂತು. ಕೂಡಲೇ ಎಚ್‌ಕೆಪಿ ತಮ್ಮದೇ ಸಂಪನ್ಮೂಲ ಬಳಸಿ ಮೋಡಬಿತ್ತನೆಯ ಮೂಲಕ ಮಳೆ ಬರಿಸಲು ಮುಂದಾದರು. ಹಲವು ತಾಲೂಕುಗಳಲ್ಲಿ ಈ ಯತ್ನ ಗಂಭೀರವಾಗಿ ನಡೆಯಿತು. ಹಿಂದೆ ಕೃಷಿ ಸಚಿವರಾಗಿದ್ದಾಗ ಮಾಡಿದ್ದ ಈ ಸಮಾಧಾನಕರ ಪ್ರಯೋಗ ಇಲ್ಲಿ ಪ್ರಯೋಜನಕ್ಕೆ ಬಂತು. ಅಷ್ಟುಹೊತ್ತಿಗೆ ಮಳೆಯೂ ಬಂತೆನ್ನಿ.
ಮಳೆ ಬರಿಸುವ ಯತ್ನದ ನಂತರ ಎಚ್‌ಕೆಪಿ ತಾವು ಅಧ್ಯಕ್ಷರಾಗಿರುವ ಕರ್ನಾಟಕ ರಾಜ್ಯ ಸಹಕಾರ ಪಟ್ಟಣ ಬ್ಯಾಂಕುಗಳ ಮಹಾಮಂಡಳದ ಕೆಲಸ ಕಾರ್ಯಗಳಲ್ಲಿ ಹೆಚ್ಚೆಚ್ಚು ತೊಡಗಿಸಿಕೊಂಡಿದ್ದಾರೆ ಎಂದು ಕೇಳಿದ್ದ ನಾನು ಕಳೆದ ವಾರ ಅವರನ್ನು ಭೇಟಿ ಮಾಡಿದೆ.
ಅದೇ ಹಸನ್ಮುಖತೆ; ಅದೇ ಸ್ನೇಹ. ಅದೇ ಗಾಂಭೀರ್ಯ. ಅದೇ ಜೀವನಕುತೂಹಲ. ಭೇಟಿಯ ಆರಂಭದಲ್ಲೇ ನನ್ನ ಕೈಗೆ ಒಂದು ಕಿರುಪುಸ್ತಕವನ್ನು ಕೊಟ್ಟರು. ಶೀರ್ಷಿಕೆ: ಗದಗಿನ ಪವನ. ಇದೇನೋ ಯಾವುದೋ ಸಂಸ್ಮರಣ ಲೇಖನವಿರಬಹುದು, ಅಥವಾ ಒಂದು ಸಾಮಾಜಿಕ ಚಿಂತನೆಯ ಪ್ರಬಂಧ ಇರಬಹುದು ಎಂದುಕೊಂಡು ಅಲ್ಲಿ ಹೆಚ್ಚು ಓದಲಿಲ್ಲ.
ಆಮೇಲೆ ಪುಸ್ತಕ ತೆರೆದರೆ ಎಚ್‌ಕೆಪಿ ನನಗೊಂದು ಸಿಹಿ ಅಚ್ಚರಿ ನೀಡಿದ್ದರು: ಗದಗಿನ ಸುತ್ತಮುತ್ತಲ ಪ್ರದೇಶದಲ್ಲಿ ಗಾಳಿ ಆಧಾರಿತ ವಿದ್ಯುತ್ ಘಟಕಗಳನ್ನು ರೈತರ ಸಹಭಾಗಿತ್ವದೊಡನೆ ಸ್ಥಾಪಿಸುವ ಯೋಜನೆಯ ಕನಸನ್ನು ಎಚ್‌ಕೆಪಿ ಈ ಪುಸ್ತಕದಲ್ಲಿ ವಿವರಿಸಿದ್ದಾರೆ! ಪವನಶಕ್ತಿಯ ಭೂಮಿ ಮಾರಿ ಶೋಷಣೆಗೊಳಗಾದ ರೈತರಿಗೆ ಅರ್ಪಿಸಿರುವ ಈ ಪುಸ್ತಕ ನಿಜಕ್ಕೂ ಕರ್ನಾಟಕದ ಮಟ್ಟಿಗೆ ಹೊಸ ಅಭಿವೃದ್ಧಿ ಚಿಂತನೆಯ ಹಾದಿಯೇ ಸರಿ ಎಂದು ನನಗನ್ನಿಸಿತು.
ಎಚ್‌ಕೆಪಿ ಹೇಳುವುದಿಷ್ಟು: ಗದಗ ಜಿಲ್ಲೆಯ ೪೦&೫೦ ಕಿಮೀ ಉದ್ದಗಲದ ಕೃಷಿಭೂಮಿಯು ಹೆಚ್ಚು ಗಾಳಿ ಬೀಸುವ ಪ್ರದೇಶವೆಂದು ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಇಯಮಿತ (ಕೆ ಆರ್ ಇ ಡಿ ಎಲ್) ಗುರುತಿಸಿದೆ. ಹುಬ್ಬಳ್ಳಿ ಮತ್ತು ಗದಗ ನಡುವಿರುವ ಹುಲಕೋಟಿಯಿಂದ ಕುರ್ತಕೋಟಿ, ಹರ್ತಿ, ನಾಗಾವಿ, ಬೆಳದಡಿ, ಸೊರಟೂರು, ಮುಳಗುಂದ ಇತ್ಯಾದಿ ಹಾಗೂ ಶಿರಹಟ್ಟಿ, ಮುಂಡರಗಿ ತಾಲೂಕುಗಳ ಹಲವು ಪ್ರದೇಶಗಳು ಪವನ ವಿದ್ಯುತ್ ಶಕ್ತಿ ಉತ್ಪಾದನೆಗೆ ಯೋಗ್ಯ ಸ್ಥಳಗಳೆಂದೂ ಈ ಸಂಸ್ಥೆ ಪಟ್ಟಿ ಮಾಡಿದೆ. ಇಲ್ಲಿ ಒಟ್ಟಾರೆ ೫೦೦೦ಕ್ಕೂ ಹೆಚ್ಚು ಮೆಗಾವಾಟ್ ಉತ್ಪಾದಿಸುವ ವಾಯುಶಕ್ತಿ ಯಂತ್ರವನ್ನು ಸ್ಥಾಪಿಸಬಹುದಾಗಿದೆ. ಹೀಗಾದರೆ ಇದು ದೇಶದಲ್ಲಿಯೇ ಅತಿದೊಡ್ಡ ವಿಂಡ್‌ಫಾರ್ಮ್ ಆಗಲಿದೆ.
“ಈ ಸತ್ವಯುತ ಭೂಮಿಯಲ್ಲಿ ಬಂಗಾರವಿದ್ದರೆ, ಗಾಳಿಯಲ್ಲಿ ವಿದ್ಯುತ್ತಿದೆ’ ಎಂದು ತಮ್ಮ ಪ್ರತಿಪಾದನೆಯನ್ನು ಮುಂದಿಟ್ಟಿರುವ ಎಚ್‌ಕೆಪಿ ಈ ಸಂಪನ್ಮೂಲವನ್ನು ಕೆಲವು ಖಾಸಗಿ ವ್ಯಕ್ತಿಗಳು ಮತ್ತು ಕಂಪೆನಿಗಳು ತಮ್ಮ ಲಾಭಕ್ಕಾಗಿ ಬಳಸಿಕೊಂಡು ಪವನ ವಿದ್ಯುತ್ ಘಟಕಗಳನ್ನು ಸ್ಥಾಪಿಸಿವೆ ಎಂದು ಕಳವಳ ತೋಡಿಕೊಂಡಿದ್ದಾರೆ. ಇದರಲ್ಲಿ ರೈತನ ಪಾತ್ರವೇನೂ ಇಲ್ಲ.
ಎಚ್‌ಕೆಪಿಯವರ ಹೊಸ ಚಿಂತನೆ ಇರುವುದೇ ಇಲ್ಲಿ: ಕೃಷಿಯಲ್ಲಿಯೇ ನಿರತನಾಗಿರುವ ರೈತರ ಬಾಳ್ವೆಗೂ ಆಶಾಕಿರಣ ಮೂಡುವುದಕ್ಕಾಗಿ ರೈತರ ಭೂಮಿಯ ಮೇಲಿನ ಗಾಳಿಯನ್ನು ರೈತರೇ ಉಪಯೋಗಿಸಿಕೊಂಡು ವಿದ್ಯುತ್ ಉತ್ಪಾದಿಸಬೇಕು. ಇದಕ್ಕಾಗಿ ರೈತಪರ ನೀತಿ ನಿರೂಪಣೆ ಆಗಬೇಕು ಎಂದು ಎಚ್‌ಕೆಪಿ ಹೇಳುತ್ತಾರೆ. ತಮ್ಮ ಕನಸನ್ನು ಅವರು ಈ ರೀತಿ ಪಟ್ಟಿ ಮಾಡಿದ್ದಾರೆ ಕೂಡಾ:
೧) ರೈತರು ಇಂಥ ಪವನ ವಿದ್ಯುತ್ ಘಟಕಕ್ಕೆ ಮುಂದಾದರೆ ಶೇ. ೩೦ರಷ್ಟು ಬಂಡವಾಳವಾಗಿ ಅವನ ಭೂಮಿಯನ್ನೇ ಪರಿಗಣಿಸಬೇಕು.
೨) ಇಂಥ ವಿದ್ಯುತ್ ಉತ್ಪಾದನೆಯಿಂದ ದಕ್ಕುವ ಕಾರ್ಬನ್ ಕ್ರೆಡಿಟ್ (ಕಾರ್ಬನ್ ಡಯಾಕ್ಸೈಡ್ ತ್ಯಾಜ್ಯವನ್ನು ಕಡಿಮೆ ಮಾಡಿದ್ದಕ್ಕಾಗಿ ಅಂತಾರಾಷ್ಟ್ರೀಯ ಸಂಸಥೆಯಿಂದ ದೊರಕುವ ಬೋನಸ್ ಹಣ) ಹಣವನ್ನು ನೇರವಾಗಿ ರೈತನಿಗೇ ನೀಡಬೇಕು.
೩) ಯಾವುದೇ ಕೃಷಿಭೂಮಿಯಲ್ಲಿ ಇಂಥ ಸ್ಥಾವರ ಸ್ಥಾಪನೆಯಾದರೂ ಭೂಮಾಲಿಕ ರೈತನನ್ನೇ ಪಾಲುದಾರನನ್ನಾಗಿ ಮಾಡಬೇಕು.
೪) ಇಂಥ ಘಟಕದ ವೀಲಿಂಗ್ ಎಂಡ್ ಟ್ರಾನ್ಸ್‌ಫರ್ ಆಫ್ ಪವರ್‌ಗೆ ಅನುಕೂಲವಾಗುವಂತೆ ಮೂಲಭೂತ ಸೌಕರ್ಯ ಒದಗಿಸಬೇಕು ಮತ್ತು ವೀಲಿಂಗ್ ಮತ್ತು ಬ್ಯಾಂಕಿಂಗ್ ಶುಲ್ಕವನ್ನು ವಿಧಿಸಬಾರದು.
೫) ಪವನ ವಿದ್ಯುತ್ ಸಾಗಣೆ ವೆಚ್ಚವನ್ನು ಸರ್ಕಾರವೇ ಭರಿಸಬೇಕು.
ಖಾಸಗಿ ವ್ಯಕ್ತಿಗಳಿಗೆ ಪವನ ವಿದ್ಯುತ್ ಸಾಮರ್ಥ್ಯದ ಶಕ್ತಿಯುತ ಕೃಷಿಭೂಮಿ ಪರಭಾರೆಯಾಗಬಾರದು, ಬದಲಿಗೆ ಅಭಿವೃದ್ಧಿ ಯೋಜನೆಗಳಲ್ಲಿ ರೈತರನ್ನೂ ಪಾಲುದಾರರಾಗಿ ಮಾಡಬೇಕು ಎಂಬುದಷ್ಟೇ ಎಚ್‌ಕೆಪಿಯವರ ಮೂಲಮಂತ್ರ. ಅಭ್ಯುದಯದ ನಿಜ ಚಿಂತನೆ ಇದು. ಇದರಿಂದ ಸಂಪನ್ಮೂಲ ಬರಿದಾಗುವುದಿಲ್ಲ; ಪರಿಸರ ಸ್ನೇಹಿ ಯೋಜನೆಯಿದು; ಸಶಕ್ತ ದುಡಿಮೆಯಾಗಿ ಭೂಮಿಯ ಖನಿಜ ಸಂಪತ್ತು ಬರಿದಾಗುವುದಿಲ್ಲ; ಸ್ವಾವಲಂಬನೆಗೆ ಹಾದಿ ಮಾಡಿಕೊಡುತ್ತದೆ; ಅಲ್ಲದೆ ಈ ವಿದ್ಯುಚ್ಛಕ್ತಿ ನಿರಂತರವಾಗಿ ದೊರಕುತ್ತಲೇ ಇರುತ್ತದೆ – ಹೀಗೆ ಎಚ್‌ಕೆಪಿ ಈ ಯೋಜನೆಯ ಅನುಕೂಲಗಳನ್ನು ಪಟ್ಟಿ ಮಾಡುತ್ತ ಹೋಗುತ್ತಾರೆ. ಮುಖ್ಯವಾಗಿ ಗದಗ ಜಿಲ್ಲೆಯನ್ನು ಪವನ ವಿದ್ಯುತ್ ವಲಯವೆಂದು ಗುರುತಿಸಬೇಕು ಎಂದು ಅವರು ಹೇಳುತ್ತಾರೆ.
ಜಾಗತಿಕ ಚಿಂತನೆಗೆ ತಮ್ಮೂರಿನಲ್ಲೇ ಕಂಡುಕೊಂಡ ತಾಜಾ ಕನಸನ್ನು ಪುಟ್ಟ ಪುಸ್ತಕದ ಮೂಲಕ ಎಚ್‌ಕೆಪಿ ಹಂಚಿಕೊಂಡಿದ್ದಾರೆ. ಪಕ್ಷ ರಾಜಕೀಯ, ಚುನಾವಣೆಯ ಏರಿಳಿತಗಳು, – ಎಲ್ಲವನ್ನೂ ಮೀರಿ ಬರೆದ ಈ ಪುಸ್ತಕವು ಎಚ್‌ಕೆಪಿಯವರ ಕ್ರಿಯಾಶೀಲ ಮನಸ್ಸಿಗೆ ಹಿಡಿದ ಕೈಗನ್ನಡಿ.
ತದಡಿ ಯೋಜನೆಯ ಆಘಾತದ ಬಗ್ಗೆ ಬರೆದ ಎರಡು ಲೇಖನಗಳನ್ನು ಎಚ್‌ಕೆಪಿಯವರಿಗೆ ಕೊಡಲು ಹೋದಾಗ ಅವರು ಗದಗಿನ ಪವನ ಪುಸ್ತಿಕೆಯನ್ನು ಕೊಟ್ಟಿದ್ದಾರೆ. ತನ್ಮೂಲಕ ತಾವು ಕೂಡಾ ಸಮಕಾಲೀನ ಪರಿಸರ ಚಿಂತನೆಗೆ ಬದ್ಧರು ಎಂಬುದನ್ನು ಸದ್ದಿಲ್ಲದೆ ಪ್ರಕಟಿಸಿದ್ದಾರೆ. ಅವರನ್ನು ಅಭಿನಂದಿಸೋಣ ಅಲ್ಲವೆ?
2 Comments
h k patilare raita nayakaragi,minchidare hege?
avarannu heege ee schemegalannu execute maadalu bittare inno 25 varsha yaaro alugaadisalaararu. so, congressina karnaatakada yava leedaroo idakke oppalaara.JAIRAMA RAMESHA KOODA KARANATAKADAVARALLAVE?
so, we should make it as a vision document for enggineering,mba & management trainees.they must be made this public/gov/peasant partnership project executed as a project work instead of getting a paper tigerprojectwith a free 80 marks goodwill in the final year as goodwil by the institution.
EVEN HKPATIL CAN DO IT AT HIS ENGINEERING COLLEGE, BY FORMING SUCH TEAM WITH A LIASON OFFICER AT THE COLEEGE