ಅವಳೀಗ ಐರೋಪ್ಯ ಸಮುದಾಯದ ಯಾವುದೋ ಪ್ರದೇಶದಲ್ಲಿ ಬದುಕಿದ್ದಾಳೆ. ಈಗಲೂ ಆಕೆ ಕಾಫಿ ಬಟ್ಟಲಿಗೆ ಸಕ್ಕರೆ ಹಾಕುವಾಗ ಕೈ ನಡುಗಿ ಸಕ್ಕರೆಯ ಹರಳುಗಳು ಚೆಲ್ಲಿಹೋಗುತ್ತವೆ. ಸಂಗ್ ಹೀ ರಾಂಗ್ ಹೀಗೆ ಎಲ್ಲಿಯೋ ನಿಗೂಢವಾಗಿ ಬದುಕುವುದಕ್ಕೆ ಉತ್ತರ ಕೊರಿಯಾದ ಈಗಿನ ಅಧ್ಯಕ್ಷ (ಡಿಯರ್ ಲೀಡರ್) ಕಿಮ್ ಜೊಂಗ್ ಇಲ್‌ನೇ ಕಾರಣ. ಈಗ ಆಕೆಗೆ ೭೫ರ ವಯಸ್ಸು ದಾಟಿದೆ. ೨೦೦೩ರಲ್ಲಿ ಆಕೆ ಟೈಮ್ ಪತ್ರಿಕೆಗೆ ಕೊಟ್ಟ ಸಂದರ್ಶನವೇ ಅವಳ ಮೊಟ್ಟಮೊದಲ ಸಂದರ್ಶನ. ಅದರಿಂದಾಗಿಯೇ ಕಿಮ್‌ನ ಚಿತ್ರವಿಚಿತ್ರ ಸ್ವಭಾವಗಳು ಹೊರಜಗತ್ತಿಗೆ ತಿಳಿದವು.
ಸಂಗ್‌ನ ಒಬ್ಬ ಸೋದರಿ ಕಿಮ್ ಜೊಂಗ್ ಇಲ್‌ನ ಮೂವರು ಪತ್ನಿಯರಲ್ಲಿ ಒಬ್ಬಾಕೆ. ಕಿಮ್‌ನ ಮಗನನ್ನು ಸಂಗ್‌ಳೇ ಸಾಕಿ ಸಲಹಿದಳು. ಅವಳ ಮಗ ಮತ್ತು ಮಗಳೂ ಕಿಮ್‌ನ ಆಸರೆಯಲ್ಲಿದ್ದರು. ಕಿಮ್‌ನನ್ನು ಕೇವಲ ಪರಮಾಣು ತಲೆಸಿಡಿಗಳ ಲೆಕ್ಕದಿಂದಲೋ, ಸ್ಟಾಲಿನಿಸ್ಟ್ ಸರ್ವಾಧಿಕಾರಿ ಎಂತಲೋ ಸೀಮಿತಗೊಳಿಸಬೇಡಿ ಎಂದು ಸಂಗ್ ನಿಧಾನವಾಗಿ ಹೇಳುತ್ತಾಳೆ. ಕಾರಣವಿಷ್ಟೆ: ಕಿಮ್‌ನ ಕಿಸೆಯು ಮಾದಕದ್ರವ್ಯ ಮಾರಾಟದ ಹಣದಿಂದ ಜೋತುಬಿದ್ದಿದೆಯಂತೆ. ಜನ ಹಸಿವಿನಿಂದ ತತ್ತರಿಸಿದರೂ ಕಿಮ್‌ನ ಈ ದಂಧೆ ಮಾತ್ರ ನಿಂತಿಲ್ಲ.
ಒಮ್ಮೆ ಟಿವಿ ಚಾನೆಲ್‌ನಲ್ಲಿ ಉತ್ತರ ಕೊರಿಯಾದ ಮಕ್ಕಳು ಕೃತಕ ನಗೆ ಚಿಮ್ಮುತ್ತ ಪೆರೇಡ್ ಮಾಡುವ ದೃಶ್ಯವನ್ನು ನೋಡಿದ ಸಂಗ್, ಕಿಮ್‌ನನ್ನು ‘ಇದೆಲ್ಲ ಫೇಕ್ ಅಲ್ಲವೇ? ಈ ಬಗ್ಗೆ ನೀನು ಏನೂ ಮಾಡಲಾರೆಯಾ?’ ಎಂದು ಕೇಳಿದಳಂತೆ. ‘ಏನು ಮಾಡ್ಲಿ? ಅಕಸ್ಮಾತ್ ಸ್ವಾತಂತ್ರ್ಯ ಕೊಟ್ಟೆ ಅನ್ನು, ಚಿಂದಿ ತೊಟ್ಟ ಮಕ್ಕಳನ್ನೇ ಈ ಚಾನೆಲ್ ತೋರಿಸುತ್ತೆ!’ ಎಂದು ಕಿಮ್ ಉತ್ತರಿಸಿದನಂತೆ. ಖುಷಿಯಿದ್ದಾಗ ಎಲ್ಲರನ್ನೂ ಖುಷಿಗೊಳಿಸುವ, ಸಿಟ್ಟು ಬಂದರೆ ಇಡೀ ಅರಮನೆಯನ್ನೇ ನಡುಗಿಸುವ ಕಿಮ್‌ನ ಹಲವು ಬಗೆಯ ವರ್ತನೆಗಳನ್ನು ಸಂಗ್ ಈ ಸಂದರ್ಶನದಲ್ಲಿ ದಾಖಲಿಸಿದ್ದಾಳೆ.
೧೯೭೧ರ ಮೇ ೧೦ರಂದು ಮೊದಲ ಸಲ ಕಿಮ್‌ನನ್ನು ನೋಡಿದ ಸಂಗ್,ಅವನನ್ನು ನೋಡುವ ಅವಸರದಲ್ಲಿ ತನ್ನ ಉಡುಗೆಯನ್ನೇ ಹರಿದುಕೊಳ್ಳುವಂಥ ರಭಸದಲ್ಲಿ ಓಡಿದ್ದಳಂತೆ. ಆಗ ೨೯ರ ಹರೆಯದವನಾಗಿದ್ದ ಕಿಮ್ ಅವಳನ್ನು ಕಾರಿನ ಹಿಂಬದಿಯಲ್ಲಿ ಕೂರುವಂತೆ ಹೇಳಿದ. ಅದಾಗಲೇ ಸಂಗ್‌ಳ ಸೋದರಿ ಸಂಗ್ ಹೀ ರಿಮ್‌ಳನ್ನು ತನ್ನ ಪತ್ನಿಯನ್ನಾಗಿ ಆತ ಇಟ್ಟುಕೊಂಡಿದ್ದ. ಸಂಗ್‌ಳನ್ನು ಕರೆದಿದ್ದೇ ಈ ಸಂಬಂಧದಲ್ಲಿ ಹುಟ್ಟಿದ ಕಿಮ್ ಜೊಂಗ್ ನಾಮ್ ಎಂಬ ಹುಡುಗನನ್ನು ನೋಡಿಕೊಳ್ಳುವ ಸಲುವಾಗಿ. ಆಗ ಐದು ವರ್ಷದವನಾಗಿದ್ದ ನಾಮ್‌ನನ್ನು ಶಾಲೆಗೆ ಸೇರಿಸಿದರೆ ಅವನ ತಂದೆ ತಾಯಂದಿರ ರಹಸ್ಯ ಹೊರಬೀಳುತ್ತದೆ. ಮೇಲಾಗಿ ಈ ಸಂಬಂಧದ ಬಗ್ಗೆ ಕಿಮ್‌ನ ತಂದೆ ಕಿಮ್ ಇಲ್ ಸಂಗ್‌ಗೂ ಗೊತ್ತಿಲ್ಲ. ಒಂದು ರೀತಿಯಲ್ಲಿ ಇದು ರಾಜರಹಸ್ಯ. ಸರಿ, ಸಂಗ್‌ಳ ಗಂಡನೂ ಈ ಹಿಂದೆ ಅಪಘಾತದಲ್ಲಿ ತೀರಿಕೊಂಡಿದ್ದ. ಮಗ ಹಾಗೂ ಮಗಳನ್ನು ಕರೆದುಕೊಂಡು ಆಕೆ ಕಿಮ್‌ನ ಅರಮನೆ ಸೇರಿದಳು. ಜೊತೆಗೆ ಅವಳ ಪತ್ರಕರ್ತೆ ತಾಯಿಯೂ ಸೇರಿದಳು.
ಅಲ್ಲಿಂದ ಇಪ್ಪತ್ತು ವರ್ಷಗಳ ಕಾಲ ಸಂಗ್ ಮತ್ತು ಅವಳ ಕುಟುಂಬ ಕಿಮ್‌ನ ಆಸರೆಯಲ್ಲೇ ಬದುಕಬೇಕಾಯಿತು. ಅದು ಅರಮನೆಯಂಥ ಭವ್ಯ ಸೆರೆಮನೆಯಾಗಿತ್ತು ಎಂದಾಕೆ ತನ್ನ ನೆನಪಿನ ಕಥನ ‘ವಿಸ್ತೀರಿಯಾ ಹೌಸ್’ ಪುಸ್ತಕದಲ್ಲಿ ಬರೆಯುತ್ತಾಳೆ. ಕಿಮ್ ಇಲ್ ಸಂಗ್ ೧೯೯೪ರಲ್ಲಿ ತೀರಿಕೊಂಡ. ಆದರೆ ೨೩ ವರ್ಷಗಳಿಂದ ಈ ಥರ ರಿಮ್ ಜೊತೆ ಕಿಮ್ ಜೊಂಗ್ ಇಲ್ ಸಂಸಾರ ನಡೆಸಿದ್ದ ಎಂಬುದು ಅವನಿಗೆ ಗೊತ್ತಾಗಲಿಲ್ಲ. ರಿಮ್ ಹೇಳಿ ಕೇಳಿ ಉತ್ತರ ಕೊರಿಯಾದ ಪ್ರಮುಖ ಜನಪ್ರಿಯ ಸಿನೆಮಾ ನಟಿ. ಅವಳ ತಂದೆ ದೊಡ್ಡ ಜಮೀನುದಾರನಾಗಿಯೂ ಕಮ್ಯುನಿಸ್ಟ್ ಆಡಳಿತವನ್ನು ಬೆಂಬಲಿಸಿ ಉತ್ತರಕೊರಿಯಾಗೆ ಬಂದವ. ಆದರೆ ಆತ ಶತ್ರುವರ್ಗದವ ಎಂಬ ಹಣೆಪಟ್ಟಿ ಕಟ್ಟಲಾಯಿತು.
ಕಿಮ್ ಜೊತೆಗಿನ ಬದುಕೆಂದರೆ ಐಷಾರಾಮೀ ಐಭೋಗ. ಇಡೀ ಕುಟುಂಬವೇ ರಹಸ್ಯ ತಾಣದಲ್ಲಿತ್ತು. ಕೆಲವೊಮ್ಮೆ ವಿದೇಶ ಪ್ರವಾಸಕ್ಕೂ ಅನುಮತಿ ಸಿಗುತ್ತಿತ್ತು. ತನ್ನ ಪ್ರಜೆಗಳ ಹಸಿವಿನ ಹಾಹಾಕಾರದ ಬಗ್ಗೆ ಕಿಂಚಿತ್ತೂ ತಲೆಕೆಡಿಸಿಕೊಳ್ಳದ ಕಿಮ್ ತನ್ನ ಸಿರಿವಂತಿಕೆಯ ಬದುಕಿಗೆ ಏನೂ ಕಡಿಮೆ ಮಾಡಿಕೊಳ್ಳಲಿಲ್ಲ. ಜನರ ಹೊಟ್ಟೆ ತಾಳ ಹಾಕುತ್ತಿದ್ದರೆ ಈತ ಮಾತ್ರ ಪಾರ್ಟಿಗಳನ್ನು ನಡೆಸುತ್ತ ಕುಣಿಯುತ್ತಿದ್ದ. ‘ಈಗಲೂ ನನಗೆ ತೀರಾ ನೋವಾಗುತ್ತದೆ. ಅವರೆಲ್ಲ ನನ್ನ ಜನರೇ. ಆದರೆ ನಾನು ಆಗಲೂ ಏನೂ ಮಾಡಲಾಗಲಿಲ್ಲ; ಈಗಲೂ ಏನೂ ಮಾಡಲಾರೆ’ ಎಂದು ಸಂಗ್ ನೆನಪಿಸಿಕೊಳ್ಳುತ್ತಾಳೆ.
ಆದರೆ ಕ್ರಮೇಣ ಕಿಮ್‌ಗೆ ರಿಮ್ ಮೇಲಣ ಪ್ರೀತಿ ಕಡಿಮೆಯಾಗತೊಡಗಿತು. ಬೇರೆ ಹೆಣ್ಣುಗಳ ಸಂಪರ್ಕವೂ ಬೆಳೆಯತೊಡಗಿತು. ತಂದೆ ಹೇಳಿದಂತೆ ಕಿಮ್ ಯೂಂಗ್ ಸೂಕ್ ಎಂಬುವಳನ್ನು ಕಿಮ್ ಮದುವೆಯಾದ. ಅವಳನ್ನು ಚೆನ್ನಾಗಿ ನೋಡಿಕೊಳ್ಳಲಿಲ್ಲ ಎಂಬುದೂ ಇತಿಹಾಸದ ಸತ್ಯ. ಯಾಕೆಂದರೆ ಆಮೇಲೆ ಕಿಮ್‌ನ ಕಾಮುಕ ಕಣ್ಣು ಜಪಾನೀ ಜನ್ಯ ಕೊರಿಯನ್ ನರ್ತಕಿ ಕೋ ಯೂಂಗ್ ಹೀ ಎಂಬುವಳ ಮೇಲೆ ಬಿತ್ತು.
ಇಷ್ಟಾಗಿಯೂ ತನ್ನ ಮೊದಲ ಮಗ ಜೊಂಗ್ ನಾಮ್‌ನನ್ನು ಕಿಮ್ ತುಂಬಾ ಪ್ರೀತಿಯಿಂದ ನೋಡಿಕೊಂಡ ಎಂದು ಸಂಗ್ ಹೇಳುತ್ತಾಳೆ. ಆದರೆ ಹೊರಗೆ ಹೋಗಲೇ ಬಿಡುತ್ತಿರಲಿಲ್ಲ. ಎಷ್ಟೋ ಸಲ ಇದಕ್ಕಾಗಿ ನಾಮ್ ತುಂಬಾ ರಗಳೆ ಮಾಡುತ್ತಿದ್ದನಂತೆ.
ಕಿಮ್‌ನ ಇನ್ನೊಂದು ಸ್ವಭಾವ – ಸುಳ್ಳುಗಳನ್ನು ಆತ ಸಹಿಸುವುದಿಲ್ಲವಂತೆ! (ಇಡೀ ದೇಶದ ಬಗ್ಗೆ ಆತ ಸುಳ್ಳು ಪ್ರಚಾರ ಮಾಡಿ ಜಗತ್ತನ್ನು ಈಗಲೂ ನಂಬಿಸುತ್ತಿದ್ದಾನೆ ಎಂಬ ಮಾತು ಬೇರೆ!). ಒಮ್ಮೆ ಸಂಗ್ ಹೆಲ್ಸೆಂಕಿಗೆ ಹೋಗಿ ಶಾಪಿಂಗ್ ಮಾಡಿದಳಂತೆ. ಈ ವಿದೇಶ ಪ್ರವಾಸಕ್ಕೆ ಕಿಮ್‌ನ ಅನುಮತಿಯನ್ನು ಪಡೆದಿರಲಿಲ್ಲವಂತೆ. ಹಾಗೆ ನೋಡಿದರೆ ಇದು ಭಾರೀ ಪ್ರಮಾದ. ಸರಿ, ತಾನೂ ಕಾರ್ಮಿಕ ಶಿಬಿರಕ್ಕೆ ಹೋಗಬೇಕು ಎಂದು ಸಂಗ್ ಮಾನಸಿಕವಾಗಿ ಸಿದ್ಧಳಾಗಿದ್ದಳಂತೆ. ಆದರೆ ಕಿಮ್ ಎಲ್ಲ ಗೊತ್ತಿದ್ದೂ ಅವಳನ್ನು`ಎಲ್ಲಿಗೆ ಹೋಗಿದ್ದೆ?’ ಎಂದು ಕೇಳಿದಾಗ ಸಂಗ್ ನಿಜವನ್ನೇ ಹೇಳಿದಳಂತೆ. ಕಿಮ್ ದಯಾಳು ಮನಸ್ಸಿನಿಂದ (ಆಕೆ ನಿಜ ಹೇಳಿದ್ದರಿಂದ) ಅವಳನ್ನು ಕ್ಷಮಿಸಿದನಂತೆ.
ವರ್ಷಗಟ್ಟಳೆ ಕಿಮ್ ಜೊತೆ ಬದುಕಿಯೂ, ಮಗನನ್ನು ಪಡೆದು ಸಂಸಾರ ನಡೆಸಿಯೂ ಕಿಮ್ ತನ್ನನ್ನು ನೋಡಿಕೊಳ್ಳುತ್ತಿರುವ ರೀತಿಗೆ ರೋಸಿಹೋದ ರಿಮ್ ಕೊನೆಗೆ ಮಾಸ್ಕೋದಲ್ಲಿ ಸತ್ತಳು. ಸಂಗ್‌ನ ಮಗ ೧೯೮೨ರಲ್ಲಿ ದಕ್ಷಿಣ ಕೊರಿಯಾಗೆ ಪರಾರಿಯಾದ. ಮಗಳು ೧೯೯೨ರಲ್ಲಿ ಪರಾರಿಯಾದಳು. ಕೊನೆಗೆ ೧೯೯೬ರಲ್ಲಿ ಸಂಗ್ ಕೂಡಾ ಜಿನೀವಾಗೆ ಬಂದಾಗ ತಪ್ಪಿಸಿಕೊಂಡು ಐರೋಪ್ಯ ಸಮುದಾಯದಲ್ಲಿ ಆಶ್ರಯ ಪಡೆದಳು. ಆಕೆ ಹೀಗೆ ಪರಾರಿಯಾದ ಒಂದೇ ವರ್ಷದಲ್ಲಿ ಅವಳ ಮಗನನ್ನು ಅನಾಮಿಕ ದುಷ್ಕರ್ಮಿಗಳು ಸಿಯೋಲ್‌ನ ಬೀದಿಯಲ್ಲಿ ಹಾಡುಹಗಲೇ ಗುಂಡು ಹೊಡೆದು ಕೊಂದರು.
ರಿಮ್‌ಳ ಮಗ, ನಾಮ್ ಬಗ್ಗೆಯೂ ಸಂಗ್‌ಗೆ ಈಗಲೂ ಪ್ರೀತಿ ಇದೆ. ಈತ ೨೦೦೧ರಲ್ಲಿ ನಕಲಿ ದಾಖಲೆ ಬಳಸಿದ್ದಕ್ಕೆ ಜಪಾನಿನಿಂದ ಉಚ್ಚಾಟನೆಗೊಂಡಿದ್ದನ್ನು ನೋಡಿ ಆಕೆಗೆ ತೀರಾ ಬೇಜಾರಾಯಿತಂತೆ. ಈಗ ನಾಮ್‌ನನ್ನು ಉತ್ತರಾಧಿಕಾರಿ ಎಂದು ಒಪ್ಪಲು ಕಿಮ್ ಮುಂದಾಗಿಲ್ಲ.
ನಾಮ್ ಎಲ್ಲಿದ್ದಾನೆ?
ಹೀಗೆ ಎಲ್ಲಿಯೋ ಹುಟ್ಟಿ ಎಲ್ಲಿಯೋ ಬೆಳೆದ ಜೊಂಗ್ ನಾಮ್ ಈಗ ಚೀನಾದ ಕುಖ್ಯಾತ ಜೂಜುಕೇಂದ್ರ ಮಕಾವ್‌ನಲ್ಲಿ ದಿನ ಕಳೆಯುತ್ತಿದ್ದಾನೆ. ೨೦೦೧ರಲ್ಲಿ ಜಪಾನಿನಿಂದ ಉಚ್ಚಾಟನೆಯಾದಾಗಿನಿಂದಲೂ ಅಪ್ಪನ ಸಿಟ್ಟಿಗೆ ಸಿಕ್ಕಿದ ನಾಮ್‌ಗೆ ಮಕಾವ್ ಬಿಟ್ಟರೆ ಬೇರೆ ಜಾಗ ಸಿಗಲಿಲ್ಲ. ಅಪ್ಪ ಕಳಿಸುವ ವಾರ್ಷಿಕ ಐದು ಲಕ್ಷ ಡಾಲರ್‌ಗಳ ಭತ್ಯೆಯನ್ನು ಆತ ಜೂಜಿಗೆ, ಮದಿರೆಗೆ ಹಾಕಿ ದಿನ ನೂಕುತ್ತಿದ್ದಾನೆ. ಮದುವೆಯಾಗಿ ಇಬ್ಬರು (ಗಂಡು, ಹೆಣ್ಣು) ಮಕ್ಕಳಿದ್ದಾರೆ. ಬೀಜಿಂಗ್‌ನಲ್ಲೂ ಮನೆ ಹೊಂದಿರುವ ನಾಮ್ ಆಗಾಗ ವಿಯೆನ್ನಾ, ಬ್ಯಾಂಗ್‌ಕಾಕ್, ಮಾಸ್ಕೋ – ಹೀಗೆ ಪ್ರವಾಸ ಮಾಡುತ್ತಾನೆ. ಯಾವುದೇ ಭದ್ರತೆಯಿಲ್ಲದೇ ಪ್ರವಾಸ ಮಾಡುವ ನಾಮ್ ಕೆಲವೊಮ್ಮೆ ಸಿಟಿ ಬಸ್ ಹತ್ತುವುದೂ ಉಂಟಂತೆ.
ಉತ್ತರ ಕೊರಿಯಾದ ಜನರ ಬೆನ್ನು ಮತ್ತು ಹೊಟ್ಟೆ – ಎರಡೂ ಒಂದಕ್ಕೊಂದು ಅಂಟಿಕೊಂಡಿರುವಾಗ ಆ ದೇಶದ ಕಮ್ಯುನಿಸ್ಟ್ ರಾಜಮನೆತನದ ಈ ಕಥೆ ತುಂಬಾ ಮಹತ್ವದ್ದು.