ಬಳ್ಳಕ್ಕನ ನಗೆ
೧೯೮೪ ಮಂಗಳೂರು
ಕಾಲ್ಗೇಟ್ ನಗೆ ಕ್ಲೋಸಪ್ ನಗೆ
ಬಿನಾಕಾ – ಸಿಬಾಕಾ – ಪ್ರಾಮಿಸ್ ನಗೆ
ಪ್ರುಡೆಂಟ್ ಪುಡಿ ನಗೆ, ಕ್ಯಾಲ್ಸಿಯಂ ಕಿರುನಗೆ
ಎಲ್ಲದರ ಕೊನೆಗೆ
ಉಳಿಯುವುದೊಂದೆ
ಬಳ್ಳಕ್ಕನ ನಗೆ.
*
ಇಡೀ ಜಗತ್ತಿನಲ್ಲಿ
ಯಾರಿಗಾದರೂ ನಗುವಿನ
ಕೊರತೆ ಇದ್ದರೆ,
ತುಟಿಗಳ ಸ್ನಾಯು ಬಿಗಿದಿದ್ದರೆ
ಬನ್ನಿ, ಬಳ್ಳಬಳ್ಳದಲ್ಲಿ
ಅಳೆದು ಕೊಡುತ್ತಾನೆ ಬಳ್ಳಕ್ಕ
ಬೇಕಾದಷ್ಟು ನಗುವನ್ನು
*
ಬಳ್ಳಕ್ಕನ – ನಗೆ
ಅಷ್ಟು ಚಂದ, ಇಷ್ಟು ಅಂದ
ಎನ್ನುವವರೇ ಎಲ್ಲ.
ಅಂದದ ಚೆಂದದ
ಬಳ್ಳಕ್ಕ – ನನಗೆ
ಅನ್ನುವವರೇ ಇಲ್ಲ!
*
ದಿನವೂ
ಅದೇ ದಿನ – ಪತ್ರಿಕೆ
ಅದೇ ಪ್ಯಾಡು – ಪ್ಯಾರಾ
ಅದೇ ಫೋನು – ಫ್ಯಾನು – ಫ್ಯಾಕ್ಸು
ಅದೇ ಗಡಿಯಾರ – ಪಿಟಿಐ
ಅದೇ ಮೂರು ಪಾಳಿ ಮತ್ತು
ನಶ್ಯದ ಗಾಳಿ.
ಬಳ್ಳಕ್ಕನ ನಗೆ ಹೇಳುತ್ತೆ
ಒಂದಷ್ಟು ತಾಳಿ, ಮತ್ತು ಬಾಳಿ
*
ಹೌದೌ! ಹ್ಞ! ಅರೆ!
ಓಹೋ! ಛೆ…. ಹ್ಞೂ…?
ಬೇಡ… ಥೂ… ಹ್ಞ ಹ
ಉಹ್ಞು…. ಹೊ ಹೊ ಹೋ
*
ಜನರೇಟರ್ ಮೊರೆತ
ಪಿಟಿಐನ ಗುಸುಗುಸು
ಫ್ಯಾನಿನ ಸುಯ್ಯ ಸುಯ್ಯ
ಎಲ್ಲ ಕೇಳುತ್ತದೆ, ಕವಚುತ್ತದೆ
ಯಾಕೆ? ಯಾಕೆಂದು ನೋಡಿದರೆ
ಬಳ್ಳಕ್ಕನ ನಗೆಗೆ ಭಾನುವಾರ ರಜೆ
ಎಂಬುದು ನೆನಪಾಗುತ್ತದೆ.
*
ಪರಮಾಣು ವಿಕಿರಣದಿಂದ
ಜೀವನಾಶ, ನಿರಂತರ ನೋವು – ಯಾತನೆ.
ಬಳ್ಳಕ್ಕನ ನಗೆ – ಕಿರಣದಿಂದ
ಎಲ್ಲ ಮರೆತುಬಿಡುವಂಥ ಸಂವೇದನೆ.
*
ಸೋಟ – ಕೊಲೆ – ರಾಜೀನಾಮೆ – ಸಭಾತ್ಯಾಗ
ಅಗ್ನಿಸ್ಪರ್ಶ – ಲೂಟಿ – ಇರಿತ – ಶೀಲಭಂಗ
ಸುದ್ದಿ ಸುಡುಗಾಡು ಬರೆಯಲೇಬೇಕು ಕೂಳಿಗೆ
ಇರಲಿ ಎದುರಿಗೆ ನಮಗೆ ಬಳ್ಳಕ್ಕನ ನಗೆ
*
ಮೊನ್ನೆ ಯಾರೋ ಬಂದು
ಕೊಡಿ ನನಗೆ ನೂರು ಗ್ರಾಮು
ಬಳ್ಳಕ್ಕನ ನಗೆ ಎಂದು
ಪಟ್ಟು ಹಿಡಿದರು.
ಇಲ್ಲ ಮಾರಾಯರೆ ಅವರು
ಎಂದೂ ನಗೆಯನ್ನು ಮಾರಿಲ್ಲ
ನಾವೇ ಬೇಕಾದಾಗ ಬೇಕಾದಷ್ಟು
ತಗೊಂಡಿದ್ದೇವೆ ಎಂದೆ.
ಅವರು ಕೊಟ್ಟುಹೋದ
ಕೆಟ್ಟ ನಗುವನ್ನು
ಪಕ್ಕದ ಬಾವಿಗೆಸೆದೆ.
ಬಳ್ಳಕ್ಕನ ಕಾಯುತ್ತ ಡ್ಯೂಟಿಗೆ ಮರಳಿದೆ.