ಬಲಿ ಪೀಠದ ಹೇಳಿಕೆ
೫-೭-೮೯
ಬೆಂಗಳೂರು
ಹಿಮ್ಮಡಿಯಿಂದ ಹೃದಯಕ್ಕೆ ಹಬ್ಬಿದ
ಸಮಶೀತೋಷ್ಣವಲಯ ಜೀವಿಯೇ
ಗಲ್ಲಗಳಲ್ಲಿ ರಸ್ತೆ ಕೊರೆದು ದೌಡಾಯಿಸಿದ
ದೀನಗಾಥೆ ದರಿದ್ರದೇವತೆಯೇ
ಒದೆಸಿಕೊಳ್ಳಲು ಸಕತ್ತಾಗಿ
ಉಗಿಸಿಕೊಳ್ಳಲು
ಮಿಂಡರಿಟ್ಟುಕೊಂಡ
ಮುಖವಾಡವೇ
ಚೀರಬೇಡ.
ಬಲಿಕೊಡಲು ತರಿದುತಂದಿದ್ದೇನೆ ಭಾವಗುಚ್ಛಗಳನ್ನು
ಬುದ್ಧಿಮತ್ತೆ ಎಂದವರ ಹುಚ್ಚುಮಂಡೆಗಳನ್ನು.
ಚೀರಬೇಡ.
ನನ್ನ ಹಣೆಯನ್ನಿಷ್ಟು ಗೀರಬೇಡ.
ಎದೆ ಪಾಪಾಸುಕಳ್ಳಿಯಾದವರ ಮುಳ್ಳು ತೆಗೆದಿದ್ದೇನೆ
ಸೂರ್ಯನನ್ನು ಸತಾಯಿಸಿದವರ ಹಲ್ಲುದುರಿಸಿದ್ದೇನೆ
ಹುಡುಗಿಯರ ಉದ್ವೇಗಸುಖವನ್ನು ಕಿತ್ತಿಟ್ಟು
ಅಂಥವರ ಪ್ರೇಮವೈಕಲ್ಯವನ್ನು ಹೂತಿಟ್ಟು
ಅನಾಥನೆಂಬ ಬಿರುದಿನ ಮೇಲೆ ದೀನನಾಥನ
ಬೋರ್ಡು ಬರೆಸಿದ್ದೇನೆ.
ಅವಳ ತುಟಿಗಾಗಿ ಎರಡೂ ಕೈಗಳನ್ನು ತೆರೆದಿದ್ದೇನೆ.
ದೇವತೆಯೇ ಒಂದಿಷ್ಟು ಕೇಳು.
ಒಂದು ಸೂರು ಪಡೆದು ಪಾರಾಗಲಿಕ್ಕೆ
ಒಂದು ನೀತಿ ಕೇಳಿ ಹಾಳಾಗಲಿಕ್ಕೆ
ಸಿದ್ಧ ತಾಪತ್ರಯ ಪಾಲಾಗಲಿಕ್ಕೆ
ನಾನು ಮನೋರೋಗಿಯಲ್ಲ.
ಆಕಾಶ-ನಕ್ಷತ್ರಗಳ ಮಾತನಾಡುವ ಬಿಕನಾಸಿ ಕವಿ ನನ್ನೊಳಗಿಲ್ಲ.
ನಾನು ಅನುಭವದ ತೊಟ್ಟಿಲಲ್ಲಿ ಅಳುತ್ತಿರುವ
ಅನಾಥ ಹುಡುಗ.
ಅತ್ತುಬಿಡುತ್ತೇನೆ ಅಂತ ಹೆದರಿಸಲ್ಲ.
ಅಳುತ್ತೇನೆ.
ನನಗೆ ಬಂದಂತೆ ಬಾಳುತ್ತೇನೆ.
ಬಲಿ ತೆಗೆದುಕೋ ಮಾರಾಯ್ತಿ
ಯಾಕೆ ತಡ?