ನಿಶ್ಶಬ್ದದ ವಾದ
೭-೧೦-೯೧
ಶಿರಸಿ
ಶಬ್ದಲೋಕದ ಭ್ರಮೆಯ ಹಳೆ ಜಗತ್ತಿನ ಸುತ್ತ
ತಿರುಗದಿರಿ ಓ ಗೆಳೆಯರೇ
ಇರಬಹುದು ಮಾತುಗಳು ನಿಶ್ಶಬ್ದದೊಳಗೂ
ನಿಮ್ಮೆದೆಗೆ ಬೇಕಾದರೆ
ಇರಬಹುದು ಸಂವಹನ ಸುಖದ ಹೊತ್ತುಗಳಲ್ಲಿ
ಮಾತುಗಳು ತಾಗಿದಾಗ
ಏನಿಲ್ಲದೆಯು ನಿಮಗೆ ಗಾಢವಿಲ್ಲದ ಸ್ನೇಹ
ವರ್ಷಗಳು ಮಾಗಿದಾಗ?
ತನ್ನ ಬಂದಿಯ ಸುತ್ತ ಜೇಡ ಬಲೆ ನೇಯುತ್ತ
ನಿಶ್ಶಬ್ದ ನೋಯುತ್ತದೆ.
ಇಲ್ಲಿ ಯಾತನೆ ಪಡುವ ಶಬ್ದಗಳು ಎಲ್ಲೆಲ್ಲೊ
ನಡುಗುತ್ತ ಕಾಯುತ್ತವೆ.
ನಮಗೆ ಗೊತ್ತಿದೆ ಬಹಳ ಸಲ ನಾವೆಲ್ಲ
ಸುಮ್ಮನೇ ಸೋತಿದ್ದಿದೆ.
ಓ ಗೆಳೆಯರೇ ನಿಮ್ಮ ಹಣೆಗೆರೆಗಳಲ್ಲೂ
ನಿಶ್ಶಬ್ದ ಕೂತದ್ದಿದೆ.
ಮತ್ತೆ ಮಳೆ ಹೊಯ್ದಾಗ ನದಿ ಸಮುದ್ರಗಳಲ್ಲಿ
ಶಬ್ದಗಲು ಅತ್ಯಗತ್ಯ.
ನಡುಮನೆಯಲ್ಲಿ ಬಿದ್ದ ಹನಿಗಳಲ್ಲಿ
ನಿಶ್ಶಬ್ದವಷ್ಟೇ ಸತ್ಯ.
ಶಬ್ದಲೋಕವ ಮರೆತು ಹೊಸ ಜಗತ್ತಿನ ಸುತ್ತ
ತಿರುಗಿಬಿಡಿ ಓ ಗೆಳೆಯರೇ
ಇವೆಯಲ್ಲ ಮಾತುಗಳು ನಿಶ್ಶಬ್ದದೊಳಗೂ
ನಿಮಗಷ್ಟು ಬೇಕಾದರೆ.