ಧುಮ್ಮಿಕ್ಕದಿರು ಹುಡುಗಿ ರಭಸ ಗೆಲ್ಲದು ನಿನ್ನ
ಎದೆಗೆ ಒಬ್ಬಂಟಿತನ ಕೆಲವು ಸಂಜೆ.
ತಟದಲ್ಲಿ ನಡೆವಾಗ ಕಣ್ಣು ತೀಡಲಿ ಗಾಳಿ
ತೇಲಿಬಿಡು ವೇದನೆಗಳ
ತಡವರಿಸದಿರು ಇನ್ನು ಕೆಲವೇ ಹೊತ್ತು
ಕಾದಿರಿಸು ಕಾಮನೆಗಳ.
ತುಟಿಯಲ್ಲಿ ತುಡಿವ ನೂರು ಏಕಾಂತಗಳು
ಹಣೆಗೆ ಮುತ್ತಿಡುವಂಥ ಕಟು ದುಃಖಗಳು
ಬರಲಿ ಬರಲೀ ಹುಡುಗಿ……..ಬರಲಿ
ಜಾರಿಹೋಗಲಿ ನೆನಪು ಕಮರಿಯಲ್ಲಿ.
ಬೆಚ್ಚಗೆ ಸುಡುವ ಹುಡುಗರು ಇರಲಿ
ಸುಖಶಿಖರ ತಿವಿಯಲಿ ನಿನ್ನ
ಬೆವರಿಗೆ ಬಿದ್ದು ಅಂಗೈಗಳು ನಡುಗಲಿ
ಸಹನೆ ಮೀರದೆ ನಿಲ್ಲು ಕೆಲವೆ ಹೊತ್ತು.
ಕಾಲಕ್ಕೆ ತುಟಿಯಿದ್ದು ಒಂದಷ್ಟು ಜೀವವೂ
ನಿನಗೆ ಸ್ಪಂದಿಸುವಂಥ ಅನುರಣನ ಭಾವವೂ
ಇದ್ದಿದ್ದರಾಗಿತ್ತು ಸೌಗಂಧಿಯೇ ….
ಚಳಿಗೆ ತಲ್ಲಣಗೊಂಡ ಪಾರಿವಾಳವೆ ಕೇಳು
ನಡುಗದಿರು ನಕ್ಷತ್ರವೇ …
ಧುಮ್ಮಿಕ್ಕದಿರು-ರಭಸ ಗೆಲ್ಲದು-ಒಬ್ಬಂಟಿತನ-ಕೆಲವು ಸಂಜೆ.
ನಾಳೆಯೇ ಮುಂಜಾನೆ – ನಗುವಿಯಂತೆ.